ನಿಮ್ಮ ದೇಹದಲ್ಲಿ ವಿಟಮಿನ್​ ಡಿ ಕೊರತೆಯಿದ್ದರೆ ಈ ಆಹಾರಗಳನ್ನು ಸೇವಿಸಿ…

ವಿಟಮಿನ್​ ಡಿ ದೇಹಕ್ಕೆ ತುಂಬ ಮುಖ್ಯ. ಸೂರ್ಯನ ಬೆಳಕಿನಿಂದಲೂ ಈ ವಿಟಮಿನ್​ ನಮ್ಮ ದೇಹಕ್ಕೆ ಸಿಗುತ್ತದೆ. ನಮ್ಮ ಚರ್ಮದ ಮೇಲೆ ಮುಂಜಾನೆಯ ಸೂರ್ಯನ ಕಿರಣಗಳು ಬಿದ್ದಾಗ ವಿಟಮಿನ್​ ಡಿ ಉತ್ಪತ್ತಿಯಾಗುತ್ತದೆ.
ನಮ್ಮ ದೇಹದ ಹಲವು ಕಾರ್ಯಗಳು ಸರಿಯಾಗಿ ನಡೆಯಬೇಕು ಎಂದರೆ ವಿಟಮಿನ್​ ಡಿ ಸಮತೋಲನವಾಗಿ ಇರಬೇಕು. ಯಾವುದೇ ಆಹಾರ ತಿಂದಾಗ ಅದರಿಂದ ಸಿಗುವ ಕ್ಯಾಲ್ಸಿಯಂ, ಫಾಸ್ಪರಸ್​ ಅಂಶಗಳನ್ನು ನಮ್ಮ ದೇಹ ಹಿಡಿದಿಟ್ಟುಕೊಳ್ಳಲು ವಿಟಮಿನ್​ ಡಿ ತುಂಬ ಸಹಕಾರಿ. ಹಾಗೇ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಎಲುಬು, ಹಲ್ಲುಗಳು ಗಟ್ಟಿಯಾಗಿರಬೇಕೆಂದರೆ ಡಿ ವಿಟಮಿನ್​ ಬೇಕೇಬೇಕು. ಮಂಡಿನೋವು, ಕೀಲು ನೋವುಗಳಂಥ ದೀರ್ಘಕಾಲಿಕ ರೋಗಗಳನ್ನೂ ನಿಯಂತ್ರಿಸುತ್ತದೆ.

ಕೊರತೆಯಿಂದ ಬರುವ ತೊಂದರೆಗಳು
ಇತ್ತೀಚೆಗಂತೂ ದೇಹದಲ್ಲ ವಿಟಮಿನ್ ಡಿ ಕೊರತೆ ಉಂಟಾಗುವುದು ತುಂಬ ಸಹಜವಾದ ಸಮಸ್ಯೆಯೆಂಬಂತೆ ಆಗಿದೆ. ಆದರೆ ತುಂಬ ಜನರಿಗೆ ಈ ಬಗ್ಗೆ ಅರಿವು ಇರುವುದಿಲ್ಲ. ಹಲ್ಲು ಹಾಳಾಗುವುದು, ದಂತದಲ್ಲಿ ರಕ್ತ ಒಸರುವುದು, ಡಯಾಬಿಟಿಸ್​, ಸಂಧಿವಾತ, ಕೀಲುನೋವು, ಐಬಿಎಸ್​, ಆಯಾಸ, ಕೂದಲು ಉದುರುವಿಕೆ, ಅಜೀರ್ಣದಂಥ ಆರೋಗ್ಯ ಸಮಸ್ಯೆಗಳಿಗೆ ವಿಟಮಿನ್​ ಡಿ ಕೊರತೆ ಕಾರಣವಾಗುತ್ತದೆ.
ಯಾವ ಆಹಾರ ಸೇವಿಸಬೇಕು

ಸೂರ್ಯನ ಬೆಳಕಿನಲ್ಲಿ ಹೇರಳವಾಗಿ ವಿಟಮಿನ್​ ಡಿ ಸಿಗುತ್ತದೆ. ಹಾಗೇ ಕೆಲವು ಆಹಾರಗಳಲ್ಲೂ ವಿಟಮಿನ್​ ಡಿ ಅಂಶವಿದ್ದು ಅವುಗಳನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯ ವಿಟಮಿನ್​ ಪಡೆಯಬಹುದು.

1.ಮಶ್ರೂಮ್​ (ಅಣಬೆ)
ಮಶ್ರೂಮ್​ಗಳು ತಿನ್ನಲು ತುಂಬ ರುಚಿಕರ ಹಾಗೂ ಕಡಿಮೆ ಕ್ಯಾಲೋರಿಯುಳ್ಳ ವಿಟಮಿನ್​ ಡಿ ಮೂಲ. ಪೋಟ್ಯಾಷಿಯಂ ಹಾಗೂ ಬಿ ಕಾಂಪ್ಲೆಕ್ಸ್​ ವಿಟಮಿನ್​ ಅಂಶಗಳನ್ನು ಒಳಗೊಂಡಿವೆ. ಅಣಬೆ ಸೇವನೆಯಿಂದ ರಕ್ತದೊತ್ತಡ ನಿಯಂತ್ರಣವಾಗುತ್ತದೆ. ಡಯಾಬಿಟಿಸ್​ ಬರುವುದನ್ನು ತಡೆಯಬಹುದು.

2. ಕೊಬ್ಬಿನ ಮೀನು
ಕೊಬ್ಬಿನ ಮೀನಿನ ಎಣ್ಣೆಯಲ್ಲಿ ವಿಟಮಿನ್​ ಡಿ ಇರುತ್ತದೆ. ಸಾಲ್ಮನ್​, ಟ್ರೌಟ್​, ಕಾಡ್​ನಂಥ ಮೀನುಗಳಲ್ಲಿ ಒಮೆಗಾ 3 ಕೊಬ್ಬಿನಾಂಶ ಇರುತ್ತದೆ. ಆ್ಯಂಟಿಆಕ್ಸಿಡೆಂಟ್​ ಹಾಗೂ ಪ್ರೋಟಿನ್​ಗಳೂ ಹೇರಳವಾಗಿದ್ದು ಮಿದುಳಿನ ಆರೋಗ್ಯಕ್ಕೆ ಸಹಕಾರಿಯಾಗಿದೆ.

3. ಮೊಟ್ಟೆ ಹಳದಿ
ಮೊಟ್ಟೆಯ ಹಳದಿಯಲ್ಲಿ ವಿಟಮಿನ್ ಡಿ ಇರುತ್ತದೆ. ಇದನ್ನು ನಿಮ್ಮ ಡಯೆಟ್​ನಲ್ಲಿ ಅಳವಡಿಸಿಕೊಂಡರೆ ವಿಟಮಿನ್​ ಡಿ ಜತೆ ಪ್ರೋಟಿನ್​ ಕೂಡ ಪಡೆಯಬಹುದು.

4 ಹಾಲು
ಹಾಲು ವಿಟಮಿನ್​ ಡಿ ಯ ಪ್ರಮುಖ ಮೂಲ. ದಿನಕ್ಕೊಂದು ಗ್ಲಾಸ್​ ಹಾಲು ಸೇವನೆ ಮಾಡಿದರೆ ದೇಹದಲ್ಲಿ ವಿಟಮಿನ್​ ಡಿ ಸಮತೋಲನವಾಗಿರುತ್ತದೆ. ಸೋಯಾ ಹಾಲು, ಬಾದಾಮಿ ಹಾಲು ಹೀಗೆ ನಿಮಗಿಷ್ಟವಾದ ರೀತಿಯಲ್ಲಿ ಸೇವಿಸಿ.