ವ್ಯಾಸರ ನಿರ್ಗಮನ ಮೈತ್ರೇಯರ ಆಗಮನ

ವೇದವ್ಯಾಸರ ಭವಿಷ್ಯವಾಣಿಯಂತೆ ಮೈತ್ರೇಯರು ಹಸ್ತಿನಾವತಿಗೆ ಆಗಮಿಸಿದರು. ಧೃತರಾಷ್ಟ್ರ ಅಘರ್Âಪಾದ್ಯಾದಿಗಳಿಂದ ಮೈತ್ರೇಯರನ್ನು ಸತ್ಕರಿಸಿದನು. ಬಳಿಕ ‘ಪೂಜ್ಯರೇ! ತಾವು ಪಾಂಡವರಿದ್ದ ಅರಣ್ಯದಿಂದ ಬಂದಿರುವಿರೆಂದು ತಿಳಿಯಿತು. ಪಾಂಡವರು ಹೇಗಿದ್ದಾರೆ? ಅವರು ಹನ್ನೆರಡು ವರ್ಷದ ಅರಣ್ಯವಾಸ, ಒಂದು ವರ್ಷ ಅಜ್ಞಾತವಾಸದ ಒಪ್ಪಂದವನ್ನು ಪಾಲಿಸಲು ಸಿದ್ಧರಿದ್ದಾರೆಯೇ? ಇಲ್ಲವೇ?’ ಎಂದು ಪ್ರಶ್ನಿಸಿದನು.

ಧೃತರಾಷ್ಟ್ರನ ಈ ಪ್ರಶ್ನೆಯ ಮೂಲ ‘ಪಾಂಡವರು, ಇದು ಅನ್ಯಾಯದ ಒಪ್ಪಂದವೆಂದು ಒಪ್ಪಂದವನ್ನೇ ಭಗ್ನಗೊಳಿಸಿ, ಮಧ್ಯದಲ್ಲಿಯೇ ಮರಳಿಬಂದು ಎಲ್ಲಿ ರಾಜ್ಯದ ಮೇಲೆ ಹಕ್ಕನ್ನು ಸ್ಥಾಪಿಸುತ್ತಾರೋ?!’ ಎಂಬ ಆತಂಕವಾಗಿತ್ತು. ಆದ್ದರಿಂದಲೇ ‘ಅರಣ್ಯವಾಸದ ವಿಷಯದಲ್ಲಿ ಪಾಂಡವರ ಮನಸ್ಸಿನಲ್ಲಿ ಏನಾದರೂ ಬದಲಾವಣೆಯಾಗಿದೆಯೇ?’ ಎಂದು ಮೈತ್ರೇಯರ ಬಳಿ ಪ್ರಶ್ನಿಸಿದನು.

ಮೈತ್ರೇಯರು ಉತ್ತರಿಸಿದರು: ‘ತೀರ್ಥಯಾತ್ರೆಗೆಂದು ಹೊರಟ ನನಗೆ ಪಾಂಡವರಿದ್ದಲ್ಲಿಗೆ ಹೋಗಬೇಕೆಂಬ ಉದ್ದೇಶವೇ ಇರಲಿಲ್ಲ. ನಾನು ಹೋಗುವ ದಾರಿಯಲ್ಲಿ ಅಕಸ್ಮಾತ್ ಪಾಂಡವರ ಭೆಟ್ಟಿಯಾಯಿತು. ಆಗ ‘ನಿನ್ನ ಮಕ್ಕಳು ಯುದ್ಧವಿಲ್ಲದೆ ಮೋಸದಿಂದ ಪಾಂಡವರ ರಾಜ್ಯವನ್ನು ಕಬಳಿಸಿದ’ ವಿಷಯ ತಿಳಿಯಿತು. ನಿನ್ನ ಮಕ್ಕಳ ಬುದ್ಧಿಭ್ರಮಣೆಯೇ ದ್ಯೂತರೂಪವನ್ನು ತಾಳಿದ್ದನ್ನು ನಾನು ಮನಗಂಡೆ. ನಿನ್ನ ಮಕ್ಕಳಿಂದಾದ ಅನ್ಯಾಯವನ್ನು ಕೇಳಿ ನನ್ನ ಮನಸ್ಸಿಗೆ ಬಹಳ ದುಃಖವಾಯಿತು. ಅದಕ್ಕಾಗಿಯೇ ನಿನ್ನ ಮೇಲೆ ಅತ್ಯಂತ ಅಭಿಮಾನ ಹಾಗೂ ಪ್ರೀತಿಯಿಂದ ನಿನ್ನ ಬಳಿಗೇ ಬಂದಿದ್ದೇನೆ.

ಧೃತರಾಷ್ಟ್ರ! ಭೀಷ್ಮರಂತಹ ಹಿರಿಯರ ಎದುರಿನಲ್ಲಿಯೇ ನೀನು ನಿನ್ನ ಮಕ್ಕಳಿಗೆ ಇಂತಹ ಅನ್ಯಾಯಗಳಿಗೆಲ್ಲ ಅವಕಾಶ ನೀಡುತ್ತಿರುವಿಯಲ್ಲ! ಇದು ಮಹಾ ಅನರ್ಥ ಪರಂಪರೆಗೆ ನಾಂದಿಯಾಗುತ್ತದೆ. ಸಮಸ್ತ ಕುರುಕುಲಕ್ಕೇ ಕಂಬದಂತಿರುವ ನಿನ್ನ ಕಣ್ಣೆದುರು ಇಂತಹ ಅನ್ಯಾಯ ನಡೆಯುತ್ತಿದ್ದರೂ, ಅದನ್ನು ತಡೆಯಲು ಪ್ರಯತ್ನಿಸದೆ ಪ್ರೇಕ್ಷಕನಂತೆ ಸುಮ್ಮನೆ ನೋಡುತ್ತಿರುವಿಯಲ್ಲ? ಇದು ನ್ಯಾಯವೇ? (ಕಿಮನರ್ಥಮಯಂ ಘೊರಮುತ್ಪದ್ಯಂತಂ ಉಪೇಕ್ಷ್ಯಸೇ |). ಸಭೆಯಲ್ಲಿ ನಡೆದ ರಾಜ್ಯದ ಅಪಹರಣ, ಕಳ್ಳರು ಮಾಡುವ ವ್ಯವಹಾರದಂತಿತ್ತು. ಒಂದು ವೇಳೆ ನೀನೇನಾದರೂ ಋಷಿಮುನಿಗಳ ಎದುರಿನಲ್ಲಿ ನಿಂತರೆ ಒಬ್ಬರೂ ನಿನಗೆ ಗೌರವ ನೀಡಲಾರರು’ ಇಷ್ಟು ಹೇಳಿ ಮೈತ್ರೇಯರು ಮುಖ ತಿರುಗಿಸಿದರು.

ಆಗ ಅಲ್ಲಿಯೇ ಕೋಪದಿಂದ ಕುದಿಯುತ್ತಿದ್ದ ದುರ್ಯೋಧನನನ್ನು ಕಂಡು, ‘ದುರ್ಯೋಧನ! ನನ್ನ ಮಾತನ್ನು ಸಮಾಧಾನದಿಂದ ಕೇಳು. ನನಗೆ ನಿಮ್ಮ ಯಾರ ಮೇಲೆಯೂ ದ್ವೇಷವಿಲ್ಲ. (ದುರ್ಯೋಧನ ಮಹಾಬಾಹೋ ನಿಬೋಧ ವದತಾಂ ವರ | ವಚನಂ ಮೇ ಮಹಾಭಾಗ ಬ್ರುವತೋ ಯದ್ಧಿತಂ ತವ ||) ನೀನು ಪಾಂಡವರೊಂದಿಗೆ ಸ್ನೇಹದಿಂದಿರು. ದ್ವೇಷ ಬೇಡ. ಪಾಂಡವರೊಂದಿಗೆ ಸೌಹಾರ್ದದಿಂದಿರುವುದರಿಂದ ನಿನಗೇ ಒಳಿತು. ಹಿಡಿಂಬನೇ ಮೊದಲಾದ ರಾಕ್ಷಸರನ್ನು ಭೀಮಸೇನ ಕೊಂದ ಘಟನೆ ನಿನಗೆ ತಿಳಿದೇ ಇದೆ. ಆದರೆ ಮೊನ್ನೆ ಮೊನ್ನೆ ನಾನು ಬರುವಾಗ ಮತ್ತೊಂದು ಘಟನೆ ನಡೆಯಿತು.

ಕಿರ್ವಿುರನೆಂಬ ಮಹಾದೈತ್ಯನನ್ನು ಭೀಮಸೇನ ಅನಾಯಾಸವಾಗಿ ಸಂಹರಿಸಿದ. ಹೀಗೆ ಜರಾಸಂಧ, ಬಕ, ಹಿಡಿಂಬ, ಕಿರ್ವಿುರ ಮುಂತಾದ ಪರಾಕ್ರಮಿಗಳಾದ ರಾಕ್ಷಸ ಸಮೂಹವನ್ನೇ ಧೂಳೀಪಟ ಮಾಡಿದ ಮಹಾಪರಾಕ್ರಮಿಯೂ, ಚಾರಿತ್ರ್ಯಂತನೂ ಆದ ಭೀಮಸೇನನೊಂದಿಗೆ ಏಕೆ ಅನವಶ್ಯಕ ದ್ವೇಷ ಸಾಧಿಸುತ್ತಿರುವೆ? ನನ್ನ ಹಿತನುಡಿಗಳನ್ನು ಕೇಳು. ಕೋಪ, ಪ್ರತೀಕಾರ ಭಾವನೆ ಇವೆಲ್ಲವನ್ನೂ ತೊರೆದು ಅಣ್ಣತಮ್ಮಂದಿರಾದ ನೀವೆಲ್ಲ ನಿಮ್ಮ ನಿಮ್ಮ ರಾಜ್ಯದಲ್ಲಿ ಪರಸ್ಪರ ಪ್ರೀತಿ, ಸೌಹಾರ್ದಗಳಿಂದ ಬಾಳಿ. ವಾಸ್ತವಿಕವಾಗಿ ಪಾಂಡುವಿನ ಮಗನಾದ ಧರ್ಮರಾಜನೇ ಸಮಗ್ರ ರಾಜ್ಯದ ಅಧಿಪತಿ. ಆದರೂ ನೀವು ಇಂದ್ರಪ್ರಸ್ಥ, ಹಸ್ತಿನಾವತಿ ಎಂದು ರಾಜ್ಯವನ್ನು ವಿಭಜಿಸಿಕೊಂಡು ಒಂದು ವ್ಯವಸ್ಥೆ ಮಾಡಿಕೊಂಡಿರುವಿರಿ. ನಿಮ್ಮ ರಾಜ್ಯದಲ್ಲಿ ನೀವು ತೃಪ್ತರಾಗಿದ್ದುಕೊಂಡು ಅನ್ಯೋನ್ಯವಾಗಿದ್ದರೆ ನಿಮಗೂ ಕ್ಷೇಮ. ಲೋಕಕ್ಕೂ ಕ್ಷೇಮ. ಇದುವರೆಗೂ ನಡೆದ ದ್ಯೂತ, ಅರಣ್ಯವಾಸದ ಒಪ್ಪಂದ ಎಲ್ಲವೂ ‘ಅಕ್ರಮ’. ಯಾವುದೂ ನ್ಯಾಯಬದ್ಧವಾದದ್ದಲ್ಲ. ಇದೆಲ್ಲವನ್ನೂ ನೀವು ಸರಿಪಡಿಸಿಕೊಳ್ಳಬೇಕು’ ಹೀಗೆ ಈ ಮುಂಚೆ ವೇದವ್ಯಾಸರು ಧೃತರಾಷ್ಟ್ರನಿಗೆ ಯಾವ ಮಾತುಗಳನ್ನು ಹೇಳಿದ್ದರೋ ಅದೇ ಮಾತುಗಳನ್ನು ಮೈತ್ರೇಯರು ಧೃತರಾಷ್ಟ್ರ ಹಾಗೂ ದುರ್ಯೋಧನಾದಿಗಳ ಎದುರು ನುಡಿದರು.

ಮೈತ್ರೇಯರು ದುರ್ಯೋಧನನಿಗೆ ಹಿತಕರವಾದ ಉಪದೇಶದ ಮಾತುಗಳನ್ನಾಡಿದರೆ; ಉನ್ಮತ್ತನಾದ ದುರ್ಯೋಧನ ಜೋರಾಗಿ ತನ್ನ ತೊಡೆಯನ್ನು ತಟ್ಟಿಕೊಂಡು, ಮೈತ್ರೇಯರ ಮುಖವನ್ನೇ ನೋಡದೆ, ಅವರ ಮಾತಿಗೆ ಉತ್ತರವನ್ನೂ ನೀಡದೆ ಅವರನ್ನು ತಿರಸ್ಕರಿಸಿದನು. ಮೈತ್ರೇಯರು ಎಷ್ಟು ಉಪದೇಶ ನೀಡಿದರೂ ಅದಕ್ಕೆ ಬೆಲೆ ನೀಡದೆ, ತೊಡೆ ತಟ್ಟಿದ ದುರ್ಯೋಧನನ ದೌಷ್ಟ್ಯಂದ ಕುಪಿತರಾದ ಮೈತ್ರೇಯರು, ‘ನಿನ್ನೀ ತೊಡೆಗಳಿಗೆ ಭೀಮಸೇನನಿಂದ ಗದಾಪ್ರಹಾರವಾಗಲಿ; ಅದರಿಂದಲೇ ನಿನ್ನ ಮರಣ ಸಂಭವಿಸಲಿ’ ಎಂದು ಶಾಪ ನೀಡಿದರು.

‘ಮೈತ್ರೇಯರ ಮಾತುಗಳಿಂದ ಮಗನ ಬುದ್ಧಿ ಸರಿಯಾಗುವುದೋ ಎಂದು ಆಲೋಚಿಸುತ್ತಿದ್ದರೆ ಅವನ ಪ್ರಾಣವೇ ಹೋಗುವ ಶಾಪ ಬಂದಿತಲ್ಲ!’ ಎಂದು ಧೃತರಾಷ್ಟ್ರ ಗಾಬರಿಗೊಂಡನು. ಬಳಿಕ ಮೈತ್ರೇಯರ ಬಳಿ, ‘ನನ್ನ ಮಗ ತಿಳಿಯದೆ ತಪ್ಪು ಮಾಡಿದ್ದಾನೆ; ತಾವು ಶಾಪ ಹಿಂತೆಗೆದುಕೊಳ್ಳಬೇಕು’ ಎಂದು ಪ್ರಾರ್ಥಿಸಿಕೊಂಡನು. ಮೈತ್ರೇಯರೆಂದರು; ‘ನಿನ್ನ ಮಗನಿಗೆ ನೀಡಿದ ಶಾಪದಲ್ಲಿ ಸ್ವಾರ್ಥವೇನೂ ಇಲ್ಲ. ಲೋಕದಲ್ಲಿ ಯುದ್ಧದಿಂದ ಅಶಾಂತಿಯುಂಟಾಗಬಾರದು. ಹಾಗಾಗಿ ನನ್ನ ಮಾತಿನಂತೆ ನಿನ್ನ ಮಗ ಶಾಂತಿಯ ಮಾರ್ಗವನ್ನು ಅನುಸರಿಸಿದರೆ ಅವನಿಗೆ ಯಾವುದೇ ಹಾನಿಯುಂಟಾಗದು; ಒಂದು ವೇಳೆ ಶಾಂತಿಯ ಮಾರ್ಗ ತೊರೆದು ಲೋಕಹಾನಿಕಾರಕವಾದ ಯುದ್ಧಕ್ಕೆ ಸಿದ್ಧನಾದರೆ ನನ್ನ ಶಾಪ ಫಲಿಸಿಯೇ ಫಲಿಸುತ್ತದೆ. ’ ಇಷ್ಟು ಹೇಳಿ ಮೈತ್ರೇಯರು ಅಲ್ಲಿಂದ ಹೊರಟುಹೋದರು.

ಇಂತಹ ಅನೇಕ ಘಟನೆಗಳಿಂದ ದುರ್ಯೋಧನ ಅವಿನೀತನಾಗಿ, ಸೌಜನ್ಯರಹಿತನಾಗಿ, ಅಹಂಕಾರದಿಂದ ಹೇಗೆ ವರ್ತಿಸುತ್ತಿದ್ದ ಎಂಬುದು ತಿಳಿದುಬರುತ್ತದೆ. ಆದರೆ ಇಂದಿನ ಅನೇಕ ಸಾಹಿತಿಗಳು ನಮ್ಮ ಇತಿಹಾಸದಲ್ಲಿ ಯಾರು ಖಳನಾಯಕರಾಗಿ ತಮ್ಮ ದೌಷ್ಟ್ಯನ್ನು ತೋರಿರುತ್ತಾರೆಯೋ, ಯಾರಂತೆ ನಾವು ವರ್ತಿಸಬಾರದೆಂದು ತಿಳಿದುಬರುತ್ತದೆಯೋ ಅಂಥ ದುರ್ಯೋಧನ, ರಾವಣ ಮುಂತಾದವರನ್ನೇ ವೈಭವೀಕರಿಸಿ, ರಾಮ, ಕೃಷ್ಣ ಮುಂತಾದ ಆದರ್ಶ ಪುರುಷರ ಬಗ್ಗೆಯೇ ತಪ್ಪುಕಲ್ಪನೆ ಮೂಡುವಂತೆ ಮಾಡುತ್ತಿದ್ದಾರೆ. ಆದರೆ ವಾಲ್ಮೀಕಿಗಳು ರಚಿಸಿದ ರಾಮಾಯಣ ಹಾಗೂ ವೇದವ್ಯಾಸರು ರಚಿಸಿದ ಮಹಾಭಾರತ, ರಾಮ-ಕೃಷ್ಣರ ಕಥೆಗಳನ್ನು ತಿಳಿಸುವ ಅಧಿಕೃತ ಗ್ರಂಥಗಳಾಗಿವೆ. ಇಂಥ ಗ್ರಂಥಗಳನ್ನು ಅವಲೋಕಿಸಿದಾಗ ರಾವಣ-ದುರ್ಯೋಧನಾದಿಗಳ ವ್ಯಕ್ತಿತ್ವ ಎಷ್ಟು ನೀಚಮಟ್ಟದ್ದು? ರಾಮ-ಕೃಷ್ಣಾದಿಗಳ ವ್ಯಕ್ತಿತ್ವ ಎಷ್ಟು ಉದಾತ್ತವಾದದ್ದು ಎಂಬ ವಾಸ್ತವ ಸ್ಪಷ್ಟವಾಗುತ್ತದೆ.