ಸ್ವಾಮಿ ಕಾರ್ಯದೊಂದಿಗೆ ಗ್ರಾಮಾಭಿವೃದ್ಧಿಗೂ ಒತ್ತು ನೀಡಿದ 1,260 ಕುಟುಂಬ

«ಊರಿನ ಅಭಿವೃದ್ಧಿಗೆ ಹಲವು ಯೋಜನೆ ; ಗ್ರಾಮಸ್ಥರ ಸಹಕಾರದಲ್ಲಿ ಕುಂಡಡ್ಕ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ»

| ನಿಶಾಂತ್ ಬಿಲ್ಲಂಪದವು, ವಿಟ್ಲ
ದೇವಸ್ಥಾನ ಜೀರ್ಣೋದ್ಧಾರ ಎಂದಾಕ್ಷಣ ಕ್ಷೇತ್ರದ ಅಭಿವೃದ್ಧಿ ಮಾಡಲಾಗುತ್ತದೆಯೇ ಹೊರತು ಊರಿನ ಜನರನ್ನು ಒಗ್ಗೂಡಿಸುವ ಗೋಜಿಗೆ ಯಾರೂ ಮುಂದಾಗುವುದಿಲ್ಲ. ಆದರೆ, ಈ ಊರಿನಲ್ಲಿ ಎಲ್ಲ ಮನೆಗಳನ್ನು ಒಗ್ಗೂಡಿಸಿಕೊಂಡು ದೇವಾಲಯದ ಜತೆಗೆ ಊರಿನ ಜೀರ್ಣೋದ್ಧಾರ ಕಾರ್ಯವೂ ನಡೆಯುತ್ತಿದೆ.

ವಿಟ್ಲಮುಡ್ನೂರು ಕುಳ ಗ್ರಾಮಗಳಿಗೆ ಒಳಪಟ್ಟಿರುವ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮತ್ತು ಮಲರಾಯ ಮೂವರ್ ದೈವಂಗಳ್ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಊರಿನ 1260 ಮನೆಗಳ ಸಹಕಾರದಲ್ಲಿ ನಡೆಯುತ್ತಿದೆ. ಊರಿನ ಕೇಂದ್ರ ಉದ್ಧಾರ ಆಗುವ ಹಾಗೆ ಗ್ರಾಮವೂ ಆಹಾರ – ನೀರು – ಬೆಳಕಿನಲ್ಲಿ ಸ್ವಾವಲಂಬನೆ ಕಾಯ್ದುಕೊಳ್ಳಬೇಕು. ಶೈಕ್ಷಣಿಕ ಹಾಗೂ ಆರೋಗ್ಯ ಅಗತ್ಯಗಳಿಗೂ ಸ್ಪಂದಿಸುವ ಮೂಲಕ ಗ್ರಾಮ ಸಮೃದ್ಧಿಯ ಕನಸನ್ನು ಕಾಣಲಾಗಿದೆ.

ಪಾಳು ಬಿದ್ದ ಗದ್ದೆಗಳ ಅಭಿವೃದ್ಧಿ ಕಾರ್ಯ ಮೊದಲ ಹಂತದಲ್ಲಿ ಕೈಗೆತ್ತಿಕೊಂಡು ಮೂರು ವರ್ಷಗಳಿಂದ ಬೇಸಾಯ ಮಾಡಲಾಗುತ್ತಿದೆ. ಮೊದಲ ಎರಡು ವರ್ಷ ಸುಮಾರು 5 ಎಕರೆ ಜಾಗದಲ್ಲಿ ಬೇಸಾಯ ನಡೆದರೆ ಈ ವರ್ಷ 7 ಎಕರೆಯಲ್ಲಿ ನಡೆಸಲಾಗಿದೆ. ಸುಮಾರು 100 ಕ್ವಿಂಟಾಲ್ ಭತ್ತವನ್ನು ಊರಿನವರ ಸಹಕಾರದಲ್ಲೇ ಬೆಳೆಯಲಾಗಿದ್ದು, ತರಕಾರಿ ಸಹಿತ ನಿತ್ಯ ಬಳಕೆಯ ಆಹಾರವನ್ನು ಬೆಳೆಯುವುದು ಮುಂದಿನ ಯೋಜನೆ.

ತೊರೆಗಳಿಗೆ 40 ಕಿಂಡಿ ಅಣೆಕಟ್ಟೆ 
ಗ್ರಾಮದಲ್ಲಿ ಹರಿಯುವ ತೊರೆಗಳಿಗೆ ಎರಡು ವರ್ಷದಿಂದ ಸುಮಾರು 40 ಕಿಂಡಿ ಅಣೆಕಟ್ಟು ಕಟ್ಟುವ ಮೂಲಕ ನೀರಿನ ಸಂಗ್ರಹ ಕಾರ್ಯಕ್ಕೆ ಕೈಜೋಡಿಸಲಾಗಿದೆ. ಪಂಚಾಯಿತಿ ನೆರವಿನ ಕಿಂಡಿ ಅಣೆಕಟ್ಟು, ಮರಳು ಮಣ್ಣಿನ ಅಣೆಕಟ್ಟು ನಿರ್ಮಿಸಲಾಗಿದೆ. ಮಳೆ ನೀರಿನ ಸಂಗ್ರಹಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ದೇವಾಲಯ ಬಳಿ ಲಕ್ಷ ಲೀಟರ್ ಸಾಮರ್ಥ್ಯದ ಸಂಪು ನಿರ್ಮಾಣ ಮಾಡಲಾಗುತ್ತಿದೆ. ಮುಂದೆ ಇದನ್ನು ಪ್ರತಿ ಮನೆಗಳಿಗೆ ವಿಸ್ತರಿಸುವ ಯೋಚನೆಯೂ ಇದೆ.
ಬೆಳಕಿನಲ್ಲಿ ಸ್ವಾವಲಂಬನೆ ಸಾಧಿಸಬೇಕೆಂದು ಮನೆಗಳಿಗೆ ಸೌರಶಕ್ತಿ ಯೋಜನೆ ಹಾಕಿಕೊಳ್ಳಲಾಗಿದೆ. ಪ್ರತಿ ಮನೆಗೂ ಎರಡು ಸೋಲಾರ್ ದೀಪ ವಿತರಿಸುವ ಸಿದ್ಧತೆ ನಡೆದಿದೆ.

ಹೊರೆಕಾಣಿಕೆಗಾಗಿ ತರಕಾರಿ ಬೆಳೆ 

ಫೆಬ್ರವರಿಯಲ್ಲಿ ನಡೆಯುವ ಕುಂಡಡ್ಕ ದೇವಸ್ಥಾನದ ಬ್ರಹ್ಮಲಶೋತ್ಸವದಲ್ಲಿ ಹೊರೆಕಾಣಿಕೆಯೂ ವಿಶಿಷ್ಟವಾಗಿದೆ. ಪ್ರತಿಮನೆಯಲ್ಲಿ ತಾವೇ ಬೆಳೆದ ತರಕಾರಿಯನ್ನು ಹೊರೆಕಾಣಿಕೆಯ ಮೂಲಕ ಸಮರ್ಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ಮೂಲಕ ಗ್ರಾಮದಲ್ಲಿ ಆಹಾರ ಸ್ವಾವಲಂಬನೆ ಸಾಧಿಸುವ ಹಾದಿಯಲ್ಲಿದೆ.

ಗ್ರಾಮ ಸಮೃದ್ಧಿಯ ಹೆಸರಿನಲ್ಲಿ ಗ್ರಾಮದ 36 ಶ್ರದ್ಧಾಕೇಂದ್ರಗಳಲ್ಲಿಯೂ ನಿತ್ಯ ಆಚರಣೆಗಳಿಗೆ ಅಡಚಣೆಯಾಗದಂತೆ ಕುಂಡಡ್ಕ ವಿಷ್ಣುಮೂರ್ತಿ ದೇವಾಲಯ ಆಸರೆಯಾಗಿ ನಿಲ್ಲುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಹಡೀಲು ಬಿದ್ದ ಕೃಷಿಭೂಮಿಯನ್ನು ಗ್ರಾಮದ ಸಮಸ್ತರೂ ಸೇರಿ ಪುನಶ್ಚೇನಗೊಳಿಸುವ ನಿಟ್ಟಿನಲ್ಲೂ ಕಾರ್ಯಕ್ರಮ ಇಡಲಾಗಿದೆ. ಅಂತರ್ಜಲ ಉಳಿಸುವ ನಿಟ್ಟಿನಲ್ಲಿ ಮಹತ್ವದ ಯೋಜನೆ ಜಾರಿಗೆ ತರುವ ಆಲೋಚನೆ ಮುಂದಿನದಲ್ಲಿ ಇದೆ.
– ಕೆ.ಟಿ.ವೆಂಕಟೇಶ್ವರ ನೂಜಿ ಅಧ್ಯಕ್ಷರು, ಬ್ರಹ್ಮಕಲಶೋತ್ಸವ ಸಮಿತಿ