More

    ರೈತರ ಬದುಕಿಗೆ ಸಹಕಾರ ನೀಡುವ ವಿವೇಕ ಸಿರಿ

    ಚಾಮರಾಜನಗರ: ಉದ್ದೇಶಿತ ವಿವೇಕಸಿರಿ ಸೇವಾ ಸೌಹಾರ್ದ ಸಹಕಾರಿ ಸಂಘವು ರೈತರು, ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳ ಏಳಿಗೆಗೆ ನೆರವಾಗಲಿದೆ ಎಂದು ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ಎಚ್.ವಿ.ರಾಜೀವ್ ಅಭಿಪ್ರಾಯಪಟ್ಟರು.
    ಗುಂಡ್ಲುಪೇಟೆ ಪಟ್ಟಣದಲ್ಲಿ ಇತ್ತೀಚೆಗೆ ಉದ್ದೇಶಿತ ವಿವೇಕಸಿರಿ ಸೇವಾ ಸೌಹಾರ್ದ ಸಹಕಾರಿ ಸಂಘದ ನೂತನ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ರೈತರು ಹಲವಾರು ಸಮಸ್ಯೆ ಗಳಿಗೆ ಸಿಲುಕಿ ಆರ್ಥಿಕ ಸಂಕಷ್ಟ ಎದುರಿ ಸುತ್ತಿದ್ದಾರೆ. ಬೆಳೆ, ಬೆಲೆ ಸಮಸ್ಯೆ ಯಿಂದ ತೊಂದರೆ ಅನುಭವಿಸುವ ಸಂದರ್ಭದಲ್ಲಿ ಸೌಹಾರ್ದ ಸಹಕಾರಿ ಸಂಘ ರೈತರಿಗೆ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ. ಇದರಿಂದ ಗ್ರಾಮೀಣ ಜನರ ಬದುಕಿನ ಆರ್ಥಿಕ ಸುಧಾರಣೆಗೆಯಾಗಲಿದೆ. ಹಾಗಾಗಿ, ಅಂತಹ ರೈತರು, ಕಾರ್ಮಿಕರು ಹಾಗೂ ವ್ಯಾಪಾರಿಗಳಿಗೆ ಸಹಕಾರ ನೀಡುವ ಉದ್ದೇಶದಿಂದ ಈ ಸಂಘ ಸ್ಥಾಪನೆಯಾಗಿದೆ ಎಂದರು. ಕೆಲಸದಲ್ಲಿ ಬದ್ಧತೆ ಜತೆಗೆ ಮೌಲ್ಯಗಳನ್ನು ಮೈಗೂಡಿಸಿಕೊಂಡಾಗ ಸಹಕಾರ ಕ್ಷೇತ್ರದಲ್ಲಿ ಬೃಹತ್ ಪ್ರಮಾಣದಲ್ಲಿ ಬೆಳೆಯುವ ಅವಕಾಶ ಗಳಿವೆ. ಸಹಕಾರಿ ಸಂಸ್ಥೆ ಎತ್ತರಕ್ಕೆ ಬೆಳೆಯಲು ಪ್ರಾರಂಭದ ಸಮಯ ಮತ್ತು ಸನ್ನಿವೇಶಗಳನ್ನು ಅವಲಂಬಿಸಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಸದ್ಯ ಸಹಕಾರ ಸಂಘದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸ್ವಾಮಿ ಮರಳಾಪುರ ನೇತೃತ್ವದಲ್ಲಿ 500 ಜನ ಸಮಾನ ಮನಸ್ಕರು ಸೇರಿ ವಿವೇಕ ಸಿರಿ ಸೇವಾ ಸೌಹಾರ್ದ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಸಮಾನ ಮನಸ್ಕರು ಸೇರಿದಾಗ ಆಗುವ ಪ್ರಯತ್ನಗಳು ಯಶಸ್ವಿಯಾಗುತ್ತವೆ.
    ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪೂರ ಮಾತನಾಡಿ, ಬೆಳಗಾವಿ ಭಾಗದಲ್ಲಿ ಸಹಕಾರ ಕ್ಷೇತ್ರ ಅತ್ಯಂತ ಪ್ರಬಲವಾಗಿ ಬೆಳೆದಿದೆ. ಚಾಮರಾಜನಗರ ಜಿಲ್ಲೆಯಲ್ಲಿರುವ ಎಲ್ಲ ಸಹಕಾರ ಸಂಘಗಳ ಆರ್ಥಿಕ ವ್ಯವಹಾರವನ್ನು ಬೆಳಗಾವಿ ಭಾಗದಲ್ಲಿ ಒಂದು ಸಹಕಾರ ಸಂಘವೇ ಮಾಡುತ್ತಿದೆ. ಯಾವುದೇ ಪಕ್ಷ, ಜಾತಿ ಬೇಧ ಇಲ್ಲದೆ ಎಲ್ಲರೂ ಪರಸ್ಪರ ಸಹಕಾರ ಮಾಡುವುದರಿಂದ ಸಹಕಾರ ಸಂಘವು ಜಿಲ್ಲೆಯ ಜನರ ತಲಾದಾಯ ಹೆಚ್ಚಳ ಮಾಡುವಂತಾಗುತ್ತದೆ. ಈ ನಿಟ್ಟಿನಲ್ಲಿ ಉದ್ದೇಶಿತ ವಿವೇಕಸಿರಿ ಸೇವಾ ಸೌಹಾರ್ದ ಸಹಕಾರಿ ಸಂಘ ದಶಮಾನೋತ್ಸವ, ಸುವರ್ಣ ಮಹೋತ್ಸವ ಆಚರಿಸುವಂತಾಗಲಿ ಎಂದು ಹಾರೈಸಿದರು.
    ಉದ್ದೇಶಿತ ವಿವೇಕ ಸಿರಿ ಸೇವಾ ಸೌಹಾರ್ದ ಸಂಘದ ಮುಖ್ಯ ಪ್ರವರ್ತಕ ಸ್ವಾಮಿ ಮರಳಾಪುರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಸೌಹಾರ್ದ ಸಹಕಾರಿ ಸಂಘಗಳ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ. ಪಾಟೀಲ, ಡಾ.ಮೋಹನ್, ಪ್ರವರ್ತಕರಾದ ಬಿ.ಕೆ.ಮಹದೇವಸ್ವಾಮಿ, ಮೂಡ್ನಾ ಕೂಡುಕುಮಾರ್, ಆರ್.ಎಸ್.ಬಸವಣ್ಣ, ಆರ್.ಕೆ.ಕಾರ್ತಿಕ್, ಬಿ.ರವಿಕುಮಾರ್, ಎಸ್.ಶರತ್‌ಕುಮಾರ್, ಸಿದ್ದರಾಜು, ಆರ್.ಬಿ.ಸುರೇಶ್, ಟಿ.ಎಂ.ಶಿವಮಲ್ಲಪ್ಪ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts