Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಗೃಹಸ್ಥನಿಗೊಂದು ಸಂಹಿತೆ, ಇದೇ ಅಸ್ಮಿತೆ

Friday, 29.06.2018, 3:05 AM       No Comments

| ಸ್ವಾಮಿ ವೀರೇಶಾನಂದ ಸರಸ್ವತೀ

ಭಗವಂತನ ನಾಮಸ್ಮರಣೆ ದೇಹ-ಮನಸ್ಸಿನ ಕಲ್ಮಷಗಳನ್ನು ತೊಳೆಯುತ್ತದೆ. ಕರ್ತವ್ಯ ನಿರ್ವಹಿಸುವಾಗಲೂ ಒಂದು ಕೈಯಲ್ಲಿ ಕೆಲಸ, ಇನ್ನೊಂದು ಕೈಯಲ್ಲಿ ದೇವರನ್ನು ಹಿಡಿದುಕೊಳ್ಳಬೇಕು. ಅಗಾಧ ಭಕ್ತಿಯೇ ನಮ್ಮನ್ನು ಕರ್ಮಗಳಿಂದ ಮುಕ್ತಗೊಳಿಸಿ ಪರಮಾನಂದದೆಡೆಗೆ ಕರೆದುಕೊಂಡು ಹೋಗುತ್ತದೆ.

ಭಗವದ್ಗೀತೆಯ ವಿಭೂತಿಯೋಗದಲ್ಲಿ ಭಗವಂತ ಹೀಗೆ ಹೇಳುತ್ತಾನೆ:

ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ|

ಅಹಮಾದಿಶ್ಚ ಮಧ್ಯಂ ಚ ಭೂತಾವಾಮಂತ ಏವ ಚ||

‘ಎಲೈ ಅರ್ಜುನ, ನಾನು ಸಮಸ್ತ ಪ್ರಾಣಿಗಳ ಹೃದಯದಲ್ಲಿರುವ ಆತ್ಮ, ನಾನೇ ಸಮಸ್ತ ಭೂತಗಳ ಆದಿ, ಮಧ್ಯ ಮತ್ತು ಅಂತ್ಯ’.

ಭಾರತೀಯ ಋಷಿಗಳು ಮಾನವನ ಬದುಕನ್ನು ಕಾಲದ ದೃಷ್ಟಿಯಿರಿಸಿಕೊಂಡು ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ ಎಂಬ ನಾಲ್ಕು ಆಶ್ರಮಗಳಾಗಿ ವಿಂಗಡಿಸಿದ್ದಾರೆ. ಈ ಅವಧಿಯಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷವೆಂಬ ಚತುರ್ವಿಧ ಪುರುಷಾರ್ಥಗಳನ್ನು ಅವನು ಸಂಪಾದಿಸಬೇಕೆಂಬುದೇ ಗುರಿ. ಬದುಕು ಲೌಕಿಕವೇ ಆಗಲಿ ಅಥವಾ ಪಾರಮಾರ್ಥಿಕವೇ ಆಗಲಿ ಸತ್ಯನಿಷ್ಠೆಯನ್ನು ಆಧರಿಸಿಯೇ ಸಾಗಬೇಕು. ಜೀವಿಯು ಪ್ರಾಪಂಚಿಕತೆಯಿಂದ ಪಾರಮಾರ್ಥಿಕತೆಯತ್ತ ಸಾಗುವು ದೆಂದರೆ, ಅದು ಹಂತಹಂತವಾಗಿ ಸತ್ಯನಿಷ್ಠವಾಗುತ್ತ ಸಾಗುವುದು ಎಂದೇ ಅರ್ಥ. ಆದ್ದರಿಂದ ಅಧ್ಯಾತ್ಮ ಜೀವನವೆಂದರೆ ಲೌಕಿಕ ಬದುಕಿನ ನಿರ್ಲಕ್ಷ್ಯವೆಂದಲ್ಲ, ಎಟುಕದ ಮೆಟ್ಟಿಲನ್ನು ಮೆಟ್ಟಬೇಕೆಂದರೆ ಈಗ ಮೆಟ್ಟಿರುವ ತಗ್ಗು ಮೆಟ್ಟಿಲನ್ನು ಬಿಡಬೇಕು! ಇದು ಬುದ್ಧಿ-ಭಾವನೆಗಳ ಉದಾತ್ತೀಕರಣವೆಂದೇ ಪರಿಗಣಿತವಾಗುತ್ತದೆ.

ಭಗವಾನ್ ಶ್ರೀರಾಮಕೃಷ್ಣರು ಕಳೆದ ಶತಮಾನದಲ್ಲಿ ನಮಗಿತ್ತ ಸಂದೇಶಗಳು ಪ್ರಸ್ಥಾನತ್ರಯಗಳ ಮುಂದುವರಿದ ಭಾಷ್ಯ ಎಂದೆನಿಸುತ್ತದೆ. ವಿಶೇಷವಾಗಿ ಆಧ್ಯಾತ್ಮಿಕ ಜೀವನದಿಂದ ಬಹಳಷ್ಟು ಅಂತರ ಅಥವಾ ಪ್ರತ್ಯೇಕತೆಯನ್ನೇ ಕಾಯ್ದಿರಿಸಿಕೊಂಡಿದ್ದ ಸಾಂಸಾರಿಕ ಜೀವಿಗಳಿಗೆ ಭರವಸೆ ತುಂಬಿ, ಧೈರ್ಯವಿತ್ತು ಸಾಧನಾಪರ ಬದುಕಿಗೆ ಹಾತೊರೆದು ಕಾರ್ಯಪ್ರವೃತ್ತರಾಗುವಂತೆ ಪ್ರೇರಣೆ ನೀಡುವಲ್ಲಿ ಯಶಸ್ವಿಯಾದವರಲ್ಲಿ ರಾಮಕೃಷ್ಣರು ಅಗ್ರಗಣ್ಯರೆನಿಸಿದ್ದಾರೆ. ಈ ‘ದೇವಮಾನವನ ದಿವ್ಯನುಡಿಗಳು’ ಚೇತೋಹಾರಿಯಾಗಿವೆ.

ಭಗವಾನ್ ರಾಮಕೃಷ್ಣರ ಉಪದೇಶಾಮೃತವನ್ನು ಮಾನವ ಜೀವನದ ಯಶಸ್ಸಿನ ಸೂತ್ರಗಳಾಗಿ ವಿವಿಧ ವಿಚಾರಗಳ ಅಡಿಯಲ್ಲಿ ವಿಭಾಗಿಸಲಾಗಿದೆ. ಗೃಹಸ್ಥನಿಗೆ ಹಿತೋಕ್ತಿ, ಭಕ್ತನ ಲಕ್ಷಣ, ಸಾಧಕ ಹೇಗಿರಬೇಕು? ಗುರುವಿನ ಅವಶ್ಯಕತೆ ಮತ್ತು ಸಂಹಿತೆ; ಅಸ್ಮಿತೆ ಎಂಬ ವಿಚಾರಗಳ ಕುರಿತಾಗಿ ಅವರ ಬೋಧೆಗಳು ನಮಗೆ ಭರವಸೆಯ ಬೆಳಕನ್ನು ಇತ್ತು ಮುನ್ನಡೆಸುತ್ತವೆ.

ಗೃಹಸ್ಥನಿಗೆ ಹಿತೋಕ್ತಿ: ಭೋಗದ ಆಲಯವೇ ಸಂಸಾರ. ಸಂಸಾರದಲ್ಲಿ ಕೇವಲ ‘ಕಾಮ ಕಾಂಚನ’ದ ಒಂದೇ ಚಿಂತನೆ ಪ್ರಮುಖವಾಗಿ ಎದ್ದು ಕಾಣುವುದು. ಸೀಗೆ ಮುಳ್ಳಿನಂತಿರುವ ಸಂಸಾರದ ವೈಚಿತ್ರ್ಯವೆಂದರೆ ಒಂದು ಮುಳ್ಳಿನಿಂದ ಬಿಡಿಸಿಕೊಂಡರೆ ಮತ್ತೊಂದು ಮುಳ್ಳು ಚುಚ್ಚುತ್ತದೆ.

ಕಾಮ ಕಾಂಚನವೆಂಬ ಮಾಯೆ ಮನುಷ್ಯನನ್ನು ಬಂಧಿಸಿ ಆತನ ಸ್ವಾಧೀನತೆಯನ್ನು ಕಸಿದುಕೊಂಡುಬಿಡುತ್ತದೆ. ಅವುಗಳ ಮಧ್ಯೆ ಬಹಳ ಕಾಲ ಇದ್ದಲ್ಲಿ ಅದರಿಂದ ಎರಡು ತೊಂದರೆಗಳು ಉಂಟಾಗುತ್ತವೆ. ಮೊದಲನೆಯದೆಂದರೆ, ಅದು ಕ್ರಮೇಣ ನಮ್ಮ ಎಚ್ಚರ ತಪ್ಪಿಸುತ್ತದೆ, ಎರಡನೆಯದಾಗಿ ಅದೇ ಅತ್ಯಂತ ಆನಂದದಾಯಕವಾಗಿ ತೋರುತ್ತದೆ.

ಕಾಮಕಾಂಚನ ಸುಖಕ್ಕೆ ಹಾತೊರೆಯುವ ಮನುಷ್ಯನ ಮುಂದೆ ಎರಡು ಅಂಶಗಳಿವೆ. ಭಗವಂತ ಮತ್ತು ಅವನ ಐಶ್ವರ್ಯ. ಆದರೆ ಭಗವಂತನಿಗಿಂತ ಅವನ ಐಶ್ವರ್ಯಕ್ಕೆ ಮರುಳಾಗುವವರೇ ಅಧಿಕ. ಕಾಮದ ದೆಸೆಯಿಂದ ಕಾಂಚನದ ಅಗತ್ಯ ಮೂಡುತ್ತದೆ. ಹೆಗ್ಗಣ ನುಂಗಲು ಪ್ರಯತ್ನಿಸುತ್ತಿರುವ ಹಾವಿನ ಸ್ಥಿತಿ! ಅದನ್ನು ನುಂಗಲೂ ಆಗದು, ಹಾಗೆಯೇ ಬಿಡಲೂ ಆಗದು!

ಹಾಗಂತ ಸಂಸಾರಿಗಳೇನೂ ಭಯಪಡಬೇಕಾಗಿಲ್ಲ. ಸಂಸಾರ ವ್ಯವಸ್ಥೆಯಲ್ಲಿ ಆಧ್ಯಾತ್ಮಿಕ ಸಾಧನೆಗೈಯುವುದೆಂದರೆ ಕೋಟೆಯೊಳಗೆ ನಿಂತು ಯುದ್ಧಮಾಡಿದಂತೆ. ಆದ್ದರಿಂದ ಅದು ಸುರಕ್ಷಿತ ವ್ಯವಸ್ಥೆಯೇ ಆಗಿದೆ.

ಸಂಸಾರ ದೋಷವಾದುದೇನಲ್ಲ, ಆದರೆ ಭಗವಂತನ ಕಡೆಗೆ ನಮ್ಮ ಮನಸ್ಸನ್ನಿಡುವುದು ಅತ್ಯವಶ್ಯಕ. ಇಲ್ಲದಿದ್ದರೆ ಜಯಶಾಲಿಗಳಾಗುವುದು ಸಾಧ್ಯವಿಲ್ಲ. ಮನುಷ್ಯನಾದವ ದೇವಋಣ, ಪಿತೃಋಣ, ಋಷಿಋಣ, ಸ್ತ್ರೀಋಣಗಳನ್ನು ತೀರಿಸಲೇಬೇಕು. ಆದರೆ ಅವನು ಕರ್ತವ್ಯ ನಿರ್ವಹಿಸುವಾಗ ಒಂದು ವಿಚಾರದ ಕಡೆಗೆ ವಿಶೇಷ ಗಮನ ಹರಿಸಬೇಕು. ಅದೆಂದರೆ ಕೆಲಸವನ್ನು ಒಂದು ಕೈಯಲ್ಲಿ ಮಾಡಬೇಕು, ಮತ್ತೊಂದರಲ್ಲಿ ಭಗವಂತನನ್ನು ಬಲವಾಗಿ ಹಿಡಿದಿರಬೇಕು. ಕೆಲಸ ಮಾಡಿದ ನಂತರ ಎರಡೂ ಕೈಗಳಿಂದ ಭಗವಂತನನ್ನು ಹಿಡಿದುಕೊಳ್ಳಬೇಕು.

ಸಂಸಾರಿಗೆ ಹಣದ ಅವಶ್ಯಕತೆಯೇನೋ ಇದೆ. ಆದರೆ ಹಣಕ್ಕಾಗಿ ಹಗಲಿರುಳೂ ಚಿಂತಿಸಬೇಕಾಗಿಲ್ಲ. ಏಕೆಂದರೆ ಹಣವು ಜೀವನದ ಪರಮೋದ್ದೇಶ ಆಗದು. ಹಣದಿಂದ ತಿನ್ನಲು ಅನ್ನ, ಉಡಲು ಬಟ್ಟೆ, ಇರಲು ಜಾಗ ದೊರೆಯುತ್ತದೆ. ಭಗವಂತನ, ಸಾಧುಸಂತರ, ದರಿದ್ರರ ಸೇವೆಯೂ ಹಣದಿಂದ ಸಾಗಬಹುದು. ಕಲಿಯುಗದಲ್ಲಿ ಸತ್ಯವಚನವೇ ತಪಸ್ಸು. ಆದರೆ ವ್ಯವಹಾರದಲ್ಲಿ ಪೂರ್ಣವಾಗಿ ಸತ್ಯವಾದಿಯಾಗಿರಲು ಸಾಧ್ಯವಿಲ್ಲ. ಅಲ್ಲದೆ ದಾನಧರ್ವದಿಗಳು ಒಂದು ಹಂತದವರೆಗೆ ಒಳಿತಾದುದೆನಿಸಿದರೂ ಲೋಕಮಾನ್ಯವಾಗುವ ಇಚ್ಛೆ ಬಂದುದೇ ಆದರೆ ಅದು ಭಗವಂತನನ್ನೇ ಮರೆಯುವಂತೆ ಮಾಡುತ್ತದೆ!

ಕಲಿಯುಗದಲ್ಲಿ ಅನ್ನಗತಪ್ರಾಣವಾದ್ದರಿಂದ ದೇಹಬುದ್ಧಿ ಸುಲಭವಾಗಿ ಹೋಗುವುದಿಲ್ಲವಾದ್ದರಿಂದ ಗೃಹಸ್ಥನು ಸಾಧನೆಯಲ್ಲಿ ತೊಡಗಿದೆನೆಂದು ಕರ್ಮತ್ಯಾಗ ಮಾಡಬಾರದು. ಕರ್ಮವನ್ನು ಭಗವಂತನ ಹೆಸರಿನಲ್ಲಿ ಮಾಡಿ ಫಲವನ್ನು ಭಗವರ್ದಪಿತಗೊಳಿಸಿದಾಗ ಅದು ‘ನಿಷ್ಕಾಮ ಕರ್ಮ’ ಎನಿಸುತ್ತದೆ.

ಕಲಿಯುಗದಲ್ಲಿ ನಾಮ ಮಾಹಾತ್ಮ್ಯ: ಭಗವಂತನಿಗೂ ಆತನ ಹೆಸರಿಗೂ ಅಭೇದ. ಭಗವಂತನ ನಾಮಬೀಜದಲ್ಲಿ ಅಧಿಕ ಶಕ್ತಿ ಇದೆ. ಭಗವಂತನ ನಾಮಸ್ಮರಣೆ ಅವಿದ್ಯೆಯನ್ನು ನಾಶಮಾಡಿಬಿಡುತ್ತದೆ. ದೇಹ-ಮನಸ್ಸುಗಳು ಶುದ್ಧವಾಗುತ್ತವೆ. ಅಂತರಿಂದ್ರಿಯನಿಗ್ರಹ ತಾನೇ ತಾನಾಗಿ ಆಗುತ್ತದೆ. ಭಗವಂತನ ಹೆಸರು ಹೇಳಲು ಲಜ್ಜೆಪಡಬಾರದು. ಅಧ್ಯಾತ್ಮದ ಸಾಧಕನಿಗೆ ಲಜ್ಜೆ, ದ್ವೇಷ, ಭಯ ಶ್ರೇಯಸ್ಕರವಲ್ಲ.

ಗೃಹಸ್ಥರು ಏಕಾದಶಿ ವ್ರತವನ್ನಾಚರಿಸುವುದು ಒಳ್ಳೆಯದು. ಅದರಿಂದ ಮನಶ್ಶುದ್ಧಿ ಉಂಟಾಗಿ ಭಗವಂತನಲ್ಲಿ ಅನುರಾಗ ಮೂಡುತ್ತದೆ. ಅಲ್ಲದೆ ಪೂಜೆ, ಜಪ, ಧ್ಯಾನ, ಸಂಧ್ಯಾವಂದನೆ, ತೀರ್ಥಯಾತ್ರೆ ಇವುಗಳನ್ನೆಲ್ಲ ಮಾಡಲೇಬೇಕು. ‘ತೀರ್ಥೀ ಕುರ್ವಂತಿ ತೀರ್ಥಾನಿ’ ಎಂಬ ಮಾತಿನಂತೆ ತೀರ್ಥಕ್ಷೇತ್ರಗಳಲ್ಲಿ ಸಾಧನೆಗೆ ಉದ್ದೀಪನೆ ಉಂಟಾಗುತ್ತದೆ. ಭಕ್ತಿಯೋಗವು ಯುಗಧರ್ಮ ಎಂದೆನಿಸಿದೆ.

ಓದುವುದಕ್ಕಿಂತ ಕಿವಿಯಲ್ಲಿ ಕೇಳುವುದು ಉಚಿತ

ಕಿವಿಯಲ್ಲಿ ಕೇಳುವುದಕ್ಕಿಂತ ಕಣ್ಣಲ್ಲಿ ಗಮನಿಸುವುದು ಉಚಿತ

ಗುರು ಅಥವಾ ಸಾಧಕನ ಬಾಯಿಂದ ಶಾಸ್ತ್ರಗಳನ್ನು ಕೇಳಿದರೆ ಅವು ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರುತ್ತವೆ. ಸಂಸಾರದಲ್ಲಿದ್ದರೂ ತಲೆಯ ಮೇಲಿನ ಕಲಶ ಕೆಳಗೆ ಬೀಳದಂತೆ ನೋಡಿಕೊಳ್ಳಬೇಕು. ಅಂದರೆ ಭಗವಂತನ ಕಡೆಗೆ ಮನಸ್ಸು ಸತತ ಹರಿಯುತ್ತಿರಬೇಕು.

ಭಕ್ತನ ಲಕ್ಷಣ: ಭಗವಂತನ ಶಕ್ತಿ ಸರ್ವರಲ್ಲಿಯೂ ಇದೆ, ಅದರೆ ಒಂದೇ ಸಮನಾಗಿ ಇಲ್ಲ. ಭಗವಂತ ವಿಭುರೂಪದಲ್ಲಿ ಸರ್ವಭೂತಗಳಲ್ಲಿಯೂ ಇದ್ದಾನಾದರೂ ಆವಿರ್ಭಾವದಲ್ಲಿ ತರತಮವಿದೆ. ಇದು ನ್ಯಾಯಸಮ್ಮತವಾಗಿದೆ. ಭಕ್ತನ ಹೃದಯ ಭಗವಂತನ ಆವಾಸಸ್ಥಾನ.

ಸೂರ್ಯನ ಬೆಳಕು ಮಣ್ಣಿಗಿಂತ ನೀರಿನಲ್ಲಿ ಪ್ರತಿಬಿಂಬಿತವಾಗುತ್ತದೆ; ನೀರಿಗಿಂತ ಕನ್ನಡಿಯಲ್ಲಿ ಹೆಚ್ಚಾಗಿ ಪ್ರತಿಬಿಂಬಿತವಾಗುತ್ತದೆ. ಅಂತೆಯೇ ಭಗವಂತನು ಎಲ್ಲ ಜೀವಿಗಳಿಗಿಂತ ಭಕ್ತರಲ್ಲಿ ಅಧಿಕವಾಗಿ ವ್ಯಕ್ತವಾಗುತ್ತಾನೆ. ಶುದ್ಧ ಭಕ್ತಿಯಲ್ಲಿ ಯಾವ ಕಾಮನೆಯೂ ಇರದು. ನಿಜವಾದ ಭಕ್ತನಿಗೆ ಭಯವಾಗಲೀ, ಚಿಂತೆಯಾಗಲೀ ಇರುವುದಿಲ್ಲ. ಆತನಿಗೆ ಗೊತ್ತಿದೆ, ‘ತನ್ನ ಯೋಗಕ್ಷೇಮವೆಲ್ಲ ಭಗವಂತನಿಗೆ ಸಂಬಂಧಿಸಿದ್ದು’ ಎಂಬುದಾಗಿ. ಬೆಕ್ಕು ಇಲಿಯನ್ನು ಒಂದು ವಿಧವಾಗಿ ತಬ್ಬಿಕೊಂಡಿರುತ್ತದೆ, ಆದರೆ ತನ್ನ ಮರಿಯನ್ನು ಮಾತ್ರ ಬೇರೆ ವಿಧದಲ್ಲಿ!

ದೇಹಕ್ಕೆ ಸಂಬಂಧಿಸಿದ ಸುಖ-ದುಃಖಗಳು ವ್ಯತ್ಯಯವಾದರೂ ಭಕ್ತನ ಜ್ಞಾನ ಮತ್ತು ಭಕ್ತಿಯ ಸಂಪತ್ತು ಅಚ್ಚಳಿಯದೆ ಉಳಿದಿರುತ್ತದೆ ಎಂಬುದಕ್ಕೆ ನಮಗೆ ಪಾಂಡವರೇ ಅದ್ಭುತ ನಿದರ್ಶನ. ಎಂತಹ ಕಷ್ಟಕಾರ್ಪಣ್ಯಗಳ ನಡುವೆಯೂ ಅವರ ಹೃದಯದಲ್ಲಿ ಎಂದಿಗೂ ನಾಸ್ತಿಕ ಭಾವ ಮೂಡಲಿಲ್ಲ! ಆದ್ದರಿಂದಲೇ ಅವರು ಅದ್ಭುತ ಜ್ಞಾನಿಗಳು, ಭಕ್ತರು ಎಂದೇ ಸುಖ್ಯಾತರಾದರು.

ಸಾಧು ಹೇಗಿರಬೇಕು?: ಗೃಹಸ್ಥನಿಗೆ ಸಾಧುಸಂಗ ಮತ್ತು ಭಗವನ್ನಾಮ ಸಂಕೀರ್ತನೆ ಅತ್ಯಗತ್ಯ. ದಯೆ, ಭಕ್ತಿ, ವೈರಾಗ್ಯಗಳಿಂದ ಶ್ರೀಮಂತಗೊಂಡ ಸಾಧುವಿನ ವ್ಯಕ್ತಿತ್ವ ವಿದ್ಯಾಸಂಸಾರಕ್ಕೆ ಸೇರಿದ್ದು. ಸಾಧುವಿನ ಮನಸ್ಸು, ಪ್ರಾಣ, ಅಂತರಾತ್ಮ ಭಗವದ್ಗತವಾಗಿರುತ್ತದೆ. ಕಾಮಕಾಂಚನತ್ಯಾಗಿಯಾದ ಸಾಧು ಭಗವತ್ಸಂಬಂಧವಾಗಿಯೇ ಮಾತನಾಡುತ್ತಾನೆ, ಭಗವಚ್ಚಿಂತನೆ ಮಾಡುತ್ತಾನೆ, ಸ್ತ್ರೀಯರನ್ನು ಮಾತೃದೃಷ್ಟಿಯಿಂದ ಗೌರವಿಸುತ್ತಾನೆ ಮತ್ತು ಸರ್ವಭೂತಗಳಲ್ಲಿಯೂ ಭಗವಂತನಿದ್ದಾನೆಂದರಿತು ಅವರ ಸೇವೆ ಮಾಡುತ್ತಾನೆ. ಸಾಧುಸಂಗದಿಂದ ನಮಗೆ ಭಗವಂತನಲ್ಲಿ ಅನುರಾಗುವುಂಟಾಗಿ ಭಗವಂತನನ್ನು ಪ್ರೀತಿಸಲು ತೊಡಗುತ್ತೇವೆ. ಕ್ಷಣಕ್ಷಣಕ್ಕೂ ಭಗವಂತನು ನಮ್ಮ ‘ಸ್ವಂತದವ’ ಎಂಬ ವಿಶ್ವಾಸ ವೃದ್ಧಿಸುತ್ತ ಹೋಗುತ್ತದೆ. ಮನೆಯಲ್ಲಿ ಸಾಧುಗಳ ಚಿತ್ರಪಟವಿದ್ದರೆ ಭಗವದುದ್ದೀಪನ ಆಗುತ್ತದೆ.

ಗುರುವಿನ ಅವಶ್ಯಕತೆ: ಭಗವಂತ ಯುಗಯುಗಗಳಲ್ಲೂ ಗುರುರೂಪದಲ್ಲಿ ಅವತರಿಸುತ್ತಾನೆ. ಸಚ್ಚಿದಾನಂದನೇ ಗುರು, ಗುರುವಿನ ಉಪದೇಶಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಯಾರು ಗುರುವೋ ಅವನೇ ಇಷ್ಟದೇವ.

ಗುರುವಿನ ಅವಶ್ಯಕತೆ ಇದೆ. ಗುರುವನ್ನು ‘ಸಾಕ್ಷಾತ್ ಭಗವಂತ’ ಎಂಬ ದೃಷ್ಟಿಯಿಂದ ನೋಡಿದಾಗ ಮಾತ್ರವೇ ಆಧ್ಯಾತ್ಮಿಕ ಉನ್ನತಿ ಸಾಧ್ಯ. ವೈಷ್ಣವರು ಹೇಳುತ್ತಾರೆ: ‘ಗುರು-ಕೃಷ್ಣ-ವೈಷ್ಣವ ಒಂದೇ’ ಎಂದು. ಶಾಸ್ತ್ರದ ಮರ್ಮವನ್ನು ಗುರುಮುಖದಿಂದ ತಿಳಿದುಕೊಂಡು ಆನಂತರ ಸಾಧನೆಯಲ್ಲಿ ತೊಡಗಬೇಕು. ಗುರುವೇ ಚುಕ್ಕಾಣಿಗ, ಗುರುವಾಕ್ಯದಲ್ಲಿ ಶ್ರದ್ಧೆ, ಗುರುವಿನ ಉಪದೇಶವನ್ನು ಅನುಕ್ರಮವಾಗಿ ಆಚರಿಸುವಲ್ಲಿ ನಿಷ್ಠೆ ಅತ್ಯಗತ್ಯ. ಆಚಾರ್ಯರಲ್ಲಿ ಮೂರು ವಿಧಗಳನ್ನು ಪರಿಗಣಿಸಬಹುದು. ಅಧಮ ಆಚಾರ್ಯನು ಶಿಷ್ಯರಿಗೆ ಉಪದೇಶವಿತ್ತು ಮತ್ತೆ ಅವರು ಬದುಕಿದ್ದಾರೋ ಸತ್ತರೋ ಎಂಬುದರ ಗೋಜಿಗೇ ಹೋಗುವುದಿಲ್ಲ. ಮಧ್ಯಮ ಆಚಾರ್ಯನು ಶಿಷ್ಯರಿಗೆ ಪ್ರೀತಿ ವಿನಯ ತೋರುತ್ತ ತಾನಿತ್ತ ಉಪದೇಶವು ಸಮರ್ಪಕವಾಗಿ ಬೇರೂರಲೆಂದು ಪದೇಪದೆ ಅವರನ್ನು ವಿಚಾರಿಸುತ್ತಾನೆ. ಉತ್ತಮ ಆಚಾರ್ಯನು ತನ್ನ ಶಿಷ್ಯರು ಯಾವ ವಿಧದಿಂದಲೂ ದಾರಿಗೆ ಬಾರದಿದ್ದಲ್ಲಿ ಬಲಪ್ರಯೋಗ ಮಾಡಿಯಾದರೂ ಅವರನ್ನು ಸನ್ಮಾರ್ಗಕ್ಕೆ ತರುತ್ತಾನೆ.

ಸಂಹಿತೆ; ಅಸ್ಮಿತೆ: ಮಾನವ ಜೀವನದ ಪರಮೋದ್ದೇಶವೇ ಭಗವತ್ಸಾಕ್ಷಾತ್ಕಾರ. ಭಗವಂತನನ್ನು ಅರಿಯುವುದೇ ಜ್ಞಾನ, ಅರಿಯದಿರುವುದೇ ಅಜ್ಞಾನ. ಭಗವಂತನ ಯಾವ ಸ್ವರೂಪದಲ್ಲಿ, ಸಾಧನಾ ವಿಚಾರದಲ್ಲಿ ನಮಗೆ ವಿಶ್ವಾಸವಿರುತ್ತದೆಯೋ ಅದರಲ್ಲಿ ದೃಢಭಕ್ತಿಯಿಟ್ಟು ಸಾಧನೆ ಮಾಡಬೇಕು. ಭಗವಂತನು ಅಂತರ್ಯಾಮಿಯಾದ್ದರಿಂದ ಆತನೇ ತನ್ನ ಮಕ್ಕಳಿಗೆ ಕಾಲಕಾಲಕ್ಕೆ ತಿಳಿವಳಿಕೆ ನೀಡುತ್ತಾನೆ. ತಾಯಿ ಮಗುವನ್ನು ಪ್ರೀತಿಸುವಂತೆ, ಮಗು ತಾಯಿಯನ್ನು ಪ್ರೀತಿಸುವಂತೆ, ಸತಿ ಪತಿಯನ್ನು ಪ್ರೀತಿಸುವಂತೆ ಭಕ್ತ ಭಗವಂತನನ್ನು ಪ್ರೀತಿಸುವ ವಿಧಾನಕ್ಕೆ ‘ರಾಗಾಭಕ್ತಿ’ ಎಂದು ಹೆಸರು. ಸಾಧಕನಿಗೆ ರಾಗಾಭಕ್ತಿ ಪ್ರಾಪ್ತವಾದ ಮೇಲೆ ತನ್ನ ಹೆಂಡತಿ, ಮಕ್ಕಳು, ಸ್ವಬಾಂಧವರ ಮೇಲಿನ ಸಾಮಾನ್ಯವಾದ ಮಾಯಾಪ್ರೇರಿತ ಆಕರ್ಷಣೆ ಇರುವುದಿಲ್ಲ.

ಶ್ರೀರಾಮಕೃಷ್ಣರೆನ್ನುತ್ತಾರೆ- ‘ಯಾವಾಗ ನಿಮಗೆ ಹರಿನಾಮವನ್ನೋ, ರಾಮ ನಾಮವನ್ನೋ ಒಮ್ಮೆ ಉಚ್ಚರಿಸಿದ ಮಾತ್ರದಿಂದಲೇ ರೋಮಾಂಚನವಾಗುವುದೋ, ಪ್ರೇಮಾಶ್ರು ಸುರಿಯುವುದೋ, ಆಗ ನಿಜವಾಗಿ ತಿಳಿದುಕೊಳ್ಳಿ, ಇನ್ನು ನೀವು ಸಂಧ್ಯಾದಿ ಕರ್ಮಗಳನ್ನು ಮಾಡಬೇಕಾಗಿಲ್ಲ ಎಂದು. ಆಗ ಮಾತ್ರವೇ ನಿಮಗೆ ಕರ್ಮತ್ಯಾಗದ ಅಧಿಕಾರ. ಕರ್ಮ ತನಗೆ ತಾನೇ ನಿಮ್ಮನ್ನು ಬಿಟ್ಟು ತೊಲಗಿ ಹೋಗುತ್ತದೆ. ಆಗ ಕೇವಲ ರಾಮನಾಮವನ್ನೋ, ಹರಿನಾಮವನ್ನೋ ಅಥವಾ ಬರೀ ಓಂಕಾರವನ್ನೋ ಜಪಿಸಿದರೆ ಸಾಕು’.

ಬಲಾತ್ಕಾರದಿಂದ ಸಂಸಾರತ್ಯಾಗ ಶ್ರೇಯಸ್ಕರವಲ್ಲ. ಸಂಸಾರವನ್ನು ನಡೆಸಿಕೊಂಡು ಹೋಗಿ, ಭಗವಂತನನ್ನು ಕರೆಯುತ್ತಿರಿ. ಭಾವಕ್ಕೆ ತಕ್ಕಂತೆ ಲಾಭ; ನಮ್ರತೆ ಇತ್ತೆಂದರೆ ಉನ್ನತಿ!

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

Leave a Reply

Your email address will not be published. Required fields are marked *

Back To Top