Friday, 16th November 2018  

Vijayavani

Breaking News

ಶ್ರೀರಾಮಕೃಷ್ಣರ ಸಂದೇಶ ವಿಶೇಷ

Friday, 01.06.2018, 3:03 AM       No Comments

| ಸ್ವಾಮಿ ವೀರೇಶಾನಂದ ಸರಸ್ವತೀ

ರಾಮಕೃಷ್ಣ ಪರಮಹಂಸರು ಜಟಿಲವಾದ ವಿಷಯಗಳನ್ನು ಸರಳವಾದ ನಿರೂಪಣೆಯೊಂದಿಗೆ ತಿಳಿಗೊಳಿಸಿದ್ದಾರೆ. ಮಾನವ ಬದುಕಿನಲ್ಲಿ ದಿನವೂ ಕಾಡುವ ಹಲವು ಸಮಸ್ಯೆಗಳಿಗೆ, ತೊಂದರೆಗಳಿಗೆ ತಮ್ಮ ಚಿಂತನೆಗಳ ಮೂಲಕ ಸೂಕ್ತ ಮತ್ತು ಶಾಶ್ವತ ಪರಿಹಾರ ಒದಗಿಸಿದ್ದಾರೆ. ಅವರ ಸಂದೇಶಗಳು ಹೃದಯಬಾಗಿಲನ್ನು ತಟ್ಟಿ, ಆತ್ಮಶಕ್ತಿ ಹೆಚ್ಚಿಸುತ್ತವೆ. 

ಆಧ್ಯಾತ್ಮಿಕ ಪ್ರಪಂಚದಲ್ಲಿ ಮಾನವನ ಉದ್ಧಾರದ ಕುರಿತು ಚಿಂತಿಸಿ ತಿಳಿವಳಿಕೆ ನೀಡಿದ ಮಹಾತ್ಮರು ಅಸಂಖ್ಯ. ಪ್ರತಿಯೊಂದು ಧರ್ಮವೂ ಸಂತರನ್ನು ಗೌರವಿಸಿ ಆದರಿಸಿದೆ. ಧರ್ಮವನ್ನು ‘ಸದಾಚಾರ ಸಂಪನ್ನ’ ಎಂದು ಸಾರಿ ತೋರಿದ ಮಹಾತ್ಮರೆಲ್ಲರೂ ಪ್ರಾತಃಸ್ಮರಣೀಯರಾಗಿದ್ದಾರೆ. ಭಾರತದ ಅವತಾರಪುರುಷರು, ಸಂತ ಮಹಾತ್ಮರೊಂದಿಗೆ ಜಗತ್ತಿನ ಎಲ್ಲ ಮತಗಳಲ್ಲಿನ ಆಧ್ಯಾತ್ಮಿಕ ಸಾಧಕರ ಜೀವನ ಅಧ್ಯಯನವು ನಮ್ಮ ಬದುಕಿಗೆ ದಿಕ್ಸೂಚಿ ಆಗುತ್ತದೆ. ಜೀವನವನ್ನು ಗೌರವಿಸುವ, ಮನುಷ್ಯಜನ್ಮವನ್ನು ಮಹಾನ್​ಕೃಪೆಯಾಗಿ ಪರಿಭಾವಿಸುವ, ಲೌಕಿಕ ಪಾರಮಾರ್ಥಿಕ ಬದುಕುಗಳು ‘ವೈರುಧ್ಯ’ ಎಂದೆನಿಸದೆ ಅವುಗಳ ಸಾಂತ ಹಾಗೂ ಅನಂತತೆಗಳತ್ತ ಬೆಳಕು ಚೆಲ್ಲುವ, ಇವೇ ಮೊದಲಾದ ವಿಚಾರಗಳ ಬಗ್ಗೆ ತಿಳಿಯಲು, ತಿಳಿದು ಅನುಸರಿಸಿ ಆನಂದಿಸಲು ನಮ್ಮ ಮನಸ್ಸನ್ನು ಸನ್ನದ್ಧಗೊಳಿಸಿಕೊಳ್ಳುವುದು ಅತ್ಯವಶ್ಯಕ.

ಯುರೋಪಿನ ಚಕ್ರವರ್ತಿ ನೆಪೋಲಿಯನ್ ಹೇಳುತ್ತಾನೆ, ‘ಜಗತ್ತಿನ ಇತಿಹಾಸದಲ್ಲಿ ನಾನು, ಅಲೆಗ್ಸಾಂಡರ್, ಚಾರ್ಲ್​ವುನ್ ಮತ್ತು ಜ್ಯೂಲಿಯಸ್ ಸೀಸರ್ ಖಡ್ಗದ ಸಹಾಯದಿಂದ ಸಾಮ್ರಾಜ್ಯಗಳನ್ನು ನಿರ್ವಿುಸಿದ್ದು ನಿಜ. ಆದರೆ ನಮ್ಮೆಲ್ಲರ ಬದುಕಿನ ಅಂತಿಮಘಟ್ಟ ದುಃಖದಾಯಕ ಹಾಗೂ ವೇದನಾಪೂರ್ಣವಾಗಿದೆ. ಅಸಹಾಯಕತೆ ಹಾಗೂ ಅಶಾಂತಿ ನಮ್ಮಗಳ ಬದುಕಿನಲ್ಲಿ ಬಹುದೊಡ್ಡ ಸ್ವರೂಪದಲ್ಲಿ ಭುಗಿಲೆದ್ದಿದೆ! ಹೀಗೇಕೆ ಎಂಬುದನ್ನು ಆಳವಾಗಿ ಚಿಂತಿಸುವಾಗ ನನಗನ್ನಿಸುತ್ತಿದೆ, ಜಗತ್ತಿನಲ್ಲಿ ಆತ್ಮಶಕ್ತಿ ಖಡ್ಗಶಕ್ತಿ ಮೇಲೆ ಪ್ರಭುತ್ವ ಸಾಧಿಸಿದೆ! ಆಧ್ಯಾತ್ಮಿಕ ಸಾಧಕರು ಜಗತ್ತಿನಿಂದ ನಿರ್ಗಮಿಸಿದ ನಂತರವೂ ಅಸಂಖ್ಯಾತ ಜನಸಾಮಾನ್ಯರ ಬದುಕಿಗೆ, ಹೃದಯಕ್ಕೆ ಹತ್ತಿರವಾಗಿದ್ದಾರೆ!’ ಜಗತ್ತಿನಲ್ಲಿ ಆಧ್ಯಾತ್ಮಿಕ ಸಾಧಕರು ಪ್ರತಿಪಾದಿಸಿದ ಜೀವನವಿಧಾನಕ್ಕೆ ಉತ್ತಮ ಅಡಿಪಾಯವಿದೆ, ಮುನ್ನಡೆಯಬೇಕಾದ ದಾರಿಯ ಬಗ್ಗೆ ಸ್ಪಷ್ಟತೆ ಇದೆ ಮತ್ತು ಶ್ರದ್ಧೆ-ನಿಷ್ಠೆಗಳು ಬತ್ತದಂತೆ ಸುದೀರ್ಘ ಪಯಣಕ್ಕೆ ಉತ್ಸಾಹ ನೀಡಲು ಅವಶ್ಯಕವಾದ ಧ್ಯೇಯವಿದೆ.

ಶ್ರೀರಾಮಕೃಷ್ಣರು ಜಗತ್ತು ಕಂಡ ದೇವಮಾನವರಲ್ಲಿ ಅಗ್ರಗಣ್ಯರು. ಅವರ ವ್ಯಕ್ತಿತ್ವದ ವೈಶಿಷ್ಟ್ಯಗಳಂತೂ ನಮ್ಮಲ್ಲಿ ಆಶ್ಚರ್ಯ ಮೂಡಿಸುತ್ತವೆ. ಜಗತ್ತಿನ ಪ್ರಾಚೀನ ಮೌಲ್ಯಗಳನ್ನು ತೆಗಳದೆ ಆಧುನಿಕ ಪ್ರಪಂಚವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಲು ಅವರಿತ್ತ ಸಂದೇಶಗಳಿಗೆ ಸಾರ್ವಕಾಲಿಕ ಮಹತ್ವ ಇದೆ. ಅವರ ಅವತರಣದ ವೈಶಿಷ್ಟ್ಯವನ್ನು ರಾಷ್ಟ್ರಕವಿ ಕುವೆಂಪು ವಿವರಿಸಿದ್ದು ಹೀಗೆ: ‘ಭಗವಾನ್ ರಾಮಕೃಷ್ಣರು ಅಂದು ಸಾರಿ ಹೇಳಿದ ಭವಿಷ್ಯತ್ತು ದಿನದಿನವೂ ಹೆಚ್ಚುಹೆಚ್ಚು ಸತ್ಯವಾಗಿ ವರ್ಷಗಳು ಉರುಳಿದಂತೆ ನಿರ್ವಿವಾದ, ನಿಸ್ಸಂದೇಹ, ನಿರ್ಣಾಯಕವಾದ ಸಿದ್ಧಾಂತವಾಗಿರುವುದನ್ನು ನಾವು ಕಾಣುತ್ತಲಿದ್ದೇವೆ. ಅವರ ದಿವ್ಯಪ್ರಭಾವ ಸಮಗ್ರ ಪೃಥ್ವಿ ಮಂಡಲವನ್ನೇ ವ್ಯಾಪಿಸುತ್ತಿದೆ. ಅವರ ಜೀವನ ಉಪದೇಶಗಳಿಂದ ಕೋಟ್ಯಂತರ ಚೇತನಗಳು ಅರಳಿ ಬೆಳಕು ಕಾಣುತ್ತಿವೆ; ಅಸಂಖ್ಯ ಹೃದಯಗಹ್ವರಗಳಲ್ಲಿ ಶಾಂತಿಯ ಸತ್ತ್ವದ ಆನಂದದ ಭಗವಜ್ಯೋತಿ ಹೊಮ್ಮುತ್ತಿದೆ. ಆ ದಿವ್ಯ ಸಂದೇಶಾಮೃತದಿಂದ ಆಕರ್ಷಿತರಾಗಿ ಆರ್ತರೂ ಮುಮುಕ್ಷುಗಳೂ ಜ್ಞಾನಾರ್ಥಿಗಳೂ ಭೂಮಂಡಲದ ಮೂಲೆಮೂಲೆಗಳಿಂದ ಯಾತ್ರೆ ಬರುತ್ತಿದ್ದಾರೆ. ಕಂಡರಿಯದ, ಕೇಳರಿಯದ ಬಹುದೂರದ ದೇಶದೇಶಗಳಲ್ಲಿ ಪರಮಹಂಸರ ಜೀವನಸಂದೇಶಗಳು ಪ್ರಕಟವಾಗುತ್ತಿವೆ…’

ಅತ್ಯುತ್ತಮ ಉಪಮೆಗಳ ಮೂಲಕ ತಮ್ಮ ಸಂದೇಶಗಳನ್ನು ಮನಮುಟ್ಟುವಂತೆ ಮಾಡುವಲ್ಲಿ ರಾಮಕೃಷ್ಣರು ಸಿದ್ಧಹಸ್ತರು. ಅವರ ಸರಳ ಭಾಷೆ, ಸಮರ್ಥಿಸುವ ಪರಿ ಜನಸಾಮಾನ್ಯರ ಹೃದಯ ಮುಟ್ಟುತ್ತದೆ, ಆತ್ಮಾವಲೋಕನದ ಬಾಗಿಲು ತಟ್ಟುತ್ತದೆ. ಬಹಳಷ್ಟು ಸಂದರ್ಭಗಳಲ್ಲಿ ಜಟಿಲವೆನಿಸಬಹುದಾದ ವಿಚಾರಗಳನ್ನು ವಿಶಿಷ್ಟ ಶೈಲಿಯ ಪ್ರಸ್ತಾವನೆಯಿಂದ ನಮ್ಮ ತಲೆಬಾಗುವಂತೆ ಮಾಡುತ್ತಾರೆ ರಾಮಕೃಷ್ಣರು. ಅವರು ಎಂದೂ ಯಾವುದೇ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸೂಚಿಸಿದವರಲ್ಲ. ಅವರ ವಿಷಯ ಪ್ರತಿಪಾದನೆಯ ವಿಧಾನವನ್ನು ಕೆಲವು ಉದಾಹರಣೆಗಳೊಂದಿಗೆ ಗಮನಿಸಬಹುದು.

# ಮನುಷ್ಯಜನ್ಮದ ಮಹತ್ವ: ಭಗವಂತ ಒಳ್ಳೆಯವರು, ಕೆಟ್ಟವರು, ಭಕ್ತರು, ಅಭಕ್ತರು, ವಿಶ್ವಾಸಿ, ಅವಿಶ್ವಾಸಿ- ಎಲ್ಲರನ್ನೂ ಸೃಷ್ಟಿಸಿದ್ದಾನೆ. ಆತನ ಸೃಷ್ಟಿಯಲ್ಲಿ ಈ ವೈಚಿತ್ರ್ಯವೆಲ್ಲ ಇವೆ. ಆತನ ಶಕ್ತಿ ಕೆಲವರಲ್ಲಿ ಅಧಿಕವಾಗಿ, ಇನ್ನೂ ಕೆಲವರಲ್ಲಿ ಕಡಿಮೆಯಾಗಿ ವ್ಯಕ್ತವಾಗಿದೆ. ಸೂರ್ಯನ ಬೆಳಕು ಮಣ್ಣಿಗಿಂತ ನೀರಿನಲ್ಲಿ ಹೆಚ್ಚಾಗಿ ಪ್ರತಿಬಿಂಬಿತವಾಗುತ್ತದೆ; ಕನ್ನಡಿಯಲ್ಲಿ ಇನ್ನೂ ಅಧಿಕವಾಗಿ. ಭಗವಂತ ಎಲ್ಲರಲ್ಲಿಯೂ ಇದ್ದಾನೆ. ಎಲ್ಲರಲ್ಲಿರುವುದೂ ಆ ಒಂದೇ ಚಿನ್ನ. ಆದರೆ ಕೆಲವೆಡೆಗಳಲ್ಲಿ ಹೆಚ್ಚಾಗಿ ಪ್ರಕಾಶಿಸುತ್ತಾನೆ. ಸಂನ್ಯಾಸಿ ಅಪ್ಪಟ ಚಿನ್ನವಾದರೆ ಸಂಸಾರಿ ಮಣ್ಣು ಮುಚ್ಚಿದ ಚಿನ್ನದ ಹಾಗೆ! ಮನುಷ್ಯನ ಆಂತರ್ಯದಲ್ಲಿ ಭಗವಂತನ ಪ್ರಕಾಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ… ಮನುಷ್ಯ ಸಾಲಿಗ್ರಾಮಕ್ಕಿಂತಲೂ ದೊಡ್ಡವನು ಎಂಬ ಹೇಳಿಕೆ ಇದೆ. ನರನು ನಾರಾಯಣನೇ ಆಗಿದ್ದಾನೆ. ಪ್ರತಿಮೆಯಲ್ಲಿ ಭಗವಂತ ಆವಿರ್ಭಾವವಾಗುವಾಗ ಇನ್ನು ಆತ ಮನುಷ್ಯನಲ್ಲಿ ಆವಿರ್ಭಾವವಾಗಲೊಲ್ಲನೇ?

# ಸ್ವಧರ್ಮನಿಷ್ಠೆ: ವಿದ್ವೇಷಭಾವ ಒಳ್ಳೆಯದಲ್ಲ. ನಾವು ಸ್ವಧರ್ಮದಲ್ಲಿ ನಿಷ್ಠಾವಂತರಾಗಿರಬಹುದು. ಹಾಗೆಂದ ಮಾತ್ರಕ್ಕೆ ಅನ್ಯಧರ್ಮವನ್ನು ದ್ವೇಷಿಸಕೂಡದು. ಅನ್ಯಧರ್ಮಗಳ ಬಗ್ಗೆ ಆದರ ತೋರಬೇಕು. ಪರರ ಧರ್ಮಗಳಲ್ಲಿ ಕುಂದುಕೊರತೆ ಇದೆ ಎಂದು ಹೇಳಬಹುದಾದರೆ ಪ್ರತಿಯೊಂದು ಧರ್ಮದಲ್ಲೂ ಅದು ಇದೆ. ತಮ್ಮ ಗಡಿಯಾರ ಮಾತ್ರವೇ ಸರಿಯಾಗಿ ನಡೆಯುತ್ತದೆ ಎಂದೇ ಎಲ್ಲರೂ ಭಾವಿಸುತ್ತಾರೆ!

ಭಗವಂತ ಒಬ್ಬನೇ ವಿನಾ ಇಬ್ಬರಲ್ಲ. ಆತನನ್ನು ಬೇರೆ ಬೇರೆ ಜನ ಭಿನ್ನ ಭಿನ್ನ ಹೆಸರುಗಳಿಂದ ಕರೆಯುತ್ತಾರೆ. ಮತಗಳು ಕೇವಲ ಪಥಗಳು ಮಾತ್ರ. ಪ್ರತಿಯೊಂದು ಧರ್ಮವೂ ಭಗವಂತನ ಸಾಕ್ಷಾತ್ಕಾರಕ್ಕೆ ಒಂದೊಂದು ಮಾರ್ಗ. ಇದು ನದಿಗಳು ವಿವಿಧ ದಿಕ್ಕುಗಳಿಂದ ಹರಿದು ಬಂದು ಎಲ್ಲವೂ ಸಾಗರದಲ್ಲಿ ಐಕ್ಯವಾಗುವ ಹಾಗೆ. ಯಾವ ಧರ್ಮವೇ ಆಗಲಿ, ಯಾವ ಮತವೇ ಆಗಲಿ, ಎಲ್ಲವೂ ಆ ಒಬ್ಬ ಭಗವಂತನನ್ನೇ ಕರೆಯುವಂತೆ ತಮ್ಮ ಅನುಯಾಯಿಗಳನ್ನು ಪ್ರೇರೇಪಿಸುತ್ತವೆ. ಆದ್ದರಿಂದ ಯಾವುದೇ ಮತವನ್ನಾಗಲಿ, ಧರ್ಮವನ್ನಾಗಲಿ, ಅಶ್ರದ್ಧೆಯಿಂದ ನೋಡಬಾರದು, ದ್ವೇಷಿಸಕೂಡದು. ಎಲ್ಲ ಮತಗಳನ್ನು ಗೌರವಿಸು. ಆದರೆ, ನಿಷ್ಠಾಭಕ್ತಿ ಎಂಬುದಿದೆ. ಎಲ್ಲ ಮತಗಳನ್ನು ಗೌರವಿಸಬೇಕಾದ್ದೇನೋ ಸರಿ, ಆದರೆ ಅವುಗಳಲ್ಲಿ ಒಂದನ್ನು ಮಾತ್ರ ತನ್ನ ಇಡೀ ಹೃದಯದಿಂದ ಭಾವಿಸುವುದೇ ನಿಷ್ಠೆ. ಧರ್ಮದ ಹೆಸರಿನಲ್ಲಿ ಹೊಡೆದಾಟ, ಬಡಿದಾಟ, ಕಚ್ಚಾಟ ಒಳ್ಳೆಯದಲ್ಲ, ಎಲ್ಲರೂ ಭಗವಂತನ ಕಡೆಗೇ ಪಯಣಿಸುತ್ತಿದ್ದಾರೆ.

# ಹೆತ್ತತಾಯಿಯ ಬಗ್ಗೆ ಕರ್ತವ್ಯವೇನು?: ತಂದೆ-ತಾಯಿ ಅತ್ಯಂತ ಪೂಜ್ಯರು. ತಾಯಿ ವ್ಯಭಿಚಾರಿಯಾಗಿದ್ದರೂ ಆಕೆಯನ್ನು ತ್ಯಜಿಸಕೂಡದು. ತಂದೆ-ತಾಯಿಯನ್ನು ಕಸಕಡ್ಡಿಯಂತೆ ಕಾಣಬಾರದು. ಅವರು ಸುಪ್ರೀತರಾಗದ ಹೊರತು ಸಾಧನಾಕರ್ಮಗಳಾವುವೂ ಫಲ ನೀಡವು. ಮನುಷ್ಯನಿಗೆ ಅನೇಕ ಋಣಗಳಿವೆ. ಅವುಗಳಲ್ಲಿ ಮಾತೃಋಣ ಪ್ರಮುಖವಾದದ್ದು. ಭಗವತಿ ಎಲ್ಲ ಭೂತಗಳಲ್ಲಿಯೂ ಮಾತೃರೂಪದಲ್ಲಿ ಇದ್ದಾಳೆ, ಆಕೆಯೇ ನಿನ್ನ ಹೆತ್ತತಾಯಿಯೂ ಆಗಿದ್ದಾಳೆ. ಭಗವಂತ ವಿವಿಧರೂಪಗಳನ್ನು ಧರಿಸಬಲ್ಲ. ಅವನು ಹೆತ್ತತಾಯಿಯ ರೂಪದಲ್ಲೂ ಇದ್ದಾನೆ. ಆದ್ದರಿಂದ ಹೆತ್ತತಾಯಿಯ ಮೇಲೂ ಧ್ಯಾನಮಾಡಬಹುದು, ಮಾಡಬೇಕಾದ್ದೇ. ಆಕೆ ಗುರು; ಬ್ರಹ್ಮಮಯಿ.

# ಜನರೊಂದಿಗೆ ವ್ಯವಹರಿಸುವ ಬಗೆ: ಭಗವಂತ ಸರ್ವಭೂತಗಳಲ್ಲಿಯೂ ಇದ್ದಾನೆ. ಆದರೆ ನಾವು ಉತ್ತಮರೊಂದಿಗೆ ಹೆಚ್ಚಾಗಿ ಬೆರೆಯಬೇಕು. ಕೆಟ್ಟವರಿಂದ ಬಹಳ ದೂರದಲ್ಲೇ ಇರಬೇಕು. ಮನುಷ್ಯ ಪಾಪಕಾರ್ಯವನ್ನು ಮಾಡಬಾರದು. ಪಾಪಿಗಳಂತೆ ಅಭಿನಯಿಸುವುದೂ ಶ್ರೇಯಸ್ಕರವಲ್ಲ. ನಾವು ಒಳ್ಳೆಯವರ ಮೇಲೆ ಭಾರ ಹಾಕಿಬಿಟ್ಟರೆ ಅವರು ಕೆಟ್ಟದ್ದನ್ನು ಮಾಡುವುದಿಲ್ಲ. ದುಷ್ಟರನ್ನು ವರ್ಜಿಸುವಂತಿಲ್ಲ. ತುಳಸಿದಳ ಒಣಗಿಹೋಗಲಿ ಅಥವಾ ಬಹಳ ಪುಟ್ಟದಾಗಿರಲಿ- ಪೂಜೆಗೆ ಉಪಯೋಗ ಆಗಿಯೇ ತೀರುತ್ತದೆ!

ಭಗವಂತ ಎಲ್ಲರ ಹೃದಯದಲ್ಲೂ- ಸಾಧು, ಅಸಾಧು, ಭಕ್ತ, ಅಭಕ್ತ ಎಲ್ಲರಲ್ಲೂ ಇದ್ದಾನೆ. ಆದರೆ ಅಸಾಧು, ಅಭಕ್ತ, ದುಷ್ಟರೊಂದಿಗೆ ವ್ಯವಹರಿಸಕೂಡದು. ಸ್ನೇಹ ಬೆಳೆಸಲೂ ಕೂಡದು. ಕೆಲವರೊಡನೆ ಕೇವಲ ಒಂದೆರಡು ಮಾತುಕತೆ ಆಡಬಹುದು. ಆದರೆ ಇನ್ನು ಕೆಲವರೊಡನೆ ಹಾಗೂ ಮಾಡಬಾರದು ಮತ್ತು ಅಂಥವರಿಂದ ಬಹಳ ದೂರದಲ್ಲೇ ಇದ್ದುಬಿಡಬೇಕು.

# ಸಾಕಾರ-ನಿರಾಕಾರ ತತ್ತ್ವ: ಸಾಕಾರ ನಿರಾಕಾರಗಳೆರಡೂ ಸತ್ಯ. ಯಾವುದರಲ್ಲಿ ವಿಶ್ವಾಸವೋ ಅದರಲ್ಲಿ ದೃಢಬುದ್ಧಿ ಇಡಬೇಕು. ಹಲವಾರು ವಿಧಗಳ ಪೂಜಾಕ್ರಮಗಳನ್ನು ಭಗವಂತನೇ ಏರ್ಪಡಿಸಿದ್ದಾನೆ. ಈ ಜಗತ್ತು ಯಾರದೋ ಆತನೇ ಅಧಿಕಾರಬೋಧಕ್ಕನುಗುಣವಾಗಿ ಇದನ್ನೆಲ್ಲ ಮಾಡಿದ್ದಾನೆ.

ಬಿಲ್ಲುವಿದ್ಯೆ ಕಲಿಯಬೇಕಾಗಿದ್ದರೆ ಮೊದಲು ಬಾಳೆಗಿಡವನ್ನು ಗುರಿಯನ್ನಾಗಿ ಮಾಡಿಕೊಳ್ಳಬೇಕು. ಆನಂತರ ಬೆಂಡನ್ನು, ನಂತರ ಹಾರಿ ಹೋಗುತ್ತಿರುವ ಪಕ್ಷಿಯನ್ನು. ಮೊದಲು ಸಾಕಾರದಲ್ಲಿ ಮನಸ್ಸನ್ನು ಸ್ಥಿರಮಾಡಿಕೊಳ್ಳಬೇಕಾಗುತ್ತದೆ.

# ಜೀವನದಲ್ಲಿ ಹಣದ ಪಾತ್ರ: ಹಣವೇ ಜೀವನದ ಪರಮ ಉದ್ದೇಶವಾಗಲಾರದು. ಅರ್ಥದಿಂದಲೇ ಅನರ್ಥ. ಸೋದರರು ಆನಂದದಿಂದಲೇ ಇರುತ್ತಾರೆ. ಪಾಲು ಹಂಚಿಕೊಳ್ಳುವಾಗ ಎಲ್ಲೂ ಇಲ್ಲದ ತೊಂದರೆ ಬರುತ್ತದೆ. ಒಮ್ಮೊಮ್ಮೆ ನಾಯಿಗಳು ಒಂದರ ಮೈಯನ್ನೊಂದು ನೆಕ್ಕುತ್ತ ಸ್ನೇಹದಿಂದ ವರ್ತಿಸುತ್ತಿರುತ್ತವೆ. ಆದರೆ ಮನೆಯಿಂದ ಎಂಜಲೆಲೆ ಹಿತ್ತಲಿಗೆ ಬಂದು ಬೀಳುವುದೇ ತಡ, ಪರಸ್ಪರ ಕಚ್ಚಾಡತೊಡಗುತ್ತವೆ. ಈ ಜಗತ್ತು ಭಗವಂತನ ಐಶ್ವರ್ಯ. ಜನರು ಆತನ ಐಶ್ವರ್ಯಕ್ಕೆ ಮರುಳಾಗಿ ಆತನನ್ನೇ ಮರೆತುಬಿಡುತ್ತಾರೆ. ಕಾಮಕಾಂಚನ ಸುಖಕ್ಕಾಗಿ ಎಲ್ಲರೂ ಹಾತೊರೆಯುತ್ತಾರೆ. ಆದರೆ ಅದರಲ್ಲಿ ದುಃಖ, ಅಶಾಂತಿಯೇ ಅಧಿಕ. ಒಳ್ಳೆಯ ರೀತಿಯಿಂದ ಧನಾರ್ಜನೆ ಮಾಡು, ಆದರೆ ಜೀವನದ ಉದ್ದೇಶ ಧನಾರ್ಜನೆಯಲ್ಲ, ಭಗವಂತನ ಸೇವೆ. ಧನಾರ್ಜನೆಯಿಂದ ಭಗವಂತನ ಸೇವೆ ನಡೆಯುವುದಾದರೆ ಅದು ದೋಷವಾದುದೇನೂ ಅಲ್ಲ.

ಪ್ರತಿಯೊಬ್ಬ ಮಾನವನ ಬದುಕಿನಲ್ಲಿ ಕಾಡಬಹುದಾದ ಇಂತಹ ಹತ್ತು ಹಲವು ವಿಚಾರಗಳ ಕುರಿತಾಗಿ ರಾಮಕೃಷ್ಣರಿತ್ತ ಪರಿಹಾರವು ಸಮರ್ಥನೀಯ ಹಾಗೂ ನಮ್ಮ ಜೀವನಾದರ್ಶವನ್ನು ಬಲಪಡಿಸುವ ಶಕ್ತಿ ಸಂಜೀವಿನಿ. ಭವಸಾಗರವನ್ನು ದಾಟಿಸುವ ವಿಷಯದಲ್ಲಿ ಅವರೊಬ್ಬ ಅದ್ಭುತ ಚುಕ್ಕಾಣಿಗ.

ರಾಮಕೃಷ್ಣರ ವ್ಯಕ್ತಿತ್ವ ವಿವರಿಸುತ್ತ ಅವರ ಸಂದೇಶಗಳನ್ನು ಕೃತಿರೂಪಕ್ಕಿಳಿಸಿದ ಮಹೇಂದ್ರನಾಥ ಗುಪ್ತರು (ಮಾಸ್ಟರ್ ಮಹಾಶಯ) ಹೀಗೆ ಹೇಳುತ್ತಾರೆ: ‘ರಾಮಕೃಷ್ಣರ ಭಗವತ್ಪ್ರೇಮ, ಉಜ್ವಲ ಶ್ರದ್ಧೆ, ಭಗವಂತನೊಡನೆ ಬಾಲಕನಂತೆ ಮಾತುಕತೆಯಾಡುವಿಕೆ, ಭಗವಂತನಿಗಾಗಿ ವ್ಯಾಕುಲತೆಯಿಂದ ಆಕ್ರಂದಿಸುವಿಕೆ, ಸ್ತ್ರೀಜಾತಿಯನ್ನೇ ಮಾತೃದೃಷ್ಟಿಯಿಂದ ಪೂಜೆ ಮಾಡುವಿಕೆ, ಪ್ರಾಪಂಚಿಕ ಮಾತುಕತೆಯ ವರ್ಜನೆ, ತೈಲಧಾರಾತುಲ್ಯ ನಿರವಚ್ಛಿನ್ನ ಭಗವತ್ಕಥಾಪ್ರಸಂಗ, ಸರ್ವಧರ್ಮ ಸಮನ್ವಯ, ಪರಧರ್ಮಗಳ ವಿದ್ವೇಷಭಾವಲೇಶಶೂನ್ಯತೆ, ಭಗವದ್ಭಕ್ತರಿಗಾಗಿ ರೋದನೆ… ಪರಮಾದ್ಭುತ!’

ಕುವೆಂಪು ಹೇಳುತ್ತಾರೆ: ‘ಸರ್ವಧರ್ಮ ಸಮನ್ವಯದೃಷ್ಟಿಯನ್ನು ಈ ಯುಗದಲ್ಲಿ ಸ್ವಾತಂತ್ರೊ್ಯೕದಯಕ್ಕೆ ಬಹುಪೂರ್ವದಲ್ಲಿಯೇ ಸ್ಪಷ್ಟವಾಗಿ, ಅನುಭವಪೂರ್ವಕವಾಗಿ, ಸರ್ವಜನಸುಲಭಗ್ರಾಹ್ಯವಾಗಿ ಪ್ರಭಾವಯುತವಾಗಿ, ಕ್ರಾಂತಿಪೂರ್ಣವಾದರೂ ಸಂಪ್ರದಾಯ ಅವಿರುದ್ಧವೆನ್ನುವಂತೆ ಲೋಕಸಮಸ್ತಕ್ಕೂ ತೋರಿ ಸಾರಿದವರೆಂದರೆ ಭಗವಾನ್ ಶ್ರೀ ರಾಮಕೃಷ್ಣರು’.

ಶ್ರೀರಾಮಕೃಷ್ಣ ವಚನವೇದದ ಸಮಗ್ರ ಅಧ್ಯಯನ ನಮ್ಮೆಲ್ಲರ ಬದುಕಿನ ದಿಕ್ಸೂಚಿ ಆಗಬಲ್ಲದು. ಈ ಸದ್ಗ›ಂಥದ ಅಧ್ಯಯನಕ್ಕೆ ಸಂಕಲ್ಪಿಸಿ ಮುನ್ನಡೆಯೋಣ.

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

Leave a Reply

Your email address will not be published. Required fields are marked *

Back To Top