ಆರ್ಥಿಕ ಬಲಿಷ್ಠ ಭಾರತದತ್ತ…

ಹೊಸವರ್ಷ ಬಂದಿದೆ. ಸದ್ಯದಲ್ಲೇ ನಡೆಯಲಿರುವ ಲೋಕಸಭಾ ಚುನಾವಣೆಯ ಕಾರಣದಿಂದಾಗಿ ಇದಕ್ಕೊಂದು ವಿಶೇಷ ಮಹತ್ವವೂ ದಕ್ಕಿಬಿಟ್ಟಿದೆಯೆನ್ನಿ. ಅರ್ಥಶಾಸ್ತ್ರ ಮತ್ತು ರಾಜಕೀಯ ಕ್ಷೇತ್ರಗಳು ಪರಸ್ಪರ ಪ್ರಭಾವ ಬೀರಬಲ್ಲಷ್ಟರಮಟ್ಟಿಗೆ ಗಟ್ಟಿಯಾಗಿ ತಳುಕುಹಾಕಿಕೊಂಡಿರುವುದು ಗೊತ್ತಿರುವ ಸಂಗತಿಯೇ. ಹೀಗಾಗಿ ಹೊಸವರ್ಷವೊಂದರ ಉದಯವಾಗುತ್ತಿದ್ದಂತೆ ಅನೇಕ ವಿಷಯಗಳ ಕುರಿತಾಗಿ ಚಿಂತನ-ಮಂಥನ ನಡೆಸಿ ಬರೆಯುವುದು ಅನೇಕ ಅಂಕಣಕಾರರ ಪಾಲಿಗೆ ‘ಸಂಪ್ರದಾಯ-ಸಂಹಿತೆ’ಯೇ ಆಗಿಬಿಡುತ್ತದೆ.

ಕಳೆದ ವರ್ಷ ಜಿಡಿಪಿ ಸಂಖ್ಯೆಯು 2.7 ಟ್ರಿಲಿಯನ್ ಡಾಲರ್ ಮಟ್ಟ ಮುಟ್ಟಿದ್ದು, ಸದ್ಯೋಭವಿಷ್ಯದಲ್ಲಿ ಅದು 5 ಟ್ರಿಲಿಯನ್ ಮಟ್ಟವನ್ನು ಮುಟ್ಟುವಂತಾಗುವುದನ್ನು ಕಾಣುವಾಸೆ ನನಗೆ. 1975ರ ಕಾಲಘಟ್ಟದಲ್ಲಿ ಸುಮಾರು 0.5 ಟ್ರಿಲಿಯನ್ ಡಾಲರ್​ನಷ್ಟಿದ್ದ ಭಾರತದ ಜಿಡಿಪಿ, ಪ್ರಸಕ್ತ ಮಟ್ಟಕ್ಕೆಬರಲು ಸುಮಾರು 40 ವರ್ಷಗಳನ್ನೇ ತೆಗೆದುಕೊಂಡಿದೆ. ಆದರೆ 5 ಟ್ರಿಲಿಯನ್ ಡಾಲರ್ ಘಟ್ಟವನ್ನು ಮುಟ್ಟಲು ಭಾರತ 2025ರ ವರ್ಷವನ್ನು ಗುರಿಯಾಗಿಸಿಕೊಳ್ಳಬೇಕಾಗುತ್ತದೆ. ಇದು ಕೈಗೂಡುವುದೇ? ಮುಂಬರುವ 7 ವರ್ಷಗಳಲ್ಲಿ ವಾರ್ಷಿಕ ಶೇ. 10ರ ಏಕಪ್ರಕಾರದ ಬೆಳವಣಿಗೆಯನ್ನು ಭಾರತೀಯ ಆರ್ಥಿಕತೆ ಕಾಯ್ದುಕೊಂಡಿದ್ದೇ ಆದಲ್ಲಿ, ಈ ಗುರಿಸಾಧನೆ ಕಷ್ಟವೇನಲ್ಲ. ಪ್ರಸ್ತುತ ವಾರ್ಷಿಕ ಶೇ. 7.5ರ ಬೆಳವಣಿಗೆಯ ಭಾರತದ ಆರ್ಥಿಕತೆಗೆ, ಶೇ. 10ರ ಗುರಿ ತಲುಪಲಾಗದ್ದೇನೂ ಅಲ್ಲ ಎನ್ನಬಹುದು. ಸುದೀರ್ಘ ಕಾಲಾವಧಿವರೆಗೆ ಎರಡಂಕಿ ಪ್ರಮಾಣ ಸಾಧನೆ ಮೂಲಕ ನೆರೆರಾಷ್ಟ್ರ ಚೀನಾ ಇದನ್ನು ನಿದರ್ಶಿಸಿದೆ. ಪ್ರಸ್ತುತ ಭಾರತದಲ್ಲಿ ಕಾಣಬರುತ್ತಿರುವ ರೀತಿಯಲ್ಲೇ, ತನ್ನ ಜಿಡಿಪಿ ನೆಲಗಟ್ಟೂ ತಗ್ಗಿರುವಾಗಲೇ ಚೀನಾ ಇಂಥದೊಂದು ಹೆಚ್ಚಿನ ಬೆಳವಣಿಗೆಯನ್ನು ಸಾಧಿಸಿರುವುದೇ, ಈ ಹೋಲಿಕೆಗೆ ಪ್ರೇರಣೆ.

ಭಾರತದ ಆರ್ಥಿಕತೆ ಒಂದು ಏರಿಳಿತದ ಘಟ್ಟದಲ್ಲಿದ್ದು, ಎರಡಂಕಿ ಪ್ರಮಾಣಕ್ಕೆ ಬೆಳವಣಿಗೆಯನ್ನು ವರ್ಧಿಸಿಕೊಳ್ಳುವುದಕ್ಕೆ ಸಿದ್ಧವಾಗಿದೆ. ಕೇಂದ್ರದಲ್ಲಿರುವ ನೀತಿ-ನಿರೂಪಕರು ಮತ್ತು ಎಲ್ಲ ರಾಜ್ಯಗಳು ಈ ಉದ್ದೇಶದಲ್ಲಿ ನಂಬಿಕೆಯಿಟ್ಟು, ಮುಂಬರುವ 7 ವರ್ಷಗಳವರೆಗೆ ಅವಿರತ ಶ್ರಮಿಸಿದಲ್ಲಿ ಮಾತ್ರವೇ ಇದು ನೆರವೇರಬಲ್ಲದು.

ಎಲ್ಲಕ್ಕಿಂತ ಮುಖ್ಯವಾಗಿ, ಪ್ರಯಾಣಿಕ ಸಾಗಣೆ ಉದ್ಯಮದಲ್ಲಿ ಮಹತ್ವದ ಬದಲಾವಣೆ ಅಥವಾ ಸುಧಾರಣೆ ಆಗಬೇಕಿದೆ. ಪ್ರಸ್ತುತ, ಬಹುತೇಕ ಪ್ರಯಾಣಿಕ ರಸ್ತೆ ಸಾರಿಗೆ ವ್ಯವಸ್ಥೆಯನ್ನು ರಾಜ್ಯ ಸರ್ಕಾರಗಳು ನಡೆಸುತ್ತಿವೆ ಮತ್ತು ನಿಯಂತ್ರಿಸುತ್ತಿವೆ. ರಸ್ತೆ ಸಾರಿಗೆ ವ್ಯವಸ್ಥೆಯು ಸರಕು ಮತ್ತು ಪ್ರಯಾಣಿಕರ ಗ್ರಾಮೀಣ ಮತ್ತು ಅರೆನಗರ ಸಾಗಣೆ ಸಂಬಂಧಿತ ಮೂಲಭೂತ ವ್ಯವಸ್ಥೆಯ ಬೆನ್ನೆಲುಬೇ ಆಗಿಬಿಟ್ಟಿದೆ. ಸರಕು ಸಾಗಣೆ ವ್ಯವಸ್ಥೆ ಖಾಸಗಿ ವಲಯದವರ ಕೈಲಿದೆ. ಇನ್ನು, ಸರ್ಕಾರಿ ನಿಯಂತ್ರಣದ ಅದಕ್ಷ ಸಾರಿಗೆ ಸಂಸ್ಥೆಗಳ ನಡೆಗಳನ್ನು ಸಹಿಸಿಕೊಂಡು ಅವುಗಳ ಮೇಲೆಯೇ ಸಾರ್ವಜನಿಕರು ಅವಲಂಬಿತರಾಗಬೇಕಾಗಿರುವುದು ವಿಡಂಬನೆಯಲ್ಲದೆ ಮತ್ತೇನು? ಖಾಸಗಿ ವಲಯದ ಭಾಗಿತ್ವಕ್ಕೆ ಅವಕಾಶ ನೀಡಿದ ನಂತರದಲ್ಲಿ ವಾಯುಯಾನ ವಲಯದ ಬೆಳವಣಿಗೆ ಹೇಗಾಯ್ತು ಎಂಬುದನ್ನೇ ಒಮ್ಮೆ ಪರಿಗಣಿಸಿ; ಪ್ರಯಾಣಿಕ ರಸ್ತೆಸಾರಿಗೆ ವಲಯವನ್ನೂ ಒಂದೊಮ್ಮೆ ಖಾಸಗಿ ವಲಯಕ್ಕೆ ಮುಕ್ತವಾಗಿಸಿದಲ್ಲಿ ಇಂಥದೇ ಬದಲಾವಣೆ ಸಾಧ್ಯವಿದೆ. ರಸ್ತೆಸಾರಿಗೆಗೂ, ವಾಯುಯಾನ ವಲಯಕ್ಕೂ ಕೊಂಚ ವ್ಯತ್ಯಾಸವಿದೆ ಎಂಬುದು ನಿಜ; ಏಕೆಂದರೆ ಇಂಥದೊಂದು ಸುಧಾರಣೆಗೆ ಎಲ್ಲ ರಾಜ್ಯ ಸರ್ಕಾರಗಳು ಪ್ರಯತ್ನಶೀಲವಾಗಬೇಕಾಗುತ್ತದೆ. ಹೀಗಿದ್ದರೂ, ಈ ವಲಯವು ಜಿಡಿಪಿಯ ಸರಾಸರಿ ಬೆಳವಣಿಗೆಗೆ ಸುಮಾರು ಶೇಕಡ ಒಂದರಿಂದ ಒಂದೂವರೆಯಷ್ಟು ಅಂಶಗಳನ್ನು ಸುಲಭವಾಗಿ ಸೇರಿಸಬಲ್ಲದು ಹಾಗೂ ಭಾರಿ ವಾಹನಗಳು, ಗ್ರಾಮೀಣ ರಸ್ತೆಗಳು, ಸ್ವದೇಶಿ ಪ್ರವಾಸೋದ್ಯಮ, ಆತಿಥ್ಯದ ಉದ್ಯಮ ಇವೇ ಮೊದಲಾದ, ತಯಾರಿಕಾ ಮತ್ತು ಸೇವಾವಲಯದ ವೈವಿಧ್ಯಮಯ ಉದ್ಯಮಗಳಿಗೆ ಭಾರಿಬಲವನ್ನು ತುಂಬಬಲ್ಲದು. ಇವು ‘ಕಾರ್ವಿುಕ-ಕೇಂದ್ರಿತ’ ವಲಯಗಳಾಗಿದ್ದು, ಗಣನೀಯ ಪ್ರಮಾಣದಲ್ಲಿ ಉದ್ಯೋಗಾವಕಾಶವನ್ನು ಹುಟ್ಟುಹಾಕುವಲ್ಲಿ ಆರ್ಥಿಕತೆಗೆ ನೆರವಾಗಬಲ್ಲವು.

2017ರ ವರ್ಷಾವಧಿಯಲ್ಲಿ, ವಿಶ್ವಾದ್ಯಂತ ದಾಖಲಾಗಿರುವ 1.3 ಶತಕೋಟಿ ಪ್ರವಾಸಿಗರ ಪೈಕಿ ಭಾರತಕ್ಕೆ ಭೇಟಿಯಿತ್ತ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ 15 ದಶಲಕ್ಷ ಮಾತ್ರ. ಸೊಗಸಾದ ಪ್ರವಾಸಿ ತಾಣಗಳನ್ನು ಮಡಿಲಲ್ಲಿರಿಸಿಕೊಂಡಿರುವ ಭಾರತಕ್ಕೆ ಭೇಟಿನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಶೇ. 1ರ ಆಸುಪಾಸಿನಲ್ಲಿರುವುದು ಅವಮಾನಕರ ಸಂಗತಿಯಲ್ಲವೇ? ಹಾಂಕಾಂಗ್, ಸಿಂಗಾಪುರದಂಥ ನಗರಗಳು ಪ್ರವಾಸೋದ್ಯಮದ ವಿಷಯದಲ್ಲಿ ಭಾರತಕ್ಕಿಂತ ಉತ್ತಮ ಸಾಧನೆ ಮೆರೆಯುತ್ತಿವೆ. ಉದ್ಯೋಗಾವಕಾಶಗಳು, ವಿದೇಶಿ ವಿನಿಮಯದ ಗಳಿಕೆ ಮತ್ತು ಜಿಡಿಪಿಯಂಥ ಬಾಬತ್ತುಗಳಲ್ಲಿ ಈ ವಲಯವು ಭಾರತೀಯ ಆರ್ಥಿಕತೆಯ ಬೆಳವಣಿಗೆಗೆ ಕಾರಣವಾಗುವ ಅಗಾಧ ಸಾಮರ್ಥ್ಯದ ವಲಯಗಳಲ್ಲಿ ಒಂದೆನಿಸಿಕೊಂಡಿದೆ. ಭಾರತ ಈ ಕ್ಷೇತ್ರದೆಡೆಗೆ ಒತ್ತುನೀಡಬೇಕಿದೆ. ಕೇಂದ್ರದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರವು, ಈ ವಲಯಕ್ಕೆ ಒತ್ತಾಸೆಯಾಗಿ ನಿಲ್ಲಲೆಂದು ಒಂದಷ್ಟು ಸಕಾರಾತ್ಮಕ ಹೆಜ್ಜೆಗಳನ್ನಿರಿಸಿದೆ. ಭಾರತ-ಭೇಟಿಗೆ ಬರುವವರ ವೀಸಾ ನೀಡಿಕೆಯ ವಿಧಿವಿಧಾನಗಳನ್ನು ಸರಳೀಕರಿಸಲಾಗಿದ್ದು, ವಿದೇಶಿ ಪ್ರವಾಸಿಗರು ವಿಮಾನ ನಿಲ್ದಾಣದಲ್ಲಿನ ಆಗಮನ ವಿಭಾಗದಲ್ಲೇ ವೀಸಾವನ್ನು ಪಡೆದು ಬಳಸಬಹುದಾಗಿದೆ. ಆದರೆ ಇದು ಸ್ಥೂಲ ವ್ಯವಸ್ಥೆಯಷ್ಟೇ; ಪ್ರವಾಸಿಗರಿಗೆ ಎಲ್ಲ ತೆರನಾದ ಸೌಲಭ್ಯ-ಸೌಕರ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಒಂದಿಡೀ ವ್ಯವಸ್ಥೆಗೆ ಬಲ ಮತ್ತು ವೇಗವನ್ನು ತುಂಬಬೇಕಿದೆ. ವಿಮಾನ ನಿಲ್ದಾಣಗಳಿಂದ ಮೊದಲ್ಗೊಂಡು, ಉತ್ತಮವಾದ ಮತ್ತು ಮಿತವ್ಯಯಕಾರಿಯಾಗಿರುವ ಹೋಟೆಲ್​ಗಳು, ಬಹುಭಾಷಿ ಮಾರ್ಗದರ್ಶಕರು, ಬ್ರಾ್ಯಂಡ್ ನಿರ್ವಣ, ಮಹಿಳಾ ಪ್ರವಾಸಿಗರ ಸುರಕ್ಷತೆ… ಹೀಗೆ ಹತ್ತು ಹಲವು ಆದ್ಯವಿಷಯಗಳ ಕಡೆ ಗಮನಹರಿಸಬೇಕಿದೆ. ಈ ವಲಯಕ್ಕೆ ಪ್ರವರ್ತನೆ/ಉತ್ತೇಜನ ನೀಡುವ ವಿಷಯದಲ್ಲಿ ವಿವಿಧ ದೇಶಗಳಲ್ಲಿ ನೆಲೆಯೂರಿರುವ, ಭಾರತ ಸರ್ಕಾರದ ವಿದೇಶಾಂಗ ಕಚೇರಿಗಳು ಕೂಡ ಗಣನೀಯ ಪಾತ್ರ ವಹಿಸಲು ಸಾಧ್ಯವಿದೆ. ಒಂದೊಮ್ಮೆ ಈ ನಡೆಗೆ ವೇಗ ನೀಡಿದಲ್ಲಿ, ‘ಬ್ರಾ್ಯಂಡ್ ಇಂಡಿಯಾ’ ಮೌಲ್ಯವರ್ಧನೆ ಕಷ್ಟವೇನಲ್ಲ. ಪ್ರಸ್ತುತ ಈ ವಲಯದಿಂದ ಸುಮಾರು 210 ಶತಕೋಟಿ ಡಾಲರ್​ಗಳಷ್ಟು ಜಿಡಿಪಿಯ ಹುಟ್ಟುವಳಿಯಾಗುತ್ತಿದ್ದು, ಮೇಲೆ ವಿವರಿಸಿದ ಆದ್ಯಕ್ರಮಗಳಿಗೆ ಮುಂದಾದಲ್ಲಿ, ಜಿಡಿಪಿ ಹುಟ್ಟುವಳಿ ಸಂಗ್ರಹಕ್ಕೆ ಮತ್ತೆ 500 ಶತಕೋಟಿ ಡಾಲರ್​ಗಳನ್ನು ಸೇರಿಸುವುದಕ್ಕೆ ಹಾಗೂ ಬೆಳವಣಿಗೆ ದರವು ಶೇಕಡ 1 ಅಂಶದಷ್ಟು ಮೇಲಕ್ಕೇರುವುದಕ್ಕೆ ಸಾಧ್ಯವಿದೆ.

ಕೇವಲ 2 ವಲಯಗಳು ಭಾರತದ ಜಿಡಿಪಿಯನ್ನು ಈ ಮಟ್ಟಿಗೆ ಮುನ್ನೂಕಲು ಸಾಧ್ಯವಿದೆ ಎಂದಾದಲ್ಲಿ, ಮಿಕ್ಕೆಲ್ಲ ವಲಯಗಳನ್ನೂ ಏಕಕಾಲಕ್ಕೆ ಸಮರ್ಥವಾಗಿ ನಿಭಾಯಿಸಿದಲ್ಲಿ ಪರಿಣಾಮ ಏನಾಗಬಹುದು ಎಂಬುದನ್ನು ಹಾಗೇ ಊಹಿಸಿ. ಭೂಸುಧಾರಣಾ ಉಪಕ್ರಮವೊಂದೇ ಶೇಕಡ 1 ಅಂಶದಷ್ಟನ್ನು ಸೇರ್ಪಡೆ ಮಾಡಬಲ್ಲದು. ಕಾರ್ವಿುಕ ಕಾನೂನು, ಗುತ್ತಿಗೆ ಕೃಷಿ, ಆರೋಗ್ಯದಂಥ ವಲಯಗಳನ್ನೂ ಹೀಗೆಯೇ ಮುಕ್ತವಾಗಿಸಿದಲ್ಲಿ, ಅವು ಬೆಳವಣಿಗೆಯ ಸಮರ್ಥ ಇಂಜಿನ್​ಗಳಾಗಿ ಪರಿಣಮಿಸುವುದರಲ್ಲಿ ಸಂದೇಹವಿಲ್ಲ. ಯುವಸಮೂಹದ ಆಶೋತ್ತರಗಳಿಗೆ, ಅಗತ್ಯಗಳಿಗೆ ಸ್ಪಂದಿಸಿ ಅವುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರಗಳು (ಅಧಿಕಾರಾರೂಢ ಪಕ್ಷ ಯಾವುದೇ ಇರಲಿ) ಮುಂದಾಗಲಿ ಎಂದು ಆಶಿಸೋಣ.

(ಲೇಖಕರು ಆರ್ಥಿಕ ತಜ್ಞರು)