More

    ಸೂಕ್ಷ್ಮತೆಯ ಅರಿವು

     ಗುರುನಾಥ ಸುತಾರ

    ದುಕಿನ ಸಾರ್ಥಕತೆಗೆ ನಮ್ಮೆಲ್ಲರ ಸಕಾರಾತ್ಮಕ ಭಾವಗಳು ಮೂಲಕಾರಣ. ಬದುಕು ನಶ್ವರತೆಯ ನೆರಳಾಗಿ ತೋರಿದರೂ ಅಲ್ಲಿಯೇ ಸಾಫಲ್ಯತೆಯ ಪ್ರತಿಬಿಂಬ ಅನಾವರಣಗೊಳ್ಳುವುದು. ಈ ಭವದಲ್ಲಿ ಕೂಡುವಿಕೆ ಆಕಸ್ಮಿಕ ಹಾಗೂ ಅಗಲುವಿಕೆಯೂ ಅಷ್ಟೇ. ‘ಬಾರದು ಬಪ್ಪದು, ಬಪ್ಪದು ತಪ್ಪದು’ ಎಂಬ ನಾಣ್ಣುಡಿಯಂತೆ ಬದುಕಿನಲ್ಲಿ ಆಗಬೇಕಾದದ್ದೇ ಆಗುತ್ತದೆ. ಪ್ರಕೃತಿಗೆ ವಿರುದ್ಧವಾಗಿ ಇಲ್ಲಿ ಏನೂ ಸಾಗದು. ಸಾಗಿದರೂ ಅಲ್ಲಿ ಅನಾಹುತವನ್ನೇ ಕಾಣಬಹುದು. ಸೋಲು ಗೆಲುವಿನ ಸಂಕೇತ, ಸೋಲನ್ನು ಸವಾಲಾಗಿ ಸ್ವೀಕರಿಸಿದರೆ ಬದುಕಿನಲ್ಲಿ ನಾವು ಕಂಡುಕೊಂಡ ಸತ್ಯ ಸೌಗಂಧ ಪರಿಮಳ ಹರಡುತ್ತದೆ. ಧನಾತ್ಮಕತೆಯ ಸದ್ಭಾವನೆ ನಮ್ಮನ್ನು ಸನ್ಮಾರ್ಗದತ್ತ ಕೊಂಡೊಯ್ಯಬಲ್ಲುದು, ಆಗ ಬದುಕಿಗೊಂದು ಅರ್ಥ.

    ಮಹಾಭಾರತದ ಶಾಂತಿಪರ್ವದಲ್ಲಿ ಭೀಷ್ಮಪಿತಾಮಹರು ಧರ್ಮರಾಯನಿಗೆ ಒಂದು ಪ್ರಸಂಗ ವಿವರಿಸುತ್ತಾರೆ. ಮದುವೆಯಾಗಿ ಹತ್ತಾರುವರ್ಷ ಗತಿಸಿದ ಮೇಲೆ ಬ್ರಾಹ್ಮಣದಂಪತಿಗೆ ಒಂದು ಮುದ್ದಾದ ಗಂಡುಮಗು ಜನಿಸುತ್ತದೆ. ಆ ಮಗು ಬೆಳೆದಂತೆಲ್ಲ ಆತನ ಲೀಲೆಗಳು, ಆಹಾರ-ವಿಹಾರ, ಉಡುಗೆ-ತೊಡುಗೆಗಳನ್ನು ಕಂಡು ಅವರ ಆನಂದಕ್ಕೆ ಪಾರವೇ ಇಲ್ಲದಾಯ್ತು, ಆದರೆ ಈ ಸಂತಸ, ಲವಲವಿಕೆ, ಮುಖದಲ್ಲಿಯ ನಗೆ; ಅಕಾಲಿಕವಾಗಿ ಮಗ ಮರಣ ಹೊಂದಿದಾಗ ಉಳಿಯಲಿಲ್ಲ, ಮಗುವಿನ ಅಕಾಲಿಕ ಮರಣ ಅವರಿಗೆ ಸಂತೈಸಿಕೊಳ್ಳಲಾರದಷ್ಟು ನೋವು, ಸಂಕಷ್ಟ ತಂದಿತು. ಸಾಂರ್ದಭಿಕತೆಯನ್ನು ಅರ್ಥೈಸಿಕೊಂಡ ಹದ್ದು, ನರಿಗಳಂತಹ ಪ್ರಾಣಿಗಳು ಸಹಿತ ಆ ದಂಪತಿಗೆ ಬದುಕಿನ ನಶ್ವರತೆ ಕುರಿತು ಸಾಂತ್ವನದ ಮಾತುಗಳನ್ನಾಡಿದವು! ಅವು ಬಾಹ್ಯದಲ್ಲಿ ಸಾಂತ್ವನದ ನುಡಿಗಳಾಗಿದ್ದವೆ ಹೊರತು ಅಂತರಂಗದಲ್ಲಿ ಮಾತ್ರ ದುರಾಲೋಚನೆಯ ಕನ್ನಡಿಗಳಂತಿದ್ದವು ಎಂದು ಹೇಳುತ್ತಾರೆ. ಇದು ಆ ದಂಪತಿಗೆ ಆಗಿನ ಸಂದರ್ಭದಲ್ಲಿ ಅರ್ಥವಾಗದಿರಬಹುದು. ಆದರೆ ಇದು ವಾಸ್ತವದ ಮೇಲೆ ಬೆಳಕು ಚೆಲ್ಲುವಂಥದು. ಈ ಬದುಕಿನ ರಂಗನಾಟಕದಲ್ಲಿ ನಾವೆಲ್ಲ ಪಾತ್ರಧಾರಿಗಳು, ಅಂತರಂಗ-ಬಹಿರಂಗ ಶುದ್ಧವಿಲ್ಲದವರು ಸಮಾಜಕಂಟಕರಾಗುತ್ತಾರೆ. ಮಾತಿನಲ್ಲಿ ಕಲ್ಲುಸಕ್ಕರೆಯಂತಿರುವವರು ನಡೆ ಹಾಗೂ ಆಂತರ್ಯದಲ್ಲಿ ಹಾಗೇ ಇರುತ್ತಾರೆಂದೆನಿಲ್ಲ.

    ನರಿಯ ಮೋಸದ ಬುದ್ಧಿ, ಹದ್ದಿನ ಆಸೆಯಕಣ್ಣು, ಮರ್ಕಟನ ಮನಸ್ಸು ಹಾಗೂ ನಾಯಿ ಬಾಲದ ಡೊಂಕು ಸರಿಯಾಗುತ್ತದೆಂಬ ಭರವಸೆಯಿಲ್ಲ. ಇಂಥ ಗುಣಾವಗುಣಗಳ ಮಧ್ಯೆ ನಾವು ಬದುಕಬೇಕಾಗಿದೆ. ಸುಖ-ದುಃಖ, ಮಾನ-ಅಪಮಾನಗಳು ಬದುಕಿನಲ್ಲಿ ಸಹಜ. ಆದರೆ ಇಂಥವುಗಳಿಗೆ ಹೆಚ್ಚು ಗಮನ ಹರಿಸದೆ, ಬಂದದ್ದನ್ನು ಶಿವಪ್ರಸಾದವೆಂದು ನಂಬಿ ಸತ್ಕಾರ್ಯದಲ್ಲಿ ನಿರತರಾಗುವುದರಲ್ಲೇ ಬದುಕಿನ ಸಾರ್ಥಕತೆ ಅಡಗಿದೆ. ‘ಸಾಸಿವೆ ಕಾಳಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡು’ ಎಂಬ ಉಕ್ತಿಯಂತೆ ಸುಖದುಃಖಗಳೆಡೆಯಲ್ಲಿ ನಮ್ಮದು ಸಕಾರಾತ್ಮಕ ಗುರಿಯಾಗಿರಬೇಕು. ಅದು ನಮ್ಮನ್ನು ರಹದಾರಿಯಲ್ಲಿ ಕೊಂಡೊಯ್ಯಬಲ್ಲುದು. ಭೀಷ್ಮ ಪಿತಾಮಹರು ವಿವರಿಸಿದ ಪ್ರಸಂಗ ಪ್ರಾಸಂಗಿಕವಾದರೂ, ನಮ್ಮೆಲ್ಲರ ವಾಸ್ತವ ಬದುಕಿನ ವೈಚಿತ್ರ್ಯಗಳ ಮೇಲೆ ಬೆಳಕು ಚೆಲ್ಲಿದಂತಾಗಿದೆ. ಸಮಯ ಸಾಧಕ-ತನವನ್ನು ಆರಂಭದಲ್ಲೇ ಗುರುತಿಸಿ ಪರಿಹಾರ ಕಂಡುಕೊಳ್ಳಬಹುದಾದ ಸೂಕ್ಷ್ಮತೆಯ ಅರಿವು ಇಲ್ಲಿದೆ.

    (ಲೇಖಕರು ಹವ್ಯಾಸಿ ಬರಹಗಾರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts