ಜನರ ಮಾತಿಗೆ ಬೆಲೆ ಕೊಡುವವರಿಗೆ ಮತ ನೀಡಿ

ಆನೇಕಲ್: ಸಾರ್ವಜನಿಕರ ಮಾತಿಗೆ ಬೆಲೆ ನೀಡುವವರಿಗೆ ಮತ ನೀಡಿ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಿ.ಕೆ. ಸುರೇಶ್ ಮನವಿ ಮಾಡಿದ್ದಾರೆ.

ಬನ್ನೇರುಘಟ್ಟದಲ್ಲಿ ಸೋಮವಾರ ರೋಡ್ ಶೋ ಮೂಲಕ ಮತಯಾಚಿಸಿದರು. ಕ್ಷೇತ್ರದ ಅಭಿವೃದ್ಧಿಗೆ ಸಂಸದನಾಗಿ ಶ್ರಮಿಸಿದ್ದೇನೆ. ಕುಡಿಯುವ ನೀರಿನ ಘಟಕಗಳು, ಬಡವರ ಏಳಿಗೆಗೆ ದುಡಿದಿದ್ದೇನೆ. ಈ ಭಾಗದ ಬಿಜೆಪಿ ಶಾಸಕರ ಅಭಿವೃದ್ಧಿ ಕಾರ್ಯ ಶೂನ್ಯ. ಆದರೆ, ಚುನಾವಣೆ ಬಂದಾಗ ಮತ ಕೇಳಲು ಬರುತ್ತಾರೆ ಎಂದು ಲೇವಡಿ ಮಾಡಿದರು.

ಬಮುಲ್ ಮಾಜಿ ಅಧ್ಯಕ್ಷ ಆರ್.ಕೆ. ರಮೇಶ್ ಮಾತನಾಡಿ, ಕ್ಷೇತ್ರದ ಜನತೆ ಸುಳ್ಳು ಭರವಸೆಗಳಿಗೆ ಕಿವಿಗೊಡದೆ ಸುರೇಶ್ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಬೆಗಿಹಳ್ಳಿ, ಹರಪನಹಳ್ಳಿ ,ಕೊಪ್ಪ, ಜಿಗಣಿ, ಹೆನ್ನಾಗರ, ಹಾರಗದ್ದೆ ಮತ್ತು ಯಾರಂಡಳ್ಳಿಯಲ್ಲಿ ಸುರೇಶ್ ಬಹಿರಂಗ ಪ್ರಚಾರ ನಡೆಸಿದರು.

ಕಾಂಗ್ರೆಸ್ ಸೇರ್ಪಡೆ: ಬಿಜೆಪಿ ಹಾಗೂ ಜೆಡಿಎಸ್ ತೊರೆದು ಅನೇಕ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾದರು. ಕಾಂಗ್ರೆಸ್ ಮುಖಂಡರಾದ ಕೆ.ಎಸ್. ನಟರಾಜ್, ಅಚ್ಯುತರಾಜು, ಸುಷ್ಮಾ ರಾಜಗೋಪಾಲ ರೆಡ್ಡಿ, ನಾಗವೇಣಿ, ಬಾಬು, ನವೀನ್​ಕುಮಾರ್, ಆರ್.ಕೆ. ಕೇಶವರೆಡ್ಡಿ, ಆನಂದ್​ಗೌಡ, ಆರ್. ಪುನೀತ್, ಮಂಜುನಾಥ ರೆಡ್ಡಿ ಮತ್ತಿತರರಿದ್ದರು.

ಬಿಜೆಪಿಗೆ ಚುನಾವಣೆ ಬಂದಾಗ ಮಾತ್ರ ರಾಮನ ನೆನಪಾಗುತ್ತದೆ. ಬಳಿಕ ರಾಮನನ್ನು ಕಾಡಿಗೆ ವಾಪಸ್ ಕಳುಹಿಸಿ ಬಿಡುತ್ತಾರೆ. ಪಕ್ಷ ಕಟ್ಟಿದ ಅಡ್ವಾಣಿಯನ್ನೇ ಮೂಲೆಗುಂಪು ಮಾಡಿರುವ ಮೋದಿ, ಸರ್ವಾಧಿಕಾರಿ ರೀತಿ ನಡೆದುಕೊಳ್ಳುತ್ತಿದ್ದಾರೆ.

| ಡಿ.ಕೆ. ಸುರೇಶ್ ಕಾಂಗ್ರೆಸ್ ಅಭ್ಯರ್ಥಿ