Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಸಾವಿರ ಮರಗಳ ಸರದಾರ!

Monday, 09.07.2018, 3:02 AM       No Comments

| ಅಕ್ಕಪ್ಪ ಮಗದುಮ್ಮ

ಬೆಳಗಾವಿ: ಇವರಿಗೆ ಕೃಷಿಯೇ ಉಸಿರು. ಪ್ರಾಣಿ-ಪಕ್ಷಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಪ್ರತಿದಿನ ಒಂದಾದರೂ ಸಸಿ ನೆಟ್ಟರೆ ಸಮಾಧಾನ. ಗಿಡ-ಮರಗಳ ಪಾಲನೆ, ಪೋಷಣೆಯೇ ಇವರ ನಿತ್ಯದ ಕಾಯಕ.

ಕಳೆದ 30 ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಾವಯವ ಕೃಷಿ ಮಾಡಿ ಇತರರಿಗೆ ಮಾದರಿಯಾಗಿರುವ ಈ ವ್ಯಕ್ತಿಯ ಹೆಸರು ಬಸವಣ್ಣೆಪ್ಪ ಉಳ್ಳಾಗಡ್ಡಿ. ಖಾನಾಪುರ ತಾಲೂಕಿನ ಹಿರೇಅಂಗ್ರೊಳ್ಳಿ ಗ್ರಾಮದವರು. ಪಕ್ಕದ ರೈತನ ಹೊಲದಲ್ಲಿ ಬೆಳೆ ಚೆನ್ನಾಗಿದ್ದರೆ ಹೊಟ್ಟೆ ಉರಿದುಕೊಳ್ಳುವಂಥವರೇ ಹೆಚ್ಚಾಗಿರುವ ಪ್ರಸ್ತುತ ದಿನಗಳಲ್ಲಿ ‘ತಾನೂ ಬೆಳೆಯಬೇಕು, ಇತರರೂ ಬದುಕಬೇಕು’ ಎಂಬ ಉದಾರ ಮನೋಭಾವ ಹೊಂದಿರುವ ಇಂಥವರು ಅಪರೂಪವೇ.

ಬಸವಣ್ಣೆಪ್ಪ ಅಂದಿನ ಕಾಲದಲ್ಲೇ ಬಿಎ ಪದವಿ ಓದಿದವರು. ಬೆಳಗಾವಿ ಡಿಸಿಸಿ ಬ್ಯಾಂಕಿನಲ್ಲಿ ನೌಕರಿಯೊಂದು ಅರಸಿಕೊಂಡು ಬಂತು. ಆದರೆ, ಕೃಷಿಯನ್ನೇ ಆಯ್ದುಕೊಂಡರು. ಅಷ್ಟೇ ಅಲ್ಲ, ಕೃಷಿಯೊಂದಿಗೆ ಮೂರ್ನಾಲ್ಕು ದಶಕಗಳಿಂದ ಪರಿಸರ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಪ್ರಾಣಿ-ಪಕ್ಷಿಗಳ ಸಂರಕ್ಷಣೆಗೆಂದೇ ತಮ್ಮ ಹೊಲದಲ್ಲಿ ಸಾವಿರಾರು ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಇವರ ತೋಟಗಾರಿಕೆ ಬೆಳೆಗೆ ಮನಸೋತ ಜಿಲ್ಲೆಯ ರೈತರು ತಮ್ಮ ಭೂಮಿಯನ್ನು ಸಹ ಹಸಿರು ಹೊದಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ.

ರಸ್ತೆಯ ಬದಿ ಹಸಿರುಹೊನ್ನು: ಇವರಿಗಿರುವ ಪರಿಸರದ ಅಪಾರ ಕಾಳಜಿಯನ್ನು ಕಂಡ ಬೆಳಗಾವಿ ಅರಣ್ಯ ಇಲಾಖೆ ಅಧಿಕಾರಿಗಳು ವಿವಿಧ ಬಗೆಯ ಸಸಿಗಳ ಪ್ಲಾಂಟೇಷನ್ ಮಾಡುವುದು ಹಾಗೂ ಸಸಿಗಳನ್ನು ನೆಡುವ ಬಗ್ಗೆ ಇವರಿಂದ ಮಾರ್ಗದರ್ಶನ ಪಡೆದಿದ್ದಾರೆ. ಇವರ ಸಲಹೆ, ಸೂಚನೆಯಂತೆ ಅರಣ್ಯ ನಾಶಕ್ಕೆ ಕಡಿವಾಣ ಹಾಗೂ ಮರಗಳ ರಕ್ಷಣೆಗೆ ಸುಮಾರು ಇನ್ನೂರಕ್ಕೂ ಹೆಚ್ಚು ವಾಚರ್​ಗಳನ್ನು (ನಿಗಾ ವಹಿಸುವವರು) ಅರಣ್ಯ ಇಲಾಖೆ ನೇಮಕ ಮಾಡಿಕೊಂಡಿದೆ. ರೈತ ಬಸವಣ್ಣೆಪ್ಪ ಅವರ ದೂರದೃಷ್ಟಿಯಿಂದಾಗಿ ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು, ಎಂ.ಕೆ.ಹುಬ್ಬಳ್ಳಿ, ಹಿರೇಬಾಗೇವಾಡಿ, ಅಳ್ನಾವರ, ಲೋಂಡಾ ಸೇರಿದಂತೆ ಪ್ರಮುಖ ಹೆದ್ದಾರಿ ಹಾಗೂ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಎರಡೂ ಬದಿಗೆ (ರೋಡ್​ಸೈಡ್ ಪ್ಲಾಂಟೇಷನ್) ಈವರೆಗೆ ಸುಮಾರು 10 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ. ಖಾನಾಪುರ ತಾಲೂಕಿನಲ್ಲಿ ಮೊದಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ರಸ್ತೆಗಳ ಬದಿಗೆ ಮಾತ್ರ ಗಿಡ ನೆಡಲಾಗುತ್ತಿತ್ತು. ಆದರೆ, ಈಗ ಬಸವಣ್ಣೆಪ್ಪ ಪರಿಶ್ರಮದ ಫಲವಾಗಿ ಬಹುತೇಕ ರಸ್ತೆಗಳು ಹಸಿರಿನಿಂದ ಕಂಗೊಳಿಸುತ್ತಿವೆ.

ಔಷಧ ಸಸ್ಯೋದ್ಯಾನ: ಬಸವಣ್ಣೆಪ್ಪ 80 ಎಕರೆ ಸ್ವಂತ ಜಮೀನು ಹೊಂದಿದ್ದಾರೆ. ಆ ಪೈಕಿ 40 ಎಕರೆ ಭೂಮಿಯಲ್ಲಿ ಕಬ್ಬು, ಮೆಕ್ಕೆಜೋಳ, ಭತ್ತ, ಗೆಣಸು, ಮೆಣಸಿನಕಾಯಿ ಹಾಗೂ ವಿವಿಧ ಬಗೆಯ ತರಕಾರಿ ಬೆಳೆ ಬೆಳೆಯುತ್ತಿದ್ದಾರೆ. 30 ಎಕರೆಯಲ್ಲಿ ಮಾವು, ತೆಂಗು, ನೇರಳೆ, ಜಂಬು ನೇರಳೆ, ಅಡಕೆ, ಬಾಳೆ, ಹೊನ್ನಿ, ದಾಳಿಂಬೆ, ಹಲಸು, ನೀಲಗಿರಿ, ಅಶೋಕ, ಬಸರಿಗಿಡ, ಬಿದಿರು, ತಪಸಿ, ದಾಮನೆ, ಸೀತಾಫಲ, ನುಗ್ಗೆ, ತೇಗ, ಗಾಳಿಮರ ಸೇರಿ 5 ಸಾವಿರಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ಕಬ್ಬು ಹಾಗೂ ಮೆಕ್ಕೆಜೋಳ ಹೊರತುಪಡಿಸಿ ಹಣ್ಣಿನ ಮರಗಳಿಂದ ಪ್ರತಿವರ್ಷ 25ರಿಂದ 30 ಲಕ್ಷ ರೂ. ಲಾಭ ಪಡೆಯುತ್ತಿದ್ದಾರೆ. ಉಳಿದ 10 ಎಕರೆ ಪ್ರದೇಶದಲ್ಲಿ ವಿವಿಧ ಬಗೆಯ ಔಷಧ ಗುಣವುಳ್ಳ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಅಲ್ಲದೆ ಎದೆ, ಕಾಲು ಹಾಗೂ ಬೆನ್ನು ನೋವು ಎಂದು ಬಂದವರಿಗೆ ತಾವೇ ತಮ್ಮ ಹೊಲದಲ್ಲಿ ಬೆಳೆದ ಗಿಡಮೂಲಿಕೆಯಿಂದ ಉಚಿತ ಔಷಧೋಪಚಾರ ಮಾಡುತ್ತಾರೆ.

ಒತ್ತುವರಿ ವಿರುದ್ಧ ಹೋರಾಟ

1984ರಲ್ಲಿ ಭೀಮಗಡ ಅರಣ್ಯ ಪ್ರದೇಶದ ಲೋಂಡಾ ಬಳಿಯ ರಾಮನಗರದ ಗ್ರಾಮಸ್ಥರು ಸುಮಾರು 5 ಸಾವಿರ ಎಕರೆ ಅರಣ್ಯ ಭೂಮಿಯನ್ನು ಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸತೊಡಗಿದರು. ಪ್ರತಿಭಟನೆಯನ್ನೂ ಆರಂಭಿಸಿದರು. ಭೂಮಿ ಹಸ್ತಾಂತರಿಸಲೆಂದೇ ಅಂದಿನ ಅರಣ್ಯ ಸಚಿವ ಜೀವಿಜಯ ಹಾಗೂ ಇಂಧನ ಸಚಿವ ಜೆ.ಎಚ್. ಪಟೇಲ್ ಅವರು ಅರಣ್ಯವಾಸಿಗಳ ಸ್ಥಿತಿಗತಿ ಪರಿಶೀಲಿಸಲು ಭೀಮಗಡಕ್ಕೆ ಬಂದಾಗ ರೈತ ಬಸವಣ್ಣೆಪ್ಪ ಸ್ವತಃ ತಾವೇ ನೇತೃತ್ವ ವಹಿಸಿ ಸಾವಿರಕ್ಕೂ ಹೆಚ್ಚು ರೈತರನ್ನು ಒಗ್ಗೂಡಿಸಿ ಅರಣ್ಯ ಭೂಮಿಯ ಹಸ್ತಾಂತರ ವಿರೋಧಿಸಿ ಪ್ರತಿಭಟನೆ ಮಾಡಿ ಅದರಲ್ಲಿ ಯಶಸ್ಸೂ ಕಂಡರು. ಅದೇ ಪ್ರದೇಶ ಈಗ ಭೀಮಗಡ ಹುಲಿ ಅಭಯಾರಣ್ಯ ಆಗಿದೆ. ಅಂದಿನಿಂದ ಈವರೆಗೆ ಬಸವಣ್ಣೆಪ್ಪ ಎಲ್ಲಿಯಾದರೂ ಅರಣ್ಯ ಭೂಮಿ ಒತ್ತುವರಿ ಕಂಡು ಬಂದರೆ ನೇರವಾಗಿ ಅರಣ್ಯ ಇಲಾಖೆಯ ಗಮನಕ್ಕೆ ತರುವ ಮೂಲಕ ಅತಿಕ್ರಮಣದ ವಿರುದ್ಧ ಹೋರಾಡುತ್ತಿದ್ದಾರೆ.

ಉಚಿತ ಸಸಿ ವಿತರಣೆ

ಹಲವು ವರ್ಷಗಳಿಂದ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕಿನ ಸರ್ಕಾರಿ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಅರಣ್ಯ ಕೃಷಿ ಹಾಗೂ ಪರಿಸರ ಕಾಳಜಿ ಬಗ್ಗೆ ಉಚಿತ ಉಪನ್ಯಾಸವನ್ನೂ ಬಸವಣ್ಣೆಪ್ಪ ನೀಡುತ್ತಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬರುವಾಗ ತಮ್ಮ ಜತೆಗೆ ವಿವಿಧ ಬಗೆಯ ಹಣ್ಣಿನ ಸಸಿಗಳನ್ನು ತಂದು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಾರೆ. ಇದರಿಂದ ಬರಡಾಗಿದ್ದ ಹಲವು ಶಾಲೆಗಳ ಆವರಣಗಳು ಈಗ ಹಸಿರಿನಿಂದ ಕಂಗೊಳಿಸುತ್ತಿವೆ. ಸಂಪರ್ಕಕ್ಕೆ 97413 60039.

Leave a Reply

Your email address will not be published. Required fields are marked *

Back To Top