Friday, 16th November 2018  

Vijayavani

Breaking News

ಆತ್ಮಾವಲಂಬನವೇ ಸರ್ವಶಕ್ತಿಗೆ ಆಧಾರ

Friday, 15.06.2018, 3:05 AM       No Comments

ಸ್ವಾಮಿ ವಿವೇಕಾನಂದರು ಆತ್ಮಾವಲಂಬನದ ಶಕ್ತಿಯನ್ನು ಅಪೂರ್ವವಾಗಿ ಅರಿತಿದ್ದರು. ಆದ್ದರಿಂದಲೇ, ಅವರಿಗೆ ಸಾಲು-ಸಾಲು ಸವಾಲುಗಳನ್ನು ಎದುರಿಸಲು, ಕಷ್ಟಗಳ ಸರಮಾಲೆಯನ್ನು ಸೋಲಿಸಲು ಸಾಧ್ಯವಾಯಿತು. ಕೋಟ್ಯಂತರ ದೇವತೆಗಳನ್ನು ನಂಬಿ ತನ್ನನ್ನು ತಾನು ನಂಬದವನನ್ನು ಯಾರೂ ಕೈ ಹಿಡಿಯಲು ಸಾಧ್ಯವಿಲ್ಲ ಎಂದು ಅವರು ಸಾರಿದರು.

| ಸ್ವಾಮಿ ವೀರೇಶಾನಂದ ಸರಸ್ವತೀ

ಸ್ವಾಮಿ ವಿವೇಕಾನಂದ ಎಂಬ ಭಾರತೀಯ ಸಂನ್ಯಾಸಿಯನ್ನು ಜಗತ್ತು ಗುರುತಿಸಿ ಗೌರವಿಸಿದ ಪರಿ ಅತ್ಯಂತ ರೋಚಕವಾದದ್ದು. ‘ಸಂನ್ಯಾಸಿ’ ಎಂಬ ಶಬ್ದಕ್ಕೆ ಕ್ರಾಂತಿಕಾರಿ ಅರ್ಥವನ್ನು ನೀಡಿದ ವೀರಸಂನ್ಯಾಸಿ ಅವರು. ಜಗತ್ತು ಅವರನ್ನು ಕ್ರಾಂತಿಕಾರಿ ಸಂನ್ಯಾಸಿ, ಸುಂಟರಗಾಳಿಯ ಸಂನ್ಯಾಸಿ, ವಿಶ್ವವಿಜೇತ, ವಿಶ್ವಮಾನವ… ಎಂಬಿತ್ಯಾದಿ ಗುಣವಾಚಕಗಳಿಂದ ಪೂಜ್ಯಸ್ಥಾನದಲ್ಲಿ ಆರಾಧಿಸುತ್ತಿದೆ.

ವಿವೇಕಾನಂದರು ವಿಶ್ವಮಾನ್ಯರಾಗಲು ಹತ್ತು ಹಲವು ಕಾರಣಗಳಿವೆ. ಅವರ ವರ್ಚಸ್ವೀ ವ್ಯಕ್ತಿತ್ವ, ಪಾಂಡಿತ್ಯಪೂರ್ಣ ವಾಗ್ಝರಿ, ಸಿಂಹಘರ್ಜನೆ ಹಾಗೂ ನಡಿಗೆ, ಇತ್ಯಾದಿ. ಅವರ ಅಸ್ಖಲಿತ ಬ್ರಹ್ಮಚರ್ಯದಿಂದ ಹೊರಹೊಮ್ಮಿದ ಮಾತುಗಳು ಒರೆಯಿಂದ ತೆಗೆದ ಖಡ್ಗದಂತೆ! ತಮ್ಮ ಬದುಕಿನುದ್ದಕ್ಕೂ ಅವರು ಪಯಣಿಸಿದ್ದು ಹರಿತವಾದ ಖಡ್ಗದ ಮೇಲೆ! ಅವರ ಸತ್ಯನಿಷ್ಠುರತೆ, ನಿರ್ಭಯತೆಗಳು ಮಾನವ ಜಗತ್ತಿನಲ್ಲಿ ಅಪರೂಪ. ಇಂದು ‘ವಿವೇಕಾನಂದ’ ಎಂಬುದು ವ್ಯಕ್ತಿಯ ಹೆಸರಿಗೆ ಸೀಮಿತವಾಗದೆ ಅದೊಂದು ‘ಸಂಸ್ಥೆ’ಯೋ ಎನ್ನುವಷ್ಟರ ಮಟ್ಟಿಗೆ ಜಗತ್ತಿನಲ್ಲಿ ಸ್ವೀಕೃತವಾಗಿದೆ.

ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳನ್ನು ಪರಾಂಬರಿಸುವ ಮೊದಲು ಅವರ ಬದುಕಿಗೆ ಬುನಾದಿ ಅಗಿದ್ದ ಭಾರತೀಯ ಪ್ರಾಚೀನತತ್ತ್ವವನ್ನು ಗಮನಿಸುವ ಅಗತ್ಯವಿದೆ. ರಾಮಾಯಣ, ಮಹಾಭಾರತಗಳನ್ನು ಮೊದಲ್ಗೊಂಡು ಉಪನಿಷತ್ತುಗಳು ಪ್ರತಿಪಾದಿಸುವ ಸಾರ್ವಕಾಲಿಕ ಸತ್ಯಗಳು ಅವರ ಜೀವನದಲ್ಲಿ ಪ್ರತಿಧ್ವನಿಸಿವೆ. ಯೋಗವಾಸಿಷ್ಠದ, ‘ಸ್ವಪ್ರಯತ್ನದಿಂದ ಮಾನವನು ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ’ ಎಂಬ ಸಂದೇಶವು ಸ್ವಾಮಿ ವಿವೇಕಾನಂದರ ಮೇಲೆ ಅದೆಷ್ಟು ಪರಿಣಾಮ ಬೀರಿತ್ತೆಂದರೆ ಮುಂದೆ ಅವರೇ ಹೇಳುತ್ತಾರೆ, ‘ಸ್ವಪ್ರಯತ್ನದಿಂದ ಮಾನವನು ಸಾಧಿಸಲು ಅಸಾಧ್ಯವಾದುದನ್ನು ಸೃಷ್ಟಿಸಲು ಭಗವಂತನಿಗೂ ಅವಕಾಶವಿಲ್ಲ!’ ಇಲ್ಲಿ ಸ್ವಾಮೀಜಿ ‘ಆತ್ಮಾವಲಂಬನ’ಕ್ಕೆ ನೀಡಿದ ಮಹತ್ವದ ಸ್ಥಾನ ಗಮನಿಸಬೇಕಾದ್ದು.

ಭಗವದ್ಗೀತೆಯ ಧ್ಯಾನಯೋಗವು ಪ್ರತಿಪಾದಿಸುತ್ತದೆ,

ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್|

ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ||

ಅಂದರೆ ಮನಸ್ಸಿನಿಂದಲೇ ತನ್ನನ್ನು ತಾನು ಉದ್ಧಾರ ಮಾಡಿಕೊಳ್ಳಬೇಕು. ತನ್ನನ್ನು ಎಂದೂ ಕುಗ್ಗಿಸಿಕೊಳ್ಳಬಾರದು. ಏಕೆಂದರೆ ‘ಮನಸ್ಸೇ ತನ್ನ ಬಂಧು, ಮನಸ್ಸೇ ತನ್ನ ಶತ್ರು’ ಎಂಬ ಸಂದೇಶವೂ ಮತ್ತು ಅಮೃತಬಿಂದು ಉಪನಿಷತ್ತಿನ, ‘ಮನಯೇವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೇ’ ಅಂದರೆ ನಮ್ಮ ಮನಸ್ಸೇ ನಮ್ಮ ಬಂಧನ ಹಾಗೂ ಮುಕ್ತಿಗೆ ಕಾರಣವಾಗುತ್ತದೆ! ಶಕ್ತಿ ಸಂದೇಶಗಳೇ ವಿವೇಕಾನಂದರ ಬದುಕಿನ ಉತ್ಸಾಹ, ಶ್ರದ್ಧೆ, ಶಕ್ತಿ ಮತ್ತು ಸಾಧಿಸುವ ಛಲವನ್ನು ನೂರ್ಮಡಿಗೊಳಿಸಿದ್ದವು ಎಂಬ ಮಾತು ಉತ್ಪ್ರೇಕ್ಷೆಯಲ್ಲ.

ಭಾರತದ ಪವಿತ್ರ ನೆಲದುದ್ದಕ್ಕೂ ಸಂಚರಿಸಿದ ಸ್ವಾಮಿ ವಿವೇಕಾನಂದರು, ‘ಎಟ ಚಿಚ್ಚk ಠಿಟ ಖಿಟಚ್ಞಜಿಠಜಚಛಠ’ ಅಂದರೆ ಭಾರತೀಯರೇ, ನಿಮ್ಮ ಜೀವನವನ್ನು ಉಪನಿಷತ್ತುಗಳು ಪ್ರತಿಪಾದಿಸಿದಂತೆ ರೂಪಿಸಿಕೊಳ್ಳಿ ಎಂದು ಸಾರುತ್ತಾರೆ. ತುಚ್ಛವಾದ ಮನಸ್ಸಿನಿಂದ ಮನುಷ್ಯನು ಷಂಡನಾಗುತ್ತಾನೆ. ಸಂಭಾವಿತನಾದ ವ್ಯಕ್ತಿಯ ಜೀವನವು ಅಪಕೀರ್ತಿಯನ್ನು ಮರಣಕ್ಕಿಂತಲೂ ಹೇಯವೆಂದು ಪರಿಗಣಿಸುತ್ತದೆ ಎಂಬ ಗೀತಾ ಸಂದೇಶವನ್ನು ಅವರು ಆಧುನಿಕ ಭಾಷೆಯಲ್ಲಿ ದೇಶಬಾಂಧವರಿಗೆ ಮನವರಿಕೆ ಮಾಡಿಕೊಡಲು ಅಹರ್ನಿಶಿ ಶ್ರಮಿಸಿದರು.

‘ಯೋ ಹಿ ಸಂಸ್ಪರ್ಶಚಾ ಭೋಗ ದುಖಯೋನಯ ಏವತೇ|

ಆದ್ಯಂತನಂತಃ ಕೌಂತೇಯ ನ ತೇಷು ರಮತೇ ಬುಧಃ|’

ಅರ್ಥಾತ್ ವಿಷಯೇಂದ್ರಿಯಗಳ ಸಂಯೋಗದಿಂದ ಉಂಟಾಗುವ ಭೋಗಗಳು ದುಃಖಕ್ಕೆ ಕಾರಣವಾಗುವುದರಿಂದ ಜ್ಞಾನಿಯು ಅವುಗಳಲ್ಲಿ ರಮಿಸುವುದಿಲ್ಲ. ನರೇಂದ್ರನ ವ್ಯಕ್ತಿತ್ವದ ಬೆನ್ನೆಲುಬು ಅವನ ಅಸ್ಖಲಿತ ಬ್ರಹ್ಮಚರ್ಯ.

ಸಾರ್ವಕಾಲಿಕ ಮೌಲ್ಯ: ತ್ಯಾಗ ವೈರಾಗ್ಯಮೂರ್ತಿಗಳಾದ ಸಂನ್ಯಾಸಿಗಳ ಬದುಕಿಗೆ ಸಾರ್ವಕಾಲಿಕ ಮೌಲ್ಯವಿದೆ, ಮಹತ್ವವಿದೆ. ಬುದ್ಧ, ಶಂಕರಾಚಾರ್ಯ, ಸ್ವಾಮಿ ವಿವೇಕಾನಂದರು ಯುಗಪ್ರವರ್ತಕರಾದದ್ದು ಇತಿಹಾಸ. ‘ತ್ಯಾಗ ಮಾಡುವುದರಿಂದಲೇ ಅಮೃತತ್ವ ಪ್ರಾಪ್ತಿ’ ಎಂಬುದು ವೈಯಕ್ತಿಕವಾಗಿ ಸಾಧಕನ ಪಾಲಿನ ವಿಷಯವಾದರೂ ಸಮಸ್ತ ಭೂಮಂಡಲವೇ ಕೃತಕೃತ್ಯತೆಯಿಂದ ಧನ್ಯತೆಯನ್ನು ಅನುಭವಿಸುತ್ತದೆ ಎಂದು ಸೂತ ಸಂಹಿತೆ ಪ್ರತಿಪಾದಿಸುತ್ತದೆ.

ಕುಲಂ ಪವಿತ್ರಂ ಜನನೀ ಕೃತಾರ್ಥ

ವಿಶ್ವಂಭರಾ ಪುಣ್ಯವತೀ ಚ ತೇನ|

ಅಪಾರ ಸಚ್ಛಿತ್-ಸುಖ-ಸಾಗರೇಸ್ಮಿನ್

ಲೀನಂ ಪರೇ ಬ್ರಹ್ಮಣಿ ಯಸ್ಯ ಚೇತಃ|

‘ಯಾರ ಮನಸ್ಸು ಅಪಾರವಾದ ಸಚ್ಚಿದಾನಂದ ಸಮುದ್ರವೆಂಬ ಪರಬ್ರಹ್ಮದಲ್ಲಿ ಲೀನವಾಗಿದೆಯೋ ಅವನಿಂದ ಕುಲವು ಪವಿತ್ರವಾಯಿತು, ತಾಯಿಯು ಕೃತಾರ್ಥಳಾದಳು, ಭೂಮಿಯು ಪುಣ್ಯವತಿಯಾದಳು! ಅಂತಹ ಮಹಾನ್ ಸಂನ್ಯಾಸ ಪರಂಪರೆಗೆ ನರೇಂದ್ರನಾಥನು ಸೇರ್ಪಡೆಗೊಂಡು ಭವಿಷ್ಯದಲ್ಲಿ ಸ್ವಾಮಿ ವಿವೇಕಾನಂದ ಎಂದು ಲೋಕಾರ್ಪಣೆಗೊಳ್ಳುತ್ತಾನೆ’.

ಆತ್ಮತತ್ತ್ವವು ಮೂರ್ತರೂಪ ತಾಳಿದರೆ ಅದು ನರೇಂದ್ರನೇ ಆಗುತ್ತಾನೆ ಎನ್ನುವಷ್ಟರ ಮಟ್ಟಿಗೆ ಆತ ಆತ್ಮಲಕ್ಷಣಗಳ ಪರಿಪೂರ್ಣ ಮೂರ್ತರೂಪವೇ ಆಗಿದ್ದನು. ವ್ಯಕ್ತಿಯು ನಿರ್ಭಯನಾಗುವುದು ಆತ್ಮಾವಲಂಬಿ ಆದಾಗ ಮಾತ್ರ. ‘ಆತ್ಮವತ್ ಸರ್ವಭೂತೇಷು’ ಅಂದರೆ ‘ಎಲ್ಲರಲ್ಲಿಯೂ ತನ್ನನ್ನೇ ಕಾಣುವವನು’ ಎಂಬ ಸುಭಾಷಿತಕಾರರ ಅಭಿಮತದಂತೆ ತಮ್ಮ ಗುರುದೇವನ ಅಣತಿಗೆ ಶಿರಬಾಗಿದ ನರೇಂದ್ರನಾಥನು ‘ಕಣ್ಣುಮುಚ್ಚಿ ದೇವರನ್ನು ಕಾಣುವುದಕ್ಕಿಂತ ಕಣ್ಣು ತೆರೆದು ದೇವರನ್ನು ಕಾಣುವ’ ನೂತನ ವೇದಾಂತದ ಅನುಷ್ಠಾನಕ್ಕೆ ಸನ್ನದ್ಧನಾದನು.

ಕಣ್ಣು ತೆರೆಸುವ ಸಂದೇಶ: ‘‘ಜನ ಹೇಳುತ್ತಾರೆ ಅವನನ್ನು ನಂಬು, ಇವನನ್ನು ನಂಬು ಎಂದು. ಆದರೆ ನಾನು ಹೇಳುತ್ತೇನೆ, ‘ಮೊದಲು ನಿನ್ನನ್ನು ನೀನು ನಂಬು’. ಹಳೆಯ ವೇದಾಂತ ಹೇಳುತ್ತದೆ, ‘ದೇವರನ್ನು ನಂಬಿದವನು ಆಸ್ತಿಕ, ನಂಬದವನು ನಾಸ್ತಿಕ’ ಎಂದು. ಆದರೆ ನಾನು ಹೇಳುತ್ತೇನೆ, ‘ಯಾರು ದೇವರನ್ನು ನಂಬಿ ತನ್ನನ್ನು ತಾನು ನಂಬುವುದಿಲ್ಲವೋ ಅವನೇ ನಾಸ್ತಿಕ!’ ನಿನಗೆ ಮುನ್ನೂರ ಮೂವತ್ತಮೂರು ಕೋಟಿ ದೇವರುಗಳಲ್ಲಿ ನಂಬಿಕೆಯಿದ್ದು, ಪಾಶ್ಚಾತ್ಯರಿಂದ ಎರವಲು ಪಡೆದ ದೈವಗಳಲ್ಲೂ ನಂಬಿಕೆಯಿದ್ದು ನಿನ್ನನ್ನು ನೀನು ನಂಬದಿದ್ದರೆ ಯಾವ ದೇವರೂ ನಿನ್ನನ್ನು ಉದ್ಧರಿಸಲಾರ’!

‘ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ, ವಿಕಸನವೇ ಜೀವನ, ಸಂಕುಚಿತತೆಯೇ ಮರಣ’ ಎಂದಿರುವ ಸ್ವಾಮೀಜಿ ‘ಆತ್ಮಾವಲಂಬನವೇ ಸರ್ವಶಕ್ತಿಗೆ ಆಧಾರ’ ಎಂಬುದನ್ನು ಅರುಹಿದ್ದಾರೆ. ಶಕ್ತಿ ಹಾಗೂ ನಿರ್ಭಯತೆಗಳು ಸಖ್ಯ ಬೆಳೆಸುತ್ತವೆ, ಅವಿನಾಸಂಬಂಧದಿಂದ ಮುಂದುವರಿಯುತ್ತವೆ. ಭಯ ಮತ್ತು ದೌರ್ಬಲ್ಯಗಳಿಗೂ ಸಮೀಕರಣವಿದೆ. ಸ್ವಾಮಿ ವಿವೇಕಾನಂದರಿಗೆ ‘ಆತ್ಮಾವಲಂಬನ’ದ ತಿಳಿವಳಿಕೆ ದೊರೆತದ್ದಾದರೂ ಹೇಗೆ?

ಅವರೇ ಈ ರಹಸ್ಯವನ್ನು ಹೀಗೆ ಬಿಚ್ಚಿಡುತ್ತಾರೆ- ‘ಓ ಭಾರತೀಯರೇ, ನಾನೂ ನಿಮ್ಮ ದೇಶದವನೇ, ನಿಮ್ಮ ನೆಲದಲ್ಲಿ ಓಡಾಡಿದವನು, ನಿಮ್ಮ ದೇಶದ ಗಾಳಿ ಸೇವಿಸಿದವನು, ನೀರು ಕುಡಿದವನು. ಆದರೆ ಯಾವ ಬ್ರಿಟಿಷರು ನಿಮ್ಮನ್ನು ತಮ್ಮ ಬೂಟುಕಾಲುಗಳಿಂದ ಒದೆಯುತ್ತಿದ್ದಾರೆಯೋ ಅವರೇ ನನ್ನ ಪದತಲದಲ್ಲಿ ಕುಳಿತು ವಿನೀತರಾಗಿ ಕೃತಕೃತ್ಯಭಾವನೆಯಿಂದ ನನ್ನ ಸೇವೆಗೈಯುತ್ತಾರೆ. ಕಾರಣವೇನಿರಬಹುದು? ನೀವು ವೇದೋಪನಿಷತ್ ಹಾಗೂ ಭಗವದ್ಗೀತೆಯನ್ನು ಕೇವಲ ಓದಿದಿರಿ, ಗಿಳಿಪಾಠದಂತೆ ಕಂಠಸ್ಥ ಮಾಡಿಕೊಂಡಿರಿ. ಅವುಗಳ ಶಕ್ತಿಯುತ ತತ್ತ್ವ್ವಂದೇಶಗಳನ್ನು ಜೀವನದಲ್ಲಿ ಅನುಷ್ಠಾನಗೈಯಲಿಲ್ಲ. ಆದರೆ ನಾನು ಅವುಗಳನ್ನು ಕೇವಲ ಓದಿದ್ದಲ್ಲ, ಬದುಕಿನಲ್ಲಿ ಆಮೂಲಾಗ್ರವಾಗಿ ಅನುಷ್ಠಾನಗೈಯ್ಯುತ್ತ ಬಂದೆ. ಸತ್ಯಸಾಕ್ಷಾತ್ಕಾರಕ್ಕೆ ಸ್ವಪ್ರಯತ್ನದ ಅವಶ್ಯಕತೆ ಮನಗಂಡೆ, ಸಾಕ್ಷಾತ್ಕಾರದ ಪಥದಲ್ಲಿ ಮೃತ್ಯುವನ್ನು ಪ್ರೀತಿಸಹೊರಟೆ. ಏಕೆಂದರೆ ಬದುಕು ನನಗೆ ಕಲಿಸಿದ ಅಮೂಲ್ಯ ಪಾಠವೆಂದರೆ ಸ್ವರ್ಗಕ್ಕೆ ಹತ್ತಿರದ ದಾರಿ ಎಂಬುದೊಂದು ಇದ್ದರೆ ಅದು ನರಕದ ಮೂಲಕವೇ!’.

ಮಾತೃಭೂಮಿಯ ಉದ್ದಗಲಕ್ಕೂ ಪರಿವ್ರಾಜಕರಾಗಿ ಸಂಚರಿಸಿದ ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿ ತಲುಪಿ, ತನ್ನ ದೇಶದ ಉತ್ಥಾನಕ್ಕೆ ಮಾಗೋಪಾಯವನ್ನು ಪತ್ತೆಹಚ್ಚಲು ಚಡಪಡಿಸುತ್ತಿದ್ದ ಸಂದರ್ಭವದು. ಸಮುದ್ರದಲ್ಲಿನ ಬಂಡೆಯೆಡೆಗೆ ಧಾವಿಸಬೇಕೆಂಬ ಆಸೆ, ಆದರೆ ಪೈಸೆಯೂ ಇಲ್ಲದ ಕಿಸೆ! ಆದರೂ ಧೃತಿಗೆಡಲಿಲ್ಲ ಅವರು, ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಧುಮುಕಿದರು, ಬಂಡೆಯತ್ತ ಈಜುತ್ತ ಸಾಗಿದರು. ಸಮುದ್ರದದಡದಲ್ಲಿದ್ದ ಸರ್ವರೂ ಹುಬ್ಬೇರಿಸಿ ಉದ್ಗರಿಸಿದರು, ‘ಯಾರಿವನು?’

ರಾಕ್ಷಸಾಕಾರದ ಸಮುದ್ರದ ಅಲೆಗಳು! ವಿಷಪೂರಿತ ಶಾರ್ಕ್ ಮೀನುಗಳು! ಭಯಾನಕವಾದ ಈ ಪ್ರಾಕೃತಿಕ ಪ್ರತಿಕೂಲಗಳಿಗೆ ಜಗ್ಗಲಿಲ್ಲ ಆ ಯುವ ಸಂನ್ಯಾಸಿ. ಏಕೆಂದರೆ ಅವನ ಅಂತರಂಗದಲ್ಲಿ ಭುಗಿಲೆದ್ದಿದ್ದ ಭಾವನೆಗಳ ಅಲೆಗಳ ಮುಂದೆ ಸಮುದ್ರದ ದುರ್ಗಮ ಸನ್ನಿವೇಶ ಗೌಣವೇ ಆಗಿತ್ತು!

ಮಾತೃಭೂಮಿಯ ಸಾವಿರಾರು ವರ್ಷಗಳ ಇತಿಹಾಸ ಕಣ್ಮುಂದೆ ಹಾದುಹೋಗುತ್ತ ಬಂತು. ಭಾರತಮಾತೆಯ ವೈಭವದ ಕಾಲ ಮೊದಲ್ಗೊಂಡು ಕಾಲಚಕ್ರ ಉರುಳಿದಂತೆ ದೇಶದಲ್ಲಾದ ಬದಲಾವಣೆಗಳು ಮತ್ತು ಪ್ರಸ್ತುತ ಹೃದಯವಿದ್ರಾವಕ ಸ್ಥಿತಿಗೆ ಮನಸ್ಸು ಅಲ್ಲೋಲಕಲ್ಲೋಲವಾಯ್ತು. ಆದರೆ ವಿವೇಕಾನಂದರು ದೇಶದ ದೌರ್ಬಲ್ಯವನ್ನು ಹಳಿಯಲಿಲ್ಲ, ದೇಶಬಾಂಧವರ ದೌರ್ಭಾಗ್ಯ ನಿಂದಿಸಲಿಲ್ಲ, ದಾಳಿಕೋರರನ್ನು ಶಪಿಸುವ ಗೊಡವೆಗೂ ಹೋಗಲಿಲ್ಲ. ದೇಶದಲ್ಲಿ ಆಮೂಲಾಗ್ರ ಬದಲಾವಣೆಯ ಅವಶ್ಯಕತೆಯಿದ್ದು ಈ ನಿಟ್ಟಿನಲ್ಲಿ ‘ನಾನೇನು ಮಾಡಬಲ್ಲೆ?’ ಎಂದು ಗಂಭೀರ ಚಿಂತನೆಯಲ್ಲಿ ಮುಳುಗಿದರು. ‘ನನ್ನ ರಾಷ್ಟ್ರವನ್ನು ಮೇಲೆತ್ತಬೇಕಾದವನು ನಾನೇ! ಇದು ನನ್ನ ಸೌಭಾಗ್ಯ. ಈ ಮಹಾನ್ ಸಂಕಲ್ಪಕ್ಕೆ ಅವಿರತವಾಗಿ ಶ್ರಮಿಸುವೆ. ಈ ದುರ್ಗಮ ಪಯಣದಲ್ಲಿ ನಾನು ಜಯಶಾಲಿಯಾಗಿಯೇ ತೀರುತ್ತೇನೆ’ ಎಂದು ನಿಶ್ಚಯಿಸಿದರು.

ಕನ್ಯಾಕುಮಾರಿಯ ಘಟನೆ ನಡೆದಿದ್ದು 1892ರಲ್ಲಿ. ವಿವೇಕಾನಂದರ ರಾಷ್ಟ್ರಭಕ್ತಿಯ ಮಹಾನ್ ಆದರ್ಶಕ್ಕೆ ಶಿರಬಾಗಿ ಶ್ರಮಿಸಲು ರಾಷ್ಟ್ರದ ಉದ್ದಗಲಕ್ಕೂ ತ್ಯಾಗಿಗಳ ಮಹಾಪಡೆಯೇ ಸನ್ನದ್ಧವಾಯಿತು. ಮುಂದಿನ ಐದೂವರೆ ದಶಕಗಳಲ್ಲಿ ನಮ್ಮ ರಾಷ್ಟ್ರದ ಒಂದು ಸಹಸ್ರ ವರ್ಷಗಳ ದಾಸ್ಯದ ಶೃಂಖಲೆ ಕಳಚಿ ರಾಷ್ಟ್ರ ಸ್ವತಂತ್ರವಾಯ್ತು.

ಸ್ವಾಮಿ ವಿವೇಕಾನಂದರಿತ್ತ ಸಮರ್ಥ ನಾಯಕತ್ವದ ಮಹಾನ್ ಆದರ್ಶ ರಾಷ್ಟ್ರದ ಕುಂಡಲಿನಿಯನ್ನು ಜಾಗೃತಗೊಳಿಸಿತು. ಭಗವದ್ಗೀತೆಯ ಕರ್ಮಯೋಗದಲ್ಲಿ ಹೀಗೆ ಹೇಳಲಾಗಿದೆ:

ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ|

ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ||

ಶ್ರೇಷ್ಠನಾದ ಪುರುಷನು ಯಾವುದನ್ನು ಅನುಸರಿಸುತ್ತಾನೆಯೋ ಅದನ್ನೇ ಇತರ ಜನರು ಅನುಸರಿಸುತ್ತಾರೆ. ಮಾರ್ಗದರ್ಶಕನು ಯಾವುದನ್ನು ಪ್ರಮಾಣವಾಗಿಸುತ್ತಾನೆಯೋ ಅದನ್ನೇ ಲೋಕವು ಅನುಸರಿಸುತ್ತದೆ. ವಿವೇಕಾನಂದರೆಂಬ ವಿಶ್ವಮಾನವನ ಆದರ್ಶ ಸಂದೇಶವು ಭಾರತವನ್ನು ಮುಂದಿರಿಸಿಕೊಂಡು ಸಮಸ್ತ ವಿಶ್ವದ ಆಲೋಚನಾಲಹರಿಯನ್ನೇ ಸಕಾರಾತ್ಮಕವಾಗಿ ಬದಲಾಯಿಸಿತೆಂಬುದು ಸುಳ್ಳಲ್ಲ.

ಆಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಗ್ರೀಕ್ ಪ್ರಾಧ್ಯಾಪಕ ಜಾನ್ ಹೆನ್ರಿ ರೈಟ್ ಅವರ ಪತ್ನಿ ಶ್ರೀಮತಿ ರೈಟ್ ಹೀಗೆ ಹೇಳುತ್ತಾರೆ- ‘ವಯಸ್ಸಿನ ದೃಷ್ಟಿಯಲ್ಲಿ ವಿವೇಕಾನಂದರು ಜಗತ್ತಿಗೆ ಮೂವತ್ತು ವರ್ಷಗಳಷ್ಟು ಹಳಬರು; ನಾಗರಿಕತೆಯ ದೃಷ್ಟಿಯಲ್ಲಿ ಯುಗಯುಗಗಳಷ್ಟು!

ಅಮೆರಿಕದಿಂದ ಬರೆದ ಪತ್ರದಲ್ಲಿ ಸ್ವಾಮಿ ವಿವೇಕಾನಂದರು, ‘ಈ ವಿವೇಕಾನಂದನಿಗೆ ಬಂದ ಕಷ್ಟಗಳು ಬೇರಾವ ಹಿಂದೂವಿಗಾದರೂ ಬಂದಿದ್ದರೆ ಅವನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ…’ ಎಂದಿದ್ದಾರೆ. ಅವರು ಜೀವನದುದ್ದಕ್ಕೂ ನಡೆಸಿದ ಹೋರಾಟಕ್ಕೆ ಈ ಮಾತು ಪುಷ್ಟಿ ನೀಡುತ್ತದೆ.

ಪರಿಸರ, ಪರಿಸ್ಥಿತಿಗಳು ಕಾಕೋಟಕ ವಿಷದಂತೆ ಭುಗಿಲೆದ್ದು ಅವರನ್ನು ಆಕ್ರಮಿಸಲು ಧಾವಿಸಿದರೂ ಅವರು ‘ನೀಲಕಂಠ’ನಂತೆ ಎಲ್ಲ ಪ್ರತಿಬಂಧಕಗಳನ್ನೂ ನಿರ್ವಹಿಸಿದ್ದು ಆತ್ಮಾವಲಂಬನ ತತ್ತ್ವದ ಮೂಲಕ. ವಿವೇಕಾನಂದರೇ ಬರೆದ ‘ಸಂನ್ಯಾಸಿಗೀತೆ’ ಅವರ ಬದುಕನ್ನು ಚಿತ್ರಿಸಿದಂತೆಯೇ ಭಾಸವಾಗುತ್ತದೆ. ಕುವೆಂಪು ಭಾವಾನುವಾದವೂ ಮನೋಜ್ಞ. ‘ಭಾರತವನ್ನು ತಿಳಿಯಬೇಕೆಂದಿದ್ದರೆ ವಿವೇಕಾನಂದರನ್ನು ಅಧ್ಯಯನ ಮಾಡಿ’ ಎಂಬ ವಿಶ್ವಕವಿ ರವೀಂದ್ರನಾಥ ಟ್ಯಾಗೋರರ ಮಾತು ಹೃದಯರ್ಸ³ ಹಾಗೂ ಚೇತೋಹಾರಿ.

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

Leave a Reply

Your email address will not be published. Required fields are marked *

Back To Top