Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಕಾಫಿ ಕಸಿಯ ಕುಶಲಗಾತಿ

Monday, 09.07.2018, 3:03 AM       No Comments

ಹಲವರು ಕೃಷಿ ಕಾಯಕದಿಂದ ವಿಮುಖರಾಗುತ್ತಿರುವ ವೇಳೆಯಲ್ಲೇ ಕಾಫಿ ಗಿಡಕ್ಕೆ ಕಸಿ ಕಟ್ಟುವಲ್ಲಿ ನಿಷ್ಣಾತರಾಗಿರುವ ಹಾಸನ ಜಿಲ್ಲೆ ಸಕಲೇಶಪುರ ಬಳಿಯ ಇಬ್ಬಡಿ ಗ್ರಾಮದ ಗೀತಾ ಅವರಂತಹವರು ಹೊಸ ಭರವಸೆ ಮೂಡಿಸುತ್ತಾರೆ. ಕ್ರಮಬದ್ಧ ಕೃಷಿಯ ಬಗೆಗಿನ ಅವರ ಅನುಭವದ ಮಾತುಗಳನ್ನು ಕೇಳಿಯೇ ತಿಳಿಯಬೇಕು.

| ಪೂರ್ಣಿಮಾ ಕಾನಹಳ್ಳಿ

‘ನೆತ್ತಿ ಚೆನ್ನಾಗಿ ಬಿಡಿಸಬೇಕು, ಹಾಗೇ ತಾಯಿ ರೆಕ್ಕೆಗೆ ಪೆಟ್ಟಾಗಬಾರದು, ನೂಲು ರೆಕ್ಕೆ ಸೋತ ರೆಕ್ಕೆಗಳನ್ನು ಹೀಗೆ ತೆಗೆಯಬೇಕು… ಎಂದು ಹೇಳುತ್ತಲೇ ಚಕಚಕನೆ ಒಂದು ಕಾಫಿ ಗಿಡ ಮುಗಿಸಿ ಮತ್ತೊಂದನ್ನು ಕಸಿ ಮಾಡುತ್ತಿದ್ದ ಗೀತಾ ಅವರ ಕೌಶಲ ಕಂಡು ಕಲಿಯಲು ಬಂದ ಆ ಮಹಿಳಾ ಬೆಳೆಗಾರರೆಲ್ಲ ಬೆರಗಾಗಿದ್ದರು.

ಸಕಲೇಶಪುರದ ಬಳಿ ಇರುವ ಇಬ್ಬಡಿ ಗ್ರಾಮದ ಮಹಾಗಂಗಾ ಎಸ್ಟೇಟ್​ನ ಒಡತಿ ಗೀತಾ. ತೋಟವನ್ನು ವೀಕ್ಷಿಸಲು ಬರುವ ಕಾಫಿ ಬೆಳೆಗಾರರಿಗೆ ಮಾರ್ಗದರ್ಶನ ಮಾಡುವ ಇವರು, ಕಸಿ ಕಟ್ಟುವುದರಲ್ಲಿ ಈ ಭಾಗದಲ್ಲೇ ಖ್ಯಾತಿ ಪಡೆದಿದ್ದಾರೆ. ‘ಗಿಡದ ನೆತ್ತಿ ಚೆನ್ನಾಗಿ ಬಿಡಿಸಿದರೆ ಸೂರ್ಯನ ಬೆಳಕು ಮತ್ತು ಗಾಳಿ ಗಿಡದ ಒಳಭಾಗಕ್ಕೂ ಚೆನ್ನಾಗಿ ಬೀಳುತ್ತದೆ. ಆಗ ಶಿಲೀಂಧ್ರ ರೋಗ ತಗಲುವ ಭೀತಿಯಿಲ್ಲ. ಕಸಿ ಮಾಡುವಾಗ ಗೊಡ್ಡು ರೆಕ್ಕೆ, ಬಳಲಿದ ರೋಗಪೀಡಿತ ಅಡ್ಡಡ್ಡಲಾಗಿ ಬೆಳೆದ ರೆೆಕ್ಕೆಗಳು ಮತ್ತು ನೂಲು ರೆಕ್ಕೆಗಳನ್ನು ತೆಗೆಯಬೇಕು…ಹೀಗೆ ಈ ಅನುಭವಿ ಕೃಷಿ ಮಹಿಳೆ ವಿವರಿಸುತ್ತಲೇ ಇದ್ದರು.

ಕಾಫಿ ಗಿಡಗಳಲ್ಲಿ ಉತ್ತಮ ಫಸಲು ಪಡೆಯಬೇಕಾದರೆ ಅವುಗಳ ಬೆಳವಣಿಗೆಯನ್ನು ಕಸಿ ವಿಧಾನದಿಂದ ನಿಯಂತ್ರಿಸಿ ಕ್ರಮಬದ್ಧವಾಗಿ ಬೆಳೆಸುವುದು ಅವಶ್ಯಕ. ಇಲ್ಲಿ ಕಸಿ ಎಂದರೆ ಗಿಡವನ್ನು ನಿರ್ಧರಿತ ಹಂತದಲ್ಲಿ ಪರಿಮಿತಿಗೊಳಿಸುವುದರ ಮೂಲಕ ಗಿಡಗಳಿಗೆ ಒಳ್ಳೆಯ ಆಕಾರ ಮತ್ತು ಬಲಿಷ್ಠವಾದ ಚೌಕಟ್ಟು ದೊರಕಿಸುವುದು. ಇದರಿಂದ ಫಸಲು ನೀಡುವ ರೆಕ್ಕೆಗಳು ಹೆಚ್ಚಾಗುತ್ತವೆ.

ಕ್ರಮಬದ್ಧ ಕಸಿ ಮುಖ್ಯ

‘ಕ್ರಮಬದ್ಧವಾದ ಕಸಿಯಿಂದಾಗುವ ಲಾಭಗಳೆಂದರೆ, ಫಸಲಿನಲ್ಲಿ ಅಧಿಕವಾದ ಏರುಪೇರು ತಪ್ಪಿಸಬಹುದು. ಅನಗತ್ಯವಾದ ರೆಂಬೆಗಳನ್ನು ಕತ್ತರಿಸುವುದರಿಂದ ಉಳಿದ ರೆಂಬೆಗಳು ಸದೃಢವಾಗಿ ಬೆಳೆಯುತ್ತವೆ’ಎಂದು ಕಸಿ ಮಾಡುವಾಗ ಗಮನಿಸಬೇಕಾದ ಕೆಲ ಅಂಶಗಳನ್ನು ವಿವರಿಸುತ್ತಾರೆ. ಪ್ರತಿವರ್ಷವೂ ಕಟಾವು ಮುಗಿದ ನಂತರ ಚಿಕ್ಕ ಕಸಿ ಮಾಡುವುದು ಸೂಕ್ತ. ಶುಷ್ಕ ಹವೆಯಿದ್ದಾಗ ಚೆನ್ನಾಗಿ ಮಳೆ ಬಿದ್ದ ನಂತರವೇ ಕಸಿ ಮಾಡುವುದು ಒಳ್ಳೆಯದು. ತೀವ್ರವಾಗಿ ಬಳಲಿದ ಗಿಡಗಳನ್ನು ಸಾಕಷ್ಟು ಮಳೆ ಬಿದ್ದ ನಂತರ ಕಸಿ ಮಾಡಬೇಕು. ಜತೆಗೆ ಮಳೆ ಬಿದ್ದ ನಂತರ ಹೇರಳವಾದ ಹೊಸ ಚಿಗುರು ಉತ್ಪತ್ತಿಯಾಗುತ್ತವೆ. ಇವು ಜೂನ್ ಜುಲೈ ವೇಳೆಗೆ ಸಾಕಷ್ಟು ದೃಢವಾಗಿ ಬೆಳೆದಾಗ, ಅನಗತ್ಯವಾದ ಚಿಗುರುಗಳನ್ನು ಆಗಸ್ಟ್ ಒಳಗೆ ತೆಗೆದು ಹಾಕಬೇಕು. ಈ ರೀತಿ ಕೈಯಾಡಿಸುವಾಗ ಹೊಸ ಚಿಗುರುಗಳನ್ನು ಅಪೇಕ್ಷಿತ ಸಂಖ್ಯೆಯಲ್ಲಿರುವಂತೆ ಹಾಗೂ ಸಾಕಷ್ಟು ಅಂತರದಲ್ಲಿರುವಂತೆ ತೆಳುವು ಮಾಡಬೇಕು. ಈ ಸಂದರ್ಭದಲ್ಲಿ ಗಿಡದ ಮುಖ್ಯ ಕಾಂಡದಿಂದ 15 ಸೆಂ. ಮೀ ಸುತ್ತಳತೆಯಲ್ಲಿ ಮೂಡಿರುವ ಚಿಗುರುಗಳನ್ನು ತೆಗೆದುಹಾಕಿ ಗಿಡದ ನೆತ್ತಿ ಬಿಡಿಸಬೇಕು ಎಂದು ಕರಾರುವಕ್ಕಾಗಿ ನುರಿತ ವಿಜ್ಞಾನಿಯಂತೆ ಹೇಳುತ್ತಾರೆ. ‘ಪತಿ ಧರಣೇಶ್ ಪ್ರೋತ್ಸಾಹ ಮತ್ತು ಕಾಫಿ ಮಂಡಳಿ ಜತೆಗಿನ ನಿರಂತರ ಸಂಪರ್ಕದಿಂದ ಇವೆಲ್ಲ ಕಲಿಯಲು ಸಾಧ್ಯವಾಯಿತು’ ಎನ್ನುತ್ತಾರೆ. ಗೀತಾರ ಕಸಿ ಕಾಯಕ ನೋಡಲು ಹಲವಾರು ಜನ ಇವರ ತೋಟಕ್ಕೆ ಭೇಟಿ ನೀಡುತ್ತಾರೆ. ಇವರ ತೋಟದೊಳಕ್ಕೆ ಪ್ಲಾಸ್ಟಿಕ್​ಗೆ ಪ್ರವೇಶವಿಲ್ಲ. 18 ಎಕರೆ ತೋಟದಲ್ಲಿ ಕಳೆದ ಬಾರಿ ರೋಬಸ್ಟಾ ತಳಿ ಎಕರೆಗೆ 85 ಚೀಲದಷ್ಟು ದೊರಕಿತ್ತು. ಈ ಸಲ ಎಕರೆಗೆ 43 ಚೀಲದಷ್ಟು ಕಟಾವು ಮಾಡಿದ್ದಾರೆ. ಕಳೆದ ವರ್ಷ 10 ಎಕರೆಗೆ 10 ಟನ್ ಕಾಳುಮೆಣಸನ್ನು ಕೊಯ್ಲು ಮಾಡಿದ್ದಾರೆ. ಸಂಪರ್ಕಕ್ಕೆ 8971617170 (ಸಂಜೆ 7ರ ನಂತರ).

ಕುಶಲ ಕಾರ್ವಿುಕರ ಕೊರತೆ

ಇತ್ತೀಚಿನ ದಿನಗಳಲ್ಲಿ ಕಾಫಿ ಗಿಡಗಳಿಗೆ ಕಸಿ ಮಾಡುವ ಕುಶಲ ಕಾರ್ವಿುಕರು ವಿರಳವಾಗುತ್ತಿದ್ದಾರೆ. ಅಸ್ಸಾಂ ಮೂಲದ ಕಾರ್ವಿುಕರು ಕಾಫಿ ತೋಟಗಳಲ್ಲಿ ಕಳೆದ ಕೆಲ ವರ್ಷಗಳಿಂದ ಹೆಚ್ಚಾದಂತೆ, ಸ್ಥಳೀಯ ಕಾರ್ವಿುಕರು ಕಸಿ ಕೆಲಸಕ್ಕಾಗಿ ಅಧಿಕ ಸಂಬಳ ಕೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಅವರಿಗೂ ಕಸಿ ಮಾಡುವುದನ್ನು ಹೇಳಿ ಕೊಡಲಾಗುತ್ತಿದೆ. ಅನನುಭವಿಗಳಿದ್ದರೆ ಗಿಡಕ್ಕೆ ಹಾನಿಯೇ ಹೆಚ್ಚು. ಹಾಗಾಗಿ ಮಾಲೀಕರ ಉಪಸ್ಥಿತಿ ಇದ್ದಷ್ಟೂ ಒಳ್ಳೆಯದು. 10 ವರ್ಷದ ಹಿಂದೆ ಇವರ ಪತಿ ಧರಣೇಶ 11 ಗಂಟೆಗೆಲ್ಲ ತೋಟದಿಂದ ಬಂದರೆ ಮತ್ತೆ ಹೋಗುತ್ತಲೇ ಇರಲಿಲ್ಲ. ಇದನ್ನು ಗಮನಿಸಿದ ಗೀತಾ 11 ಗಂಟೆಯ ಒಳಗೆ ಕುಡಿಯಲು ಕಾಫಿಯೋ, ನೀರೋ ತೆಗೆದುಕೊಂಡು ಹೋಗಿ ಅವರ ಮನವೊಲಿಸಿ ತೋಟದಲ್ಲೇ ಉಳಿಯುವಂತೆ ಮಾಡಿದರು. ‘ಮೊದಲು ನಾವು ಸರಿಯಾಗಿ ಕೆಲಸ ಕಲಿತುಕೊಳ್ಳಬೇಕು. ಕಾರ್ವಿುಕರನ್ನು ದೂರಬಾರದು’ ಎನ್ನುವ ಗೀತಾ ಪ್ರತಿನಿತ್ಯ ಹತ್ತು ಗಂಟೆಗೆ ಪತಿ ಧರಣೇಶರೊಂದಿಗೆ ತೋಟಕ್ಕೆ ಹಾಜರಾಗುತ್ತಾರೆ. ಮಹಿಳಾ ಕಾರ್ವಿುಕರೊಂದಿಗೆ ತಾವೂ ಕೆಲಸ ಮಾಡುತ್ತ ದಿನದಲ್ಲಿ 40-50 ಗಿಡಗಳನ್ನು ಕಸಿ ಮಾಡುತ್ತಾರೆ. ಅರೇಬಿಕ ಕಾಫಿಗಿಡಗಳು ನೆಟ್ಟ 9-12 ತಿಂಗಳ ಅವಧಿಯಲ್ಲಿ ಮತ್ತು ರೊಬಸ್ಟಾ ಕಾಫಿ ಗಿಡಗಳು 18-24 ತಿಂಗಳ ಅವಧಿಯಲ್ಲಿ ಮೊದಲನೇ ನಿಯಂತ್ರಣದ ಮಟ್ಟ ತಲುಪುತ್ತವೆ. ಗಿಡಗಳನ್ನು ಮೊದಲನೇ ಹಂತದಲ್ಲಿ ಮಟ್ಟ ಮಾಡಬೇಕಾದರೆ ನಿಗದಿಪಡಿಸಿರುವ ಎತ್ತರದಲ್ಲಿ ಕಂಡುಬರುವ ಜೋಡಿ ರೆಕ್ಕೆಗಳಿಂದ 2 ಅಂಗುಲ ಮೇಲೆ ಮೇಲ್ಮುಖವಾಗಿ ಬೆಳೆಯುತ್ತಿರುವ ಚಿಗುರನ್ನು ಮೊಟಕು ಮಾಡಬೇಕು. ‘ಜೋಡಿ ರೆಕ್ಕೆಗಳ ಪೈಕಿ ಒಂದನ್ನು ಕತ್ತರಿಸುವುದರಿಂದ ಪ್ರಧಾನ ಕಾಂಡ ಸೀಳುವುದನ್ನು ತಪ್ಪಿಸಬಹುದು. ಇದರಿಂದ ಗಿಡದ ಕಾಂಡ ಮತ್ತು ತಾಯಿರೆಕ್ಕೆಗಳು ದಪ್ಪವಾಗಿ ಬೆಳೆಯಲು ಬೇಕಾದ ಆಹಾರ ದೊರೆಯುತ್ತದೆ’ ಎನ್ನುವ ಗೀತಾ ಕಸಿ ಕೆಲಸ ಕಲಿತದ್ದು ಪತಿಯಿಂದ. ಇದೀಗ ಅವರ ತೋಟದ ಕ್ಷೇತ್ರ ವೀಕ್ಷಣೆಗೆ ಬರುವವರಿಗೆ ಕಸಿಯ ಪ್ರಾಮುಖ್ಯತೆಯನ್ನು ಅಚ್ಚುಕಟ್ಟಾಗಿ ವಿವರಿಸುತ್ತ, ತಾಳ್ಮೆಯಿಂದ ಹೇಳಿಕೊಡುತ್ತಾರೆ.

Leave a Reply

Your email address will not be published. Required fields are marked *

Back To Top