Wednesday, 21st November 2018  

Vijayavani

ಕಬ್ಬು ಬೆಳೆಗಾರರ ಹೋರಾಟಕ್ಕೆ ಕೇಸರಿ ಬಲ - ರಾಜ್ಯಾದ್ಯಂತ ಇಂದು ಬಿಜೆಪಿ ಬೃಹತ್ ಪ್ರತಿಭಟನೆ        ಗದಗಿನ ಕದಡಿ ಬಳಿ ಒಡೆದ ಕಾಲುವೆ- ಜಮೀನುಗಳಿಗೆ ನುಗ್ಗಿದ ಅಪಾರ ನೀರು - ಅಧಿಕಾರಿಗಳ ವಿರುದ್ಧ ಆಕ್ರೋಶ        ದ್ರಾಕ್ಷಿ ತೋಟದಲ್ಲಿ ಕರೆಂಟೂ, ನೆಲದಲ್ಲೂ ಕರೆಂಟು - ಚಿಕ್ಕಬಳ್ಳಾಪುರದ ಪವರ್​ ಗ್ರಿಡ್ ಕಂಟಕ        ಮದ್ದೂರು ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ - ಒಬ್ಬ ಲ್ಯಾಬ್ ಟೆಕ್ನೀಷಿಯನ್ ಸ್ಥಿತಿ ಗಂಭೀರ-        ಸ್ಯಾಂಡಲ್​ವುಡ್​​ನಲ್ಲಿ ಮತ್ತೊಂದು ಗಟ್ಟಿಮೇಳ - ಡಿ.11, 12ರಂದು ಹಸೆಮಣೆ ಏರುತ್ತೆ ಐಂದ್ರಿತಾ, ದಿಗಂತ್ ಜೋಡಿ       
Breaking News

ಜೀವ-ದೇವ ಸಂಬಂಧ: ಶ್ರೀರಾಮಕೃಷ್ಣರಿತ್ತ ಬೆಳಕು

Friday, 13.07.2018, 3:03 AM       No Comments

| ಸ್ವಾಮಿ ವೀರೇಶಾನಂದ ಸರಸ್ವತೀ

ಮಾನವನು ಸತ್ಯಾರ್ಥಿಯಾದಾಗ ಭಗವಂತನ ಸಾಕ್ಷಾತ್ಕಾರ ಹೊಂದಲು ಸಾಧ್ಯವಾಗುತ್ತದೆ ಎಂಬುದು ರಾಮಕೃಷ್ಣರ ಅಭಿಮತ. ಭಗವದ್ಭಕ್ತರನ್ನು ಅತ್ಯಂತ ಸರಳ ಉಪಮೆಗಳ ಮೂಲಕ ಆಧ್ಯಾತ್ಮಿಕ ಜೀವನಕ್ಕೆ ಪ್ರೇರೇಪಿಸುತ್ತಿದ್ದುದು ಅವರ ವೈಶಿಷ್ಟ್ಯ. ರಾಮಕೃಷ್ಣರು ನೀಡುವ ಉದಾಹರಣೆಗಳು ಎಂಥವರನ್ನೂ ಆಲೋಚನಾಪರರನ್ನಾಗಿಸುವುದು ದಿಟ.

‘ನವಯುಗದ ಪ್ರವರ್ತಕ’ರೆಂದೇ ಗುರುತಿಸಲ್ಪಟ್ಟ ಶ್ರೀರಾಮಕೃಷ್ಣರು ತಮ್ಮ ಅಪೂರ್ವ ಸಾಧನಾ ಜೀವನದ ಮೂಲಕ ಜನಮಾನಸದಲ್ಲಿ ಭಗವಂತನನ್ನು ಕುರಿತಾದ ಶ್ರದ್ಧಾಭಕ್ತಿಗಳು ಊರ್ಜಿತಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದರು. ಪಾಶ್ಚಾತ್ಯ ಜಗತ್ತು ಮಾನವ ಬದುಕಿನ ಅವಶ್ಯಕತೆಗಳ ಕುರಿತಾಗಿ ಪ್ರಸ್ತಾಪಿಸಿದ ಜೀವನಮೌಲ್ಯಗಳ ವಿಚಾರಗಳಲ್ಲಿ, ಇಂದ್ರಿಯ ಕೇಂದ್ರಿತವೂ ಲೌಕಿಕವೂ ಆದ ಭೋಗ ಬದುಕಿನ ವೈಭವದ ಪ್ರವಾಹವನ್ನು ಸಮರ್ಥವಾಗಿ ಹಾಗೂ ಸಮರ್ಪಕವಾಗಿ ಪ್ರಶ್ನಿಸಿ ಮಾನವನ ಜೀವನಕ್ಕೆ ಅತ್ಯವಶ್ಯಕವಾದ ಅಧ್ಯಾತ್ಮದ ಆಯಾಮವನ್ನು ಇತ್ತ ಮಹಾತ್ಮರು ಅವರು. ಅವರ ಜೀವನ ಸಂದೇಶಗಳು ನಮ್ಮ ಲೌಕಿಕ ಜೀವನದ ಶುದ್ಧೀಕರಣಕ್ಕಷ್ಟೇ ಸೀಮಿತವಾಗದೆ, ಅಂತಃಸತ್ವದ ಅಂತರಗಂಗೆಯನ್ನು ಗುರ್ತಿಸಿ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆಯನ್ನು ಸ್ಪಷ್ಟವಾಗಿ ಸಾರಿವೆ.

‘ದುರ್ಲಭವಾದ ಮಾನವ ಜನ್ಮವನ್ನು ಪಡೆದ ನಂತರ ನಮಗೆ ಅತ್ಯವಶ್ಯಕವಾಗಿ ಬೇಕಾಗಿರುವುದು ಭಗವಂತನ ಪಾದಪದ್ಮಗಳಲ್ಲಿ ಭಕ್ತಿ. ಹಸು, ಹಿಂಡಿ-ತೌಡು ಹಾಕಿದ ಕಲಗಚ್ಚನ್ನು ಬಹಳವಾಗಿ ಪ್ರೀತಿಸುವಂತೆ ಭಗವಂತನು ವಿನೀತರ, ದೀನರ ಭಕ್ತಿಯನ್ನು ಬಹಳವಾಗಿ ಪ್ರೀತಿಸುತ್ತಾನೆ. ಹಸು ತನ್ನ ಕರುವಿನ ಕಡೆಗೆ ಓಡೋಡಿ ಬರುವ ಹಾಗೆ ಭಗವಂತನು ಭಕ್ತರೆಡೆ ಓಡೋಡಿ ಬರುತ್ತಾನೆ’ ಎಂಬ ರಾಮಕೃಷ್ಣರ ಸಂದೇಶವು ಭಗವದ್ಭಕ್ತರ ಬದುಕಿಗೆ ಕೇವಲ ನಂಬಿಕೆಯಷ್ಟೇ ಅಲ್ಲದೆ, ‘ಜೀವ-ದೇವ’ ಸಂಬಂಧ ಕುರಿತಾದ ಸಾರ್ವಕಾಲಿಕ ಮಾನ್ಯತಾಯೋಗ್ಯವಾದ ಅಭಯವೂ ಹೌದು.

ಭಗವಂತನು ಸಾಧಕರ, ಸಂತರ ಹಾಗೂ ಯೋಗಿಗಳ ‘ಪಕ್ಷಪಾತಿ’ಯೆಂಬಂತೆ ಬಿಂಬಿತವಾಗಿದ್ದ ಸಮಾಜದಲ್ಲಿ ಗೃಹಸ್ಥರಾದ ಶ್ರೀರಾಮಕೃಷ್ಣರು ತ್ಯಾಗ ಹಾಗೂ ವೈರಾಗ್ಯ ಸಾಮ್ರಾಜ್ಯದ ಉತ್ತುಂಗ ಶಿಖರದಲ್ಲಿ ಪ್ರತಿಷ್ಠಾಪಿತರಾಗಿದ್ದರೆಂಬ ಮಾತು ಅತಿಶಯೋಶಕ್ತಿಯಲ್ಲ. ಅವರಾಡಿದ ಪ್ರತಿಯೊಂದು ಮಾತೂ ಆಲೋಚನೀಯ, ಸ್ಮರಣೀಯ ಹಾಗೂ ಅನುಸರಣಯೋಗ್ಯ. ರಾಮಕೃಷ್ಣರೆನ್ನುತ್ತಾರೆ: ‘ನೋಡಿ, ಭಗವಂತ ಮತ್ತು ಆತನ ಐಶ್ವರ್ಯ ಈ ಜಗತ್ತು. ಜನರು ಆತನ ಐಶ್ವರ್ಯಕ್ಕೆ ಮರುಳಾಗಿ ಎಲ್ಲವನ್ನೂ ಮರೆತುಬಿಡುತ್ತಾರೆ. ಐಶ್ವರ್ಯ ಯಾರದೋ ಆತನನ್ನು ಹುಡುಕುವುದಿಲ್ಲ. ಕಾಮ-ಕಾಂಚನ ಸುಖಕ್ಕಾಗಿ ಎಲ್ಲರೂ ಹಾತೊರೆಯುತ್ತಾರೆ. ಆದರೆ ಅದರಲ್ಲಿ ದುಃಖ, ಅಶಾಂತಿ-ಇವೇ ಅಧಿಕ. ಸಂಸಾರವೆಂಬುದು ವಿಶಾಲಾಕ್ಷಿ (ನದಿ)ಯ ಸುಳಿಯ ಹಾಗೆ! ದೋಣಿ ಏನಾದರೂ ಅದಕ್ಕೆ ಸಿಕ್ಕಿಕೊಂಡರೆ ಮೇಲೇಳುವ ಹಾಗೇ ಇಲ್ಲ. ಈ ಸಂಸಾರ ಸೀಗೇಬಳ್ಳಿಯ ಹಾಗೆ! ಒಂದರಿಂದ ಬಿಡಿಸಿಕೊಂಡರೆ ಇನ್ನೊಂದರಿಂದ ಚುಚ್ಚಿಸಿಕೊಳ್ಳಬೇಕಾಗುತ್ತದೆ’.

ಅವರ ಈ ಮಾತಿನಲ್ಲಿ ಜೀವಾತ್ಮನು ತನ್ನ ವೈಯಕ್ತಿಕ ಬದುಕಿನಲ್ಲಿ ಭಗವಂತನ ಹಾಗೂ ಆತನ ಐಶ್ವರ್ಯದೊಂದಿಗೆ ವ್ಯವಹರಿಸಬೇಕೆಂದರೆ ಗಮನಿಸಬೇಕಾದ ಎಚ್ಚರಿಕೆಯ ಅಂಶ ಇದೆ. ಎಚ್ಚರಿಕೆ ಎಂದಾಕ್ಷಣ- ಇದು ಭಯ ಹುಟ್ಟಿಸುವಂಥದ್ದಲ್ಲ. ಬದಲಾಗಿ ವಿವೇಕವನ್ನು ಜಾಗೃತಗೊಳಿಸಿಕೊಳ್ಳಬೇಕೆಂಬ ಅಂಶ. ಜಗತ್ತಿನಲ್ಲಿನ ಲೌಕಿಕ ಸಂಪತ್ತು ಹಾಗೂ ವೈಯಕ್ತಿಕ ಆಸೆ, ಆಕಾಂಕ್ಷೆಗಳು ಭಗವಂತವಿಹಿತವಾದಾಗ ಅವು ನದಿಯಲ್ಲಿನ ಗೂಢವಾದ ಸುಳಿಯಂತೆ ಎದ್ದು ಅಭಿವೃದ್ಧಿಗೆ ಅರ್ಥಾತ್ ಜೀವನದ ಯಶಸ್ಸಿಗೆ ಪ್ರತಿಬಂಧಕವಾಗುತ್ತವೆ. ಆಸೆಗಳು ಪ್ರಾರಂಭದಲ್ಲಿ ಸಹಜವಾಗಿ ಕಾಣಬಹುದಾದರೂ ಅವುಗಳ ಪ್ರಭಾವ, ತೀವ್ರತೆ ಮಾನವನನ್ನು ಬಂಧಿಯನ್ನಾಗಿಸುತ್ತದೆ. ಮಾನವನಲ್ಲಿ ವಿವೇಕವಿಲ್ಲದಿದ್ದಾಗ ಅವನಲ್ಲಿ ಮೂಡಬಹುದಾದ ಆಸೆಗಳು ದಾರಿತಪ್ಪಿಸುತ್ತವೆ. ‘ವಂಚಿಸಲಾರದ ಆಸೆಯೇ ಯೋಗ’ ಎಂಬ ಮಾತನ್ನು ನಾವು ತಿಳಿದಿರಬೇಕು. ಆದ್ದರಿಂದ ರಾಮಕೃಷ್ಣರು ‘ಮಾನವ ಜೀವನದ ಉದ್ದೇಶ ಭಗವಂತನಲ್ಲಿ ಪ್ರೇಮ ಗಳಿಸುವುದೇ ಆಗಿದೆ’ ಎಂಬ ಮಾತನ್ನು ಒತ್ತಿ ಹೇಳುತ್ತಾರೆ. ಅಯಸ್ಕಾಂತದ ಸಂಪರ್ಕಕ್ಕೆ ಬಂದ ಕಬ್ಬಿಣವು ಅಯಸ್ಕಾಂತದ ಗುಣವನ್ನು ತನ್ನದಾಗಿಸಿಕೊಳ್ಳುತ್ತದೆ. ಆದ್ದರಿಂದ ಸಂಘಜೀವಿಯಾದ ಮಾನವನು ತಾನು ಒಡನಾಡುವ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗದಿರನು. ಯೋಗಿಗಳ ಮನಸ್ಸು ಸರ್ವದಾ ಭಗವಂತನ ಅಡಿದಾವರೆಗಳಲ್ಲಿ ನೆಲೆಸಿರುತ್ತದೆಯಾದ್ದರಿಂದ ಸಂಸಾರಿಗಳು ಸಾಧುಸಂಗ ಮತ್ತು ಸರ್ವದಾ ಪ್ರಾರ್ಥನೆಯ ಜೀವನಶೈಲಿಯನ್ನು ಮೈಗೂಡಿಸಿಕೊಳ್ಳಬೇಕೆಂಬುದು ಪರಮಹಂಸರ ಅಭಿಮತ. ಅವರೆನ್ನುತ್ತಾರೆ: ‘ವೈದ್ಯರನ್ನು ಕಂಡಾಗ ನಮ್ಮ ಕಾಯಿಲೆ ನೆನಪಾಗುವಂತೆ, ವಕೀಲರನ್ನು ಕಂಡಾಗ ನಮ್ಮ ವ್ಯಾಜ್ಯ ನೆನಪಾಗುವಂತೆ, ಸಂನ್ಯಾಸಿಯನ್ನು ಕಂಡಾಗ ನಮಗೆ ದೇವರ ನೆನಪಾಗುತ್ತದೆ’.

ಸಾಧುವಿನಲ್ಲಿ ಭಗವದ್ ವ್ಯಾಕುಲತೆಯನ್ನು ಕಂಡು ಸಂಸಾರಿಗಳು ಭಗವಂತನ ಬಗ್ಗೆ ಅನುರಾಗವನ್ನು ಮೂಡಿಸಿಕೊಳ್ಳಲು ಸಾಧ್ಯ. ಸಾಧುಸಂಗವು ಮುಂದುವರಿದಂತೆ ಮಾನವನಿಗೆ ಭಗವಂತನು ಬೇಕೆಂಬ ತೀವ್ರ ತವಕ ಮೂಡುತ್ತದೆ. ಭಕ್ತನ ವ್ಯಾಕುಲ ಪ್ರಾರ್ಥನೆಯ ಫಲವಾಗಿ ‘ಭಗವಂತ ನಮ್ಮ ಸ್ವಂತದವ’ ಎಂಬ ವಿಚಾರದಲ್ಲಿ ಶ್ರದ್ಧೆ, ವಿಶ್ವಾಸಗಳು ಮೂಡುತ್ತವೆ. ‘ಆನೆಯು ಮನಬಂದಂತೆ ಅಶಿಸ್ತಿನಿಂದ ವರ್ತಿಸತೊಡಗಿದಾಗ, ಮಾವುತನು ಅದನ್ನು ನಿಯಂತ್ರಿಸಿ ಸರಿದಾರಿಗೆ ತರುತ್ತಾನೆ. ಅಂತೆಯೇ ಸಾಧು ಸಂತರಿಂದ ಸಂಸಾರಿಗಳಲ್ಲಿ ಸದಸದ್ವಿಚಾರ ಮೂಡುತ್ತದೆ. ಸತ್ಸಂಗದಲ್ಲಿರುವ ವ್ಯಕ್ತಿಗೆ ಅಸತ್ಯ, ಅನ್ಯಾಯದ ಕಡೆ ಕುತೂಹಲ ಮೂಡಿದಾಗ ತಕ್ಷಣ ಆತನ ಮನಸ್ಸು ವಿಚಾರದಲ್ಲಿ ತೊಡಗಿ ಅವನನ್ನು ಎಚ್ಚರಿಸುತ್ತದೆ’ ಎಂದಿದ್ದಾರೆ ಪರಮಹಂಸರು.

ಭಗವಂತನ ಸೃಷ್ಟಿಯಲ್ಲಿ ಅವಿದ್ಯೆ, ಅಂಧಕಾರಗಳಿಗೂ ಸ್ಥಾನವಿದೆ ಎಂಬುದು ಸಹಜ ಸತ್ಯ. ಮಾನವನ ಬದುಕು ಕಾಮ, ಕ್ರೋಧ, ಲೋಭ ಮುಂತಾದವುಗಳಿಂದ ವಿಹಿತವಂತೂ ಅಲ್ಲ. ಹೀಗಿದ್ದರೂ, ಇವುಗಳನ್ನು ಪರಮಾತ್ಮನೇ ಸೃಷ್ಟಿಸಿದ್ದರೂ, ಅವನ ಈ ವಿಚಾರಗಳು ಮಾನವನ ಬೆಳವಣಿಗೆಗೆ ಆಘಾತಕಾರಿಯಲ್ಲವೇ? ಎಂಬ ಪ್ರಶ್ನೆಯಂತೂ ವಾಸ್ತವವೇ ಹೌದು. ಈ ಪ್ರಶ್ನೆಗೆ ಶ್ರೀರಾಮಕೃಷ್ಣರ ಉತ್ತರ ಅತ್ಯಂತ ಮನೋಜ್ಞ-‘ಅಂಧಕಾರವು ಬೆಳಕಿನ ಮಹತ್ವವನ್ನು ಮತ್ತಷ್ಟು ಪ್ರಕಾಶಿಸುತ್ತದೆ. ಸಂಯಮರಹಿತ ವ್ಯಕ್ತಿಯ ಜೀವನದಲ್ಲಿ ಕಾಮ-ಕ್ರೋಧಾದಿಗಳು ಅಡ್ಡಿ-ಆತಂಕಗಳನ್ನು ಮೂಡಿಸುವುದಂತೂ ಖಂಡಿತ. ಆದರೆ ಇಂದ್ರಿಯಗಳನ್ನು ಗೆದ್ದವನು ಮಹಾಪುರುಷನಾಗುತ್ತಾನೆ. ಜಿತೇಂದ್ರಿಯನ ಕೃಪೆಯಿಂದ ಭಗವಂತನ ಸಾಕ್ಷಾತ್ಕಾರವು ದೊರೆತುಬಿಡುತ್ತದೆ’.

ಸಾಧನೆ ಮುಂದುವರಿದಂತೆಲ್ಲ ಮಾನವನಲ್ಲಿ ಸರಳತೆ ಮೂಡಬೇಕು. ಸರಳತೆ ಎಂಬುದೊಂದು ದಿವ್ಯಗುಣ. ಸಾಧನೆ ಶುದ್ಧಮನಸ್ಸಿನ ಸಹಾಯದಿಂದ ಗಳಿತವಾಗುತ್ತದೆ. ‘ಬಾಯಿಗೆ ಹಾಕಿಕೊಂಡ ತುತ್ತಿನಲ್ಲಿ ಕೂದಲೇನಾದರೂ ಸಿಕ್ಕಿಕೊಂಡಿದ್ದರೆ ಇಡೀ ತುತ್ತನ್ನೇ ಉಗುಳಬೇಕಾಗುತ್ತದೆ’ ಎಂಬ ರಾಮಕೃಷ್ಣರ ಮಾತನ್ನು ಅವಲೋಕಿಸಿದಾಗ ಸಾಧನೆಯ ಪಥವನ್ನು ಎಚ್ಚರಿಕೆಯಿಂದ ಕ್ರಮಿಸಬೇಕು ಹಾಗೂ ಪ್ರತಿಯೊಂದು ಹೆಜ್ಜೆಯ ಯಶಸ್ಸೂ ಗಣನೀಯವಾದುದು ಎಂಬುದು ಮನವರಿಕೆಯಾಗುತ್ತದೆ.

ಇತರರ ಸಂಪರ್ಕದ ಬಗ್ಗೆ ಎಚ್ಚರದಿಂದಿರಿ: ರಾಮಕೃಷ್ಣರೆನ್ನುತ್ತಾರೆ-‘ಒಮ್ಮೆ ನಾನು ಕಲ್ಕತ್ತೆಯಲ್ಲಿ ವಸ್ತುಪ್ರದರ್ಶನಕ್ಕೆ ಹೋಗಿದ್ದೆ. ಕಲ್ಲುಗಳನ್ನು ಹೋಲುವ ವಸ್ತುವೊಂದನ್ನು ಕಂಡು ಅದೇನೆಂದು ವಿಚಾರಿಸಿದೆ. ಆಗ ಅಲ್ಲಿನ ಮೇಲ್ವಿಚಾರಕರು ಆ ವಸ್ತುವು ನೂರಾರು ವರ್ಷಗಳ ಹಿಂದೆ ಮೀನಿನಂಥ ಜೀವಿ ಆಗಿತ್ತೆಂದೂ, ನಿರಂತರ ಕಲ್ಲುಗಳ ಸಹವಾಸದಿಂದ ಕಾಲಕ್ರಮದಲ್ಲಿ ಕಲ್ಲೇ (Fossils) ಆಗಿ ಮಾರ್ಪಾಟಾಯಿತು ಎಂದೂ ತಿಳಿಸಿದರು! ಆದ್ದರಿಂದಲೇ ನಾನು ಸದಾ ಭಕ್ತರನ್ನು ಎಚ್ಚರಿಸುತ್ತಿರುತ್ತೇನೆ. ನೀವು ಎಚ್ಚರಿಕೆಯಿಂದ ಜನರ ಸಂಪರ್ಕ ಬೆಳೆಸಬೇಕು. ಏಕೆಂದರೆ ನೀವು ಯಾರ ಸಂಪರ್ಕದಲ್ಲಿ ಇರುತ್ತೀರೋ ಅವರ ಸ್ವಭಾವದ ಪರಿಣಾಮ ನಿಮ್ಮ ಮೇಲಾಗುವುದು ಸತ್ಯ ಎಂದು’.

ಸರ್ಕಸ್ಸಿನಲ್ಲಿ ಯುವತಿಯೊಬ್ಬಳು ಓಡುವ ಕುದುರೆ ಮೇಲೆ ಒಂಟಿ ಕಾಲಿನಲ್ಲಿ ನಿಂತು, ಆಗಿಂದಾಗ್ಗೆ ಓಡುವ ಹಾದಿಯಲ್ಲಿ ವೃತ್ತಾಕಾರದ ಕಬ್ಬಿಣದ ಮೂಲಕ ಜಿಗಿದು ಮತ್ತೆ ಕುದುರೆಯ ಮೇಲೆ ತನ್ನ ಸಮತೋಲನವನ್ನು ಸಾಧಿಸುತ್ತಿದ್ದುದನ್ನು ಪ್ರಸ್ತಾಪಿಸುತ್ತ ಆಧ್ಯಾತ್ಮಿಕ ಜೀವನದಲ್ಲಿ ಅತ್ಯುತ್ಕೃಷ್ಟ ಏಕಾಗ್ರತೆಯ ಅವಶ್ಯಕತೆಯನ್ನು ಒತ್ತಿ ಹೇಳುತ್ತಾರೆ.

ಗಾಜಿನ ಮೇಲೆ ಲೇಪಿತವಾದ ರಾಸಾಯನಿಕ ಪುಡಿಯ ಮೇಲೆ ನಮ್ಮ ಛಾಯಾಚಿತ್ರವು ಮುದ್ರಿತವಾಗುವ ಉದಾಹರಣೆ ಪ್ರಸ್ತಾಪಿಸುತ್ತ ರಾಮಕೃಷ್ಣರು, ‘ನಮ್ಮ ನಮ್ಮ ಇಷ್ಟದೇವನ ಮೂರ್ತಿಯನ್ನು ಹೃದಯದ ಮೇಲೆ ಮುದ್ರಿಸಿಕೊಂಡು ಸಾಧನಾಪರರಾಗಬೇಕು’ ಎಂದು ತಿಳಿಹೇಳುತ್ತಾರೆ.

ಚಿತ್ತಶುದ್ಧಿ ಅವಶ್ಯಕ: ಆಧ್ಯಾತ್ಮಿಕ ಸಾಧಕನಿಗೆ ಉದಾರತೆ ಮತ್ತು ಸರಳತೆಗಳು ಅತ್ಯವಶ್ಯಕ. ಸಾಮಾನ್ಯವಾಗಿ ವಿಷಯಬುದ್ಧಿ ಎಂಬುದು ಮಾನವನ ಜೀವನದಲ್ಲಿ ಒಂದು ಪ್ರತಿಬಂಧಕವಾಗಿ ಕಾರ್ಯನಿರ್ವಹಿಸುತ್ತದೆ. ರಾಮಕೃಷ್ಣರು ಹೇಳುತ್ತಾರೆ: ‘ಮಣ್ಣನ್ನು ಚೆನ್ನಾಗಿ ಹದಮಾಡಿಕೊಳ್ಳದಿದ್ದರೆ ಮಡಕೆ ಬಿರುಕು ಬಿಡುತ್ತದೆ. ಅದಕ್ಕಾಗಿ ಕುಂಬಾರನು ಮಣ್ಣನ್ನು ಮೊದಲೇ ಚೆನ್ನಾಗಿ ಹದ ಮಾಡಿಕೊಳ್ಳುತ್ತಾನೆ. ಕನ್ನಡಿ ಮೇಲೆ ಧೂಳು ಕವಿದಿದ್ದರೆ ಮುಖ ಕಾಣಿಸದು. ಚಿತ್ತಶುದ್ಧಿ ಇಲ್ಲದಿದ್ದರೆ ಸ್ವಸ್ವರೂಪದ ದರ್ಶನ ದೊರೆಯದು’.

ಮಣ್ಣಿನಲ್ಲಿರುವ ಮರಳು ಹಾಗೂ ಕಲ್ಲುಗಳು ಮಡಕೆಯಲ್ಲಿ ಬಿರುಕನ್ನು ಮೂಡಿಸುವಂತೆ ವಿಷಯಬುದ್ಧಿಯು ಮಾನವನ ಸಾಧನಾಪಥದಲ್ಲಿ ಪ್ರತಿಬಂಧಕವಾಗಿ ನಿಲ್ಲುತ್ತದೆ. ತಪಸ್ಸಿನ ಮೂಲಕವೇ ಮಾನವನು ಇಂದ್ರಿಯಗಳ ಬಗೆಗಿನ ದೃಷ್ಟಿಯನ್ನು ಉದಾತ್ತೀಕರಿಸಿ ಇಂದ್ರಿಯಾಧೀಶನೆಡೆಗೆ ಸಾಗಲು ಸಾಧ್ಯ. ಕ್ಷಣಕ್ಷಣದಲ್ಲಿಯೂ ತನ್ನ ಮನಸ್ಸನ್ನು ಶೋಧಿಸುತ್ತ ಸಾಗಬೇಕಾಗುತ್ತದೆ. ಆದ್ದರಿಂದಲೇ ದಾಸರವಾಣಿಯಾದ ‘ಮನವ ಶೋಧಿಸಬೇಕು ನಿತ್ಯ’ ಎಂಬುದು ಸತ್ಯಸ್ಯಸತ್ಯ.

ಭಗವಂತನು ಅಯಸ್ಕಾಂತವೇ ಹೌದಾದರೂ ಜೀವಾತ್ಮನೆಂಬ ಕಬ್ಬಿಣವು ಮಣ್ಣಿನಿಂದ ಮೆತ್ತಿಕೊಂಡಿದ್ದಾಗ ಅದರೆಡೆಗೆ ಆಕರ್ಷಿತವಾಗದು. ಮಣ್ಣನ್ನು ತೊಳೆದು ಶುದ್ಧಗೊಳಿಸಿದಾಗ ಅದನ್ನು ಅಯಸ್ಕಾಂತವು ಆಕರ್ಷಿಸುತ್ತದೆ. ಆದ್ದರಿಂದ ತಪಸ್ಸಿನಿಂದ ಅಂದರೆ ಸತ್ಸಂಗ, ಸಾಧುಸಂಗ, ಸಂಕೀರ್ತನೆ, ಸದಸದ್ವಿಚಾರಗಳಿಂದ ಸರಳತೆ ಹಾಗೂ ಉದಾರತೆಗಳು ನಮ್ಮದಾಗುತ್ತವೆ. ಇವುಗಳೆಲ್ಲ ಅತ್ಯವಶ್ಯಕ. ಏಕೆಂದರೆ ಚಿತ್ತಶುದ್ಧಿಯಾಗದೆ ಭಗವಂತನನ್ನು ಪಡೆಯಲೇಬೇಕೆಂಬ ಹಂಬಲ ಬಾರದು. ಶ್ರೀರಾಮಕೃಷ್ಣರು ಎಂದೂ ಸಾಂಸಾರಿಕ ಜೀವನವನ್ನು ದೋಷಪೂರಿತವೆಂದವರಲ್ಲ. ಆದರೆ ಸಂಸಾರಿ ಕಾಮ-ಕಾಂಚನಗಳ ನಡುವೆಯೇ ಯಾವಾಗಲೂ ಇದ್ದರೆ, ನಿರಂತರವಾಗಿ ಮಲವನ್ನು ಹೊರುವ ಜಾಡಮಾಲಿಗೆ ಕಾಲಕ್ರಮೇಣ ಅದರ ಬಗ್ಗೆ ಅಸಹ್ಯ ಭಾವನೆ ದೂರವಾಗುವಂತೆ, ಅವರು ವಿವೇಕವನ್ನು ಕಳೆದುಕೊಳ್ಳುತ್ತಾರೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

‘ಅಗಸನ ಮನೆಗೆ ಹೋಗಿ ಬಂದ ಬಟ್ಟೆಗೆ ಅದ್ದಲ್ಪಟ್ಟ ದ್ರಾವಣದ ಬಣ್ಣವೇ ಮೂಡಿಬರುವಂತೆ, ಬಂಧನ ಹಾಗೂ ಮುಕ್ತಿಗೆ ಕಾರಣವಾದ ನಮ್ಮ ಮನಸ್ಸನ್ನು ಸಮರ್ಪಕವಾಗಿ ನಿರ್ವಹಿಸುವ ವಿಷಯದಲ್ಲಿ ಭಗವಂತನ ನಾಮ-ಜಪ ಹಾಗೂ ನಿಷ್ಕಾಮ ಭಾವನೆಯಿಂದ ಕರ್ತವ್ಯವನ್ನು ನಿರ್ವಹಿಸುವ ಮೂಲಕ ಚಿತ್ತಶುದ್ಧಿಯಾಗಿ ಭಗವಂತನಲ್ಲಿ ಅನುರಾಗ ಮೂಡುತ್ತದೆ’ ಎನ್ನುತ್ತಾರೆ ರಾಮಕೃಷ್ಣರು. ‘ಮಗುವಿನ ಹಠಕ್ಕೆ ಮನಸೋತ ತಾಯಿ ಅದು ಕಾಡಿದ್ದನ್ನು, ಬೇಡಿದ್ದನ್ನು ನೀಡುವಂತೆ ಭಕ್ತನ ವ್ಯಾಕುಲ ಪ್ರಾರ್ಥನೆಯನ್ನು ಭಗವಂತನು ಕೇಳಿಯೇ ಕೇಳುತ್ತಾನೆ’ ಎಂಬುದಾಗಿ ‘ಜೀವ-ದೇವ’ ಸಂಬಂಧದ ಬಗ್ಗೆ ವಿಶೇಷವಾಗಿ ಬೆಳಕು ಚೆಲ್ಲಿದ್ದಾರೆ.

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

Leave a Reply

Your email address will not be published. Required fields are marked *

Back To Top