ಹಕ್ಕುಗಳಿಗೆ ಕೈ ಚಾಚೋಣವೇ, ಕರ್ತವ್ಯಗಳ ಕೈ ಹಿಡಿಯೋಣವೇ?

| ಸ್ವಾಮಿ ವೀರೇಶಾನಂದ ಸರಸ್ವತೀ

ಮಾನವನ ಜೀವನಕ್ಕೆ ಮಹತ್ತರ ಅರ್ಥವಿದೆ. ಗ್ರಾಮ್ಯ ಭಾಷೆಯಲ್ಲಿ ಹೇಳುವುದಾದರೆ ಜೀವನಕ್ಕೆ ಗೊತ್ತುಗುರಿ ಇದೆ. ಬದುಕಿನಲ್ಲಿ ‘ನಾನು’ ನಾನಾಗಿಯೇ ವಿಕಾಸ ಹೊಂದಬೇಕಾದದ್ದು ಯೋಗ್ಯವಾದ ಕ್ರಮವೆಂದೇ ಪರಿಗಣಿತವಾದರೂ ನನ್ನ ಆಸೆಗಳು, ನನ್ನ ಆದರ್ಶಗಳು, ನನ್ನ ನಿಲುವುಗಳು… ಹೀಗೆ ಹಲವಾರು ವಿಚಾರಗಳು ಜೀವನಪಥದಲ್ಲಿ ಎದುರಾಗುವುದು ದಿಟ.

ಮಾನವನ ಆಸೆಗಳಲ್ಲಿ ಸಾಮಾನ್ಯವಾದವು ಹಾಗೂ ವಿಶೇಷವಾದವು ಎಂಬ ವಿಂಗಡಣೆಗೂ ಅವಕಾಶವಿದೆ. ‘ಜೀವನದಲ್ಲಿ ಸೋಲುವುದು ಅವಮಾನವಲ್ಲ; ಸಣ್ಣಗುರಿ ಇರಿಸಿಕೊಳ್ಳುವುದು ಅಪರಾಧ’ ಎಂಬ ಸಾರ್ವಕಾಲಿಕ ಸತ್ಯಕ್ಕೆ ಜಗತ್ತು ಮಣಿದಿದೆ. ಜೀವನದಲ್ಲಿ ಗುರಿ ಅತ್ಯವಶ್ಯಕವಾದದ್ದು. ಅದನ್ನು ಮುಟ್ಟಲು ಯೋಗ್ಯದಾರಿಯನ್ನು ನಾವು ಪತ್ತೆಹಚ್ಚಬೇಕು. ಸ್ವಾಮಿ ವಿವೇಕಾನಂದರು ಹೇಳುವಂತೆ ಗುರಿಗಿಂತಲೂ ‘ದಾರಿ’ ಮುಖ್ಯವೆನಿಸುತ್ತದೆ.

ಗುರಿಯತ್ತ ಸಾಗುವುದು ನಮ್ಮ ಸದಿಚ್ಛೆ ಎಂದೆನಿಸಿದರೂ ನಾವು ಕ್ರಮಿಸುವ ದಾರಿ ಹಲವು ನಿಯಮಗಳಿಗೆ ಒಳಪಡಬೇಕಾಗುತ್ತದೆ. ನಿಯಮಗಳು ಹೊರನೋಟಕ್ಕೆ ನಮ್ಮನ್ನು ನಿಯಂತ್ರಿಸುತ್ತವೆ ಎಂದೆನಿಸಿದರೂ ಈ ನಿಯಂತ್ರಣವು ನಮ್ಮ ಸಾಮರ್ಥ್ಯಗಳನ್ನು ನಿರರ್ಥಕವಾಗದಂತೆ ಎಚ್ಚರವಹಿಸುತ್ತದೆ. ನಮ್ಮ ಶಕ್ತಿ-ಸಾಮರ್ಥ್ಯಗಳು ದುರುಪಯೋಗ ಆಗಲೂಬಾರದು ಮತ್ತು ನಮ್ಮನ್ನು ದಾರಿ ತಪ್ಪಿಸಲೂಬಾರದು. ಜೀವನದ ಗುರಿಯೆಡೆಗೆ ಸಾಗುವಾಗ ನಮ್ಮ ಹೆಜ್ಜೆಗಳು ನೈತಿಕವಾಗಿರಬೇಕು ಮತ್ತು ವೇಗವು ಸುರಕ್ಷಿತವಾಗಿರಬೇಕು.

ಜೀವನದ ಪಯಣದಲ್ಲಿ ನಮಗೆ ಸ್ಥೂಲ ವಿಚಾರಗಳು ಎದ್ದುಕಾಣಬಹುದಾದರೂ ಸೂಕ್ಷ್ಮ ವಿಚಾರಗಳನ್ನು ನಿರ್ಲಕ್ಷಿಸಬಾರದು. ಸೂಕ್ಷ್ಮ ವಿಚಾರಗಳನ್ನು ಗಮನಿಸುವುದೇ ವೈಜ್ಞಾನಿಕ ಮನೋಭಾವ. ಯಾವುದೂ ದಿಢೀರ್ ಎಂದು ಘಟಿಸಲೆಂದು ಊಹಿಸಬಾರದು. ಪ್ರತಿಯೊಂದಕ್ಕೂ ಪ್ರಯತ್ನವೇ ಪ್ರಮುಖವಾಗುತ್ತದೆ. ಅಲ್ಲದೆ ‘ಅರ್ಹತೆಗೆ ತಕ್ಕ ಫಲ’ ಎಂಬ ಮಾತು ಸುಳ್ಳಲ್ಲ. ಮಾನವನ ಉದ್ಧಾರಕ್ಕೂ ಮನಸ್ಸೇ ಕಾರಣ, ಪತನಕ್ಕೂ ಮನಸ್ಸೇ ಕಾರಣ ಎಂದಿದೆ ಭಗವದ್ಗೀತೆ. ಮನಸ್ಸು ಅತಿಮುಖ್ಯ ಎಂಬುದು ಆಧುನಿಕ ವಿಜ್ಞಾನದ ಅಭಿಮತವೂ ಆಗಿದೆ.

ಯೋಗ್ಯ ವ್ಯಕ್ತಿಗಳ ಮಾರ್ಗದರ್ಶನ ಅತ್ಯಗತ್ಯ. ಅಧ್ಯಯನ ಹಾಗೂ ಅನುಸರಣೆ ಜೀವನಕ್ಕೆ ಭವ್ಯತೆಯನ್ನು ತರುತ್ತವೆ. ಆದರೆ ಯೋಗ್ಯವಾದುದನ್ನು ಯೋಗ್ಯ ರೀತಿಯಲ್ಲಿ ಬಳಸುವುದೂ ಸವಾಲೇ ಸರಿ! ಇಲ್ಲದಿದ್ದರೆ ಕರ್ತವ್ಯಪ್ರಜ್ಞೆ ಜಾಗೃತವಾಗದು. ಆಗ ನಿಷ್ಕಿ ›ಯತೆ ತಾಂಡವವಾಡಲು ಪ್ರಾರಂಭಿಸುತ್ತದೆ!

ಜೀವನವು ಜನನ-ಮರಣಗಳ ನಡುವಿನ, ವಿಕಸನ ಹಾಗೂ ಸಂಕುಚಿತತೆಗಳ ನಡುವಿನ ಹೋರಾಟ. ಜೀವನವು ಸುಲಭವಾದುದಲ್ಲ, ಆರಾಮವಾದುದಂತೂ ಅಲ್ಲವೇ ಅಲ್ಲ. ಅದೊಂದು ಅನ್ವೇಷಣೆ.

ಜೀವನವು ಅನ್ವೇಷಣೆ ಎಂದಾದ ಮೇಲೆ ಮಾನವನ ಹೃನ್ಮನದಲ್ಲಿ ಸಾಹಸಪ್ರವೃತ್ತಿ ಅತ್ಯಗತ್ಯ. ಭಯದ ಹಿಡಿತದಲ್ಲಿ ಮಾನವನು ಸುಖವಾಗಿರಲಾರ. ಭೋಗಲಾಲಸೆ, ಆರಾಮಪ್ರಿಯತೆ, ಸ್ವಾರ್ಥಪರತೆ ಇವು ಇರುವೆಡೆ ಕ್ರಿಯಾಶೀಲತೆ ಇರಲು ಸಾಧ್ಯವೇ ಇಲ್ಲ. ‘ಯಸ್ಯ ಛಾಯಾ ಅಮೃತಂ, ಯಸ್ಯ ಮೃತ್ಯುಃ’ ಎಂದಿದೆ ಋಗ್ವೇದ. ಅಂದರೆ ಯಾವುದರ ನೆರಳು ಜನನ, ಮರಣಗಳೋ ಅದೇ ಸತ್ಯ. ಸಾವನ್ನು ಎದುರಿಸಲು ಸನ್ನದ್ಧರಾದಾಗ ಮಾತ್ರ ಜೀವನವನ್ನು ಸಮೃದ್ಧಿಯಾಗಿಸಿಕೊಳ್ಳಬಹುದು.

ಜೀವನದಲ್ಲಿ ಸೂಕ್ಷ್ಮತೆಯ ಪಾತ್ರವೇನು?: ನಾವು ನಿರ್ವಹಿಸುವ ಕಾರ್ಯವು ಕೇವಲ ಉದರ ಪೋಷಣೆಗಷ್ಟೇ ಸೀಮಿತವಲ್ಲ. ಒಳ್ಳೆಯದನ್ನು ಮಾಡುವ ಘಳಿಗೆ ಬದುಕಿನ ಅಮೃತಘಳಿಗೆಯೇ ಸರಿ. ಒಳ್ಳೆಯದು ಒಳ್ಳೆಯದನ್ನು ವೃದ್ಧಿಸುತ್ತದೆ. ಉತ್ತಮ ಉಪದೇಶಕ್ಕೆ ತಲೆಬಾಗುವುದರಿಂದ ಸ್ವಂತ ಯೋಗ್ಯತೆ ವೃದ್ಧಿಸುತ್ತದೆ. ನಮ್ಮ ಮಾನಸಿಕ ಹಿರಿತನವು ಎದ್ದುಕಾಣುತ್ತದೆ.

ಒಳ್ಳೆಯದರ ಆಳಕ್ಕೆ ಇಳಿದಷ್ಟೂ ಅದು ನಮ್ಮ ಸ್ವಭಾವವೇ ಆಗಿಬಿಡುತ್ತದೆ. ಪ್ರಪಂಚದ ಎಲ್ಲೆಡೆ ಚಲಾವಣೆಯಲ್ಲಿರುವ ಮೌಲ್ಯ ‘ಸದ್ಗುಣ’. ಒಳ್ಳೆಯದಕ್ಕೆ ಎಂದೆಂದಿಗೂ ಒಂಟಿತನವಿಲ್ಲ.

‘ಸೋಮಾರಿತನಕ್ಕಿಂತ ಕೆಲಸ ನಿರ್ವಹಿಸುತ್ತ ಸವೆಯುವುದು ಲೇಸು’ ಎಂದಿದ್ದಾನೆ ಸರ್ವಜ್ಞ; ‘ತನ್ನ ಕರ್ತವ್ಯದ ಬಗ್ಗೆ ಪ್ರಾಮಾಣಿಕವಾಗಿ ಚಿಂತಿಸುವ ಮಾನವನು ತನ್ನ ಬದುಕಿನ ಮೆಟ್ಟಿಲುಗಳನ್ನು ನಿರ್ವಿುಸಿದಂತೆ’ ಎಂದಿದ್ದಾರೆ ಬಸವಣ್ಣನವರು; ‘ಕೆಲಸವನ್ನು ಕಲಿಸಿದರಷ್ಟೇ ಸಾಲದು, ಪ್ರೀತಿಯಿಂದ ನಿರ್ವಹಿಸುವುದು ಅತ್ಯವಶ್ಯಕ’ ಎಂಬುದು ಬಿ.ಆರ್.ಅಂಬೇಡ್ಕರ್ ಹಿತೋಕ್ತಿ. ನಾವು ಪಡೆದ ತರಬೇತಿ ನಮ್ಮ ಕೆಲಸದಲ್ಲಿ ಪ್ರತಿಫಲನಗೊಳ್ಳುತ್ತದೆ ಅಲ್ಲವೇ?

ಕರ್ತವ್ಯ ನಿರ್ವಹಣೆ ನಮಗೆ ಶ್ರಮಸಂಸ್ಕೃತಿಯನ್ನು ಪರಿಚಯಿಸುತ್ತದೆ. ಕೆಲಸವು ಕೆಲಸವನ್ನು ಕಲಿಸುತ್ತದೆ. ಕೆಲಸವನ್ನು ಪ್ರೀತಿಯಿಂದ ನಿರ್ವಹಿಸುವಂತಾದರೆ ನಿರಾಶೆ ತೊಲಗುತ್ತದೆ, ಬಡತನವೂ ದೂರ ಸರಿಯುತ್ತದೆ. ಮುಖದ ವರ್ಚಸ್ಸು ವರ್ಧಿಸುತ್ತದೆ. ದುಡಿದು ಉಣ್ಣುವುದು ಬಡತನಕ್ಕೆ ಮದ್ದು. ಮಾನವನ ಘನತೆ ನಿಜಕ್ಕೂ ಶ್ರಮವನ್ನೇ ಅವಲಂಬಿಸಿದೆ. ಕಷ್ಟಪಟ್ಟು ದುಡಿಯುವುದು ಅವಮಾನಕಾರಿ ಅಲ್ಲ. ಕೆಲಸಕ್ಕಾಗಿ ಮೀಸಲಿಟ್ಟ ಕಾಲ ಎಂದೂ ವ್ಯರ್ಥವಾಗುವುದಿಲ್ಲ. ಕಾರ್ಯಮಾಡುತ್ತ ಹೋದಂತೆ ಕಾರ್ಯದಕ್ಷತೆ ವೃದ್ಧಿಸುತ್ತದೆ! ಪರಿಶ್ರಮದ ಮೂಲಕ ಮಾನವನು ತನ್ನ ಭಾಗ್ಯವನ್ನು ಬದಲಿಸಿಕೊಳ್ಳಬಲ್ಲ!

ಯಶಸ್ಸಿನ ಗುಟ್ಟು ಅಡಗಿರುವುದು ಪ್ರಯತ್ನದಲ್ಲಿ: ಕರ್ತವ್ಯಪ್ರಜ್ಞೆ, ಸಾಧಿಸುವ ಛಲ ಮತ್ತು ನಿರಂತರ ಪ್ರಯತ್ನಗಳಿಂದ ಮಾನವನು ಯಶಸ್ವಿಯಾಗುತ್ತಾನೆ. ಸೋಲುವುದು ಅಪರಾಧವಲ್ಲ; ಸಣ್ಣಗುರಿ ಇರಿಸಿಕೊಳ್ಳುವುದು ಮಹಾಪರಾಧ, ಯಶಸ್ಸನ್ನು ಏಕಾಏಕಿ ಸಾಧಿಸಲಾಗದು; ಹಂತಹಂತವಾಗಿ ಪಡೆಯಬೇಕು! ‘ಬಲವಾದ ನೂರು ಕೈಗಳಿಗಿಂತ ಚುರುಕಾದ ಒಂದು ಮಿದುಳು ಶ್ರೇಷ್ಠ’ ಎಂದಿದ್ದಾನೆ ಟಾಲ್​ಸ್ಟಾಯ್.

ಕೆಲಸಕ್ಕೆ ಆಧ್ಯಾತ್ಮಿಕ ದೃಷ್ಟಿಕೋನ ಬೇಕು. ಶ್ರೀಮಾತೆ ಶಾರದಾದೇವಿ ಹೇಳುತ್ತಾರೆ- ‘ಎಲ್ಲವೂ ಭಗವಂತನ ಇಚ್ಛೆಗೆ ಅನುಸಾರವಾಗಿಯೇ ನಡೆಯುತ್ತದೆ. ಆದರೂ ಮನುಷ್ಯನು ಕೂಡ ಸಹಕರಿಸಬೇಕು. ಮನುಷ್ಯ ಪ್ರಯತ್ನವನ್ನು ಮಾಡಲೇಬೇಕು. ಏಕೆಂದರೆ ಭಗವಂತನ ಇಚ್ಛೆ ವ್ಯಕ್ತಗೊಳ್ಳುವುದು ಮನುಷ್ಯ ಪ್ರಯತ್ನದ ಮೂಲಕ’. ‘ಪ್ರಾಜ್ಞಸ್ಯ ಮೂರ್ಖಸ್ಯ ಚ ಕಾರ್ಯಯೋಗೇ ಸಮತ್ವಂ ಅಭ್ಯೇತಿ ತನು ನ ಬುದ್ಧಿಃ’- ಅಂದರೆ, ಕಾರ್ಯಮಗ್ನರಾಗಿರುವ ಒಬ್ಬ ವಿವೇಕಿ ಹಾಗೂ ಒಬ್ಬ ಮೂರ್ಖ ನೋಡುವುದಕ್ಕೆ ಒಂದೇ ತರಹ ಕಾಣಿಸಿದರೂ, ಮನಸ್ಸುಗಳಲ್ಲಿ ಅವರು ಬೇರೆ ಬೇರೆಯಾಗಿರುತ್ತಾರೆ.

ಮನಸ್ಸಿನ ಸ್ಥಾನ: ಮಹತ್ತಾದ ಮನಸ್ಸಿನಿಂದ ನಿರ್ವಹಿಸಿದ ಕಾರ್ಯವು ಮಹತ್ವ ಪಡೆಯುತ್ತದೆ. ಅಂತೆಯೇ ಅಲ್ಪತನದ ಮನಸ್ಸಿನಿಂದ ನಿರ್ವಹಿಸಿದ ಕಾರ್ಯವು ಅಲ್ಪವಾಗುತ್ತದೆ. ಕೆಲಸವೇ ಎಂದಿಗೂ ಮಹತ್ತಾದುದಲ್ಲವೆಂದು ನಾವು ತಿಳಿದಿರಬೇಕು. ಕೆಲಸವನ್ನು ಮಹತ್ತಾಗಿಸುವುದು ಅದರ ಹಿಂದಿರುವ ಮನಸ್ಸು! ಹೆತ್ತ ತಾಯಿ ಮಾಡುವ ಅಡುಗೆಗೂ, ಸಂಬಳ ಸ್ವೀಕರಿಸುವ ಅಡುಗೆಯವನು ತಯಾರಿಸಿದ ಅಡುಗೆಗೂ ಅಧಿಕ ವ್ಯತ್ಯಾಸವಿದೆ! ಅಡುಗೆ ಒಂದೇ ಆದರೂ ಅದನ್ನು ತಯಾರಿಸಿದ ಮನಸ್ಸುಗಳು ವಿಭಿನ್ನವಲ್ಲವೇ!

ಕರ್ಮಯೋಗವು ನಮ್ಮ ಮನಸ್ಸನ್ನು ಶ್ರೀಮಂತಗೊಳಿಸಿಕೊಳ್ಳುವ ಅದ್ಭುತ ಕಲೆಯ ಬಗ್ಗೆ ಬೆಳಕು ಚೆಲ್ಲುತ್ತದೆ. ಮನಸ್ಸನ್ನು ಶ್ರೀಮಂತಗೊಳಿಸಿಕೊಳ್ಳಬೇಕಾದ ಅಗತ್ಯ ಇದೆ. ಮನಸ್ಸನ್ನು ತಿದ್ದಿಕೊಳ್ಳುವುದು, ಶುದ್ಧಗೊಳಿಸಿಕೊಳ್ಳುವುದು, ವಿಶಾಲವಾಗಿಸಿಕೊಳ್ಳುವುದು ತನ್ಮೂಲಕ ಅಪರಿಮಿತವಾಗಿಸಿಕೊಳ್ಳುವುದೇ ಜೀವನದ ಉದ್ದೇಶ. ನಾವು ನಿರ್ವಹಿಸುವ ಕೆಲಸ ನಮಗೆ ಕೇವಲ ಲಾಭ ಅರ್ಥಾತ್ ವಸ್ತುರೂಪದ ಲಾಭದ ಗಳಿಕೆಗಷ್ಟೇ ಸೀಮಿತವಾಗಬಾರದು. ಅದು ನಮ್ಮನ್ನು ತರಬೇತಿ ಹೊಂದುವಂತೆ ಹಾಗೂ ಪರಿಣತಿ ಸಾಧಿಸುವಂತೆ ಮಾಡುವ ಶಿಕ್ಷಣಕೇಂದ್ರವೂ ಆಗುತ್ತದೆ.

ಸೂಕ್ಷ್ಮವಾಗಿ ಆಲೋಚಿಸುವುದಾದರೆ ನಾವು ನಿರ್ವಹಿಸುವ ಕೆಲಸವೇ ವಿದ್ಯಾಕೇಂದ್ರವಾಗಿರುತ್ತದೆ. ವಿದ್ಯಾಭ್ಯಾಸವನ್ನು ಕೇವಲ ಪುಸ್ತಕಗಳನ್ನೋದುವ ಕಾರ್ಯಕ್ಕೆ ಮಾತ್ರ ಸೀಮಿತವಾಗಿಸಿಕೊಂಡಿರುವ ನಮಗೆ ನಿಜಕ್ಕೂ ಅರಿವಾಗಬೇಕಾದ ಸತ್ಯಸಂಗತಿ ಎಂದರೆ ಕೆಲಸವನ್ನು ಯೋಗ್ಯರೀತಿಯಲ್ಲಿ ನಿರ್ವಹಿಸುವುದರಿಂದ ನಮ್ಮ ಮಾನವೀಯ ಸಂಬಂಧಗಳು ವೃದ್ಧಿಸುತ್ತವೆ, ನಾವು ಸಮಾಜದ ಎಲ್ಲರಿಗೂ ಸೇರಿದವರೆಂಬ ವಿಶಾಲ ಭಾವನೆ ಸ್ಪುರಣೆಗೊಳ್ಳುತ್ತದೆ, ನಮ್ಮಲ್ಲಿ ಅಡಗಿರುವ ಎಲ್ಲ ಸುಪ್ತಶಕ್ತಿಗಳ ಯೋಗ್ಯ ಅಭಿವ್ಯಕ್ತತೆಗೆ ದಾರಿಮಾಡಿಕೊಡುತ್ತದೆ.

ನಮ್ಮ ಜೀವನದ ಪರಿಸ್ಥಿತಿಯೇ ನಮಗೆ ಬಂದೊದಗಿರುವ ವಿದ್ಯಾಭ್ಯಾಸದ ಸನ್ನಿವೇಶ ಎಂದೇ ಭಾವಿಸಬೇಕು. ಅದನ್ನು ಭೌತಿಕ, ಬೌದ್ಧಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕವಾಗಿ ವಿಶ್ಲೇಷಿಸಬೇಕು. ಜೀವನದ ಪಯಣ ಹಾಗೂ ಕರ್ತವ್ಯ ನಿರ್ವಹಣಾ ಪ್ರಕ್ರಿಯೆಗಳು ಜತೆಜತೆಯಾಗಿ ಸಾಗಿದಾಗ ಬದುಕು ನಳನಳಿಸುತ್ತದೆ. ಪರಿಸ್ಥಿತಿಯನ್ನು ನಾವೇ ನಿರ್ವಹಿಸಬೇಕೇ ಹೊರತು

ಪರಿಸ್ಥಿತಿ ನಮ್ಮನ್ನು ನಿರ್ವಹಿಸಲು ಎಡೆಮಾಡಿಕೊಡಬಾರದು. ಜೀವಿಯು ಪರಿಸ್ಥಿತಿಯ ಕೈಗೊಂಬೆಯಾದರೆ ಅವನು ಮೃಗ; ಪರಿಸ್ಥಿತಿ ಜೀವಿಯಿಂದ ನಿರ್ವಹಿಸಲ್ಪಟ್ಟರೆ ಅವನು ಧೀರ!

ಪ್ರಾಣಿಗಳು ತಮ್ಮ ಜೀವನದ ಪರಿಸ್ಥಿತಿಗಳನ್ನು ನಿರ್ವಹಿಸಲು ಸಾಧ್ಯವಿಲ್ಲ. ಎತ್ತನ್ನು ನೇಗಿಲಿಗೆ ಕಟ್ಟಿದ ಮೇಲೆ ಅದನ್ನು ಬಿಚ್ಚುವವರೆಗೂ ಅದು ಕೆಲಸ ಮಾಡುತ್ತಲೇ ಇರಬೇಕು. ಮನುಷ್ಯನಾದರೋ ಹೊರನೋಟಕ್ಕೆ ಕೆಲಸಮಾಡುತ್ತಾನೆಂದು ಕಂಡುಬಂದರೂ ಅದರೊಂದಿಗೆ ತನ್ನ ಮನಸ್ಸಿಗೂ ತರಬೇತಿ ನೀಡುತ್ತಾನೆ, ಅಂತರಂಗದ ಬದುಕಿಗೆ ಆಕಾರವಿತ್ತು ಅದನ್ನು ಸಮೃದ್ಧಗೊಳಿಸಿಕೊಂಡು ಉತ್ಸಾಹದಿಂದ ಮುಂದುವರಿಯುತ್ತಾನೆ, ಆಂತರ್ಯವನ್ನು ಅರಿಯುವ ಪ್ರಯತ್ನದಲ್ಲಿ ಅಪರಿಮಿತವೂ ಹಾಗೂ ಮುಕ್ತವೂ ಆದ ಅವನ ನೈಜಸ್ವರೂಪವು ಅನುಭವಕ್ಕೆ ಬರುತ್ತದೆ. ಸಾಮಾನ್ಯನೆಂದೇ ತನ್ನನ್ನು ಪರಿಗಣಿಸಿದ್ದ ಆತ ದಿನೇದಿನೆ ತನ್ನ ಅಸಾಮಾನ್ಯ ವ್ಯಕ್ತಿತ್ವದ ಸ್ವರೂಪದತ್ತ ದಾಪುಗಾಲುಹಾಕುತ್ತ ಸಾಗುತ್ತಾನೆ! ಸಾಮಾನ್ಯ ವ್ಯಕ್ತಿತ್ವದ ಮೇಲೆ ಉನ್ನತ ವ್ಯಕ್ತಿತ್ವವನ್ನು ಆರೋಪಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಸಾಗುತ್ತಾನೆ. ಸತ್ಯದ ಬಗೆಗಿನ ಕಲ್ಪನೆ ಸತ್ಯವೇ ಆಗುತ್ತದೆ!

ಭಾರತೀಯ ಸನಾತನ ಪರಂಪರೆ ಪ್ರತಿಪಾದಿಸುವ ವಿಕಾಸ ತತ್ತ್ವವು ಇದೇ ಆಗಿದೆ. ‘ಆತ್ಮವಿಕಾಸ’ವು ಪ್ರತಿಕ್ಷಣದಲ್ಲಿಯೂ ನಮ್ಮ ವ್ಯಕ್ತಿತ್ವದ ನೂತನ ಆಯಾಮವನ್ನು ನಮಗೆ ಪರಿಚಯಿಸುತ್ತ ಬರುತ್ತದೆ. ಕಚ್ಚಾವಸ್ತುವೆಂದೇ ಗುರುತಿಸಿಕೊಂಡಿದ್ದ ನಾವು ಸಾಧನೆಯ ಮೂಲಕ ಯೋಗ್ಯವೂ, ಉಪಯುಕ್ತವೂ, ಸರ್ವಜನಮಾನ್ಯವೂ ಆದ ವ್ಯಕ್ತಿತ್ವವಾಗಿ ವಿಕಸನಗೊಳ್ಳಲು ನಮ್ಮ ಆಧ್ಯಾತ್ಮಿಕ ಅಭಿವೃದ್ಧಿ ನೆರವಿಗೆ ಬರುತ್ತದೆ. ನಮ್ಮ ಆಧ್ಯಾತ್ಮಿಕ ವಿಕಾಸಕ್ಕೆ ಹೋರಾಡುವುದೇ ನಮ್ಮ ಹಕ್ಕು. ಆದರೆ ಈ ಕಾರ್ಯಸಾಧನೆಗೆ ನಾವು ನಿರ್ವಹಿಸಬೇಕಾದ ಕರ್ತವ್ಯ ಸಾಮಾನ್ಯ ರೀತಿಯದ್ದಲ್ಲ.

ವ್ಯಷ್ಟಿಯಿಂದ ಸಮಷ್ಟಿಯೆಡೆಗೆ ಸಾಗುವ ಮಾನವ ವಿಕಾಸವು ವ್ಯಕ್ತಿಯನ್ನು ವಿಶ್ವಾತ್ಮನನ್ನಾಗಿ ರೂಪಿಸುವುದೇ ತನ್ನ ಗುರಿಯಾಗಿಸಿಕೊಂಡಿದೆ. ಕೆಲಸ ಮತ್ತು ಪೂಜೆ ಎಂಬ ಎರಡು ವಿಚಾರಗಳು ಸರ್ವರಿಗೂ ಗ್ರಾಹ್ಯವಾದವು. ಸಾಮಾನ್ಯ ಮನಸ್ಸು ಹೇಳುತ್ತದೆ, ‘ಕೆಲಸವೇ ಬೇರೆ, ಪೂಜೆಯೇ ಬೇರೆ. ಕೆಲಸ ಮಾಡುವುದಕ್ಕೇ ಸಮಯದ ಕೊರತೆ. ಇನ್ನು ಪೂಜೆಗೆ ಸಮಯ ಹೊಂದಿಸುವುದಾದರೂ ಹೇಗೆ?’. ಸ್ವಲ್ಪ ಸುಧಾರಿತ ವ್ಯಕ್ತಿತ್ವ ಅಭಿಪ್ರಾಯಪಡುತ್ತದೆ- ‘ಕೆಲಸವನ್ನು ನಾನು ಪೂಜೆ ಎಂದರಿತು ಮಾಡುತ್ತೇನೆ. ಕೆಲಸವು ಸಮರ್ಪಕವಾಗಿ ನಿರ್ವಹಿಸಲ್ಪಟ್ಟಾಗ ನಾಲ್ಕಾರು ಜನರಿಗೆ ಸಹಾಯ ದೊರೆಯುತ್ತದೆ, ಆನಂದವಾಗುತ್ತದೆ!’. ಆದರೆ ಜಾಗೃತ ಚೇತನ ಹೇಳುತ್ತದೆ- ‘ನನಗೆ ಕೆಲಸ ಹಾಗೂ ಪೂಜೆ ಅಭೇದ. ಪೂಜೆ ಮಾಡುವಾಗ ಅಥವಾ ಕೆಲಸ ನಿರ್ವಹಿಸುವಾಗ ನನ್ನ ಅಂತಃಕರಣವೇ ಮಾಧ್ಯಮ. ಇಡೀ ವಿಶ್ವವು ನನ್ನಿಂದ ಪ್ರತ್ಯೇಕವಲ್ಲ. ಕೆಲಸವನ್ನು ಆಧ್ಯಾತ್ಮಿಕ ದೃಷ್ಟಿಯಿಂದ ನಿರ್ವಹಿಸುತ್ತ ನಾನು ಸಮಷ್ಟಿಯನ್ನೇ ಪೂಜಿಸಿದಂಥ ಧನ್ಯತೆ ನನ್ನಲ್ಲಿ ಮೂಡುತ್ತದೆ!’

ವ್ಯಷ್ಟಿಯ ಸಾಮಾಜಿಕ ಪೌರತ್ವವು ವಿಕಾಸ ಹೊಂದಿ ಆತನನ್ನು ವಿಶ್ವಾತ್ಮನನ್ನಾಗಿಸುವ ಈ ಪಯಣವು ಎಲ್ಲರ ಹಕ್ಕೂ ಹೌದು. ಆದರೆ ಈ ಹಕ್ಕನ್ನು ನಾವು ಸಾಕ್ಷಾತ್ಕರಿಸಿಕೊಳ್ಳಲು ನಿರ್ವಹಿಸಬೇಕಾದ ಕರ್ತವ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಆಗ ನಾವು ಕೇವಲ ಹಕ್ಕುಗಳ ಗುಲಾಮರಾಗದೆ ಕರ್ತವ್ಯಗಳ ಯಜಮಾನರಾಗಲು ಸಾಧ್ಯ.

Leave a Reply

Your email address will not be published. Required fields are marked *