Friday, 16th November 2018  

Vijayavani

Breaking News

ಶ್ರೀರಾಮಕೃಷ್ಣರು ಎಂಬ ದೇವಮಾನವನ ದಿವ್ಯನುಡಿ

Friday, 06.04.2018, 3:05 AM       1 Comment

ಭಾರತೀಯ ಪರಂಪರೆಯು ಎತ್ತಿ ಹಿಡಿಯುವ ಘನವೇದಾಂತ ತತ್ತ್ವಗಳನ್ನು ಅನುಸರಿಸಿ ಆಧ್ಯಾತ್ಮಿಕ ಸಾಧನೆಗೈದವರು ಶ್ರೀರಾಮಕೃಷ್ಣರು. ತಾವು ಸಾಕ್ಷಾತ್ಕರಿಸಿಕೊಂಡ ಕಠಿಣ ತತ್ತ್ವಗಳನ್ನು ಸಾಮಾನ್ಯರಿಗೂ ಗ್ರಾಹ್ಯವಾಗುವಂತೆ ಸರಳ ಭಾಷೆಯಲ್ಲಿ ತಿಳಿಸುವಲ್ಲಿ ಯಶಸ್ವಿಯಾದವರು ಮತ್ತು ತಮ್ಮ ದಿವ್ಯಸಂದೇಶಗಳ ಮುಂದುವರಿಕೆಗೆ ಅಗತ್ಯವಾದ ಆಧ್ಯಾತ್ಮಿಕ ಪರಂಪರೆಯ ಉಗಮಕ್ಕೆ ಪ್ರೇರಣೆ ನೀಡಿದವರು.

| ಸ್ವಾಮಿ ವೀರೇಶಾನಂದ ಸರಸ್ವತೀ

ಭಾರತದ ಪರಂಪರೆಯಲ್ಲಿ ಭಗವಾನ್ ಶ್ರೀರಾಮಕೃಷ್ಣರು ಸಾಧನೆ ಹಾಗೂ ಬೋಧನೆಗಳ ಮೂಲಕ ಮಹಾನ್ ಜಾಗೃತಿಯನ್ನು ಮೂಡಿಸಿದ ಅವತಾರ ಪುರುಷರು. ಅವರ ಬದುಕಿನಲ್ಲಿ ಅಧ್ಯಾತ್ಮ ಸಾಧನೆ ಇದೆ; ವಿಚಾರದಲ್ಲಿ ಆಳವಿದೆ, ವಿಸ್ತಾರವಿದೆ, ನಿಖರತೆ ಇದೆ, ಸರ್ವಸಮ್ಮತ ತಿಳಿವು ಇದೆ. ಶ್ರೀರಾಮಕೃಷ್ಣರ ದಿವ್ಯಸಂದೇಶದಲ್ಲಿ ನಿರ್ವಿವಾದ ಎಂದೆನಿಸಿದ, ಯಾವುದೇ ಸಂದೇಹಕ್ಕೆ ಆಸ್ಪದವೀಯದ ನಿರ್ಣಾಯಕ ವಾದ ತತ್ತ್ವಸಿದ್ಧಾಂತವು ಸುಸ್ಪಷ್ಟವಾಗಿ ಮೂಡಿದೆ. ಒಟ್ಟಾರೆ ಅವರ ದಿವ್ಯಪ್ರಭಾವವು ಇಡೀ ಭೂಮಂಡಲವನ್ನೇ ತನ್ನ ವಾತ್ಸಲ್ಯಬಾಹುಗಳಿಂದ ಆವರಿಸಿದೆಯೋ ಎಂದರೆ ಉತ್ಪ್ರೇಕ್ಷೆಯಲ್ಲ.

ಭಗವಾನ್ ಶ್ರೀರಾಮಕೃಷ್ಣರ ಜೀವನ ಸಂದೇಶಗಳಲ್ಲಿನ ವೈಶಿಷ್ಟ್ಯ ನಮಗೆ ಹೊಸಬೆಳಕನ್ನು ನೀಡುತ್ತದೆ. ಅವರು, ಮಾನವ ಸಂಕುಲವು ಆಶ್ರಯಿಸಿ ಅನುಸರಿಸುತ್ತ ನಡೆದು ಬಂದ ದಾರಿಯನ್ನು ಪ್ರಸ್ತಾಪಿಸಿ ಸಮಕಾಲೀನ ಸಮಸ್ಯೆಗಳಿಗೂ ಅತ್ಯುತ್ತಮ ಪರಿಹಾರವಿತ್ತು ಜೀವನವು ಮೌಲ್ಯಗಳ ಪಥದಿಂದ ಜಾರದಂತೆ ಮುನ್ನಡೆಯಲು ಬೇಕಾದ ಮಾರ್ಗದರ್ಶನ ನೀಡಿದ್ದಾರೆ. ಶ್ರೀರಾಮಕೃಷ್ಣರು ಸನಾತನ ಭಾರತೀಯ ಪರಂಪರೆಯು ಎತ್ತಿ ಹಿಡಿಯುವ ಘನವೇದಾಂತ ತತ್ತ್ವಗಳನ್ನು ಅನುಸರಿಸಿ ಆಧ್ಯಾತ್ಮಿಕ ಸಾಧನೆಗೈದವರು. ತಾವು ಸಾಕ್ಷಾತ್ಕರಿಸಿಕೊಂಡ ಕಠಿಣ ತತ್ತ್ವಗಳನ್ನು ಅತ್ಯಂತ ಸರಳ ಭಾಷೆಯಲ್ಲಿ ಸಾಮಾನ್ಯರಿಗೂ ಗ್ರಾಹ್ಯವಾಗುವಂತೆ ತಿಳಿಸುವಲ್ಲಿ ಯಶಸ್ವಿಯಾದವರು ಮತ್ತು ತಾವು ಬೋಧಿಸಿದ ದಿವ್ಯಸಂದೇಶಗಳು ಜಗತ್ತಿನಲ್ಲಿ ಮುಂದುವರಿಯಲು ಅಗತ್ಯವಾದ ಮಹಾನ್ ಆಧ್ಯಾತ್ಮಿಕ ಪರಂಪರೆಯ ಉಗಮಕ್ಕೆ ಪ್ರೇರಣೆಯನ್ನು ನೀಡುವಲ್ಲಿ ಯಶಸ್ವಿಯಾದವರು.

ಶ್ರೀರಾಮಕೃಷ್ಣರ ದಿವ್ಯಸಂದೇಶಗಳು ಇಡೀ ಭೂಮಂಡಲದ ಮೇಲೆ ಬೀರಿದ ಪ್ರಭಾವದ ಕುರಿತು ಅಧ್ಯಯನ ಮಾಡುವುದೇ ಒಂದು ರೋಚಕ ಸಂಗತಿ. ಆಗ ತಾನೆ ಕೈಗಾರಿಕಾ ಕ್ರಾಂತಿ ನೆರವೇರಿ ತನ್ನ ಕಬಂಧಬಾಹುಗಳಿಂದ ಸಮಾಜದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿತ್ತು. ವ್ಯವಸಾಯ ಪ್ರಧಾನವಾಗಿದ್ದ ಮಾನವನಿಗೆ ಪ್ರಕೃತಿಯ ಬಗೆಗಿದ್ದ ಭಾವನಾ ಸಂಬಂಧಗಳು ಸ್ವಲ್ಪಮಟ್ಟಿಗೆ ಅಲುಗಾಡಿದವು. ಈ ಕೈಗಾರಿಕಾ ಕ್ರಾಂತಿಯ ಪ್ರಭಾವದಿಂದ ‘ಭಾವಜೀವಿ ಮಾನವ’ನು ‘ಯಂತ್ರಮಾನವ’ನಾಗಿ ರೂಪುಗೊಳ್ಳಲು ಹವಣಿಸಿದ. ತಾನು ನಂಬಿದ್ದ ಮೌಲ್ಯಗಳಿಗೆ ವ್ಯತಿರಿಕ್ತವಾದ ಯಾಂತ್ರಿಕ ಬದುಕಿನ ಅಚ್ಚಿನಲ್ಲಿ ತನ್ನ ಬದುಕನ್ನು ಸುಧಾರಿಸಿಕೊಳ್ಳಲು ಆತ ಹವಣಿಸುತ್ತಿದ್ದ ಕಾಲಘಟ್ಟದಲ್ಲಿ ಶ್ರೀರಾಮಕೃಷ್ಣರು ಜನ್ಮತಾಳಿದರು. ಅಂದು ಜಗತ್ತಿನ ಎಲ್ಲ ಧರ್ವಿುಯರ ಬದುಕಿನಲ್ಲೂ ಸಂಶಯಗಳು ಹಾಗೂ ಅಸ್ಪಷ್ಟವಾದ ತೊಳಲಾಟಗಳು ಉದಿಸುತ್ತ ಮಾನವನ ಬದುಕಿನಲ್ಲಿ ನಾಗರಿಕತೆಯ ಸೋಗಿನಲ್ಲಿ ಸ್ವಾರ್ಥ, ದ್ವೇಷ, ಅಸೂಯೆಗಳು ವೃದ್ಧಿಯಾಗುತ್ತ ಬಂದವು. ಪ್ರಾಚೀನ ಮೌಲ್ಯಗಳನ್ನು ಉದಾಸೀನ ಮಾಡುವ, ದ್ವೇಷಿಸುವ ಹಾಗೂ ನವೀನ ಜೀವನದ ಮುಂದೆ ಹಳೆಯ ವಿಚಾರಗಳನ್ನೆಲ್ಲ ಬುಡಮೇಲು ಮಾಡುವ ಹುನ್ನಾರಕ್ಕೆ ಸಮಾಜವು ಸನ್ನದ್ಧವಾಗುತ್ತ ಹೋಗುತ್ತಿತ್ತು. ಮಾನವನಲ್ಲಿ ವಿಚಾರದ ಮೂಲಕ ವಿಕಾಸಕ್ಕೆ ದಾರಿಮಾಡಿಕೊಡಬೇಕಾಗಿದ್ದ ಸಾಹಿತ್ಯ, ಸಂಗೀತ, ಮನರಂಜನೆಯ ಚಟುವಟಿಕೆಗಳು ‘ವಿಕಾರ’ದ ಬದುಕಿಗೆ ಮೇಲ್ಪಂಕ್ತಿ ಹಾಕಿಕೊಡುವ ಮಟ್ಟಿಗೆ ತನ್ನ ಟೊಳ್ಳುತನದ ಪ್ರದರ್ಶನಕ್ಕೆ ಸಿದ್ಧವಾಗುತ್ತಿತ್ತು. ಇಂತಹ ಸಂದಿಗ್ಧ ಸಂಕಟಮಯ ಸನ್ನಿವೇಶದಲ್ಲಿ ಶ್ರೀರಾಮಕೃಷ್ಣರು ಅವತರಿಸಿ ತಮ್ಮ ಸಾಧನೆ ಬೋಧನೆಗಳ ಮೂಲಕ ಜಗತ್ತಿನ ಎಲ್ಲ ಧರ್ಮಗಳ ಬಗ್ಗೆ ಯೋಗ್ಯವಾದ ಸ್ಪಷ್ಟೀಕರಣವಿತ್ತು, ಭರವಸೆ ಮೂಡಿಸಿ ನಾಗರಿಕತೆಯ ಸೋಗಿನಲ್ಲಿ ಪ್ರಾಪಂಚಿಕತೆಯು ನೈತಿಕತೆಯನ್ನು ನುಂಗಬಾರದೆಂದು ಎಚ್ಚರಿಸಿದರು.

‘ಶ್ರೀರಾಮಕೃಷ್ಣರ ಬದುಕು ನಮಗೆ ಅತ್ಯಂತ ರೋಚಕ ಎಂದೆನಿಸುತ್ತದೆ’ ಎಂಬ ಮಾತು ಅದಾಗಲೇ ಪ್ರಸ್ತಾಪಿಸಲ್ಪಟ್ಟಿದೆ. ಅದು ಹೇಗೆ? ‘ನಿರಕ್ಷರಕುಕ್ಷಿ’ ಆಗಿದ್ದ ಶ್ರೀರಾಮಕೃಷ್ಣರು ತಮ್ಮ ಬದುಕು ಪ್ರಸ್ಥಾನತ್ರಯಗಳಿಗೆ ಬರೆದ ಅತ್ಯುತ್ತಮ ಭಾಷ್ಯ ಎಂಬುದನ್ನು ಸಾಧಿಸಿ ತೋರಿದರಲ್ಲ! ಅರ್ಚಕರಾಗಿದ್ದ ಅವರು ತಮ್ಮ ಅಪೂರ್ವ ಸಾಧನೆಯ ಮೂಲಕ ಮುಂದೆ ಅರ್ಚಿತರಾದರಲ್ಲ! ಮತ ಧರ್ಮಗಳ ಬಗ್ಗೆ ಅಂಧರಾಗಿದ್ದ ಜನರಿಗೆ ‘ಎಷ್ಟು ಮತಗಳೋ ಅಷ್ಟು ಪಥಗಳು’ ಎಂಬ ಸತ್ಯವನ್ನು ಮನವರಿಕೆ ಮಾಡಿಕೊಟ್ಟರಲ್ಲ! ಅವರು ಯೋಗಸಮನ್ವಯದ ರಹಸ್ಯವನ್ನು ಜಗತ್ತಿಗೇ ಪರಿಚಯಿಸಿದವರಲ್ಲವೇ? ಕಣ್ಣುಮುಚ್ಚಿ ದೇವರನ್ನು ಕಾಣುವುದಕ್ಕಿಂತ ಕಣ್ಣು ತೆರೆದು ದೇವರನ್ನು ಕಾಣಬೇಕೆಂಬ ಉತ್ಕೃಷ್ಟ ಅಧ್ಯಾತ್ಮ ಸತ್ಯವನ್ನು ಅವರು ಪರಿಚಯಿಸಲಿಲ್ಲವೇ? ಕೈ ಹಿಡಿದ ಪತ್ನಿಗೆ ಷೋಡಷೀ ಪೂಜೆಗೈದದ್ದು ಒಂದೆಡೆಯಾದರೆ ಕೋಲ್ಕತದ ಬೀದಿಗಳಲ್ಲಿ ತಮ್ಮೆದುರಿಗೆ ಬಂದ ವೇಶ್ಯೆಯರಲ್ಲೂ ಜಗನ್ಮಾತೆಯನ್ನು ಕಂಡು ಗೌರವಿಸಿದರಲ್ಲವೇ? ಏನದ್ಭುತ!

ಇನ್ನು ಅವರ ದಿವ್ಯನುಡಿಗಳು ನಮ್ಮಲ್ಲಿ ಶ್ರದ್ಧೆ ಭರವಸೆಗಳನ್ನು ಮೂಡಿಸುವುದಂತೂ ದಿಟ. ಭಕ್ತರು ಹಲವು ಸಂದರ್ಭಗಳಲ್ಲಿ ಕೇಳಿದ ಪ್ರಶ್ನೆಗಳಿಗೆ ಅವರಿತ್ತ ಉತ್ತರಗಳು ಅತ್ಯಂತ ಮನೋಜ್ಞ. ಕೆಲವು ವಿಚಾರಗಳನ್ನು ನಾವಿಲ್ಲಿ ಗಮನಿಸಬಹುದು. ‘ಜ್ಞಾನ’ದ ವಿಷಯವಾಗಿ ಪ್ರಸ್ತಾಪಿಸುತ್ತ ಶ್ರೀರಾಮಕೃಷ್ಣರು ಹೇಳುತ್ತಾರೆ- ‘ಓದು ಬರಹ ಕಲಿತುಕೊಂಡರೆ, ಪುಸ್ತಕವನ್ನು ಓದುವುದನ್ನು ಅರಿತರಷ್ಟೇ ಜ್ಞಾನ ದೊರೆತಿದೆ ಎಂದಲ್ಲ. ಭಗವಂತನನ್ನು ಅರಿಯುವುದೇ ಜ್ಞಾನ, ಅರಿಯದಿರುವುದೇ ಅಜ್ಞಾನ!’.

ಪರಮಾತ್ಮನ ಉಪಾಸನೆ ಕುರಿತು ಅವರು ಹೇಳುತ್ತಾರೆ, ‘ಜೀವನದ ಪರಮೋದ್ದೇಶವೇ ಭಗವತ್ಸಾಕ್ಷಾತ್ಕಾರ. ಪರಮಾತ್ಮನನ್ನು ಪೂಜಿಸುವ ವಿಷಯದಲ್ಲಿ ಸಾಕಾರ ಉಪಾಸನೆ ಹಾಗೂ ನಿರಾಕಾರ ಉಪಾಸನೆಗಳೆರಡೂ ಸತ್ಯ. ಆದರೆ ನಿನಗೆ ಯಾವುದರಲ್ಲಿ ವಿಶ್ವಾಸವಿದೆಯೋ ಅದರಲ್ಲಿ ದೃಢಬುದ್ಧಿ ಇಡು. ಒಂದು ವಿಧಾನವನ್ನು ಒಪ್ಪುವ ನೀನು ಮತ್ತೊಂದನ್ನು ನಿರಾಕರಿಸಬೇಡ. ಮುಖ್ಯವಾಗಿ ಬೇಕಿರುವುದು ಶ್ರದ್ಧೆ’.

ಶ್ರೀರಾಮಕೃಷ್ಣರ ಈ ಸಂದೇಶವು ನಮಗೆ ಹತ್ತಾರು ಸತ್ಯಗಳನ್ನು ಅನಾವರಣಗೊಳಿಸುತ್ತದೆ. ಮೊದಲನೆಯದಾಗಿ, ಹಿಂದುವಾದವನು ‘ಬಹುದೇವ’ ಉಪಾಸಕನಲ್ಲ; ಒಬ್ಬನೇ ದೇವನ ಬಹುರೂಪಗಳ ಉಪಾಸಕ. ಎರಡನೆಯದಾಗಿ, ಅನಂತತತ್ತ್ವದ ‘ಸಾಂತ ಉಪಾಸನೆ’ಯೇ ಮೂರ್ತಿಪೂಜೆ! ಮಾನವನು ತಿಳಿಯದ ಹಂತದಿಂದ ತಿಳಿಯಬೇಕಾದ ಹಂತಕ್ಕೆ ಸಂಚರಿಸುವುದೇ ವಿಕಾಸ! ಆದ್ದರಿಂದ ಸಾಂತವನ್ನು ಅರಿಯುತ್ತ ಅನಂತತೆಯೆಡೆಗೆ ಸಾಗಬೇಕು. ಸಾಕಾರ ಪೂಜೆಯನ್ನು ವಿರೋಧಿಸಿ ಯಾರೂ ‘ನಿರಾಕಾರ’ದ ಅನುಭವ ಪಡೆಯಲು ಸಾಧ್ಯವೇ ಇಲ್ಲ! ಸಾರಾಂಶವೆಂದರೆ ಆಧ್ಯಾತ್ಮಿಕ ಸಾಧನಾಪಥದಲ್ಲಿ ಸಾಕಾರ ಉಪಾಸನೆ ಸುಳ್ಳಲ್ಲ; ಅದೊಂದು ಹಂತ. ಆದರೆ ಅದೇ ಅಂತಿಮ ಹಂತ ಅಲ್ಲ! ಎಂಬ ವಿವೇಚನೆ ಅತ್ಯಗತ್ಯ.

ಭಗವಂತ ನಮ್ಮ ಅಂತರ್ಯಾಮಿ, ಅವನನ್ನು ಮರೆಯಬಾರದು. ಜಾಡಮಾಲಿಯು ಮಲವನ್ನು ಹೊರುತ್ತಾನೆ. ಹೊರುತ್ತ, ಹೊರುತ್ತ ಅದೇ ಅಭ್ಯಾಸವಾಗಿ ಅಸಹ್ಯವೇ ಹೊರಟುಹೋಗುತ್ತದೆ. ಹಾವಿನ ಹೆಡೆಯಲ್ಲಿ ರತ್ನವೇ ಇದ್ದರೂ ಕೊಳೆತ ಕಪ್ಪೆಗಾಗಿ ಚಡಪಡಿಸುತ್ತದೆ. ತನ್ನ ಬಾಯಲ್ಲಿ ರಕ್ತ ಬಂದರೂ ಒಂಟೆಯು ನೆಗ್ಗಲುಮುಳ್ಳು ತಿನ್ನುವುದನ್ನು ಬಿಡುವುದಿಲ್ಲ! ಕೇವಲ ಲೌಕಿಕ ಕಾರ್ಯಗಳಿಗೆ ವಿಪರೀತ ಖರ್ಚುಮಾಡಿ ವ್ಯಕ್ತಿ ದಿವಾಳಿ ಆಗುತ್ತಾನೆ. ಅವನ ಸ್ಥಿತಿ ಹೆಗ್ಗಣ ನುಂಗಲು ಹೋದ ಹಾವಿನಂತೆ! ಕಾಮ-ಕಾಂಚನದ ಆಸೆ ಮಾನವನ ಸ್ವಾತಂತ್ರ್ಯವನ್ನು ಕಸಿಯುತ್ತದೆ, ಅವನನ್ನು ದಾಸ್ಯಕ್ಕೆ ತಳ್ಳುತ್ತದೆ. ಜೀವನದಲ್ಲಿ ಹಣದ ಪಾತ್ರವೇನು? ಎಂಬ ಪ್ರಶ್ನೆಗೆ ಶ್ರೀರಾಮಕೃಷ್ಣರು ಉತ್ತರಿಸುತ್ತ, ‘ಜೀವನದ ಉದ್ದೇಶ ಧನಾರ್ಜನೆಯಲ್ಲ, ಭಗವತ್ಸೇವೆ. ಹಣದಿಂದ ಅನ್ನಾಹಾರ, ಬಟ್ಟೆ-ಬರೆ, ಮನೆ-ಮಠ ದೊರೆಯಬಹುದು. ಆದರೆ ಭಗವಂತನ ಸಾಕ್ಷಾತ್ಕಾರ ದೊರೆಯದು. ಧನಾರ್ಜನೆಯಿಂದ ಭಗವಂತನ ಸೇವೆ ನಡೆಯುವುದಾದರೆ, ಅದು ದೋಷವಾದುದೇನೂ ಅಲ್ಲ! ಆದರೆ ಕಾಮ-ಕಾಂಚನವೇ ಮಾಯೆ! ಇದರ ಮಧ್ಯೆ ಬಹಳ ಕಾಲವಿದ್ದರೆ ಎಚ್ಚರ ತಪ್ಪಿಹೋಗುತ್ತದೆ. ಅದೇ ಆನಂದವಾಗಿರುವಂತೆ ಕಾಣುತ್ತದೆ’ ಎನ್ನುತ್ತಾರೆ.

ಆಧ್ಯಾತ್ಮಿಕ ಸಾಧನೆ ಕುರಿತು ಶ್ರೀರಾಮಕೃಷ್ಣರು ಹೇಳುತ್ತಾರೆ, ‘ಭಕ್ತನ ಹೃದಯ ಭಗವಂತನ ಆವಾಸಸ್ಥಾನ. ಭಗವಂತ ಸರ್ವಭೂತಗಳಲ್ಲಿ ಇರುವುದೇನೋ ನಿಜ. ಆದರೆ ಭಕ್ತನ ಹೃದಯದಲ್ಲಿ ವಿಶೇಷವಾಗಿ ಇದ್ದಾನೆ. ಸೂರ್ಯನ ಬೆಳಕು ಎಲ್ಲ ವಸ್ತುಗಳಲ್ಲಿಯೂ ಪ್ರತಿಫಲನಗೊಳ್ಳುತ್ತದೆ, ಆದರೆ ಕನ್ನಡಿಯ ಮೇಲೆ ಅಧಿಕವಾಗಿ!. ಸಕಾಮಕರ್ಮ ನಮ್ಮನ್ನು ಮಾಯೆಗೆ ತಳ್ಳುತ್ತದೆ. ಆಗ ಮಾನವ ಹೆಸರು-ಕೀರ್ತಿಯ ಆಸೆಗೆ ವಾಪಸಾಗುತ್ತಾನೆ, ಲೋಕಮಾನ್ಯನಾಗುವ ಇಚ್ಛೆ ಅಧಿಕವಾಗುತ್ತದೆ. ಪ್ರತಿಫಲಾಪೇಕ್ಷೆ ಅಧಿಕವಾದಂತೆ ದುಃಖವೂ ಅಧಿಕವಾಗುತ್ತದೆ! ಆದರೆ ನಿಷ್ಕಾಮಕರ್ಮ ಸರ್ವಭೂತಗಳನ್ನು ಪ್ರೀತಿ, ದಯೆ ಮತ್ತು ಸಮದೃಷ್ಟಿಯಿಂದ ಕಂಡು ಸೇವೆಮಾಡಲು ಪ್ರೇರೇಪಿಸುತ್ತದೆ!’.

ಜಾತಿ ವ್ಯವಸ್ಥೆಯ ಬಗ್ಗೆ ಮಾತನಾಡುತ್ತ ಶ್ರೀರಾಮಕೃಷ್ಣರು, ‘ಇದೊಂದು ಸಾಮಾಜಿಕ ಆಚರಣೆ. ಆದರೆ ಜಾತಿಭೇದವನ್ನು ಒಂದು ವಿಧದಿಂದ ತೆಗೆದುಹಾಕಿಬಿಡಬಹುದು. ಆ ಮಾರ್ಗವೇ ಭಕ್ತಿ. ಭಕ್ತರಿಗೆ ಜಾತಿ ಎಂಬುದೇ ಇಲ್ಲ. ಭಕ್ತಿ ದೊರೆಯಿತು ಎಂದರೆ ದೇಹ, ಮನಸ್ಸು, ಆತ್ಮ ಎಲ್ಲವೂ ಶುದ್ಧವಾಗುತ್ತದೆ. ಹೃದಯದಲ್ಲಿ ಭಕ್ತಿ ಇಲ್ಲದಿತ್ತು ಎಂದರೆ ಬ್ರಾಹ್ಮಣ ಬ್ರಾಹ್ಮಣನಲ್ಲ! ಹೃದಯದಲ್ಲಿ ಭಕ್ತಿ ಇತ್ತು ಎಂದರೆ ಚಂಡಾಲ ಚಂಡಾಲನಲ್ಲ! ಭಕ್ತಿಯೊಂದಿತ್ತು ಎಂದರೆ ಅಲ್ಲಿ ಸರ್ವರೀತಿಯ ಶುದ್ಧೀಕರಣವನ್ನು ಸಾಧಿಸಿದಂತೆ, ಆಗ ಅಲ್ಲಿ ಅಸ್ಪಶ್ಯ, ಜಾತಿ ಇವೇ ಮೊದಲಾದವುಗಳಿಗೆ ಆಸ್ಪದ ಇಲ್ಲ!’.

ಇಂತಹ ಸಾವಿರಾರು ಸಂಗತಿಗಳನ್ನು ಶ್ರೀರಾಮಕೃಷ್ಣರು ನಮಗೆ ಅನುಗ್ರಹಿಸಿದ್ದಾರೆ. ಈ ಎಲ್ಲ ಸಂದೇಶಗಳ ಸಮಗ್ರ ಸಂಗ್ರಹಕ್ಕೆ ರಾಷ್ಟ್ರಕವಿ ಕುವೆಂಪು ಅವರು ‘ಶ್ರೀರಾಮಕೃಷ್ಣ ವಚನವೇದ’ ಎಂಬ ಹೆಸರನ್ನಿತ್ತಿದ್ದಾರೆ. ಈ ಪವಿತ್ರ ಗ್ರಂಥದ ಮುನ್ನುಡಿಯಲ್ಲಿ ಕುವೆಂಪು ಹೀಗೆ ಬರೆಯುತ್ತಾರೆ- ‘ಶ್ರೀ ರಾಮಕೃಷ್ಣ ವಚನವೇದವೆಂದರೆ ಅದೊಂದು ಕರತಲ ದೇವಸ್ಥಾನ, ಕರತಲ ತಪೋರಂಗ, ಕರತಲ ಪುಣ್ಯಕ್ಷೇತ್ರ. ಆದರೆ ದೇವಸ್ಥಾನ ಪುಣ್ಯಕ್ಷೇತ್ರಗಳಂತೆ ತಾನೆಂದಿಗೂ ಕಲುಷಿತಗೊಳ್ಳುವ ಸಂಭವವಿಲ್ಲ, ಶಿಥಿಲವಾಗುವ ಸಂಭವವಿಲ್ಲ. ಯಾವ ಮನೆಯಲ್ಲಿ ವಚನವೇದ ಇರುತ್ತದೆಯೋ ಅದು ಮಂದಿರವಾಗುತ್ತದೆ. ಯಾರ ಕೈ ಇದನ್ನು ಹಿಡಿದಿರುತ್ತದೆಯೋ ಅದು ಭಗವಂತನ ಪಾದಾರವಿಂದವನ್ನೇ ಧರಿಸಿರುತ್ತದೆ. ಯಾರ ಜಿಹ್ವೆ ಇದನ್ನು ಪಠಿಸುತ್ತದೆಯೋ ಅದು ಅಮೃತವನ್ನೇ ಈಂಟುತ್ತಿರುತ್ತದೆ. ಇದು ಆನಂದದ ಆಗರ, ಶಾಂತಿಯ ಸಾಗರ, ದಿವ್ಯಜ್ಞಾನದ ಓಗರ. ಕಷ್ಟದ ಸಮಯದಲ್ಲಿ ಧೈರ್ಯವೀಯುವ ಸಖ, ಸುಖದ ಸಂದರ್ಭದಲ್ಲಿ ಸಮರ್ಪಣಾ ಭಾವವಿತ್ತು ವಿನಯ, ಭಕ್ತಿಯನ್ನು ಪ್ರಚೋದಿಸುವ ಗುರು; ಕತ್ತಲಲ್ಲಿ ದೀಪ; ದಾರಿಗೆ ಊರುಗೋಲು, ದಿಕ್ಕುಗೆಡದಂತೆ ದಾರಿತೋರುವ ಧ್ರುವತಾರೆ. ಇಲ್ಲಿ ವೇದವೇದಾಂತ ದರ್ಶನಾದಿ ಸರ್ವಸಾರವಿದೆ. ಓದು ಬರುವ ಅತ್ಯಂತ ಸಾಮಾನ್ಯನೂ ಇದನ್ನು ಓದಿದ ಮೇಲೆ ಯಾವ ಪಂಡಿತನಿಗೂ ಕರುಬುವ ಅವಶ್ಯಕತೆ ಇಲ್ಲ; ಯಾವ ವಿದ್ವತ್​ಪೂರ್ಣವಾದ ತತ್ತ್ವಜ್ಞಾನಿಗೂ ಕೀಳೆಂದು ನಾಚಬೇಕಾಗಿಲ್ಲ. ಅದಕ್ಕೆ ಬದಲು ಭಗವಂತನ ಕೃಪೆಯಿಂದ ತನಗಿಂತಲೂ ಧನ್ಯರಿಲ್ಲ ಎಂದರಿತು ನಿರ್ಮಮನಾಗುತ್ತಾನೆ, ಶಾಂತನಾಗುತ್ತಾನೆ, ಪೂರ್ಣವಾಗುತ್ತಾನೆ. ಆತನಿಗೆ ಗಗನ ವೈಶಾಲ್ಯ, ಹೈಮಾಚಲದ ಔನ್ನತ್ಯ, ಅಂಬುಧಿಯ ಗಂಭೀರ ಗಾಂಭೀರ್ಯ ಎಲ್ಲವೂ ಸಿದ್ಧಿಸುತ್ತದೆ. ಇಷ್ಟು ಸರ್ವಜನ ಸಾಮಾನ್ಯ ರೂಪದಲ್ಲಿ, ಇಷ್ಟು ಸರ್ವಸುಲಭ ರೂಪದಲ್ಲಿ ಭಗವಂತ ಎಂದೂ ಅವತರಿಸಿರಲಿಲ್ಲ, ಭಗವದ್ವಾಣಿ ತಾನೆಂದೂ ಕೃತಿಗೊಂಡಿರಲಿಲ್ಲ’.

ದೇವಮಾನವನ ಈ ದಿವ್ಯನುಡಿಗಳ ಅಧ್ಯಯನವು ನಮ್ಮ ಶಕ್ತಿ ಶ್ರದ್ಧೆಗಳನ್ನು ನೂರ್ಮಡಿಗೊಳಿಸುವಲ್ಲಿ ಸಂದೇಹವಿಲ್ಲ.

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

One thought on “ಶ್ರೀರಾಮಕೃಷ್ಣರು ಎಂಬ ದೇವಮಾನವನ ದಿವ್ಯನುಡಿ

  1. “ಅನಂತತತ್ತ್ವದ ‘ಸಾಂತ ಉಪಾಸನೆ’ಯೇ ಮೂರ್ತಿಪೂಜೆ!” ಹೀಗೆಂದರೆ ಏನು? ಕೂಲಂಕಷವಾಗಿ ವಿವರಿಸಿ ಗುರುಗಳೇ.

Leave a Reply

Your email address will not be published. Required fields are marked *

Back To Top