Wednesday, 21st November 2018  

Vijayavani

ಕಬ್ಬು ಬೆಳೆಗಾರರ ಹೋರಾಟಕ್ಕೆ ಕೇಸರಿ ಬಲ - ರಾಜ್ಯಾದ್ಯಂತ ಇಂದು ಬಿಜೆಪಿ ಬೃಹತ್ ಪ್ರತಿಭಟನೆ        ಗದಗಿನ ಕದಡಿ ಬಳಿ ಒಡೆದ ಕಾಲುವೆ- ಜಮೀನುಗಳಿಗೆ ನುಗ್ಗಿದ ಅಪಾರ ನೀರು - ಅಧಿಕಾರಿಗಳ ವಿರುದ್ಧ ಆಕ್ರೋಶ        ದ್ರಾಕ್ಷಿ ತೋಟದಲ್ಲಿ ಕರೆಂಟೂ, ನೆಲದಲ್ಲೂ ಕರೆಂಟು - ಚಿಕ್ಕಬಳ್ಳಾಪುರದ ಪವರ್​ ಗ್ರಿಡ್ ಕಂಟಕ        ಮದ್ದೂರು ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ - ಒಬ್ಬ ಲ್ಯಾಬ್ ಟೆಕ್ನೀಷಿಯನ್ ಸ್ಥಿತಿ ಗಂಭೀರ-        ಸ್ಯಾಂಡಲ್​ವುಡ್​​ನಲ್ಲಿ ಮತ್ತೊಂದು ಗಟ್ಟಿಮೇಳ - ಡಿ.11, 12ರಂದು ಹಸೆಮಣೆ ಏರುತ್ತೆ ಐಂದ್ರಿತಾ, ದಿಗಂತ್ ಜೋಡಿ       
Breaking News

ಭತ್ತದ ನಾಡಿನಲ್ಲಿ ಸಾವಯವ ಸಂತ

Monday, 09.07.2018, 3:02 AM       No Comments

| ಜಿ. ಸತೀಶ ಹೊಕ್ರಾಣಿ

‘ಮಕ್ಕಳಿಗೆ ಆಸ್ತಿ ಮಾಡುವ ಅವಶ್ಯಕತೆಯಿಲ್ಲ. ಫಲವತ್ತಾದ ಭೂಮಿ ಬಿಟ್ಟು ಹೋದರೆ ಸಾಕು, ಅವರ ಬದುಕು ಹಸನಾಗುತ್ತದೆ.’ ಇದು, ಸಾವಯವ ಕೃಷಿಯಲ್ಲಿ ಕೈ ತುಂಬ ಆದಾಯದ ಜತೆಗೆ ನೆಮ್ಮದಿ ಕಂಡುಕೊಂಡ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ತಿರುಮಲಾಪುರದ 66ರ ಹರೆಯದ ಹಂಪಿ ಹನುಮಂತಯ್ಯನವರ ಆಶಯ.

ಆತ್ಮ ಯೋಜನೆಯ ಜಿಲ್ಲಾ ಸಮಿತಿ ಸದಸ್ಯರಾಗಿರುವ ಹನುಮಂತಯ್ಯ ಎಂಎಸ್ಸಿ ಪದವೀಧರರು. ಚನ್ನಪಟ್ಟಣ, ತದನಂತರ ನಾಗಮಂಗಲದಲ್ಲಿ ಅಧ್ಯಾಪಕರಾಗಿದ್ದಾಗ ಜಮೀನು, ಮನೆ ನೋಡಿಕೊಳ್ಳುವ ಜವಾಬ್ದಾರಿ ಇವರ ಹೆಗಲಿಗೆ ಬಿದ್ದಿತು. 1976ರಲ್ಲಿ ಊರಿಗೆ ಹಿಂದಿರುಗಿ 12 ಎಕರೆ ಜಮೀನಿನಲ್ಲಿ ಕೃಷಿ ಆರಂಭಿಸಿದರು. ಜತೆಗೆ, ಅಂದಿನ ಮಂಡಲ ಪಂಚಾಯಿತಿ ಪ್ರಧಾನ ಸದಸ್ಯರಾಗಿ, ಗಂಗಾವತಿ ಎಪಿಎಂಸಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಸುತ್ತಲಿನ ರೈತರು ಯಥೇಚ್ಛವಾಗಿ ರಸಗೊಬ್ಬರ, ಕೀಟನಾಶಕ ಬಳಸಿ ಭತ್ತ ಬೆಳೆಯುತ್ತಿದ್ದರೆ, ಹನುಮಂತಯ್ಯನವರು ಗುಲಾಬಿ, ರೇಷ್ಮೆ, ಬಾಳೆ, ಅರಿಷಿಣ, ಮಾವು ಬೆಳೆಯುತ್ತಿದ್ದರು. 1989ರಲ್ಲಿ ಸಾವಯವದ ಮಹತ್ವ ತಿಳಿದ ನಂತರ ಸೂಕ್ತ ಅಧ್ಯಯನ ಕೈಗೊಂಡು, ಮೊದಲಿನ ಬೆಳೆಗೆ ಗುಡ್​ಬೈ ಹೇಳಿದರು. ಕೋತಿಗಳ ಉಪಟಳ ತಾಳಲಾರದೆ, 4 ಎಕರೆ ಜಮೀನಿನಲ್ಲಿ ಇದ್ದ ಮಾವಿನ ಗಿಡಗಳನ್ನು ಗುತ್ತಿಗೆ ನೀಡಿದ್ದಾರೆ. ಉಳಿದ 8 ಎಕರೆ ಜಮೀನಿನಲ್ಲಿ ಸಾವಯವ ಕೃಷಿಗೆ ನಾಂದಿ ಹಾಡಿದ್ದಾರೆ. ದೇಸಿ ರತನ್​ಸಾಗರ್, ರಾಜಮುಡಿ, ನವರ, ಸೆಲಂಸಣ್ಣ, ಕರಿಗಂಜವಲ್ಲಿ, ಕಣದತುಂಬ, ಬರ್ವಬ್ಲ್ಯಾಕ್, ಬಾಸುಮತಿ ಭತ್ತದ ತಳಿ ಬೆಳೆಯುತ್ತಿದ್ದಾರೆ. 4-5 ತಿಂಗಳ ಅಂತರದಲ್ಲಿ ಬೆಳೆ ಕೈ ಸೇರುತ್ತಿದ್ದು, ಖರ್ಚು ವೆಚ್ಚ ಸರಿದೂಗಿಸಿ 30-35 ಸಾವಿರ ರೂ.ಲಾಭ ಪಡೆಯುತ್ತಿದ್ದಾರೆ.

ಕೃಷಿ ಮನೆಯಲ್ಲಿ ಸಾವಯವ ಪಾಠ

ಹುಲಿಗಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಜಮೀನಿನಲ್ಲಿ ಅಮೃತ ಸಾವಯವ ಕೃಷಿ ಉತ್ಪನ್ನಗಳ ವಿನಿಮಯ ಕೇಂದ್ರ (ಕೃಷಿ ಮನೆ)ಸ್ಥಾಪಿಸಿರುವ ಹನುಮಂತಯ್ಯ ಕೆಲ ಉತ್ಪನ್ನಗಳನ್ನು ಮಾರಾಟಕ್ಕೂ ಇಟ್ಟಿದ್ದಾರೆ. ಜತೆಗೆ, ಜಮೀನಿಗೆ ಆಗಮಿಸುವ ರೈತರಿಗೆ ಸಾವಯವ ಕೃಷಿ ಕುರಿತು ಮನವರಿಕೆ ಮಾಡಿಕೊಡುತ್ತಿದ್ದಾರೆ. ಜಾಗೃತಿ ಕೊರತೆಯಿಂದ ಈ ಭಾಗದಲ್ಲಿ ಸಾವಯವ ಉತ್ಪನ್ನ ಖರೀದಿಗೆ ಜನರು ಮುಂದಾಗದೆ ಇರುವುದರಿಂದ ಬೆಂಗಳೂರಿನ ಗ್ರಾಹಕರನ್ನು ನೆಚ್ಚಿದ್ದಾರೆ. ಇಂಜಿನಿಯರ್, ಡಾಕ್ಟರ್ ಹೀಗೆ ವಿವಿಧ ಸ್ತರದ ಜನರು ಇವರಿಗೆ ಕರೆ ಮಾಡಿ ಉತ್ಪನ್ನಗಳನ್ನು ಬುಕ್ ಮಾಡುತ್ತಾರೆ. ಅವರ ಬೇಡಿಕೆಯಂತೆ ಕೃಷಿ ಉತ್ಪನ್ನಗಳನ್ನು ಪೂರೈಸುತ್ತಾರೆ.

ಏಕಕಾಲಕ್ಕೆ ಗೊಬ್ಬರ ನೀರು ಪೂರೈಕೆ

ಸುತ್ತಲಿನ ಜಮೀನುಗಳಲ್ಲಿ ಭತ್ತಕ್ಕೆ ಬಳಕೆಯಾಗಿ ನದಿ ಸೇರುತ್ತಿದ್ದ ನೀರನ್ನು ಹನುಮಂತಯ್ಯನವರು ತಮ್ಮ ಜಮೀನಿನಲ್ಲಿ ಇರುವ 70*30 ಅಳತೆಯ ಕೃಷಿ ಹೊಂಡಕ್ಕೆ ಹರಿಸುತ್ತಾರೆ. 30ಕ್ಕೂ ಹೆಚ್ಚು ಇರುವ ಕಾಂಕ್ರೀಜ್, ಓಂಗೋಲ್ ಸೇರಿ ವಿವಿಧ ದೇಸಿ ತಳಿಯ ಹಸುಗಳ ಸೆಗಣಿ ಮತ್ತು ತೋಟದ ಕಸದಿಂದ ಸಾವಯವ ಗೊಬ್ಬರ ತಯಾರಿಸುತ್ತಾರೆ. 10ಕ್ಕೂ ಹೆಚ್ಚು ಇರುವ ಎರೆಹುಳು ತೊಟ್ಟಿಗಳು ಭೂಮಿಯ ಫಲವತ್ತತೆಯನ್ನು ದ್ವಿಗುಣಗೊಳಿಸಿವೆ. ಸುಮಾರು 1 ಕಿಮೀ ಅಂತರದಲ್ಲಿ ಇರುವ ಕೃಷಿ ಹೊಂಡ, ಆಕಳುಗಳ ದೊಡ್ಡಿಯಿಂದ ಪೈಪ್​ಲೈನ್ ಮೂಲಕ ಏಕಕಾಲಕ್ಕೆ ಬೆಳೆಗೆ ನೀರು, ಗೊಬ್ಬರ ಪೂರೈಸಲಾಗುತ್ತಿದೆ. ಜತೆಗೆ ಗೊಬರ್ ಗ್ಯಾಸ್ ಆಗಿ ಬಳಸಲಾಗುತ್ತಿದೆ. ಇದರೊಂದಿಗೆ, ಮನೆಯ ಮುಂದಿರುವ ಸ್ವಲ್ಪ ಜಾಗದಲ್ಲಿಯೇ ತರಹೇವಾರಿ ಸೊಪ್ಪು, ತರಕಾರಿ ಬೆಳೆದಿರುವ ಇವರು ಖರ್ಚಿಗೆ ಕಡಿವಾಣ ಹಾಕಿದ್ದಾರೆ. ನೀರು ಎತ್ತಲು 3 ಮೋಟಾರ್​ಗಳಿವೆ. ಪ್ರಸಕ್ತ ವರ್ಷ 4 ಎಕರೆಯಲ್ಲಿ ನಿಂಬೆ ಸಸಿಗಳನ್ನು ನೆಡಲು ತಯಾರಿ ನಡೆಸಿರುವ ಹನುಮಂತಯ್ಯ ಅವರಿಗೆ ಕದಂಬ ಪ್ರಶಸ್ತಿ, ಶ್ರೇಷ್ಠ ಸಾವಯವ ಕೃಷಿಕ, ವರ್ಷದ ಶ್ರೇಷ್ಠ ಕೃಷಿಕ ಹೀಗೆ ಹತ್ತಾರು ಪ್ರಶಸ್ತಿಗಳು ಸಂದಿವೆ. ಮಾಹಿತಿಗೆ-9448632383.

ಅತಿಯಾದ ರಸಗೊಬ್ಬರ, ನೀರು ಬಳಕೆಯಿಂದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಜಮೀನುಗಳು ಹಾಳಾಗಿವೆ. ಇನ್ನಾದರೂ ರೈತರು ಎಚ್ಚೆತ್ತು ಪರ್ಯಾಯ, ಸಾವಯವ ಬೆಳೆ ಬೆಳೆಯಬೇಕು. ಇಲ್ಲವಾದರೆ, ಕೆಲ ವರ್ಷಗಳಲ್ಲಿಯೇ ಜಮೀನುಗಳು ಬಂಜರು ಆಗಲಿವೆ. ಸರ್ಕಾರ ಖರೀದಿದಾರರ ಹಿತ ಕಾಯುವುದರಿಂದ ರೈತರು ಸರ್ಕಾರದ ಮೇಲೆ ಭರವಸೆ ಇಡಬಾರದು. ಮಹಾರಾಷ್ಟ್ರ ಮಾದರಿಯಲ್ಲಿ ರೈತರು ಸಹಕಾರ ತತ್ವ ಅಳವಡಿಸಿಕೊಳ್ಳಬೇಕು. ಒಂದೇ ಬೆಳೆಗೆ ಎಲ್ಲರೂ ಜೋತು ಬೀಳದೆ, ಬೇರೆ ಬೇರೆ ಬೆಳೆ ಬೆಳೆದು, ಆರ್ಥಿಕವಾಗಿ ಸದೃಢರಾಗಬೇಕು.

| ಹಂಪಿ ಹನುಮಂತಯ್ಯ, ಸಾವಯವ ಕೃಷಿಕ, ತಿರುಮಲಾಪುರ

Leave a Reply

Your email address will not be published. Required fields are marked *

Back To Top