ಧರ್ಮಮಾರ್ಗದ ಹಿರಿಮೆ ತಿಳಿದರೆ ಜೀವನ ಸಾರ್ಥಕ

| ಸ್ವಾಮಿ ವೀರೇಶಾನಂದ ಸರಸ್ವತೀ

ಸ್ವಾಮಿ ವಿವೇಕಾನಂದರ ಪ್ರಕಾರ, ‘ಬಡತನ ನಿಮೂಲನೆಗಾಗಿ ಮತಾಂತರ’ ಎಂಬ ಮಾತು ಹುರುಳಿಲ್ಲದ್ದು. ವಿಶ್ವಕುಟುಂಬದ ಪರಿಕಲ್ಪನೆಯನ್ನು ಜಗತ್ತಿಗೆ ಮೊತ್ತಮೊದಲು ನೀಡಿದ ಸನಾತನ ಹಿಂದೂಧರ್ಮವು ಜಗತ್ತಿನ ಶ್ರೇಷ್ಠ ಚಿಂತಕರ, ವಿಜ್ಞಾನಿಗಳ, ಮಹಿಮಾನ್ವಿತರ ಗೌರವಾದರಗಳಿಗೆ ಪಾತ್ರವಾಗಿರುವ ವಿಚಾರವಂತೂ ಸುಳ್ಳಲ್ಲ.

ಮಾನವನೇಕೆ ಧರ್ವವಲಂಬಿ ಆಗಬೇಕೆಂಬ ಪ್ರಶ್ನೆ ಸಾರ್ವಕಾಲಿಕ ಮಾನ್ಯತೆಯನ್ನು ಪಡೆದದ್ದೇ ಆಗಿದೆ. ಇದನ್ನು ವೇದ, ಶಾಸ್ತ್ರ, ಪುರಾಣಗಳು ವಿಶಿಷ್ಟವಾಗಿ ವಿವರಿಸಿವೆ ಮತ್ತು ಸಮರ್ಥಿಸಿವೆ. ಶ್ರೀ ವಿಷ್ಣುಸಹಸ್ರನಾಮದಲ್ಲಿ ಭಗವಂತನಿಗೆ ‘ಪುರಾಣಪುರುಷ’ ಮತ್ತು ‘ನಿತ್ಯನೂತನ’ ಎಂಬೆರಡು ಹೆಸರುಗಳಿವೆ! ಜಗತ್ತಿನ ಇತಿಹಾಸದಲ್ಲಿ ಭಗವಂತನು ಹಳಬರಿಗೆ ‘ಪುರಾಣಪುರುಷ’ನಾಗಿ ಮತ್ತು ಹೊಸಬರಿಗೆ ‘ನಿತ್ಯನೂತನ’ನಾಗಿ ಗೋಚರಿಸುತ್ತ ಸಾಗಿರುವುದಂತೂ ಸುಳ್ಳಲ್ಲ.

‘ಮಾನವನೇಕೆ ಧರ್ವವಲಂಬಿ ಆಗಬೇಕು?’ ಎಂಬ ಪ್ರಶ್ನೆಗೆ ಸ್ವಾಮಿ ವಿವೇಕಾನಂದರಿತ್ತ ಉತ್ತರವು ಅತ್ಯಂತ ಆಲೋಚನೀಯ. ಅವರೆನ್ನುತ್ತಾರೆ: ‘ಮಾನವ ಸಮಾಜದಿಂದ ಧರ್ಮವನ್ನು ಬೇರ್ಪಡಿಸಿದರೆ ಆಗ ಉಳಿಯುವುದು ಮೃಗಗಳ ಹಿಂಡು ಮಾತ್ರ!’ ‘ಧರ್ಮದ ಯೋಗ್ಯ ಹಾಗೂ ನಿಷ್ಠುರವಾದ ಸತ್ಯದ ಪ್ರತಿಪಾದನೆಯನ್ನು ಯಾವುದೇ ಪೂರ್ವಾಗ್ರಹಕ್ಕೆ ಆಸ್ಪದವೀಯದೇ, ಅನುಮಾನ ಅಸ್ಪಷ್ಟತೆಗಳಿಗೆ ದಾರಿಮಾಡಿಗೊಡದೆ ಪ್ರತಿಪಾದಿಸಿದ ಯೋಗ್ಯ ಆಧ್ಯಾತ್ಮಿಕ ವಕ್ತಾರ ಸ್ವಾಮಿ ವಿವೇಕಾನಂದರು’ ಎಂದಿದ್ದಾರೆ ಡಾ. ಎಸ್.ರಾಧಾಕೃಷ್ಣನ್.

ಸ್ವಾಮಿ ವಿವೇಕಾನಂದರು ತಮ್ಮ ಜೀವನಾನುಭವದಿಂದ ಕಂಡುಕೊಂಡ ಪರಮಸತ್ಯವನ್ನು ಜಗತ್ತಿಗೆ ಹಂಚಿದ ವಿಧಾನದಲ್ಲಿ ಲೋಕಹಿತದ ತತ್ತ್ವವಿದೆ. ‘ಯಾವ ಜೀವನ ವಿಧಾನವು ಮೃಗಸದೃಶ ಜೀವಿಯನ್ನು ಮನುಷ್ಯನನ್ನಾಗಿ ಮತ್ತು ಮನುಷ್ಯನನ್ನು ದೈವತ್ವಕ್ಕೆ ಏರಿಸುವ ಅದ್ಭುತ ಶಕ್ತಿಯನ್ನು ಅನುಗ್ರಹಿಸುತ್ತದೆಯೋ ಅದೇ ಧರ್ಮ’ ಎಂದಿದ್ದಾರೆ. ಇದೇ ನಿಜವಾದ ವಿಕಾಸ ತತ್ತ್ವವಲ್ಲವೇ? ವಿಕಾಸ ಎಂದರೆ ‘ಮಂಗನಿಂದ ಮಾನವ’ ಎಂದಷ್ಟೇ ಅಲ್ಲ. ಅದು ಮತ್ತಷ್ಟು ಸತ್ಯಪಥದಲ್ಲಿ ಧಾವಿಸಲೇಬೇಕಿದೆ ಮತ್ತು ಹೆಚ್ಚು ಹೆಚ್ಚು ಸತ್ಯವು ಮನವರಿಕೆ ಆದಂತೆ ಮಾನವನ ಸ್ವಭಾವದಲ್ಲಿ ಗುಪ್ತವಾಗಿ ಅಡಕವಾಗಿರುವ ಮೃಗೀಯ ನಡವಳಿಕೆಗಳು (ಅಜಿಞಚ್ಝ ಐಠಠಿಜ್ಞಿ್ಚ) ಕ್ಷೀಣಿಸುತ್ತ ಹೋಗುತ್ತದೆ!

ಖ್ಯಾತ ಖಗೋಳ-ಭೌತವಿಜ್ಞಾನಿ ಆರ್.ಎ. ಮಿಲ್ಲಿಕನ್ ಹೀಗೆ ಅಭಿಪ್ರಾಯಪಡುತ್ತಾರೆ: ‘ಸಮಸ್ತ ಮನುಷ್ಯ ಸಂಕುಲದ ಕಲ್ಯಾಣ ಮತ್ತು ಪ್ರಗತಿಯನ್ನು ಹೊತ್ತಿರುವ ಅತಿ ದೊಡ್ಡ ಆಧಾರಸ್ತಂಭಗಳೆಂದರೆ, ನನಗೆ ತಿಳಿದಂತೆ, ಮೊದಲನೆಯದು ಧರ್ಮದೃಷ್ಟಿ ಮತ್ತು ಎರಡನೆಯದು ವಿಜ್ಞಾನದೃಷ್ಟಿ. ಒಂದು ಮತ್ತೊಂದನ್ನು ಆಧರಿಸದೆ ಪರಿಣಾಮ ಬೀರುವುದೂ ಅಸಾಧ್ಯದ ಮಾತು. ವಾಸ್ತವ ಸಂಗತಿಯೆಂದರೆ ವಿಜ್ಞಾನದೃಷ್ಟಿಯನ್ನು ಅಭಿವೃದ್ಧಿಪಡಿಸಲು ನಮ್ಮ ಪಾಲಿಗೆ ವಿಶ್ವವಿದ್ಯಾನಿಲಯಗಳಿವೆ, ಸಂಶೋಧನಾ ಸಂಸ್ಥೆಗಳಿವೆ. ಆದರೆ ಯಾವುದೇ ವಿನಾಯತಿ ಇಲ್ಲದೆ ಪ್ರತಿಯೊಬ್ಬರಿಗೂ ಪರಮಾವಕಾಶ ಇರುವುದು ಧರ್ಮದೃಷ್ಟಿಯ ವಿಷಯದಲ್ಲಿ’.

ಸ್ವಾಮಿ ವಿವೇಕಾನಂದರ ಮಾತನ್ನು ಮೇಲಿನ ಉಕ್ತಿಯ ಹಿನ್ನೆಲೆಯಲ್ಲಿ ಹೆಚ್ಚು ಸ್ಪಷ್ಟವಾಗಿ ತಿಳಿಯಬಹುದಾಗಿದೆ. ಮಾನವನ ಅಭ್ಯುದಯಕ್ಕೆ ಎರಡು ದೃಷ್ಟಿಕೋನಗಳು ಅನಿವಾರ್ಯ ಇವೆ. ಈ ದೃಷ್ಟಿಕೋನಗಳು ಒಂದಕ್ಕೊಂದು ಪೂರಕ ಹಾಗೂ ಪ್ರೇರಕ. ಆದರೆ ಧಾರ್ವಿುಕ ದೃಷ್ಟಿಕೋನದ ಸ್ತಂಭದ ಉನ್ನತಿ ಸಾಧನೆಗೆ ಯಾವುದೇ ತರತಮವಿಲ್ಲದೆ, ಮೇಲುಕೀಳೆನ್ನದೆ ಸರ್ವರಿಗೂ ಅವಕಾಶವಿರುವುದೆಂಬ ಸಂಗತಿ ಅದೆಷ್ಟು ಅದ್ಭುತ! ಆದ್ದರಿಂದ ಮಾನವನು ಧರ್ವವಲಂಬಿ ಆಗಲೇಬೇಕು!

ರಾಷ್ಟ್ರೀಯ ಶಿಕ್ಷಣದ ದೃಷ್ಟಿ: ಸ್ವಾಮಿ ವಿವೇಕಾನಂದರು ಭಾರತೀಯರ ಮುಂದಿಟ್ಟ ರಾಷ್ಟ್ರೀಯ ಶಿಕ್ಷಣದ ಪರಿಕಲ್ಪನೆಯೂ ಅತ್ಯದ್ಭುತ. ಅವರ ದೃಷ್ಟಿಯಲ್ಲಿ ಶಿಕ್ಷಣವೇ ಮಾನವನ ಸರ್ವಸಮಸ್ಯೆಗಳಿಗೂ ಸಿದ್ಧೌಷಧ. ಆದ್ದರಿಂದ ಅವರೆನ್ನುತ್ತಾರೆ, ‘ಭಾರತೀಯರೇ ಸಂಸ್ಕೃತವನ್ನು ಕಲಿಯಿರಿ, ಅದರೊಂದಿಗೆ ಪಾಶ್ಚಾತ್ಯ ವಿಜ್ಞಾನವನ್ನು ಕಲಿಯಿರಿ ಮತ್ತು ಕಲಿಯುವುದನ್ನು ನಿಖರವಾಗಿ ಕಲಿಯಿರಿ’.

ಸಂಸ್ಕೃತಾಧ್ಯಯನಕ್ಕೆ ಒತ್ತು ನೀಡಲು ಸ್ವಾಮೀಜಿ ಮುಂದಾದುದಕ್ಕೆ ಮಹತ್ತರ ಕಾರಣವಿದೆ. ಅದೇನೆಂದರೆ, ಸಂಸ್ಕೃತವನ್ನು ನಿಖರವಾಗಿ ಅಧ್ಯಯನ ಮಾಡುವುದರಿಂದ ಧರ್ಮಗ್ರಂಥಗಳಲ್ಲಿರುವ ಅತ್ಯಮೂಲ್ಯ ವಿಚಾರಗಳನ್ನು ಅರಿತುಕೊಳ್ಳಲು ಸಾಧ್ಯ; ಧರ್ಮದ ಮರ್ಮವನ್ನರಿತಾಗ ವ್ಯಕ್ತಿಯಲ್ಲಿ ಸಮಾಜನಿಷ್ಠೆ ಹಾಗೂ ರಾಷ್ಟ್ರಪ್ರಜ್ಞೆಗಳು ಜಾಗೃತವಾಗುತ್ತವೆ!

ಅಂತರಂಗ ಜಾಗೃತಿಗೆ ಧರ್ಮಶಿಕ್ಷಣವೇ ಅಡಿಗಲ್ಲು. ಯುವಕರನ್ನುದ್ದೇಶಿಸಿ ಮಾತನಾಡುತ್ತ ಸ್ವಾಮೀಜಿ ಹೇಳುತ್ತಾರೆ: ‘ಬದುಕಿನಲ್ಲಿ ಮಾನವ ಇಚ್ಛೆ ಮತ್ತು ದೈವ ಇಚ್ಛೆಗಳನ್ನು ಒಗ್ಗೂಡಿಸುವುದರಿಂದ ಎರಡು ಕಲ್ಯಾಣಕಾರಿ ಯಶಸ್ಸು ಪ್ರಾಪ್ತವಾಗುತ್ತದೆ. ಯಶಸ್ಸಿಗೆ ಎರಡು ಆಯಾಮಗಳಿವೆ. ಅವುಗಳೆಂದರೆ, ಆಂತರಿಕ ಆಯಾಮ ಮತ್ತು ಬಹಿರಂಗ ಆಯಾಮ. ಭಗವಂತನೊಂದಿಗೆ ಮಧುರ ಸಂಬಂಧವನ್ನು ರೂಪಿಸಿಕೊಂಡು ಶಕ್ತನಾಗುವುದು ಅಂತರಂಗ ಸಂಬಂಧವನ್ನು ಯಶಸ್ವಿಯಾಗಿ ರೂಪಿಸಿಕೊಳ್ಳುವುದರ ಮೂಲಕ ಸಾಧ್ಯವಾಗಬಹುದಾದರೆ ಭಗವಂತನ ಸಂತಾನದ ಸೇವೆಗೈಯುತ್ತ ಆತನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ಬಹಿರಂಗ ಆಯಾಮವು ನೆರವಾಗುತ್ತದೆ. ನೆನಪಿಡಿ, ಸ್ವಾರ್ಥಕೇಂದ್ರಿತ ಯಶಸ್ಸು ತೃಪ್ತಿದಾಯಕವಾಗಿರಲು ಸಾಧ್ಯವಿಲ್ಲ ಮತ್ತು ಅದು ಅಸ್ತಿತ್ವವನ್ನು ಕಳೆದುಕೊಂಡು ಬಿಡುತ್ತದೆ!’

ಧರ್ಮವು ವಿಶಾಲವಾದದ್ದು ಮತ್ತು ಜಾಗತಿಕವಾದದ್ದು. ಆದರೆ ‘ಮತ’ವು ಸೀಮಿತವಾದದ್ದು ಹಾಗೂ ಅತ್ಯಂತ ವೈಯಕ್ತಿಕವಾದದ್ದು. ಧರ್ಮವು ಮಾನವನ ಅಭ್ಯುದಯದ ಸೌಧದ ಅಡಿಪಾಯವಷ್ಟೇ ಅಲ್ಲ, ಕಟ್ಟಡದ ಯಾವುದೇ ಭಾಗದ ಇಛಿಞಛ್ಞಿಠಿಜ್ಞಿಜ ಚಜಛ್ಞಿ್ಚ! ಅರ್ಥ ಮತ್ತು ಕಾಮಗಳು ಬದುಕಿನ ವ್ಯಾವಹಾರಿಕ ಗುರಿಗಳೆನಿಸಿದರೆ ‘ಧರ್ಮ’ವು ಶಾಶ್ವತ ಗುರಿ, ಬದುಕಿನ ಶ್ರೇಷ್ಠ ಆಧಾರಸ್ತಂಭ.

ವಿವೇಕಾನಂದರು ಅಮೆರಿಕದ ಷಿಕಾಗೋ ನಗರದಲ್ಲಿ ನೆರವೇರಿದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತದ ಸನಾತನ ಪರಂಪರೆಯ ಉಪನಿಷತ್ತಿನ ವಾಣಿಯನ್ನು ಉದ್ಗರಿಸುತ್ತ-

ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ

ಆಯೇ ಧಾಮಾನಿ ದಿವ್ಯಾನಿ ತಸ್ತುಃ

ವೇದಾಹಮೇತಂ ಪುರುಷಂ ಮಹಾಂತಂ

ಆದಿತ್ಯವರ್ಣಂ ತಮಸಃ ಪರಸ್ತಾತ್

ತಮೇವ ವಿದಿತ್ವಾ ಅತಿಮೃತ್ಯುಮೇತಿ

ನಾನ್ಯಃ ಪಂಥಾ ವಿದ್ಯತೇಯನಾಯ

ಎಂದು ಸ್ತುತಿಸುತ್ತಾರೆ.

ಸ್ವಾಮೀಜಿ ಹೇಳುತ್ತಾರೆ: ‘ಓ ಅಮೃತಪುತ್ರರೇ, ‘ಅಮೃತಪುತ್ರರು’ ಎಂಬ ಮಧುರನಾಮದಿಂದ ನಿಮ್ಮನ್ನು ಸಂಬೋಧಿಸಲು ನನಗೆ ಅನುಮತಿ ಕೊಡಿ! ಹೌದು, ಹಿಂದೂವು ನಿಮ್ಮನ್ನು ಪಾಪಿಗಳೆಂದು ಕರೆಯಲು ನಿರಾಕರಿಸುತ್ತಾನೆ. ನೀವು ಭಗವಂತನ ಪುತ್ರರು, ಅಮೃತಾನಂದದಲ್ಲಿ ಭಾಗಿಗಳು; ನೀವು ಪವಿತ್ರರು, ನೀವು ಪರಿಪೂರ್ಣರು. ಇಂತಹ ನೀವು …ಪಾಪಿಗಳೇ!? ಮಾನವನನ್ನು ಪಾಪಿಯೆಂದು ಕರೆಯುವುದೇ ಒಂದು ಮಹಾಪಾಪ! ಮಾನವ ಸ್ವಭಾವಕ್ಕೆ ಒಂದು ಮಹಾಕಳಂಕ! ಮೇಲೆದ್ದು ಬನ್ನಿ, ಓ ಕೇಸರಿಗಳೇ; ನೀವು ಕುರಿಗಳೆಂಬ ಭ್ರಾಂತಿಯನ್ನು ಕೊಡಹಿ, ನೀವು ಪ್ರಕೃತಿಯಲ್ಲ, ನೀವು ದೇಹವಲ್ಲ. ಪ್ರಕೃತಿ ನಿಮ್ಮ ಅಡಿಯಾಳು, ನೀವು ಪ್ರಕೃತಿಯ ಅಡಿಯಾಳಲ್ಲ!’

ಪರಧರ್ಮ ಸಹಿಷ್ಣುತೆ: ಮತ್ತೊಂದು ಉಪನ್ಯಾಸದಲ್ಲಿ ಸ್ವಾಮೀಜಿ ಹೇಳುತ್ತಾರೆ: ‘ಕ್ರೖೆಸ್ತನಾದವನು ಹಿಂದೂವೋ ಬೌದ್ಧನೋ ಆಗಬೇಕಿಲ್ಲ. ಅಂತೆಯೇ ಹಿಂದೂ ಆದವನು ಬೌದ್ಧನೋ ಕ್ರೖೆಸ್ತನೋ ಆಗಬೇಕಿಲ್ಲ. ಆದರೆ ಪ್ರತಿಯೊಬ್ಬನೂ ಉಳಿದವರ ಉನ್ನತ ಭಾವನೆಗಳನ್ನು ಮೈಗೂಡಿಸಿಕೊಂಡು, ತನ್ನ ವೈಯಕ್ತಿಕತೆಯನ್ನು ಕಳೆದುಕೊಳ್ಳದೆ, ತನ್ನದೇ ಆದ ಬೆಳವಣಿಗೆಯ ನಿಯಮಾನುಸಾರವಾಗಿ ಬೆಳೆಯಬೇಕು…’.

ಸ್ವಾಮಿ ವಿವೇಕಾನಂದರ ಈ ದಿವ್ಯನುಡಿಗಳಲ್ಲಿ ಮತಾಂಧರ ಹಾಗೂ ಮತಾಂತರದ ಹುನ್ನಾರ ನಡೆಸುವವರಿಗೆ ತಿಳಿವಳಿಕೆಯ ಚಿಂತನೆ ಇದೆ. ರೋಷವೆಂಬುದು ವ್ಯಕ್ತಿಯನ್ನು ಕುರಿತಾದದ್ದೇ ಹೊರತು ಧರ್ಮವನ್ನು ಕುರಿತಾದದ್ದಲ್ಲವೆಂಬ ಸತ್ಯವನ್ನೂ ಸ್ವಾಮೀಜಿ ಸ್ಪಷ್ಟಪಡಿಸುತ್ತಾರೆ. ಸ್ವಧರ್ಮನಿಷ್ಠೆಯೊಂದಿಗೆ ಪರಧರ್ಮ ಸಹಿಷ್ಣುತೆಯೂ ಜಗತ್ತಿನ ಅವಶ್ಯಕತೆಯಾಗಿದೆ ಎಂಬುದನ್ನು ಸಾರಿ ಸಾರಿ ಹೇಳಿದ್ದಾರೆ ಸ್ವಾಮೀಜಿ.

ಭಾರತದ ಪುಣ್ಯಭೂಮಿಯ ನಾಗರಿಕತೆ ಹತ್ತಾರು ಆಘಾತಗಳನ್ನು ಎದುರಿಸಿದೆ. ಖ್ಯಾತ ಇತಿಹಾಸಜ್ಞ ಆರ್ನಾಲ್ಡ್ ಟಾಯ್್ನ ಅಭಿಪ್ರಾಯಪಡುವಂತೆ, ‘ಯಾವುದೇ ರಾಷ್ಟ್ರವು ವಿದೇಶಿಯರ ದಾಳಿಯಿಂದ, ಅಂತರ್ಯುದ್ಧಗಳಿಂದ, ಸಾಮಾಜಿಕ ಘರ್ಷಣೆಗಳಿಂದ ಮತ್ತು ನೈತಿಕ ಅಧಃಪತನದಿಂದ ಹಿನ್ನಡೆ ಕಾಣಬಹುದು. ಭಾರತದ ಮೇಲೆ ಅರವತ್ತಕ್ಕೂ ಹೆಚ್ಚು ದಾಳಿಗಳು ಸಂಭವಿಸಿದವು. ಖಡ್ಗಶಕ್ತಿಯನ್ನು ಝುಳಪಿಸಿ ಜನರ ಲೌಕಿಕ ಸಂಪತ್ತನ್ನು ಲೂಟಿ ಹೊಡೆದ, ಅಷ್ಟೇಕೆ ಧಾರ್ವಿುಕ ಶ್ರದ್ಧೆಯನ್ನು ನುಚ್ಚುನೂರಾಗಿಸಲು ಮಾಡಿದ ಪ್ರಯತ್ನಗಳೇನೂ ಕಡಿಮೆಯಲ್ಲ. ಈ ದೇಶವನ್ನು ‘ಖಡ್ಗ’ವು ಮತಾಂತರಗೊಳಿಸಲು ಪ್ರಯತ್ನಿಸಿದೆ, ವೇಷ ಮರೆಸಿಕೊಂಡು ಬಂದ ‘ಸೇವಾತತ್ತ್ವ’ವೂ ಘಾಸಿ ಮಾಡಿರುವುದು ಅಷ್ಟಿಷ್ಟಲ್ಲ’.

ಸ್ವಾಮಿ ವಿವೇಕಾನಂದರ ಪ್ರಕಾರ, ‘ಬಡತನ ನಿಮೂಲನೆಗಾಗಿ ಮತಾಂತರ’ ಎಂಬ ಮಾತು ಹುರುಳಿಲ್ಲದ್ದು. ವಿಶ್ವಕುಟುಂಬದ ಪರಿಕಲ್ಪನೆಯನ್ನು ಜಗತ್ತಿಗೆ ಮೊತ್ತಮೊದಲು ನೀಡಿದ ಸನಾತನ ಹಿಂದೂಧರ್ಮವು ಜಗತ್ತಿನ ಶ್ರೇಷ್ಠ ಚಿಂತಕರ, ವಿಜ್ಞಾನಿಗಳ, ಮಹಿಮಾನ್ವಿತರ ಗೌರವಾದರಗಳಿಗೆ ಪಾತ್ರವಾಗಿರುವ ವಿಚಾರವಂತೂ ಸುಳ್ಳಲ್ಲ.

ಸನಾತನ ಧರ್ಮದ ಹಿರಿಮೆ: ಜಗತ್ತಿನ ಸಂಕ್ರಮಣ ಕಾಲದಲ್ಲಿ ಸಾಗುತ್ತಿರುವ ನಮಗೆ ಭಾರತೀಯ ಸನಾತನ ಧರ್ಮ ಕುರಿತು ಸ್ವಾಮಿ ವಿವೇಕಾನಂದರು ಆಡಿದ ಮಾತುಗಳು (ಸ್ವಾಮಿ ವಿವೇಕಾನಂದ ಕೃತಿ ಸಂಗ್ರಹ; ಸಂಪುಟ 3, ಪುಟ 248-51) ನಮ್ಮ ಆತ್ಮವಿಮರ್ಶೆಗೆ ಸಹಾಯಕಾರಿ. ಅವರೆನ್ನುತ್ತಾರೆ: ‘‘…ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾದ ಒಂದು ವಿಶಿಷ್ಟ ಅಂಶವಿದೆ. ಅದೇನೆಂದರೆ ಸನಾತನ ವೇದಾಂತ ಧರ್ಮ ಬೋಧಿಸುವುದು ನಿರ್ಗಣ, ಸಗುಣ ಭಗವಂತನನ್ನು. ಅದು ಎಷ್ಟೋ ನಿರ್ಗಣ ನಿಯಮಗಳ ಜತೆಗೆ ಬೇಕಾದಷ್ಟು ಸಗುಣವನ್ನು ಬೋಧಿಸುತ್ತದೆ. ಆದರೆ ನಮ್ಮ ಧರ್ಮದ ಮೂಲ ಇರುವುದು ಶ್ರುತಿಗಳಲ್ಲಿ, ವೇದಗಳಲ್ಲಿ. ವೇದಗಳು ಅಪೌರುಷೇಯವಾದವು. ವ್ಯಕ್ತಿಗಳೆಲ್ಲರ, ಹಿರಿಯ ಅವತಾರಪುರುಷರ, ಪ್ರವಾದಿಗಳ ಉಲ್ಲೇಖ ಇರುವುದು ಸ್ಮೃತಿಗಳಲ್ಲಿ, ಪುರಾಣಗಳಲ್ಲಿ. ಗಮನಿಸಬೇಕಾದ ಅತಿಮುಖ್ಯ ಅಂಶವೆಂದರೆ ಹಿಂದೂಧರ್ಮವನ್ನು ಹೊರತುಪಡಿಸಿ ಜಗತ್ತಿನ ಪ್ರತಿಯೊಂದು ಇತರ ಧರ್ಮವೂ ಒಬ್ಬ ಮೂಲಪುರುಷನ ಜೀವನ ಅಥವಾ ಹಲವು ಮೂಲಪುರುಷರ ಜೀವನಗಳನ್ನು ಅವಲಂಬಿಸಿವೆ… ಈ ಮೂಲ ವ್ಯಕ್ತಿಗಳೆನಿಸಿದ ಮಹಾತ್ಮರ ಚಾರಿತ್ರಿಕ ಪಾತ್ರಗಳ ಬಗ್ಗೆ ಬೇಕಾದಷ್ಟು ಹೋರಾಟಗಳು ನಡೆದಿರಬೇಕೆಂಬುದು ಸ್ಪಷ್ಟವಾಗಿದೆ. ನಮ್ಮ ಧರ್ಮ ನಿಂತಿರುವುದು ವ್ಯಕ್ತಿಗಳ ಮೇಲಲ್ಲ, ತತ್ತ್ವಗಳ ಮೇಲೆ. ನಮ್ಮ ಧರ್ಮ ಹೇಳಿದಂತೆ ನಾವು ನಡೆದುಕೊಳ್ಳುವುದಕ್ಕೆ ಕಾರಣ ಅದು ಯಾರೋ ಋಷಿಯಿಂದಲೋ ಅಥವಾ ಅವತಾರಪುರುಷನಿಂದಲೋ ಬಂದಿದೆ ಎಂದಲ್ಲ. ವೇದಗಳಿಗೆ ಪ್ರಮಾಣ ಕೃಷ್ಣ ಅಲ್ಲ, ವಾಸ್ತವವಾಗಿ ಕೃಷ್ಣನಿಗೆ ಪ್ರಮಾಣ ವೇದಗಳು. ಅವನ ಮಹಿಮೆಗೆ ಕಾರಣ ಎಂದರೆ ನಿತ್ಯವಾದ ವೇದಗಳ ಮಹಾಬೋಧಕ ಆತ ಎಂದು. ಉಳಿದ ಅವತಾರಗಳ, ಋಷಿಗಳ ವಿಷಯವೂ ಅಷ್ಟೇ’.

ನಿಜವಾದ ಅರ್ಥದಲ್ಲಿ ಮಾನವನು ಧಾರ್ವಿುಕನಾದಾಗ ಅವನಿಗೆ ‘ಆತ್ಮವತ್ ಸರ್ವಭೂತೇಷು’ ಎಂಬ ತತ್ತ್ವ ಮನವರಿಕೆ ಆಗುತ್ತದೆ. ಭಾರತವು ತನ್ನ ಧಾರ್ವಿುಕ ಜೀವಂತಿಕೆಯನ್ನು ಕಾಪಾಡಿಕೊಂಡು ಸಾಗುತ್ತಿರುವುದರ ಹಿನ್ನೆಲೆಯಲ್ಲಿ ಇಡೀ ಜಗತ್ತೇ ಗಮನಿಸಬೇಕಾದ ಆದರ್ಶವಿದೆ. ಈ ಆದರ್ಶದ ಅಧ್ಯಯನಕ್ಕೆ ಸ್ವಾಮಿ ವಿವೇಕಾನಂದರ ಸಂದೇಶಗಳು ಸ್ಪಷ್ಟತೆ ನೀಡುತ್ತವೆ, ನಮ್ಮನ್ನು ಸನ್ಮಾರ್ಗದಲ್ಲಿ ನಡೆಸುತ್ತವೆ. ‘ಎಷ್ಟು ಮತಗಳೋ ಅಷ್ಟು ಪಥಗಳು’ ಎಂಬ ಶ್ರೀರಾಮಕೃಷ್ಣ ಪರಮಹಂಸರ ದಿವ್ಯಸಂದೇಶವು ವಿಶ್ವಕುಟುಂಬವನ್ನು ನಿರ್ವಿುಸಲು ಅನುವು ಮಾಡಿಕೊಡುತ್ತದೆ. ಸ್ವಾಮಿ ವಿವೇಕಾನಂದರೆನ್ನುವಂತೆ, ‘ಪ್ರತಿಯೊಂದು ಧರ್ಮದ ಧ್ವಜದ ಮೇಲೂ ‘ಯುದ್ಧವಲ್ಲ, ಸಹಕಾರ’, ‘ನಾಶವಲ್ಲ, ಸ್ವೀಕಾರ’, ‘ವೈಮನಸ್ಯವಲ್ಲ, ಶಾಂತಿ-ಸಮನ್ವಯ’ ಎಂದು ಬರೆಯಲಾಗುತ್ತದೆ ಎಂಬುದನ್ನು ನಾನು ತಮ್ಮ ಧರ್ಮವೇ ಉಳಿಯುತ್ತದೆ, ಉಳಿದುದೆಲ್ಲ ಅಳಿಯುತ್ತದೆ ಎಂದು ತಿಳಿದವರಿಗೆ ಮನವರಿಕೆ ಮಾಡಿಕೊಡುತ್ತೇನೆ’ ಎಂಬ ಮಾತು ಅದೆಷ್ಟು ಆಲೋಚನೀಯ!

Leave a Reply

Your email address will not be published. Required fields are marked *