Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಮಾನವ ಪ್ರಗತಿಗೆ ಪಾಶ್ಚಾತ್ಯರ ಚಿಂತನಾ ಆಯಾಮ

Friday, 04.05.2018, 3:05 AM       No Comments

ಬದುಕಿನ ಕುರಿತಾದ ಅದ್ಭುತ, ಆಳವಾದ ವಿಚಾರಗಳನ್ನು ಪಾಶ್ಚಾತ್ಯರು ಭಾರತೀಯ ಚಿಂತನಧಾರೆಯ ನೆಲೆಗಟ್ಟಿನಲ್ಲಿಯೇ ನೀಡಿರುವುದು ನಮ್ಮ ಜ್ಞಾನ ಮತ್ತು ಸಂಸ್ಕೃತಿಯ ಶಕ್ತಿ. ಈ ಮಹಾನುಭಾವರ ವಿಚಾರಗಳನ್ನು ವ್ಯಷ್ಟಿ, ಸಮಷ್ಟಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಿಸಬಹುದಾಗಿದೆ. ಅಲ್ಲದೆ, ಇಂಥ ಸಂಗತಿಗಳು ಮನುಷ್ಯನ ಒಳಗಣ್ಣನ್ನು ತೆರೆಸುತ್ತವೆ.

| ಸ್ವಾಮಿ ವೀರೇಶಾನಂದ ಸರಸ್ವತೀ

ಮಾನವನು ಪ್ರಕೃತಿಯ ಕೂಸು. ಪ್ರಕೃತಿ ಮಾತೃಸ್ಥಾನದಲ್ಲಿ ನಿಂತು ಅವನನ್ನು ಪೋಷಿಸಿ ಸಂರಕ್ಷಿಸುತ್ತ ಬಂದಿದೆ. ಜೀವನ ಪ್ರಕೃತಿಯ ಕೊಡುಗೆಯಾದರೆ ಉತ್ತಮ ಜೀವನ ವಿವೇಕದ ಕೊಡುಗೆ! ಮಾನವನ ಪ್ರಗತಿಯ ಕುರಿತಾದ ಪಾಶ್ಚಾತ್ಯ ಚಿಂತಕರ ಅನುಭಾವದ ನುಡಿಗಳು ಉನ್ನತ ಮಟ್ಟದ್ದಾಗಿದ್ದವು ಎಂಬುದನ್ನು ನಾವು ಅಲ್ಲಿನ ಪ್ರಮುಖ ತತ್ತ್ವಜ್ಞಾನಿಗಳು ಹಾಗೂ ದಾರ್ಶನಿಕರು ಬದುಕನ್ನು ವಿಶ್ಲೇಷಿಸಿದ ವಿಧಾನಗಳನ್ನು ಕಂಡಾಗ ಮನವರಿಕೆಯಾಗುತ್ತದೆ. ನಾವಿಲ್ಲಿ ಪ್ರಸ್ತಾಪಿಸ ಹೊರಟ ಬಹುತೇಕ ಚಿಂತಕರು ಭಾರತೀಯ ವಿಚಾರಧಾರೆಗೆ ತಲೆಬಾಗಿದವರು ಮತ್ತು ಅಂತರಂಗ ಧ್ವನಿಗೆ ಒತ್ತುಕೊಟ್ಟವರು. ಅವರಿತ್ತ ಮಾನವ ಜೀವನದ ಉಳಿವು ಮತ್ತು ಉದ್ಧಾರದ ಕುರಿತಾದ ಅಭಿಪ್ರಾಯಗಳನ್ನು ತಿಳಿಯುವುದು ನಮಗೆ ಆನಂದದ ವಿಷಯವಷ್ಟೇ ಆಗಿರದೆ, ‘ಶ್ರೇಷ್ಠವಾದ ವಿಚಾರಗಳು ಸರ್ವದಿಶೆಗಳಿಂದ ಬರಲಿ, ನಾವದನ್ನು ಗೌರವಿಸಿ ಸ್ವೀಕರಿಸುತ್ತೇವೆ’ ಎಂಬ ಭಾರತದ ಶಾಶ್ವತ ಮೌಲ್ಯಕ್ಕೆ ನಮ್ಮ ವಿಧೇಯತೆಯನ್ನು ಸೂಚಿಸಿ ಕೃತಕೃತ್ಯರಾಗುತ್ತೇವೆ. ವ್ಯಕ್ತಿಯ ವೈಭವ, ಶಿಕ್ಷಣದ ಮಹತ್ವ ಹಾಗೂ ಸಮಾಜಕ್ಕೆ ಪೂರಕವಾದ ಆಡಳಿತಾತ್ಮಕ ವ್ಯವಸ್ಥೆಯ ಬಗ್ಗೆ ಪಾಶ್ಚಾತ್ಯ ಚಿಂತಕರ ಅಭಿಪ್ರಾಯಗಳ ಅವಲೋಕನದ ಪುಟ್ಟ ಪ್ರಯತ್ನವಿದು.

ಯುರೋಪಿನಲ್ಲಿ ವಿಜ್ಞಾನ-ತತ್ತ್ವಶಾಸ್ತ್ರಗಳ ಪಿತಾಮಹ ಎಂದೇ ಗೌರವಿಸಲ್ಪಟ್ಟ, ರೇಖಾಗಣಿತಕ್ಕೆ ತನ್ನ ಹೆಸರನ್ನು ಅನ್ವರ್ಥವಾಗಿಸಿದ ದಾರ್ಶನಿಕ, ಭಾರತೀಯ ಗುರುಕುಲ ಶಿಕ್ಷಣವನ್ನು ಗೌರವಿಸಿದ ಹಾಗೂ ಪಾಶ್ಚಾತ್ಯ ಸಂಗೀತ ಪದ್ಧತಿಗೆ ಸಂಖ್ಯಾಶಾಸ್ತ್ರದ ನಿಯಮಗಳನ್ನು ಅಳವಡಿಸಿದ, ಸಂತನಂತೆ ಬದುಕಿದ ಪೈಥಾಗೊರಸ್ ಹೇಳುತ್ತಾನೆ: ‘ಮಾನವನ ಉದ್ಧಾರಕ್ಕೆ ಭಾವನೆ, ಒಳ ಅರಿವು ಮತ್ತು ವಿವೇಚನೆಗಳು ಅತಿ ಮುಖ್ಯ. ಭಾವನೆ ಮತ್ತು ಒಳ ಅರಿವು-ಇವು ಹೃದಯಕ್ಕೆ ಸಂಬಂಧಪಟ್ಟ ವಿಷಯಗಳಾಗಿದ್ದು ಮನುಷ್ಯ ಮತ್ತು ಪ್ರಾಣಿಗಳು ಈ ವಿಚಾರಗಳಿಗೆ ಸ್ಪಂದಿಸುವುದು ದಿಟ. ಆದರೆ ವಿವೇಚನಾಶಕ್ತಿ ಮಿದುಳಿಗೆ ಸಂಬಂಧಪಟ್ಟ ವಿಚಾರವಾಗಿದ್ದು ಈ ವಿಷಯದಲ್ಲಿ ಮಾನವನು ಮಾತ್ರ ಸ್ಪಂದಿಸುತ್ತಾನೆ’.

ಡೆಲ್ಪಿ ದೇವಾಲಯದ ಮೇಲೆ ಕೆತ್ತಲ್ಪಟ್ಟ ಶಾಸನ ‘O Man, know Thyself ಅರ್ಥಾತ್ ‘ಓ ಮಾನವನೇ ನಿನ್ನನ್ನು ನೀನು ತಿಳಿ’ ಎಂಬ ವಿಷಯದ ಕುರಿತು ದಾರ್ಶನಿಕ ಸಾಕ್ರಟಿಸ್ ಯಾವಾಗಲೂ ತನ್ನ ಶಿಷ್ಯರೊಂದಿಗೆ ಚರ್ಚೆ ನಡೆಸುತ್ತಿದ್ದನು. ಈ ಮಾತಿಗೆ ಪುಷ್ಟಿ ನೀಡುವಂತೆ ತತ್ತ್ವಶಾಸ್ತ್ರಜ್ಞ ಗಯಟೆ ಹೇಳುತ್ತಾನೆ: ‘ಆಲೋಚನಾಪರನಾದ ಮಾನವನ ಆನಂದವಿರುವುದು ಶೋಧಿಸುವಷ್ಟು ಶೋಧಿಸುವುದರಲ್ಲಿ ಮತ್ತು ಶೋಧಿಸಲಾರದುದರ ಮುಂದೆ ಮಣಿಯುವುದರಲ್ಲಿ’.

ಈ ಚಿಂತಕರ ಮಾತುಗಳು ಭಾರತೀಯ ಚಿಂತನೆಗಳ ಪ್ರತಿಧ್ವನಿಯೇ ಆಗಿದೆ. ಮಾನವನು ಸಾಂತದಿಂದ ಅನಂತದೆಡೆಗೆ ಪಯಣಿಸುವುದೇ ವಿಕಾಸ ಎಂಬ ಭಾರತೀಯ ನಂಬಿಕೆಯನ್ನು ಎಲ್ಲ ಚಿಂತಕರೂ ಅಂತಃಕರಣಪೂರ್ವಕವಾಗಿ ಅನುಮೋದಿಸಿದಂತಿದೆ ಅವರ ಅನುಭಾವದ ನುಡಿಗಳು.

‘ಮಾನವನ ವಿಕಾಸ ಪ್ರಕ್ರಿಯೆ ಕೇವಲ ಜೈವಿಕ ವಲಯಕ್ಕೆ ಸೀಮಿತವಾದುದಲ್ಲ. ಶಿಕ್ಷಣವು ವಿಕಾಸದ ಕ್ರಿಯೆಯನ್ನು ತ್ವರಿತಗೊಳಿಸುತ್ತದೆ’ ಎಂಬ ಭಾರತೀಯ ನಂಬಿಕೆ ಪಾಶ್ಚಾತ್ಯ ಚಿಂತಕರ ಮನಸ್ಸಿನ ಮೇಲೂ ಅಗಾಧ ಪರಿಣಾಮ ಬೀರಿದೆ. ಶಿಕ್ಷಣವೇ ಮಾನವ ಉದ್ಧಾರಕ್ಕೆ ಅತ್ಯವಶ್ಯಕವೆಂದಾದರೂ ಅದು ಎಂತಹ ಶಿಕ್ಷಣ ಎಂಬ ಬಗ್ಗೆಯೂ ಪಾಶ್ಚಾತ್ಯರ ಅಭಿಮತವು ಮನೋಜ್ಞವಾಗಿದೆ.

ಆಂಗ್ಲ ಸಾಹಿತ್ಯದಲ್ಲಿ ಮಹಾಕಾವ್ಯವೆಂದೇ ಪ್ರಸಿದ್ಧವಾದ ‘ಪ್ಯಾರಡೈಸ್ ಲಾಸ್ಟ್’ ಗ್ರಂಥಕರ್ತೃ ಜಾನ್ ಮಿಲ್ಟನ್ ಹೇಳುತ್ತಾನೆ, ‘ಶಿಕ್ಷಕನ ಪ್ರಥಮ ಮತ್ತು ಶ್ರೇಷ್ಠ ಕರ್ತವ್ಯವೇ ವಿದ್ಯಾರ್ಥಿಗಳ ನೈತಿಕ ಗುಣಮಟ್ಟದ ಬೆಳವಣಿಗೆಗೆ ಒತ್ತು ನೀಡುವುದು. ವಿದ್ಯಾರ್ಥಿಗಳು ಕಠಿಣ ವ್ಯಾಸಂಗ ಮತ್ತು ಸರಳ ಆಹಾರಸೂತ್ರಗಳನ್ನು ಅಳವಡಿಸಿಕೊಳ್ಳಲು ಶಿಕ್ಷಕ ಪ್ರೇರಣೆ ನೀಡಬೇಕು. ವಿದ್ಯಾರ್ಥಿಯ ಬದುಕಿನಲ್ಲಿ ಶಿಸ್ತು, ಮನೋನಿಗ್ರಹ ಹಾಗೂ ದೈವಶಕ್ತಿಯ ಬಗ್ಗೆ ಶಿಕ್ಷಕ ತಿಳಿವಳಿಕೆ ಮೂಡಿಸಬೇಕು. ಪ್ರತಿಯೊಬ್ಬ ವ್ಯಕ್ತಿಗೂ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನ ಎಂಬುವು ಇವೆಯಾದರೂ ಶಾಂತಿ ಮತ್ತು ಯುದ್ಧದ ಅವಧಿಯಲ್ಲಿ ಆತ ನ್ಯಾಯೋಚಿತವಾಗಿ ಚತುರತೆ ಮತ್ತು ಉದಾರತೆಯಿಂದ ತನ್ನ ಕರ್ತವ್ಯಗಳನ್ನು ನಿರ್ವಹಿಸುವಂತಾದಾಗ ಅವನಿಗೆ ಉತ್ತಮ ಶಿಕ್ಷಣ ದೊರೆತಿದೆ ಎಂದು ದೃಢಪಡಿಸುತ್ತೇವೆ’ ಎಂದಿದ್ದಾನೆ.

ತತ್ತ್ವಜ್ಞಾನಿ ಶೊಪನ್ ಹೋವರ್ ಸಂಸ್ಕೃತಿಯ ಮಹತ್ವವನ್ನು ಎತ್ತಿ ಹಿಡಿದವನು. ಆತ ಹೇಳುತ್ತಾನೆ: ‘ಮಾನವ ತನ್ನ ಬದುಕಿನಲ್ಲಿ ಸಾವಿರ ಸಲವಾದರೂ ಐಶ್ವರ್ಯವಂತನಾಗಲು ಯೋಚಿಸುತ್ತಾನೆಯೇ ಹೊರತು ಸಂಸ್ಕೃತಿಯನ್ನು ಸಂಪಾದಿಸುವ ಕಡೆಗೆ ಯೋಚಿಸುವುದಿಲ್ಲ. ಅವನ ಸುಖವನ್ನು ನಿರ್ಧರಿಸುವುದು ಅವನು ಏನಾಗಿದ್ದಾನೆ ಎಂಬುದೇ ಹೊರತು ಅವನ ಬಳಿ ಎಷ್ಟು ಹಣ ಇದೆ ಎಂಬುದಲ್ಲ…’

ಫ್ರಾನ್ಸಿಸ್ ಬೇಕನ್ ಹೇಳುತ್ತಾನೆ, ‘ಹಣವೆಂಬುದು ಗೊಬ್ಬರವಿದ್ದ ಹಾಗೆ, ಕೂಡಿಟ್ಟರೆ ವಾಸನೆ, ಹರಡಿದರೆ ಫಲವತ್ತಾದ ಬೆಳೆ’!.

ಬದುಕಿನುದ್ದಕ್ಕೂ ಸಂಕಟಮಯ ಸನ್ನಿವೇಶಗಳಲ್ಲಿ ಹಾದು ಬಂದ ಸಂಗೀತಗಾರ ಬಿಥೊವನ್, ‘ಸದ್ಗುಣಗಳನ್ನು ನಿನ್ನ ಮಕ್ಕಳಿಗೆ ಬೋಧಿಸುವುದನ್ನು ನಾನು ಶಿಫಾರಸು ಮಾಡುವೆ. ಬದುಕಿನಲ್ಲಿ ಸುಖ ದೊರಕುವುದು ಹಣದಿಂದಲ್ಲ, ಸದ್ಗುಣದಿಂದ. ನನ್ನ ಅನುಭವವನ್ನೇ ಹೇಳುವುದಾದರೆ ನನ್ನ ಬದುಕಿನಲ್ಲಿ ಸಂಕಷ್ಟಗಳಿಂದ ಪಾರಾಗಲು, ನನ್ನ ಕಲೆಯನ್ನು ವೃದ್ಧಿಸಿಕೊಳ್ಳಲು ಹಾಗೂ ವಿಷಮ ಪರಿಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸದೇ ಜೀವನವನ್ನು ಧೈರ್ಯದಿಂದ ಮುಂದುವರಿಸಲು ಸಹಾಯ ಮಾಡಿದ ಶಕ್ತಿ ಸಂಜೀವಿನಿ ನನ್ನ ಸದ್ಗುಣಗಳೇ…’

ಅಥೆನ್ಸಿನ ದಾರ್ಶನಿಕ ಡಯೋಜಿನಿಸ್​ನ ಪ್ರಕಾರ, ‘ಸರಳ ಹಾಗೂ ನೈತಿಕ ಜೀವನವು ಮಾನವನಿಗೆ ಸುಖ ಮತ್ತು ಸಂತೃಪ್ತಿಯನ್ನು ದೊರಕಿಸಿಕೊಡುತ್ತದೆಯಾದರೂ ಅವನು ಆಸೆ ಮತ್ತು ಅವಶ್ಯಕತೆಗಳ ನಡುವೆ ವ್ಯತ್ಯಾಸ ತಿಳಿಯದೆ ವೈಭವೋಪೇತ ಬದುಕಿಗೆ ಹಪಹಪಿಸಿ ಗಳಿಸಿದ ಐಶ್ವರ್ಯದಿಂದ ಅಶಾಂತಿಯನ್ನು ತಂದುಕೊಳ್ಳುತ್ತಾನಲ್ಲದೆ ದುರಾಸೆ ಆತ್ಮಕ್ಕೆ ತುಕ್ಕು ಹಿಡಿಸುತ್ತದೆ’ ಎನ್ನುತ್ತಾನೆ.

ಫೆಡರಿಚ್ ನಿಶೆ ಜೀವನಶಿಕ್ಷಣದ ಬಗ್ಗೆ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾಗಿದ್ದಾನೆ. ಅವನೆನ್ನುತ್ತಾನೆ: ‘ಬದುಕುವುದಕ್ಕಾಗಿ ಹೋರಾಟ ನಡೆಸುವುದೇ ಜೀವನ. ಬದುಕಿನಲ್ಲಿ ಸದ್ಗುಣವೇ ಗಟ್ಟಿಯಾಗಿ ಉಳಿಯುವಂಥದ್ದು ಮತ್ತು ಅದು ಮಾತ್ರವೇ ಜಯವನ್ನು ದೊರಕಿಸಿಕೊಡುವಂಥದ್ದು. ದುರ್ಗಣವು ಕುಂಠಿತವಾಗುತ್ತ ಹೋಗಿ ಬಲಹೀನವಾಗುತ್ತದೆ. ಆದ್ದರಿಂದ ಸದ್ಗುಣವೆಂಬ ಬಲವೃದ್ಧಿಗೆ ಶ್ರಮಿಸಬೇಕು. ಸದ್ಗುಣವೆಂಬ ಕೆಚ್ಚೇ ನೈತಿಕತೆ…’ ಎಂದಿದ್ದಾನೆ.

ರೋಮ್ ದೇಶದ ವಾಗ್ಮಿ ಸಿಸಿರೋ ಹೇಳುತ್ತಾನೆ, ‘ಮಾನ ಮರ್ಯಾದೆಯಿಂದ ಜೀವನ ನಡೆಸಿದರೆ ಸಂತಸದ ವೃದ್ಧಾಪ್ಯ ದೊರಕುತ್ತದೆ’.

ಶಿಕ್ಷಣದ ಅದ್ಭುತ ಪರಿಕಲ್ಪನೆಗಳನ್ನು ಗಮನಿಸಿದ ನಮಗೆ ಸಮಾಜದ ಆಡಳಿತಾತ್ಮಕ ವ್ಯವಸ್ಥೆ ಕುರಿತು ಪಾಶ್ಚಾತ್ಯ ಚಿಂತಕರ ಅಭಿಪ್ರಾಯಗಳು ಮನನಯೋಗ್ಯವೆನಿಸುತ್ತದೆ. ಸಮಾನತೆಯ ಕೂಗು ಎಲ್ಲೆಲ್ಲೂ ಕೇಳಿಬರುತ್ತಿದೆ. ಇಂದು ಇದು ವಿಶ್ವವ್ಯಾಪಕತೆ ಪಡೆದ ವಿಷಯವಾಗಿದೆ. ವಾಲ್ಟೇರ್ ಹೇಳುತ್ತಾನೆ, ‘ಎಲ್ಲ ಜನರೂ ಸಮಾನರೆಂಬುದು ಮಹತ್ತರವಾದ ಸತ್ಯವೆಂಬುದು ನಿರ್ವಿವಾದ. ಆದರೆ ಎಲ್ಲರಿಗೂ ಸ್ವಾತಂತ್ರ್ಯದ, ತಮ್ಮ ವಸ್ತುಗಳನ್ನು ಸುಪರ್ದಿನಲ್ಲಿಟ್ಟುಕೊಳ್ಳುವ, ನಿಯಮಾವಳಿಗಳ ರಕ್ಷಣೆಯ ಹಕ್ಕು ಇರಬೇಕು ಎನ್ನುವಂತಿದ್ದರೆ ಮಾತ್ರ… ಎಲ್ಲ ಪ್ರಜೆಗಳೂ ಸಮಾನರಾಗಿ ಸ್ವತಂತ್ರರಾಗಬಹುದು. ಸ್ವತಂತ್ರರಾಗುವುದೆಂದರೆ ನಿಯಮಗಳಿಗೆ ಅಧೀನರಾಗುವುದು ಎಂದೇ ಅರ್ಥ…’

ಸಮಾಜವು ಎಂಥ ಆಡಳಿತಾತ್ಮಕ ವ್ಯವಸ್ಥೆಯನ್ನು ಬಯಸುತ್ತದೆ ಎಂಬ ಬಗ್ಗೆ ಪ್ರಾಜ್ಞರ ಅಭಿಪ್ರಾಯಗಳು ಇಂತಿವೆ:

ನಿಶೆ ಹೇಳುವಂತೆ ಸಮಾಜವಾದವು ಸಮಾನತೆ ಸಾರುತ್ತದೆ ಎಂದರೂ ಪ್ರಕೃತಿ ಸಮಾನತೆಯನ್ನು ವಿರೋಧಿಸುತ್ತದೆ! ನಿಜಕ್ಕೂ ಪ್ರಕೃತಿ ವ್ಯಕ್ತಿಗಳ, ವರ್ಗಗಳ, ಜನಾಂಗಗಳ ವೈವಿಧ್ಯಗಳನ್ನು ಪ್ರೀತಿಯಿಂದ ಹುಟ್ಟುಹಾಕಿ ಸಲಹುತ್ತ ಸಾಗುತ್ತದೆ.

ಅರಿಸ್ಟಾಟಲ್ ಸಹ ಸಮಾಜವಾದವನ್ನು ‘ಅಸಾಧು’ ಎಂದಿದ್ದು ಮಾನವ ಪ್ರಕೃತಿಗೆ ಅದು ಯೋಗ್ಯವಲ್ಲ ಎಂಬ ಅಭಿಪ್ರಾಯಕ್ಕೆ ಬರುತ್ತಾನೆ. ಶ್ರೀಮಂತ ರಾಜತ್ವ (Aristocracy), ಕಿರಿಜನಾಧಿಪತ್ಯ (Oligarchy) ಮತ್ತು ಪ್ರಜಾಪ್ರಭುತ್ವ (Democracy) ರಾಜಕೀಯ ವಿಧಾನಗಳು ಅವುಗಳ ಅತಿರೇಕದಿಂದಲೇ ನಾಶವಾಗುವುದನ್ನು ಪ್ಲೇಟೋ ಸಮರ್ಥಿಸುತ್ತಾನೆ. ಶ್ರೀಮಂತ ರಾಜತ್ವ, ವ್ಯವಸ್ಥೆಯ ಆಡಳಿತ ಶಕ್ತಿಯನ್ನು ಸೀಮಿತ ವೃತ್ತದೊಳಗೆ ಇರಿಸಿಕೊಳ್ಳುವುದರಿಂದ ನಾಶವಾಗುತ್ತದೆ. ಕಿರಿಜನಾಧಿಪತ್ಯ ಕೆಲವೇ ಬೆರಳೆಣಿಕೆಯಷ್ಟು ಜನರು ಅಧಿಕಾರ ಚಲಾಯಿಸುವ ವ್ಯವಸ್ಥೆಯಾಗಿದ್ದು ತ್ವರಿತವಾಗಿ ಆಸ್ತಿಪಾಸ್ತಿ ವೃದ್ಧಿಸಿಕೊಳ್ಳುವ ಭರದಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು ನಾಶವಾಗುತ್ತದೆ.

‘ಪ್ರಜಾಪ್ರಭುತ್ವ ಮೇಲ್ನೋಟಕ್ಕೆ ಉತ್ತಮವಾಗಿ ಕಂಡರೂ, ಅದೊಂದು ಆಪತ್ಕಾರಿ ವ್ಯವಸ್ಥೆ’ ಎಂದಿದ್ದಾನೆ ಪ್ಲೇಟೋ. ‘ದೇಶವನ್ನು ಆಳುವವರನ್ನು ಆರಿಸಲು ಬೇಕಾದ ವಿದ್ಯೆ, ಶಿಕ್ಷಣ ಸಾಮಾನ್ಯ ಜನರಲ್ಲಿ ಇರುವುದಿಲ್ಲ. ದೇಶವನ್ನಾಳಲು ಸುಶಿಕ್ಷಿತರು, ಬುದ್ಧಿಶಾಲಿಗಳು ಬೇಕು. ಆದರೆ ದುರದೃಷ್ಟವಶಾತ್ ಎಲ್ಲ ಜನರಲ್ಲಿ ಯೋಗ್ಯರನ್ನು ಆರಿಸುವ ಜ್ಞಾನ ಮತ್ತು ಶಿಸ್ತು ಇರುವುದಿಲ್ಲ. ಗುಂಪುಗಾರಿಕೆ, ಮುಂದಾಳುಗಳು ನೀಡುವ ಹುಸಿ ಆಶ್ವಾಸನೆಗಳು, ಸುಳ್ಳು ಹೊಗಳಿಕೆಗಳಿಗೆ ಮಾರುಹೋಗಿ ಮತ್ತೆಮತ್ತೆ ಅವರನ್ನೇ ಚುನಾಯಿಸಿ ತಮಗೆ ತಾವೇ ಮೋಸ ಮಾಡಿಕೊಳ್ಳುತ್ತಾರೆ. ಜನರು ಪಾದರಕ್ಷೆ ರಿಪೇರಿಗೆ ಉತ್ತಮ ಮೋಚಿಯ ಹತ್ತಿರ ಹೋಗುತ್ತಾರೆ, ಅನಾರೋಗ್ಯ ನಿವಾರಣೆಗೆ ನುರಿತ ವೈದ್ಯರಲ್ಲಿಗೆ ಧಾವಿಸುತ್ತಾರೆ, ಆದರೆ ತಮ್ಮನ್ನು ಆಳುವವರನ್ನು ಆರಿಸಲು ಬುದ್ಧಿವಂತರ ಮತ್ತು ಅಂತಹ ವಿದ್ಯೆಯಲ್ಲಿ ಪರಿಣಿತರಾದವರ ಬಳಿಗೇಕೆ ಸಾಗುವುದಿಲ್ಲ…?’ ಎಂಬ ಆತನ ಪ್ರಶ್ನೆ ಮನನೀಯವಾದುದು.

‘ಎಲ್ಲಿಯವರೆಗೆ ದಾರ್ಶನಿಕರು ರಾಜರಾಗುವುದಿಲ್ಲವೋ ಅಥವಾ ಈ ಪ್ರಪಂಚದ ರಾಜರು ತತ್ತ್ವಶಾಸ್ತ್ರದ ಚೈತನ್ಯ ಹೊಂದುವುದಿಲ್ಲವೋ ಮತ್ತು ವಿವೇಕ ಹಾಗೂ ಮುಂದಾಳತ್ವ ಎರಡೂ ಒಬ್ಬನೇ ಆಡಳಿತಗಾರನಲ್ಲಿರುವುದಿಲ್ಲವೋ ಆಗ ಪಟ್ಟಣಗಳು ಮತ್ತು ಮನುಕುಲ ದುರ್ಗತಿಗೆ ಈಡಾಗುವುದು ಖಂಡಿತ!’

ಕೊನೆಯದಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಕುರಿತು ದಾರ್ಶನಿಕ ಸಾಕ್ರಟಿಸ್ ಹೇಳುತ್ತಾನೆ: ‘ನಮ್ಮನ್ನು ಆಳುವವರು ಬುದ್ಧಿವಂತರಾಗಿರಬೇಕು. ಆದರೆ ಪ್ರಜಾಪ್ರಭುತ್ವದಲ್ಲಿ ಬುದ್ಧಿವಂತರಿಗೆ ಜಾಗವಿಲ್ಲ! ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಆರಿಸಿಬಂದು ರಾಜ್ಯವಾಳಬಹುದು. ಅಲ್ಲದೆ ಆಳುವವರು ಮತ್ತು ಆಳಿಸಿಕೊಳ್ಳುವವರೀರ್ವರೂ ಬುದ್ಧಿವಂತರಾಗಿರುವುದಿಲ್ಲವಾದ್ದರಿಂದ ಆಡಳಿತ ವ್ಯವಸ್ಥೆಯನ್ನು ‘ಢೋಂಗಿ’ ಆಗಿಸಬಲ್ಲರು. ಆದ್ದರಿಂದ ಆಳುವವನಿಗೆ ಸೂಕ್ತ ಶಿಕ್ಷಣ ದೊರೆತು, ತರಬೇತಿ ಪಡೆದು, ಬುದ್ಧಿವಂತನಾದರೆ, ಅವನ ರಾಜ್ಯಭಾರವು ಸುಗಮ, ಸುಭದ್ರ, ಸಂತೋಷ ಹಾಗೂ ಸುಖಗಳಿಂದ ಮೆರೆಯುತ್ತದೆ’.

ಮತ ಎಂಬುದು ಆತ್ಮಸಾಕ್ಷಿ; ಮಾರಾಟದ ಸರಕಲ್ಲ, ಪ್ರಲೋಭನೆಗಳಿಗೆ ಒತ್ತೆ ಇಡಬೇಕಾದ ಕಚ್ಚಾವಸ್ತು ಅಲ್ಲ! ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಇಂದು ಈ ಚಿಂತನೆಗಳನ್ನು ತ್ವರಿತವಾಗಿ ಕೈಗೆತ್ತಿಕೊಂಡು ಕಾರ್ಯಪ್ರವೃತ್ತವಾಗಬೇಕಿದೆ. ವ್ಯಕ್ತಿಯ ಸಾಮರ್ಥ್ಯವನ್ನು ಜಾತಿಯ ಭೂತಗನ್ನಡಿಯಲ್ಲಿ ನೋಡದಿರೋಣ. ಪ್ರಜೆಗೆ, ರಾಷ್ಟ್ರಕ್ಕೆ ಘನತೆ ತರುತ್ತಿರುವ, ಅಹರ್ನಿಶಿ ರಾಷ್ಟ್ರಕ್ಕಾಗಿ ದುಡಿಯುತ್ತಿರುವ, ಕೃತಕತೆಯಿಲ್ಲದ ನಾಯಕರನ್ನು ಬೆಂಬಲಿಸಿ ರಾಷ್ಟ್ರಾಭ್ಯುದಯಕ್ಕೆ ಮುನ್ನುಡಿ ಬರೆಯಲು ಸಂಕಲ್ಪಿಸೋಣ.

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

Leave a Reply

Your email address will not be published. Required fields are marked *

Back To Top