ವಾರದೊಳಗೆ ಜಂಬಗಿ ಕೆರೆ ಭರ್ತಿ

ವಿಜಯಪುರ: ತಾಲೂಕಿನ ಜಂಬಗಿ (ಅ) ಕೆರೆ ತುಂಬಿಸುವಂತೆ ಒತ್ತಾಯಿಸಿ ಗ್ರಾಮಸ್ಥರು, ರೈತರು ಕೆರೆ ಅಂಗಳದಲ್ಲಿ ಕುಳಿತು ಹಮ್ಮಿಕೊಂಡಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ ಸ್ಥಳಕ್ಕೆ ಶಾಸಕ ದೇವಾನಂದ ಚವಾಣ್ ಭೇಟಿ ನೀಡಿ, ವಾರದೊಳಗೆ ಕೆರೆ ತುಂಬಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಗತಿಪರ ರೈತ ಬಸವರಾಜ ಕಕ್ಕಳಮೇಲಿ ನೇತೃತ್ವದಲ್ಲಿ ನೂರಾರು ರೈತರು ಮಂಗಳವಾರದಿಂದ ಪ್ರತಿಭಟನೆ ಕೈಗೊಂಡಿದ್ದು, ಕೆರೆ ತುಂಬಿಸುವಂತೆ ಆಗ್ರಹಿಸುತ್ತಿದ್ದಾರೆ. ಕೆರೆ ತುಂಬುವುದರಿಂದ ಜಂಬಗಿ, ಆಹೇರಿ, ಹೊನ್ನಳ್ಳಿ, ಹುಣಸ್ಯಾಳ ಗ್ರಾಮಗಳಿಗೆ ಅನುಕೂಲವಾಗಲಿದೆ. ಜನ, ಜಾನುವಾರುಗಳಿಗೆ ಸಹಕಾರಿಯಾಗಲಿದೆ. ಆದ್ದರಿಂದ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ರೈತರು ಶಾಸಕ ದೇವಾನಂದ ಅವರಿಗೆ ಮನವಿ ಮಾಡಿದರು.

ಮಾಜಿ ಶಾಸಕ ವಿಠಲ ಕಟಕಧೋಂಡ, ಪ್ರಗತಿಪರ ರೈತ ರೇವಪ್ಪ ಹೋರ್ತಿ, ಚಂದ್ರಶೇಖರ ಅರಕೇರಿ, ಮಹಾಂತೇಶ ದೇಶಮುಖ, ರವಿಶಂಕರ ದೇಶಮುಖ, ಸಿದ್ದು ಗೆರಡೆ, ವಿಠಲ ಪೂಜಾರಿ, ಸಂಗಮೇಶ ಅವರಸಂಗ ಇನ್ನಿತರರಿದ್ದರು.

Leave a Reply

Your email address will not be published. Required fields are marked *