Friday, 16th November 2018  

Vijayavani

Breaking News

ವಿಶ್ವ ವ್ಯಾಪಾರ ಚಟುವಟಿಕೆ ಹಳಿತಪ್ಪಲಿದೆಯೇ?

Friday, 22.06.2018, 3:03 AM       No Comments

| ಡಿ. ಮುರಳೀಧರ

ಅಮೆರಿಕದ ದುಂಡಾವರ್ತನೆಯ ನಿಲುವು ಅಪಾಯಕಾರಿಯಾಗಿದ್ದು, ಅದರಿಂದ ಜಾಗತಿಕ ವ್ಯವಹಾರಕ್ಕೆ ಧಕ್ಕೆಯಾಗಬಹುದು, ಅನೇಕ ದೇಶಗಳ ಆರ್ಥಿಕತೆಗಳಿಗೆ ಅದರಿಂದ ಸಂಚಕಾರ ಒದಗಬಹುದು. ಇಂಥ ಬೆಳವಣಿಗೆಗಳು, ಪರಸ್ಪರ ಸಹಕಾರದ ವ್ಯಾಪಾರ ಚಟುವಟಿಕೆಗಳಿಗೆ ಅನುವುಮಾಡಿಕೊಡುವ ವಿಶ್ವ ವ್ಯಾಪಾರ ಸಂಘಟನೆಯ ಮಹತ್ವವನ್ನೂ ಕುಗ್ಗಿಸುತ್ತವೆ.

ಜಾಗತಿಕ ವ್ಯಾಪಾರ ವಿಷಯಕ್ಕೆ ಸಂಬಂಧಿಸಿದಂತೆ ನಾವೀಗ ದೊಡ್ಡದೊಂದು ಅಡಚಣೆಯಲ್ಲಿ ಸಿಲುಕಲಿದ್ದೇವೆಯೇ? ಕಳೆದ ಒಂದೆರಡು ದಿನಗಳಲ್ಲಿ ಕಂಡುಬಂದ ಕ್ಷಿಪ್ರ ಬದಲಾವಣೆಗಳನ್ನು ಅವಲೋಕಿಸಿದಾಗ ಇಂಥದೊಂದು ಸಾಧ್ಯತೆಯನ್ನು ತಳ್ಳಿಹಾಕಲಾಗದು. ಚೀನಾದಿಂದ ಆಮದಾಗುವ 50 ಶತಕೋಟಿ ಡಾಲರ್ ಮೌಲ್ಯದ ಸರಕುಗಳ ಮೇಲೆ ಹೆಚ್ಚು ಪ್ರಮಾಣದಲ್ಲಿ ಆಮದು ಸುಂಕವನ್ನು ಹೇರುವ ಅಮೆರಿಕದ ನಡೆ ಈ ಸಂಶಯಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತ್ಯುತ್ತರವೆಂಬಂತೆ ಚೀನಾ ಕೂಡ, ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗಿರುವ ಅಷ್ಟೇ ಮೌಲ್ಯದ ಸರಕುಗಳ ಮೇಲೆ ಹೆಚ್ಚಿನ ಆಮದು ಸುಂಕ ವಿಧಿಸಿದೆ. ಈ ವಿಷಯದಲ್ಲಿ ತಾನೇನೂ ಹಿಂದುಳಿದಿಲ್ಲ ಎಂಬಂತೆ, ಅಮೆರಿಕದಿಂದ ಆಮದಾಗಿರುವ ಸುಮಾರು 250 ದಶಲಕ್ಷ ಡಾಲರ್ ಮೌಲ್ಯದ ಸರಕುಗಳ ಮೇಲೆ ಭಾರತವೂ ಶೇ. 50ರಷ್ಟು ಹೆಚ್ಚುವರಿ ಸೀಮಾಸುಂಕವನ್ನು ವಿಧಿಸಿದೆ; ಇದು ಕೂಡ, ಭಾರತೀಯ ಸರಕುಗಳ ಮೇಲೆ ಅಮೆರಿಕ ಹೆಚ್ಚುವರಿ ಸುಂಕ ವಿಧಿಸಿದ್ದಕ್ಕೆ ಭಾರತ ಕೈಗೊಂಡ ಪ್ರತೀಕಾರದ ಕ್ರಮ. ಸುಂಕದ ದರಗಳು ಮತ್ತು ವ್ಯಾಪಾರದ ಕುರಿತಾದ ವಿಶ್ವ ವ್ಯಾಪಾರ ಸಂಘಟನೆ (ಗಖಣ) ಒಡಂಬಡಿಕೆಯನ್ನು ಉಲ್ಲೇಖಿಸುವ ಮೂಲಕ ಭಾರತ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ಈ ಕುರಿತಾಗಿ ಗಖಣಗೆ ಮಾಹಿತಿ ನೀಡಿರುವ ಭಾರತ, ಈ ಕ್ರಮವು ಪ್ರತೀಕಾರ ಸ್ವರೂಪದ್ದಾಗಿದೆ ಎಂದೇ ನಿಚ್ಚಳವಾಗಿ ವಿವರಿಸಿದೆ. ಹಾಗಾದಲ್ಲಿ, ಈ ಎರಡು ನಿದರ್ಶನಗಳನ್ನು ಪ್ರತ್ಯೇಕವಾದವು/ಒಂದಕ್ಕೊಂದು ಸಂಬಂಧ ಇರದಂಥವು ಎಂದು ಪರಿಭಾವಿಸಬೇಕೇ ಅಥವಾ ಮುಂದೆ ಜರುಗಲಿರುವ ಘಟನೆಗಳಿಗೆ ಇದೊಂದು ಸೂಚನೆ ಎಂದುಕೊಳ್ಳಬೇಕೇ? ಇದಕ್ಕೆ ಕಾಲವೇ ಉತ್ತರಿಸಬೇಕು. ಆದರೆ, ಕಳೆದ 70 ವರ್ಷಗಳಿಂದ ಬೆಳೆದುಕೊಂಡು ಬಂದಿರುವ ಮತ್ತು ಈಗ ಗಖಣನಿಂದ ನಿಯಂತ್ರಿಸಲ್ಪಡುತ್ತಿರುವ ವಿಶ್ವವ್ಯಾಪಾರದ ಸೂಕ್ಷ್ಮ ಸಮತೋಲನಕ್ಕೆ ಅಮೆರಿಕ ಕೈಗೊಂಡಿರುವ ಇಂಥ ಏಕಪಕ್ಷೀಯ ಕ್ರಮ ಭಂಗ ತರುವುದೇ ಎಂಬ ಪ್ರಶ್ನೆ ಈಗ ಎದ್ದಿದೆ. ಉಕ್ಕು ಮತ್ತು ಅಲ್ಯೂಮಿನಿಯಂ ಆಮದುಗಳ ಮೇಲೆ ಅಮೆರಿಕ ಅಧಿಕತಮ ಸುಂಕಗಳನ್ನು ಹೇರಿದ್ದರಿಂದಾಗಿ, ಐರೋಪ್ಯ ಒಕ್ಕೂಟ ಮತ್ತು ಕೆನಡಾ ಈ ಅನ್ಯಾಯವನ್ನು ಸರಿಪಡಿಸಿ ಪರಿಹಾರೋಪಾಯ ನೀಡುವಂತೆ ಗಖಣ ಮೊರೆಹೋಗುವಂತಾಯಿತಾದರೂ, ಈ ಬೆಳವಣಿಗೆಯ ಪ್ರಭಾವ ನಗಣ್ಯವಾಗಿದ್ದುದರಿಂದ ಬಹುತೇಕರು ಇದನ್ನು ಉಪೇಕ್ಷಿಸಿದರು.

ಸರಕುಗಳ ಜಾಗತಿಕ ವ್ಯಾಪಾರ ಚಟುವಟಿಕೆಯು ಏನಿಲ್ಲವೆಂದರೂ 3000 ವರ್ಷಗಳಿಗೂ ಹೆಚ್ಚು ಕಾಲದಿಂದ ನಡೆದುಕೊಂಡುಬಂದಿರುವಂಥದ್ದು. ಬಹಳ ಹಿಂದೆ ಈಜಿಪ್ಟ್, ಚೀನಾ ಮತ್ತು ಭಾರತದಂಥ ರಾಷ್ಟ್ರಗಳ ನಡುವೆ ರೇಷ್ಮೆ, ರತ್ನಾಭರಣ, ಮಸಾಲೆ ಪದಾರ್ಥಗಳಂಥ ದುಬಾರಿ ವಸ್ತುಗಳ ವ್ಯಾಪಾರ-ವಿನಿಮಯ ನಡೆಯುತ್ತಿತ್ತು. ಎರಡನೇ ಮಹಾಯುದ್ಧದ ಅಂತ್ಯದವರೆಗೂ, ಅಂತಾರಾಷ್ಟ್ರೀಯ ವ್ಯಾಪಾರದ ನಿರ್ವಹಣೆಗೆ ಸಂಬಂಧಿಸಿದ ನಿರ್ದಿಷ್ಟ ರೂಪುರೇಷೆಯೇ ಇರಲಿಲ್ಲ ಎನ್ನಬೇಕು. 1947ರ ಕಾಲಾವಧಿಯಲ್ಲಿ, ಈ ನಿಟ್ಟಿನಲ್ಲಿ ಮೊಟ್ಟಮೊದಲ ಒಡಂಬಡಿಕೆ ಜಿನೆವಾದಲ್ಲಿ ಏರ್ಪಟ್ಟಿತು. ಸರಕು ಸುಂಕಗಳನ್ನು ಒಳಗೊಂಡಿದ್ದ, 23 ದೇಶಗಳ ವ್ಯಾಪ್ತಿಯಿದ್ದ ಈ ಒಡಂಬಡಿಕೆ ‘ಗ್ಯಾಟ್’ (ಎಅಖಖ ಎಛ್ಞಿಛ್ಟಿಚ್ಝ ಅಜ್ಟಛಿಛಿಞಛ್ಞಿಠಿ ಟ್ಛ ಖ್ಟಚಛಛಿ ಚ್ಞಛ ಖಚ್ಟಜ್ಛಿ್ಛ ಎಂದೇ ಖ್ಯಾತಿ ಪಡೆಯಿತು. ಈ ಒಡಂಬಡಿಕೆಯು 10 ಶತಕೋಟಿ ಡಾಲರ್​ಗಳಷ್ಟು ಪ್ರಭಾವ ಬೀರಬಲ್ಲ 45,000ದಷ್ಟು ಸುಂಕದರಕ್ಕೆ ಸಂಬಂಧಿಸಿತ್ತು. ಈ ವ್ಯಾಪಾರ ಒಡಂಬಡಿಕೆಯು ಕಾಲಕ್ಕೆ ತಕ್ಕಂತೆ ಅನೇಕ ವರ್ಷಗಳಿಂದ ವಿಸ್ತರಣೆಗೆ ಮತ್ತು ಮಾರ್ಪಾಡಿಗೆ ಒಳಗಾಗುತ್ತಲೇ ಬಂತು. ಅನೆಸಿ (1949), ಟಾರ್ಕ್ವೆ (1950), ಜಿನೆವಾ (1956), ದಿಲಾನ್ (1960), ಕೆನಡಿ (1964), ಟೋಕಿಯೋ (1973) ಮೊದಲಾದೆಡೆಗಳಲ್ಲಿ ನಡೆದ ಹಲವು ಸುತ್ತುಗಳ ಸಭೆಗಳು ಮತ್ತು ಚರ್ಚೆಗಳಿಂದಾಗಿ, 102 ದೇಶಗಳು ಗ್ಯಾಟ್​ನ ಸದಸ್ಯತ್ವ ಪಡೆಯುವಂತಾಯಿತು. ಈ ಎಲ್ಲಕ್ಕಿಂತ ಮುಖ್ಯವಾಗಿ ಉರುಗ್ವೆಯಲ್ಲಿ 1986ರಲ್ಲಿ ನಡೆದ ಮಾತುಕತೆಯು 123 ಸದಸ್ಯ ರಾಷ್ಟ್ರಗಳನ್ನೊಳಗೊಂಡ ವಿಶ್ವ ವ್ಯಾಪಾರ ಸಂಘಟನೆಯ ಹುಟ್ಟಿಗೆ ಕಾರಣವಾಯಿತು ಹಾಗೂ ಸರಕುಗಳು, ಸೇವೆಗಳು, ಬೌದ್ಧಿಕ ಸ್ವತ್ತು, ವಿವಾದ ಇತ್ಯರ್ಥ, ಕೃಷಿ ಮತ್ತು ಜವಳಿಯಂಥ ವಲಯಗಳು ಇದರ ವ್ಯಾಪ್ತಿಗೆ ಬರುವಂತಾಯಿತು. ‘ದೋಹಾ ಸುತ್ತಿನ ಮಾತುಕತೆ’ ಎಂದೇ ಹೆಸರಾಗಿರುವ, ಇನ್ನೂ ಪೂರ್ಣಗೊಳ್ಳಬೇಕಿರುವ ಮುಂದಿನ ಸುತ್ತಿನ ಮಾತುಕತೆಗಳು, ಕಾರ್ವಿುಕ ಮಾನದಂಡಗಳು, ಪರಿಸರ ಸಂರಕ್ಷಣೆ, ಹೂಡಿಕೆ, ಪಾರದರ್ಶಕತೆ, ಪೇಟೆಂಟುಗಳು ಇತ್ಯಾದಿಯನ್ನೊಳಗೊಂಡಂತೆ ಮತ್ತಷ್ಟು ಪ್ರಗತಿ ಸಾಧಿಸಿದವು ಮತ್ತು ಒಟ್ಟು 159 ರಾಷ್ಟ್ರಗಳ ಸದಸ್ಯತ್ವ ಇದರ ವ್ಯಾಪ್ತಿಗೆ ಬರುವಂತಾಯಿತು. ಅನೇಕ ರಾಷ್ಟ್ರಗಳು ವಿನಿಯೋಗಿಸಿದ ಅಗಾಧ ಪ್ರಯತ್ನ ಹಾಗೂ ಮುಂದುವರಿಯುತ್ತಲೇ ಇರುವ ಚರ್ಚೆಗಳು, ‘ವಿಶ್ವ ವ್ಯಾಪಾರ’ ಎಂಬ ಪರಿಕಲ್ಪನೆ/ಚಟುವಟಿಕೆ ಒಳಗೊಂಡಿರುವ ಸಂರ್ಕೀಣತೆಗಳು ಮತ್ತು ಪ್ರಾಮುಖ್ಯಕ್ಕೆ ಒಂದು ಪುರಾವೆಯಾಗಿವೆ ಎನ್ನಲಡ್ಡಿಯಿಲ್ಲ.

ವಿವಿಧ ಕಾರಣಗಳಿಂದಾಗಿ, ವಿಶ್ವ ವ್ಯಾಪಾರವು 1950ರ ನಂತರ ಕ್ಷಿಪ್ರ ಬೆಳವಣಿಗೆಯನ್ನು ಕಂಡಿತು ಹಾಗೂ ಇಂಥದೊಂದು ಅಗಾಧ ಬೆಳವಣಿಗೆಯನ್ನು ನಿಯಂತ್ರಿಸುವಲ್ಲಿ ಗ್ಯಾಟ್ ಮತ್ತು ಗಖಣ ಗಣನೀಯ ಪಾತ್ರವನ್ನು ನಿರ್ವಹಿಸಿದವು. ಅಧ್ಯಯನವೊಂದು ತಿಳಿಸುವಂತೆ, 1945ರಲ್ಲಿ 100ರಷ್ಟಿದ್ದ ರಫ್ತುಸಂಖ್ಯೆಯು 4427ಕ್ಕೆ ಮುಟ್ಟಿದೆ; ಇದನ್ನು ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, 1950ರ ಅವಧಿಯಲ್ಲಿ 62 ಶತಕೋಟಿ ಡಾಲರ್​ನಷ್ಟು ಮೌಲ್ಯವನ್ನು ಹೊಂದಿದ್ದ ಜಾಗತಿಕ ರಫ್ತು ಚಟುವಟಿಕೆಗಳು, 2016ರಲ್ಲಿ 16 ಲಕ್ಷ ಕೋಟಿ ಡಾಲರ್​ನಷ್ಟು ಮಟ್ಟದವರೆಗೆ ಬೆಳೆದಿದ್ದು, ಇದು ಜಾಗತಿಕ ಜಿಡಿಪಿಯ ಶೇ. 20ಕ್ಕೂ ಮೀರಿದ ಪ್ರಮಾಣವನ್ನು ಬಿಂಬಿಸುತ್ತದೆ. ಜಾಗತಿಕ ವ್ಯಾಪಾರದ ವ್ಯಾಪನಾವೇಗ ಮತ್ತು ಅಗಾಧತೆಯು, ಜಾಗತಿಕ ಬೆಳವಣಿಗೆಯ ಮೇಲೆ ಗಣನೀಯ ಪ್ರಮಾಣವನ್ನೇ ಬೀರಿತು ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಿಶ್ವಸಮುದಾಯದ ಬಹುತೇಕರ ಯೋಗಕ್ಷೇಮಕ್ಕೂ ಕಾರಣವಾಯಿತು, ಮತ್ತು ಈ ಕಾರಣದಿಂದಾಗಿ ಈ ಬೆಳವಣಿಗೆಗೆ ಧಕ್ಕೆಯಾಗದಂತೆ ಶತಾಯಗತಾಯ ನೋಡಿಕೊಳ್ಳಬೇಕಾಗಿದೆ.

ಆದಾಗ್ಯೂ, ಸರಕು ಮತ್ತು ಸೇವೆಗಳ ಬೆಲೆ ತಗ್ಗಿಸಿ ಮಾಡುವ ರಫ್ತುಗಳಿಗೆ ಉತ್ತೇಜಿಸುವ ಮೂಲಕ ಕೆಲವೊಂದು ದೇಶಗಳು ನ್ಯಾಯೋಚಿತವಲ್ಲದ ರೀತಿಯಲ್ಲಿ ಪ್ರಯೋಜನ ಪಡೆದಿವೆ ಮತ್ತು ಇಂಥ ಪರಿಪಾಠದಿಂದಾಗಿ, ಆಮದುದಾರ ದೇಶಗಳ ಸ್ಥಳೀಯ ಆರ್ಥಿಕತೆಗಳ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ. ವಿನಿಮಯ ದರಗಳಲ್ಲಿ ಅನುಚಿತ ರೀತಿಯಲ್ಲಿ ಹೊಂದಾಣಿಕೆ ಮಾಡುವ ಮೂಲಕ ಹಾಗೂ ರಫ್ತುದಾರರಿಗೆ ಗುಪ್ತ ಸಬ್ಸಿಡಿಗಳನ್ನು ನೀಡುವ ಮೂಲಕ ಹೀಗೆ ಮಾಡಲಾಯಿತು. ಚೀನಾ, ಇಂಥದೊಂದು ಅನುಚಿತ ಪರಿಪಾಠದ ಅತಿದೊಡ್ಡ ಫಲಾನುಭವಿ ಎನ್ನಲಾಗಿದ್ದು, ತಾನು ವ್ಯಾಪಾರ ಸಂಬಂಧವಿಟ್ಟುಕೊಂಡಿರುವ ಬಹುತೇಕ ರಾಷ್ಟ್ರಗಳೊಂದಿಗೆ ‘ಹೆಚ್ಚುವರಿ ವ್ಯಾಪಾರ’ ಅಥವಾ ಖ್ಟಚಛಛಿ ಖ್ಠ್ಟlಠ ಸ್ಥಿತಿಯನ್ನು (ಅಂದರೆ ತಾನು ಮಾಡಿಕೊಳ್ಳುವ ಆಮದಿಗಿಂತ ರಫ್ತು ಪ್ರಮಾಣವೇ ಅಧಿಕವಾಗಿರುವಂಥ ಸ್ಥಿತಿ) ಅದು ಹೊಂದಿದೆ. ಈ ವಿದ್ಯಮಾನದಿಂದ ಹೆಚ್ಚು ವ್ಯತಿರಿಕ್ತ ಪರಿಣಾಮಕ್ಕೊಳಗಾಗಿರುವುದು ಅಮೆರಿಕ; 2017ರ ವರ್ಷಾವಧಿಯಲ್ಲಿ ಈ ದೇಶದ ಒಟ್ಟಾರೆ ವ್ಯಾಪಾರ ಕೊರತೆ (ಖ್ಟಚಛಛಿ ಈಛ್ಛಿಜ್ಚಿಜಿಠಿ) ಪ್ರಮಾಣವು ಸುಮಾರು 566 ಶತಕೋಟಿ ಡಾಲರ್​ನಷ್ಟಿದೆ ಮತ್ತು ಸರಕುಗಳ ವಲಯವೊಂದರಲ್ಲೇ ಈ ಪ್ರಮಾಣ 810 ಶತಕೋಟಿ ಡಾಲರ್​ನಷ್ಟಿದೆ. ಈ ಪೈಕಿ ಚೀನಾದ ಕೊಡುಗೆಯೇ ಸುಮಾರು 375 ಶತಕೋಟಿಯಷ್ಟಿದ್ದು, ಇದು ಹತ್ತತ್ತಿರ ಶೇ. 50ರಷ್ಟಾಗುತ್ತದೆ. ಈ ಅಗಾಧ ಅಸಮತೋಲನವು ಅಮೆರಿಕದಲ್ಲಿನ ತಯಾರಿಕಾ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಮತ್ತು ತತ್ಪರಿಣಾಮವಾಗಿ ಉದ್ಯೋಗಾವಕಾಶಗಳಿಗೂ ಧಕ್ಕೆಯಾಗಿದೆ.

ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ನಂತರ, ಈ ಪರಿಸ್ಥಿತಿಯನ್ನು ಸರಿಪಡಿಸಲೆಂದು ಆಯಾ ಕ್ಷೇತ್ರದಲ್ಲೇ ಕ್ರಮ ಕೈಗೊಳ್ಳುವಂತಾಗಬೇಕೆಂದು ವ್ಯಾಪಾರದ ಸಹಭಾಗಿಗಳೆಲ್ಲರಿಗೂ ಅಮೆರಿಕ ಎಚ್ಚರಿಸಿತ್ತು. ಅಧ್ಯಕ್ಷೀಯ ಚುನಾವಣಾ ಪ್ರಚಾರಭಾಷಣದ ವೇಳೆ ಟ್ರಂಪ್ ಈ ಚರ್ಚಾವಿಷಯವನ್ನು ಪ್ರಸ್ತಾಪಿಸಿದ್ದರು ಹಾಗೂ ತಯಾರಿಕಾ ವಲಯದಲ್ಲಿನ ಉದ್ಯೋಗ ನಷ್ಟಗಳಿಗೆ ಇತರ ದೇಶಗಳನ್ನು ನೇರವಾಗಿ ದೂಷಿಸಿದ್ದರು. ಚುನಾವಣೆಯಲ್ಲಿ ಗೆದ್ದಿದ್ದೇ ಆದಲ್ಲಿ, ಈ ವಲಯಗಳಲ್ಲಿ ನಷ್ಟವಾಗಿರುವ ಉದ್ಯೋಗಗಳನ್ನು ಮರಳಿ ತರುವುದಕ್ಕೆ ಆದ್ಯತೆ ನೀಡುವುದಾಗಿ ಅವರು ಭರವಸೆ ನೀಡಿದ್ದರು. ಅಮೆರಿಕ ಸಹಿ ಹಾಕಿರುವ ಘಅಊಖಅ (ಘಟ್ಟಠಿಜ ಅಞಛ್ಟಿಜ್ಚಿ್ಞ ಊಛಿಛಿ ಖ್ಟಚಛಛಿ ಅಜ್ಟಛಿಛಿಞಛ್ಞಿಠಿ) ರೀತಿಯ ವಿವಿಧ ವ್ಯಾಪಾರ ಒಪ್ಪಂದಗಳನ್ನು ಅವರು ಪ್ರಶ್ನಿಸಿದ್ದರು ಮತ್ತು ಈ ಒಪ್ಪಂದಗಳಿಂದಾಗಿ ಅಮೆರಿಕ ವ್ಯಾಪಾರ ನಷ್ಟವನ್ನು ಕಂಡಿದ್ದರೆ, ಇತರ ದೇಶಗಳು ಪ್ರಯೋಜನ ಪಡೆದುಕೊಂಡಿವೆ ಎಂದೂ ಅಭಿಪ್ರಾಯಪಟ್ಟಿದ್ದರು. ತಮ್ಮ ಪೂರ್ವವರ್ತಿಗಳು ಅತೀವ ಮೃದುಧೋರಣೆ ಹಾಗೂ ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯನ್ನೇ ಕಳೆದುಕೊಂಡಿದ್ದರು ಎಂದು ದೂಷಿಸಿದ ಅವರು, ಖ್ಟಚ್ಞಠ ಕಚ್ಚಜ್ಛಿಜ್ಚಿ ಒಡಂಬಡಿಕೆಯು ಅನುಷ್ಠಾನಗೊಳ್ಳದಂತೆ ತಡೆದರು.

ಅಮೆರಿಕ ಅಧ್ಯಕ್ಷರ ಈ ರಾಷ್ಟ್ರೀಯವಾದಿ ಮತ್ತು ಸಂರಕ್ಷಣಾತ್ಮಕ ದೃಷ್ಟಿಕೋನಕ್ಕೆ ಅಲ್ಲಿನ ಉದ್ಯಮವಲಯ ಮತ್ತು ಜನಸಮುದಾಯ ಭೇಷ್ ಎನ್ನಬಹುದೇನೋ. ಆದರೆ ಇಂಥ ಹಠಾತ್ತಾದ ಮತ್ತು ಏಕಪಕ್ಷೀಯವಾದ ಕ್ರಮವನ್ನು ವಿಶ್ವ ಸ್ವೀಕರಿಸುವುದಿಲ್ಲ. ಅಮೆರಿಕ ದುಂಡಾವರ್ತನೆಯ ನಿಲುವು ಅಪಾಯಕಾರಿಯಾಗಿದ್ದು, ಜಾಗತಿಕ ವ್ಯವಹಾರಕ್ಕೆ ಅದು ಧಕ್ಕೆಯುಂಟುಮಾಡಬಹುದು. ಅಮೆರಿಕದ ಮುಂಗಾಣಲಾಗದ ನಿರ್ಣಯಗಳು ಅತೀವ ಮಾರಕವಾಗಿ ಪರಿಣಮಿಸಬಹುದು ಹಾಗೂ ಅನೇಕ ದೇಶಗಳ ಆರ್ಥಿಕತೆಗಳಿಗೆ ಅದರಿಂದ ಸಂಚಕಾರ ಒದಗಬಹುದು. ಇಂಥ ಬೆಳವಣಿಗೆಗಳು, ಪರಸ್ಪರ ಸಹಕಾರದ ವ್ಯಾಪಾರ ಚಟುವಟಿಕೆಗಳಿಗೆ ಅನುವುಮಾಡಿಕೊಡುವಲ್ಲಿ ವಿಶ್ವ ವ್ಯಾಪಾರ ಸಂಘಟನೆಯ ಮಹತ್ವವನ್ನೂ ಕುಗ್ಗಿಸುತ್ತವೆ.

ವಿಶ್ವ ವ್ಯಾಪಾರ ವಲಯಕ್ಕೆ ಎದುರಾಗಿರುವ ಈ ಸವಾಲು ಕೆಲವೇ ದಿನಗಳಲ್ಲಿ ಇಲ್ಲವಾಗಿ ಸುವ್ಯವಸ್ಥೆ ಮತ್ತೆ ಕಂಡುಬರಲಿದೆ ಎಂದು ಆಶಿಸೋಣ.

(ಲೇಖಕರು ಆರ್ಥಿಕ ತಜ್ಞರು)

Leave a Reply

Your email address will not be published. Required fields are marked *

Back To Top