ಮತ ಎಣಿಕೆಗೆ ಸಿದ್ಧತೆ ಪೂರ್ಣ

ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿಯ ಸೇಂಟ್ ಸಿಸಿಲಿ ಶಾಲೆಯಲ್ಲಿ ಮೇ 23ರಂದು ಬೆಳಗ್ಗೆ 8 ಗಂಟೆಯಿಂದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಾರಂಭವಾಗಲಿದ್ದು, ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಆರಂಭದಲ್ಲಿ ಅಂಚೆ ಮತಪೆಟ್ಟಿಗೆ ತೆರೆದು ಎಣಿಕೆ ಮಾಡಲಾಗುತ್ತದೆ. ಬಳಿಕ 14 ಕೊಠಡಿಗಳಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದ್ದು, ಈ ಪೈಕಿ 6 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ತಲಾ ಎರಡು ಕೊಠಡಿಗಳಲ್ಲಿ ಹಾಗೂ ಕಾರ್ಕಳ ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಮತ ಎಣಿಕೆ ತಲಾ ಒಂದು ಕೊಠಡಿಗಳಲ್ಲಿ ನಡೆಸಲಾಗುತ್ತದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರತಿಯೊಂದು ಕ್ಷೇತ್ರವಾರು ಮತ ಎಣಿಕೆಯ ಕೊಠಡಿಯಲ್ಲಿ ಓರ್ವ ಎಆರ್‌ಒ, 8 ಸಹಾಯಕ ಚುನಾವಣಾಧಿಕಾರಿ ಹಾಗೂ 6 ಮಂದಿ ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳಿರುತ್ತಾರೆ. ಮತ ಎಣಿಕೆಗಾಗಿ ಒಟ್ಟು 127 ಮತ ಎಣಿಕಾ ಮೇಲ್ವಿಚಾರಕರು, 131 ಮತ ಎಣಿಕೆ ಸಹಾಯಕರು, 127 ಮೈಕ್ರೋ ಅಬ್ಸರ್‌ವರ್‌ಗಳನ್ನು ಹಾಗೂ 127 ಡಿ ದರ್ಜೆ ಸಿಬ್ಬಂದಿ ನೇಮಿಸಲಾಗಿದೆ. ಎಲ್ಲ ಮತ ಎಣಿಕೆ ಅಧಿಕಾರಿ ಹಾಗೂ ಸಿಬ್ಬಂದಿಗೆ ಮೇ 17ರಂದು ಪ್ರಥಮ ಹಂತದ ತರಬೇತಿ ನೀಡಲಾಗಿದ್ದು, ಮೇ 19ರಂದು 2ನೇ ಹಂತದ ತರಬೇತಿ ಆಯೋಜಿಸಲಾಗಿದೆ. ಮತ ಎಣಿಕೆ ಕಾರ್ಯಕ್ಕಾಗಿ ಕೃಷ್ಣ ಕುಲಾಲ್ ಹಾಗೂ ನಿತೇಶ್ವರ್ ಕುಮಾರ್ ಅವರನ್ನು ಚುನಾವಣಾ ವೀಕ್ಷಕರನ್ನಾಗಿ ಕೇಂದ್ರ ಚುನಾವಣಾ ಆಯೋಗ ನೇಮಕ ಮಾಡಿದೆ ಎಂದರು.
ಚುನಾವಣಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರು ಪ್ರತಿದಿನ ಭದ್ರತಾ ಕೊಠಡಿ ಹಾಗೂ ಮತ ಎಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಭದ್ರತೆ ಹಾಗೂ ಇತರ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಕಂಟ್ರೋಲ್ ರೂಮ್ ವ್ಯವಸ್ಥೆ ಮಾಡಲಾಗಿದ್ದು, ಮಹಿಳಾ ಸಿಬ್ಬಂದಿಗಾಗಿ ಗ್ರೀನ್ ರೂಮ್, ಕುಡಿಯುವ ನೀರು, ಪ್ರಥಮ ಚಿಕಿತ್ಸೆ, ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ನಿಷೇಧಿಸಲಾಗಿದೆ. ಪ್ರತಿ ಕೊಠಡಿಯಲ್ಲಿ 2 ಸಿಸಿಟಿವಿ ಅಳವಡಿಸಲಾಗುತ್ತದೆ. ಒಟ್ಟು 130 ಸಿಸಿಟಿವಿ ವ್ಯವಸ್ಥೆ ಮಾಡಲಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಉಪಸ್ಥಿತರಿದ್ದರು.

ಒಂದೇ ಪ್ರವೇಶ ದ್ವಾರ:  ಸೇಂಟ್ ಸಿಸಿಲಿ ಶಾಲಾ ಕಟ್ಟಡದಲ್ಲಿರುವ 14 ಮತ ಎಣಿಕಾ ಕೆಂದ್ರಗಳಿಗೆ ಒಂದೇ ಪ್ರವೇಶ ದ್ವಾರದ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರದಿಂದ 100 ಮೀಟರ್ ವ್ಯಾಪ್ತಿಯಲ್ಲಿ ವಾಹನ ಸಂಚಾರ ರಹಿತ ಪಾದಚಾರಿಗಳ ವಲಯ ಎಂದು ಗುರುತಿಸಲಾಗಿದೆ. ಭದ್ರತೆಗಾಗಿ 1 ಸಿಆರ್‌ಪಿಎಫ್ ತುಕಡಿ, 2 ಕೆಎಸ್‌ಆರ್‌ಪಿ ತುಕಡಿ, 83 ಹೋಮ್ ಗಾರ್ಡ್ಸ್ ಹಾಗೂ 312 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಹೇಳಿದರು.