More

    ವಿವೇಕಧಾರೆ ಅಂಕಣ| ಆಗದಿದ್ದರೆ ಯೌವನ ನಷ್ಟ ಸಾಧಿಸುವಿರಿ ಜೀವನೋತ್ಕೃಷ್ಟ

    ವಿವೇಕಧಾರೆ ಅಂಕಣ| ಆಗದಿದ್ದರೆ ಯೌವನ ನಷ್ಟ ಸಾಧಿಸುವಿರಿ ಜೀವನೋತ್ಕೃಷ್ಟಜಗತ್ತಿನ ಅತಿಶ್ರೇಷ್ಠ ಜ್ಞಾನಿಗಳೆಂದೆನಿಸಿ ಸಾರ್ವಕಾಲಿಕವಾಗಿ ಮಾನ್ಯರಾದ ಶ್ರೀಶಂಕರ ಭಗವತ್ಪಾದರು ಮತ್ತು ಸ್ವಾಮಿ ವಿವೇಕಾನಂದರು ತಮ್ಮ ಬದುಕಿನ ನಲವತ್ತರ ಹೊಸ್ತಿಲನ್ನೂ ತುಳಿಯದೇ ಜಗತ್ತಿನಿಂದ ನಿರ್ಗಮಿಸಿದರು! ಆದರೆ ಜಗತ್ತಿನಲ್ಲಿ ಸಂಚಲನವನ್ನುಂಟು ಮಾಡಿಯೇ ನಿರ್ಗಮಿಸಿದರು.

    ಸಕಲ ಜೀವರಾಶಿಗಳಲ್ಲಿ ಮಾನವನು ವೈಶಿಷ್ಟ್ಯಪೂರ್ಣ ಜೀವನ ಧ್ಯೇಯಾದರ್ಶಗಳಿಂದ ಪ್ರಕೃತಿಯಲ್ಲಿ ಯಜಮಾನಿಕೆಯಿಂದ ಬೀಗುತ್ತಿದ್ದಾನೆ. ‘ಜೀವನವು ಭಗವಂತನೇ ಅನುಗ್ರಹಿಸಿದ ವರವಾದ್ದರಿಂದ ಅದನೆಂದೂ ಕೀಳಾಗಿ ಭಾವಿಸಬಾರದು. ಜೀವನವು ಆದರ್ಶಪೂರ್ಣವೂ ಹಾಗೂ ಸಾಹಸಮಯವೂ ಆದರಷ್ಟೇ ಅದಕ್ಕೆ ಜೀವಂತಿಕೆ ಬರುವುದು. ಆದರ್ಶ ಹೊತ್ತ ವ್ಯಕ್ತಿ ಐನೂರು ತಪು್ಪಗಳನ್ನೆಸಗಿದರೆ ಆದರ್ಶರಹಿತ ವ್ಯಕ್ತಿ ಐವತ್ತು ಸಾವಿರ ತಪು್ಪಗಳನ್ನೆಸಗುತ್ತಾನೆ. ಆದ್ದರಿಂದ ಜೀವನಕ್ಕೆ ಆದರ್ಶಗಳೇ ಉಸಿರಾಗಬೇಕು. ನಿಜಾರ್ಥದಲ್ಲಿ ಆದರ್ಶಕ್ಕೆ ಬರೆದ ಭಾಷ್ಯವೇ ಜೀವನ… ಮಹಾನ್ ಜೀವನ’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು.

    ಕಷ್ಟದ ಜೀವನವೇ ಶಿಸ್ತಿನ ಪಾಠಶಾಲೆಯಂತೆ! ಜೀವನವೊಂದು ಸುದೀರ್ಘ ಸಮರವಂತೆ! ‘ಜೀವನವು ಬದುಕುವುದಕ್ಕಾಗಿ ಇದೆಯೇ ಹೊರತು ಸಾಯುವುದಕ್ಕಲ್ಲ’ ಎಂದು ಸಾಕ್ರಟಿಸ್ ಹೇಳಿದರೆ, ‘ಜೀವನವೆಂಬುದೊಂದು ರಣರಂಗ, ಅಲ್ಲಿ ಹೇಡಿಗಳು ದುಃಖಿಸುತ್ತಾರೆ’ ಎಂದಿದ್ದಾನೆ ಅಲೆಗ್ಸಾಂಡರ್.

    ‘ಜೀವನ ಎಂಬುದು ಒಂದು ಕಿವಿಗೆ ಇಂಪಾದ ಸಂಗೀತ, ಮತ್ತೊಂದು ಕಿವಿಗೆ ಶೋಕಗೀತೆ’ ಎಂಬುದು ಸಂತಕವಿ ಎಮರ್​ಸನ್​ನ ಅಭಿಮತವಾದರೆ, ‘ಜೀವನವು ನಾವೆಣಿಸಿದಂತೆ ಹೂವಿನ ಹಾಸಿಗೆಯಲ್ಲ, ಹಾಗೆಂದ ಮಾತ್ರಕ್ಕೆ ಅದು ಮುಳ್ಳಿನ ಹಾಸಿಗೆ ಎಂದೇನೂ ಅಲ್ಲ. ಜೀವಿಯ ಆತ್ಮಶಕ್ತಿಗೆ ಅನುಸಾರವಾಗಿ ಅದು ಹೂವಿನ ಹಾಸಿಗೆಯೋ ಅಥವಾ ಮುಳ್ಳಿನ ಹಾಸಿಗೆಯೋ ಆಗಬಹುದು’ ಎಂಬುದು ಕವಿ ವಿಲಿಯಂ ವರ್ಡ್ಸ್​ವರ್ತ್​ನ ಅಭಿಮತ.

    ಜೀವನ ಶಿಕ್ಷಣ: ಬದುಕಿನಲ್ಲಿ ಅನಿರೀಕ್ಷಿತವಾಗಿ ಬಂದೊದಗುವ ಸನ್ನಿವೇಶಗಳೊಂದಿಗೆ ಹೊಂದಿಕೊಂಡು ನಡೆಯುವುದು, ಜೀವನವೊಂದು ಪ್ರವಾಹವಾದರೂ ಒಮ್ಮುಖದ ಪ್ರವಾಹವಲ್ಲ ಎಂದರಿತು ಸಾಗುವುದು, ಪ್ರಯತ್ನದಲ್ಲಿ ಒಂದೊಮ್ಮೆ ವೈಫಲ್ಯ ಕಂಡರೂ ಅದು ಪ್ರಯತ್ನಹೀನನಿಗೆ ಬಂದೊದಗುವ ಹಿನ್ನಡೆ ಎಂಬುದಕ್ಕಿಂತ ಉತ್ಕೃಷ್ಟವೆಂದರಿತು ಬದುಕಿನಲ್ಲಿ ಜೀವಂತಿಕೆ ಕಾಪಾಡಿಕೊಂಡು ಸಾಗುವುದು, ಗತಿಸಿದ್ದರ ಕುರಿತು ಚಿಂತಿಸದೆ, ವರ್ತಮಾನವನ್ನು ದೂರದೆ, ಭವಿಷ್ಯದ ಬಗ್ಗೆ ಭಯಗ್ರಸ್ತರಾಗದೆ ಮುನ್ನಡೆಯುವುದೇ ಜೀವನ ಎಂಬ ಶಿಕ್ಷಣದ ಮಹತ್ವ ನಮಗೆ ಅರಿವಾಗಲೇಬೇಕು.

    ವಿಶ್ವಕವಿ ರವೀಂದ್ರನಾಥ ಟ್ಯಾಗೋರರು ಹೇಳುತ್ತಾರೆ: ‘ಜಗತ್ತಿನಲ್ಲಿ ಹುಟ್ಟುವ ಪ್ರತಿಯೊಂದು ಮಗುವೂ, ‘ಭಗವಂತನಿಗೆ ಇನ್ನೂ ಮನುಷ್ಯ ಸಂತಾನದ ಮೇಲೆ ನಂಬಿಕೆ ಕ್ಷೀಣಿಸಿಲ್ಲ, ನಿರಾಶೆ ಮೂಡಿಲ್ಲ’ ಎಂಬ ಸಂದೇಶವನ್ನು ಹೊತ್ತು ತರುತ್ತದೆ. ಆದರೆ ಈ ಮರ್ತ್ಯಲೋಕದಲ್ಲಿ ಮಾನವನು ಈ ಪ್ರಪಂಚದೊಡನೆ ತನಗಿರುವ ಸಂಬಂಧವನ್ನು ಅರಿತುಕೊಳ್ಳದಿದ್ದರೆ ಅವನು ವಾಸಿಸುವ ಸ್ಥಳವೂ ಸೆರೆಮನೆಯೇ ಆಗುತ್ತದೆ…’ ಎಂದು. ಇಲ್ಲಿ ಪ್ರತಿಯೊಬ್ಬರ ಜನ್ಮಕ್ಕೂ, ಜೀವನಕ್ಕೂ ಜಗತ್ತಿನೊಡನೆ ಅವರಿಗೆ ಇರಬೇಕಾದ ಆದರ್ಶಪೂರ್ಣ ಬಾಂಧವ್ಯವನ್ನು ತಿಳಿಹೇಳುತ್ತದೆ. ಆದ್ದರಿಂದಲೇ, ಓದುವ ಸಾಮರ್ಥ್ಯ ನೀಡುವ ಪ್ರಕ್ರಿಯೆ ಸಾಕ್ಷರತೆ ಎನಿಸಿದರೆ ಯೋಗ್ಯವಾದುದನ್ನು ಆಯ್ದು ಓದುವ ವಿವೇಕವನ್ನು ವಿದ್ಯಾಭ್ಯಾಸವಷ್ಟೇ ದೊರಕಿಸಿಕೊಡುತ್ತದೆ.

    ಬಾಲ್ಯ-ಯೌವನ: ಮಾನವ ಇತಿಹಾಸದಲ್ಲೇ ಜೀವಿತದ ಅವಧಿಯನ್ನು ನಾಲ್ಕು ವಿಭಾಗಗಳಾಗಿಸಿ ಪ್ರತಿಯೊಂದು ಅವಧಿಯೂ ಸಾರ್ಥಕ್ಯ ಕಾಣಲು ಅತ್ಯವಶ್ಯಕವಾದ ಜೀವನ ಕಟ್ಟುಪಾಡುಗಳ ‘ಧರ್ಮ’ ಎಂಬ ಸಂಹಿತೆಯನ್ನಿತ್ತ ದೇಶ ನಮ್ಮದು. ನಾಲ್ಕೂ ಆಶ್ರಮ ಧರ್ಮಗಳ ಅಡಿಪಾಯವೆಂದೆನಿಸಿದ ಬ್ರಹ್ಮಚರ್ಯ ಆಶ್ರಮವು ಬಾಲ್ಯ ಮತ್ತು ಯೌವನದ ಮಹತ್ತರ ಘಟ್ಟಗಳನ್ನು ತನ್ನ ಒಡಲಿನಲ್ಲಿ ಹುದುಗಿಸಿಟ್ಟಿದೆ. ಜೀವನದಲ್ಲಿ ಯೌವನದ ಅವಧಿಯೇ ಇಡೀ ಬದುಕಿಗೆ ದಿಕ್ಸೂಚಿ ದೊರಕಿಸಿಕೊಡುವ ಪ್ರಮುಖ ವಯೋಹಂತವಾಗಿದೆ.

    ಯೌವನವು ವಯಸ್ಸಿಗೆ ಹಾಗೂ ಶರೀರ ಚಹರೆಗಳ ವಿಚಾರಗಳಿಗಷ್ಟೇ ಸೀಮಿತವೇ? ಚಿಂತಕ ಟಿ.ಪಿ.ಕೈಲಾಸಂ ಹೇಳಿದಂತೆ, ‘ಕೇವಲ ಶರೀರ ಬಲಿಷ್ಠವಾಗಿ ಬುದ್ಧಿ ವೃದ್ಧಿಸದಿದ್ದರೆ ಅದೊಂದು ಗೂಳಿ! ಬುದ್ಧಿ ವೃದ್ಧಿಯಾಗಿ ಶರೀರ ಕೃಶವಾದರೆ ಅದೊಂದು ಗುಳ್ಳೇನರಿ!’ ಆದ್ದರಿಂದ ಜಗತ್ತಿನ ಇತಿಹಾಸದುದ್ದಕ್ಕೂ ಯುವಜನರನ್ನೇ ಸಮಾಜ ಮೈಯೆಲ್ಲ ಕಣ್ಣಾಗಿಸಿಕೊಂಡು ಗಮನಿಸುತ್ತ ಸಾಗಿ ಬಂದಿದೆ. ‘ಯುವಕರು ಸಮಾಜವನ್ನು ಬದಲಿಸಬೇಕೆಂದು ಹಂಬಲಿಸುತ್ತ ಸಾಗುತ್ತಾರೆ; ಅವರು ವೃದ್ಧಾಪ್ಯ ಸಮೀಪಿಸಿದಾಗ ಸಮಾಜದ ಯುವಕರನ್ನು ಸರಿದಾರಿಗೆ ತರುವುದು ಹೇಗೆ ಎಂದು ಚಿಂತಿಸಲು ಪ್ರಾರಂಭಿಸುತ್ತಾರೆ!’ ಎಂಬುದು ಅನಾದಿಕಾಲದಿಂದಲೂ ಚಾಲ್ತಿಯಲ್ಲಿರುವ ಸತ್ಯಸಂಗತಿ.

    ಮಕ್ಕಳು ವಿಶ್ವದ ಅತಿದೊಡ್ಡ ಮೌಲ್ಯಯುತ ಸಂಪನ್ಮೂಲ. ಇಂದಿನ ಮಕ್ಕಳೇ ಜಗತ್ತಿನ ಭವಿಷ್ಯ. ಅವರುಗಳಿಗೆ ಬೆಳಕು ತುಂಬಿದ ಮೌಲ್ಯಗಳನ್ನು ನೀಡುವುದರ ಮೂಲಕ ಹಿರಿಯರಾದ ನಾವು ಭವಿಷ್ಯದ ಗುಣಾಂಶವನ್ನು ಸಕಾರಾತ್ಮಕವಾಗಿ ಮೂಡಿಸಬಹುದು. ಅಮೆರಿಕದ ಮಕ್ಕಳ ಚಿತ್ರಕಥೆಗಾರ್ತಿ ಚಾರ್ಲೋಟ್ ಸೋಲೋಟೌ ಹೇಳುತ್ತಾರೆ: ‘ಮಕ್ಕಳು ಯಾವಾಗಲೂ ತೆರೆದ ಹಾಗೂ ಮುಕ್ತ ಮನಸ್ಸಿನವರಾಗಿರುತ್ತಾರೆ. ಅವರು ಭಾವಿಸುವ ಯಾವುದೇ ವಿಚಾರದಲ್ಲೂ ಒಡಕು ಎಂಬುದು ಇರುವುದಿಲ್ಲ. ಆದ್ದರಿಂದ ಅವರುಗಳ ಮನಸ್ಸನ್ನು ಸುಲಭವಾಗಿ ಮುಟ್ಟಬಹುದು.’ ಈ ಎಲ್ಲ ಮಾತುಗಳಲ್ಲಿ ನಾವು ಮಕ್ಕಳನ್ನು ನಿರ್ವಹಿಸುವ ಕಾರ್ಯದಲ್ಲಿ ಅದೆಷ್ಟು ಜವಾಬ್ದಾರಿ ಇದೆ ಎಂಬುದು ಮನವರಿಕೆ ಆಗುತ್ತದೆ. ನಿಜ! ಮಕ್ಕಳನ್ನು ನಿರ್ವಹಿಸುವುದು ಮಕ್ಕಳಾಟಿಕೆಯ ವಿಷಯವಲ್ಲ, ಅಲ್ಲವೇ?

    ವಿಶ್ವವಿಖ್ಯಾತ ಚಿಂತಕ ಕೌಟಿಲ್ಯನು ಹೇಳಿದ ಎರಡು ಮಾತುಗಳು ಮನನಯೋಗ್ಯ. ‘ಐದನೇ ವಯಸ್ಸಿನವರೆಗೆ ಮಗುವನ್ನು ಪ್ರೀತಿಯಿಂದ ಪೋಷಿಸಿ ರಕ್ಷಿಸಬೇಕು. ಆರನೇ ವಯಸ್ಸಿನಿಂದ ಹದಿನೈದರವರೆಗೆ ಮಗುವನ್ನು ಶಿಸ್ತು ಮತ್ತು ಕಟ್ಟುನಿಟ್ಟಾದ ನಿಯಮಗಳಿಂದ ಪೋಷಿಸಬೇಕು. ಆದರೆ ಹದಿನಾರನೇ ವರ್ಷದ ನಂತರ ಮಗನನ್ನು ಸ್ನೇಹಿತನಂತೆ ನಡೆಸಿಕೊಳ್ಳಬೇಕು. ಯೌವನ, ಐಶ್ವರ್ಯ, ಅಧಿಕಾರ ಮತ್ತು ಅವಿವೇಕ- ಇವು ಒಂದೊಂದೂ ಅನರ್ಥಕ್ಕೆ ಮೂಲ. ಇನ್ನು ಈ ನಾಲ್ಕೂ ಒಟ್ಟಿಗೆ ಸೇರಿಬಿಟ್ಟರಂತೂ ಕೇಳುವುದೇ ಬೇಡ’. ಇಲ್ಲಿ ಯೌವನಕ್ಕೆ ಕಾಲಿಟ್ಟ ವ್ಯಕ್ತಿಯನ್ನು ಸ್ವತಃ ಜನ್ಮದಾತರೇ ‘ಸನ್ಮಿತ್ರ’ ಎಂದು ಪರಿಗಣಿಸಬೇಕೆಂಬುದು ಒಂದೆಡೆಯಾದರೆ ಯೌವನವನ್ನು ಯೋಗ್ಯರೀತಿಯಲ್ಲಿ ನಿರ್ವಹಿಸದಿದ್ದರೆ ಅದು ಅನರ್ಥಕ್ಕೆ ಎಡೆಮಾಡಿಕೊಡುವುದೆಂಬ ಎಚ್ಚರಿಕೆಯನ್ನೂ ನೀಡುತ್ತದೆ! ಇಲ್ಲೊಂದು ಗಂಭಿರ ಚಿಂತನೆಗೆ ಅವಕಾಶವಿದೆ.

    ಯುವಜನತೆ ಅಶಿಸ್ತಿನಿಂದ ವ್ಯವಹರಿಸಬಲ್ಲವರಾದರೂ ‘ಯೌವನ’ ಎಂಬ ಶಬ್ದವನ್ನು ಅಶಿಸ್ತಿಗೆ ಪರ್ಯಾಯಪದ ಎಂದೆಣಿಸಬಾರದು. ನಿಜ ಹೇಳಬೇಕೆಂದರೆ ಯೌವನದಲ್ಲಿ ಶಿಸ್ತಿನಿಂದ ಬದುಕಲು ಸಾಧ್ಯವಾಗುವ ಹಾಗೆ ವಯಸ್ಸಿನ ಬೇರೆ ಬೇರೆ ಕಾಲಘಟ್ಟಗಳಲ್ಲಿ ಸಾಧ್ಯವೇ ಇಲ್ಲ. ಯೌವನವು ಬುದ್ಧಿಯವಂತಿಕೆಯ ಹಂತವನ್ನು ಸೂಚಿಸದೇ ಇರಬಹುದಾದರೂ ಅದನ್ನು ಬುದ್ಧಿಹೀನತೆಯ ಸೂಚಕವೆನ್ನಲಾಗದು! ಮಾನವ ಇತಿಹಾಸ ಯುವಜನಾಂಗದಿಂದಲೇ ಮೂಡಿಬಂದ ಬಹಳಷ್ಟು ಜ್ಞಾನಿಗಳನ್ನು ದಾಖಲಿಸಿದೆ! ಇದೊಂದು ಐತಿಹಾಸಿಕ ಸತ್ಯಾಂಶವಲ್ಲವೇ? ಯುವಕರ ಬಗ್ಗೆ ನಿರ್ಷ್ಕಷಿಸುವಾಗ ಸಮಾಜದ ಹಿರಿಯರು ತಿಳಿಯಲೇಬೇಕಾದ ವಾಸ್ತವವೆಂದರೆ ಜಗತ್ತಿನ ಅತಿಶ್ರೇಷ್ಠ ಜ್ಞಾನಿಗಳೆಂದೆನಿಸಿ ಸಾರ್ವಕಾಲಿಕವಾಗಿ ಮಾನ್ಯರಾದ ಶ್ರೀಶಂಕರ ಭಗವತ್ಪಾದರು ಮತ್ತು ಸ್ವಾಮಿ ವಿವೇಕಾನಂದರು ತಮ್ಮ ಬದುಕಿನ ನಲವತ್ತರ ಹೊಸ್ತಿಲನ್ನೂ ತುಳಿಯದೇ ಜಗತ್ತಿನಿಂದ ನಿರ್ಗಮಿಸಿದರು! ಆದರೆ ಜಗತ್ತಿನಲ್ಲಿ ಸಂಚಲನವನ್ನುಂಟು ಮಾಡಿಯೇ ನಿರ್ಗಮಿಸಿದ್ದಾರೆ. ಒಂದರ್ಥದಲ್ಲಿ ಇವರು ವಯೋಮಿತಿಗೆ ಸಿಲುಕುವುದಿಲ್ಲವಾದರೂ ಇವರೀರ್ವರೂ ಯುವಜನಾಂಗಕ್ಕೆ ಸೇರಿದವರೆಂಬ ಮಾತನ್ನಂತೂ ಅಲ್ಲಗಳೆಯಲಾಗದು!

    ಯುವಸಮುದಾಯದ ಬಗ್ಗೆ ಆಶಾದಾಯಕವಾದ ಈ ಮಾತು ಸ್ತುತ್ಯರ್ಹವೂ ಹೌದು. ಜೀವಿತದ ಈ ಅವಧಿಯಲ್ಲಿ ಎಚ್ಚರಿಕೆಯ ನಡೆ ಅನಿವಾರ್ಯ. ‘ನಾವೆಷ್ಟೇ ಕಷ್ಟದಲ್ಲಿದ್ದರೂ ತಾಯಿ, ತಂದೆ, ಅಣ್ಣ ಮತ್ತು ಗುರುವನ್ನು ಅಲ್ಲಗಳೆಯಬಾರದು ಅಥವಾ ನಿಂದಿಸಬಾರದು’ ಎಂಬ ಮನುಸ್ಮೃತಿಯ ಮಾತು ಸದಾ ನೆನಪಿರಲಿ. ‘ವಸ್ತುರೂಪದ ಸಂಪತ್ತು ಅಥವಾ ಜಮೀನು ಕೈಬದಲಾವಣೆ ಆಗಬಹುದಾದರೂ ಯೋಗ್ಯರೀತಿಯಲ್ಲಿ ಗಳಿಸಿದ ಕೀರ್ತಿ ಪತಿವ್ರತೆಯಂತೆ ಸಾಧಕನಲ್ಲೇ ನಿಷ್ಠೆ ಹೊಂದಿರುತ್ತದೆ’ ಎಂಬ ಋಷಿವಾಣಿಯನ್ನು ಮನನ ಮಾಡುತ್ತಿರಬೇಕು.

    ಯುವಜನತೆ ಸದಾ ಕಣ್ಣಿಟ್ಟಿರಬೇಕಾದ ವಿಚಾರಗಳೆಂದರೆ, ‘ತಪು್ಪದಾರಿಯಿಂದ ಗಳಿಸಿದ ಅಧಿಕಾರದಿಂದ ಒಳ್ಳೆಯದನ್ನು ಸಾಧಿಸುವುದು ಅಸಾಧ್ಯ. ನಮಗೆ ನಾವೇ ಸ್ವಇಚ್ಛೆಯಿಂದ ನಿಯಂತ್ರಣ ಹಾಕಿಕೊಂಡು ಜೀವನದಲ್ಲಿ ಸಾಗಿದಾಗಷ್ಟೇ ಸ್ವಾತಂತ್ರ್ಯವೆಂಬ ಮಹಾಮೌಲ್ಯವನ್ನು ನಿಜಾರ್ಥದಲ್ಲಿ ಆಸ್ವಾದಿಸಬಹುದು. ವೈಯಕ್ತಿಕ ಸ್ವಾತಂತ್ರ್ಯವೆಂಬ ಮೌಲ್ಯದೊಂದಿಗೆ ನಾವು ಬೆಳೆಯುತ್ತ ಅದಕ್ಕೆ ‘ಸಾಮಾಜಿಕ ಜವಾಬ್ದಾರಿ’ ಎಂಬ ಮತ್ತೊಂದು ಮೌಲ್ಯವನ್ನು ಸೇರ್ಪಡೆಗೊಳಿಸಿಕೊಳ್ಳಬೇಕು. ಮೈಚೆಂದಕ್ಕೆ ಮನಸೋಲುವುದು ಅಥವಾ ಮಾತಿನ ಮೋಡಿಗೆ ಮರುಳಾಗುವುದಕ್ಕಿಂತ ಇತರರ ಸದ್ಗುಣಗಳನ್ನಾಧರಿಸಿ ಗೌರವಿಸುವುದು ಉತ್ತಮ. ಸಹಮಾನವರಲ್ಲಿ ಪ್ರೀತಿದೋರಿದರೆ ನಾವು ಹೃದಯಸಂಪನ್ನರಾಗುತ್ತೇವೆ, ಭಯ ಹುಟ್ಟಿಸಿದರೆ ನಾವು ಭಯೋತ್ಪಾದಕರಾಗುತ್ತೇವೆ! ಇಷ್ಟಾರ್ಥ ಈಡೇರಿಸಿ ಕೀರ್ತಿಯನ್ನು ದಯಪಾಲಿಸುವ, ಶತ್ರುತ್ವವನ್ನು ಕ್ಷೀಣಿಸುವ, ಸ್ವಚ್ಛತೆ ಮತ್ತು ಮಂಗಳವನ್ನೀಯುವ ಶಕ್ತಿ ಸಾಮರ್ಥ್ಯವು ಉತ್ತಮವಾದ ಮಾತು ಎಂಬ ಕಾಮಧೇನುವಿಗಿದೆ ಎಂಬ ವಿಚಾರದಲ್ಲಿ ವಿಶ್ವಾಸ ಬೆಳೆಸಿಕೊಳ್ಳಬೇಕು.

    ಯುವಜನತೆ ಬಗ್ಗೆ ವಾಸ್ತವ ಸಂಗತಿ ಏನೆಂದರೆ ಅವರು ಕಠೋರ ಸತ್ಯದ ಭಾಷೆ ಅರ್ಥಮಾಡಿಕೊಳ್ಳಬಲ್ಲರು. ನೈತಿಕ ಸವಾಲುಗಳಿಂದ ಉತ್ತೇಜಿತರಾಗಿ ನೈತಿಕ ಮಾರ್ಗದ ಮೂಲಕವೇ ಅರ್ಹತೆ ಸಾಬೀತುಪಡಿಸಲು ಬಯಸುತ್ತಾರೆ. ಹಿರಿಯರಿಂದ ನಿರ್ಭಯ ಸತ್ಯ ಕೇಳಬಯಸುವ ಯುವಕರು ಆ ಅವಕಾಶಗಳಿಗಾಗಿ, ಸೇವೆಗೈಯುವ ಸನ್ನಿವೇಶಗಳಿಗಾಗಿ ಮತ್ತು ಸ್ವಯಂ ಪರಿಪೂರ್ಣತೆಗಾಗಿ ಅಹರ್ನಿಶಿ ಎದುರು ನೋಡುತ್ತಿರುತ್ತಾರೆ! ಆದರೆ, ‘ಜೀವನ ಎಂಬುದು ಮಕ್ಕಳ ಪಾಲನೆಯಂತಷ್ಟೇ ಅಲ್ಲ, ಅದು ಕಠಿಣ ಕೆಲಸಗೈಯುವ ಮಾಲೀಕನ ಕೆಲಸ, ಅಶಿಸ್ತು ಸೆರೆಮನೆಯೇ ಹೊರತು ಸ್ವೇಚ್ಛಾಚಾರ ಸ್ವಾತಂತ್ರ್ಯವಲ್ಲ ಮತ್ತು ಅಸಹನೆ ನರದೌರ್ಬಲ್ಯದ ಹಿಂಸೆಯಷ್ಟೇ ಹೊರತು ಶಕ್ತಿಯಲ್ಲ’ ಎಂಬುದನ್ನು ಯುವಕರು ಮೆಲುಕು ಹಾಕುತ್ತಿರಬೇಕು.

    ಉಪಸಂಹಾರ: ಯುವಕರಲ್ಲಿ ಉಪನಿಷತ್ತು, ‘ಧರ್ಮಗ್ರಂಥಗಳ ಅಧ್ಯಯನವನ್ನು ಸದಾಕಾಲ ಮಾಡುತ್ತಿರು’ ಎಂಬ ಮೌಲ್ಯಪೂರ್ಣ ಮಾತನ್ನಾಡಿದೆ. ಅತಿಯಾಂತ್ರಿಕವಾದ, ಕೊಳ್ಳುಬಾಕ ಸಂಸ್ಕೃತಿಯ ಗುಲಾಮರಾಗಿರುವ ನಮಗೆ ಕಾಲ್ಪನಿಕ ಕಥೆಗಳು (ಜ್ಚಿಠಿಜಿಟ್ಞಠ) ಮತ್ತು ಚಲನಚಿತ್ರಗಳನ್ನು ವೀಕ್ಷಿಸುವ ದುರಭ್ಯಾಸಗಳಿಂದ ಯುವಕರಲ್ಲಿ ಮಾನಸಿಕ ಪರಿಪಕ್ವತೆ ಇಲ್ಲವಾಗಿದೆ! ಇದರ ಮುಂದುವರಿದ ದುಷ್ಪರಿಣಾಮವೆಂದರೆ ಕಾಲ್ಪನಿಕ ಕಥೆಗಳು ಮತ್ತು ಚಲನಚಿತ್ರಗಳ ನಟನೆಯ ಅಂಶಗಳು ನಿಜಜೀವನದಲ್ಲಿ ಸಾಧ್ಯವಿಲ್ಲವೆಂಬ ಸತ್ಯವನ್ನು ಗ್ರಹಿಸಲೂ ಸಾಧ್ಯವಾಗುತ್ತಿಲ್ಲ. ಸಾಯುವ ಶೂರನಾಯಕ ತಂತ್ರಗಾರಿಕೆಯ ಪ್ರದರ್ಶನಕ್ಕೆ ಒಂದು ಕಲ್ಪನೆ, ಅದು ಸತ್ಯವಲ್ಲವೆಂಬ ಸಾಂಕ್ರಾಮಿಕವಾದ ವಿಚಾರಗಳು ಪರಿಪಕ್ವಗೊಳ್ಳದ ಯುವ ಮನಸ್ಸುಗಳ ಮೇಲೆ ಹತೋಟಿ ಸಾಧಿಸಿ, ನೈಜ ಜೀವನ ಕಠಿಣವಾಗುವಷ್ಟು ದುಷ್ಪರಿಣಾಮ ಬೀರುತ್ತಿರುವುದು ಸುಳ್ಳಲ್ಲ.

    ತೆರೆದ ಮನಸ್ಸಿನ ಯುವಜನತೆ ವಿಚಾರಗಳನ್ನು ಮುಕ್ತಕಂಠದಿಂದ ಸ್ವೀಕರಿಸಬಲ್ಲವರಾದ್ದರಿಂದ ಅವರ ಮುಂದೆ ಅತಿಯಾದ ಒತ್ತಾಯವಿಲ್ಲದೆ, ಅವಶ್ಯಕ ವಿಚಾರಗಳ ಹಾಗೂ ಅವುಗಳ ಬಳಕೆಯ ಸತ್ಪರಿಣಾಮ ಕುರಿತಾಗಿ ಪ್ರಶಂಸನೀಯ ಮಾತುಗಳಿಂದ ಮನದಟ್ಟು ಮಾಡಿಕೊಡಬೇಕು. ಆಗಷ್ಟೇ ನಮ್ಮ ಯುವಶಕ್ತಿ ರಚನಾತ್ಮಕವಾಗಿ ಪ್ರತಿಸ್ಪಂದಿಸಿ ಹೊಣೆಗಾರಿಕೆಗೆ ಹೆಗಲು ಕೊಡುವ ಉತ್ಸಾಹ ತೋರುತ್ತಾರೆ. ಇದೇ ನಿಜಾರ್ಥದಲ್ಲಿ ಜೀವನೋತ್ಕೃಷ್ಟ ಸಾಧನೆ. ಇದನ್ನು ಯಾರು ತಾನೇ ಸ್ವಾಗತಿಸುವುದಿಲ್ಲ ಹೇಳಿ?

    ಜೀವನದ ಬೆಂಗಾಡಿನಲ್ಲಿ ಸಹೃದಯರ ಒಡನಾಟವೇ ತಂಗಾಳಿ! The enforcer of discipline alone can teach by his own example! ನದಿಯನ್ನು ಹಿಂಬಾಲಿಸಿದರೆ ಸಮುದ್ರ ಸಿಗದೇ?

    (ಲೇಖಕರು ತುಮಕೂರು ರಾಮಕೃಷ್ಣ ಮತ್ತು ವಿವೇಕಾನಂದ ಆಶ್ರಮದ ಅಧ್ಯಕ್ಷರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts