Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಹಾಳೆತಟ್ಟೆಯಿಂದ ಹಸನಾದ ಬದುಕು

Monday, 09.07.2018, 3:04 AM       No Comments

ಅಡಕೆ ಹಾಳೆಯ ತಟ್ಟೆ ತಯಾರಿಕೆ ಉದ್ಯಮವನ್ನು ಮನೆಯಲ್ಲೇ ಸ್ಥಾಪಿಸಿರುವ ಈ ಯುವ ದಂಪತಿ ಪ್ರತಿದಿನ ಸುಮಾರು 800 ತಟ್ಟೆಗಳನ್ನು ತಯಾರಿಸಿ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದಾರೆ.

| ಸಂತೋಷ್ ರಾವ್ ಪೆಮುಡ

ಸಂಪೂರ್ಣ ಮಳೆಯಾಶ್ರಿತ ಎರಡು ಎಕರೆ ಜಮೀನಿನಲ್ಲಿ ಬೆಳೆಯುವ ರಾಗಿಯಿಂದ ವರ್ಷಪೂರ್ತಿ ಕುಟುಂಬದ ಹೊಟ್ಟೆ ಹೊರೆಯಲೂ ಇವರಿಗೆ ಕಷ್ಟವಾಗಿತ್ತು. ಮಕ್ಕಳ ಶಿಕ್ಷಣ ಹಾಗೂ ಇತರ ವೆಚ್ಚಕ್ಕಾಗಿ ಕಿರು ಉದ್ಯಮ ಸ್ಥಾಪಿಸಿಕೊಳ್ಳಬೇಕೆಂಬ ವಿನೂತನ ಯೋಚನೆಯನ್ನು ಜಾರಿಗೆ ತಂದು, ಕಠಿಣ ಪರಿಶ್ರಮದಿಂದ ಉದ್ಯಮವನ್ನು ಅತ್ಯುತ್ತಮವಾಗಿ ಕಟ್ಟಿಕೊಂಡವರು ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಹಿರೇಕಳಲೆ ಆಲೇನಹಳ್ಳಿಯ ಮಮತಾ ಲೋಕೇಶ್.

ಸಾಮಾನ್ಯ ಕೃಷಿಕ ಕುಟುಂಬಕ್ಕೆ ಮದುವೆಯಾಗಿ ಬಂದ ಮಮತಾ, ರಾಗಿ ಬೆಳೆಯ ಹೊರತಾಗಿ ಮನೆಗೆ ಬೇರೆ ಆದಾಯ ಇಲ್ಲದಿರುವುದನ್ನು ಮನಗಂಡರು. ಹೀಗಾಗಿ, 2014ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸ್ವಸಹಾಯ ಸಂಘದ ಸದಸ್ಯರಾಗಿ ಬದುಕನ್ನು ಕಟ್ಟಿಕೊಳ್ಳುವ ನಿರ್ಧಾರ ಮಾಡಿದರು. ಅದರಂತೆ ಆಲೇನಹಳ್ಳಿ ಗ್ರಾಮದ ಅಕ್ಕಪಕ್ಕದ ಸಮಾನ ಮನಸ್ಕ ಹನ್ನೆರಡು ಮಂದಿ ಮಹಿಳೆಯರನ್ನು ಒಟ್ಟು ಸೇರಿಸಿದ ಶ್ರೀ ಬನ್ನಿಕಾಳಮ್ಮ ಸ್ವ ಸಹಾಯ ಸಂಘದ ಸದಸ್ಯೆಯಾಗಿ ಸೇರ್ಪಡೆಯಾದರು. ಸಂಸ್ಥೆಯ ನಿಯಮಾನುಸಾರ ಕಡ್ಡಾಯ ವಾರದ ಸಭೆ, ರೂ.10 ವಾರದ ಉಳಿತಾಯ, ದಾಖಲಾತಿ ನಿರ್ವಹಣೆಯ ಮೂಲಕ ಬದುಕಿಗೊಂದು ಹೊಸ ಸ್ಪರ್ಶ ನೀಡಿದರು.

ಕೇವಲ ಏಳನೇ ತರಗತಿ ವಿದ್ಯಾಭ್ಯಾಸ ಮಾಡಿದ್ದರೂ ವಿನೂತನ ಯೋಚನೆಗಳಿಗೇನೂ ಕೊರತೆ ಇಲ್ಲವಾಗಿತ್ತು. ಏನಾದರೊಂದು ಸ್ವ ಉದ್ಯೋಗವನ್ನು ಮಾಡಬೇಕು ಎಂದುಕೊಂಡಾಗ ಇವರಿಗೆ ಹೊಳೆದದ್ದು ಬಹಳ ವಿರಳವಾದ ಹಾಳೆತಟ್ಟೆ ತಯಾರಿಕಾ ಉದ್ಯಮ. ಇದನ್ನೇ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಮೈಲಿಗಲ್ಲನ್ನಾಗಿ ಆಯ್ದುಕೊಂಡು ಗಂಡ ಲೋಕೇಶ್ ಸಹಕಾರದೊಂದಿಗೆ ಕಾರ್ಯರೂಪಕ್ಕೆ ತಂದರು. ಮಂಡ್ಯದ ವಿವಿಧ ಹಾಳೆ ತಟ್ಟೆ ತಯಾರಿಕಾ ಘಟಕಗಳನ್ನು ಭೇಟಿಯಾಗಿ ಅವಶ್ಯವಿರುವ ಮಾಹಿತಿ ಪಡೆದುಕೊಂಡು, ಐದೂವರೆ, ಎಂಟು, ಹತ್ತು ಮತ್ತು ಹನ್ನೆರಡು ಇಂಚಿನ ಹಾಳೆತಟ್ಟೆಗಳನ್ನು ತಯಾರಿಸುವ ಉದ್ಯಮ ಆರಂಭಿಸಿದರು. ಮಂಡ್ಯದಲ್ಲಿ ಅಡಕೆ ಬೆಳೆ ಹೆಚ್ಚಿಲ್ಲ. ಹೀಗಾಗಿ, ಕಚ್ಚಾ ಸಾಮಾಗ್ರಿಯ ಕೊರತೆ ಸಾಮಾನ್ಯ. ಅಂಥ ಸಮಯದಲ್ಲಿ ಉದ್ಯಮವನ್ನು ಸ್ಥಗಿತಗೊಳಿಸದೇ ಪರ್ಯಾಯವಾಗಿ 4 ಮತು 10 ಇಂಚಿನ ಪೇಪರ್ ತಟ್ಟೆ ತಯಾರಿಸುವ ಘಟಕವನ್ನೂ ಸ್ಥಾಪಿಸಿಕೊಂಡು ಸೈ ಅನಿಸಿಕೊಂಡರು. ಸ್ವ ಉದ್ಯೋಗದಲ್ಲಿ ವೈವಿಧ್ಯತೆ ಕಾಯ್ದುಕೊಂಡಿದ್ದು, ಗ್ಯಾಸ್ ಮತ್ತು ವಿದ್ಯುತ್​ಚಾಲಿತ ಎರಡೂ ವಿಧದ ಹಾಳೆತಟ್ಟೆ ತಯಾರಿಕಾ ಯಂತ್ರಗಳನ್ನು ಅಳವಡಿಸಿಕೊಂಡಿರುವುದು ಇವರ ವಿಶೇಷ. ಉದ್ಯಮದ ಪ್ರಾರಂಭಕ್ಕಾಗಿ ವಿವಿಧ ಹಂತಗಳಲ್ಲಿ ಸಂಘ ಮತ್ತು ಕಾಪೋರೇಷನ್ ಬ್ಯಾಂಕಿನಲ್ಲಿ ಜೀವನೋಪಾಯ ಚಟುವಟಿಕೆಗಾಗಿ ಸುಮಾರು ರೂ.80,000 ಮೊತ್ತದ ಆರ್ಥಿಕ ಸಹಕಾರ ಪಡೆದುಕೊಂಡಿದ್ದಾರೆ. ಈ ಮೊತ್ತವನ್ನು ಸಮರ್ಪಕವಾಗಿ ಬಳಸಿಕೊಂಡು ಉದ್ಯಮಕ್ಕೆ ವಿನಿಯೋಗಿಸಿ ಈಗ ವಾರದ ಕಂತುಗಳಲ್ಲಿ ಮರುಪಾವತಿ ಮಾಡುತ್ತಿದ್ದಾರೆ.

ಪತಿ ಲೋಕೇಶ್ ಉದ್ಯೋಗದಿಂದ ಹಿಂದೆ ತಿಂಗಳಿಗೆ ಸುಮಾರು ರೂ.5000 ಆದಾಯ ಗಳಿಸುತ್ತಿದ್ದರೆ ಇಂದು ಹಾಳೆತಟ್ಟೆ ಮತ್ತು ಪೇಪರ್ ತಟ್ಟೆ ತಯಾರಿಕೆ ಉದ್ಯಮದಿಂದ ಪ್ರತಿ ತಿಂಗಳು ರೂ.20,000 ಆದಾಯ ಗಳಿಸುವ ಮೂಲಕ ಇತರ ಮಹಿಳೆಯರಿಗೆ ಮಾದರಿಯಾಗಿ ಗೋಚರಿಸುತ್ತಾರೆ.

ಉದ್ಯಮಕ್ಕೆ ಅಗತ್ಯವಿರುವ ಹಾಳೆಯನ್ನು ಸ್ಥಳೀಯರು ಮತ್ತು ಹೊರ ತಾಲೂಕಿನ ಅಡಕೆ ಬೆಳೆಗಾರರಿಂದ ಹಾಳೆಯೊಂದಕ್ಕೆ 1ರೂ.ನಂತೆ ಕೊಟ್ಟು ಖರೀದಿಸುತ್ತಿದ್ದಾರೆ. ಈ ಮೂಲಕ ಕೃಷಿಯ ಇತರ ಉತ್ಪನ್ನಗಳಿಗೂ ಮಾರುಕಟ್ಟೆ ಒದಗಿಸುವ ಕೆಲಸ ಮಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. ತಟ್ಟೆ ತಯಾರಿಸುವಲ್ಲಿ ಸುಮಾರು 30 ಪೈಸೆಯಷ್ಟು ವಿದ್ಯುತ್ ಮತ್ತು ಗ್ಯಾಸ್​ಗೆ ವೆಚ್ಚ ತಗುಲುತ್ತಿದ್ದು, 30 ಪೈಸೆ ತಯಾರಕನ ಸಂಬಳವಾಗಿ ವ್ಯಯವಾಗುತ್ತಿದೆ. ಪ್ರತಿ ತಟ್ಟೆಗಳು ರೂ.2ಕ್ಕೆ ಮಾರುಕಟ್ಟೆಗೆ ಮಾರಾಟವಾಗುತ್ತಿದ್ದು, ಈ ಮೂಲಕ ತಟ್ಟೆಯೊಂದಕ್ಕೆ ಸುಮಾರು 40 ಪೈಸೆಯಷ್ಟು ಲಾಭ ಗಳಿಸುತ್ತಿದ್ದಾರೆ. ಸ್ಥಳೀಯ ಅಡಕೆ ಬೆಳೆಗಾರರಿಂದ ದೊಡ್ಡ ಗಾತ್ರದ ಅಡಕೆ ಹಾಳೆ ದೊರೆತಲ್ಲಿ ಅದರಿಂದ ಎರಡು ತಟ್ಟೆಗಳನ್ನು ತಯಾರಿಸಬಹುದಾಗಿದ್ದು, ಇದರಿಂದ ತಯಾರಕನಿಗೆ ಲಾಭ ಹೆಚ್ಚು ಎನ್ನುತ್ತಾರೆ. ಮಮತಾರ ಪ್ರತಿ ಹೆಜ್ಜೆಗೂ ಬೆನ್ನೆಲುಬಾಗಿ ನಿಂತಿರುವ ಪತಿ ಲೋಕೇಶ್ ಈಗ ತಮ್ಮ ಸೆಂಟ್ರಿಂಗ್ ಕೆಲಸಕ್ಕೆ ಗುಡ್​ಬೈ ಹೇಳಿ ಪೂರ್ಣಕಾಲಿಕವಾಗಿ ಉದ್ಯಮದಲ್ಲೇ ತೊಡಗಿಸಿಕೊಂಡಿದ್ದಾರೆ.

ಪೇಪರ್ ತಟ್ಟೆಗೂ ಬೇಡಿಕೆ

ಸ್ಥಳೀಯ ಮಾರುಕಟ್ಟೆಯಲ್ಲಿ ಹಾಳೆತಟ್ಟೆಗೆ ಬೇಡಿಕೆ ಇರುವಂತೆಯೇ ಪೇಪರ್ ತಟ್ಟೆಗಳಿಗೂ ಬೇಡಿಕೆ ಇರುವುದನ್ನು ಗಮನಿಸಿದ ಮಮತಾ ಲೋಕೇಶ್, ಬೇಡಿಕೆಗೆ ಅನುಗುಣವಾಗಿ ಬೆಂಗಳೂರಿನಿಂದ ಸೀರೆಯ ಪೇಪರ್ ಬಾಕ್ಸ್​ಗಳನ್ನು ತಂದು ಅದರಿಂದ ತಟ್ಟೆಗಳನ್ನು ತಯಾರಿಸಿ ಮಾರುಕಟ್ಟೆಗೆ ಪೂರೈಸುವ ಮೂಲಕ ಉದ್ಯಮದಲ್ಲಿ ವೈವಿಧ್ಯತೆ ಕಾಯ್ದುಕೊಂಡಿದ್ದಾರೆ. ಗುಣಮಟ್ಟದ ತಟ್ಟೆಗಳ ತಯಾರಿಗೆ ಹೆಚ್ಚಿನ ಪ್ರಾಶಸ್ಱ ನೀಡುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದ್ದು, ಸಮರ್ಪಕವಾಗಿ ಪೂರೈಸಲು ಸಾಧ್ಯವಾಗುತ್ತಿಲ್ಲವೆಂದು ಎನ್ನುತ್ತಾರೆ. ತಟ್ಟೆ ತಯಾರಿಯನ್ನು ಮನೆಯ ಒಂದು ಕೊಠಡಿಯಲ್ಲೇ ನಿರ್ವಹಿಸುತ್ತಿದ್ದು, ಇದಕ್ಕಾಗಿ ಅತ್ತೆ, ಮಾವ, ಗಂಡನ ಸಹಕಾರದೊಂದಿಗೆ ಹೊರಗಿನ ಆಳುಗಳ ಸಹಕಾರವಿಲ್ಲದೆ ತಾವೇ ನಿರ್ವಹಿಸುವ ಮೂಲಕ ಆರ್ಥಿಕ ಬಲವರ್ಧನೆ ಮಾಡಿಕೊಂಡಿದ್ದಾರೆ. ಇವರ ಸಹಕಾರದೊಂದಿಗೆ ನಿತ್ಯ ಸುಮಾರು 600 ರಿಂದ 800 ತಟ್ಟೆಗಳನ್ನು ವಿದ್ಯುತ್ ಲಭ್ಯತೆಗನುಗುಣವಾಗಿ ತಯಾರಿಸುತ್ತಾರೆ. ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಪೂರ್ವ ಚಟುವಟಿಕೆಗಳಾದ ಹಾಳೆಯನ್ನು ಸ್ವಚ್ಛಗೊಳಿಸುವಿಕೆ, ನೀರಿನಲ್ಲಿ ನೆನೆಸುವಿಕೆ ಇತ್ಯಾದಿ ಕೆಲಸಗಳನ್ನು ನಿರ್ವಹಿಸುವ ಮೂಲಕ ಸಮಯದ ನಿರ್ವಹಣೆಗೂ ಆದ್ಯತೆ ನೀಡಿದ್ದಾರೆ. ಇಷ್ಟಕ್ಕೆ ತೃಪ್ತರಾಗದ ಮಮತಾ, ಮನೆಯ ಪಕ್ಕದಲ್ಲೇ ಎರಡು ಎಚ್.ಎಫ್ ತಳಿಯ ಹಸುಗಳನ್ನು ಸಾಕುತ್ತ ಹೈನುಗಾರಿಕೆಯನ್ನೂ ಮಾಡುತ್ತಿದ್ದಾರೆ. ನಿತ್ಯ ಬೆಳಗ್ಗೆ ಮತ್ತು ಸಂಜೆ 5 ಲೀಟರ್ ಹಾಲನ್ನು ಡೈರಿಗೆ ಹಾಕುತ್ತ ತಿಂಗಳಿಗೆ ಸುಮಾರು ರೂ.3,000ರಿಂದ ರೂ.4,000 ಆದಾಯ ಗಳಿಸುತ್ತಿದ್ದಾರೆ. ಸ್ಥಳೀಯ ಬ್ಯಾಂಕ್ ಸಹಕಾರದೊಂದಿಗೆ ಹೊಸದಾಗಿ ಟಾಟಾ ಏಸ್ ಗೂಡ್ಸ್ ವಾಹನವನ್ನೂ ಖರೀದಿಸಿದ್ದಾರೆ. ಪ್ರಾರಂಭದಲ್ಲಿ ರೂ.80,000 ಸಾಲದೊಂದಿಗೆ ಪ್ರಾರಂಭಿಸಿದ ಹಾಳೆತಟ್ಟೆ ತಯಾರಿಕಾ ಉದ್ಯಮಕ್ಕೆ ಇಂದು ರೂ.1.20 ಲಕ್ಷ ಮೊತ್ತದ ಯಂತ್ರೋಪಕರಣಗಳನ್ನು ಖರೀದಿಸುವ, ವಾಹನವನ್ನೂ ಹೊಂದುವ ಸಾಮರ್ಥ್ಯ ಬಂದಿದೆ. ಈ ಮೂಲಕ ‘ನನ್ನಿಂದ ಆಗಲ್ಲ’ ಎಂದು ಕೈಕಟ್ಟಿ ಕುಳಿತ ಎಲ್ಲ ಮಹಿಳೆಯರಿಗೆ ಇವರು ಆದರ್ಶಪ್ರಾಯರಾಗಿ ಕಾಣುತ್ತಾರೆ.

Leave a Reply

Your email address will not be published. Required fields are marked *

Back To Top