ವಿವೇಕರ ಪತ್ರನಿಧಿ ಬದಲಾಯಿಸಿತು ಭಾರತದ ವಿಧಿ

ವಿವಿಧ ವಿಚಾರಗಳ ಬಗೆಗಿನ ಸ್ವಾಮಿ ವಿವೇಕಾನಂದರ ಅದ್ಭುತ ದೃಷ್ಟಿಕೋನ ಮೈನವಿರೇಳಿಸುವಂಥದ್ದು. ‘ನನಗೆ ಬಂದ ತೊಂದರೆ ಬೇರ್ಯಾವ ಹಿಂದೂವಿಗಾದರೂ ಬಂದಿದ್ದರೆ ಅವನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ!… ಈ ವಿವೇಕಾನಂದ ಏನು ಮಾಡಿದನೆಂಬುದು ಮತ್ತೊಬ್ಬ ವಿವೇಕಾನಂದನಿಗೆ ಮಾತ್ರ ತಿಳಿದೀತು…’ ಎಂದು ಅವರೇ ಒಂದೆಡೆ ಹೇಳಿಕೊಂಡಿದ್ದಾರೆ.

ಮಾನವ ಇತಿಹಾಸದಲ್ಲಿ ಶ್ರೀರಾಮಕೃಷ್ಣ-ವಿವೇಕಾನಂದರು ಅದ್ಭುತ ಜೀವನ ಹಾಗೂ ಶ್ರೇಷ್ಠತಮ ಚಿಂತನೆಗಳಿಂದ ಪ್ರಾತಃಸ್ಮರಣೀಯರಾಗಿದ್ದಾರೆ. ಅವರ ಉಕ್ತಿಗಳು ಸಾರ್ವಕಾಲಿಕವಾಗಿ ಶಕ್ತಿಯ, ಭರವಸೆಯ ಹಾಗೂ ಅಭ್ಯುದಯಕ್ಕೆ ಪೂರಕವಾದ ಮಾತುಗಳಷ್ಟೇ ಅಲ್ಲ, ಮಂತ್ರಗಳಾಗಿವೆ! ಧಾರ್ವಿುಕ ಹಾಗೂ ಆಧ್ಯಾತ್ಮಿಕ ಚಿಂತನೆಗಳಲ್ಲಿ ಅಗತ್ಯವೆನಿಸಿದ ಶುದ್ಧೀಕರಣ ಪ್ರಕ್ರಿಯೆಗೆ ಅವರು ಒತ್ತುನೀಡಿದರು. ತಮ್ಮ ಸಂದೇಶಗಳಿಗೆ ವೇದಾಂತದ ಅಡಿಪಾಯವನ್ನಿತ್ತು, ಈ ಭದ್ರಬುನಾದಿಯ ಮೇಲೆ ಜಗದ ದಶದಿಕ್ಕುಗಳಿಂದ ಉದಿಸಿ ಧಾವಿಸಿದ ನೂರಾರು ಉನ್ನತ ವಿಚಾರಗಳನ್ನು ಯಾವುದೇ ಪೂರ್ವಗ್ರಹವಿಲ್ಲದೆ, ಸಂಶಯಕ್ಕೆ ಆಸ್ಪದವೀಯದೆ ಪ್ರಚುರಪಡಿಸಿದರು.

ಹೆತ್ತತಾಯಿಯ ಮಡಿಲಲ್ಲಿ ಕಲಿತ ನಮ್ಮ ಭವ್ಯ ಪರಂಪರೆ ಕುರಿತಾದ ತಿಳಿವಳಿಕೆ, ಆಧುನಿಕ ಶಿಕ್ಷಣ ಪರಿಚಯಿಸಿದ ಸಾಹಿತ್ಯ ಸಂಸ್ಕೃತಿಗಳ ವಿಚಾರಗಳು, ಮೂವತ್ತು ಕೋಟಿ ಭಾರತೀಯರ ಎರಡು ಸಹಸ್ರ ವರ್ಷಗಳ ಆಧ್ಯಾತ್ಮಿಕ ಜೀವನವೇ ಸಮಗ್ರಗೊಂಡು ಮೂರ್ತರೂಪ ತಾಳಿದಂತಿದ್ದ ಭಗವಾನ್ ಶ್ರೀರಾಮಕೃಷ್ಣರ ದಿವ್ಯ ಮಾರ್ಗದರ್ಶನ ಮತ್ತು ಗುರುದೇವನ ನಿರ್ಯಾಣದ ನಂತರ ಪರಿವ್ರಾಜಕರಾಗಿ ದೇಶದುದ್ದಗಲಕ್ಕೂ ಸಂಚರಿಸಿದ ಆ ಏಳೆಂಟು ವರ್ಷಗಳ ಅವಧಿಯಲ್ಲಿ ಮಾತೃಭೂಮಿಯ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಆಧ್ಯಾತ್ಮಿಕ ವಿಚಾರಗಳನ್ನು ನರೇಂದ್ರ ತದನಂತರದ ಸ್ವಾಮಿ ವಿವೇಕಾನಂದರ ಲೋಕಾನುಭವದ ಬುತ್ತಿ ಅವರನ್ನು ಆಮೂಲಾಗ್ರವಾಗಿ ಅಧ್ಯಯನಗೈದಾಗ ನಮ್ಮ ಅರಿವಿಗೆ ಬರುತ್ತದೆ. ‘ವಿವೇಕಾನಂದರು ಹತಾಶ ಹೃದಯದ ದಾರಿಗೆ ಆಶಾಕಿರಣವಾದರೆ ಆಷಾಢಭೂತಿಗಳಿಗೆ ‘ಸಿಂಹಸ್ವಪ್ನ’ವೇ ಆದರು. ಶತಮಾನಗಳಿಂದ ಕೆಲಸಕ್ಕೆ ಬಾರದ ಕಲ್ಪನೆಗಳ ಹೂಳುಮರಳಿನಲ್ಲಿ ಹೂತುಹೋಗಿದ್ದ ಭಾರತಮಾತೆ, ತನ್ನ ಸಂನ್ಯಾಸಿಪುತ್ರನಿಂದಲೇ ಮೇಲೆತ್ತಲ್ಪಟ್ಟಿರುವಳು’ ಎಂದು ರೋಮಾರೋಲಾ ಉಲ್ಲೇಖಿಸುತ್ತಾರೆ.

ಒಟ್ಟಾರೆ ಸ್ವಾಮಿ ವಿವೇಕಾನಂದರು ಪರಿಶುದ್ಧಜೀವನ, ಪವಿತ್ರಜೀವನದ ಬಲದಿಂದ ಆಡಿದ ಮಾತುಗಳು ಮಂತ್ರಗಳಾದವು. ಅವರೊಬ್ಬ ಶ್ರೇಷ್ಠ ಚಿಂತಕ, ವಾಗ್ಮಿ, ಬರಹಗಾರ ಹಾಗೂ ವಿಶ್ವವ್ಯಾಪಕ ಚಿಂತನಾಸಾಗರದಲ್ಲಿ ಯಶಸ್ವಿ ಅಂಬಿಗನಾಗಿ ಶ್ರಮಿಸಿದ್ದನ್ನು ಜಗತ್ತು ಕೃತಜ್ಞತಾಪೂರ್ವಕವಾಗಿ ಗೌರವಿಸುತ್ತ ಸಾಗಿದೆ.

ಸ್ವಾಮಿ ವಿವೇಕಾನಂದರು ಬರೆದಿರುವ ಪತ್ರಗಳಲ್ಲಿ ಇಲ್ಲಿಯವರೆಗೆ 768 ಲಭ್ಯವಿವೆ. ಸ್ವಾಮೀಜಿಯವರು ಜನಸಾಮಾನ್ಯರು, ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಸಂನ್ಯಾಸಿಗಳು, ಚಕ್ರವರ್ತಿಗಳು, ದಿವಾನರು, ವಿಜ್ಞಾನಿಗಳು, ಕೈಗಾರಿಕೋದ್ಯಮಿಗಳು, ಧರ್ಮಪ್ರತಿನಿಧಿಗಳು, ಅಧಿಕಾರಿಗಳು- ಮೊದಲಾದವರಿಗೆ ಪತ್ರಮುಖೇನ ಮಾರ್ಗದರ್ಶನವಿತ್ತು ಮುನ್ನಡೆಸಿದ್ದಾರೆ. ಅವರ ಪತ್ರಗಳು ಅಗಾಧ ಪ್ರಭಾವವನ್ನು ಬೀರಿವೆ. ಅವರ ಕೆಲವು ಪತ್ರಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಅವಲೋಕಿಸುವ ಪ್ರಯತ್ನ ಮಾಡಲಾಗಿದೆ.

ಧಾರ್ವಿುಕ ಜಾಗೃತಿ: ಸ್ವಾಮೀಜಿ 1893ರ ಆಗಸ್ಟ್ 20ರಂದು ಶಿಷ್ಯ ಅಳಸಿಂಗನಿಗೆ ಪತ್ರ ಬರೆಯುತ್ತ, ‘ಹಿಂದೂಧರ್ಮದಷ್ಟು ಮಾನವನ ಉತ್ಕೃಷ್ಟತೆಯನ್ನು, ಮಹಿಮೆಯನ್ನು ಉಚ್ಚ ರೀತಿಯಲ್ಲಿ ಉದ್ಘೋಷಿಸುವಂತೆ ಜಗತ್ತಿನ ಮತ್ತಾವ ಧರ್ಮವೂ ಹೇಳುವುದಿಲ್ಲ; ಹಿಂದೂಧರ್ಮದಲ್ಲಿ ದರಿದ್ರರನ್ನು, ದೀನರನ್ನು ತುಳಿಯುವಂತೆ ಮತ್ತಾವ ಧರ್ಮದಲ್ಲಿಯೂ ತುಳಿಯುವುದಿಲ್ಲ. ಇದು ಧರ್ಮದ ತಪ್ಪಲ್ಲವೆಂದು ಭಗವಂತನು ನನಗೆ ಮನವರಿಕೆ ಮಾಡಿಕೊಟ್ಟಿದ್ದಾನೆ. ಆದರೆ ನಾನಾ ಹಿಂಸೆಗಳನ್ನು ಕೊಡುವುದಕ್ಕಾಗಿ ವ್ಯಾವಹಾರಿಕ, ಪಾರಮಾರ್ಥಿಕ ಎಂಬಿತ್ಯಾದಿ ಚಮತ್ಕಾರದ ತಂತ್ರಗಳನ್ನು, ಸಿದ್ಧಾಂತಗಳನ್ನು ಕಂಡುಹಿಡಿದು ಪ್ರಚಾರಕ್ಕೆ ತಂದ ಕಪಟಿಗಳೂ, ಆಷಾಢಭೂತಿಗಳೂ ಹಿಂದೂಧರ್ಮದಲ್ಲಿ ಇರುವರಲ್ಲ, ಅವರೇ ಅಪರಾಧಿಗಳು….’ ಎನ್ನುತ್ತಾರೆ.

1893ರ ನವೆಂಬರ್ 2ರಂದು ಅಳಸಿಂಗನಿಗೆ ಬರೆದ ಮತ್ತೊಂದು ಪತ್ರದಲ್ಲಿ ಸ್ವಾಮೀಜಿ, ‘ಹಿಂದೂವಾದವನು ತನ್ನ ಧರ್ಮವನ್ನು ಎಂದಿಗೂ ಬಿಡಕೂಡದು. ಆದರೆ ಧರ್ಮವನ್ನು ಸರಿಯಾದ ಕಟ್ಟುನಿಟ್ಟಿನಲ್ಲಿಟ್ಟು, ಸಮಾಜದ ಅಭಿವೃದ್ಧಿಗೆ ಅವಕಾಶವನ್ನು ಕೊಡಬೇಕು. ಭಾರತವರ್ಷದಲ್ಲಿ ಎಲ್ಲ ಮತಾಂಧರ ಅತ್ಯಾಚಾರಕ್ಕೂ ದೇಶದ ಹೀನಸ್ಥಿತಿಗೂ ಧರ್ಮವೇ ಕಾರಣವೆಂದು ಎಲ್ಲ ಸಮಾಜಸುಧಾರಕರು ತಪ್ಪು ತಿಳಿದು, ಎಂದಿಗೂ ಚ್ಯುತವಾಗದ ಧರ್ಮದ ತಳಹದಿಯನ್ನೇ ಕೀಳಲು ಪ್ರಯತ್ನಪಟ್ಟರು. ಇದರ ಫಲಿತಾಂಶವೇನಾಯಿತು? ಉದ್ದೇಶದ ಅಪಜಯ! ಬುದ್ಧನಿಂದ ಹಿಡಿದು ರಾಜಾರಾಮ ಮೋಹನರಾಯ್ವರೆಗೂ, ಜಾತಿಭೇದ ಧರ್ಮಕ್ಕೆ ಸಂಬಂಧಪಟ್ಟಿದ್ದೆಂದು ತಪ್ಪು ತಿಳಿದು, ಧರ್ಮ ಮತ್ತು ಜಾತಿಗಳೆರಡನ್ನೂ ನಾಶಮಾಡಲು ಪ್ರಯತ್ನಪಟ್ಟರಾದರೂ ಪ್ರಯತ್ನದಲ್ಲಿ ವಿಫಲರಾದರು… ಜಾತಿ ಎಂಬುದು ಘನೀಭೂತವಾದ ಒಂದು ಸಾಮಾಜಿಕ ಪದ್ಧತಿ. ಈಗ ಅದು ತನ್ನ ಕೆಲಸವು ಕೈಗೂಡಿದ ಮೇಲೆ ತನ್ನ ದುರ್ಗಂಧದಿಂದ ಭಾರತದ ವಾತಾವರಣವನ್ನೇ ತುಂಬಿದೆ. ಜನರು ಕಳೆದುಕೊಂಡ ಸಾಮಾಜಿಕ ವ್ಯಕ್ತಿತ್ವವನ್ನು ಅವರಿಗೆ ಮರಳಿಕೊಡುವುದರಿಂದ ಈ ಜಾತಿಯ ಕಟ್ಟು ತಾನೇತಾನಾಗಿ ಮಾಯವಾಗುತ್ತದೆ….’ ಎಂದು ಬರೆಯುತ್ತಾರೆ.

1894ರ ಮಾರ್ಚ್ 3ರಂದು ಷಿಕಾಗೋ ನಗರದಿಂದ ಪ್ರಿಯಶಿಷ್ಯ ಕಿಡ್ಡಿ ಅವರಿಗೆ ಬರೆದ ಪತ್ರದಲ್ಲಿ ಸ್ವಾಮೀಜಿ, ‘ಸಮಾಜ ಸುಧಾರಣೆಗೂ, ಧರ್ಮಕ್ಕೂ ಏನೂ ಸಂಬಂಧವಿಲ್ಲವೆಂದು ಹೇಳುವವರ ಅಭಿಪ್ರಾಯವನ್ನು ನಾವು ಒಪ್ಪುತ್ತೇವೆ. ಆದರೆ ಅವರು ಕೂಡ ಸಮಾಜದ ನೀತಿ-ನಿಯಮಗಳನ್ನು ರಚಿಸುವುದಕ್ಕೆ ಧರ್ಮಕ್ಕೆ ಯಾವ ಅಧಿಕಾರವೂ ಇಲ್ಲವೆಂಬುದನ್ನು ನಮ್ಮೊಂದಿಗೆ ಒಪ್ಪಬೇಕು. ಜೀವನದಲ್ಲಿ ಮೇಲುಕೀಳೆಂಬ ಭಾವನೆಯನ್ನು ಅದು ತರಕೂಡದು. ಧರ್ಮದ ಗುರಿಯೇ, ಈ ರಾಕ್ಷಸೀಕೃತ್ಯಗಳನ್ನು, ಜಾತಿ ಮತಗಳೆಂಬ ಮಾಯಾಜಾಲವನ್ನು ಹರಿದೊಗೆಯುವುದು…’ ಎಂದಿದ್ದಾರೆ.

ಚಕ್ರವರ್ತಿಗಳಿಗೆ ಹಿತೋಕ್ತಿ: ಮೈಸೂರು ಸಂಸ್ಥಾನದ ಅರಸ ಚಾಮರಾಜೇಂದ್ರ ಒಡೆಯರ್ ಅವರಿಗೆ 1894ರ ಜೂನ್ 23ರಂದು ಷಿಕಾಗೋ ನಗರದಿಂದ ಸ್ವಾಮೀಜಿ ಪತ್ರ ಬರೆಯುತ್ತ, ‘ಎಲೈ ಮಹಾನುಭಾವನಾದ ದೊರೆಯೆ, ಈ ಜನ್ಮವೆಂಬುದು ಕೆಲವು ದಿನಗಳ ಬಾಳುವೆ ಆಗಿದೆ. ಜಗತ್ತಿನ ಸುಖಭೋಗಗಳೆಲ್ಲವೂ ಕ್ಷಣಿಕವಾದವು. ಯಾರು ಪರರ ಹಿತಕ್ಕಾಗಿ ಬದುಕುತ್ತಾರೆಯೋ ಅವರದ್ದೇ ಜೀವನ, ಉಳಿದವರು ಬದುಕಿದ್ದರೂ ಸತ್ತಂತೆ! ತಮ್ಮಂಥ ಉದಾರ ಮನಸ್ಸಿನ ಭರತಖಂಡದ ರಾಜರೊಬ್ಬರು, ಅಧೋಗತಿಗಿಳಿದ ಭರತಖಂಡವನ್ನು ಪುನಃ ಮೇಲೆತ್ತುವುದಕ್ಕೆ ಎಷ್ಟೋ ಸಹಾಯ ಮಾಡಬಹುದು. ಮುಂದಿನ ಜನಾಂಗ ದೀರ್ಘಕಾಲ ತಮ್ಮನ್ನು ಸ್ಮರಿಸಿ ಕೊಂಡಾಡುವಂತಹ ಕೀರ್ತಿಯನ್ನು ಗಳಿಸಬಹುದು. ಅಜ್ಞಾನಾಂಧಕಾರದಲ್ಲಿ ಮುಳುಗಿ ನರಳುತ್ತಿರುವ ಕೋಟ್ಯಾನುಕೋಟಿ ಭಾರತೀಯರಿಗಾಗಿ ಭಗವಂತನ ಹೃದಯ ಮರುಗುವಂತಾಗಲು ನಾನು ದೇವನಲ್ಲಿ ಪ್ರಾರ್ಥಿಸುವೆ….’ ಎನ್ನುತ್ತಾರೆ.

ಸ್ವಮತಭ್ರಾಂತಿ ಹಾನಿಕಾರಕ: ಸೋದರ ಸಂನ್ಯಾಸಿ ಸ್ವಾಮಿ ರಾಮಕೃಷ್ಣಾನಂದರಿಗೆ 1894ರಲ್ಲಿ ಷಿಕಾಗೋ ನಗರದಿಂದ ಸ್ವಾಮೀಜಿ ಪತ್ರ ಬರೆಯುತ್ತ, ‘ನನ್ನ ಸೋದರನೆ! ನಾನು ಹೇಳುತ್ತೇನೆ ಕೇಳು. ಬಹುತ್ವವಿರಲಿ, ಆದರೆ ಅದರಲ್ಲಿ ಏಕತ್ವವಿರಲಿ. ಸಾರ್ವತ್ರಿಕತ್ವ ಭಾವಕ್ಕೆ ಧಕ್ಕೆ ಆಗದಂತೆ ನೋಡಿಕೋ… ಅನ್ಯಧರ್ಮವನ್ನು ದ್ವೇಷಿಸುವುದಿಲ್ಲವೆಂದು ಮಾತ್ರ ನಾವು ಹೇಳುವುದಿಲ್ಲ. ಸಕಲ ಧರ್ಮಗಳೂ ಸತ್ಯವೆಂಬುದನ್ನು ಪರಿಪೂರ್ಣವಾಗಿ ಗ್ರಹಿಸಿ ಅದನ್ನು ಆಚರಣೆಯಲ್ಲಿ ತೋರಿಸುತ್ತೇವೆ. ಜೋಕೆ! ಇತರರ ಅತ್ಯಲ್ಪ ಹಕ್ಕಿನ ಮೇಲೆ ಕೈ ಹಾಕಬೇಡಿ. ಅನೇಕ ದೊಡ್ಡ ಹಡಗುಗಳು ಆ ಸುಳಿಯಲ್ಲಿ ಮುಳುಗಿಹೋಗಿವೆ. ಸ್ವಮತಭ್ರಾಂತಿ ಇಲ್ಲದ ಪೂರ್ಣಭಕ್ತಿಯನ್ನು ಮಾತ್ರ ತೋರುತ್ತೇವೆ….’ ಎನ್ನುತ್ತಾರೆ.

1894ರ ಮಾರ್ಚ್ 29ರಂದು ರೆವರೆಂಡ್ ಆರ್.ಎ. ಹ್ಯೂಮ್ ಅವರಿಗೆ ಡೆಟ್ರಾಯಿಟ್​ನಿಂದ ಸ್ವಾಮೀಜಿ ಬರೆಯುತ್ತಾರೆ- ‘ಪ್ರಿಯ ಸೋದರ ಹ್ಯೂಮ್ವರೇ, ನಾನು ಯಾವ ಧರ್ಮದ ವಿಷಯವಾಗಿಯೂ ಟೀಕೆ ಮಾಡುವವನಲ್ಲ. ನಾನು ನಿಮಗೆ ಸ್ಪಷ್ಟವಾಗಿ ಹೇಳಬಲ್ಲೆ, ಇಡೀ ಭರತಖಂಡವನ್ನು ಪರಿವರ್ತಿಸಲು ಕ್ರೈಸ್ತಮತಕ್ಕೆ ಎಂದಿಗೂ ಸಾಧ್ಯವಿಲ್ಲ. ಕ್ರೈಸ್ತಧರ್ಮ ಕೆಳವರ್ಗದಲ್ಲಿ ಇರುವವರ ಸ್ಥಿತಿಯನ್ನು ಉತ್ತಮಗೊಳಿಸಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ದಕ್ಷಿಣ ಭಾರತದ ಬಹುಪಾಲು ಕ್ರಿಶ್ಚಿಯನ್ನರು ಕ್ಯಾಥೊಲಿಕರಾಗಿರುವುದು ಮಾತ್ರವಲ್ಲದೆ, ಅವರು ತಮ್ಮ ಹಳೆಯ ಜಾತಿಗೇ ಸೇರಿರುತ್ತಾರೆ. ಹಿಂದೂ ಸಮಾಜ ತನ್ನ ಪ್ರತ್ಯೇಕತೆಯ ಮನೋಭಾವವನ್ನು ತ್ಯಜಿಸಿದರೆ, ಹಿಂದೂಧರ್ಮದಲ್ಲಿ ಎಷ್ಟೇ ಲೋಪದೋಷಗಳಿದ್ದರೂ, ಕ್ರೈಸ್ತರಾದವರಲ್ಲಿ ಶೇ. 90ರಷ್ಟು ಜನ ಪುನಃ ಹಿಂದಿರುಗಿ ಬರುವರು ಎನ್ನುವುದು ನನ್ನ ಅಭಿಪ್ರಾಯ… ಭಾರತದಲ್ಲಿರುವ ನೀವು ಪ್ರಸ್ತುತ ಅಮೆರಿಕದಲ್ಲಿರುವ ನನಗೆ ಬರೆದಿರುವ ನಿಮ್ಮ ಪತ್ರದಲ್ಲಿ ನನ್ನನ್ನು ‘ಸ್ವದೇಶ ಬಾಂಧವ ಸ್ವಾಮಿ ವಿವೇಕಾನಂದರೇ’ ಎಂದು ಸಂಬೋಧಿಸಿ ಬರೆದಿದ್ದೀರಿ. ನಿಮಗೆ ವಂದನೆಗಳು. ಆದರೆ, ಭರತಖಂಡದಲ್ಲಿ ಕೂಡ ನಿಮಗೆ ನನ್ನನ್ನು ಹಾಗೆ ಸಂಬೋಧಿಸಲು ಧೈರ್ಯವಿದೆಯೇ?…’. ಸ್ವಾಮೀಜಿಯವರ ಈ ಎಲ್ಲ ಮಾತುಗಳಲ್ಲಿನ ಸತ್ಯತೆ ನಮಗೆ ಅರಿವಾಗದಿರದು.

ರಾಷ್ಟ್ರೋತ್ಥಾನ ಮಾರ್ಗ: ಭಾರತದಲ್ಲಿನ ದಿವಾನರಾದ ಹರಿದಾಸ್ ವಿಹಾರಿದಾಸ್ ದೇಸಾಯಿಯವರಿಗೆ 1894 ಜನವರಿ 29ರಂದು ಅಮೆರಿಕದಿಂದ ಪತ್ರ ಬರೆದ ಸ್ವಾಮೀಜಿ, ‘ಪ್ರತಿಯೊಬ್ಬ ವ್ಯಕ್ತಿಯನ್ನು ಮತ್ತು ಪ್ರತಿಯೊಂದು ರಾಷ್ಟ್ರವನ್ನು ಏಳ್ಗೆಗೆ ತರುವುದಕ್ಕೆ ಮೂರು ವಿಷಯಗಳು ಅತ್ಯಾವಶ್ಯಕ. 1) ಒಳ್ಳೆಯತನದ ಶಕ್ತಿಯಲ್ಲಿ ಅಚಲವಾದ ವಿಶ್ವಾಸ, 2) ಅಸೂಯೆ ಅನುಮಾನಗಳು ಇಲ್ಲದೆ ಇರುವುದು, 3) ಯಾರು ಒಳ್ಳೆಯವರಾಗುವುದಕ್ಕೆ ಮತ್ತು ಒಳ್ಳೆಯದನ್ನು ಮಾಡುವುದಕ್ಕೆ ಪ್ರಯತ್ನಪಡುವರೋ ಅವರಿಗೆಲ್ಲ ಸಹಾಯಮಾಡುವುದು…’ ಎನ್ನುತ್ತಾರೆ.

1893ರ ಆಗಸ್ಟ್​ನಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಾನ್ ಹೆನ್ರಿ ರೈಟ್ ಅವರೊಡನೆ ಮಾತನಾಡುತ್ತ ಸ್ವಾಮಿ ವಿವೇಕಾನಂದರು ಹೇಳಿದ ಅಂಶಗಳು ಅದ್ಭುತ- ‘ಶತಶತಮಾನಗಳಿಂದ ಭಾರತವು ಆಕ್ರಮಣಕ್ಕೆ ಒಳಗಾಗಿದೆ; ಕೊಟ್ಟಕೊನೆಯದಾಗಿ ನಡೆದದ್ದು ಆಂಗ್ಲರ ದುರಾಕ್ರಮಣ. ನೀವು ಭಾರತದಾದ್ಯಂತ ನೋಡಿ- ಹಿಂದೂಗಳು ನಾಡಿಗಾಗಿ ಏನು ಬಿಟ್ಟುಹೋಗಿದ್ದಾರೆ? ಎಲ್ಲೆಲ್ಲಿಯೂ ಅಚ್ಚರಿಯ ದೇಗುಲಗಳು. ಮುಸಲ್ಮಾನರು ಏನು ಬಿಟ್ಟು ಹೋಗಿದ್ದಾರೆ? ಸುಂದರವಾದ ಅರಮನೆಗಳು. ಇಂಗ್ಲಿಷರು ಏನನ್ನು ಬಿಟ್ಟು ಹೋಗಿದ್ದಾರೆ? ರಾಶಿರಾಶಿ ಮದ್ಯದ ಬಾಟಲಿಗಳು! ಅಷ್ಟೇ ಹೊರತು ಇನ್ನೇನಿಲ್ಲ. ದೇವರು ಸೇಡು ತೀರಿಸಿಕೊಳ್ಳುತ್ತಾನೆಂದು ಮನುಷ್ಯನಿಗೆ ನಂಬುವುದಕ್ಕೆ ಆಗದಿದ್ದರೆ, ಇತಿಹಾಸದ ಸೇಡನ್ನು ಖಂಡಿತವಾಗಿಯೂ ಇಲ್ಲವೆನ್ನುವಂತಿಲ್ಲ! ಬ್ರಿಟಿಷರು ನಮ್ಮ ಕೊನೆಯ ಹನಿ ರಕ್ತವನ್ನೂ ಹೀರಿಬಿಟ್ಟಿದ್ದಾರೆ….’

ವಿವಿಧ ವಿಚಾರಗಳ ಬಗೆಗಿನ ಸ್ವಾಮಿ ವಿವೇಕಾನಂದರ ಅದ್ಭುತವಾದ ದೃಷ್ಟಿಕೋನ ಮೈನವಿರೇಳಿಸುವಂಥದ್ದು. ‘ನನಗೆ ಬಂದ ತೊಂದರೆ ಬೇರ್ಯಾವ ಹಿಂದೂವಿಗಾದರೂ ಬಂದಿದ್ದರೆ ಅವನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ!… ಈ ವಿವೇಕಾನಂದ ಏನು ಮಾಡಿದನೆಂಬುದು ಮತ್ತೊಬ್ಬ ವಿವೇಕಾನಂದನಿಗೆ ಮಾತ್ರ ತಿಳಿದೀತು…’ ಎಂದು ಅವರೇ ಒಂದೆಡೆ ಹೇಳಿಕೊಂಡಿದ್ದಾರೆ.

ಸ್ವಾಮಿ ವಿವೇಕಾನಂದರ ಮಾತುಗಳು ಮಂತ್ರಗಳಂತೆ ಪ್ರಭಾವ ಬೀರಿವೆ. ಅವರ ಮಾರ್ಗದರ್ಶನದಲ್ಲಿ ಸ್ವಾತಂತ್ರಾ್ಯನಂತರ ಭಾರತ ಉದ್ಧಾರದ ಹೆದ್ದಾರಿಯಲ್ಲಿ ಸಾಗುತ್ತ ನಡೆದಿದೆ. ಆದರೆ ಅವರ ದೇಶ ಅವರನ್ನು ನಿರ್ಲಕ್ಷಿಸಿದೆಯೋ ಎಂಬ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಸ್ವಾತಂತ್ರಾ್ಯನಂತರ ಭಾರತ ಸ್ವಾಮಿ ವಿವೇಕಾನಂದರನ್ನು ನಿರ್ಲಕ್ಷಿಸಿತು ಎಂಬುದು ಹಲವರ ಅಭಿಪ್ರಾಯ. ‘ವಿವೇಕಾನಂದರನ್ನು ನಿರ್ಲಕ್ಷಿಸುವುದು ಅವನತಿಯನ್ನು ಸ್ವಾಗತಿಸಿದಂತೆ!’ ಎಂಬುದು ಪ್ರಾಜ್ಞರ ಎಚ್ಚರಿಕೆ.

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

One Reply to “ವಿವೇಕರ ಪತ್ರನಿಧಿ ಬದಲಾಯಿಸಿತು ಭಾರತದ ವಿಧಿ”

Leave a Reply

Your email address will not be published. Required fields are marked *