Friday, 16th November 2018  

Vijayavani

Breaking News

ಶ್ರೇಷ್ಠ ಗುರಿಸಾಧನೆ ಜೀವನೋದ್ದೇಶವಾಗಲಿ

Friday, 18.05.2018, 3:03 AM       No Comments

| ಸ್ವಾಮಿ ವೀರೇಶಾನಂದ ಸರಸ್ವತೀ

ಗುರಿ ಸಾಧಿಸಲು ಛಲ ಬೇಕು. ಆತ್ಮವಿಶ್ವಾಸ, ಆತ್ಮಸಂಯಮದಿಂದ ಸಾಗುತ್ತ ಸೋಲುಗಳಿಗೆ ಹೆದರದೆ, ಧೃತಿಗೆಡದೆ ಮುನ್ನುಗ್ಗಬೇಕು. ಅಲ್ಪ ಆಕಾಂಕ್ಷೆ, ಇತರೆ ಪ್ರಲೋಭನೆಗಳಿಗೆ ಒಳಗಾಗದೆ ಗುರಿಯತ್ತ ಪಯಣ ಮುಂದುವರಿಸಬೇಕು. ಆಗ ಮಾತ್ರ ಸಂತೃಪ್ತಿಯ ಸಾರ್ಥಕತೆಯನ್ನು, ಗೆಲುವನ್ನು ಕಾಣಲು ಸಾಧ್ಯ.

ಸಾಮಾನ್ಯವಾಗಿ ನಾವು ವೈಯಕ್ತಿಕ ಸಾಮರ್ಥ್ಯದ ಬಗ್ಗೆ ಹೆಮ್ಮೆಯಿಂದ ಮಾತನಾಡುವಾಗ, ‘ನಾನು ಅದು ಮಾಡಬಲ್ಲೆ, ಇದನ್ನು ಸಾಧಿಸಬಲ್ಲೆ’ ಎಂಬಿತ್ಯಾದಿ ಮಾತುಗಳ ಮೂಲಕ ನಮ್ಮನ್ನು ಇತರರಿಗೆ ಪರಿಚಯಿಸಿಕೊಳ್ಳುವುದು ಲೋಕಾರೂಢಿ. ಇದು ಸ್ವಲ್ಪಮಟ್ಟಿಗೆ ನಮ್ಮ ಬಗ್ಗೆ ನಮ್ಮ ವಿಶ್ವಾಸ, ನಂಬಿಕೆಯ ವಿಷಯವೇ ಆದರೂ ಸಾರ್ವಜನಿಕ ವಲಯಕ್ಕೆ ಈ ಮಾತುಗಳು ಸರ್ವಸಮ್ಮತ ಎಂದೆನಿಸುವುದಿಲ್ಲ. ನಾವು ಅದಾಗಲೇ ಸಾಧಿಸಿರಬಹುದಾದ ವಿಷಯಗಳನ್ನು ಆಧರಿಸಿಯೇ ಇತರರು ನಮ್ಮನ್ನು ಅಳೆಯುವ ಪರಿಪಾಠ ಸಹಜವೇ.

‘ನಾನು ತಿಳಿದಿರುವುದಕ್ಕಿಂತ ತಿಳಿಯಬೇಕಾದುದು ಬಹಳಷ್ಟಿವೆ’ ಎಂಬ ತಿಳಿವಳಿಕೆ ಮೂಡುವುದು ಸುಲಭ ಸಾಧ್ಯವೇನಲ್ಲ. ಆದ್ದರಿಂದಲೇ ‘ಕಲಿಯುವುದು ಕಡಲಗಲ; ಕಲಿತದ್ದು ಕೈಯಗಲ’ ಎಂಬ ಮಾತು ಪ್ರಚಲಿತವಾಗಿದೆ.

ಎಲ್ಲರೂ ಯಶಸ್ವಿಗಳಾಗಬೇಕೆಂದು ಕನಸು ಕಂಡವರೇ! ಆದರೆ ಕನಸು ನನಸಾಗುವುದು ಸುಲಭದ ಮಾತೇ? ಇತಿಹಾಸ ಪಠ್ಯವು ನಮಗೆ ಪ್ರಿಯವಿರಬಹುದೇನೋ, ಇಷ್ಟಪಟ್ಟು ನಾವು ಇತಿಹಾಸದ ಪ್ರಾಧ್ಯಾಪಕರೋ, ಪಠ್ಯದ ಲೇಖಕರೋ ಆಗಲೂಬಹುದು. ಆದರೆ ನಾವೊಂದು ಇತಿಹಾಸ ನಿರ್ವಿುಸಿ, ಪಠ್ಯಕ್ಕೆ ವಸ್ತು ಸಾಮಗ್ರಿ ಆಗುವುದು ಸಾಮಾನ್ಯ ಸಂಗತಿಯಲ್ಲ. It is good to read history but better to create history’ ಎಂಬ ಮಾತು ನಾವು ಕ್ರಮಿಸಬೇಕಾದ ಮಾರ್ಗದ ಆಳ, ಅಗಲ ಹಾಗೂ ಕಾಲದ ಪರಿಮಾಣವನ್ನು ಸೂಚಿಸುತ್ತದೆ. ಭವಿಷ್ಯದ ಸುಖವನ್ನು ಇಂದೇ ಅನುಭವಿಸುವ ಧಾವಂತವು ಅನೈತಿಕ, ಅನಾರೋಗ್ಯಕರ ಹಾಗೂ ಆಘಾತಕಾರಿಯೂ ಹೌದು.

ದುರ್ಗಮ ಮಾರ್ಗದಲ್ಲಿ ಸಾಗಲೇಬೇಕು: ಗುರಿ ಸಾಧನೆಗೆ ಮಾನವನು ಕ್ರಮಿಸಬೇಕಾದ ದಾರಿ ಬಹುದೂರವೇ ಹೌದು. ಈ ಹಾದಿಯಲ್ಲಿ ಸಾಗುವಾಗ ಮಾನವನನ್ನು ಕಾಡುವ ಎರಡು ಪ್ರಮುಖ ಪ್ರತಿಬಂಧಕಗಳೆಂದರೆ- ್ಞಾರ್ಗ ಮಧ್ಯದಲ್ಲಿ ಸೋಲುಣ್ಣಬೇಕಾಗಬಹುದೆಂಬ ಭಯ. ್ಞತರರು ತಮ್ಮ ಪ್ರಯತ್ನವನ್ನು ಟೀಕಿಸುತ್ತಾರೆ, ಮೂದಲಿಸುತ್ತಾರೆಂಬ ಆತಂಕ.

ಆದರೆ ಯಾವುದೇ ಯಶಸ್ಸನ್ನು ನಾವು ದುರ್ಗಮವಾದ ಮಾರ್ಗದಲ್ಲಿ ಕ್ರಮಿಸಿಯೇ ಸಾಧಿಸಬೇಕಾಗುತ್ತದೆ. ನಮ್ಮ ಅನುಭವಕ್ಕೆ ಬರುವ ವೈಫಲ್ಯಗಳು ಅಥವಾ ಟೀಕೆಗಳು ನಮ್ಮ ಪ್ರಯತ್ನವನ್ನು ಗಟ್ಟಿಯಾಗಿಸುತ್ತವೆ ಮತ್ತು ಸಾಧಿಸಬೇಕಾದ ಗುರಿಯನ್ನು ಮತ್ತಷ್ಟು ಸ್ಪಷ್ಟವಾಗಿಸುತ್ತವೆ! ನಿಜಾರ್ಥದಲ್ಲಿ ವೈಫಲ್ಯ ಮತ್ತು ಟೀಕೆಗಳಿಂದ ನಾವು ಹೊಸ-ಹೊಸ ಪಾಠಗಳನ್ನು ಕಲಿಯುವಂತಾಗುತ್ತದೆ. ಸೋಲು ಮತ್ತು ಗೆಲುವುಗಳು ನಿಜಕ್ಕೂ ನಮ್ಮ ಪ್ರಯಾಣದ ಮಾರ್ಗದಲ್ಲಿನ ವಿವಿಧ ವಿಭಿನ್ನ ಹಂತಗಳೇ ಆಗಿವೆ. ಕೈಗೆತ್ತಿಕೊಂಡ ಕಾರ್ಯದಲ್ಲಿ ಶ್ರದ್ಧೆ, ಪ್ರಯತ್ನದಲ್ಲಿ ವಿಶ್ವಾಸ ಹಾಗೂ ಸಾಧಿಸಬೇಕಾದ ಗುರಿಯ ಬಗ್ಗೆ ಗೌರವ ಇವು ಅತ್ಯವಶ್ಯಕ. ಈ ಎಲ್ಲ ಅಂಶಗಳನ್ನು ಸರಿದೂಗಿಸಿಕೊಂಡು ಹೋಗಲು ಆತ್ಮವಿಶ್ವಾಸದ ಪಾತ್ರ ಪ್ರಮುಖವಾಗುತ್ತದೆ.

‘ಉತ್ತಮವಾದ ಗುರಿ ಇರಲಿ; ಅದನ್ನು ಸಾಧಿಸಲು ಅತ್ಯುತ್ತಮವಾದ ದಾರಿಯಲ್ಲಿ ಕ್ರಮಿಸಿ. ಗುರಿಗಿಂತಲೂ ದಾರಿ ಮುಖ್ಯ. ದಾರಿಗೆ ಮಹತ್ವ ನೀಡಿದಾಗ ಯಶಸ್ಸು ಸಹಜವಾಗಿಯೇ ಬಂದೊದಗುತ್ತದೆ’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು.

ಆತ್ಮಸ್ಥೈರ್ಯ, ಪರಾಕ್ರಮಪೂರ್ಣ ಪ್ರಯತ್ನಗಳಿಂದ ಕಷ್ಟಗಳೂ ಕಂಗಾಲಾಗಿ ದೂರಸರಿಯುತ್ತವೆ. ಇತಿಹಾಸಕಾರ ಮಾರ್ಕ್ ಟ್ವೈನ್, “Courage is not lack of fear, absence of fear, but control of fear, mastery of fear’ ಎಂದಿದ್ದಾನೆ. ಎಂದರೆ ಧೈರ್ಯವೆಂಬುದು ಅಲ್ಪಪ್ರಮಾಣದ ಭಯದ ಸ್ಥಿತಿಯಲ್ಲ, ಭಯರಹಿತ ಸ್ಥಿತಿಯೂ ಅಲ್ಲ; ಬದಲಾಗಿ ಅದು ಭಯವನ್ನು ನಿಯಂತ್ರಿಸುವ ಹಾಗೂ ಭಯದ ಮೇಲೆ ಮೇಲುಗೈ ಸಾಧಿಸಿದ ಸ್ಥಿತಿಯನ್ನು ಸೂಚಿಸುತ್ತದೆ!

ಈ ದಿನ ಕಳೆದುಕೊಳ್ಳದಿರಿ: ಸಾಧಿಸುವ ಹಾದಿಯಲ್ಲಿ ಕ್ರಮಿಸುತ್ತ ಹೋದಂತೆ, ನಿನ್ನೆಯ ವೈಫಲ್ಯಗಳಿಂದ ನಾವು ಹತಾಶರಾದರೆ, ನಾಳಿನ ಬಗ್ಗೆ ಚಿಂತಾಕ್ರಾಂತರಾದರೆ ನಮ್ಮ ಕೈಯಲ್ಲಿರುವ ‘ಈ ದಿನ’ ನಿಷ್ಪಲವಾಗದೇ? ಆದ್ದರಿಂದ ಯಾವುದೇ ಚಿಂತೆ ನಾಳಿನ ದುಃಖಗಳನ್ನು ನಿಮೂಲನಗೈಯುತ್ತದೆಯೆಂಬ ಭ್ರಮೆ ಕೂಡದು. ನಿಜಕ್ಕೂ ಚಿಂತೆಯು ಇಂದಿನ ನಮ್ಮ ಸಾಮರ್ಥ್ಯವನ್ನೇ ನಿಷ್ಪಲಗೊಳಿಸೀತು ಎಚ್ಚರ!

‘ಸಾವು ನಿಶ್ಚಯವಾಗಿರುವಾಗ ಶ್ರೇಷ್ಠವಾದ ಕಾರಣಕ್ಕಾಗಿ ಸಾವನ್ನಪ್ಪುವುದು ಒಳಿತು. ಉತ್ತಮ ಗುರಿಯನ್ನು ಮುಟ್ಟಲು ಉತ್ತಮ ದಾರಿಯಲ್ಲಿ ಕ್ರಮಿಸುತ್ತ ಮಾರ್ಗಮಧ್ಯದಲ್ಲೇ ಸಾವು ಘಟಿಸಿದರೂ ಅದು ಸೋಲಲ್ಲ, ಗೆಲುವೇ!’ ಎಂಬ ಅತ್ಯುದ್ಭುತ ಸತ್ಯವು ಭರವಸೆಯ ಗಣಿಯೇ ಹೌದು. ಸಾಧನಾಪಥದಲ್ಲಿ ಮುನ್ನಡೆಯುತ್ತಿರುವ ವ್ಯಕ್ತಿಗೆ ಕೆಲವು ಪ್ರಮುಖ ಅಂಶಗಳ ಅರಿವಿರಲೇಬೇಕಾಗುತ್ತದೆ.

ಏನನ್ನು ಸಾಧಿಸಬೇಕಿದೆ ಎಂಬುದರ ಬಗ್ಗೆ ಸ್ಪಷ್ಟತೆ ಅತ್ಯಗತ್ಯ. ತತ್ಸಂಬಂಧವಾಗಿ ನಿರ್ವಹಿಸಬೇಕಾದ ವಿಚಾರಗಳನ್ನು ವಿವರಪೂರ್ಣವಾಗಿ ಲಭ್ಯವಾಗಿಸಿಕೊಳ್ಳಬೇಕು.

ಕೈಗೆತ್ತಿಕೊಂಡ ಕಾರ್ಯವನ್ನು ಯಶಸ್ವಿಯಾಗಿಸಲು ಬೇಕಾಗಬಹುದಾದ ಅಂದಾಜು ಸಮಯದ ಬಗ್ಗೆ ಅರಿವಿರಬೇಕು. ಸಾಧನಾ ಅವಧಿ ಸುದೀರ್ಘವಾಗಿದ್ದಲ್ಲಿ ಅದನ್ನು ಹಲವು ಹಂತಗಳಾಗಿಯೂ ಪರಿಗಣಿಸಬಹುದು.

ಸಾಧಿಸಬೇಕಾದ ಕಾರ್ಯದ ಕುರಿತು, ಕಾರ್ಯಪ್ರಣಾಳಿಕೆಗಳನ್ನು ಹಲವು ಹಂತಗಳಾಗಿ ವಿಂಗಡಿಸಿ ಪ್ರತಿಯೊಂದು ಹಂತದಲ್ಲೂ ಹಲವಾರು ವಿಷಯಗಳಲ್ಲಿ ಯಾವೆಲ್ಲ ವಿಚಾರಗಳಿಗೆ ಆದ್ಯತೆ ನೀಡಬೇಕೆಂಬ ತಿಳಿವಳಿಕೆ ಅತ್ಯಗತ್ಯ. ಈ ಹಂತದಲ್ಲಿ ಹಿರಿಯರ ಮಾರ್ಗದರ್ಶನವೂ ಅನಿವಾರ್ಯ. ಮಾರ್ಗದರ್ಶನವನ್ನು ಪಡೆಯಲು ಹಿಂಜರಿಯಬಾರದು. ನಮ್ಮ ಅಪಕ್ವ ಅಹಂಕಾರವು ನಮ್ಮನ್ನು ಧೂರ್ತರನ್ನಾಗಿಸಬಾರದಲ್ಲದೆ, ಅದು ನಮ್ಮನ್ನು ದಾರಿ ತಪ್ಪಿಸಲೂಬಾರದು! ನಮ್ಮ ಕಚ್ಚಾ ಅಹಂ ಪಕ್ಕಾ ಅಹಂ ಆಗಬೇಕು ಎಂದಿದ್ದಾರೆ ಶ್ರೀರಾಮಕೃಷ್ಣರು. ಅಹಂಕಾರವು ವಿಕಾಸಹೊಂದಬೇಕು, ಬೆಳೆಯಬೇಕು. ಕೊನೆಗೊಮ್ಮೆ ಆತ್ಮವಿಕಾಸದ ಸ್ವರೂಪ ಪಡೆಯಬೇಕು.

ಯಾವುದೇ ವಿಳಂಬ ಮಾಡದೆ ಪ್ರಯತ್ನಶೀಲರಾಗಿ ಕಾರ್ಯಪ್ರವೃತ್ತರಾಗಬೇಕು. ಪ್ರತಿದಿನವೂ ಪ್ರತಿಕ್ಷಣವೂ ನಾವು ಸಾಧಿಸಬಹುದಾದ ಪ್ರಗತಿ ಅಲ್ಪಸ್ವಲ್ಪವೇ ಆದರೂ ಅದನ್ನು ನಿರ್ಲಕ್ಷಿಸಬಾರದು! ಪ್ರಗತಿಯ ಪ್ರಮಾಣ ಸಣ್ಣದಾಗಿದ್ದರೂ ನಿರಾಶರಾಗಬಾರದು. ಸಣ್ಣ-ಸಣ್ಣ ವಿಷಯಗಳೂ ಕೊನೆಗೆ ಪರಿಪೂರ್ಣತೆ ದೊರಕಿಸಿಕೊಡುತ್ತವೆ. ಆದರೆ ಪರಿಪೂರ್ಣತೆ ಎಂಬುದು ಸಣ್ಣ ವಿಷಯವಲ್ಲ ಎಂದಿದ್ದಾನೆ ಮೈಕೆಲ್ ಏಂಜೆಲೋ.

ದೈವೇ ಪುರುಷಕಾರೇ ಚ ಕರ್ಮಸಿದ್ಧಿರ್ವ್ಯವಸ್ಥಿತಾ|

ತತ್ರ ದೈವಮಭಿವ್ಯಕ್ತಂ ಪೌರುಷಂ ಪೌರ್ವದೇಹಿಕಂ||

ಯಾಜ್ಞವಲ್ಕ್ಯ, 1-349

ಯಾವ ಕೆಲಸವೇ ಆಗಲಿ ಅದೃಷ್ಟದಿಂದಲೂ ಪುರುಷಪ್ರಯತ್ನದಿಂದಲೂ ಫಲಿಸುತ್ತವೆ. ಇದರಲ್ಲಿ ಪೂರ್ವಜನ್ಮದಿಂದ ಆರ್ಜಿತವಾದ ಪುರುಷಶಕ್ತಿಯೇ ದೈವವೆಂದೂ ಅದೃಷ್ಟವೆಂದೂ ಹೇಳಲ್ಪಡುತ್ತದೆ.

ಅನುಭವಗಳಿಂದ ಕಲಿಯೋಣ: ಉತ್ತುಂಗ ಸಾಧನೆಗೈಯುವುದು ಸುಲಭದ ಮಾತೇನಲ್ಲ. ಮೊದಲು ಜೀವನದಲ್ಲಿ ದೊಡ್ಡಗುರಿ ಗುರ್ತಿಸಿಕೊಳ್ಳಬೇಕು. ಗುರಿಯೊಂದಿದ್ದರೆ ಸಾಲದು, ಗುರಿ ಸಾಧನೆಗೆ ಕಠಿಣ ಪರಿಶ್ರಮವೂ ಅತ್ಯವಶ್ಯಕ. ನಮ್ಮ ಅನುಭವಗಳಿಂದ ಕಲಿಯಬೇಕು. ಜೀವನಾನುಭವ ಹೊಂದಿದವರನ್ನು ಗೌರವಿಸುವ ವಿನಯ, ವಿಧೇಯತೆಗಳು ಅತ್ಯಗತ್ಯ. ಬದುಕಿನ ದುರ್ಗಮವಾದ ಹಾದಿಯಲ್ಲಿ ಯಶಸ್ವಿಯಾಗಿ ಹೋರಾಟ ನಡೆಸಿ ಉತ್ತಮಗುರಿಯನ್ನು ಮುಟ್ಟಿದವರ ಜೀವನವು ಸದಾ ನಮಗೆ ಸ್ಪೂರ್ತಿ ನೀಡಬಲ್ಲದು.

ಜೀವನದ ಪ್ರತಿಯೊಂದು ವಿಚಾರಕ್ಕೂ ಸೂಕ್ತ ಸ್ಥಾನಮಾನ ದೊರಕಿಸಿಕೊಡಬೇಕು. ಅವುಗಳನ್ನು ಸಾಧಿಸಲು ಕ್ರಮಾಗತವಾದ ಕಾರ್ಯಸೂಚಿಯನ್ನು ಯೋಚಿಸಿ ನಿರ್ವಹಿಸಬೇಕು. ತನ್ನ ನಂಬಿಕೆಗಳು ಹಾಗೂ ತನ್ನನ್ನು ಸಕಾರಾತ್ಮಕವಾಗಿ ಕೊಂಡೊಯ್ಯುವ ಇತರರ ನಂಬಿಕೆಗಳನ್ನು ಗೌರವಿಸಲೇಬೇಕು. ಇಂತಹ ಶ್ರದ್ಧಾಪೂರ್ವಕ ಬದುಕು ನಮಗೆ ಯಶಸ್ಸು ಹಾಗೂ ಸಂತೃಪ್ತಿಗಳನ್ನು ದೊರಕಿಸಿಕೊಡುತ್ತದೆ.

ಒಬ್ಬ ವ್ಯಕ್ತಿಗೆ ಶಕ್ತಿ, ಶ್ರದ್ಧೆಗಳೇ ಭೂಷಣ. ಆತನು ವಿಪರೀತವಾದ ತನ್ನ ಕಾಂುರ್ುಬಾಹುಳ್ಯದಿಂದ ಮೂಲಧ್ಯೇಂುುದಿಂದ ದೂರಸರಿಂುುಬಹುದಾದ ಅಪಾಂುುವೂ ಇದೆ. ಆದ್ದರಿಂದ ತನ್ನ ವ್ಯಕ್ತಿತ್ವದಲ್ಲಿನ ನೈತಿಕ ಶಕ್ತಿಂುು ಆಧಾರದ ಮೇಲೆ ಜೀವನಧ್ಯೇಂುುದೆಡೆಗೆ ಶ್ರದ್ಧೆಯಿಂದ ಸಾಗಬೇಕು. ‘ಸಹವಾಸದಿಂದ ಸಂನ್ಯಾಸಿ ಕೆಟ್ಟ’ ಎಂದಾದ ಮೇಲೆ ಸಾಮಾನ್ಯರ ಪಾಡೇನು? ಎಂಬುದು ಗಮನೀಂುು ವಿಷಂುು. ಆದ್ದರಿಂದ ಸಾಧಕರು ತಮ್ಮ ಬದುಕನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು.

ಸಾಧನೆಯನ್ನು ತನ್ನದಾಗಿಸಿಕೊಂಡ ವ್ಯಕ್ತಿಯನ್ನು ಗಮನಿಸಿದಾಗ ಅವನ ನಿಶ್ಚಿತ ಅಭಿಪ್ರಾಯಗಳು ಹಾಗೂ ಶ್ರದ್ಧಾಪೂರ್ಣ ಪ್ರಯತ್ನವು ಅವನನ್ನು ಸಾಮಾನ್ಯ ಸ್ಥಿತಿಯಿಂದ ಅಸಾಮಾನ್ಯ ಸ್ಥಿತಿಗೆ ಕೊಂಡೊಯ್ದಿರುವುದು ತಿಳಿಯುತ್ತದೆ. ಸಾಧಕನು ಅಪಾಯದ ಸನ್ನಿವೇಶವನ್ನೂ ಸಂಯಮದಿಂದ ನಿರ್ವಹಿಸುತ್ತಾನೆ. ಜನರ ಸಮೂಹದ ನಡುವೆಯೂ ಸತ್ಯವನ್ನು ನುಡಿಯಬಲ್ಲ ನೈತಿಕ ಧೈರ್ಯ ಅವನಲ್ಲಿ ಇರುತ್ತದೆ. ಸುಸ್ಥಿತಿಯ ಸನ್ನಿವೇಶದಲ್ಲಿ ಅವನಲ್ಲಿ ಅನುಕಂಪ ಹಾಗೂ ಕ್ಷಮೆ ಮನೆ ಮಾಡಿರುವಂತೆ ಸಂದಿಗ್ಧ ಸನ್ನಿವೇಶದಲ್ಲಿಯೂ ಅವನು ಧೃತಿಗೆಡದಂತೆ ಕಾರ್ಯನಿರ್ವಹಿಸುತ್ತಾನೆ. ಉತ್ತಮವಾದುದನ್ನು ಕಲಿಯುವ ವಿಷಯದಲ್ಲಿ ಅವನು ವಿಧೇಯನಾಗಿರುತ್ತಾನೆ, ತನ್ನಿಂದ ಇತರರಿಗೆ ಒಳಿತಾಗುವಂತೆ ಎಚ್ಚರವಹಿಸುತ್ತಾನೆ.

ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಬಹುದು: ಶಾರೀರಿಕ ದೌರ್ಬಲ್ಯದಿಂದ ಮಾನಸಿಕ ದೌರ್ಬಲ್ಯವೂ ಮೂಡುತ್ತದೆ. ಆಗ ಶಾರೀರಿಕ ಮತ್ತು ಮಾನಸಿಕ ದೌರ್ಬಲ್ಯಗಳು ಮಾನವನನ್ನು ಮೋಸಗಾರನನ್ನಾಗಿ ಪರಿವರ್ತಿಸುತ್ತವೆ. ಅಧ್ಯಾತ್ಮದ ಗಂಧ-ಗಾಳಿ ಇಲ್ಲದವನು ಕೇವಲ ರಹಸ್ಯಗಳತ್ತ ಕುತೂಹಲ ತಾಳುತ್ತಾನೆ. ಮೊಂಡುತನ ಅಥವಾ ಸ್ವೇಚ್ಛಾ ಪ್ರವೃತ್ತಿಗಳಿಂದ ಮುಸುಕಿನಲ್ಲಿ ತನ್ನ ದೌರ್ಬಲ್ಯಗಳನ್ನು ಮುಚ್ಚಿಡಲು ಪ್ರಯತ್ನಿಸುತ್ತಾನೆ. ಪ್ರಬುದ್ಧರಾದ ಜನರ ಸಖ್ಯವು ನಮಗೆ ಭರವಸೆ ಹಾಗೂ ಸಂರಕ್ಷಣೆ ದೊರಕಿಸಿಕೊಡುತ್ತದೆ. ಪ್ರಜ್ಞಾವಂತ ಸಜ್ಜನರ ಸ್ಮರಣೆ ಸದಾ ನಮ್ಮನ್ನು ಹುರಿದುಂಬಿಸುತ್ತದೆ. ಜೀವನಪಥದಲ್ಲಿ ಸಾಗಿದಂತೆಲ್ಲ ತ್ಯಾಗಜೀವನದಲ್ಲಿ ಎಲ್ಲ ಆನಂದವೂ ಅಡಗಿದೆ, ಪಾವಿತ್ರ್ಯದಲ್ಲಿ ಎಲ್ಲ ಬಲವೂ ಇದೆ, ಪ್ರೀತಿಯಿಂದ ಎಲ್ಲರನ್ನೂ ಗೆಲ್ಲಬಹುದು ಮತ್ತು ಜ್ಞಾನಬಲದಿಂದ ಮಾತ್ರವೇ ನಿಜವಾದ ಸ್ವಾತಂತ್ರ್ಯ ದೊರಕುತ್ತದೆ ಎಂಬ ಅನುಭವಗಳಾಗುತ್ತವೆ. ನಿಜ, ಸಂತೃಪ್ತಿಯೇ ಜೀವನದ ಉದ್ದೇಶ. ನಮ್ಮ ದಿವ್ಯಸ್ವರೂಪವು ಮನಸ್ಸಿನ ಮೂಲಕ ಪ್ರತಿಫಲನಗೊಂಡಾಗ ನಮ್ಮ ಆಕಾಂಕ್ಷೆಗಳು, ಅಭಿಪ್ರಾಯಗಳು ಹಾಗೂ ಕಾರ್ಯಚಟುವಟಿಕೆಗಳು ಆನಂದದ ಸ್ಥಿತಿಗೆ ಪ್ರತಿಬಂಧಕಗಳಾಗುವುದಿಲ್ಲ. ಆನಂದವೆಂಬುದು ಸ್ವತಂತ್ರ ಸ್ಥಿತಿಯಲ್ಲಿದೆ ಎಂದೂ, ಅದು ಎಂದೆಂದೂ ದಾಸ್ಯ ಸ್ಥಿತಿಗೆ ಎಟುಕದೆಂಬುದೂ ಅರಿವಿಗೆ ಬರುತ್ತದೆ.

ನಮ್ಮ ಜೀವನ ಆಶಾದಾಯಕವೂ ಹಾಗೂ ವಾಸ್ತವಿಕವೂ ಆದ ನೆಲೆಗಟ್ಟಿನಲ್ಲಿ ಸಾಗಬೇಕು. ನಮ್ಮ ಪಾಲಿನ ಹೊಣೆಗಾರಿಕೆಯನ್ನು ನಾವೇ ಹೊರಬೇಕು. ನಮ್ಮ ಬಗ್ಗೆ ಮೇಲರಿಮೆ ಮತ್ತು ಕೀಳರಿಮೆಗಳೆರಡೂ ಒಳ್ಳೆಯದಲ್ಲ. ನಮ್ಮ ಆಲೋಚನೆಗಳಲ್ಲಿ ಯುಕ್ತಾಯುಕ್ತತೆಗಳ ಬಗ್ಗೆ ಪರಿಜ್ಞಾನ ಅತ್ಯಗತ್ಯ. ಆತ್ಮವಿಶ್ವಾಸ ಎಷ್ಟು ಮುಖ್ಯವೋ ಆತ್ಮಸಂಯಮವೂ ಅಷ್ಟೇ ಅವಶ್ಯಕ. ಗುರಿಯತ್ತ ಸಾಗುತ್ತಿದ್ದಂತೆ ನಮ್ಮ ಮನದಲ್ಲಿ ಮನೆ ಮಾಡಿರುವ ಅಲ್ಪ ಆಕಾಂಕ್ಷೆಗಳು ಗರಿಗೆದರಿ ನಿಲ್ಲಲು ಹವಣಿಸುತ್ತಿರುತ್ತವೆ. ಶ್ರೇಷ್ಠ ಗುರಿಸಾಧನೆಗಾಗಿ ಅಲ್ಪ ಆಸೆಗಳನ್ನು ಗೌಣವಾಗಿಸಿಕೊಳ್ಳಬೇಕು. ಉದ್ವೇಗ-ಹತಾಶೆಗಳಿಗೆ ಸ್ಥಾನ ನೀಡದೆ, ಸೋಲುಗಳಿಂದ ಧೃತಿಗೆಡದೆ ಪ್ರಯತ್ನವನ್ನು ದ್ವಿಗುಣಗೊಳಿಸಿಕೊಳ್ಳುವ ಮೂಲಕ ಸಾಧಿಸುವ ಛಲವನ್ನು ಮತ್ತಷ್ಟು ಬೆಳೆಸಿಕೊಳ್ಳಬೇಕು.

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

Leave a Reply

Your email address will not be published. Required fields are marked *

Back To Top