ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ನನ್ನದು ತಟಸ್ಥ ನಿಲುವು: ಪೇಜಾವರ ಶ್ರೀ

ಹಾಸನ: ಎಲ್ಲ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಪ್ರವೇಶವಿದೆ. ಆದರೆ, ಅಯ್ಯಪ್ಪ ದೇಗುಲದಲ್ಲಿ ಈ ಸಂಪ್ರದಾಯವಿಲ್ಲ. ಹೀಗಾಗಿ ಮಹಿಳೆಯರ ಪ್ರವೇಶ ವಿಚಾರವಾಗಿ ಯಾವ ನಿಲುವು ತೆಗೆದುಕೊಳ್ಳಬೇಕು ಎಂಬುದರಲ್ಲಿ ನಾನು ತಟಸ್ಥನಾಗಿರುತ್ತೇನೆ ಎಂದು ಪೇಜಾವರ ಶ್ರೀಗಳು ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಬರಿಮಲೆಯ ಶಾಸ್ತ್ರದಲ್ಲಿ ಯಾವುದೇ ಧಕ್ಕೆ ಇಲ್ಲ. ಆದರೆ, ಸಂಪ್ರದಾಯದಲ್ಲಿ ಧಕ್ಕೆಯಿದೆ. ಶಾಸ್ತ್ರದಲ್ಲಿ ಎಲ್ಲ ಭಕ್ತರಿಗೂ ಪ್ರವೇಶ ನೀಡಬೇಕು ಎಂದಿದೆ. ಆದರೆ, ಶಬರಿಮಲೆಯ ಸಂಪ್ರದಾಯವೇ ಬೇರೆಯಾದ್ದರಿಂದ ನಾನು ಈ ವಿಷಯದಲ್ಲಿ ತಟಸ್ಥನಾಗಿದ್ದೇನೆ. ಉದ್ದೇಶ ಪೂರ್ವಕವಾಗಿ ಕೆಲವರು ದೇವಾಲಯ ಪ್ರವೇಶ ಮಾಡುತ್ತಿದ್ದಾರೆ. ಈ ರೀತಿ ಮಾಡಬಾರದು. ಹಿಂದು ಸಂಸ್ಕೃತಿಯನ್ನು ಉಳಿಸಬೇಕಿದೆ ಎಂದು ಹೇಳಿದರು.

ಸುಗ್ರೀವಾಜ್ಞೆಗೆ ಒತ್ತಾಯ
ರಾಮ ಮಂದಿರ ವಿಚಾರದಲ್ಲಿ ಕೋರ್ಟ್ ತೀರ್ಪು ನೀಡುತ್ತಿಲ್ಲ. ಕೆಲವು ಕಾನೂನು ರೂಪಿಸಿರುವ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮಾಡಿ ಎಂದು ಒತ್ತಾಯಿಸುತ್ತಿದ್ದೇವೆ. ಜನವರಿ ಕೊನೆಯಲ್ಲಿ ನಡೆಯುವ ಧರ್ಮ ಸಂಸತ್ ಸಭೆಯಲ್ಲಿ ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು. ಧರ್ಮ ಸಂಸತ್​ನಲ್ಲಿ ಪ್ರಧಾನಿ ಮೋದಿ ಕೂಡ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಭಗವಾನ್ ಚರ್ಚೆಗೆ ಬರಲಿ
ರಾಮನ ವಿಚಾರ ಚರ್ಚೆಗೆ ಮೈಸೂರಿನಲ್ಲಿ ಕೆಲ ಟ್ರಸ್ಟ್​ಗಳು ಅವಕಾಶ ಕಲ್ಪಿಸಿದ್ದವು. ಆದರೆ, ಭಗವಾನ್ ಚರ್ಚೆಗೆ ಬರದೆ ತಪ್ಪಿಸಿಕೊಂಡಿದ್ದಾರೆ. ಸಮಾಜದ ಹಿತದೃಷ್ಟಿಯಿಂದ ಸರ್ಕಾರ ಬಹಿರಂಗ ಚರ್ಚೆಗೆ ಅವಕಾಶ ನೀಡುವುದಿಲ್ಲ. ಆದ್ದರಿಂದ ಖಾಸಗಿ ಚರ್ಚೆಗೆ ಬರಲಿ ನಾನು ಸಿದ್ದನಿದ್ದೇನೆ. ಆದರೆ, ಭಗವಾನ್ ಬರುವುದಿಲ್ಲ ಎಂದು ಹೇಳಿದರು.

ಶ್ರೀಗಳ ಆರೋಗ್ಯ ಸ್ಥಿತಿ ಸುಧಾರಿಸಿದೆ
ಶಿವಕುಮಾರ ಸ್ವಾಮಿಯವರ ಆರೋಗ್ಯ ಸ್ಥಿತಿ ಸುಧಾರಿಸಿದೆ. ಚಿಕಿತ್ಸೆ ನೀಡುತ್ತಿರುವ ಆಪ್ತ ವೈದ್ಯರ ಜತೆಯೂ ಸಮಾಲೋಚನೆ ನೆಡೆಸಿದ್ದೇನೆ. ಶ್ರೀಗಳ ಅರೋಗ್ಯ ಸುಧಾರಿಸಲಿ ಎಂದು ದೇವರಲ್ಲಿ ಬೇಡುತ್ತೇನೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)