ಮತ ಎಣಿಕೆಗೆ ಸರ್ವಸಿದ್ಧತೆ

ಮಂಗಳೂರು: ದ.ಕ.ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಎನ್‌ಐಟಿಕೆಯಲ್ಲಿ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 8ರಿಂದ ಮತ ಎಣಿಕೆ ಕಾರ್ಯ ನಡೆಯಲಿದ್ದು, ಪ್ರತಿ ಅಸೆಂಬ್ಲಿ ಕ್ಷೇತ್ರದ ಎಲ್ಲ್ಲ ಹಂತಗಳ ಮತ ಎಣಿಕೆ ಪೂರ್ಣವಾದ ಕೂಡಲೇ 5 ಬೂತ್‌ಗಳ ವಿವಿ ಪ್ಯಾಟ್ ಎಣಿಕೆ ನಡೆಸಲಾಗುವುದು ಎಂದರು.

ಒಂದು ವೇಳೆ ವಿವಿ ಪ್ಯಾಟ್‌ನಲ್ಲಿ ಇರುವ ಮತ ಹಾಗೂ ಇವಿಎಂ(ಮತಯಂತ್ರ) ಮತ ತಾಳೆಯಾಗದಿದ್ದರೆ ಏನು ಮಾಡಬೇಕು ಎನ್ನುವ ಬಗ್ಗೆ ಚುನಾವಣಾ ಆಯೋಗದ ನಿಯಮಾವಳಿ ಇದೆ. ಅದರಂತೆ ವಿವಿ ಪ್ಯಾಟ್‌ನ ಮತಗಳೇ ಅಂತಿಮ ಎಂದು ನಿರ್ಣಯಿಸಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

14 ಎಣಿಕೆ ಮೇಜು: 8 ಅಸೆಂಬ್ಲಿ ಕ್ಷೇತ್ರಗಳಿಗೆ ಮತ ಎಣಿಕೆಗಾಗಿ 14 ಎಣಿಕೆ ಟೇಬಲ್‌ಗಳನ್ನು ಎಣಿಕಾ ಕೇಂದ್ರದೊಳಗೆ ವ್ಯವಸ್ಥೆ ಮಾಡಲಾಗಿದೆ. ಬೆಳ್ತಂಗಡಿ 18, ಮೂಡುಬಿದಿರೆ 16, ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ತಲಾ 18, ಮಂಗಳೂರು 15, ಬಂಟ್ವಾಳ 18, ಪುತ್ತೂರು 16 ಹಾಗೂ ಸುಳ್ಯ 17 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಅಂಚೆ ಮತ ಎಣಿಕೆ ಹಾಗೂ ಅಂಚೆ ಇಲೆಕ್ಟ್ರಾನಿಕ್ ಮತ ಎಣಿಕೆ ಕಾರ್ಯವನ್ನು ಪ್ರತ್ಯೇಕವಾಗಿ ಇವಿಎಂ ಮತ ಎಣಿಕೆಗೆ ಮುನ್ನ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀ ಗಣೇಶ್ ಗೋಷ್ಠಿಯಲ್ಲಿದ್ದರು.

ಬೆಳಗ್ಗೆ 6 ಗಂಟೆಯಿಂದ ಸಾಯಂಕಾಲ 6ರವರೆಗೆ ನಿಷೇಧಾಜ್ಞೆ
ಮತ ಎಣಿಕೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಮೇ 22ರ ಸಾಯಂಕಾಲ 6ರಿಂದ 24ರ ಸಾಯಂಕಾಲ 6ರ ವರೆಗೆ ನಿಷೇಧಾಜ್ಞೆ (ಸೆಕ್ಷನ್ 144)ಹೇರಲಾಗುತ್ತದೆ. ಈ ಅವಧಿಯಲ್ಲಿ ಮೆರವಣಿಗೆ, ಸಾರ್ವಜನಿಕ/ರಾಜಕೀಯ ಸಭೆ ನಿಷೇಧ. ಶಸ್ತ್ರಾಸ್ತ್ರ, ಸ್ಫೋಟಕ ಸಾಗಾಟ ನಿಷೇಧಿಸಲಾಗಿದ್ದು, ಸುಡು ಮದ್ದುಗಳ ಬಳಕೆಗೂ ಅವಕಾಶವಿಲ್ಲ. 22ರಂದು ಸಾಯಂಕಾಲ 5ರಿಂದ ಮೇ 23ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧ ಎಂದು ಡಿಸಿ ತಿಳಿಸಿದರು.

ಎನ್‌ಐಟಿಕೆ ಶಿಕ್ಷಣ ಸಂಸ್ಥೆಯ ಭದ್ರತಾ ಕೊಠಡಿ(ಸ್ಟ್ರಾಂಗ್ ರೂಂ)ಗೆ ಮತ ಎಣಿಕೆ ದಿನದಂದು ಸಿಎಪಿಎಫ್ ತುಕಡಿ ಸೇರಿದಂತೆ 5 ಕೆಎಸ್‌ಆರ್‌ಪಿ, 12 ಸಿಎಆರ್ ತುಕಡಿ, 2 ಡಿಸಿಪಿ, 6 ಎಸಿಪಿ, 17 ಪಿಐ, 48 ಪಿಎಸ್‌ಐ, 66 ಎಎಸ್‌ಐ, 112 ಎಚ್‌ಸಿ, 224 ಪಿಸಿಯವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ವಾಹನ ಸಂಚಾರಕ್ಕೆ ಸಂಬಂಧಿಸಿ 1 ಎಸಿಪಿ, 4 ಪಿಐ, 2 ಪಿಎಸ್‌ಐ, 31 ಎಎಸ್‌ಐ, 61 ಎಚ್‌ಸಿ, 99 ಪಿಸಿ ಗಳನ್ನು ನಿಯೋಜಿಸಲಾಗಿದೆ.
– ಸಂದೀಪ್ ಪಾಟೀಲ್, ಮಂಗಳೂರು ಪೊಲೀಸ್ ಆಯುಕ್ತ

ಮತ ಎಣಿಕೆ ಕೇಂದ್ರಕ್ಕೆ 6 ಸುತ್ತಿನ ಕೋಟೆ

ಸುರತ್ಕಲ್:  ದ.ಕ.ಲೋಕಸಭಾ ಕ್ಷೇತ್ರ ಚುನಾವಣೆ ಮತಯಂತ್ರ ಇರಿಸಲಾಗಿರುವ ಎನ್‌ಐಟಿಕೆಯ ಎಟಿಬಿ ವಿಭಾಗ ಕಟ್ಟಡಗಳಿಗೆ ಗುರುವಾರ ಮತ ಎಣಿಕೆ ಹಿನ್ನೆಲೆಯಲ್ಲಿ ಭದ್ರತೆ ಬಲಪಡಿಸಲಾಗಿದೆ. ಕಟ್ಟಡದ ಸುತ್ತಲೂ ಸುಮಾರು ಆರು ಸ್ತರಗಳಲ್ಲಿ ರಕ್ಷಣಾ ಬೇಲಿ ನಿರ್ಮಿಸಲಾಗಿದ್ದು, ಇಲ್ಲಿಗೆ ಬರುವ ವಾಹನಗಳಿಗೆ ಎನ್‌ಐಟಿಕೆ ಆವರಣ ಒಳಗೆ ಇರುವ ಫುಟ್ಬಾಲ್ ಮೈದಾನದಲ್ಲಿ ಸ್ಥಳ ನಿಗದಿಪಡಿಸಲಾಗಿದೆ.

ಸಮೀಪದ ಚತುಷ್ಪಥ ಹೆದ್ದಾರಿ ಸರ್ವೀಸ್ ರಸ್ತೆಗೂ ಎನ್‌ಐಟಿಕೆ ಬಳಿ ತಡೆ ಬೇಲಿ ನಿರ್ಮಿಸಲಾಗಿದೆ. ಮುಂಚೂರು ಕ್ರಾಸ್ ರಸ್ತೆ ಬಳಿಯಿಂದ ಈ ಸರ್ವೀಸ್ ರಸ್ತೆಗೆ ಅನಪೇಕ್ಷಿತ ವ್ಯಕ್ತಿಗಳಿಗೆ, ವಾಹನ ಸಂಚಾರ ನಿಷೇಧಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ಮತ ಯಂತ್ರ ಇರಿಸಲಾಗಿರುವ ಕಟ್ಟಡಗಳ ಬಳಿಗೆ ಬುಧವಾರದಿಂದಲೇ ಅನಪೇಕ್ಷಿತ ವ್ಯಕ್ತಿಗಳಿಗೆ ಪ್ರವೇಶವಿಲ್ಲ. ವಿಶೇಷ ಪಾಸ್ ಇದ್ದವರಿಗೆ ಮಾತ್ರ ಅವಕಾಶ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುರುವಾರ ಎನ್‌ಐಟಿಕೆ ವಿದ್ಯಾರ್ಥಿಗಳಿಗೆ ರಜೆ ಸಾರಲಾಗಿದೆೆ. ಮತ ಎಣಿಕೆ ಕೇಂದ್ರ ಬಳಿಯಿಂದ ಪಾರ್ಕಿಂಗ್ ಸ್ಥಳ ಒಂದು ಕಿ.ಮೀ.ದೂರವಿದ್ದು ವಾಹನ ಪಾರ್ಕಿಂಗ್ ಬಳಿಕ ಅದೇ ದಾರಿಯಲ್ಲಿ ನಡೆದುಕೊಂಡು ಹೊರಬರಬೇಕು ಎಂಬ ನಿಯಮ ರೂಪಿಸಲಾಗಿದೆ. ಎಟಿಬಿ ಕಟ್ಟಡದ ಪಕ್ಕ ಒಂದು ತಡೆಬೇಲಿ ನಿರ್ಮಿಸಲಾಗಿದೆ. ಬಳಿಕ ಎರಡು ಸ್ತರದಲ್ಲಿ ಕಲ್ಲಿನ ಆವರಣ ಗೋಡೆ ಇದೆ. ಅಷ್ಟರಲ್ಲಿ ಸಿಗುವ ಸರ್ವೀಸ್ ರಸ್ತೆ, ಹೆದ್ದಾರಿಯ ಪಕ್ಕದಲ್ಲಿ ತಲಾ ಒಂದೊಂದು ಸಾಲು ತಡೆಬೇಲಿ ನಿರ್ಮಿಸಲಾಗಿದೆ, ಹೆದ್ದಾರಿ ಪಕ್ಕದಲ್ಲಿ ತಗಡು ಶೀಟಿನ ಕವಚ ನಿರ್ಮಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಜಿಲ್ಲಾಮಟ್ಟದಿಂದ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಬರಬಹುದು ಎಂದು ಅಧಿಕಾರಿಗಳು ನಿರೀಕ್ಷಿಸಿದ್ದು, ಅವರನ್ನು ಸಾಕಷ್ಟು ದೂರದಲ್ಲಿಯೇ ನಿಯಂತ್ರಿಸಲು ಸಾವಿರಾರು ಪೊಲೀಸರನ್ನು ನಿಯೋಜಿಸಲಾಗುತ್ತದೆ.

ಅಧಿಕಾರಿಗಳಿಗೆ ತರಬೇತಿ
ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಪಟ್ಟ ಮತ ಯಂತ್ರಗಳನ್ನು ದಿನದ 24 ತಾಸು ಭದ್ರತೆಯಿರುವ ಎರಡು ಬ್ಲಾಕ್‌ಗಳ ಕಟ್ಟಡದಲ್ಲಿ ಇರಿಸಲಾಗಿದೆ. ಮಂಗಳವಾರ ಚುನಾವಣಾ ಅಧಿಕಾರಿಗಳಿಗೆ ಮತಗಳನ್ನು ಹೇಗೆ ಎಣಿಕೆಗೆ ಒಳಪಡಿಸಿ ದಾಖಲೀಕರಣ ಇತ್ಯಾದಿ ನಡೆಸಬೇಕು ಎಂಬ ಬಗ್ಗೆ ಸಮಗ್ರ ತರಬೇತಿ ನೀಡಲಾಗಿದೆ. ತರಬೇತಿ ನೇತೃತ್ವವನ್ನು ದ.ಕ.ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ವಹಿಸಿದ್ದು ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ರವಿಚಂದ್ರ ನಾಯಕ್, ಪುತ್ತೂರು ಉಪವಿಭಾಗ ಕೃಷ್ಣಮೂರ್ತಿ, ಎಲ್ಲ 8 ತಾಲೂಕುಗಳ ತಹಸೀಲ್ದಾರರು, ಚುನಾವಣಾ ಅಧಿಕಾರಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು. ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಭೇಟಿ ನೀಡಿದರು. ಸಂಚಾರ ಡಿಸಿಪಿ ಮಂಜುನಾಥ ಶೆಟ್ಟಿ, ಅಪರಾಧ ವಿಭಾಗ ಡಿಸಿಪಿ ಲಕ್ಷ್ಮೀ ಪ್ರಸಾದ್, ಪಣಂಬೂರು ಎಸಿಪಿ ಶ್ರೀನಿವಾಸ ಗೌಡ ಸುರತ್ಕಲ್ ಪಿಐ ರಾಮಕೃಷ್ಣ ಕೆ.ಜಿ., ಉತ್ತರ ಸಂಚಾರ ಠಾಣೆ ಪಿಐ ದಿವಾಕರ್ ಭದ್ರತೆ, ಸಿದ್ಧತಾ ಕ್ರಮಗಳ ನೇತೃತ್ವ ವಹಿಸಿದ್ದಾರೆ.

Leave a Reply

Your email address will not be published. Required fields are marked *