More

    ಮತದಾನದಿಂದ ದೂರ ಉಳಿಯುವ ನಗರವಾಸಿಗಳಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ

    ಕೋಲಾರ: ನಗರದ ಪ್ರಜ್ಞಾವಂತ ಮತದಾರರೇ ಮತದಾನದಿಂದ ದೂರ ಉಳಿಯುತ್ತಿರುವುದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿಪೆಟ್ಟು ಬೀಳುತ್ತದೆ ಎಂದು ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜ್ ಹೇಳಿದರು.

     

    ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಉತ್ತಮ ಸರ್ಕಾರ ಆಡಳಿತಕ್ಕೆ ಬಂದಾಗ ದೇಶ ಪ್ರಗತಿ ಹಾಗೂ ಬದಲಾವಣೆ ಕಾಣಲು ಸಾಧ್ಯ ಎಂದರು.

     

    ಪ್ರತಿ ಮತವೂ ಬೆಲೆ ಕಟ್ಟಲಾಗದ ಮೌಲ್ಯ ಹೊಂದಿದೆ. ನಗರವಾಸಿಗಳು ಶೈಕ್ಷಣಿಕವಾಗಿ ಮುಂದುವರಿದಿದ್ದರೂ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳದೆ ಶೇ.25ರಿಂದ 30 ಮಾತ್ರ ಮತದಾನವಾಗುತ್ತಿರುವುದು ಬೇಸರದ ಸಂಗತಿ ಎಂದರು.

     

    ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಎಚ್.ಗಂಗಾಧರ್ ಮಾತನಾಡಿ, ಯುವಜನತೆ ಮತದಾನ ಮಾಡದಿರುವುದರಿಂದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಮೂಲಸೌಕರ್ಯವಾದ ನೀರು ಕಲ್ಪಿಸುವ ಬಗ್ಗೆ ಮಾತನಾಡುವ ನಾಯಕನನ್ನು ಆಯ್ಕೆ ಮಾಡುವಲ್ಲಿ ವಿಫಲವಾಗಿರುವುದು ಕಾರಣ. ಒಳ್ಳೆಯ ನಾಯಕನನ್ನು ಆಯ್ಕೆ ಮಾಡಿಕೊಂಡರೆ ಮೂಲಸೌಕರ್ಯ ಕಲ್ಪಿಸಿಕೊಳ್ಳಬಹುದು ಎಂದರು.

     

    ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿಲ್ಲೆಯಲ್ಲಿ 17 ಲಕ್ಷ ಜನಸಂಖ್ಯೆಯಲ್ಲಿ 12,14,746 (ಶೇ. 71.26) ಮತದಾರರಿದ್ದಾರೆ. ಪುರುಷರು ಮತ್ತು ಮಹಿಳೆಯರ ಅನುಪಾತ 995ರಷ್ಟಿದೆ. ಮತದಾರರ ಪಟ್ಟಿಗೆ ಹೊಸದಾಗಿ ನೋಂದಣಿಯಾಗಲು ಫಾರಂ ನಂ 6 ಭರ್ತಿ ಮಾಡಿ ಸಲ್ಲಿಸಬೇಕು. ಅಥವಾ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

     

    ಫೆ.11, 12ರಂದು ಆಯೋಜಿಸಿರುವ ಬೃಹತ್ ಉದ್ಯೋಗ ಮೇಳ ಸಂಬಂಧ ಭಾನುವಾರ ಬೆಳಗ್ಗೆ 11.30 ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ವೆಬ್‌ಸೈಟ್‌ಗೆ ಚಾಲನೆ ನೀಡಲಾಗುವುದು. ಉದ್ಯೋಗಾಂಕ್ಷಿಗಳು ನೋಂದಣಿ ಮಾಡಿಕೊಂಡು ಮೇಳದಲ್ಲಿ ಭಾಗವಹಿಸಬೇಕು ಎಂದರು.

     

    ಯುವ ಮತದಾರರಿಗೆ ಎಪಿಕ್ ಕಾರ್ಡ್ ವಿತರಣೆ, ಉತ್ತಮ ಕಾರ್ಯನಿರ್ವಣೆ ಮಾಡಿದ ಬಿಎಲ್‌ಒಗಳಾದ ಶೆಟ್ಟಿಹಳ್ಳಿಯ ಭಾಗ್ಯಮ್ಮ, ಪಿಸಿ ಬಡಾವಣೆಯ ಸರಸ್ವತಮ್ಮ, ಕೀಲುಕೋಟೆಯ ವಿ.ವೆಂಕಟರಾಮ್‌ಗೆ ಪ್ರಶಂಸನಾ ಪತ್ರ, ಕಳೆದ ಲೋಕಸಭೆ ಚುನಾವಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಚುನಾವಣಾ ಆಯೋಗದಿಂದ ಜಿಲ್ಲಾಮಟ್ಟದ ಪ್ರಶಸ್ತಿಗೆ ಭಾಜನರಾದ ನಾಗರಾಜ್, ಪ್ರೊ.ಎ.ನವೀನ್ ಕುಮಾರ್, ದೊಡ್ಡಹಸಾಳ ಗ್ರಾಪಂ ಪಿಡಿಒ ಚಂಗಲರಾಯಗೌಡ, ಕ್ಷೇತ್ರ ಸಂಪನ್ಮೂಲ ಕೇಂದ್ರದ ವೆಂಕಟರಾಮಯ್ಯ, ನಂಜುಂಡೇಗೌಡ, ಪೌರಾಯುಕ್ತ ಶ್ರೀಕಾಂತ್ ಅವರನ್ನು ಸನ್ಮಾನಿಸಲಾಯಿತು.

    ಎಡಿಸಿ ಎಚ್.ಪುಷ್ಪಲತಾ, ಎಎಸ್ಪಿ ಜಾಹ್ನವಿ, ಎಸಿ ವಿ.ಸೋಮಶೇಖರ್, ಡಿಡಿಪಿಐ ಕೆ.ರತ್ನಯ್ಯ, ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಎಂ.ಸೌಮ್ಯ, ತಹಸೀಲ್ದಾರ್ ಶೋಭಿತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts