‘ನಿಮಗೆ ಕ್ಷಮಿಸುವುದರಲ್ಲಿ ನಂಬಿಕೆ ಇದೆಯಾ ಎಂದು ಸಲ್ಮಾನ್​ ಖಾನ್​ ಬಳಿ ಕೇಳಬೇಕು ನಾನು’

ಮುಂಬೈ: ಬಾಲಿವುಡ್​ ನಟರಾದ ವಿವೇಕ್​ ಒಬೆರಾಯ್​ ಹಾಗೂ ಸಲ್ಮಾನ್​ ಖಾನ್​ ನಡುವಿನ ಶೀತಲಸಮರ ನಡೆಯುತ್ತಲೇ ಇದೆ. 2003ರಲ್ಲಿ ಒಂದು ಸುದ್ದಿಗೋಷ್ಠಿಯಲ್ಲಿ ವಿವೇಕ್​ ಒಬೆರಾಯ್​ ಸಲ್ಮಾನ್​ ವಿರುದ್ಧ ತೀವ್ರ ಆರೋಪ ಮಾಡಿದ್ದರು. ಸಲ್ಮಾನ್​ ಖಾನ್​ ತಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆಂದೂ ಹೇಳಿದ್ದರು.

ಅದಾದ ಬಳಿಕ ತಮ್ಮ ತಪ್ಪಿನ ಅರಿವಾಗಿ ಸಲ್ಮಾನ್​ ಖಾನ್​ ಬಳಿ ಕ್ಷಮೆ ಕೇಳಿದ್ದರೂ ಇಂದಿಗೂ ಸಲ್ಮಾನ್​ ವಿವೇಕ್​ ಅವರನ್ನು ಕ್ಷಮಿಸಿಲ್ಲ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಈ ಪ್ರಕರಣದ ಬಗ್ಗೆ ವಿವೇಕ್​ ಒಬೆರಾಯ್​ ಅವರನ್ನು ಪ್ರಶ್ನಿಸಿದಾಗ ಅದಕ್ಕೆ ಪ್ರತಿಕ್ರಿಯೆ ನೀಡಿದ ವಿವೇಕ್​, ‘ಸಲ್ಮಾನ್​ ಖಾನ್​ ಅವರಿಗೆ ಕ್ಷಮೆ ಎಂಬ ಪದದ ಅರ್ಥ ಏನಾದರೂ ಗೊತ್ತಿದೆಯಾ? ಅದರಲ್ಲಿ ನಂಬಿಕೆ ಇದೆಯಾ ಎಂದು ಕೇಳಲು ಬಯಸುತ್ತೇನೆ’ ಎಂದು ಹೇಳಿದ್ದಾರೆ.

1999ರ ಹಮ್​ ದಿಲ್​ ದೆ ಚುಕೆ ಸನಮ್​ ಚಿತ್ರದಲ್ಲಿ ಒಟ್ಟಾಗಿ ಅಭಿನಯಿಸಿದ್ದ ಸಲ್ಮಾನ್​ ಖಾನ್​ ಮತ್ತು ಐಶ್ವರ್ಯಾ ರೈ ನಡುವೆ ಪ್ರೀತಿ ಕುಡಿಯೊಡೆದಿತ್ತು. ಆದರೆ ಸಲ್ಮಾನ್​ ತುಂಬ ಹಿಂಸೆ ನೀಡುತ್ತಾರೆ ಎಂದು ಆರೋಪಿಸಿದ್ದ ಐಶ್ವರ್ಯಾ ರೈ ಸಲ್ಮಾನ್​ ಜತೆಗಿನ ಸಂಬಂಧವನ್ನು 2002ರಲ್ಲಿ ಕಡಿದುಕೊಂಡಿದ್ದರು. ಬಳಿಕ ವಿವೇಕ್​ ಒಬೆರಾಯ್​ ಜತೆ ಡೇಟಿಂಗ್​ ನಡೆಸುತ್ತಿದ್ದರು. ಅಲ್ಲದೆ 2004ರಲ್ಲಿ ವಿವೇಕ್​ ಹಾಗೂ ಐಶ್ವರ್ಯಾ ಒಟ್ಟಾಗಿ ನಟಿಸಿದ್ದರು.

ಈ ಮಧ್ಯ 2003ರಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ವಿವೇಕ್​ ಒಬೆರಾಯ್​ ಸಲ್ಮಾನ್​ ಖಾನ್​ ವಿರುದ್ಧ ತೀವ್ರ ಆರೋಪ ಮಾಡಿದ್ದರು. ಸುಮಾರು 41 ಬಾರಿ ಕುಡಿದು ನನಗೆ ಕರೆ ಮಾಡಿದ್ದಾರೆ. ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಹತ್ಯೆಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ನಾನು ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಹೇಳಿಕೊಂಡಿದ್ದರು. ಆ ಘಟನೆ ಆದ ಬಳಿಕ ವಿವೇಕ್​ ಅವರಿಗೆ ಬಾಲಿವುಡ್​ನಲ್ಲಿ ಅವಕಾಶಗಳೂ ಕಡಿಮೆಯಾಗಿ ಒಂದು ಹಂತದಲ್ಲಿ ಸಿನಿ ಜೀವನದಲ್ಲಿ ತುಂಬ ಕೆಳಕ್ಕೆ ಇಳಿದರು.

ಅದಾದ ಬಳಿಕ ತಮ್ಮ ತಪ್ಪು ಅರಿತ ಅವರು ಹಲವು ಕಾರ್ಯಕ್ರಮಗಳಲ್ಲಿ ಬಹಿರಂಗವಾಗಿ ಸಲ್ಮಾನ್​ ಖಾನ್ ಬಳಿ ಕ್ಷಮಾಪಣೆ ಕೇಳಿದ್ದಾರೆ. ನಾನು ಹಾಗೆ ನಡೆದುಕೊಂಡಿದ್ದರ ಬಗ್ಗೆ ವಿಷಾದವಿದೆ ಎಂದು ಕೂಡ ಹೇಳಿದ್ದಾರೆ. ಆದರೆ ಸಲ್ಮಾನ್​ ಖಾನ್​ ಮಾತ್ರ ವಿವೇಕ್​ ಅವರನ್ನು ಇಂದಿಗೂ ಕ್ಷಮಿಸಿಲ್ಲ. ಈಗ 16 ವರ್ಷಗಳ ನಂತರ ಮತ್ತೆ ವಿವೇಕ್​ ಒಬೆರಾಯ್​ ಅದೇ ಘಟನೆ ನೆನಪಿಸಿಕೊಂಡಿದ್ದಾರೆ.