Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಎಲ್ಲೆಡೆ ಬೆಳೆಯುವ ಬಾರೆ

Monday, 09.07.2018, 3:02 AM       No Comments

# Apple ber ಕುರಿತು ಮಾಹಿತಿ ನೀಡುತ್ತೀರಾ? ಕೃಷಿ ವಿಧಾನ ಹೇಗೆ?

| ಪ್ರದೀಪ್ ಚಿಕ್ಕಮಗಳೂರು

ಉಷ್ಣವಲಯ ಮತ್ತು ಸಮಶೀತೋಷ್ಣ ವಲಯಗಳು ಬಾರೆ ಹಣ್ಣಿನ ಬೇಸಾಯಕ್ಕೆ ಹೇಳಿ ಮಾಡಿಸಿದಂತೆ ಇವೆ. ನಮ್ಮ ದೇಶವೊಂದರಲ್ಲೇ ಈ ಹಣ್ಣಿನ 40 ಪ್ರಭೇದಗಳಿವೆ. 125 ತಳಿಗಳಿವೆ. ಸುಮಾರು 20 ಪ್ರಭೇದಗಳಲ್ಲಿ ಹಣ್ಣು ಚಿಕ್ಕದಾಗಿದ್ದು, ಬೀಜವೇ ದೊಡ್ಡದಾಗಿರುತ್ತದೆ. ತಿರುಳು ಲೋಳೆ. ಅಡ್ಡ ವಾಸನೆ. ಹೀಗಾಗಿ ಅವುಗಳನ್ನು ಯಾರೂ ತಿನ್ನುವುದಿಲ್ಲ. ಜಿಜಿಪಸ್ ಮಾರೀಟಿಯಾನವು ನಾವು ಸಾಮಾನ್ಯವಾಗಿ ತಿನ್ನುವ ಚಿಕ್ಕದಾದ ಬಾರೆ ಹಣ್ಣು. ಇದನ್ನೇ ಅಭಿವೃದ್ಧಿಪಡಿಸಿ ದೊಡ್ಡ ಬಾರೆ ಹಣ್ಣಾಗಿ ಮಾಡಲಾಯಿತು.

ಕರ್ನಾಟಕದಲ್ಲಿ ಯಾವುದೇ ಪ್ರದೇಶದಲ್ಲೂ ಬಾರೆ ಹಣ್ಣನ್ನು ಬೆಳೆಯಬಹುದು. ಕರಾವಳಿಯಿಂದ ಅಪ್ಪಟ ಬಯಲುಸೀಮೆಯಾದ ಗುಲ್ಬರ್ಗ ಮತ್ತು ಬಳ್ಳಾರಿಗಳಲ್ಲೂ, ಇತ್ತ ಕೋಲಾರದಲ್ಲೂ ಬಾರೆಯನ್ನು ಸುಲಭವಾಗಿ ಬೆಳೆಯಬಹುದು. ಬರದ ಕರಲು ಮಣ್ಣಾಗಿರಲಿ, ಜೌಗಿನ ಹುಳಿ ಮಣ್ಣಾಗಿರಲಿ, ಉಪ್ಪು ಮಣ್ಣಾಗಿರಲಿ, ಸವಳು ಹೊಲವಾಗಿರಲಿ…ಎಲ್ಲ ರೀತಿಯ ಮಣ್ಣಿನಲ್ಲೂ ಬೆಳೆಯುತ್ತದೆ. ಅರ್ಥಾತ್ ಲವಣಾಂಶಗಳನ್ನು ಎದುರಿಸುವ ಅಥವಾ ನಿರೋಧಕ ಗುಣ ಹೊಂದಿದೆ. ಇದಕ್ಕೆ ಶುಷ್ಕ ಮತ್ತು ಅರೆಶುಷ್ಕ ಹವಾಗುಣ ಇಷ್ಟ. ಇಂತಹ ವಾತಾವರಣದಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಪಡೆಯಬಹುದು. ಹಾಗೆಯೇ ಮರಳು ಮಿಶ್ರಿತ ಗೋಡು ಮಣ್ಣಿನಲ್ಲಿ ಗಿಡಗಳು ಚೆನ್ನಾಗಿ ಬೆಳೆಯುತ್ತವೆ.

ಬಾರೆಯೊಂದು ಕಾಡು ಬೆಳೆ. ಬೇಸಿಗೆಯಲ್ಲಿ ಎಲೆಗಳನ್ನು ಉದುರಿಸುತ್ತವೆ. ಮುಂಗಾರಿಗೂ ಮೊದಲೇ ಚಿಗುರುತ್ತವೆ. ಆಮೇಲೆ ಕಾಯಿಗಳನ್ನು ಬಿಡತೊಡಗುತ್ತವೆ. ಹಣ್ಣಾಗುವ ಸಮಯದಲ್ಲಿ ತೇವಾಂಶ ಮತ್ತು ಅಧಿಕ ಉಷ್ಣಾಂಶ ಎರಡೂ ಬೇಕು. ಅದಿಲ್ಲದ ಸ್ಥಳಗಳಲ್ಲಿ ಫಸಲು ಕಡಿಮೆಯಾಗಿರುತ್ತದೆ. ಇದು ಎಲ್ಲ ಜಾತಿಯ ಬಾರೆಗೂ ಅನ್ವಯ.

ಭಾರತದಲ್ಲಿ ಅಭಿವೃದ್ಧಿಪಡಿಸಲಾದ ತಳಿಗಳು ಉಮ್ರಾನ್, ಕಡಕ್, ಗೋಲಾ, ಸಿಯೋ, ಇಲಾಚಿ, ಸನೂರ್ -1, ಸನೂರ್ -2, ಸನೂರ್ -5 ಹೀಗೆ ಹತ್ತಕ್ಕೂ ಹೆಚ್ಚು ತಳಿಗಳಿವೆ. ಈಗ ನೀವು ಬಯಸುತ್ತಿರುವ ಆಪಲ್​ಬಾರೆಯನ್ನು ಅಭಿವೃದ್ಧಿಪಡಿಸಿದ್ದು ಥಾಯ್ಲೆಂಡ್​ನಲ್ಲಿ. ಆದರೆ, ಕಡಕ್ ಬಾರೆ ತಳಿಯನ್ನು ವಿಜಯಪುರದ ಬಳಿಯ ತಿಡಗುಂದಿ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಇದು ಆಪಲ್​ಬಾರೆಗಿಂತಲೂ ಚಿಕ್ಕದು, ಸಿಹಿ ಅಧಿಕ. ಈಗಾಗಲೇ ಸುಮಾರು 200 ಎಕರೆಗಳಲ್ಲಿ ಬೆಳೆಯುತ್ತಿದ್ದಾರೆ ಎನ್ನುವ ಮಾಹಿತಿ ಅಲ್ಲಿಯ ಪ್ರೊಫೆಸರ್ ಡಾ. ರವೀಂದ್ರ ಜವಡಗಿಯವರದು (ಸಂಜೆ ಏಳರಿಂದ ಎಂಟರೊಳಗೆ ಸಂರ್ಪಸಿ; 9480696390). ಇದಲ್ಲದೆ ಅಲ್ಲಿ ಇನ್ನೂ ಎಂಟು ಪ್ರಭೇದಗಳ ಸಸ್ಯಗಳೂ ಸಿಗುತ್ತವೆ. ಕಲಾದಗಿಯ ಸೌದಾಗರ್ ಅವರೂ (9880826181) ಎರಡು ವರ್ಷಗಳ ಹಿಂದೆಯೇ ಆಪಲ್ ಬಾರೆಯ ಸಸಿಗಳನ್ನು ತರಿಸಿದರು.

ಬಾರೆಯ ಬೀಜ ಗಟ್ಟಿ. ಬೀಜೋಪಚಾರವಾಗದ ವಿನಾ ಸಸಿಗಳು ಮೊಳಕೆಯೊಡೆಯುವುದಿಲ್ಲ. ಬಾರೆ ಹಣ್ಣುಗಳನ್ನು ತಿನ್ನುವ ಮೊಲಗಳು, ಅಳಿಲುಗಳು, ಜಿಂಕೆಗಳ ಹೊಟ್ಟೆಗಳಲ್ಲಿ ಸೂಕ್ತ ಬೀಜೋಪಚಾರವಾಗುತ್ತದೆ! ಅವುಗಳಿಂದ ಹೊರಬಿದ್ದ ಬೀಜಗಳು ಮಾತ್ರ ಮೊಳಕೆಯೊಡೆಯುತ್ತವೆ. ಕೃತಕವಾಗಿ ಬೆಳೆಸುವವರು ಬಿತ್ತನೆಗೆ ಮೊದಲು 500 ಪಿಪಿಎಂ ಸಾಂದ್ರತೆಯ ಜಿಬ್ಬರ್​ಲಿಕ್ ಆಮ್ಲದಲ್ಲಿ ಉಪಚರಿಸಿ ಬಿತ್ತುತ್ತಾರೆ. ಎರಡು ಸೆಂಟಿಮೀಟರ್ ಆಳದಲ್ಲಿ ಬಿತ್ತಬೇಕು. ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳು ಬಿತ್ತನೆಗೆ ಸೂಕ್ತ. ಆಗ ಬಿತ್ತಿದ ಬೀಜಗಳು ಜೂನ್ ಅಥವಾ ಜುಲೈ ವೇಳೆಗೆ ಕಸಿಗೆ ಯೋಗ್ಯವಾಗುತ್ತವೆ. ಇವು ಬೇರು ಸಸಿಗಳು. ಮುಂದಿನ ಒಂದು ವರ್ಷಗಳ ಕಾಲ ಈ ಸಸಿಗಳನ್ನು ಕಸಿ ಮಾಡಲು ಬಳಸಬಹುದು.

‘ಟಿ’ ಆಕಾರದಲ್ಲಿ ಕಣ್ಣು ಕಸಿಮಾಡುವುದು. ಸೈಕಲ್ ಪ್ಯಾಚ್ ರೀತಿಯಲ್ಲಿ ಕಣ್ಣು ಕಸಿಮಾಡುವುದು. ಉಂಗುರಾಕಾರದಲ್ಲಿ ಕಣ್ಣು ಕಸಿಮಾಡುವುದು. ಕೊಳಲು ವಿಧಾನದಲ್ಲಿಯೂ ಕಣ್ಣು ಕಸಿಮಾಡಬಹುದಾಗಿದೆ. ಇದರ ಸಫಲತೆ ಮಾತ್ರ ಕಸಿ ಮಾಡುವವರ ಸಾಮರ್ಥ್ಯ, ಹವಾಗುಣ, ಕಾಲ, ವಿಧಾನ ಇತ್ಯಾದಿ ಅಂಶಗಳನ್ನು ಅವಲಂಬಿಸಿದೆ.

ನಾಟಿ ಮಾಡುವ ಕ್ರಮ: ಮಣ್ಣನ್ನು ಹಗುರಗೊಳಿಸಲು ಕಲ್ಟಿವೇಟರ್ ಬೇಸಾಯ ಮಾಡಿರಬೇಕು. 2 ಗಿ 2 ಗಿ 2 ಅಡಿಗಳ ಉದ್ದ, ಅಗಲ ಮತ್ತು ಆಳದ ಗುಂಡಿಗಳನ್ನು ನಾಟಿ ಮಾಡುವ ಒಂದು ತಿಂಗಳು ಮೊದಲೇ ತೆಗೆದಿರಬೇಕು. ಮೇ ತಿಂಗಳಿನಲ್ಲಿ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಗುಂಡಿ ತೆಗೆದರೆ ಸಾಕು. ಕಣಗಿಲೆ ಸೊಪ್ಪು, ದಾಲ್ಚಿನ್ನಿ ಸೊಪ್ಪು, ಮಸೆ ಸೊಪ್ಪನ್ನು ಒಂದು ಹೊರೆಯಷ್ಟು ತುಂಬಿದರೂ ಆದೀತು. ಆಮೇಲೆ ಗುಂಡಿ ತೆಗೆದ ಮಣ್ಣಿಗೆ ಸುಮಾರು 15 ಕಿಲೋಗ್ರಾಂ ಕೊಟ್ಟಿಗೆ ಗೊಬ್ಬರವನ್ನು ಮಿಶ್ರಣ ಮಾಡಿ ತುಂಬಬೇಕು. ಮೊದಲ ಮಳೆ ಬೀಳುವ ಮೊದಲು ಅಥವಾ ತೀವ್ರ ಚಳಿಗಾಲ ಮುಗಿಯುತ್ತಿದ್ದಂತೆ ಸಸಿಗಳನ್ನು ನಾಟಿ ಮಾಡಬೇಕು. ಸಸಿಗಳಲ್ಲಿ ಕನಿಷ್ಠ ಆರು ಎಲೆಗಳಾದರೂ ಬಂದಿರಬೇಕು. ನಾಟಿ ಮಾಡಿದ ತಕ್ಷಣ ನೀರು ಹಾಯಿಸಬೇಕು. ಆಗಾಗ ನೀರು ನೀಡುವುದು ಅಗತ್ಯ. ಅಕ್ಕಿನೇನಿ ಶ್ರೀಕಾಂತ್ ಅವರು ಸಸಿಗಳ ನಾಟಿ ಅಂತರ 1 0ಗಿ 6 ಅಡಿಗಳನ್ನು ಇಟ್ಟಿದ್ದಾರಂತೆ. ಚಿಕ್ಕೋಡಿ ತಾಲೂಕಿನ ಸವಸುದ್ದಿಯ ಮಹಾದೇವ 14 ಗಿ 10 ಅಡಿಗಳ ಅಂತರ ಇಟ್ಟಿದ್ದೇನೆಂದು ತಿಳಿಸಿದ್ದಾರೆ (9535623232). ಪ್ರತಿಯೊಬ್ಬರೂ ತಮ್ಮದೇ ಆದ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ವಾಸ್ತವದಲ್ಲಿ ಅಂತರ ಇಡುವ ಕ್ರಮವು ಮಣ್ಣಿನ ವಿಧ, ತಳಿ, ಹವಾಗುಣ ಮತ್ತು ಸವರುವಿಕೆಗಳನ್ನು ಅವಲಂಬಿಸಿರುತ್ತದೆ. ಅಕ್ಕಿನೇನಿ ಶ್ರೀಕಾಂತ್ 10 ಎಕರೆಗೆ 6000 ಗಿಡಗಳನ್ನು ಹಚ್ಚಿದ್ದಾರೆ. ಸವಸುದ್ದಿಯ ಮಹಾದೇವ ಅವರು ಎರಡು ಎಕರೆಯಲ್ಲಿ 620 ಗಿಡಗಳನ್ನು ನೆಟ್ಟಿದ್ದಾರೆ.

(ಮುಂದಿನ ವಾರಕ್ಕೆ ಇನ್ನಷು ಮಾಹಿತಿ ಮುಂದುವರಿಯಲಿದೆ….)

Leave a Reply

Your email address will not be published. Required fields are marked *

Back To Top