ಪರಶುರಾಮಪುರ: ಭದ್ರಾ ಮೇಲ್ದಂಡೆ ಯೋಜನೆಯಡಿ ಚಳ್ಳಕೆರೆ-ಪಾವಗಡ ತಾಲೂಕು ವ್ಯಾಪ್ತಿಯ ಬಹುತೇಕ ಕೆರೆಗಳಿಗೆ ಮುಂದಿನ ವರ್ಷದೊಳಗೆ ನೀರುಣಿಸಲಾಗುವುದು ಎಂದು ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ ತಿಳಿಸಿದರು.
ಪಿಆರ್ಪುರ, ಪಾವಗಡ, ಚಳ್ಳಕೆರೆ ವ್ಯಾಪ್ತಿಯ ಹಳ್ಳಿಗಳಿಗೆ ಇತ್ತೀಚೆಗೆ ಭದ್ರಾ ಯೋಜನೆ ಅನುಷ್ಠಾನ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಲ್ಲಿನ ಕಾಮಗಾರಿ ವೀಕ್ಷಿಸಿ ರೈತರೊಂದಿಗೆ ರ್ಚಚಿಸಿದರು.
ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತೀವ್ರಗೊಳಿಸುತ್ತಿದ್ದು ಚಳ್ಳಕೆರೆ, ಪಾವಗಡ ತಾಲೂಕಿನ ಜನರಿಗೆ ಕುಡಿವ ನೀರಿಗೆ ತತ್ವಾರ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡು ಈ ಭಾಗದ ರೈತರ ಕೃಷಿ ಚಟುವಟಿಕೆಗಳ ಉಪಯೋಗಕ್ಕೆ ಕೆರೆಗಳಿಗೂ ಕೂಡ ನೀರುಣಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದರು.
ಅಖಂಡ ಕರ್ನಾಟಕ ರೈತ ಸಂಘದ ಕಾರ್ಯದರ್ಶಿ ಸೋಮಗುದ್ದು ರಂಗಸ್ವಾಮಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಗೆ ಭೂಮಿ ಬಿಟ್ಟುಕೊಟ್ಟ ರೈತರಿಗೆ ಲೋಪವಾಗದಂತೆ ಅಧಿಕಾರಿಗಳು ವೈಜ್ಞಾನಿಕವಾಗಿ ಪರಿಹಾರದ ಹಣ ನೀಡಲು ಕ್ರಮ ವಹಿಸಬೇಕು ಎಂದರು.
ಚಳ್ಳಕೆರೆ ತಾಲೂಕು ರೈತ ಸಂಘದ ಅಧ್ಯಕ್ಷ ಕಿಸಾನ್ ಎ. ನಾಗರಾಜು ಮಾತನಾಡಿ, ಬಯಲು ಸೀಮೆ ರೈತರ ಬದುಕು ಹಸನಾಗಿಸಲು ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ತಂದಿದೆ. ಶೀಘ್ರವೇ ಕೆರೆಗಳಿಗೆ ನೀರು ಪೂರೈಸಿ ರೈತರ ಕೃಷಿ ಚಟುವಟಿಕೆಗಳಿಗೆ ಅನುವು ಮಾಡಿಕೊಟ್ಟರೆ ಆರ್ಥಿಕವಾಗಿ ರೈತರು ಸದೃಢರಾಗುವರು ಎಂದು ತಿಳಿಸಿದರು.
ಪರಶುರಾಮಪುರ, ಗೋಸಿಕೆರೆ, ಕ್ಯಾದಿಗುಂಟೆ, ಪಾವಗಡದ ಲಿಂಗದಹಳ್ಳಿ, ವದನಕಲ್ಲು, ಶೈಲಾಪುರ ಗ್ರಾಮಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಲಾಯಿತು.
ಈ ಭಾಗದ ಹಳ್ಳಿಗಳ ರೈತರು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಭೂಮಿಯ ಪರಿಹಾರ ಹಣ ಮಂಜೂರಾತಿಗೆ ಮನವಿ ಪತ್ರ ಸಲ್ಲಿಸಿದರು.
ನಿಗಮದ ಅಧಿಕಾರಿಗಳಾದ ಸಿ.ಇ. ಪಾಟೀಲ, ಮಧುಸೂದನ್, ಎಇಇ ಜನಾರ್ಧನ್, ಅಮೋಘ, ಈರಣ್ಣ, ರಾಮಣ್ಣ, ರವಿ, ಪಾಪಣ್ಣ ಹನುಮಂತರೆಡ್ಡಿ, ರಾಜಣ್ಣ, ಮಂಜುನಾಥ ಇತರರಿದ್ದರು.