ಭಗವತತ್ತ್ವದ ಮಾತೃಸ್ವರೂಪ ಶ್ರೀ ಶಾರದಾದೇವಿ

ಶ್ರೀಮಾತೆ ಹೇಳುತ್ತಿದ್ದ ಮಾತುಗಳು ಮನೋಜ್ಞ! ‘ಸಮಾಜದಲ್ಲಿ ಮಂಗಳಕರವಾದ, ಶಾಂತಿಮಯವಾದ ಹಾಗೂ ಉಲ್ಲಾಸಕರವಾದ ವಾತಾವರಣವನ್ನು ನಿರ್ವಿುಸಬೇಕಾದವರು ಸ್ತ್ರೀಯರೇ ಆಗಿದ್ದಾರೆ. ಸ್ತ್ರೀಯರು ಸಮಾಜದ ಪ್ರಮುಖ ಅಂಗ ಹಾಗೂ ಶೋಭೆಯೂ ಆಗಿದ್ದಾರೆ. ಸಂಸಾರ-ಸಮಾಜ ಎನ್ನುವುದು ಸಮೃದ್ಧಿಯಿಂದ ಇರಬೇಕಾದರೆ ಅಲ್ಲಿ ಗುಣಶಾಲಿಗಳಾದ ಸ್ತ್ರೀಯರು ಅತ್ಯವಶ್ಯಕ’.

| ಸ್ವಾಮಿ ವೀರೇಶಾನಂದ ಸರಸ್ವತೀ

ಮಾನವ ಇತಿಹಾಸದಲ್ಲಿ ನಾವು ಕಾಣುವ ಅಭ್ಯುದಯದ ಹಿನ್ನೆಲೆಯಲ್ಲಿ ಮಾತೃಶಕ್ತಿಯ ಪಾತ್ರ ಅಗಾಧವಾದುದು. ‘ತಾಯಿಯೇ ದೇವರು’, ‘ಇತರರ ಪತ್ನಿಯನ್ನು ತಾಯಿ ಎಂದೇ ಕಂಡು ಗೌರವಿಸು’, ‘ಭೂಮಿಗಿಂತ ದೊಡ್ಡ ವಸ್ತು ತಾಯಿ’, ‘ಮಾತೃವಾಕ್ಯ ಪರಿಪಾಲನೆಯೇ ಶ್ರೇಷ್ಠ ಕರ್ತವ್ಯ’-ಇವೇ ಮೊದಲಾದ ನಮ್ಮ ಭಾರತೀಯ ಆದರ್ಶದ ಮಾತುಗಳು ತಾಯಿಯ ಬಗ್ಗೆ ಯೋಚಿಸುವಂತೆ, ಧನ್ಯತೆಯಿಂದ ತಲೆದೂಗುವಂತೆ, ಅಷ್ಟೇ ಏಕೆ ತಲೆಬಾಗುವಂತೆ, ಮುಂದುವರಿದು ಅವಳ ತ್ಯಾಗ ವೈರಾಗ್ಯಸ್ವರೂಪದ ವ್ಯಕ್ತಿತ್ವಕ್ಕೆ ಮಣಿಯುವಂತೆಯೂ ಮಾಡುತ್ತದೆ. ಸದ್ಗುಣಸಂಪನ್ನಳೂ, ಯೋಗ್ಯಳೂ ಆದ ತಾಯಿ ಕುಟುಂಬ, ಸಮಾಜ ಹಾಗೂ ರಾಷ್ಟ್ರದ ರಕ್ಷಕಿಯಾಗಿ, ನಿರ್ವತೃವಾಗಿ ವಿಜೃಂಭಿಸುತ್ತಾಳೆಂದರೆ ಅತಿಶಯೋಕ್ತಿ ಅಲ್ಲ.

ಜೀವನವನ್ನು ಪ್ರವಾಹಕ್ಕೆ ಹೋಲಿಸಲಾಗಿದೆ. ಇದು ಮಳೆಗಾಲಕ್ಕಷ್ಟೇ ಸೀಮಿತವಾದ ಪ್ರವಾಹವಲ್ಲ! ನೀರಿನ ಪ್ರವಾಹದಂತೆ ಏಕಮುಖವಾದದ್ದೂ ಅಲ್ಲ. ಇದೊಂದು ದಶದಿಕ್ಕುಗಳಲ್ಲಿ ಬದುಕಿನುದ್ದಕ್ಕೂ ವಿಸõತವಾಗಿ ವ್ಯಾಪಿಸಿರುವ ಪ್ರವಾಹ. ಜಗತ್ತಿಗೆ ಕಂಟಕವೆನಿಸಿದ್ದ ರಾವಣನಂಥ ರಾಕ್ಷಸನ ವಧೆಗೆ ಶ್ರೀರಾಮನು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ನಮ್ಮ ಶಕ್ತಿ, ಶ್ರದ್ಧೆಗಳು ವೃದ್ಧಿಸಲು, ದೌರ್ಬಲ್ಯಗಳಿಂದ ಪಾರಾಗಲು ಭಗವಂತನ ದಶಾವತಾರಗಳಿಗೆ ಮೊರೆಹೋದರೂ ಸಾಲದು! ಆದರೆ ಈ ಎಲ್ಲ ದಶಾವತಾರಿಗಳೂ ಮಣಿದದ್ದು ಮಾತೆಯ ಮಡಿಲಿಗೆ! ಆದ್ದರಿಂದ ಮಾತೃತ್ವದ ಮಹಿಮೆ ಅತ್ಯಪಾರ.

ಲೌಕಿಕ ದೃಷ್ಟಿಯಿಂದ ಅವಲೋಕಿಸಬಹುದಾದರೂ, ತಂದೆ ಇಲ್ಲದ ಮಗು ಅರ್ಧ ಅನಾಥ ಎಂದಾದರೆ ತಾಯಿ ಇಲ್ಲದ ಮಗು ಪೂರ್ಣ ಅನಾಥವಂತೆ! ದೇವರು ನೀಡಲೂಬಹುದು, ನೀಡದೇ ಇರಲೂಬಹುದು, ಆದರೆ ತಾಯಿ ನೀಡದಿರಲಾರಳು! ತಾಯಿಗೂ ವೃದ್ಧಾಪ್ಯ ಆವರಿಸುತ್ತದೆ, ಆದರೆ ಅವಳ ಪ್ರೀತಿವಾತ್ಸಲ್ಯಗಳಿಗೆ ವೃದ್ಧಾಪ್ಯ ಇಲ್ಲ!

ಒಟ್ಟಾರೆ ಸಾರಾಂಶವೆಂದರೆ, ಭದ್ರವಾದ, ಬಲಿಷ್ಠವಾದ ಕೋಟೆಯೂ ಮದ್ದುಗುಂಡುಗಳಿಂದ ಛಿದ್ರವಾಗಬಹುದು. ಆದರೆ ತಾಯಿಪ್ರೀತಿಯ ರಕ್ಷಾಕವಚ ಬಲಿಷ್ಠವಾದದ್ದು ಮತ್ತು ಸುಭದ್ರತೆ ದೊರಕಿಸಿಕೊಡುತ್ತದೆ. ತಾಯಿಯ ಮಹಿಮೆ, ಮಹತ್ವ ಹಾಗೂ ಅನಿವಾರ್ಯತೆಯನ್ನು ವಿವರಿಸುತ್ತ ಮಹಾತ್ಮರೊಬ್ಬರು ಹೇಳಿದ್ದು ಹೀಗೆ-‘ತಾಯಿ ಇಲ್ಲದ ತಬ್ಬಲಿ ಮಗುವಿನ ಮುಂದೆ ನಿನ್ನ ಮಗುವನ್ನು ಮುದ್ದಿಸಬೇಡ!’

ಬ್ರಹ್ಮನು ಎಲ್ಲೆಡೆಯೂ ವ್ಯಕ್ತವಾಗಲು, ಅರ್ಥವಾಗಲು ಕಷ್ಟಸಾಧ್ಯವೆನಿಸಿದಾಗ ಅವನು ‘ಅಮ್ಮ’ನಾಗಿ ಗೋಚರಿಸಿದನಂತೆ! ಸಂನ್ಯಾಸಿಗೂ ಹೆತ್ತ ತಾಯಿಯೊಂದಿಗಿನ ಸಂಬಂಧ ಕಡಿದು ಹೋಗುವುದಿಲ್ಲ! ‘ತಾಯಿಯೇ ದೇವರು’ ಎನ್ನುತ್ತದೆ ಲೌಕಿಕ ಜಗತ್ತು; ‘ದೇವರೇ ತಾಯಿ’ ಎಂದಿದ್ದಾರೆ ಶ್ರೀರಾಮಕೃಷ್ಣರು!

ದಿವ್ಯತ್ರಯರೆಂದೇ ಜಗತ್ತಿನ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸುಖ್ಯಾತರಾದ ಭಗವಾನ್ ಶ್ರೀರಾಮಕೃಷ್ಣರು, ಶ್ರೀಮಾತೆ ಶಾರದಾದೇವಿಯವರು ಮತ್ತು ಸ್ವಾಮಿ ವಿವೇಕಾನಂದರು ಶ್ರೇಷ್ಠತಮ ಜೀವನದಿಂದ ಆಧ್ಯಾತ್ಮಿಕ ಜೀವನಮೌಲ್ಯಗಳನ್ನು ಶುದ್ಧೀಕರಿಸಿ, ಸ್ಪಷ್ಟೀಕರಿಸಿ, ಪುಷ್ಟೀಕರಿಸಿದವರು. ಈ ಮೂವರೂ ತ್ರಿವೇಣಿ ಸಂಗಮದಂತೆ. ಇಲ್ಲಿ ಶ್ರೀಮಾತೆಯವರು ‘ಸರಸ್ವತೀ’ ನದಿಯ ಪಾತ್ರ ವಹಿಸಿದ್ದಾರೆ, ಅವರು ಗುಪ್ತಗಾಮಿನಿಯಂತಿದ್ದಾರೆ. ರಾಮಕೃಷ್ಣರು ಪತ್ನಿ ಶಾರದಾದೇವಿಯವರನ್ನು ಕುರಿತು, ‘ಈ ಶಾರದೇ ಸಾಕ್ಷಾತ್ ಸರಸ್ವತೀ, ಜ್ಞಾನದಾಯಿನಿ. ಜಗತ್ತಿಗೆ ಬೆಳಕನ್ನು ನೀಡಲು ಬಂದಿದ್ದಾಳೆ. ಇವಳು ನನ್ನ ಶಕ್ತಿ’ ಎಂದಿದ್ದರೆ, ಸ್ವಾಮಿ ವಿವೇಕಾನಂದರು, ‘ನನಗೆ ತಂದೆಯ (ರಾಮಕೃಷ್ಣರ) ಕೃಪೆಗಿಂತ ತಾಯಿ(ಶಾರದಾದೇವಿ)ಯ ಕೃಪೆ ಲಕ್ಷಪಾಲು ಅಮೂಲ್ಯ’ ಎಂದಿದ್ದಾರೆ.

1897ರ ಮೇ 1 ರಂದು ಸ್ವಾಮಿ ವಿವೇಕಾನಂದರು ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದ ಸಮಯದಲ್ಲಿ ಹೀಗೆ ನುಡಿಯುತ್ತಾರೆ- ‘ಶ್ರೀಮಾತೆ ಶಾರದಾದೇವಿಯವರು ರಾಮಕೃಷ್ಣರ ಸಹಧರ್ವಿುಣಿ ಆಗಿರುವುದರಿಂದ ನಮ್ಮ ಗುರುಪತ್ನಿಯ ದೃಷ್ಟಿಯಿಂದ ಮಾತ್ರವೇ ಅವರನ್ನು ನಾವು ಗೌರವಿಸುತ್ತಿದ್ದೇವೆ ಎಂದುಕೊಂಡಿರೇನು? ಯಾವ ನಮ್ಮ ಸಂಘ ಆರಂಭಗೊಂಡು ನಡೆದುಕೊಂಡು ಹೋಗುತ್ತಿದೆಯೋ ಅದರ ರಕ್ಷಣೆ, ಪಾಲನೆಗಳು ಅವರಿಂದಲೇ ಆಗುತ್ತಿವೆ. ಅವರು ನಮ್ಮ ಸಂಘಜನನಿ…’ ಜಗದ್ವಿಖ್ಯಾತ ರಾಮಕೃಷ್ಣ ಮಹಾಸಂಘದ ಸಂಘಜನನಿ ಶಾರದಾದೇವಿಯವರು ವಿದ್ಯಾವಂತರಲ್ಲ, ಪ್ರಸಿದ್ಧ ಉಪನ್ಯಾಸಕರಲ್ಲ, ಆಧುನಿಕ ಪ್ರಪಂಚದಲ್ಲಿ ಪ್ರಚಲಿತವಾದ ‘Management Guru’ ಎಂಬ ಪಟ್ಟ ಅವರದ್ದಲ್ಲ! ಅತ್ಯಂತ ಲಜ್ಜಾಸ್ವಭಾವದ, ಸೂಕ್ಷ್ಮಮತಿಯಾದ ಅವರು ತಮ್ಮ ಸ್ಪಟಿಕಸದೃಶ ವ್ಯಕ್ತಿತ್ವದ ಮೂಲಕ, ಪರಮಪವಿತ್ರ ಜೀವನವಿಧಾನದ ಮೂಲಕ ಇಂದು ‘ಯುಗ ಪ್ರವರ್ತಕಿ’ ಎಂದೆನಿಸಿದ್ದಾರೆ. ಅವರ ಜೀವನದ ಅಧ್ಯಯನವೇ ನಮ್ಮ ಬದುಕಿಗೊಂದು ನಿಲುಗನ್ನಡಿ.

ಬದುಕಿನಲ್ಲಿ ನಮಗೆ ಎದುರಾಗುವ ಸವಾಲುಗಳು ಅವು ಆಧುನಿಕವೋ, ಪ್ರಾಚೀನವೋ ಅವುಗಳನ್ನು ನಿರ್ವಹಿಸಲು ಶುದ್ಧವ್ಯಕ್ತಿತ್ವದ ಹಾಗೂ ವಿವೇಕಯುಕ್ತವಾದ ನಡವಳಿಕೆಗಳ ಅಗತ್ಯತೆಗಳ ಬಗ್ಗೆ ಶಾರದಾಮಾತೆಯವರು ಬೆಳಕು ಚೆಲ್ಲುತ್ತಾರೆ. ಪ್ರಾಮಾಣಿಕವಾಗಿ ಕರ್ತವ್ಯಗಳನ್ನು ನಿರ್ವಹಿಸುವ ವ್ಯಕ್ತಿ ತನ್ನ ಬದುಕಿನಲ್ಲಿ ಎದುರಾಗುವ ‘ಚಿಂತೆ’ಗಳನ್ನು ‘ಚಿಂತನೆ’ಯಾಗಿ ರೂಪಾಂತರಗೊಳಿಸಿಕೊಳ್ಳಬಲ್ಲ. ‘ಕಾರ್ಯಶೀಲನಾದ ವ್ಯಕ್ತಿಯ ಬದುಕಿನಲ್ಲಿ ಬಡತನದ ಅಪಾಯವಿಲ್ಲ ಹಾಗೂ ನಿರಾಶೆಯ ಭಯವಿಲ್ಲ’ ಎಂದಿದ್ದಾರೆ ಶ್ರೀಮಾತೆ.

ಶಾರದಾದೇವಿಯವರು ಆದರ್ಶಪತ್ನಿಯಾಗಿ, ಗುರುವಾಗಿ ಹಾಗೂ ಮಾತೆಯಾಗಿ ಬೆಳಕು ಚೆಲ್ಲುತ್ತಾರೆ. ಇದು ಸುಲಭದ ಮಾತಲ್ಲ. ಜಗತ್ತಿನಲ್ಲಿ ಪತ್ನಿಯಾಗಿ ಯಶಸ್ವಿಯಾದವರು ಅದೆಷ್ಟೋ ಜನ! ಎರಡು ಹೇಳಿಕೆಗಳಲ್ಲಿ ಈ ಮಾತನ್ನು ವಿಮಶಿಸಲು ಓದುಗರಿಗೇ ಬಿಟ್ಟುಬಿಡುವೆ! ಫ್ರೆಂಚ್ ಗಾದೆಯೊಂದು ಹೀಗೆ ಹೇಳುತ್ತದೆ-‘ಸ್ತ್ರೀಯರ ಮುಖ್ಯವಾದ ಆಯುಧ ನಾಲಿಗೆ! ಅದನ್ನು ಅವರು ಎಂದಿಗೂ ತುಕ್ಕು ಹಿಡಿಯದಂತೆ ಎಚ್ಚರವಹಿಸುತ್ತಾರೆ!’ ಗಾಂಧಿ ಹೇಳುತ್ತಾರೆ, ‘ಎಲ್ಲ ಪುರುಷರು ತಮ್ಮ ಪತ್ನಿ ಸಾವಿತ್ರಿಯೇ ಆಗಬೇಕೆಂದು ಅಪೇಕ್ಷಿಸುತ್ತಾರೆ. ಆದರೆ ಅವರು ಬದುಕಿನಲ್ಲಿ ಸತ್ಯವಾನರಾಗಿದ್ದಾರೆಯೇ?’

ಆದರ್ಶಪತ್ನಿ: ಪತಿದೇವ ಶ್ರೀರಾಮಕೃಷ್ಣರು ಬದುಕಿನಲ್ಲಿ ಪರಿಪಾಲಿಸಿದ ಯಾವ ಆದರ್ಶಗಳನ್ನೂ ಶ್ರೀಮಾತೆಯವರು ನಿರ್ಲಕ್ಷಿಸಲಿಲ್ಲ. ಬದಲಾಗಿ ಅವುಗಳನ್ನು ಮತ್ತಷ್ಟು ಉದಾತ್ತೀಕರಿಸಿದರು. ಶ್ರೀಮಂತನೊಬ್ಬ ರಾಮಕೃಷ್ಣರ ಜೀವನ ನಿರ್ವಹಣೆಗೆ ಹತ್ತು ಸಹಸ್ರ ರೂಪಾಯಿಗಳನ್ನು ಕಾಣಿಕೆಯಾಗಿ ನೀಡಬಂದಾಗ ಅವರು ಅದನ್ನು ತಿರಸ್ಕರಿಸಿ, ‘ಶಾರದೆ ಬೇಕಿದ್ದರೆ ನೀನು ನೀಡುವ ಹಣವನ್ನು ಸ್ವೀಕರಿಸಲಿ’ ಎಂದರು. ಭಕ್ತನು ಈ ವಿಷಯವನ್ನು ಶ್ರೀಮಾತೆಗೆ ತಿಳಿಸಿದಾಗ ಅವರೆನ್ನುತ್ತಾರೆ: ‘ಅದು ಹೇಗೆ ಸಾಧ್ಯವಪ್ಪಾ? ಯಾವ ಆದರ್ಶದ ವಿಷಯದಲ್ಲಿ ಜಗತ್ತು ನನ್ನ ಪತಿದೇವರನ್ನು ಗೌರವಿಸುತ್ತಿದೆಯೋ ಆ ಆದರ್ಶಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದಷ್ಟೇ ನನ್ನ ಕರ್ತವ್ಯ!’ ಎಂದರು.

ಶಾರದಾದೇವಿಯವರ ಜೀವನವು ಸ್ತ್ರೀಸಹಜವಾದ ಗುಣಗಳ ಆಧಾರವಾದ ಮೌಲ್ಯಗಳಿಂದ ಕೂಡಿತ್ತು. ಅದು ಲೈಂಗಿಕವಾದ ಅಥವಾ ಅದರ ಆಕರ್ಷಣೆಗಳಿಗೆ ಸಂಬಂಧಪಟ್ಟ ಪ್ರಭೇದಗಳನ್ನು ಮೀರಿತ್ತು. ಇಂದಿನ ಸಮಾಜದಲ್ಲಿ ಸೌಂದರ್ಯವು ಅಶ್ಲೀಲತೆಯೋ ಎಂಬಂತೆ ಬಿಂಬಿತವಾಗುತ್ತಿರುವುದು ಆಘಾತಕಾರಿ ಸಂಗತಿ. ಎಲ್ಲ ಕಲೆಗಳಿಗಿಂತ ನಡವಳಿಕೆಯ ಕಲೆ ಅತ್ಯಂತ ಸುಂದರವಾದದ್ದು. ಉತ್ತಮ ನಡವಳಿಕೆಯ ಕಲೆ ಉತ್ತಮವಾದುದ್ದನ್ನೇ ಸೃಷ್ಟಿಸುತ್ತದೆ. ಪ್ರಪಂಚದಲ್ಲಿ ಎಲ್ಲೆಡೆ ಚಲಾವಣೆಯಲ್ಲಿರುವ ಮೌಲ್ಯ ‘ಸದ್ಗುಣ’. ಒಳ್ಳೆಯತನಕ್ಕೆ ಎಂದೂ ಒಂಟಿತನವಿಲ್ಲ. ನಾವು ಒಳ್ಳೆಯವರಾಗದೇ ಇತರರನ್ನು ಒಳ್ಳೆಯವರಾಗಿಸಲು ಸಾಧ್ಯವೇ ಇಲ್ಲ! ಆದ್ದರಿಂದ ‘ನಮ್ಮ ನಡವಳಿಕೆ ಮನೋವಿಕಾಸಕ್ಕೆ ಪೂರಕವಾಗಿರಬೇಕೇ ಹೊರತು ಮನೋವಿಕಾರಕ್ಕೆ ಅಲ್ಲ’ ಎಂದು ಶ್ರೀಮಾತೆ ಎಚ್ಚರಿಸಿದ್ದಾರೆ.

ಆದರ್ಶ ಮಾತೆ: ತಮ್ಮ ಬಳಿಗೆ ಬಂದ ಸ್ತ್ರೀಭಕ್ತರಿಗೆ ಶ್ರೀಮಾತೆ ಹೇಳುತ್ತಿದ್ದ ಮಾತುಗಳು ಮನೋಜ್ಞ! ‘ಸಮಾಜದಲ್ಲಿ ಮಂಗಳಕರವಾದ, ಶಾಂತಿಮಯವಾದ ಹಾಗೂ ಉಲ್ಲಾಸಕರವಾದ ವಾತಾವರಣವನ್ನು ನಿರ್ವಿುಸಬೇಕಾದವರು ಸ್ತ್ರೀಯರೇ ಆಗಿದ್ದಾರೆ. ಸ್ತ್ರೀಯರು ಸಮಾಜದ ಪ್ರಮುಖ ಅಂಗ ಹಾಗೂ ಶೋಭೆಯೂ ಆಗಿದ್ದಾರೆ. ಹೂವಿನ ಆಕೃತಿ ಎಷ್ಟೇ ಸುಂದರವಾಗಿದ್ದರೂ, ಬಣ್ಣ ಎಷ್ಟೇ ಮೋಹಕವಾಗಿದ್ದರೂ ಅದರಲ್ಲಿ ಸುವಾಸನೆ ಇಲ್ಲದಿದ್ದರೆ ಹೂವಿಗೆ ವಿಶೇಷ ಮಹತ್ವವಿರದು. ಅಂತೆಯೇ ಸಂಸಾರ-ಸಮಾಜ ಎನ್ನುವುದು ಸಮೃದ್ಧಿಯಿಂದ ಇರಬೇಕಾದರೆ ಅಲ್ಲಿ ಗುಣಶಾಲಿಗಳಾದ ಸ್ತ್ರೀಯರು ಅತ್ಯವಶ್ಯಕ. ಅವರು ತಮ್ಮ ಮಾತುಗಳು ಅಗ್ಗವಾಗದಂತೆ ಎಚ್ಚರವಹಿಸಬೇಕು’ ಎಂದಿದ್ದಾರೆ.

ಜನರಲ್ಲಿ ಅನ್ಯೋನ್ಯತೆ ಹಾಗೂ ಸಹಬಾಳ್ವೆಯ ಅವಶ್ಯಕತೆ ಕುರಿತು ಶ್ರೀಮಾತೆ ಹೇಳಿರುವುದು ಹೀಗೆ-‘ಕಂಬಳಿಯ ಪ್ರತಿಯೊಂದು ದಾರವನ್ನು ಸರಿ ಇಲ್ಲವೆಂದು ನಿಮೂಲನ ಮಾಡುತ್ತ ಹೋದರೆ ಕಂಬಳಿಯೇ ಕರಗಿಹೋಗುತ್ತದೆ’. ಶ್ರೀಮಾತೆಯವರ ಈ ಅದ್ಭುತ ಮಾತಿನಲ್ಲಿ ಆಧುನಿಕ ಮನೋವಿಜ್ಞಾನವಿದೆ. ಇಂದು ಜಗತ್ತಿನಲ್ಲಿ ಮನುಷ್ಯ ತನ್ನನ್ನು ಮಾತ್ರ ತಾನು ಪ್ರೀತಿಸುತ್ತಿದ್ದಾನೆ. ಇದರಿಂದ ಅವನು ಏಕಾಂಗಿಯಾಗುತ್ತಿದ್ದಾನೆ. ಇತರರನ್ನು ಸಂಶಯಾಸ್ಪದವಾಗಿ ಗಮನಿಸುತ್ತ ಹೋದಂತೆ ಅವನನ್ನು ಒಂಟಿತನ ಕಾಡುತ್ತದೆ. ಇದು ಖಿನ್ನತೆಗೆ ದಾರಿಮಾಡಿಕೊಡುತ್ತಿದೆ. ಇದರ ಘೊರ ಪರಿಣಾಮವೇ ನಮ್ಮನ್ನೇ ನಾವು ನಂಬದ ಹಂತವನ್ನು ಮುಟ್ಟಿ ಕಡೆಗೆ ಆತ್ಮಹತ್ಯೆಗೆ ಶರಣಾಗುವ ಸ್ಥಿತಿ ಮೂಡುತ್ತಿದೆ!

ಆದರ್ಶ ಗುರು: ಮನುಷ್ಯನು ಪವಿತ್ರ ಜೀವನ ನಡೆಸುವುದರ ಅವಶ್ಯಕತೆಯನ್ನು ಶ್ರೀಮಾತೆಯವರು ಒತ್ತಿ ಹೇಳಿದ್ದಾರೆ. ‘‘ನಮ್ಮ ಮಾತು ಮತ್ತು ಕೃತಿಗಳು ನಮ್ಮ ಆಲೋಚನೆಗಳನ್ನು ಅವಲಂಬಿಸಿರುವುದರಿಂದ ‘ಭಾವಶುದ್ಧಿ’ ಅತ್ಯವಶ್ಯಕ ಎನ್ನುತ್ತಾರೆ. ನಮ್ಮ ಮನಸ್ಸು ಸ್ವಚ್ಛವಾದಂತೆಲ್ಲ ಅರ್ಥಹೀನವಾದ ಹಾಗೂ ಹರಟೆಯ ಮಾತುಗಳು ಕ್ಷೀಣಿಸುತ್ತ ‘ವಾಕ್​ಶುದ್ಧಿ’ಯನ್ನು ಗಳಿಸಿಕೊಂಡಂತಾಗುತ್ತದೆ ಮತ್ತು ಕೌಶಲ, ದಕ್ಷತೆಯ ವೃದ್ಧಿ, ಶಿಸ್ತಿನಿಂದ ಚಂಚಲತೆಯ ನಿಮೂಲನೆ ಹಾಗೂ ಉಪಯುಕ್ತ ಕಾರ್ಯಗಳ ನಿರ್ವಹಣೆಯಿಂದ ಧನ್ಯತೆ ಮತ್ತು ಸಂತೃಪ್ತಿಗಳು ಪ್ರಾಪ್ತವಾಗಿ ನಾವು ‘ಕ್ರಿಯಾಶುದ್ಧಿ’ ಸಾಧಿಸಿದಂತಾಗುತ್ತದೆ’ ಎಂದಿದ್ದಾರೆ.

ಶ್ರೀಮಾತೆಯವರ ಅತ್ಯುನ್ನತ ಹಿತೋಕ್ತಿ ಹೀಗಿದೆ- ‘ಮಗು, ನಿನಗೊಂದು ಮಾತು ಹೇಳುತ್ತೇನೆ ಕೇಳು; ನಿನಗೇನಾದರೂ ಶಾಂತಿ ಬೇಕಿದ್ದರೆ ಬೇರೆಯವರಲ್ಲಿ ದೋಷ ಕಾಣಬೇಡ. ಒಂದು ವೇಳೆ ದೋಷವನ್ನು ಕಾಣುವುದಾದರೆ ನಿನ್ನ ದೋಷವನ್ನೇ ನೋಡಿಕೋ. ಇಡೀ ಜಗತ್ತನ್ನೇ ನಿನ್ನದನ್ನಾಗಿ ಮಾಡಿಕೊಳ್ಳುವುದಕ್ಕೆ ಕಲಿತುಕೋ. ನೋಡು, ಪರಕೀಯರು ಎಂಬುವರು ಯಾರೂ ಇಲ್ಲ. ಈ ಇಡೀ ಜಗತ್ತೇ ನಿನ್ನದು’.

‘ಆತ್ಮವತ್ ಸರ್ವಭೂತೇಷು’ ಎಂದಿದೆ ಋಷಿವಾಣಿ. ಶ್ರೀಮಾತೆಯವರು ತಮ್ಮ ಕುಟುಂಬವನ್ನು ‘ವಿಶ್ವಕುಟುಂಬ’ವಾಗಿಸಿದ್ದಾರೆ. ನಮ್ಮನ್ನು ‘ವಿಶ್ವಪ್ರಜೆ’ಯಾಗಿಸಿದ್ದಾರೆ! ಜಗತ್ತಿನ ಶುದ್ಧೀಕರಣ ಕಾರ್ಯವನ್ನು ನಮ್ಮ ನಮ್ಮ ವೈಯಕ್ತಿಕ ಶುದ್ಧೀಕರಣ ಪ್ರಕ್ರಿಯೆಯಿಂದಲೇ ಪ್ರಾರಂಭಿಸಬೇಕೆನ್ನುತ್ತಾರೆ!

ನಿಜ! ಜಗತ್ತು ಸದ್ಗುಣಿಯಲ್ಲ! ಆದರೆ ಅದಕ್ಕೆ ‘ಸದ್ಗುಣ’ವನ್ನು ಗುರ್ತಿಸದೆ ದಾರಿಯಿಲ್ಲ, ಉಳಿವಿಲ್ಲ. ಶ್ರೀಮಾತೆ ತನ್ನ ಮಾನವ ಸಂತಾನಕ್ಕೆ ನೀಡಿದ ಬೋಧನೆ ಸಾಧನೆಯ ಹಿನ್ನೆಲೆಯಿಂದ ಮೂಡಿಬಂದಿದ್ದು. ಅವರೇ ಹೇಳುತ್ತಾರೆ: ‘‘ನನ್ನ ಜೀವನವನ್ನು ಆದರ್ಶಮಯವನ್ನಾಗಿ ರೂಪಿಸಿಕೊಳ್ಳುವುದಕ್ಕೆ ಏನೇನು ಬೇಕೋ ಅದಕ್ಕಿಂತ ಹೆಚ್ಚೇ ಮಾಡಿದ್ದೇನೆ’.

ಆದ್ದರಿಂದಲೇ ಕುವೆಂಪು ಹೇಳಿದ್ದು-

‘‘ನಿನ್ನ ನಾಮವೆ ಜನನಿ ಸುರನದಿಯ ತೀರ್ಥ

ಎಲೆ ತಾಯೆ ನೀನೇ ಪವಿತ್ರತಮ ತೀರ್ಥ

ನಿನ್ನ ಪೂಜೆಯೆ ಭಕ್ತಿ ಸಾಧನ ವಿರಕ್ತಿ

ನಿನ್ನ ನೆನೆವುದೆ ನಮಗೆ ಗುರು ತಪಃಶಕ್ತಿ’’.

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

Leave a Reply

Your email address will not be published. Required fields are marked *