ದೋಸ್ತಿಗೆ ಮತ ವರ್ಗಾವಣೆ ಸವಾಲು

|ಶ್ರೀಕಾಂತ್ ಶೇಷಾದ್ರಿ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಥಾನಗಳನ್ನು ಕುಗ್ಗಿಸಲು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್​ಗೆ ಈಗ ಹೊಸ ಸವಾಲು ಎದುರಾಗಿದೆ. ತನಗೆ ನೆಲೆಯೇ ಇಲ್ಲದ ಆರು ಕ್ಷೇತ್ರಗಳಲ್ಲಿ ಮತ ಕೊಯ್ಲಿಗೆ ಹೊರಟ ಜೆಡಿಎಸ್​ಗೆ ಮರ್ಯಾದೆ ಕಾಪಾಡುವ ಹೊಣೆಯೂ ಕಾಂಗ್ರೆಸ್ ಮೇಲಿದೆ.

ದೆಹಲಿಯಲ್ಲಿ ಎರಡೂ ಪಕ್ಷದ ನಾಯಕರು ಕೈಗೊಂಡ ತೀರ್ವನದಂತೆ ಎಂಟು ಕ್ಷೇತ್ರ ಜೆಡಿಎಸ್ ಪಾಲಾಗಿದೆ. ಈ ಪೈಕಿ ಮಂಡ್ಯ, ಹಾಸನ ಹೊರತುಪಡಿಸಿ ಉಳಿದ ಆರು ಕ್ಷೇತ್ರಗಳಲ್ಲಿ ಕೈಗೆ ಬಲ ಇದೆಯೇ ಹೊರತು ದಳಕ್ಕೆ ನೆಲೆ ಇಲ್ಲ. ತುಮಕೂರಿನಲ್ಲಿ ಮಾತ್ರ ಅಲ್ಪಸ್ವಲ್ಪ ಆಸರೆ ಇದೆ. ಮೂರು ಕ್ಷೇತ್ರಗಳಲ್ಲಂತೂ ಮತ ಪ್ರಮಾಣ ಒಂದಂಕಿ ಹಂತದಲ್ಲಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರಬಲ ಪೈಪೋಟಿ ನೀಡಬೇಕೆಂದರೆ, ಕಾಂಗ್ರೆಸ್ ನಾಯಕರು ಶತಾಯಗತಾಯ ಬೆವರು ಹರಿಸಿ ಸಾಂಪ್ರದಾಯಿಕ ಮತಗಳನ್ನು ಮೈತ್ರಿ ಪಕ್ಷಕ್ಕೆ ಹಾಕಿಸಬೇಕಾಗುತ್ತದೆ.

ಈಗಾಗಲೇ ಜೆಡಿಎಸ್​ಗೆ ಬಿಟ್ಟುಕೊಟ್ಟ ಕ್ಷೇತ್ರಗಳಲ್ಲೆಲ್ಲ ಸ್ಥಳೀಯ ಕಾಂಗ್ರೆಸಿಗರು ಪಕ್ಷದ ತೀರ್ವನದ ವಿರುದ್ಧ ಮುನಿಸಿಕೊಂಡಿದ್ದಾರೆ. ಈ ಬೆಳವಣಿಗೆ ಕೈ ನಾಯಕರಿಗೆ ತಲೆ ನೋವಾಗಿ ಪರಿಣಮಿಸಿದೆ.

ಮತ ವರ್ಗಾವಣೆ ಹೇಗೆ?: ಮಂಡ್ಯ, ಹಾಸನ ಸೇರಿ ಎಂಟೂ ಕ್ಷೇತ್ರಗಳಲ್ಲಿ ತನ್ನ ಮತವನ್ನು ಹೇಗೆ ವರ್ಗಾಯಿಸಬೇಕೆಂಬುದು ನಮ್ಮ ಎದುರಿಗಿರುವ ದೊಡ್ಡ ಸವಾಲು. ಒಂದೊಮ್ಮೆ ಈ ಪ್ರಯತ್ನದಲ್ಲಿ ಯಶಸ್ಸಾಗದಿದ್ದರೆ ಮೈತ್ರಿ ಉದ್ದೇಶ ಸಾಫಲ್ಯ ಕಾಣದು. ಜೆಡಿಎಸ್ ಬೇರೂರಿರುವ ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರು, ಮುಖಂಡರು ಅವರೊಂದಿಗೆ ಒಟ್ಟಾಗಿ ಹೋಗುವುದು ಕಷ್ಟ. ಜೆಡಿಎಸ್ ನೆಲೆ ಇಲ್ಲದ ಕಡೆ ನಮ್ಮ ಕಾರ್ಯಕರ್ತರು ಅವರಿಗಾಗಿ ಹೆಚ್ಚಿನ ಸಮಯ ಮೀಸಲಿಟ್ಟು ಪ್ರಚಾರ ಮಾಡುವುದು ಕಷ್ಟ ಎಂದು ಕೆಪಿಸಿಸಿ ಹಿರಿಯ ಪದಾಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಒಟ್ಟು ಚಲಾವಣೆಯಾಗುವ ಮತಗಳಲ್ಲಿ ಶೇ.5-10 ವರ್ಗಾವಣೆ ಜವಾಬ್ದಾರಿ ಕಾಂಗ್ರೆಸ್ ಮೇಲಿಲ್ಲ, ಬರೋಬ್ಬರಿ ಶೇ.40ಕ್ಕಿಂತ ಹೆಚ್ಚು ಮತಗಳನ್ನು ಕ್ರೋಢೀಕರಿಸಿ ಅದನ್ನು ಜೆಡಿಎಸ್​ಗೆ ವರ್ಗಾಯಿಸಬೇಕಾಗುತ್ತದೆ. ಅದು ಸಾಮಾನ್ಯದ ಮಾತಲ್ಲ ಎಂದವರು ವಿವರಿಸುತ್ತಾರೆ.

ಶಾಸಕರಲ್ಲಿ ಖಂಡ್ರೆಗೆ ಟಿಕೆಟ್

ಬೀದರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಖಂಡ್ರೆ ಹೊರತುಪಡಿಸಿ ಹಾಲಿ ಶಾಸಕರ್ಯಾರಿಗೂ ಸ್ಪರ್ಧೆಗೆ ಅವಕಾಶ ಕೊಡದಿರಲು ಪಕ್ಷ ತೀರ್ವನಿಸಿದೆ. ಬೀದರ್​ನಲ್ಲಿ ಸದ್ಯ ಬಿಜೆಪಿ ಸಂಸದರಿದ್ದು, ಅಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಖಂಡ್ರೆ ಸ್ಪರ್ಧಿಸಿದರೆ ಮಾತ್ರ ಪಕ್ಷದ ಪರ ಫಲಿತಾಂಶ ಬರಲಿದೆ ಎಂಬ ವರದಿ ಆಧಾರದಲ್ಲಿ ಕೈ ಹೈಕಮಾಂಡ್ ಖಂಡ್ರೆಗೆ ಅವಕಾಶ ನೀಡಲು ನಿರ್ಧರಿಸಿದೆ. ಬೆಂಗಳೂರು ಕೇಂದ್ರದಿಂದ ರೋಷನ್ ಬೇಗ್, ಬೆಳಗಾವಿಯಿಂದ ಅಂಜಲಿ ನಿಂಬಾಳ್ಕರ್ ಸೇರಿ ಐವರು ಶಾಸಕರು ಈ ಬಾರಿ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು.

ಕಾಂಗ್ರೆಸ್​ನಿಂದ ವಿವಾದಾತ್ಮಕ ಕೈಪಿಡಿ

ಬೆಂಗಳೂರು: ಕೇಂದ್ರದ ಬಿಜೆಪಿ-ಯುಪಿಎ ಸರ್ಕಾರದ ತುಲನೆ ಮಾಡುವ ಮತ್ತು ಪ್ರಮುಖ ಬೆಳವಣಿಗೆಗಳನ್ನು ವಿಶ್ಲೇಷಿಸುವ ಕೈಪಿಡಿಯನ್ನು ಕಾಂಗ್ರೆಸ್ ಸಂಶೋಧನಾ ವಿಭಾಗ ಹೊರತಂದಿದ್ದು, ಗುರುವಾರ ಪಕ್ಷದ ಕಚೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.

ಪಕ್ಷವು ಭಾರತದ ಆತ್ಮ ಎಂದು ಹೇಳಿಕೊಂಡಲ್ಲಿಂದ ಆರಂಭವಾಗುವ ಕೈಪಿಡಿಯಲ್ಲಿ ಪಕ್ಷದ ಇತಿಹಾಸ, ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ನೇತೃತ್ವ, ಗಾಂಧಿ ಪ್ರವೇಶ, ವಿವಿಧ ಆಂದೋಲನದ ಬಗ್ಗೆ ಉಲ್ಲೇಖವಿದೆ. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಕೊಡುಗೆಗಳನ್ನು ಪಟ್ಟಿಮಾಡಲಾಗಿದೆ. ಜತೆಗೆ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಲು ಕಾಯ್ದೆಗಳನ್ನು ಹೆಸರಿಸಲಾಗಿದೆ. ಜತೆಗೆ ಆರ್​ಎಸ್​ಎಸ್ ನಿಷೇಧಿಸಲು ಶ್ಯಾಮಪ್ರಸಾದ್ ಮುಖರ್ಜಿಗೆ ಪಟೇಲರು ಪತ್ರ ಬರೆದಿದ್ದರು ಎಂಬ ಅಂಶ ಪ್ರಸ್ತಾಪಿಸಲಾಗಿದ್ದಲ್ಲದೆ, ಗೋಡ್ಸೆಗೆ ಸಹಾನುಭೂತಿ ತೋರಿಸಿದ್ದರು ಎಂದು ಸ್ಪಷ್ಟವಾಗಿ ಆರೋಪ ಹೊರಿಸಲಾಗಿದೆ. ಆರ್​ಎಸ್​ಎಸ್​ನಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ, ಗಾಂಧಿಯನ್ನು ವಿರೋಧಿಸುತ್ತಿತ್ತು, ಬೇಜವಾಬ್ದಾರಿ ಸಂಘಟನೆ. ಅದರ ನಾಯಕರ ಸ್ವ-ಪ್ರಯೋಜನಕ್ಕಾಗಿ ಭಾರತದ ಸಾಮಾಜಿಕ ರಚನೆಯನ್ನೂ ಬೇರ್ಪಡಿಸುವಂಥ ಕಾರ್ಯವನ್ನು ಮಾಡುತ್ತದೆ ಎಂದು ಟೀಕಿಸಲಾಗಿದೆ.

ದೇಶ ಕಟ್ಟಿದ ಕಾಂಗ್ರೆಸ್ 2005ರಿಂದ 2014ರ ಅವಧಿಯಲ್ಲಿ ಸಮೃದ್ಧಿ- ಸಂಪನ್ನತೆ ಪ್ರಗತಿಗೆ ಪರಮ ಆದ್ಯತೆ ನೀಡಿತ್ತು. ದ್ವೇಷ ಬಿತ್ತಿದ ಬಿಜೆಪಿ 2014ರಿಂದ 2019ರ ಅವಧಿಯಲ್ಲಿ ಸುಳ್ಳಿನ ಸಂತೆಯೊಳಗೆ ಜೊಳ್ಳು-ಪೊಳ್ಳು ಭರವಸೆ ನೀಡಿದೆ ಎಂದು ಟೀಕಿಸಲಾಗಿದೆ. ಯುಪಿಎ ಅವಧಿಯಲ್ಲಿ ಜಾರಿಯಾದ ಯೋಜನೆಗಳು, ಉಪಗ್ರಹ ಉಡಾವಣೆಗಳನ್ನು ಕೈಪಿಡಿಯಲ್ಲಿ ದಾಖಲಿಸಿರುವುದು ವಿಶೇಷ. ಚಂದ್ರಯಾನದ ಬಗ್ಗೆಯೂ ಮಾಹಿತಿ ಇದೆ. ಅಮೆರಿಕ ಪರಮಾಣು ಒಪ್ಪಂದವನ್ನೂ ತಿಳಿಸಲಾಗಿದೆ. ಇನ್ನು ಯುಪಿಎ ಅವಧಿಯಲ್ಲಿ ನಡೆದ 2ಜಿ ಸ್ಪೆಕ್ಟ್ರಮ್ ಹಗರಣದ ನಿಜ ಸ್ವರೂಪ ಏನೆಂದು ವಿವರಿಸಲಾಗಿದೆ.

ಈ ಕೈಪಿಡಿಯನ್ನು ನಮ್ಮ ನಾಯಕರು, ವಕ್ತಾರರಿಗೆ ನೀಡಲಾಗುತ್ತದೆ. ಕಳೆದ ಐದು ವರ್ಷ ಮೋದಿ ಸರ್ಕಾರ ಏನೂ ಮಾಡಲಿಲ್ಲ. ಸಾಮಾಜಿಕ ಸುಧಾರಣೆ ತರುವ ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಕೈಗೆತ್ತಿಕೊಳ್ಳಲಿಲ್ಲ. ಅವೆಲ್ಲ ಮಾಹಿತಿ ಕೈಪಿಡಿಯಲ್ಲಿದೆ.

| ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ

ಬೆಂ.ದಕ್ಷಿಣದಲ್ಲಿ ಸ್ಪರ್ಧೆಗೆ ಹಿಂದೇಟು

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳೆಲ್ಲ ಹಿಂದೇಟು ಹೊಡೆದಿದ್ದರಿಂದ ಅಂತಿಮವಾಗಿ ಗುರಪ್ಪನಾಯ್ಡು ಅವರನ್ನು ಕಣಕ್ಕಿಳಿಸಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ. ಈ ಹಿಂದೆ ನಡೆದಿದ್ದ ಟಿಕೆಟ್ ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹ ವೇಳೆ ಮಾಜಿ ಶಾಸಕ ಪ್ರಿಯಕೃಷ್ಣ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಸಚಿವ ಕೃಷ್ಣಬೈರೇಗೌಡ, ರೋಹಿಣಿ ನೀಲೇಕಣಿ ಮತ್ತಿತರರ ಹೆಸರು ಕೇಳಿ ಬಂದಿತ್ತು. ಆದರೆ ಅವರ್ಯಾರೂ ಕಣಕ್ಕಿಳಿಯಲು ಮುಂದೆ ಬಂದಿಲ್ಲ. ಅಂತಿಮವಾಗಿ ಗುರುವಾರ ಬೆಳಗ್ಗೆ ಕೆಲವು ಮಾಜಿ ಕಾರ್ಪೆರೇಟರ್​ಗಳನ್ನು ಕೇಳಿದರೆ ಅವರೂ ಆಸಕ್ತಿ ತೋರಿಸಿಲ್ಲ.