Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಉತ್ತಮ ಆರಂಭ ಸಿಕ್ಕರೆ ಅರ್ಧ ಕೆಲಸ ಆದಂತೆಯೇ…

Friday, 13.07.2018, 3:03 AM       No Comments

| ಡಿ. ಮುರಳೀಧರ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ತೆರಿಗೆ ಸುಧಾರಣಾ ಕ್ರಮ ಸರಕು ಮತ್ತು ಸೇವಾ ತೆರಿಗೆ(ಜಿಎಸ್​ಟಿ) ಜಾರಿಗೊಂಡು ಒಂದು ವರ್ಷ ಆಗಿದೆ. ಈ ಅಲ್ಪ ಅವಧಿಯಲ್ಲಿ ಜಿಎಸ್​ಟಿ ಮಂಡಳಿ ತೆಗೆದುಕೊಂಡ ನಿರ್ಧಾರಗಳು, ಲೋಪದೋಷಗಳನ್ನು ಸರಿಪಡಿಸಿದ ರೀತಿ, ಹೊಸ ವ್ಯವಸ್ಥೆಯಿಂದಾಗಿ ದೇಶದಲ್ಲಾದ ಬದಲಾವಣೆಗಳತ್ತ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ.

ಕೇಂದ್ರ ಸರ್ಕಾರದ ‘ಒಂದು ದೇಶ ಒಂದು ತೆರಿಗೆ’ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಸರಕು ಮತ್ತು ಸೇವಾ ತೆರಿಗೆ(ಜಿಎಸ್​ಟಿ) ಜಾರಿಯಾಗಿ ಇತ್ತೀಚೆಗಷ್ಟೇ ವರ್ಷ ಪೂರ್ತಿಯಾಗಿದೆ. ತೆರಿಗೆ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ತಂದ ಈ ಕಾಯಿದೆಯನ್ನು ‘ಹೊಸ ವ್ಯವಸ್ಥೆ’ ಎಂದೇ ಹೇಳುವುದು ಸೂಕ್ತ. ಇದು ಒಂದೇ ಏಟಿಗೆ ಇದು ಭಾರತದ ವ್ಯಾಪಾರ ವಲಯದ ಚಿತ್ರಣವನ್ನೇ ಬದಲಾಯಿಸಿಬಿಟ್ಟಿತು; ದೇಶದಲ್ಲಿ ಏಳು ಶತಮಾನದಿಂದ ಜಾರಿಯಲ್ಲಿದ್ದ ಪರೋಕ್ಷ ತೆರಿಗೆ ವ್ಯವಸ್ಥೆ ಮತ್ತು ಪ್ರಕ್ರಿಯೆಗಳನ್ನು ಇಲ್ಲವಾಗಿಸಿತು. ಇದನ್ನು ಕೇವಲ ಸುಧಾರಣೆ ಎಂಬ ದೃಷ್ಟಿಯಿಂದಷ್ಟೇ ನೋಡಬಾರದು. ವ್ಯಾಪಾರ, ವಾಣಿಜ್ಯೋದ್ಯಮ ವಲಯದ ಎಲ್ಲ ರೀತಿಯ ಪಾಲುದಾರರ ಮೇಲೂ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಇದು ಭಾರಿ ಪರಿಣಾಮ ಬೀರಿದೆ. ಈ ಐತಿಹಾಸಿಕ ಬದಲಾವಣೆಗೆ ಕಾರಣವಾದ ವ್ಯವಸ್ಥೆ ಒಟ್ಟಾರೆ ಪಯಣದಲ್ಲಿ ಈಗ ಆಗಿರುವ ‘ಒಂದು ವರ್ಷ’ ಎಂಬುದು ಅತ್ಯಂತ ಸಣ್ಣ ಅವಧಿ. ಇದು ಭವಿಷ್ಯದಲ್ಲಿ ಸಾಗಬೇಕಾದ ಹಾದಿಯ ಬಗ್ಗೆ ದೂರದೃಷ್ಟಿ ಇರಿಸಲು ಹಾಗೆಯೇ, ಇದುವರೆಗೆ ಸಾಧಿಸಿರುವ ಪ್ರಗತಿಯ ಅವಲೋಕನ ಮಾಡಲು ಸಕಾಲ.

ಸಮಾಜದ ಎಲ್ಲ ವರ್ಗಗಳ ಮೇಲೂ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರುವಂಥವು ಎಲ್ಲ ರೀತಿಯ ಪರೋಕ್ಷ ತೆರಿಗೆಗಳು. ಹಾಗಾಗಿ ಸಣ್ಣ ವ್ಯಾಪಾರಿಗಳಿಂದ ಹಿಡಿದ, ದೊಡ್ಡ ವ್ಯಾಪಾರಿಗಳ ತನಕ, ರಫ್ತು ಉದ್ಯಮಿಗಳು, ಸರ್ಕಾರ, ಸಾರಿಗೆ ಉದ್ಯಮ, ಹೂಡಿಕೆದಾರರು ಅಷ್ಟೇ ಏಕೆ ಜನಸಾಮಾನ್ಯರೂ ಈ ವ್ಯವಸ್ಥೆಯ ಪಾಲುದಾರರು.

ವ್ಯಾಪಾರೋದ್ಯಮ ವಲಯ: ಬೃಹತ್ ವ್ಯಾಪಾರೋದ್ಯಮದ ದೃಷ್ಟಿಯಿಂದ ನೋಡುವುದಾದರೆ, ತೆರಿಗೆ ವ್ಯವಸ್ಥೆ ಅನುಸರಣೆ ಈಗ ಬಹಳ ಸರಳ ಮತ್ತು ಈ ಹಿಂದೆ ಇದ್ದಂಥ ತೆರಿಗೆ ದರಗಳ ಗೊಂದಲ ಇಲ್ಲವಾಗಿದೆ. ತೆರಿಗೆ ಉಳಿಸುವುದಕ್ಕಾಗಿ, ಕಾರ್ಯಕ್ಷಮತೆ ಹೆಚ್ಚಿಸಲು ಮತ್ತು ವೆಚ್ಚ ಕಡಿತಗೊಳಿಸುವುದಕ್ಕಾಗಿ ದೇಶಾದ್ಯಂತ ನಡೆಸುತ್ತಿದ್ದ ಶಾಖೆಗಳನ್ನು ಈಗ ಅನೇಕ ಉದ್ಯಮಗಳು ಮುಚ್ಚಿವೆ. ಹಲವು ರೀತಿಯ ತೆರಿಗೆ ದರಗಳ ವ್ಯಾಜ್ಯ, ಅರ್ಜಿ ನಮೂನೆ ‘ಸಿ’ಯನ್ನು ಸಂಗ್ರಹಿಸುವುದು ಮತ್ತು ಅವುಗಳನ್ನು ಇಲಾಖೆಯಲ್ಲಿ ಸಲ್ಲಿಸುವುದು ಮುಂತಾದ ತಲೆನೋವಿನ ಸಂಗತಿಗಳೀಗ ಇತಿಹಾಸ. ತಂತ್ರಜ್ಞಾನದ ಬಳಕೆಯಿಂದಾಗಿ ತೆರಿಗೆ ರಿಟರ್ನ್ಸ್ ಸಲ್ಲಿಕೆ ಸರಳವಾಗಿದೆ. ಅಷ್ಟೇ ಅಲ್ಲ, ವಿವಿಧ ಹಂತಗಳಲ್ಲಿ ಹಲವು ಸರ್ಕಾರಿ ಇಲಾಖೆಗಳಿಂದ ಆಗುತ್ತಿದ್ದ ಹಸ್ತಕ್ಷೇಪದ ಪ್ರಮಾಣ ಕಡಿಮೆಯಾಗಿ ಭ್ರಷ್ಟಾಚಾರದ ಸಾಧ್ಯತೆಯೂ ಕ್ಷೀಣಿಸಿದೆ. ಸರಕುಗಳ ಮೇಲಿನ ಭೌತಿಕ ನಿಯಂತ್ರಣ ರದ್ದುಗೊಂಡು, ಆಡಳಿತಶಾಹಿಯ ಹಸ್ತಕ್ಷೇಪ ಇಲ್ಲವಾಗಿದೆ. ಹೀಗಾಗಿ ಬೃಹತ್ ವ್ಯಾಪಾರೋದ್ಯಮಕ್ಕೆ ಈ ವ್ಯವಸ್ಥೆ ಒಂದು ರೀತಿಯಲ್ಲಿ ದೊಡ್ಡ ಕನಸು ನನಸಾದಂತಾಗಿದೆ. ಆದಾಗ್ಯೂ, ಸಣ್ಣ ವ್ಯಾಪಾರೋದ್ಯಮಗಳ ಪಾಲಿಗೆ ಇದು ಪ್ರಸವವೇದನೆಯ ಅನುಭವವನ್ನೇ ಕೊಡುತ್ತಿದೆ. ತಂತ್ರಜ್ಞಾನವನ್ನು ವ್ಯವಸ್ಥೆಗೆ ಅನ್ವಯಿಸುವ ಕೆಲಸ ಹಲವು ಸವಾಲುಗಳನ್ನು ಒಡ್ಡುವುದಲ್ಲದೇ ಎಲ್ಲ ವಹಿವಾಟುಗಳನ್ನು ವಿಧಿಬದ್ಧಗೊಳಿಸುತ್ತದೆ. ಆ ಮೂಲಕ ಲೆಕ್ಕಪತ್ರಗಳನ್ನು ಸಮರ್ಪಕ ವ್ಯವಸ್ಥೆಗೆ ಜೋಡಿಸಿ ಇನ್​ಪುಟ್ ಕ್ರೆಡಿಟ್ ಪಡೆಯುವುದಕ್ಕೂ ಅನುವುಮಾಡಿಕೊಟ್ಟಿದೆ. ಈ ಜಿಎಸ್​ಟಿ ವ್ಯವಸ್ಥೆಗೆ ಸೇರುವವರ ಸಂಖ್ಯೆ ಮತ್ತು ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿದೆ ಎಂಬುದೂ ಗಮನಾರ್ಹ ಅಂಶ.

ಆಮದು ವ್ಯಾಪಾರೋದ್ಯಮಗಳು ಈಗಾಗಲೇ ಹೊಸ ಜಿಎಸ್​ಟಿ ಕಾನೂನಿನ ಚೌಕಟ್ಟಿನೊಳಗೆ ಸೇರಿಕೊಂಡಿವೆ. ಆದರೆ, ತೆರಿಗೆ ಹಣ ಮರುಪಾವತಿಯಲ್ಲಾಗುತ್ತಿರುವ ವಿಳಂಬದ ಬಗ್ಗೆ ರಫ್ತು ವ್ಯಾಪಾರೋದ್ಯಮಿಗಳಿಗೆ ಅಸಮಾಧಾನವಿದೆ. ಇಷ್ಟಾಗ್ಯೂ, ವ್ಯವಸ್ಥೆಯಲ್ಲಿನ ಈ ಬದಲಾವಣೆ, ಸುಧಾರಣಾ ಕ್ರಮಗಳಿಂದಾಗಿ ಅನೇಕ ಹಿಂಬಾಕಿಗಳು ಪೂರ್ಣಗೊಂಡಿವೆ. ಅದೇ ರೀತಿ ಇನ್ನೂ ಹಲವು ಕ್ಲೇಶಕರ ವಿಚಾರಗಳನ್ನು ಪರಿಹರಿಸುವುದು ಬಾಕಿ ಉಳಿದಿದೆ.

ಸರ್ಕಾರಿ ವ್ಯವಸ್ಥೆ: ಸರ್ಕಾರಗಳ ದೃಷ್ಟಿಕೋನದಿಂದ ಗಮನಿಸಿದರೆ, ತೆರಿಗೆ ಸಂಗ್ರಹ, ವ್ಯಾಪಾರೋದ್ಯಮ ನೋಂದಣಿ, ತೆರಿಗೆ ಲೆಕ್ಕ ಅನುಸರಣೆಗಳೆಲ್ಲವೂ ಸ್ಥಿರವಾಗಿ ಸುಧಾರಿಸುತ್ತಿವೆ. ಇನ್ನು ನೇರ ತೆರಿಗೆ ಸಂಗ್ರಹ ಕೂಡ ಹೆಚ್ಚಿನ ತೆರಿಗೆ ಅನುಸರಣೆಯೊಂದಿಗೆ ಗರಿಷ್ಠ ಮಟ್ಟದಲ್ಲಿ ಹೆಚ್ಚಾಗಿದೆ. ತೆರಿಗೆ ಸಂಗ್ರಹದಲ್ಲಿ ಈ ಪ್ರಮಾಣದ ಹೆಚ್ಚಳ ಈ ಹಿಂದೆಂದೂ ಕಂಡಿರಲಿಲ್ಲ. ಹಣಕಾಸು ಸಚಿವ ಪಿಯೂಷ್ ಗೋಯೆಲ್ ನೀಡಿರುವ ಸುಳಿವಿನ ಪ್ರಕಾರ, ಈ ಹಣಕಾಸು ವರ್ಷ ಪ್ರತಿ ತಿಂಗಳ ಜಿಎಸ್​ಟಿ ಸಂಗ್ರಹ ಸರಾಸರಿ ಒಂದು ಲಕ್ಷ ರೂಪಾಯಿ ಇರಲಿದೆ. ಈ ಬೆಳವಣಿಗೆ ಕಾರಣ ತೆರಿಗೆ ದರಗಳ ಪರಿಷ್ಕರಣೆಯತ್ತ ಜಿಎಸ್​ಟಿ ಮಂಡಳಿ ಗಮನಹರಿಸಬಹುದಾಗಿದೆ. ಅದೇ ರೀತಿ, ಶೇಕಡ 28ರ ತೆರಿಗೆ ಸ್ತರದಲ್ಲಿರುವ ಕೆಲವು ವಸ್ತುಗಳನ್ನು ಅದರಿಂದ ಹೊರಗಿಡುವ ಅಥವಾ ಅದಕ್ಕಿಂತ ಕಡಿಮೆ ತೆರಿಗೆ ಸ್ತರಕ್ಕೆ ಸೇರಿಸುವ ಸುಳಿವು ಕಂಡುಬಂದಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್​ಟಿ ವ್ಯಾಪ್ತಿಗೆ ತರುವ ನಿರ್ಧಾರವನ್ನೂ ನಿರೀಕ್ಷಿಸಬಹುದಾಗಿದೆ. ಆ ಮೂಲಕ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಕೊಂಚ ಮಟ್ಟಿಗೆ ಇಳಿಕೆಯಾಗಬಹುದೆಂಬ ನಿರೀಕ್ಷೆಯನ್ನೂ ಇಟ್ಟುಕೊಳ್ಳಬಹುದು. ಹಲವು ತೆರಿಗೆ ವಿಶ್ಲೇಷಕರ ಪ್ರಕಾರ, ಜಿಎಸ್​ಟಿ ಹಣದುಬ್ಬರಕ್ಕೆ ಕಾರಣವಾಗಬಹುದು. ಆದರೆ ಹಾಗಾಗಿಲ್ಲ ಎಂಬುದು ಸರ್ಕಾರಕ್ಕೆ ನೆಮ್ಮದಿಯ ಸಂಗತಿ. ಜಿಎಸ್​ಟಿ ವ್ಯವಸ್ಥೆ ಮೂಲಕ ಪ್ರಾದೇಶಿಕ ವ್ಯವಹಾರದ ದತ್ತಾಂಶ ಸಂಗ್ರಹವಾಗುತ್ತಿದೆ. ಆ ಮಾಹಿತಿಯನ್ನು ಆಧರಿಸಿ ಇನ್ನಷ್ಟು ವಿಶ್ಲೇಷಣೆಗಳನ್ನು ಮಾಡುವುದಕ್ಕೆ ಸಾಧ್ಯವಿದೆ. ಹಾಗೆಯೇ ತೆರಿಗೆ ವಂಚಕರ ವಿರುದ್ಧ ಕ್ರಮ ತೆಗೆದುಕೊಳ್ಳುವುದೂ ಸಾಧ್ಯವಾಗಲಿದೆ. ಈ ಪ್ರಕ್ರಿಯೆ ಈಗಷ್ಟೇ ಆರಂಭವಾಗಿದೆ.

ಸರಕು ಸಾಗಣೆ ಉದ್ಯಮ: ಸಾರಿಗೆ ಮತ್ತು ಸರಕು ಸಾಗಣೆ ಉದ್ಯಮಕ್ಕೂ ಈ ಹೊಸ ವ್ಯವಸ್ಥೆ ಜಾರಿಯಿಂದಾಗಿ ಸಾಕಷ್ಟು ಲಾಭ, ಪ್ರಯೋಜನ ಆಗಿದೆ. ಆನ್​ಲೈನ್ ತೆರಿಗೆ ಪಾವತಿ ವ್ಯವಸ್ಥೆಯಿಂದಾಗಿ ಹೆದ್ದಾರಿಗಳಲ್ಲಿ ಚೆಕ್​ಪೋಸ್ಟ್​ಗಳ

ಎದುರು ದಿನಗಟ್ಟಲೆ ಸಾಲುಗಟ್ಟಿ ನಿಲ್ಲುತ್ತಿದ್ದ ಲಾರಿ, ಟ್ರಕ್​ಗಳ ಸಂಖ್ಯೆ ಕಡಿಮೆಯಾಗಿದೆ. ಅವುಗಳ ಪ್ರಯಾಣದ ಅವಧಿಯೂ ಕಡಿಮೆಯಾಗಿದೆ. ಇ-ವೇ ಬಿಲ್ ವ್ಯವಸ್ಥೆಯನ್ನು ಸರ್ಕಾರ ಇತ್ತೀಚೆಗಷ್ಟೇ ಪರಿಚಯಿಸಿದ್ದು, ಇದು ಈ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವ ಪ್ರಯತ್ನ ಎಂಬುದು ಭರವಸೆಯ ಅಂಶ.

ಜಿಎಸ್​ಟಿ ಜಾರಿಯ ಮೂಲಕ ಉದ್ಯಮ ನಿಯಮ ಸರಳೀಕರಣಕ್ಕೂ ಉತ್ತೇಜನ ಸಿಕ್ಕಂತಾಗಿದೆ. ರಫ್ತು ಹೊರತುಪಡಿಸಿದ ಎಲ್ಲ ರೀತಿಯ ಮಹದಾರ್ಥಿಕ ಸೂಚ್ಯಂಕಗಳು ಮತ್ತು ದೇಶದ ರಫ್ತು ಪ್ರಮಾಣ ಮತ್ತು ಆಮದು ಪ್ರಮಾಣದ ಸಂಖ್ಯೆಯೂ ಉತ್ತೇಜನದಾಯಕವಾಗಿ ಮುನ್ನಡೆಯುತ್ತಿದೆ. ವಿದೇಶಿ ನೇರ ಹೂಡಿಕೆ ಕೂಡ ನಿರಂತರ ಹೆಚ್ಚಳವಾಗುತ್ತಿದ್ದು, ದೇಶವು ಕೂಡ ಹೂಡಿಕೆದಾರರನ್ನು ಹೆಚ್ಚಿನ ಪ್ರಮಾಣದಲ್ಲಿ ತನ್ನತ್ತ ಸೆಳೆಯುತ್ತಿದೆ. ಅಧ್ಯಯನ ವರದಿ ಒಂದರ ಪ್ರಕಾರ ಜಿಎಸ್​ಟಿ ಜಾರಿಗೊಳಿಸುವ ಸರ್ಕಾರದ ನಿರ್ಧಾರ ದೇಶದ ಜಿಡಿಪಿಯನ್ನು ಶೇಕಡ ಒಂದು ಹೆಚ್ಚಿಸಿ ಜಾಗತಿಕವಾಗಿ ಉನ್ನತ ಸ್ಥಾನವನ್ನು ಕಾಪಾಡುವಲ್ಲಿ ಯಶಸ್ವಿಯಾಗುವಂತೆ ಮಾಡಿದೆ.

ಉತ್ತಮ ಆರಂಭ: ಹಳೆಯ ತೆರಿಗೆ ವ್ಯವಸ್ಥೆಯಿಂದ ಹೊಸ ಜಿಎಸ್​ಟಿ ವ್ಯವಸ್ಥೆಗೆ ಬದಲಾಗುವ ಕಾಲಘಟ್ಟ ಜನಸಾಮಾನ್ಯರನ್ನೇನೂ ಕೆಟ್ಟದಾಗಿ ಬಾಧಿಸಲಿಲ್ಲ. ಪಾರದರ್ಶಕ ಮತ್ತು ಏಕರೂಪದ ತೆರಿಗೆ ದರ ಮುಂತಾದ ಅಂಶಗಳು ಖರೀದಿದಾರರಿಗೆ ಹೆಚ್ಚಿನ ಆಯ್ಕೆಯ ಅವಕಾಶವನ್ನು ಒದಗಿಸಿವೆ. ರೆಸ್ಟೋರೆಂಟ್​ಗಳ ಮೇಲೆ ಕಡಿಮೆ ಜಿಎಸ್​ಟಿ ವಿಧಿಸಿದ್ದರ ಪ್ರಯೋಜನ ಉದ್ಯಮಕ್ಕಷ್ಟೇ ಅಲ್ಲ, ಬಳಕೆದಾರರಿಗೂ ಆಗಿದೆ.

ಅತ್ಯಲ್ಪ ಅವಧಿಯಲ್ಲಿ ಈ ಪ್ರಮಾಣದ ಧನಾತ್ಮಕ ಪರಿಣಾಮ ಬೀರಿದ ಜಿಎಸ್​ಟಿ ಜಾರಿಗೊಳಿಸಿದ ಅವಧಿಯ ಬಗ್ಗೆ ಅನೇಕ ಅರ್ಥಶಾಸ್ತ್ರಜ್ಞರಿಗೆ ಹಲವು ಪ್ರಶ್ನೆಗಳು ಕಾಡುತ್ತಿವೆ. ತಂತ್ರಜ್ಞಾನ, ಅವಧಿ, ತಯಾರಿ, ದರ, ಅನುಷ್ಠಾನ ಯೋಗ್ಯ ವ್ಯವಸ್ಥೆ ಇತ್ಯಾದಿ ಹಲವು ವಿಧದ ಪ್ರಶ್ನೆಗಳವು. ಇಂತಹ ಬೃಹತ್ ವ್ಯವಸ್ಥೆ ಜಾರಿಗೊಳಿಸುವಾಗ ಅನೇಕ ಅಡೆತಡೆಗಳು, ಸವಾಲುಗಳು ಎದುರಾಗುತ್ತವೆ ಎಂಬ ಪ್ರಾಥಮಿಕ ತಿಳಿವಳಿಕೆ ಎಲ್ಲರಿಗೂ ಇರಬೇಕಾದ್ದು ಅವಶ್ಯ. ಮೊದಲ ವರ್ಷದ ಅಂತಹ ಸವಾಲನ್ನು ಸ್ವೀಕರಿಸಿ ಸರಿದೂಗಿಸಿಕೊಂಡು ವ್ಯವಸ್ಥೆಯನ್ನು ಜಾರಿಗೊಳಿಸಲು ಜಿಎಸ್​ಟಿ ಮಂಡಳಿ ಸಿದ್ಧವಾಗಿತ್ತು. ವ್ಯವಸ್ಥೆ ಅನುಷ್ಠಾನದಲ್ಲಿ ಇದೇ ವೇಗವನ್ನು ಕಾಯ್ದುಕೊಂಡರೆ, ಬಹುತೇಕ ಸಮಸ್ಯೆಗಳನ್ನು ಬೇಗ ನಿವಾರಿಸ

ಬಹುದು. ಇನ್ನಷ್ಟು ಸರಳ ಜಿಎಸ್​ಟಿ ವ್ಯವಸ್ಥೆಯನ್ನು ದೇಶ ಎದುರುನೋಡಬಹುದು. ‘ಯಾವುದೇ ಕೆಲಸಕ್ಕೆ ಉತ್ತಮ ಆರಂಭ ಸಿಕ್ಕಿತು ಎಂದರೆ ಅರ್ಧ ಕೆಲಸ ಆದಂತೆಯೇ ಸರಿ’ ಎಂಬ ಮಾತು ಜಿಎಸ್​ಟಿ ಮಟ್ಟಿಗೆ ಸರಿಯಾಗಿ ಅನ್ವಯವಾಗುತ್ತದೆ. (ಲೇಖಕರು ಆರ್ಥಿಕ ತಜ್ಞರು)

Leave a Reply

Your email address will not be published. Required fields are marked *

Back To Top