More

    ವಿಶ್ವಕ್ಕೆ ಬೆಳಕು ಚೆಲ್ಲಿದ ವಿವೇಕಾನಂದರು: ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ

    ತುಮಕೂರು: ವಾಕ್‌ಚಾತುರ್ಯದಿಂದ ಯುವಜನರನ್ನು ಸೆಳೆಯುತ್ತಿದ್ದ ವಿವೇಕಾನಂದರು ವಿಶ್ವಕ್ಕೆ ಬೆಳಕು ಚೆಲ್ಲಿದ ಮಹಾನ್ ವ್ಯಕ್ತಿ ಎಂದು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಬಣ್ಣಿಸಿದರು.

    ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಜಿಲ್ಲಾಡಳಿತದಿಂದ ಭಾನುವಾರ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಅಂಗವಾಗಿ ಆಯೋಜಿಸಿದ್ದ ‘ರಾಷ್ಟ್ರೀಯ ಯುವ ದಿನಾಚರಣೆ’ಯಲ್ಲಿ ಆಶೀರ್ವಚನ ನೀಡಿದರು.

    ಶಿಕಾಗೋ ಸಮ್ಮೇಳನದಲ್ಲಿ ಎಲ್ಲ ಧರ್ಮಗಳ ಸಾರ ಒಂದೇ ಎಂದಿದ್ದಾರೆ, ಅಲ್ಲದೇ ಧರ್ಮ ಶ್ರೇಷ್ಠತೆ ಬಗ್ಗೆ ವಿವೇಕಾನಂದರು ತಿಳಿಸಿಕೊಟ್ಟಿದ್ದಾರೆ. ಅವರ ಚಿಂತನೆ, ವಿಚಾರಧಾರೆ ಯುವಕರು ತಿಳಿದುಕೊಳ್ಳಬೇಕು. ನಮ್ಮನ್ನು ನಾವು ಮೊದಲು ನಂಬಬೇಕು. ನಾವು ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು, ದೇಶ ಕಟ್ಟುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು.

    ವಿದ್ಯಾರ್ಥಿಗಳಿಗಾಗಿ ಸರ್ಕಾರ ಉಚಿತ ಲ್ಯಾಪ್‌ಟಾಪ್ ನೀಡುತ್ತಿದೆ. ಇದನ್ನು ವಿದ್ಯಾಭ್ಯಾಸದ ಮಾಹಿತಿಗಾಗಿ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಮಾತನಾಡಿ, ಯುವಕರು ನಿರ್ದಿಷ್ಟ ಗುರಿ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಜೀವನ ರೂಪಿಸಿಕೊಳ್ಳುವುದರೊಂದಿಗೆ ದೇಶಕಟ್ಟುವ ಶಕ್ತಿಗಳಾಗಬೇಕು. ಸಮಯದ ಮೌಲ್ಯ ತಿಳಿದವರು ಜೀವನದ ಬೆಲೆ ತಿಳಿದುಕೊಳ್ಳಲು ಸಾಧ್ಯ ಎಂದರು. ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಕಳೆಯಬಾರದು. ಪ್ರತಿನಿತ್ಯ ನಾವು ಮಾಡುವ ಕೆಲಸವನ್ನು ಬರೆದಿಟ್ಟುಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು ಎಂದರು.

    ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಲಾಯಿತು. ತುಮಕೂರು ವಿವಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ನಿರ್ದೇಶಕ ಡಾ.ಎ.ಕೊಟ್ರೇಶ್ ವಿಶೇಷ ಉಪನ್ಯಾಸ ನೀಡಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ರುದ್ರಪ್ಪ, ಪ್ರಾಚಾರ್ಯ ಪ್ರೊ.ಕೆ.ಎಸ್.ಜಗದೀಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts