Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ವಿವೇಕವಾಣಿಯಲ್ಲಿ ವಿಶ್ವ ತಬ್ಬುವ ವಿಶ್ವಾತ್ಮಭಾವ

Tuesday, 11.09.2018, 3:05 AM       No Comments

ಮಹಾನ್ ವ್ಯಕ್ತಿಗಳು, ಸಂಸ್ಥೆಗಳು ಶತಮಾನೋತ್ಸವ ಆಚರಿಸಿಕೊಳ್ಳುವುದು ವಾಡಿಕೆ. ಆದರೆ, ಉಪನ್ಯಾಸಗಳು ಶತಮಾನೋತ್ಸವವನ್ನೂ ಆಚರಿಸಿಕೊಂಡು 125ರ ಸಂಭ್ರಮದ ಕಾಲಘಟ್ಟದಲ್ಲಿಯೂ ಹೆಚ್ಚು ಪ್ರಸ್ತುತವಾಗಿ, ಪ್ರೇರಣೆ ಹರಡುತ್ತವೆ ಎಂದರೆ ಅದುವೇ ವಿವೇಕಾನಂದರು ಮತ್ತು ಅವರ ಚಿಂತನೆಗಳಿಗೆ ಇರುವ ಶಕ್ತಿ. ದೇಶದ ಆತ್ಮಬಲವನ್ನು ಹೆಚ್ಚಿಸಿದ, ಅಂತಃಶಕ್ತಿಯನ್ನು ಜಾಗೃತಗೊಳಿಸಿದ ಸ್ವಾಮಿ ವಿವೇಕಾನಂದರ ಷಿಕಾಗೋ ಭಾಷಣಕ್ಕೆ ಈಗ 125 ವರ್ಷ. ತನ್ನಿಮಿತ್ತ ಆ ಪ್ರೇರಣೆಯ ಕೋಲ್ಮಿಂಚುಗಳನ್ನು ಮೆಲುಕುಹಾಕುವ ಯತ್ನ.

| ಸ್ವಾಮಿ ವೀರೇಶಾನಂದ ಸರಸ್ವತೀ

‘ಯದೇವ ವಿದ್ಯಯಾ ಕರೋತಿ, ಶ್ರದ್ಧಯಾ, ಉಪನಿಷದಾ, ತದೇವ ವೀರ್ಯವತ್ತರಂ ಭವತಿ’ ಎಂದಿದೆ ಉಪನಿಷತ್ತು. ಅಂದರೆ ‘ಯಾವುದೇ ಕಾರ್ಯವನ್ನು ಜ್ಞಾನಪೂರ್ವಕವಾಗಿ, ಬದ್ಧತೆಯಿಂದ ಮತ್ತು ಧ್ಯಾನಪೂರ್ವಕವಾಗಿ ಕೈಗೊಂಡಾಗ ಮಾತ್ರವೇ ಅಂತಹ ಕಾರ್ಯವು ಅತ್ಯಧಿಕವೂ ಹಾಗೂ ಅತ್ಯುತ್ಕೃಷ್ಟವೂ ಆದ ಶಕ್ತಿಯನ್ನು ದಯಪಾಲಿಸುತ್ತದೆ’.

ಯಾವುದೇ ಕ್ಷೇತ್ರದಲ್ಲಿ ಮಾನವ ಸಮಾಜಕ್ಕೆ ಪ್ರಚೋದನೆ ನೀಡುತ್ತ ಪ್ರೇರಣಾದಾಯಕ ಬದುಕನ್ನು ದೊರಕಿಸಿಕೊಟ್ಟ ಚೈತನ್ಯಗಳು ಸ್ಮರಣೀಯವಾಗುತ್ತವೆ. ಆದ್ದರಿಂದಲೇ ಜಗತ್ತಿನ ಇತಿಹಾಸವು ಕೆಲವೇ ಕೆಲವು ವ್ಯಕ್ತಿಗಳ ಇತಿಹಾಸದಲ್ಲಿ ಬಿಂಬಿತವಾಗಿದೆ. ಆದರೆ ಅವರುಗಳು ಸಮಾಜ, ದೇಶ ಹಾಗೂ ಒಟ್ಟಾರೆಯಾಗಿ ಮಾನವ ಪ್ರಪಂಚಕ್ಕೆ ನೀಡಿದ ಕೊಡುಗೆ ಕೃತಜ್ಞತಾಪೂರ್ವಕವಾಗಿ ಸ್ಮರಣೀಯವಾಗುತ್ತದೆ.

ಚಾರಿತ್ರ್ಯಬಲದಿಂದ ಜಗತ್ತನ್ನು ಆಳಿದ ಮಹಾತ್ಮರಲ್ಲಿ ಸ್ವಾಮಿ ವಿವೇಕಾನಂದರು ಅಗ್ರಗಣ್ಯರು. ಅವರಿತ್ತ ಮಾನವ ನಿರ್ಮಾಣ ಧರ್ಮ ಮತ್ತು ಮಾನವ ನಿರ್ಮಾಣ ಶಿಕ್ಷಣದ ಚಿಂತನೆಗಳು ವಿಶ್ವದ ಗಮನ ಸೆಳೆದವು! ವಿವೇಕಾನಂದರನ್ನು ಕುರಿತಾದ ಮಾತೊಂದಿದೆ: ‘ಆಧ್ಯಾತ್ಮಿಕ ಮತ್ತು ಸಾಮಾಜಿಕ ಪರಿಣಾಮಕಾರಿತ್ವವೆರಡನ್ನೂ ಹೊಂದಿರುವ ಒಂದು ‘ಜೀವನಸ್ಥಿತಿ’ಯಾಗಿ ಅವರು ಸಂನ್ಯಾಸವನ್ನು ರೂಪಿಸಿದರು!. ಅವರ ವಾಣಿಯಲ್ಲಿ ಜೀವಂತಿಕೆ ಇದೆ. ಕುಸಿದು ಬೀಳುತ್ತಿದ್ದ ಮಾನವನು ಎದ್ದು ನಿಂತು, ಮುನ್ನಡೆದು, ಹೊರನಡೆದು, ಒಳನಡಿಗೆಯ ಮೂಲಕ ದೈವದೆಡೆಗೆ ಸಾಗುವ ಜೀವನಕಲೆಯನ್ನಿತ್ತು ಅವರು ರಕ್ಷಿಸಿದರು. ವಿವೇಕಾನಂದರ ಜೀವನವು ಜಗತ್ತಿಗೆ ‘ನಾಗರಿಕತೆಗಳು ಅಥವಾ ಸಾಮಾಜಿಕ ವ್ಯವಸ್ಥೆಗಳು ಉಳಿಯುವುದು ಸಾರ್ವಕಾಲಿಕ ಜಾಗತಿಕ ಸತ್ಯದ ಆಧಾರದ ಮೇಲೆಯೇ ಹೊರತು ಜಗತ್ತಿಗೆ ಅನ್ವಯವಾಗಲು ಸಾಧ್ಯವಿಲ್ಲದ ಪ್ರಾದೇಶಿಕ ಬಣಗಳ ಶಾಸನಗಳಿಂದಲ್ಲ’ ಎಂಬುದನ್ನು ಸಾಕ್ಷಾತ್ತಾಗಿ ಸಮರ್ಥಿಸಿತು!

ಸ್ವಾಮಿ ವಿವೇಕಾನಂದರನ್ನು ಅನಂತ ಶಕ್ತಿಯ ಸ್ವರೂಪ, ಸುಂಟರಗಾಳಿಯ ಸಂನ್ಯಾಸಿ, ಹಿಂದೂ ನೆಪೊಲಿಯನ್, ಯೋಧ ಸಂನ್ಯಾಸಿ, ಮುಂತಾದ ಹೆಸರುಗಳಿಂದ ವಿಶ್ವವು ಗುರ್ತಿಸಿದೆ. ‘ನರೇಂದ್ರನಾಥನು ಜಗತ್ತಿಗೆ ಬೋಧನೆ ಮಾಡುತ್ತಾನೆ’ ಎಂದಿದ್ದರು ಗುರುದೇವ ಶ್ರೀರಾಮಕೃಷ್ಣರು. ‘ಇಂತಹ ಮೇಧಾವಿ ವಿದ್ಯಾರ್ಥಿಯನ್ನು ನಾನು ಭಾರತ ಹಾಗೂ ಜರ್ಮನ್ ವಿಶ್ವವಿದ್ಯಾಲಯದಲ್ಲೂ ಕಂಡಿರಲಿಲ್ಲ’ ಎಂದಿದ್ದರು ಪ್ರಾಧ್ಯಾಪಕ ವಿಲಿಯಂ ಹೇಸ್ಟಿ. ‘ಭಾರತದಿಂದ ಬಂದಿರುವ ಈ ಯುವ ಸಂನ್ಯಾಸಿಯ ಬೌದ್ಧಿಕತೆಯನ್ನು ಅಮೆರಿಕದ ಎಲ್ಲ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರೆಲ್ಲರ ಒಟ್ಟು ಬೌದ್ಧಿಕ ಸಾಮರ್ಥ್ಯವೂ ಸರಿಗಟ್ಟಲಾರದು! ಇಂತಹ ಸಂತನನ್ನು ಕಳೆದ ಕೆಲವು ಶತಮಾನಗಳಲ್ಲಿ ಅಮೆರಿಕ ಕಂಡಿರಲಿಲ್ಲ!’ ಎಂದಿದ್ದಾರೆ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಜಾನ್ ಹೆನ್ರಿ ರೈಟ್. ‘ಅಮೆರಿಕನ್ ನೆಲವನ್ನು ಕಂಡುಹಿಡಿದದ್ದು ಕೊಲಂಬಸ್ ಎಂಬುದರಲ್ಲಿ ಸಂದೇಹವೇ ಇಲ್ಲ; ಆದರೆ ಅಮೆರಿಕನ್ ಆತ್ಮವನ್ನು ಆವಿಷ್ಕರಿಸಿದ್ದು ಮಾತ್ರ ಸ್ವಾಮಿ ವಿವೇಕಾನಂದರೇ’ ಎಂದು ಉದ್ಗರಿಸಿದರು ಅಮೆರಿಕದ ಪ್ರಜ್ಞಾವಂತ ಚಿಂತಕರು.

‘ಸ್ವಾಮಿ ವಿವೇಕಾನಂದರು ಷಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ನೀಡಿದ ಅತ್ಯುತ್ಕೃಷ್ಟ ಸಂದೇಶಗಳು ಬಹುತೇಕ ಮೃತಪ್ರಾಯವೆನಿಸಿದ್ದ ಜಗತ್ತಿನ ರಾಷ್ಟ್ರಗಳಿಗೆ ಚೈತನ್ಯ ನೀಡಿತಲ್ಲದೆ ತಮ್ಮ ತಮ್ಮ ಅಸ್ತಿತ್ವ ಹಾಗೂ ಅವಶ್ಯಕತೆಗಳನ್ನು ಜಾಗತಿಕ ಮಟ್ಟದಲ್ಲಿ ಸಾಬೀತುಪಡಿಸುವ ಮಹಾಪ್ರಯಾಣಕ್ಕೆ ಮುನ್ನುಡಿ ಆಯಿತು. ‘ಇತಿಹಾಸದ ಬಲಿಪಶುಗಳು’ ಆಗಹೊರಟಿದ್ದ ರಾಷ್ಟ್ರಗಳು ‘ಇತಿಹಾಸದ ಸೃಷ್ಟಿಕರ್ತರು’ ಆಗಲು ಸ್ಪೂರ್ತಿ ಪಡೆದವು’ ಎಂದು ಅಮೆರಿಕ ಮೊದಲಾದ ಮುಂದುವರಿದ ರಾಷ್ಟ್ರಗಳ ಮಾನವತಾವಾದಿಗಳು ಅಭಿಪ್ರಾಯಪಟ್ಟರು. ಬಾವಿಯ ಕಪ್ಪೆಯು ಸಮುದ್ರದ ಕಪ್ಪೆಯಾಗಿ ಬೆಳವಣಿಗೆ ಸಾಧಿಸಬೇಕಾದ ನೀತಿಪಾಠವನ್ನು ವಿವೇಕಾನಂದರು ಹೃದಯಂಗಮವಾಗಿ ಜಗತ್ತಿಗೆ ಬೋಧಿಸುವಲ್ಲಿ ಯಶಸ್ವಿಯಾದರು.

ಅಮೆರಿಕ ಪತ್ರಿಕೆಯೊಂದರ ಸಂಪಾದಕೀಯ ಹೀಗೆ ಬರೆದಿತ್ತು: ‘ಸ್ವಾಮಿ ವಿವೇಕಾನಂದರನ್ನು ನೋಡುವ, ಅವರ ಭಾಷಣವನ್ನು ಕೇಳುವ ಅವಕಾಶವನ್ನು ಬುದ್ಧಿವಂತನಾದ ಯಾವನೂ ಕಳೆದುಕೊಳ್ಳಬಾರದು. ಪ್ರತಿಯೊಬ್ಬ ಬುದ್ಧಿಜೀವಿಯೂ ವಿವೇಕಾನಂದರ ವ್ಯಕ್ತಿತ್ವವನ್ನು ಅಧ್ಯಯನ ಮಾಡಬೇಕು’.

ಅಮೆರಿಕದ ಮಹಿಳೆಯೊಬ್ಬಳು ಹೀಗೆ ಉದ್ಗರಿಸುತ್ತಾಳೆ: ‘ಓಹ್, ವಿವೇಕಾನಂದರ ದಿವ್ಯ ಬೋಧನೆಗಳೆಂಥವು! ಅಲ್ಲಿ ಅರ್ಥಹೀನವಾದದ್ದು ಒಂದೂ ಇಲ್ಲ. ಇನ್ನು ನಾನು ಹಳೆಯ ‘ನಾನು’ ಆಗಿ ಉಳಿದಿಲ್ಲವೆಂದು ಅನ್ನಿಸುತ್ತಿದೆ, ಏಕೆಂದರೆ, ನಾನು ಪರಮಸತ್ಯದ ಇಣುಕುನೋಟವೊಂದನ್ನು ಪಡೆದುಕೊಂಡಿದ್ದೇನೆ’.

ಲಂಡನ್ನಿನ ಮಹಿಳೆಯೊಬ್ಬಳ ಅಭಿಪ್ರಾಯ ಉಲ್ಲೇಖಾರ್ಹ: ‘ಚರ್ಚುಗಳಲ್ಲಿ ನಡೆಯುವ ಎಷ್ಟೋ ಆರಾಧನೆಗಳಲ್ಲಿ ನಾನು ಜೀವನದುದ್ದಕ್ಕೂ ಭಾಗವಹಿಸಿದ್ದೇನೆ, ಉಪನ್ಯಾಸಗಳನ್ನು ಕೇಳಿದ್ದೇನೆ. ಆದರೆ ನನ್ನ ಬಹಳಷ್ಟು ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿದದ್ದು ಸತ್ಯ. ಕೆಲವೊಮ್ಮೆ ಧರ್ಮ ಎಂಬುದು ಸತ್ತ್ವಹೀನ, ಸಪ್ಪೆ ವಿಷಯ ಎಂದೇ ತೀರ್ವನಕ್ಕೆ ಬರುತ್ತಿದ್ದೆ. ಆದರೆ, ಸ್ವಾಮಿ ವಿವೇಕಾನಂದರ ಮಾತುಗಳನ್ನು ಕೇಳಿದಾಗಿನಿಂದ, ಧರ್ಮದೊಳಕ್ಕೆ ಹೊಸ ಬೆಳಕೊಂದು ಹರಿದು ಬಂದಂತೆ ತೋರುತ್ತಿದೆ. ಧರ್ಮವು ಜೀವಂತ, ಅದು ಸತ್ಯ! ಈಗ ಅದಕ್ಕೊಂದು ಹೊಸ ಆಹ್ಲಾದಕರ ಅರ್ಥವಿದೆ; ಮತ್ತು ಧರ್ಮದ ಸ್ವರೂಪವು ನನ್ನ ಪಾಲಿಗೆ ಸಂಪೂರ್ಣವಾಗಿ ಪರಿವರ್ತಿತವಾಗಿ ಕಾಣುತ್ತಿದೆ. ನಿಜ ಹೇಳಬೇಕೆಂದರೆ ಕ್ರೖೆಸ್ತಳಾದ ನನಗೆ ನನ್ನ ಧರ್ಮವು ಹಿಂದೂ ಧರ್ಮದ ಬೆಳಕಿನಲ್ಲಿ ಸುಸ್ಪಷ್ಟವಾಯಿತು!’

ಬರೋಡಾದ ರಾಜರಾದ ಗಾಯಕವಾಡರು ಸ್ವಾಮಿ ವಿವೇಕಾನಂದರಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ‘ದೇಶದ ಉದ್ಧಾರಕ್ಕೆ ಶಿಕ್ಷಣವೊಂದೇ ಪರಿಹಾರ. ಬಡವ-ಬಲ್ಲಿದ, ಮೇಲು-ಕೀಳೆನ್ನದೆ ದೀನದಲಿತರನ್ನು ಮೊದಲ್ಗೊಂಡು ಸರ್ವರಿಗೂ ಶಿಕ್ಷಣ ನೀಡು’ ಎಂದು ವಿವೇಕಾನಂದರಿತ್ತ ಆದೇಶಕ್ಕೆ ತಲೆಬಾಗಿದ ಗಾಯಕವಾಡ ಮಹಾರಾಜರು ನೂರಾರು ದಲಿತ ಮಕ್ಕಳ ಬದುಕಿಗೆ ಆಶಾಕಿರಣವಾದರು. ಗಾಯಕವಾಡರ ಪ್ರೋತ್ಸಾಹದಿಂದ ಶಿಕ್ಷಿತರಾದವರಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಪ್ರಮುಖರು. ಸ್ವತಂತ್ರ ಭಾರತದ ಉದಯ ಹಾಗೂ ಅಭ್ಯುದಯಕ್ಕೆ ಚಿಂತಿಸಿದ ಅವರು, ‘ಮನುಷ್ಯನ ಜೀವನದಲ್ಲಿ ಉನ್ನತ ವಿಚಾರಗಳ ಬಗ್ಗೆ ಹಸಿವನ್ನು ಇರಿಸಿಕೊಳ್ಳುವುದು ಅತ್ಯಗತ್ಯ. ಇನ್ನೊಬ್ಬರಿಗಾಗಿ ದುಡಿಯುವುದು ಶ್ರೇಷ್ಠ, ಇನ್ನೊಬ್ಬರ ದುಡಿಮೆಗೆ ಕೈಚಾಚುವುದು ನಿಕೃಷ್ಟ, ಅಳತೆ ಇಲ್ಲದಿದ್ದರೆ ಔಷಧವೂ ವಿಷವಾಗುತ್ತದೆ! ಪ್ರಯತ್ನದಲ್ಲಿನ ವೈಫಲ್ಯ ನಮಗೆ ನಿರಾಶೆ ತರಬಹುದೇನೋ. ಆದರೆ, ಪ್ರಯತ್ನವನ್ನೇ ಮಾಡದಿದ್ದರೆ ಅದು ನಾಶಕ್ಕೆ ಆಹ್ವಾನ’, ಮೊದಲಾದ ಚಿಂತನೆಗಳನ್ನು ಬದುಕಿನುದ್ದಕ್ಕೂ ಸಾರಿದರು. ಸ್ಮೃತಿಗಳ ಬಗ್ಗೆ ತಮ್ಮ ಅಭಿಮತವನ್ನು ಅಂಬೇಡ್ಕರ್ ನಿಷ್ಠುರವಾಗಿ ಪ್ರತಿಪಾದಿಸಿದ್ದಾದರೂ ಸಂಸ್ಕೃತ ಭಾಷೆ ‘ರಾಷ್ಟ್ರೀಯ ಭಾಷೆ’ ಆಗಬೇಕೆಂದ ಮೊಟ್ಟಮೊದಲ ಸಂಸದರು ಅವರಾಗಿದ್ದರು.

ಹುಟ್ಟಿನಿಂದ ಕಾಯಸ್ಥರಾಗಿದ್ದ ಸ್ವಾಮೀಜಿಯವರು ದೇಶದ ಉದ್ದಗಲಕ್ಕೂ ಪ್ರಚಲಿತವಾಗಿದ್ದ ಜಾತಿ ವ್ಯವಸ್ಥೆಯ ಅನಾಗರಿಕ ಸನ್ನಿವೇಶಗಳನ್ನು ಕಣ್ಣಾರೆ ಕಂಡಿದ್ದಷ್ಟೇ ಅಲ್ಲದೆ ಸ್ವತಃ ಅನುಭವಿಸಿದರು ಕೂಡ. ಕೆಲವೊಂದು ಕಡೆ ಅವರು ದೇವಸ್ಥಾನದ ಒಳಹೋಗಲಾಗಲಿಲ್ಲ, ಆದರೆ ಅವರೆಂದೂ ಧರ್ಮದಿಂದ ಹೊರಹೋಗಲು ಚಿಂತಿಸಲಿಲ್ಲ. ಧಾರ್ವಿುಕ ವಿಚಾರಗಳಲ್ಲಿನ ‘ಕಳೆ’ಯನ್ನೇ ‘ಬೆಳೆ’ ಎಂದು ಭ್ರಮಿಸಿದ್ದ ಸಮಾಜಕ್ಕೆ ಶುದ್ಧ ಹಾಗೂ ಪವಿತ್ರ ಧರ್ಮದ ಅರಿವು ಮೂಡಿಸಿದರು. ಅವರೆನ್ನುತ್ತಾರೆ: ‘ಕೆಲವೊಮ್ಮೆ ಜಗತ್ತಿಗೆ ಅನ್ನಿಸಬಹುದೇನೋ ಧರ್ಮ ಮತ್ತು ಆಧ್ಯಾತ್ಮಿಕ ವಾತಾವರಣವು ನಾಶದ ಅಂಚಿಗೆ ಮುಟ್ಟುತ್ತಿದೆ, ಅವುಗಳ ಅಂತ್ಯ ಸಮೀಪಿಸಿದೆ ಎಂದು. ಆದರೆ ನಾನು ಹೇಳುತ್ತೇನೆ, ಇದು ‘ಅಂತ್ಯ’ದ ಸೂಚಕವಲ್ಲ, ‘ಆರಂಭ’ದ ಸ್ಪಷ್ಟ ಚಿಹ್ನೆ! ವಿಸõತವೂ ಶುದ್ಧವೂ ಆದ ಧರ್ಮಮೌಲ್ಯಗಳು ಮಾನವ ಜೀವನದ ಪ್ರತಿಕ್ಷಣವನ್ನು ಆಕ್ರಮಿಸಿಕೊಂಡೇ ತೀರುತ್ತವೆ! ಅಲ್ಲದೆ ನಾವು ನಿಶ್ಚಯವಾಗಿ ತಿಳಿಯಬೇಕಾದದ್ದು ಏನೆಂದರೆ ‘ಧರ್ಮ‘ವು ಧೀರತೆಯನ್ನು ಅಪೇಕ್ಷಿಸುತ್ತದೆ, ಹೇಡಿಗಳಿಗಲ್ಲ ಧರ್ಮ! ‘ವಿಶ್ವವೆಲ್ಲವೂ ಸದ್ಗುಣಶೀಲ ದೇವರ ಕುರಿತಾಗಿಯೇ ನಿರಂತರವಾಗಿ ಬೋಧಿಸುತ್ತ ಬಂದಿದೆ. ನಾನು ಸದ್ಗುಣಶೀಲ ದೇವರು ಮತ್ತು ಪಾಪದ ದೇವರನ್ನು ಒಂದರಲ್ಲೇ ಬೋಧಿಸುತ್ತೇನೆ!’ ಎಂದಿದ್ದಾರೆ.

ಸಮಾಜದ ನಡುವೆ ವಿಕಸನಗೊಳ್ಳುವ ಪ್ರತಿಯೊಂದು ಜೀವಿಯೂ ಮೌಲ್ಯಗಳಲ್ಲಿ ಭರವಸೆ ತಳೆಯುವುದು ಮೌಲ್ಯವಂತರ ಜೀವನಶೈಲಿಯನ್ನು ಕಂಡು ಆಕರ್ಷಿತವಾದಾಗ. ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ‘ಎಲ್ಲಿ ಉದಾತ್ತ ಸತ್ಯಗಳು ಕಾರ್ಯೋಪಯೋಗಿ ಎನಿಸಿಕೊಳ್ಳುತ್ತವೆಯೋ ಅಂಥ ಸಮಾಜವು ಮಹಾನ್ ಸಮಾಜವಾಗಿರುತ್ತದೆ!…. ಒಂದು ವೇಳೆ ಸಮಾಜವೊಂದು ಉದಾತ್ತ ಸತ್ಯಗಳ ಅಳವಡಿಕೆಗೆ ತಕ್ಕನಂತಿಲ್ಲದಿದ್ದರೆ, ಅದಕ್ಕೆ ಅಂಥ ಅರ್ಹತೆ-ಸಾಮರ್ಥ್ಯವನ್ನು ತಂದುಕೊಡಿ ಮತ್ತು ಸಾಧ್ಯವಾದಷ್ಟು ಬೇಗ ಅದನ್ನು ಉತ್ತಮವಾಗಿಸಿ’. ಮಾನವನ ಅಭ್ಯುದಯದಿಂದ ಸುಂದರವಾದ, ಸ್ವರ್ಗಸದೃಶವಾದ ಜಗತ್ತನ್ನು ನಿರ್ವಿುಸಬಹುದು.

ರಾಮಕೃಷ್ಣ ಮಿಷನ್ ಸ್ಥಾಪನೆಯಾದ ಒಂದು ಶತಮಾನದ ಈ ಅವಧಿಯಲ್ಲಿ ರಾಷ್ಟ್ರದ ಉದ್ದಗಲಕ್ಕೂ ಒಂದೂವರೆಸಾವಿರ ಸರ್ಕಾರೇತರ ಸೇವಾ ಸಂಸ್ಥೆಗಳು ‘ಸೇವಾ ತತ್ತ್ವ’ದ ಘನತೆಗೆ ಚ್ಯುತಿಬಾರದಂತೆ ಕಾರ್ಯಶೀಲವಾಗಿ ಸಾಗಿವೆ.

ಬಾಲಗಂಗಾಧರ ತಿಲಕರು- ‘ಸ್ವಾಮಿ ವಿವೇಕಾನಂದರು ಬಲಿಷ್ಠವೂ, ಪ್ರೌಢವೂ ಹಾಗೂ ಅತ್ಯುತ್ಕೃಷ್ಟವೂ ಆದ ಚಿಂತನೆಗಳ ಮೂಲಕ ಹಿಂದೂಧರ್ಮವನ್ನು ಜಗತ್ತಿನ ಮೂಲೆ-ಮೂಲೆಗೆ ಪಸರಿಸಿದರು. ಹನ್ನೆರಡು ಶತಮಾನಗಳ ಹಿಂದೆ ದೇಶವು ಸಂಕಷ್ಟದಲ್ಲಿದ್ದಾಗ ಆದಿ ಶಂಕರಾಚಾರ್ಯರು ದೇಶ ಪರಿಕ್ರಮಗೈದು ಧರ್ಮವು ನಮ್ಮ ಉದ್ಧಾರವನ್ನು ದೊರಕಿಸಿಕೊಡುವ ಶುದ್ಧ ವೈಚಾರಿಕ ಸಂಪನ್ಮೂಲ, ಅದೇ ನಮ್ಮ ಜೀವಾಳ. ನಮ್ಮ ಉಳಿವಿಗೆ ಧರ್ಮ ಅನಿವಾರ್ಯ ಎಂಬುದನ್ನು ಸಾಬೀತುಪಡಿಸಿದ ರೀತಿಯಲ್ಲೇ ವಿವೇಕಾನಂದರು ಧರ್ಮ ಸಂಸ್ಥಾಪನೆಯ ಕಾರ್ಯ ಮಾಡಿದ್ದಾರೆ. ಭಾರತದ ಇತಿಹಾಸದಲ್ಲಿ ಸರ್ವರೀತಿಯಿಂದಲೂ ಸ್ವಾಮಿ ವಿವೇಕಾನಂದರನ್ನು ಶ್ರೀ ಆದಿಶಂಕರಾಚಾರ್ಯರೊಂದಿಗೆ ಹೋಲಿಕೆ ಮಾಡಬಹುದು’ ಎಂದಿದ್ದಾರೆ.

ಶ್ರೇಷ್ಠ ಮಾನವತಾವಾದಿ: ಜಗತ್ತು ಕಂಡ ಶ್ರೇಷ್ಠ ಮಾನವತಾವಾದಿಗಳಲ್ಲಿ ಸ್ವಾಮಿ ವಿವೇಕಾನಂದರು ಅಗ್ರಮಾನ್ಯರೆನಿಸಿದ್ದಾರೆ. ಅವರು ತಮ್ಮ ಅತ್ಯುತ್ತಮ ಚಿಂತನೆಗಳ ಮೂಲಕ ಮನುಷ್ಯಲೋಕದ ಆಲೋಚನಾಲಹರಿಯನ್ನೇ ಸಕಾರಾತ್ಮಕವಾಗಿ ಬದಲಿಸಿದರೆಂದರೆ ಉತ್ಪ್ರೇಕ್ಷೆಯಲ್ಲ. ವಿಶ್ವಮಾನವರಾದ ವಿವೇಕಾನಂದರು ಭಾರತದ ಸಮಗ್ರ ಇತಿಹಾಸವನ್ನು ಆಮೂಲಾಗ್ರವಾಗಿ ಅಧ್ಯಯನಗೈದು ಈ ಪರಂಪರೆ ಹಾದು ಬಂದ ವಿವಿಧ ಹಂತಗಳನ್ನು ನಿಷ್ಪಕ್ಷಪಾತವಾಗಿ ವಿಶ್ಲೇಷಿಸಿದ್ದಾರೆ. ಭಾರತದ ಬಗ್ಗೆ ನಮಗೆ ಅವರಿತ್ತ ಅಭಿಪ್ರಾಯಗಳಲ್ಲಿ ವಾಸ್ತವವಿದೆ, ನೈಜತೆಯಿದೆ. ಅವುಗಳಲ್ಲಿ ಪೂರ್ವಗ್ರಹದ ಸೋಂಕಿಲ್ಲ, ದ್ವಂದ್ವ ನಿಲುವುಗಳಿಗೆ ಅವಕಾಶವಿಲ್ಲ.

ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳನ್ನು ಅಧ್ಯಯನ ಮಾಡುವುದರಿಂದ ನಾವು ಸರ್ವರೀತಿಯ ದಾರಿದ್ರ್ಯಗಳಿಂದ ಮುಕ್ತರಾಗಲು ಸಾಧ್ಯ. ಇಂದಿನ ಸಮಾಜದಲ್ಲಿನ ಸಮಸ್ಯೆಗಳಿಗೆ ದುಷ್ಟಜನರ ಐಕಮತ್ಯ ಮತ್ತು ಕಾರ್ಯಪ್ರಕ್ರಿಯೆಗಳಿಗಿಂತ ಸಜ್ಜನರ ನಿಷ್ಕ್ರಿಯತೆಯೇ ಪ್ರಧಾನ ಕಾರಣ ಎಂದಿದ್ದಾರೆ ವಿವೇಕಾನಂದರು. ಶೀಲವಂತರು ಹಾಗೂ ವಿವೇಕಿಗಳು ಮಾತ್ರವೇ ರಾಷ್ಟ್ರವನ್ನು ಸದೃಢವಾಗಿ ನಿರ್ವಿುಸಬಲ್ಲರು.

ಬಡವ-ಶ್ರೀಮಂತರೆನ್ನದೆ, ವಿದ್ಯಾವಂತ-ಅವಿದ್ಯಾವಂತರೆಂಬ ತರತಮ ಭಾವನೆಗೆ ಎಡೆಮಾಡದೆ, ಪೂರ್ವ-ಪಶ್ಚಿಮ ದಿಕ್ಕುಗಳನ್ನು ವೈರುಧ್ಯದ ಅಂಗಗಳಾಗಿಸದೆ, ‘East is East; West is West; they will never meet’ಎಂಬ ಪಾಶ್ಚಾತ್ಯರಲ್ಲಿ ಬಲವಾಗಿ ಬೇರೂರಿದ್ದ ಸಂಕುಚಿತವೂ ದ್ವಂದ್ವವೂ ಆದ ನಿಲುವನ್ನು ತಮ್ಮ ಬುದ್ಧಿ-ಭಾವಗಳಿಂದ ನಿಶ್ಶೇಷಗೊಳಿಸಿದವರು ಸ್ವಾಮಿ ವಿವೇಕಾನಂದರು.

ಮೈಸೂರು ರಾಜರ ಮೇಲೆ ಪ್ರಭಾವ

ಮೈಸೂರಿನ ಮಹಾರಾಜರಾಗಿದ್ದ ಚಾಮರಾಜೇಂದ್ರ ಒಡೆಯರ್​ರು ಸ್ವಾಮಿ ವಿವೇಕಾನಂದರ ದಿವ್ಯ ಪ್ರಭಾವಕ್ಕೆ ಒಳಗಾಗಿದ್ದರು. ವಿವೇಕಾನಂದರ ಮೈಸೂರು ಭೇಟಿ ರಾಜಮನೆತನದ ಅಷ್ಟೇಕೆ ರಾಷ್ಟ್ರದ ಜೀವನದಲ್ಲಿ ಒಂದು ಅದ್ಭುತ ತಿರುವನ್ನೇ ನೀಡಿತು. ರಾಜ್ಯದಲ್ಲಿ ಶಿಕ್ಷಣ, ವಾಣಿಜ್ಯ, ಕೈಗಾರಿಕೆ, ವಿಜ್ಞಾನ, ಸಮಾಜಸೇವಾಕಾರ್ಯಗಳಲ್ಲಿ ರಾಜರ ಅನುಷ್ಠಾನದ ಶ್ರದ್ಧೆ ನೂರ್ಮಡಿಗೊಂಡಿತು. ಸ್ವಾಮೀಜಿಯವರು ಪ್ರತಿಪಾದಿಸಿದ್ದ ‘ಜೀವರಲ್ಲಿ ಶಿವನನ್ನು ಕಂಡು ಆರಾಧಿಸು’ ಎಂಬ ತತ್ತ್ವಕ್ಕೆ ತಲೆಬಾಗಿ ಕಾರ್ಯೋನ್ಮುಖನಾದ ರಾಜ ತನ್ನ ಸಾಮ್ರಾಜ್ಯದಲ್ಲಿ ದೀನದಲಿತ, ಅಶಕ್ತ ಹಾಗೂ ಮಹಿಳೆಯರಿಗಾಗಿ ವಸತಿ ಶಾಲೆಗಳನ್ನು ತೆರೆದದ್ದು ಸ್ವತಂತ್ರಪೂರ್ವ ಭಾರತದಲ್ಲಿ ಕ್ರಾಂತಿಕಾರಿ ವಿಚಾರವೇ ಸರಿ. ಈ ಮೂಲಕ ಮೈಸೂರಿನ ಅರಸರು ವಿಶ್ವವಿಖ್ಯಾತರಾದರು.

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)


ಹೀಗಿತ್ತು ಆ ಕ್ಷಣ…

ಸ್ವಾಮೀಜಿ ಭಾಷಣ ಮಾಡಲು ಎದ್ದು ನಿಂತರು. ಅವರ ವಿಶಾಲವಾದ ಕಂಗಳಲ್ಲಿ ಮಿಂಚಿನ ಹೊಳಪು ಕಂಡಿತು. ಕ್ಷಣಾರ್ಧದಲ್ಲಿ ಒಮ್ಮೆ ಸಮಸ್ತ ಜನಸ್ತೋಮವನ್ನು ವೀಕ್ಷಿಸಿದರು. ವರ್ಷಾಂತರಗಳಿಂದ ಅವರಲ್ಲಿ ಒತ್ತಿ ಹಿಡಿಯಲ್ಪಟ್ಟಿದ್ದ ಪ್ರಚಂಡ ಶಕ್ತಿಯ ಜ್ವಾಲಾಮುಖಿ ಸ್ಪೋಟಿಸಿತು. ನಾಲ್ಕು ಸಹಸ್ರಕ್ಕೂ ಮಿಗಿಲಾದ ಪ್ರೇಕ್ಷಕರು ಉಸಿರಾಡುವುದನ್ನು ಮರೆತು ಅವರನ್ನೇ ದಿಟ್ಟಿಸಿದರು. ಆ ಬೃಹತ್ ಸಭಾಂಗಣದಲ್ಲಿ ಒಂದು ಸೂಜಿ ಬಿದ್ದರೂ ಕೇಳುವಂಥ ನೀರವತೆ ನೆಲಸಿತು. ಸ್ವಾಮೀಜಿ ವಾಗ್ದೇವಿಯನ್ನು ಸ್ಮರಿಸಿ ತಮ್ಮ ಮೇಘನಾದ ಸದೃಶ ವಾಣಿಯಲ್ಲಿ ‘ಅಮೆರಿಕದ ಸೋದರ ಸೋದರಿಯರೆ!’ ಎಂದು ಸಭಿಕರನ್ನು ಸಂಬೋಧಿಸಿದರು. ಏನದ್ಭುತ! ‘ಅಮೆರಿಕದ ಸೋದರ ಸೋದರಿಯರೆ!’ ಹೀಗೆಂದ ಸ್ವಾಮೀಜಿ ಇನ್ನೊಂದು ಶಬ್ದವನ್ನೂ ಉಚ್ಚರಿಸಿಲ್ಲ, ಆಗಲೇ ಸಮಸ್ತ ಸಭಿಕರಲ್ಲಿ ನವಸ್ಪೂರ್ತಿ ಸಂಚಾರವಾದಂತಾಯಿತು! ಆವೇಶಭರಿತರಾಗಿ ಕರತಾಡನ ಮಾಡುತ್ತ ಸಹಸ್ರಾರು ಜನ ಎದ್ದುನಿಂತು ಬಿಟ್ಟರು! ಪ್ರತಿಯೊಬ್ಬರೂ ಉಚ್ಚಕಂಠದಿಂದ ಜಯಘೋಷ ಮಾಡುತ್ತ ಕರವಸ್ತ್ರಗಳನ್ನೂ ಹ್ಯಾಟುಗಳನ್ನೂ ಬೀಸುತ್ತಿದ್ದರು! ಇದನ್ನು ಕಂಡ ಸ್ವಾಮೀಜಿ ದಂಗಾಗಿ ನಿಂತರು. ಮಾತನ್ನು ಮುಂದುವರಿಸಲು ನೋಡಿದರು; ಆದರೆ ಅವರ ದನಿ ಅವರಿಗೇ ಕೇಳುವಂತಿರಲಿಲ್ಲ. ಜನಸ್ತೋಮದ ಉತ್ಸಾಹ ಆ ಪರಿಯಿತ್ತು. ಅಧ್ಯಕ್ಷರಾದ ಚಾರ್ಲ್ಸ್ ಬಾನಿ ಎದ್ದುನಿಂತು ಕೈಯನ್ನೆತ್ತಿ ಸಭಿಕರನ್ನು ಶಾಂತವಾಗಿಸಲು ಪ್ರಯತ್ನಿಸಿದರು. ಆದರೆ ಎರಡು ನಿಮಿಷ ಕರತಾಡನ, ಜಯಕಾರಗಳೆಲ್ಲ ಮುಂದುವರಿದವು.

ಸರ್ವ ಧರ್ಮ ಸಮ್ಮೇಳನ ಜಗತ್ತಿಗೆ ಏನನ್ನಾದರೂ ಪ್ರಕಟಪಡಿಸಿದ್ದರೆ ಅದು ಇದು -ಪಾವಿತ್ರ್ಯ ಪರಿಶುದ್ಧತೆ, ದಾನ, ದಯೆಗಳು ಯಾವುದೇ ಒಂದು ಧರ್ಮದ ಸ್ವಂತ ಆಸ್ತಿ ಅಲ್ಲ; ಪ್ರತಿಯೊಂದು ಧರ್ಮವೂ ಅತ್ಯಂತ ಉದಾರಚರಿತರಾದ ಸ್ತ್ರೀಪುರುಷರನ್ನು ರೂಪಿಸಿದೆ. ಇಷ್ಟಕ್ಕೆಲ್ಲ ಸಾಕ್ಷ್ಯಾಧಾರಗಳು ಇರುವಾಗ ಯಾರಾದರೂ ತನ್ನ ಧರ್ಮವೊಂದೇ ಉಳಿಯತಕ್ಕದ್ದು, ಇತರ ಧರ್ಮಗಳು ನಾಶ ಹೊಂದತಕ್ಕವು ಎಂಬ ಭ್ರಾಂತಿಯಲ್ಲಿದ್ದರೆ ಅವನ ವಿಷಯದಲ್ಲಿ ನನಗೆ ಅಪಾರ ಮರುಕವಿದೆ.

ಸಂಕಷ್ಟಗಳ ಸರಣಿ

ಸ್ವಾಮಿ ವಿವೇಕಾನಂದರು ಷಿಕಾಗೋ ತಲುಪಿದ್ದು ಸರ್ವಧರ್ಮ ಸಮ್ಮೇಳನ ನಡೆಯಲು ಎರಡು ತಿಂಗಳು ಇರುವಾಗ! ಅಷ್ಟೊಂದು ದಿನ ಷಿಕಾಗೊದಲ್ಲಿ ಏನು ಮಾಡುವುದು? ಆ ನಗರ ಅತ್ಯಂತ ದುಬಾರಿ ಬೇರೆ. ಜೇಬಿನಲ್ಲಿದ್ದ ಹಣವೆಲ್ಲ ಬರಿದಾಗುತ್ತ ಸಾಗಿತ್ತು. ಷಿಕಾಗೊದಿಂದ 1 ಸಾವಿರ ಮೈಲಿ ದೂರವಿರುವ, ಸ್ವಲ್ಪ ಖರ್ಚು ಕಡಿಮೆಯಿದ್ದ ಮೆಸಾಚುಸೆಟ್ಸ್ ಕಡೆಗೆ ರೈಲು ಹತ್ತಿದರು. ನಂತರ ನಡೆದದ್ದು ಅಚ್ಚರಿಯ ಸಂಗತಿಗಳು. ರೈಲಿನ ಅದೇ ಬೋಗಿಯಲ್ಲಿದ್ದ ಕ್ಯಾಥರಿನ್ ಅಬಟ್ ಸ್ಯಾನ್​ಬರ್ನ್ ಎಂಬ ಮಹಿಳೆ ತಾನಾಗಿಯೇ ಸ್ವಾಮೀಜಿ ಬಳಿ ಬಂದು ಮಾತನಾಡಿಸಿದಳು. ತನ್ನ ಪಟ್ಟಣಕ್ಕೆ ಅವರನ್ನು ಕರೆದೊಯ್ದು ತೋಟದ ಮನೆಯಲ್ಲಿ ಉಳಿಸಿದಳು. ‘ಭಾರತದಿಂದ ಬಂದಿರುವ ಕುತೂಹಲಕರ ವ್ಯಕ್ತಿ’ ಎಂದು ಎಲ್ಲರಿಗೂ ಪರಿಚಯಿಸಿ ಕಾರಾಗೃಹ, ಮಹಿಳಾ ಸಂಘ, ಮಕ್ಕಳ ಕೂಟ ಸೇರಿ ಹಲವೆಡೆ ಭಾಷಣ ಏರ್ಪಡಿಸಿದಳು. ಸ್ವಾಮೀಜಿ ಕೈಲಿದ್ದ ಹಣ ಖಾಲಿಯಾಗುತ್ತ ಸಾಗಿದ್ದರಿಂದ ಮದ್ರಾಸಿನ ಶಿಷ್ಯರಿಗೆ ಪತ್ರ ಬರೆದರು. ಆದರೆ ಅವರಿಂದ 800 ರೂ. ತಲುಪಿದ್ದು ಸಮ್ಮೇಳನ ಮುಗಿದ ನಂತರವೇ… !

ಇಂದು ವಾರ್ಷಿಕೋತ್ಸವ

ಸ್ವಾಮಿ ವಿವೇಕಾನಂದರ ಷಿಕಾಗೋ ಉಪನ್ಯಾಸಗಳ 125ನೇ ವಾರ್ಷಿಕೋತ್ಸವದ ಸಮಾರಂಭ ಸೆ.11ರಂದು ಸಂಜೆ 5.45ಕ್ಕೆ ಬೆಂಗಳೂರು ಬಸವನಗುಡಿಯ ರಾಮಕೃಷ್ಣ ಮಠದ ಶ್ರೀರಾಮಕೃಷ್ಣ ಸಭಾಂಗಣದಲ್ಲಿ ನಡೆಯಲಿದೆ. ಉದಕಮಂಡಲ ರಾಮಕೃಷ್ಣ ಮಠದ ಸ್ವಾಮಿ ರಾಘವೇಶಾನಂದಜೀ ಮಹಾರಾಜ್ ಅಧ್ಯಕ್ಷತೆ ವಹಿಸಲಿದ್ದು, ಲೇಖಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ನೀಡಲಿದ್ದಾರೆ. ಯುವಾ ಬ್ರಿಗೇಡ್ ಸಂಘಟನೆ ಆಯೋಜಿಸಿರುವ ‘ಮತ್ತೊಮ್ಮೆ ದಿಗ್ವಿಜಯ’ ರಥಯಾತ್ರೆ ಇಂದು ಬೆಂಗಳೂರಿಗೆ ಬರಲಿದ್ದು, ಮಧ್ಯಾಹ್ನ 3.30ರಿಂದ ಭವ್ಯ ಶೋಭಾಯಾತ್ರೆ ನಡೆಯಲಿದೆ.

ಸರ್ವಧರ್ಮ ಸಮ್ಮೇಳನದ ಉದ್ದೇಶ

ಸ್ವಾಮಿ ವಿವೇಕಾನಂದರ ಮಾತಿನಲ್ಲಿ ಹೇಳುವುದಾದರೆ, ‘ಕ್ರೖೆಸ್ತಧರ್ಮದ ಮೇಲ್ಮೆಯನ್ನು ಜಗತ್ತಿಗೆ ಸಾರುವುದೇ ಸರ್ವಧರ್ಮ ಸಮ್ಮೇಳನದ ಉದ್ದೇಶ’. ಆ ಸಮ್ಮೇಳನಕ್ಕೆ ಪೂರ್ವದಲ್ಲಿ ನಡೆದ ಮೂರು ವರ್ಷಗಳ ಸಿದ್ಧತೆಯ ವಿವರಗಳನ್ನು ಪರಿಶೀಲಿಸಿದರೆ ಇದು ಸ್ಪಷ್ಟವಾಗುತ್ತದೆ. ಸಮ್ಮೇಳನದ ಉದ್ದೇಶ ಏನೇ ಆಗಿರಲಿ, ಪರಿಣಾಮ ಮಾತ್ರ ಅನಿರೀಕ್ಷಿತವಾಗಿತ್ತು. ಸಮ್ಮೇಳನದ ವಿಜ್ಞಾನ ವಿಭಾಗದ ಅಧ್ಯಕ್ಷರಾದ ಮೆರ್ವಿನ್ ಮೇರಿ ಸ್ನೆಲ್, ‘ಕ್ರೖೆಸ್ತ ಜಗತ್ತಿಗೆ ಮುಖ್ಯವಾಗಿ ಅಮೆರಿಕನ್ನರಿಗೆ ಇದು ಕಲಿಸಿದ ಮಹತ್ವದ ಪಾಠವೆಂದರೆ ಕ್ರೖೆಸ್ತ ಧರ್ಮಕ್ಕಿಂತ ಹೆಚ್ಚು ಪೂಜ್ಯವಾದ ಅನೇಕ ಧರ್ಮಗಳು ಜಗತ್ತಿನಲ್ಲಿವೆ ಎಂಬುದು’ ಎಂದು ಉಲ್ಲೇಖಿಸಿದರು. ಇದಕ್ಕೆ ಕಾರಣವಾಗಿದ್ದು ಸ್ವಾಮಿ ವಿವೇಕಾನಂದರ ಉಪನ್ಯಾಸಗಳು. ಇದನ್ನು ಸೋದರಿ ನಿವೇದಿತಾ ಹೀಗೆ ದಾಖಲಿಸಿದ್ದಾರೆ-‘ಸ್ವಾಮಿ ವಿವೇಕಾನಂದರು ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾನುಭವವನ್ನು ನಿರೂಪಿಸುವುದಕ್ಕೆ ಹೊರಡಲಿಲ್ಲ. ಬದಲಾಗಿ ಪ್ರಾಚೀನ ಭರತಖಂಡ ರೂಪಿಸಿದ ಧಾರ್ವಿುಕ ಪ್ರಜ್ಞೆ, ದೇಶದ ಇಡೀ ಜನತೆಯ ಸಂದೇಶ ಅವರ ಮೂಲಕ ಅಲ್ಲಿ ಪ್ರಕಟವಾಯಿತು. ಸ್ವಾಮೀಜಿಯವರ ಉಪನ್ಯಾಸ ಮುಗಿದಾಗ ಹಿಂದೂ ಧರ್ಮ ಪುನರ್​ಸೃಷ್ಟಿಗೊಂಡಿತ್ತು’.

Leave a Reply

Your email address will not be published. Required fields are marked *

Back To Top