ಕುಂಭಮೇಳದ ಆರ್ಥಿಕ ಆಯಾಮಗಳು

ಪ್ರಯಾಗರಾಜ ಕುಂಭಮೇಳಕ್ಕೆ 20-25 ಕೋಟಿ ಜನರು ಭೇಟಿ ನೀಡಿದರು ಎಂದಿಟ್ಟುಕೊಂಡರೆ, ಪ್ರತಿಯೊಬ್ಬರೂ ಕನಿಷ್ಠ 1 ಸಾವಿರ ರೂ. ಖರ್ಚು ಮಾಡಿದ್ದಾರೆಂದು ಲೆಕ್ಕಹಾಕಿದರೂ ಏನಿಲ್ಲೆಂದರೂ 25 ಸಾವಿರ ಕೋಟಿ ರೂ.ಗಳಾಗುತ್ತವೆ. ಪ್ರಾಥಮಿಕ ಹಂತದಲ್ಲಿ ಇತರ ಯಾವುದೇ ಆರ್ಥಿಕ ಚಟುವಟಿಕೆಯೂ ಇಂಥ ದ್ವಿಗುಣ ಪರಿಣಾಮವನ್ನು ಉಂಟುಮಾಡಲಾರದು.

ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿ ಈಚೆಗಷ್ಟೆ ಅರ್ಧ ಕುಂಭಮೇಳ ಸಂಪನ್ನಗೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಅವಧಿಯಲ್ಲಿ ಇಲ್ಲಿಗೆ ಬಂದ ಯಾತ್ರಾರ್ಥಿಗಳು ಎಷ್ಟು ಎಂಬುದರ ಕುರಿತು ಉ.ಪ್ರ. ಸರ್ಕಾರ ನೀಡಿರುವ ಅಂಕಿಅಂಶ ನೋಡಿದರೆ ದಂಗುಬಡಿಯುವಂತಿದೆ. ಕುಂಭಮೇಳದ ಕೊನೆಯ ದಿನದಂದು ಮಾಧ್ಯಮಗಳಲ್ಲಿ ಪ್ರಕಟವಾದ ಮಾಹಿತಿ ಪ್ರಕಾರ, ಈ ಮಹೋತ್ಸವದಲ್ಲಿ ಭಾಗವಹಿಸಿದವರ ಸಂಖ್ಯೆ ಸರಿಸುಮಾರು 20 ಕೋಟಿ! ವಾಸ್ತವದಲ್ಲಿ, ಇದರ ಅರ್ಧದಷ್ಟು ಜನರು ಸೇರಬಹುದೆಂದು ಮೊದಲು ಅಂದಾಜಿಸಲಾಗಿತ್ತು. ಆದರೆ ಎಲ್ಲರ ನಿರೀಕ್ಷೆಯನ್ನೂ ಮೀರಿ ಜನಸಾಗರವೇ ಹರಿದುಬಂತು. 2013ರ ಕುಂಭಮೇಳದಲ್ಲಿ ಸುಮಾರು 13 ಕೋಟಿ ಜನರು ಭಾಗಿಯಾಗಿದ್ದರು. ಇದು ಮನುಕುಲದ ಮಹಾಮೇಳವಾಗಿ ದಾಖಲಾಗಿರುವುದು ಭಾರತೀಯರಾದ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.

ಇಂಥ ಮಹಾಮೇಳವು ಸಹಜವಾಗಿಯೇ ಆ ಪ್ರದೇಶ ಮತ್ತು ಒಟ್ಟಾರೆಯಾಗಿ ದೇಶದ ಮೇಲೆ ಆರ್ಥಿಕ-ಸಾಮಾಜಿಕ ಪರಿಣಾಮಗಳನ್ನು ಉಂಟುಮಾಡುತ್ತದೆ. ನಾನು ಈ ಅಂಕಣದಲ್ಲಿ ಕುಂಭಮೇಳದ ಆರ್ಥಿಕ ಪರಿಣಾಮಗಳನ್ನು ಮತ್ತು ಇಂಥ ಮಹಾ ಕಾರ್ಯಕ್ರಮವನ್ನು ಸಂಘಟಿಸುವ ದೇಶದ ಶಕ್ತಿ, ಸಂಘಟನಾ ಸಾಮರ್ಥ್ಯ ಮತ್ತು ಜಾರಿಗೊಳಿಸುವಂತಹ ನೈಪುಣ್ಯವನ್ನು ವಿವರಿಸಲು ಇಷ್ಟಪಡುತ್ತೇನೆ.

ಅರ್ಧ ಕುಂಭಮೇಳವು ಒಟ್ಟು 55 ದಿನಗಳ ಕಾಲ ನಡೆಯಿತು. ಮೇಳದ ಭೇಟಿ ಮತ್ತು ಪುಣ್ಯಸ್ನಾನಕ್ಕಾಗಿ ಆಗೀಗ ಕೆಲ ವಿಶಿಷ್ಟ ದಿನಗಳನ್ನು ಗುರುತಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶ ಸರ್ಕಾರ ಒದಗಿಸಿದ ಹಣದ ಮೊತ್ತ 4,200 ಕೋಟಿ ರೂ.ಗಳು. 2013ರ ಕುಂಭಮೇಳಕ್ಕಿಂತ ಇದು ಎರಡು ಪಟ್ಟು ಹೆಚ್ಚು ಮೊತ್ತ. ಕುಂಭಮೇಳಕ್ಕೆ ಶಾಶ್ವತ ಸ್ಥಾನಮಾನ ನೀಡುವ ಉದ್ದೇಶದಿಂದ ಉ.ಪ್ರ. ವಿಧಾನಸಭೆಯಿಂದ ವಿಶೇಷ ಪ್ರಾಧಿಕಾರ ಸ್ಥಾಪಿಸಲಾಯಿತು. ಈ ಶಾಸನಾತ್ಮಕ ಕುಂಭ ಪ್ರಾಧಿಕಾರವು ಆ ಪ್ರದೇಶದಲ್ಲಿ ಸುಮಾರು 200 ಬಗೆಯ ಯೋಜನೆಗಳನ್ನು ಕೈಗೆತ್ತಿಕೊಂಡಿತು. ರಸ್ತೆಗಳು, ಉದ್ಯಾನಗಳು, ದೀಪದ ವ್ಯವಸ್ಥೆ, ಶೌಚ ವ್ಯವಸ್ಥೆ, ಕುಡಿಯುವ ನೀರು, ತಾತ್ಕಾಲಿಕ ಟೆಂಟ್​ಗಳು, ವೈದ್ಯಕೀಯ ಸವಲತ್ತು, ವಿಶ್ರಾಂತಿ ಕೊಠಡಿಗಳು, ವ್ಯಾಪಾರಿ ಸ್ಥಳಗಳು, ಕಾನೂನು-ಸುವ್ಯವಸ್ಥೆ ಮುಂತಾದವು ಇದರಲ್ಲಿ ಸೇರಿದ್ದವು.

ಇಷ್ಟೆಲ್ಲ ಜನರು ಸೇರುವ ಮತ್ತು ಜನರಿಂದ ನಡೆಯುವ ಕಾರ್ಯಕ್ರಮದಲ್ಲಿ ಸರ್ಕಾರಿ ಸಂಸ್ಥೆಗಳು ಮಾಡುವ ವ್ಯವಸ್ಥೆ ಸಾಮಾನ್ಯವಾಗಿ ಅಹಿತಕರ ಅನುಭವ ಉಂಟುಮಾಡುತ್ತದೆ ಮತ್ತು ವ್ಯವಸ್ಥೆಯ ಬಗ್ಗೆ ಸಂದೇಹಗಳೂ ಬಾಧಿಸುತ್ತವೆ. ಇದು ಬಹುತೇಕ ನಮ್ಮೆಲ್ಲರ ಅನುಭವ. ಆದರೆ ಈ ಕುಂಭಮೇಳ ಈ ಮಾತಿಗೆ ಅಪವಾದವಾಗಿತ್ತು. ಈ ಪಾಟಿ ಬೃಹತ್ ಮತ್ತು ಸಂಕೀರ್ಣ ಕಾರ್ಯಕ್ರಮವನ್ನು ಕಿಂಚಿತ್ತೂ ಲೋಪವಿಲ್ಲದಂತೆ ಸಾಂಗವಾಗಿ ನೆರವೇರಿಸಲಾಯಿತು ಎಂಬುದು ಅಚ್ಚರಿಯೇ ಸರಿ.

ಪ್ರಯಾಗರಾಜ ಕುಂಭಮೇಳದಲ್ಲಿ ಎರಡು ದಿನ ಭಾಗವಹಿಸುವ ಅದೃಷ್ಟ ನನ್ನದಾಗಿತ್ತು. ಸರ್ಕಾರದ ವಿವಿಧ ಅಂಗಸಂಸ್ಥೆಗಳು ಸೇರಿ ಈ ಬೃಹತ್ ಕಾರ್ಯಕ್ರಮವನ್ನು ಎಷ್ಟು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದವೆನ್ನುವುದು ನನ್ನ ಅನುಭವಕ್ಕೆ ಬಂತು. ಅಂದಾಜಿಗಿಂತ ಎರಡು ಪಟ್ಟು ಹೆಚ್ಚು ಜನರು ಕುಂಭಮೇಳಕ್ಕೆ ಬಂದಿದ್ದರಿಂದ ಅಧಿಕಾರಿಗಳೆದುರಿನ ಸವಾಲು ಸಾಮಾನ್ಯವಾದುದಾಗಿರಲಿಲ್ಲ.

ಹಾಗೆ ನೋಡಿದರೆ, ಈ ಭಾರಿ ಕಾರ್ಯಕ್ರಮದ ಸ್ವರೂಪವೇ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗುವಂತೆ ಮಾಡಿತೆನ್ನಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ, ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತಿತರ ಗಣ್ಯರು ಮೇಳದ ವಿವಿಧ ದಿನಗಳಲ್ಲಿ ಭೇಟಿ ನೀಡಿದ್ದರಿಂದ ಬಿಗಿ ಭದ್ರತಾ ವ್ಯವಸ್ಥೆಯ ಸವಾಲೂ ಇತ್ತು. ಇದರಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೂ ತೊಂದರೆ ಕಟ್ಟಿಟ್ಟಬುತ್ತಿಯಾಗಿತ್ತು. ಇಂಥ ಕಠಿಣ ಸವಾಲನ್ನು ವೃತ್ತಿಪರವಾಗಿ ಯಶಸ್ವಿಯಾಗಿ ನಿಭಾಯಿಸಿದ ಕುಂಭಮೇಳದ ಆಯೋಜಕರಿಗೆ ನಿಶ್ಚಿತವಾಗಿ ಪೂರ್ಣಾಂಕಗಳು ಸಲ್ಲಬೇಕು.

ಈ ಕುಂಭಮೇಳದ ಮತ್ತೊಂದು ವೈಶಿಷ್ಟ್ಯವೆಂದರೆ, ಸ್ವಚ್ಛತೆ. ಈ ಕಾರ್ಯದಲ್ಲಿ ತೊಡಗಿದ ಸಿಬ್ಬಂದಿ ಜತೆಗೆ, ಇಂಥ ಸ್ಥಳದಲ್ಲಿ ನೈರ್ಮಲ್ಯದ ಮಹತ್ವ ಅರಿತು ಅದರಂತೆ ನಡೆದುಕೊಂಡ ಕೋಟ್ಯಂತರ ಜನರಿಗೂ ಈ ಯಶಸ್ಸಿನಲ್ಲಿ ಪಾಲು ಸಿಗಬೇಕು. ಇದು ನಮ್ಮ ಜನರಲ್ಲಿನ ವರ್ತನೆಯಲ್ಲಿನ ಬದಲಾವಣೆಯನ್ನು ದರ್ಶಿಸುತ್ತದೆ ಎಂದರೆ ಅತಿಶಯೋಕ್ತಿಯಲ್ಲ.

ಇನ್ನು, ಈ ಮಹಾಮೇಳದ ಆರ್ಥಿಕ ಆಯಾಮಗಳತ್ತ ನೋಡೋಣ. ಪ್ರಯಾಗರಾಜ ಕುಂಭಮೇಳಕ್ಕೆ 20-25 ಕೋಟಿ ಜನರು ಭೇಟಿ ನೀಡಿದರು ಎಂದಿಟ್ಟುಕೊಂಡರೆ, ಪ್ರತಿಯೊಬ್ಬರೂ ಕನಿಷ್ಠ 1 ಸಾವಿರ ರೂ. ಖರ್ಚು ಮಾಡಿದ್ದಾರೆಂದು ಲೆಕ್ಕಹಾಕಿದರೂ ಏನಿಲ್ಲೆಂದರೂ 25 ಸಾವಿರ ಕೋಟಿ ರೂ.ಗಳಾಗುತ್ತವೆ. ಸರ್ಕಾರ ವ್ಯಯಿಸಿದ ಹಣದ ಮೊತ್ತದಲ್ಲಿ ತಲಾ ಅರ್ಧ ಬಂಡವಾಳ ಮತ್ತು ಆದಾಯ ಎಂದಿಟ್ಟುಕೊಂಡರೂ, ಇದು ಆ ಮೊತ್ತಕ್ಕಿಂತ ಹತ್ತು ಪಟ್ಟು ಅಧಿಕ. ಪ್ರಾಥಮಿಕ ಹಂತದಲ್ಲಿ ಇತರ ಯಾವುದೇ ಆರ್ಥಿಕ ಚಟುವಟಿಕೆಯೂ ಇಂಥ ದ್ವಿಗುಣ ಪರಿಣಾಮವನ್ನು ಉಂಟುಮಾಡಲಾರದು. ಇಷ್ಟೇ ಅಲ್ಲ, ಕುಂಭಮೇಳಕ್ಕೆ ಬಂದವರಲ್ಲಿ ಅನೇಕರು ಆಸುಪಾಸಿನ ವಾರಾಣಸಿ ಮತ್ತಿತರ ತಾಣಗಳಿಗೂ ಭೇಟಿನೀಡಿದರು. ಇದರಿಂದ ಆಯಾ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಆದಾಯವೂ ಬಂತು. ಹೀಗಾಗಿ ಇದನ್ನೊಂದು ನಿರಂತರ ಆರ್ಥಿಕ ಚಟುವಟಿಕೆಯನ್ನಾಗಿ ಮಾಡಲು ಉತ್ತರ ಪ್ರದೇಶ ಸರ್ಕಾರಕ್ಕೆ ಈ ಕುಂಭಮೇಳವು ಅವಕಾಶದ ಬಾಗಿಲನ್ನು ತೆರೆದಿದೆಯೆಂದರೆ ಅತಿಶಯದ ಮಾತೇನೂ ಆಗಲಾರದು.

ಧಾರ್ವಿುಕ ತಾಣಗಳ ಭೇಟಿ ಹೇಗೆ ಭಾರಿ ಆರ್ಥಿಕ ಅವಕಾಶವೂ ಆಗಬಲ್ಲದೆಂಬುದನ್ನು ಮೆಕ್ಕಾ ಮತ್ತು ಮದೀನಾ ಹಜ್ ಯಾತ್ರೆ ಮೂಲಕ ಸೌದಿ ಅರೇಬಿಯಾ ಸರ್ಕಾರ ತೋರಿಸಿಕೊಟ್ಟಿದೆ. ಹಜ್ ಯಾತ್ರೆಯ ಮುಖಾಂತರ ಸೌದಿ ಸರ್ಕಾರ ವಾರ್ಷಿಕ ಸುಮಾರು 25 ಶತಕೋಟಿ ಡಾಲರ್ ಆದಾಯ ಗಳಿಸುತ್ತದೆ. ಆ ದೇಶದಲ್ಲಿ ತೈಲ ಹೊರತುಪಡಿಸಿದರೆ ಎರಡನೇ ದೊಡ್ಡ ಆದಾಯ ಮೂಲ ಇದು. ವಾರ್ಷಿಕ ಹಜ್ ಯಾತ್ರಿಗಳ ಸಂಖ್ಯೆ ಸುಮಾರು 20 ಲಕ್ಷ. ಇಷ್ಟು ಗಾತ್ರದಿಂದಲೇ ಈ ಬೃಹತ್ ಆದಾಯವನ್ನು ಸೌದಿ ಸರ್ಕಾರ ಕ್ರೋಡೀಕರಿಸುತ್ತದೆ. 2030ರ ವೇಳೆಗೆ ಹಜ್ ಯಾತ್ರಿಕರ ಸಂಖ್ಯೆ ಮೂರು ಕೋಟಿಗೆ ಏರುತ್ತದೆ ಎಂದು ಲೆಕ್ಕಿಸಿರುವ ಸೌದಿ ಆಡಳಿತ, ಆ ಮೂಲಕ 150 ಶತಕೋಟಿ ಡಾಲರ್ ಆದಾಯ ಗಳಿಸುವ ಮುನ್ನಂದಾಜು ಮಾಡಿದೆ.

ಮತ್ತೆ ಭಾರತದ ವಿಷಯಕ್ಕೆ ಬರೋಣ. ಅನಿವಾಸಿ ಭಾರತೀಯರು (ಎನ್​ಆರ್​ಐ) ವಿಶ್ವದ ಎಲ್ಲ ದೇಶಗಳಲ್ಲಿ ನೆಲೆಸಿದ್ದಾರೆ. ನಮ್ಮ ವಿದೇಶಾಂಗ ಸಚಿವಾಲಯದ ಪ್ರಕಾರ ಈ ಸಂಖ್ಯೆ ಸುಮಾರು 3.2 ಕೋಟಿ. ಇಂಥ ಎನ್​ಆರ್​ಐಗಳು ಸಾಮಾನ್ಯವಾಗಿ ಆರ್ಥಿಕವಾಗಿ ಸಬಲರಾಗಿರುತ್ತಾರೆ. ಹೀಗಾಗಿ ಇವರನ್ನು ನಾವು ಧಾರ್ವಿುಕ ಪ್ರವಾಸೋದ್ಯಮದ ದೃಷ್ಟಿಯಿಂದ ಪರಿಭಾವಿಸಬಹುದಾಗಿದೆ. ಭಾರತದಲ್ಲಿ ಮಧ್ಯಮವರ್ಗದವರ ಪ್ರಮಾಣ ಏರುತ್ತಿದೆ ಮತ್ತು ಇವರ ಪ್ರಯಾಣ ಹವ್ಯಾಸ ಕೂಡ ಬದಲಾಗುತ್ತಿದೆ. ದೇಶೀ ಮತ್ತು ಅಂತಾರಾಷ್ಟ್ರೀಯ ವಿಮಾನಯಾನಗಳಲ್ಲಿನ ಭಾರಿ ಹೆಚ್ಚಳವೇ ಈ ಮಾತಿಗೆ ಸಾಕ್ಷಿ. ಹೀಗಾಗಿ ಈ ವಲಯದಲ್ಲಿ ಆರ್ಥಿಕ ಚಟುವಟಿಕೆಗೆ ಎಷ್ಟು ಅವಕಾಶವಿದೆ ಎಂಬುದು ಯಾರಿಗಾದರೂ ಮನವರಿಕೆಯಾಗುವಂತಿದೆ. ಆದ್ದರಿಂದ ಈ ವಲಯವು ದೇಶಕ್ಕೀಗ ತುರ್ತಾಗಿ ಅಗತ್ಯವಿರುವ ಉದ್ಯೋಗಸೃಷ್ಟಿಯನ್ನು ಕೆಲಮಟ್ಟಿಗೆ ಮಾಡಬಲ್ಲದು. ಏಕೆಂದರೆ, ಆರ್ಥಿಕ ಚಟುವಟಿಕೆಯ ಪ್ರತಿ ಪೈಸೆಗೂ ಈ ವಲಯವು ಹೆಚ್ಚಿನ ಉದ್ಯೋಗಾವಕಾಶ ಸೃಜಿಸಬಲ್ಲದು. ಹೀಗಾಗಿ ಪ್ರಯಾಗರಾಜದ ಕುಂಭಮೇಳದಲ್ಲಿನ ಅನುಭವವನ್ನು ಆಧಾರವಾಗಿಟ್ಟುಕೊಂಡು ಸಂಬಂಧಫಟ್ಟ ಅಧಿಕಾರಿಗಳು ಈ ವಿಷಯದಲ್ಲಿ ಕ್ರಿಯಾಶೀಲತೆ ಮತ್ತು ವೃತ್ತಿಪರತೆ ಪ್ರದರ್ಶಿಸಬೇಕು. ಅಷ್ಟಕ್ಕೂ ಇದರಿಂದ ಒಳಿತಾಗುವುದು ದೇಶಕ್ಕೇ ಅಲ್ಲವೆ…

(ಲೇಖಕರು ಆರ್ಥಿಕ ತಜ್ಞರು)