More

    ವಿವೇಕಧಾರೆ ಅಂಕಣ; ಜೀವಂತಿಕೆ ದೈವವರವೋ, ಸ್ವಪ್ರಯತ್ನವೋ?

    ಸೇವೆ ಎಂಬುದು ಜೀವನದ ಸಮಗ್ರ ದೃಷ್ಟಿಕೋನದ ತಳಹದಿ ಹೊಂದಿರಬೇಕು. ಸೇವೆಯ ಉದ್ದೇಶ ಸಾಮಾಜಿಕ ಕರ್ತವ್ಯವಷ್ಟೇ ಅಲ್ಲ, ಅಥವಾ ಮಾನವೀಯತೆಯ ತೋರಾಣಿಕೆಯಷ್ಟೇ ಅಲ್ಲ, ಬದಲಾಗಿ ಸೇವೆಯಿಂದ ಪೂಜಿಸುವುದು ಮಾನವನಲ್ಲಿ ಅಂತರ್ಗತವಾಗಿರುವ ದೇವರನ್ನೇ!

    ವಿವೇಕಧಾರೆ ಅಂಕಣ; ಜೀವಂತಿಕೆ ದೈವವರವೋ, ಸ್ವಪ್ರಯತ್ನವೋ?

    ಇತ್ತೀಚೆಗೆ ಹಳ್ಳಿಗಾಡಿನ ಜನರೊಂದಿಗೆ ಮಾತನಾಡುತ್ತಿದ್ದೆ, ‘ಏನ್ರಪ್ಪಾ, ಹೇಗಿದ್ದೀರಿ? ಕಷ್ಟದ ಕಾಲವನ್ನು ಹೇಗೆ ನಿರ್ವಹಿಸ್ತಾ ಇದ್ದೀರಿ’ ಎಂದು ಕೇಳಿದೆ. ಒಬ್ಬ ರೈತನೆಂದ: ‘ಬುದ್ದಿ, ಸಾಲ ಸಾವ್ಕಾರನ್ದು, ಜೀವ ಪರಮಾತ್ಮನ್ದು.’ ‘ಭಲೇ, ಭಲೇ ಪರವಾಗಿಲ್ವೇ’ ಅಂದುಕೊಂಡೆ. ವೃದ್ಧೆಯೊಬ್ಬಳನ್ನು ಕೇಳ್ದೆ: ‘ಅಜ್ಜೀ, ಕರೊನಾ ಸಮಯದಲ್ಲಿ ಪರಿಸ್ಥಿತಿ ಏನು ಅನ್ಸುತ್ತೆ?’. ಆಕೆ ನೀಡಿದ ಉತ್ತರ, ಅಬ್ಬ, ಅದೆಷ್ಟು ಆಲೋಚನೀಯ! ‘ಕೆಲಸ ಮಾಡೋರು ಮಾಡ್ತಾ ಔರೇ, ಬೈಯ್ಯೋರ್ ಬೈತಾ ಅಡ್ಡಾಡ್ಕೊಂಡ್ ಔರೇ… ಆದ್ರೂ ಕಾಯೋವ್ನು ಬಿಟ್ಟರೂ ಆಳೋನು ಬಿಡಕ್ಕಾಯ್ತದ್ರಾ?’ ಎಂದಳು. ಈ ಮಾತುಗಳು ಕೆಲವು ದಿನಗಳೇ ನನ್ನ ಮನಸ್ಸನ್ನ ಬಿಟ್ಟು ಕದಲಲಿಲ್ಲ! ಶತಶತಮಾನಗಳ ದಾಸ್ಯದ ನಡುವೆ ಮೂಡಿದ ಭಾರತೀಯ ಜೀವನದ ವಿವಿಧ ಮಜಲುಗಳನ್ನಿಲ್ಲಿ ನೋಡಬಹುದಲ್ಲವೇ?

    ನಿಜ, ಜೀವ ಅನ್ನುವುದು ದೈವದತ್ತವಾದ ವಿಚಾರ. ಅದೊಂದು ಅಸ್ತಿತ್ವ ಸೂಚಕ. ಆದರೆ ಅದಕ್ಕೆ ಜೀವಂತಿಕೆ ಬರುವುದಂತೂ ನಮ್ಮ ಪ್ರಯತ್ನದಿಂದಲೇ ಅಲ್ಲವೇ? ಮನುಷ್ಯನ ಬದುಕಿನ ಹಲವಾರು ಆಯಾಮಗಳ ಕುರಿತು ಭಾರತೀಯ ಋಷಿಗಳಿತ್ತ ಮಾರ್ಗದರ್ಶನದ ಮಾತುಗಳು ನಿಜಕ್ಕೂ ದಾರಿದೀಪೋಕ್ತಿ. ಅಸಂಖ್ಯಾತ ವಿಜ್ಞಾನಿಗಳು, ತತ್ತ ್ವಶಾಸ್ತ್ರ ನಿಪುಣರು ಮತ್ತು ಶಿಕ್ಷಣತಜ್ಞರು ಅಧ್ಯಾತ್ಮ ಮೌಲ್ಯಗಳಿಂದ ಹೊರತಾದ ಭೋಗಭಾಗ್ಯಕೇಂದ್ರಿತ ಜೀವನವಿಧಾನವು ಮಾನವನನ್ನು ಭಯಾನಕ ಕೂಪಕ್ಕೆ ತಳ್ಳುತ್ತದೆಯೆಂದು ಎಚ್ಚರಿಸಿದ್ದಾರೆ!

    ಅಣುಜೀವವಿಜ್ಞಾನದಲ್ಲಿ ನೊಬೆಲ್ ಪುರಸ್ಕೃತರಾದ ವೆರ್ನರ್ ಅರ್ಬರ್ ಹೇಳುತ್ತಾರೆ: ‘ವಿಕಾಸ ಎನ್ನುವುದು ಕೇವಲ ಪ್ರಮಾದಗಳ, ಆಕಸ್ಮಿಕಗಳ ಅಥವಾ ಅನುವಂಶೀಯ ಸ್ವಾರ್ಥವಿಚಾರಗಳಿಂದಷ್ಟೇ ಘಟಿಸುವುದಿಲ್ಲ. ಆದರೆ ವಿಕಾಸದ ತಳಿಗಳನ್ನು ಅವುಗಳ ಕೆಲಸದ ಆಧಾರದ ಮೇಲೆ ಸರಿಪಡಿಸಬೇಕು, ಅದರ ಮೂಲಕ ಜೀವನದ ವೈವಿಧ್ಯತೆಯ ಅಂಶಗಳನ್ನು ಪುನಃ ತುಂಬಬೇಕಾಗುತ್ತದೆ’.

    ಆಕ್ಸ್​ಫರ್ಡ್ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರಾಗಿದ್ದ ಜಾನ್ ವಿಲ್ಸನ್ ಹೇಳಿದ್ದು: ‘ದೇಶದ ಪ್ರಜೆಗಳು ನಿಜಕ್ಕೂ ಕುಟುಂಬದ ಅಥವಾ ಸಮಾಜದ ಹದಿವಯಸ್ಕರಿದ್ದಂತೆ. ಅವರಿಗೆ ಸೂಕ್ತ ಶಿಕ್ಷಣ ಹಾಗೂ ಮಾರ್ಗದರ್ಶನ ನೀಡಿದರಷ್ಟೇ ತಮ್ಮ ಜೀವನವನ್ನು ಕ್ಷೇಮವಾಗಿ ಮತ್ತು ಆನಂದದಾಯಕವಾಗಿ ರೂಪಿಸಿಕೊಳ್ಳಬಲ್ಲರು. ಈ ವಿಚಾರವು ಯಶಸ್ವಿಯಾಗದಿದ್ದರೆ ಅವರ ಜೀವನ ಗೊಂದಲಮಯವಾಗುತ್ತದೆ, ಅವರುಗಳು ಯಾವುದೋ ಬಲಯುತ ಗುಂಪೊಂದರ ಕೆಟ್ಟ ಸಿದ್ಧಾಂತಗಳಿಗೆ ಬಲಿಯಾಗುತ್ತಾರೆ’.

    ಬಹುಶಃ ಇಂದಿನ ವಿಷಮಸ್ಥಿತಿಯನ್ನೇ ಕಂಡಾಗ ಈ ಸತ್ಯ ನಮಗೆ ಅರಿವಾಗದಿರದು. ಅಣೆಕಟ್ಟುಗಳನ್ನು ಗಟ್ಟಿಯಾಗಿ ನಿರ್ವಿುಸಹೊರಟ ಮನುಷ್ಯ ತಾನೇ ಮುರುಕಲಾಗುತ್ತಿಲ್ಲವೇ? ಒಂದೆಡೆ ದೇಶದಲ್ಲಿ ಸಿರಿಸಂಪತ್ತು ವೃದ್ಧಿಯಾಗುತ್ತಿದ್ದರೂ ಮತ್ತೊಂದೆಡೆ ಅದು ಕೆಲವರ ಸೊತ್ತಾಗಿ ಪರಿಣಮಿಸುತ್ತಿಲ್ಲವೇ? ಬುದ್ಧಿವಂತಿಕೆಯ ಆಧಿಕ್ಯದಿಂದ ನಾವು ನಿರ್ವಿುಸುತ್ತಿರುವುದು ಯಂತ್ರಮಾನವರನ್ನೇ ಹೊರತು ಶೀಲಸಂಪನ್ನ ಮಾನವರನ್ನಲ್ಲ! ಸಂಪರ್ಕ-ಸಂವಹನ ಯಂತ್ರೋತ್ಪಾದನೆಯ ಕ್ಷೇತ್ರದಲ್ಲಿನ ಕ್ರಾಂತಿ ಮಾನವರಲ್ಲಿ ಪ್ರೀತಿ ವಾತ್ಸಲ್ಯಗಳನ್ನು ಊರ್ಜಿತಗೊಳಿಸುವ ಬದಲು ದ್ವೇಷ-ಅಸೂಯೆಯ ಕೆನ್ನಾಲಗೆಯನ್ನು ಚಾಚುತ್ತಿಲ್ಲವೇ? ನಮ್ಮ ಸಾಮರ್ಥ್ಯ, ಪರಿಶ್ರಮ ಹಾಗೂ ಕೌಶಲಗಳು ರಾಷ್ಟ್ರನಿರ್ವಣಕ್ಕೆ ಪೂರಕಶಕ್ತಿ ಆಗುವುದಕ್ಕಿಂತ ಕುಟುಂಬ-ಸಮಾಜದಲ್ಲಿ ಸಂಘರ್ಷ, ವಿಭಜನೆಗಳಿಗೆ ಎಡೆಮಾಡಿಕೊಡುತ್ತಿದೆಯಲ್ಲವೇ? ಇದಕ್ಕೆ ಕಾರಣವೇನು? ನಾವು ಚಾರಿತ್ರ್ಯದೃಷ್ಟಿಯಲ್ಲಿ ಕುಬ್ಜರು, ದೌರ್ಬಲ್ಯಗಳ ವಿಚಾರದಲ್ಲಿ ಪರ್ವತವೇ ಆಗಿದ್ದೇವೆ!

    ಮನುಷ್ಯನನ್ನು ಪ್ರಾಮಾಣಿಕನನ್ನಾಗಿ ರೂಪಿಸದಿದ್ದರೆ ಯಾವ ಸುಧಾರಣೆಯೂ ಅಸಾಧ್ಯ ಎಂಬುದನ್ನು ಜಗತ್ತು ಒಪ್ಪಿದೆ. ‘ನಮ್ಮ ಆಲೋಚನೆಯ ಸಾಮರ್ಥ್ಯ ಯೋಗ್ಯರೀತಿಯಲ್ಲಿ ಮುಂದುವರಿದಂತೆಲ್ಲ ಅದು ಇನ್ಯಾವುದೇ ಮನುಷ್ಯನ ಬಲದ ಬೆಂಬಲಕ್ಕಿಂತ ಅಧಿಕವಾದುದು ಎಂಬ ಸತ್ಯದ ಅರಿವಾಗುತ್ತದೆ’ ಎಂದು ಬರ್ಟ್ರೆಂಡ್​ ರಸೆಲ್ ಹೇಳಿದರೆ, ‘ಸ್ವಾರ್ಥವೆಂಬ ಅನಾರೋಗ್ಯಕರ ವಿಚಾರ ನಮ್ಮನ್ನು ಹೊರಪ್ರಪಂಚದಿಂದಷ್ಟೇ ಅಲ್ಲ, ನಮ್ಮ ಆಂತರ್ಯದಿಂದಲೂ ಬೇರ್ಪಡಿಸುತ್ತದೆ’ ಎಂದಿದ್ದಾರೆ ಮನಃಶಾಸ್ತ್ರಜ್ಞ ಕಾರ್ಲ್ ಜಂಗ್.

    ಸ್ವಾಮಿ ವಿವೇಕಾನಂದರೆನ್ನುತ್ತಾರೆ: “The more we study the material world, the more we tend to become materialized; the more we handle the material world, even the little spirituality which we possessed before vanishes”. ಈ ಎಲ್ಲ ಮಾತುಗಳ ಹಿನ್ನೆಲೆಯಲ್ಲಿ ನಾವು ಮಾನವನಿರ್ವಣ ವಿಜ್ಞಾನದ ಹಲವಾರು ಆಯಾಮಗಳನ್ನು ಅಧ್ಯಯನ ಮಾಡಬೇಕು.

    ಹವ್ಯಾಸಗಳು: ಜೀವನಕ್ಕೆ ಯೋಗ್ಯರೀತಿಯ ಯಶಸ್ಸು ಪ್ರಾಪ್ತವಾಗಬೇಕಾದರೆ ಉತ್ತಮ ಹವ್ಯಾಸಗಳನ್ನು ರೂಢಿಸಿ ಕೊಳ್ಳಬೇಕು. ಸದಸದ್ವಿಚಾರಗಳನ್ನು ಆಸ್ವಾದಿಸಿ, ಶ್ಲಾಘಿಸುವುದು; ಸತ್ಕರ್ಮಗಳನ್ನು ಬೆಂಬಲಿಸುವುದರೊಂದಿಗೆ ನಿರ್ವಹಿಸುವುದು ಮತ್ತು ನಿರ್ದಿಷ್ಟ ಸನ್ನಿವೇಶಗಳನ್ನು ಯೋಗ್ಯರೀತಿಯಲ್ಲಿ ಅನುಷ್ಠಾನಗೊಳಿಸುವುದು- ಇಂತಹ ಜೀವನವಿಧಾನದಿಂದ ನಮ್ಮ ಯೋಗ್ಯಹವ್ಯಾಸಗಳು ಗಳಿತವಾಗುತ್ತವೆ.

    ಆಹಾರ, ನಿದ್ರೆ, ಕಾಯಕ, ಧೂಮಪಾನ, ಮದ್ಯಪಾನ ಮತ್ತು ಮಾದಕವಸ್ತುಗಳ ಸೇವನೆ ಇವು ಮಾನವನ ಹವ್ಯಾಸಗಳೇ ಆದರೂ ಉತ್ತಮ ಹವ್ಯಾಸಗಳಿಂದ ಆರೋಗ್ಯವೃದ್ಧಿಯಾದರೆ ಕೆಟ್ಟ ಹವ್ಯಾಸಗಳಿಂದ ಅನಾರೋಗ್ಯದ ಕೂಪದತ್ತ ಪಯಣ, ಅಲ್ಲವೇ? ಆದ್ದರಿಂದಲೇ ಉತ್ತಮ ಹವ್ಯಾಸಗಳ ಬೆಳವಣಿಗೆಯತ್ತ ಗಮನಹರಿಸಲೇಬೇಕು. ಯಾವುದೇ ಪ್ರಭಾವಕ್ಕೂ ಮನಸ್ಸು ಮುಗ್ಧವಾಗಿ ಪ್ರತಿಸ್ಪಂದಿಸುವ ಬಾಲ್ಯಾವಸ್ಥೆಯ ಅವಧಿಯೇ ಹವ್ಯಾಸಗಳನ್ನು ರೂಪಿಸಿಕೊಳ್ಳಲು ಯೋಗ್ಯಕಾಲ. ಉತ್ತಮ ವಿಚಾರಗಳ ಚಿಂತನೆ, ಚಿಂತಿಸಿದ್ದನ್ನು ಅನುಷ್ಠಾನಗೊಳಿಸುತ್ತ ಸಾಗಿದಂತೆ ಹವ್ಯಾಸಗಳು ಸ್ಪುರಣೆಗೊಳ್ಳುತ್ತವೆ. ಹವ್ಯಾಸಗಳು ಏಕಾಏಕಿ ನಿರ್ವಣಗೊಳ್ಳುವುದಿಲ್ಲ, ಅವು ಮೂಡಿಬರಲು ಬಲಯುತವಾದ ಭಾವನಾತ್ಮಕ ಉದ್ದೀಪನ ಮತ್ತು ಅಗತ್ಯ ಕಾಲಾವಧಿ ಬೇಕು.

    ಹತಾಶೆ ಏಕೆ?: ಮಾನವನಿಗೆ ಜೈವಿಕ, ಸಾಮಾಜಿಕ, ಆರ್ಥಿಕ ಮೊದಲಾದ ಅವಶ್ಯಕತೆಗಳಿದ್ದು ಅವುಗಳ ಸಂಪಾದನೆಯಲ್ಲಿ ವಿಫಲನಾದಾಗ ಹತಾಶನಾಗುತ್ತಾನೆ. ನಿರುದ್ಯೋಗ, ಹಿಡಿದ ಕೆಲಸದಲ್ಲಿ ವೈಫಲ್ಯ, ಸೋಲುಗಳು ಹತಾಶೆಗೆ ಬಹಿರಂಗ ಕಾರಣಗಳೆನಿಸಿದರೆ, ಅನಾರೋಗ್ಯ, ಬೌದ್ಧಿಕ ಸಾಮರ್ಥ್ಯದ ಕೊರತೆ, ಕೀಳರಿಮೆಗಳು ಆಂತರಿಕ ಕಾರಣಗಳಾಗುತ್ತವೆ. ಸನ್ನಿವೇಶವನ್ನು ಆತ್ಮವಿಶ್ವಾಸ ಮತ್ತು ವಿವೇಕದಿಂದ ಎದುರಿಸಿದಾಗಲಷ್ಟೇ ಜೀವನ ಮೇಲ್ಮುಖವಾಗಿ ಸಾಗುತ್ತದೆ. ಇಲ್ಲದಿದ್ದರೆ ಧೃತಿಗೆಟ್ಟ ವ್ಯಕ್ತಿತ್ವಗಳು ದುರ್ಬಲ ಆಲೋಚನೆಗಳಿಗೆ ಎಡೆಮಾಡಿಗೊಟ್ಟು, ಪ್ರಯತ್ನದಿಂದಲೇ ದೂರ ಸರಿದು, ವ್ಯಸನಿಗಳಾಗಿ ತಡವರಿಸುತ್ತ, ಕಡೆಗೆ ಆತ್ಮಹತ್ಯೆಗೂ ಶರಣಾಗುವುದುಂಟು!

    ತನ್ನ ಆಲೋಚನೆ ಮತ್ತು ಕಾರ್ಯಗಳು ವಿರುದ್ಧ ಸನ್ನಿವೇಶಕ್ಕೆ ಎಡೆಮಾಡಿಕೊಟ್ಟಾಗ ಅಂತಃತುಮುಲ ಮೂಡುತ್ತದೆ. ವೇದನೆ, ಘರ್ಷಣೆಗಳು ಎದುರಾಗುತ್ತವೆ. ಜೀವನದ ಯಶಸ್ಸು ನಮ್ಮ ನಿರ್ಧಾರಗಳನ್ನು ಅವಲಂಬಿಸಿದೆ ಎಂಬ ಮಾತು ಸತ್ಯವಾದರೂ ಸೂಕ್ತ ನಿರ್ಧಾರ ಕೈಗೊಳ್ಳುವುದೇ ಜೀವನದ ಕಠಿಣ ಕಾರ್ಯವೆಂಬುದು ಸುಳ್ಳಲ್ಲ. ಆದ್ದರಿಂದ ಸಂದಿಗ್ಧತೆ, ಅಸ್ಥಿರತೆಗಳು ದೀರ್ಘಕಾಲ ಮುಂದುವರಿಯದಂತೆ ಎಚ್ಚರವಹಿಸಿದಾಗಷ್ಟೇ ನಮ್ಮ ಮಾನಸಿಕ ಆರೋಗ್ಯ ಹದಗೆಡುವುದಿಲ್ಲ.

    ಹತಾಶ ಮನಸ್ಸಿನ ವ್ಯಕ್ತಿ ಬದುಕಿನಲ್ಲಿ ಎದುರಾದ ಕಷ್ಟ, ವೈಫಲ್ಯಗಳಿಂದ ಪಾರಾಗಿ ಯಶಸ್ಸನ್ನು ಗಳಿಸಲು ಕೆಲವು ಮಾರ್ಗೇಪಾಯಗಳಿಗೆ ಮೊರೆಹೋಗುತ್ತಾನೆ. ಕೇವಲ ತರ್ಕಪಾರಮ್ಯ(Rationalisation)ದಿಂದ ಸಂಭಾವ್ಯವಾದವನ್ನು ಮುಂದಿರಿಸಿ, ತನ್ನ ವೈಫಲ್ಯಗಳನ್ನು ಒಪ್ಪಿಕೊಂಡು ತಿದ್ದಿಕೊಳ್ಳುವ ಬದಲು ಇತರರು ತನ್ನನ್ನು ಕ್ಷಮಿಸಲೆಂದೋ ಅಥವಾ ತನ್ನ ಧೋರಣೆಯೇ ‘ಸರಿ’ ಎಂದು ವಾದಿಸುತ್ತಾನೆ! ‘ಕುರುಡು ಮಿದುಳಿನ ಬುದ್ಧಿಜೀವಿಗಳಿಗಿಂತ ಕುರುಡುಗಣ್ಣಿನವರೇ ಉತ್ತಮವಾಗಿ ನೋಡಬಲ್ಲರು’ ಎಂಬ ಪಾಠವನ್ನು ಜಗತ್ತು ಅವನಿಗೆ ಕಲಿಸುತ್ತದೆ.

    ಮುನ್ನಂದಾಜಿನೊಂದಿಗೆ ತನ್ನ ತಪ್ಪು, ವೈಫಲ್ಯಗಳಿಗೆ ಇತರರೇ ಕಾರಣವೆಂದು ಗೂಬೆ ಕೂರಿಸುತ್ತಾನೆ! ಕಾರ್ಯಕ್ಷೇತ್ರದಲ್ಲಿ ಇತರರಿಂದ ತನಗಾದ ಅವಮಾನ, ಹಿಂಸೆಗಳನ್ನು ಅಸಮ್ಮತವಾದ ತೀವ್ರಭಾವಗಳನ್ನು ಅಪ್ರಜ್ಞಾಪೂರ್ವಕವಾಗಿ ತನ್ನ ಮನೆಮಂದಿಯ ಕಡೆಗೆ ತಿರುಗಿಸಿಬಿಡುತ್ತಾನೆ.

    ಉದ್ಧಾರದ ಹೆದ್ದಾರಿ: ನಮ್ಮ ಅಸ್ತಿತ್ವಕ್ಕೆ ಜೀವಂತಿಕೆ ಮೂಡಬೇಕಾದರೆ ನಮ್ಮ ವ್ಯಕ್ತಿತ್ವದಲ್ಲಿ ಉಲ್ಲಾಸ, ಸನ್ನಡತೆ, ಔದಾರ್ಯ, ಸತ್ಯಸಂಧತೆ, ದಯೆ, ನಿಷ್ಠೆ, ವಿಶ್ವಾಸಾರ್ಹತೆ, ಹಾಸ್ಯಪ್ರಜ್ಞೆ, ಚಾಕಚಕ್ಯತೆ ಮತ್ತು ಪರೋಪಕಾರ ಗುಣಗಳು ಮನೆಮಾಡಿರಬೇಕು.

    ಸ್ವಾಮಿ ವಿವೇಕಾನಂದರೆನ್ನುತ್ತಾರೆ: ‘ತುತ್ತೂರಿ ಮೊಳಗಿಸುವುದರ ಮೂಲಕ, ಹಿಂಬಾಲಕರ ಮೆರವಣಿಗೆಗಳಿಂದ ರಾಜಕೀಯ ಅರಿವನ್ನು ಮೂಡಿಸಬಹುದು. ಮದ್ದುಗುಂಡು, ಕತ್ತಿಗಳ ಮೂಲಕ ಜಾತ್ಯತೀತತೆ ಮತ್ತು ಸಾಮಾಜಿಕ ಅರಿವನ್ನು ಮೂಡಿಸಬಹುದು. ಆದರೆ ಆಧ್ಯಾತ್ಮಿಕ ಜ್ಞಾನವನ್ನು ನಿಶ್ಶಬ್ದವಾಗಿಯೇ ನೀಡಬೇಕು. ಕಣ್ಣಿಗೆ ಕಾಣಿಸದಂತೆ, ಕಿವಿಗೆ ಕೇಳಿಸದಂತೆ ಬಿದ್ದು, ಗುಲಾಬಿ ಮೊಗ್ಗನ್ನು ಅರಳಿಸಿದ ಹಿಮದಂತೆ! ಇದುವೇ ಭಾರತವು ಜಗತ್ತಿಗೆ ಮತ್ತೆ ಮತ್ತೆ ಕೊಡುತ್ತಿರುವ ಆಧ್ಯಾತ್ಮಿಕ ಕೊಡುಗೆ’.

    ಮನುಷ್ಯನ ಸ್ವಂತ ಪ್ರಯತ್ನವನ್ನು ಬೆಂಬಲಿಸುತ್ತ ವಸಿಷ್ಠ ಮಹರ್ಷಿಗಳು ಹೇಳುತ್ತಾರೆ: ‘ಶಾಸ್ತ್ರಾಧ್ಯಯನ ಮಾಡುವುದು, ಗುರುಬೋಧೆ ಗ್ರಹಿಸುವುದು ಮತ್ತು ಸ್ವಪ್ರೇರಣೆಯಿಂದ ವೈಯಕ್ತಿಕ ಸಾಧನೆಯಲ್ಲಿ ತೊಡಗುವುದು- ಈ ಮೂರೂ ಕಾರ್ಯಗಳು ಸ್ವಪ್ರಯತ್ನದ ವಿಚಾರಕ್ಕೆ ಸಂಬಂಧಿಸಿವೆಯೇ ಹೊರತು ದೈವತ್ವಕ್ಕಲ್ಲ… ಪೌರುಷಗಳಲ್ಲಿ ಜನ್ಮಾಂತರದ್ದು ಮತ್ತು ಈ ಜನ್ಮದ್ದು ಎಂಬ ಎರಡು ವಿಧಗಳಿದ್ದರೂ ಈ ಜನ್ಮದ ಪೌರುಷದಿಂದ ಜನ್ಮಾಂತರದ ಪೌರುಷವನ್ನು ಜಯಿಸಬಹುದು’.

    ‘ಜೀವನವು ಬಯಸದೇ ಬಂದ ಭಾಗ್ಯ’ ಎಂದಿರುವ ಯಂತ್ರಋಷಿ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರು, ‘ಕಷ್ಟಪಟ್ಟು ಕೆಲಸ ಮಾಡುವುದು, ಶಿಸ್ತಿನ ಅಂಕೆಯಲ್ಲಿರುವುದು, ಸ್ವಇಚ್ಛೆಯಿಂದ ಸರಳ ಜೀವನ ನಡೆಸುವುದು ಮತ್ತು ಸಂತೃಪ್ತಿ ಸಂತುಷ್ಟರಾಗಿ ಜೀವಿಸುತ್ತ ಜೀವನೋತ್ಸಾಹ ಬತ್ತದಂತೆ ಮುನ್ನೆಲೆಯತ್ತ ಸಾಗುವುದು- ಇವೇ ನನ್ನ ಜೀವನದ ಯಶಸ್ಸಿನ ರಹಸ್ಯಗಳು’ ಎಂದಿದ್ದಾರೆ.

    ಸೇವೆ ಎಂಬುದು ಜೀವನದ ಸಮಗ್ರ ದೃಷ್ಟಿಕೋನದ ತಳಹದಿ ಹೊಂದಿರಬೇಕು. ಸೇವೆಯ ಉದ್ದೇಶ ಸಾಮಾಜಿಕ ಕರ್ತವ್ಯವಷ್ಟೇ ಅಲ್ಲ, ಅಥವಾ ಮಾನವೀಯತೆಯ ತೋರಾಣಿಕೆಯಷ್ಟೇ ಅಲ್ಲ, ಬದಲಾಗಿ ಸೇವೆಯಿಂದ ಪೂಜಿಸುವುದು ಮಾನವನಲ್ಲಿ ಅಂತರ್ಗತವಾಗಿರುವ ದೇವರನ್ನೇ!

    ಸೇವಾಕ್ಷೇತ್ರದಲ್ಲಿ ವೇದಾಂತ ತತ್ತ್ವವು ನಮಗೆ ದಾರಿದೀಪವಾಗುತ್ತದೆ. ಡಾ. ವಿಲಿಯಮ್ ಪುಲ್ಲೆನ್ ಹೇಳುತ್ತಾರೆ: ‘ನಮ್ಮ ಆಧ್ಯಾತ್ಮಿಕ ಅನುಭವಗಳಿಂದ ಅಲ್ಲಗಳೆಯಲಾಗದ ಅಥವಾ ನಿರಾಕರಿಸಲಾಗದ ಆತ್ಮದ ಅಸ್ತಿತ್ವದಲ್ಲಿ ನಂಬಿಕೆ ವೃದ್ಧಿಸುತ್ತ ಹೋಗುತ್ತದೆ. ಇದರ ಪರಿಣಾಮವಾಗಿಯೇ ಉದ್ದೇಶವೊಂದರ ದೃಷ್ಟಿಯ ನಂಬಿಕೆ ವೃದ್ಧಿಸುತ್ತದೆ. ಹಾಗಾಗದಿದ್ದರೆ ದಿನನಿತ್ಯ ನಮ್ಮ ಕಣ್ಣಮುಂದೆ ಘಟಿಸುವ ಸಾವು ಮತ್ತು ಮಾರಣಾಂತಿಕ ಪ್ರಕ್ರಿಯೆಗಳು ನಮ್ಮನ್ನು ಕುರುಡಾಗಿಸುವುದಿಲ್ಲವೇ? ಕೋಟಿಕೋಟಲೆಗಳ ಸಾಗರದಲ್ಲಿ ನಮ್ಮ ಜೀವನ ಪಯಣವು ದುಃಖರಹಿತ ವಾಗಬೇಕಾದರೆ ನಾವು ತಿಳಿಯಲೇಬೇಕಾದ ಸತ್ಯವೆಂದರೆ Body is recognized as a vessel for the soul, not the sole vessel.

    ‘ದುಶ್ಚಟಗಳು ಮತ್ತು ಮೈಗಳ್ಳತನಗಳು ಬಡತನಕ್ಕೆ ಕಾರಣಗಳು. ಆದರೂ ದುಡಿಯುವ ಮನಸ್ಸು ಮತ್ತು ರೀತಿ ತಿಳಿದಿರಬೇಕು. ಇತರರಿಂದ ದುಡಿಯುವ ರೀತಿ ಅರಿಯಬಹುದೇನೋ! ಆದರೆ ದುಡಿಯುವ ಮನಸ್ಸು, ಉತ್ಸಾಹಗಳನ್ನು ಇತರರಿಂದ ಎರವಲು ಪಡೆಯಲಾಗದು. ಅವು ಆತನ ಆಂತರ್ಯದಲ್ಲೇ ಉಕ್ಕಬೇಕು’ ಎಂಬ ಬ್ರಹ್ಮಲೀನ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರ ಮಾತು ‘ಸ್ವಪ್ರಯತ್ನದಿಂದಲೇ ಜೀವಂತಿಕೆ, ಸಕಲ ಸಿದ್ಧಿ’ ಎಂಬ ರಹಸ್ಯವನ್ನು ನಮ್ಮ ಮುಂದಿಡುತ್ತದೆ, ಯೋಚಿಸಿ ನೋಡಿ!
    (ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts