ಸಂತೃಪ್ತಿ ನೀಡಿದ ಕಪ್ಪು ಬಂಗಾರ!

| ಗಣಪತಿ ಹಾಸ್ಪುರ

‘ಬಾಳೇಹಳ್ಳಿಯ ಕುಲಕರ್ಣಿ ಅವರು ಚೆನ್ನಾಗಿ ಮೆಣಸು ಬೆಳೆದಿದ್ದಾರೆ’ ಎಂದು ಸ್ನೇಹಿತರೊಬ್ಬರು ಹೇಳಿದಾಗಲೇ ಆ ತೋಟವನ್ನು ಖುದ್ದಾಗಿ ನೋಡಲು ನಿರ್ಧರಿಸಿಯಾಗಿತ್ತು. ಆ ದಿನ ಮುಂಜಾನೆ ಬಾಳೇಹಳ್ಳಿಯ ಉತ್ಸಾಹಿ ಕೃಷಿಕನ ‘ಕಪ್ಪು ಬಂಗಾರದ ಕೃಷಿ’ಯನ್ನು ಕಣ್ಣಾರೆ ನೋಡಲು ಹೊರಟಾಯಿತು. ಇದು ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿ ಸಿಗುವ ಊರೇನೂ ಅಲ್ಲ. ಮುಖ್ಯರಸ್ತೆಯಿಂದ ಮೂರ್ನಾಲ್ಕು ಕಿ.ಮೀ. ಆಚೆಗಿರುವ ಪುಟ್ಟ ಹಳ್ಳಿ. ಉತ್ತರಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಚವತ್ತಿ ಸಮೀಪದ ಊರು (ಬಾಳೇಹಳ್ಳಿ) ಇದು.

ಈ ಕುಗ್ರಾಮದ ಸುತ್ತೆಲ್ಲ ಹಚ್ಚಹಸಿರಿನಿಂದ ಕಂಗೊಳಿಸುವ ಕಾಡು. ಅದರ ಮಧ್ಯವೇ ಅಲ್ಲಲ್ಲಿ ಅನೇಕ ಕೃಷಿ ಕುಟುಂಬಗಳು ನೆಲೆಸಿವೆ. ಅವರ ಪೈಕಿ ಸ್ವಾನಂದ ಜಿ. ಕುಲಕರ್ಣಿ ಯುವ ಪ್ರಗತಿಪರ ಕೃಷಿಕರು. ಇವರು ಎರಡು ಎಕರೆಯ ಒಡೆಯರು. ಪ್ರಧಾನವಾಗಿ ಅಡಕೆ ಕೃಷಿ ಮಾಡುತ್ತಿದ್ದರೂ; ಕಾಳುಮೆಣಸು, ಬಾಳೆ ಕೃಷಿಯೂ ಉಂಟು. ಹೈನುಗಾರಿಕೆಯಲ್ಲಿಯೂ ಮುಂದಿದ್ದಾರೆ. ಈ ಹಿಂದೆ ಏಲಕ್ಕಿ, ವೆನಿಲ್ಲಾ ಕೃಷಿಯನ್ನೂ ಬಹಳ ಆಸಕ್ತಿ, ಕಾಳಜಿಯಿಂದ ಬೆಳೆಸಿ ಜೋಪಾನ ಮಾಡಿದ್ದರೂ ಅನೇಕ ತೊಡಕಿನಿಂದ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಆಮೇಲೆ ಇವರಿಗೆ ಕಾಳುಮೆಣಸಿನ ಕೃಷಿಯ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿದ್ದರಿಂದ, ಅಡಕೆ ತೋಟದಲ್ಲಿ ಕಪ್ಪು ಬಂಗಾರ ಬೆಳೆಸಲು ಮುಂದಾದರು.

ಕಂಗೊಳಿಸುವ ಕಾಳುಮೆಣಸು

ಕ್ರಿಯಾಶೀಲ ವ್ಯಕ್ತಿತ್ವ ಹೊಂದಿರುವ ಸ್ವಾನಂದ ಕುಲಕರ್ಣಿ, ಯಾವ ಕೆಲಸವನ್ನು ಮಾಡುವುದಿದ್ದರೂ ಅದರ ಬಗ್ಗೆ ಸಾಕಷ್ಟು ಚಿಂತನೆ ಮಾಡಿಯೇ ಕಾರ್ಯರೂಪಕ್ಕೆ ತರುತ್ತಾರೆ. ತೋಟದಲ್ಲಿ ಕೇವಲ ಅಡಕೆಯೊಂದೇ ಇದ್ದರೆ, ಜೀವನದ ನೌಕೆ ಓಡುವುದು ಕಷ್ಟವಾಗಬಹುದು ಎಂಬ ಮುಂದಾಲೋಚನೆಯಿಂದ ಕೆಲವು ಉಪ ಬೆಳೆಗಳ ಕೃಷಿ ಮಾಡಿದರೂ, ತೃಪ್ತಿದಾಯಕ ಫಲ ಸಿಗಲಿಲ್ಲ. ಅದರಿಂದ ಬೇಸರವಾದರೂ ಕೈಕಟ್ಟಿ ಕೂರದೆ, ಪರ್ಯಾಯ ಬೆಳೆಯತ್ತ ದೃಷ್ಟಿ ಹರಿಸಿದರು. ಹಾಗೆ ಹುಡುಕಾಡುತ್ತಿದ್ದಾಗ ಆಕರ್ಷಿಸಿದ್ದೇ ಕಾಳುಮೆಣಸಿನ ಕೃಷಿ.

ಐದು ವರ್ಷಗಳ ಹಿಂದೆ ಕಾಳುಮೆಣಸಿನ ವ್ಯವಸಾಯ ಆರಂಭಿಸುವಾಗ ಶಿರಸಿ ತಾಲೂಕಿನ ಸಾಲ್ಕಣಿ, ಯಲ್ಲಾಪುರ ತಾಲೂಕಿನ ಮಂಚಿಕೇರಿಯ ನಮ್ಮೂರ ನರ್ಸರಿ ಹಾಗೂ ಹೊಸ್ಮನೆಯ ಶ್ರೀಧರ ಭಟ್ ಅವರಿಂದ ಮೆಣಸಿನ ಬಳ್ಳಿ, ಕುಡಿಯನ್ನು ತಂದು ಹೂಳಿದ್ದಾರೆ. ಕುಲಕರ್ಣಿಯವರ ತೋಟದಲ್ಲೀಗ ಪಣಿಯೂರ್, ಬಾಳೆದಡಿಗ, ನಂಬರ್-7 ಲೋಕಲ್ ತಳಿ ಸೇರಿದಂತೆ ಸುಮಾರು 700 ಬಳ್ಳಿಗಳಿದ್ದು, ಮುಗಿಲೆತ್ತರಕ್ಕೆ ಬೆಳೆದು ನಿಂತಿವೆ.

ಉಪಕೃಷಿಯಿಂದ ಬಂದಷ್ಟು ಬರಲಿ ಎನ್ನುವ ಸಣ್ಣತನ ಮಾಡದೆ, ಪ್ರಧಾನ ಕೃಷಿಯಂತೆಯೇ ಇದಕ್ಕೂ ವ್ಯವಸ್ಥಿತ ನಿರ್ವಹಣೆ ಮಾಡಿ ಯೋಗ್ಯ ಫಲ ಪಡೆಯುತ್ತಿದ್ದಾರೆ. ಏಪ್ರಿಲ್-ಮೇ ತಿಂಗಳಿನಲ್ಲಿ ಒಣಹುಲ್ಲನ್ನು ತೋಟಕ್ಕೆ ಹರಡಿ ಮುಚ್ಚಿಗೆ ಮಾಡುತ್ತಾರೆ. ಅದಕ್ಕೂ ಮುನ್ನ ಪ್ರತಿ ಅಡಕೆ ಮರಕ್ಕೂ ಒಂದು ಬುಟ್ಟಿ ದಡ್ಡಿಗೊಬ್ಬರ ನೀಡುತ್ತಾರೆ. ಮಳೆಗಾಲ ಮುಗಿಯುವ ಸಮಯದಲ್ಲಿ ಪ್ರತಿ ಮರಕ್ಕೆ ಎರಡು ಕೆಜಿ ಅನ್ನಪೂರ್ಣ ಗೊಬ್ಬರ ಹಾಕಿದರೆ, ಮಳೆಗಾಲ ಶುರುವಾದಾಗ ಎನ್.ಪಿ.ಕೆ.ಯನ್ನು ಅರ್ಧ ಕೆಜಿಯಂತೆ ಎರಡು ಬಾರಿ ಹಾಕಿ ಸಂರಕ್ಷಿಸುತ್ತಾರೆ. ಬೋರ್ಡೆ ದ್ರಾವಣವನ್ನು ದೊಡ್ಡ ಬಳ್ಳಿಗೆ 3 ಲೀಟರ್, ಸಣ್ಣ ಬಳ್ಳಿಗೆ ಒಂದು ಲೀಟರ್ ಹಾಕಿ ಮೆಣಸಿನ ಬಳ್ಳಿಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತಾರೆ. ಇದರ ಫಲವಾಗಿ, 2017-18ನೇ ಸಾಲಿನಲ್ಲಿ ಹತ್ತು ಕ್ವಿಂಟಾಲ್ ಇಳುವರಿ ಪಡೆದಿದ್ದಾರೆ. ಈ ಸೀಸನ್​ನಲ್ಲಿ ಮೆಣಸಿನ ಬೆಳೆ ಅಷ್ಟೇನೂ ಇಲ್ಲ. ಆದರೂ ಏಳೆಂಟು ಕ್ವಿಂಟಾಲ್ ಸಿಗುವ ನಿರೀಕ್ಷೆಯಿದೆ. ಕೇವಲ ಅಡಕೆ ಬೆಳೆಯ ಮೇಲೆ ‘ಭಾರ’ ಹಾಕಿ, ಜೀವನದ ಬಂಡಿ ಓಡಿಸುವುದಕ್ಕಿಂತ, ಕಾಳುಮೆಣಸಿನ ಬಳ್ಳಿಯಂತಹ ಉತ್ತಮ ಉಪಕೃಷಿಯನ್ನು ನಿಷ್ಠೆಯಿಂದ ಕೈಗೊಂಡರೆ ಆರ್ಥಿಕವಾಗಿ ಸದೃಢವಾಗಿ ನೆಮ್ಮದಿಯಿಂದ ಬದುಕಲು ಸಾಧ್ಯ ಎನ್ನುತ್ತಾರೆ.