ಬಟನ್ ವರ್ಕ್ ಆಗದೆ ಗೊಂದಲ

ಕಳಸ: ಹೋಬಳಿಯಲ್ಲಿ ಸಣ್ಣಪುಟ್ಟ ಗೊಂದಲ ಹೊರತುಪಡಿಸಿ ಶಾಂತಿಯುತ ಮತದಾನ ನಡೆಯಿತು. ಕಳಸ, ಸಂಸೆ, ಇಡಕಿಣಿ, ಮರಸಣಿಗೆ, ತೋಟದೂರು, ಹೊರನಾಡು ಗ್ರಾಪಂ ವ್ಯಾಪ್ತಿಯಲ್ಲಿ 33 ಮತಗಟ್ಟೆ ತೆರೆಯಲಾಗಿತ್ತು.

ಸಂಸೆ ಮತಗಟ್ಟೆ ನಂ.41ರಲ್ಲಿ ಬ್ಯಾಲೇಟ್ ಯೂನಿಟ್​ನಲ್ಲಿ ಗೌತಮ್ ಎಂಬ ಅಭ್ಯರ್ಥಿ ಎದುರಿನ ಬಟನ್ ವರ್ಕ್ ಆಗದೆ ಮತದಾನ ಕೆಲ ಕಾಲ ಸ್ಥಗಿತವುಂಟಾಯಿತು. ಚುನಾವಣಾಧಿಕಾರಿ ಚಂದ್ರಪ್ಪ ಸರಿಪಡಿಸಿ ಮತದಾನಕ್ಕೆ ಅನುವು ಮಾಡಿಕೊಡಲಾಯಿತು.

ಕೆ.ಕೆಳಗೂರು ಮತಗಟ್ಟೆಯಲ್ಲಿ ವಿವಿ ಪ್ಯಾಟ್ ಕೈಕೊಟ್ಟಿತ್ತು. ಚುನಾವಣಾಧಿಕಾರಿ ನಾಗೇಂದ್ರ ಚಂದ್ರಪ್ಪ ಬಂದು ಮತಯಂತ್ರ ಬದಲಾಯಿಸಿ ಮತದಾನಕ್ಕೆ ಅನುವು ಮಾಡಿಕೊಟ್ಟರು.

ಬೆಳಗ್ಗೆ 11ರವರೆಗೆ ಅತೀ ಹೆಚ್ಚು ಮತದಾನವಾಗಿ ಮಧ್ಯಾಹ್ನದವರೆಗೆ ಶೇ.50 ಮತದಾನವಾಗಿತ್ತು. ಮಧ್ಯಾಹ್ನದ ನಂತರ ಮತದಾನಕ್ಕೆ ನೀರಸ ಪ್ರತಿಕ್ರಿಯೆ ಕಂಡುಬಂತು. ನಕ್ಸಲ್​ಪೀಡಿತ ಪ್ರದೇಶಗಳಲ್ಲಿ ಮತದಾರರು ಹೆಚ್ಚಿನ ಮತದಾನ ಮಾಡಿದರು. ಮತದಾನಕ್ಕೆ ತೆರಳಲು ಬಹುತೇಕ ಮತದಾರರಿಗೆ ವಿವಿಧ ಪಕ್ಷದಿಂದ ವಾಹನದ ವ್ಯವಸ್ಥೆ ಮಾಡಿದ್ದರೂ ಕೆಲ ವೃದ್ಧ ಮತದಾರರು ಮೂರ್ನಾಲ್ಕು ಕಿಮೀ ದೂರ ನಡೆದುಕೊಂಡು ಬಂದು ಮತದಾನ ಮಾಡಿದರು.

ಹೆಚ್ಚಾಗಿ ಹಿರಿಯರು ಉತ್ಸಾಹದಿಂದ ಮತದಾನ ಮಾಡಿದರು. ಕೆಲ ವೃದ್ಧ ಮತದಾರರನ್ನು ಚುನಾವಣಾಧಿಕಾರಿಗಳು ಮತ ಕೇಂದ್ರಕ್ಕೆ ಕೈಹಿಡಿದುಕೊಂಡು ಬರುತ್ತಿರುವುದು ಕಂಡುಬಂತು.

ನಕ್ಸಲ್ ಪೀಡಿತ ಪ್ರದೇಶ ಕಳಕೋಡು, ಬಲಿಗೆ, ಎಸ್.ಕೆ.ಮೇಗಲ್ ಕೆಳಭಾಗ, ಸಂಸೆ ಮತ ಕೇಂದ್ರಲ್ಲಿ ಬಿಎಸ್​ಎಫ್​ಸಿಬ್ಬಂದಿ ನೇಮಕ ಮಾಡಲಾಗಿತ್ತು. ಚುನಾವಣಾ ಸಿಬ್ಬಂದಿಗೆ ಗ್ರಾಮಸ್ಥರು ಹಾಗೂ ಇಲಾಖೆಯಿಂದ ವಸತಿ, ಊಟೋಪಾಚಾರ ವ್ಯವಸ್ಥೆ ಮಾಡಿದ್ದರು.

ಮತದಾನ ವಂಚಿತ

ಕುದುರೆಮುಖಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಮತದಾರರ ಗುರುತಿನ ಚೀಟಿಯಲ್ಲಿ ಹೆಸರೊಬ್ಬರದ್ದು, ಫೋಟೊ ಇನ್ಯಾರದೋ ಇದ್ದುದರಿಂದ ಗೊಂದಲ ಉಂಟಾಯಿತು. ಮತದಾನ ಕೇಂದ್ರಕ್ಕೆ ತೆರಳಿ ಅಲ್ಲಿ ಮತ ಪತ್ರದಲ್ಲಿ ಹೆಸರು ನಾಪತ್ತೆ ಆಗಿರುವುದರಿಂದ ಕೆಲ ಮತದಾರರು ಮತದಾನದಿಂದ ವಂಚಿತರಾದ ಘಟನೆಯೂ ನಡೆಯಿತು.