ಮೈಸೂರು: ಶಾಸಕ ಎಚ್.ವಿಶ್ವನಾಥ್ ಬಹಿರಂಗವಾಗಿ ಹೇಳಿಕೆ ನೀಡುವುದು ಒಳ್ಳೆಯದಲ್ಲ. ಇದರಿಂದ ಯಾರಿಗೂ ಅನುಕೂಲ ಆಗುವುದಿಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದರು.
ಸುತ್ತೂರು ಜಾತ್ರೆಗೆ ಆಗಮಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ವಿಶ್ವನಾಥ್ ಹಿರಿಯರು. ಪಕ್ಷದ ಆಂತರಿಕ ವೇದಿಕೆಯಲ್ಲಿ ತಮ್ಮ ಅಭಿಪ್ರಾಯ ಹೇಳಬೇಕು. ಸೂಕ್ತ ಸಂದರ್ಭದಲ್ಲಿ ಮಾತನಾಡುವುದು ಒಳ್ಳೆಯದು ಎಂದರು.
ಅವರಿಗೆ ಹುಣಸೂರು ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಬೇಡ. ನಿಮ್ಮ ಕ್ಷೇತ್ರದ ರಿಪೋರ್ಟ್ ಸರಿ ಇಲ್ಲ. ಬೇರೆಯವರಿಗೆ ಅವಕಾಶ ಮಾಡಿಕೊಡಿ. ಚುನಾವಣೆಗೆ ಸ್ಪರ್ಧಿಸದೇ ಇದ್ದರೂ ಸ್ಥಾನಮಾನ ನೀಡುತ್ತೇನೆಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. ಆದರೆ, ವಿಶ್ವನಾಥ್ ಕ್ಷೇತ್ರ ಬಿಟ್ಟುಕೊಡಲ್ಲ ಅಂತ ಸ್ಪರ್ಧೆ ಮಾಡಿದರು, ಈಗ ಸೋತಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡುವುದಕ್ಕೆ ಕಾನೂನು ತೊಡಕುಗಳಿವೆ ಎಂದು ಕಾಲೆಳೆದರು.
ಸುತ್ತೂರು ಜಾತ್ರೆಯ ವೇದಿಕೆಯಲ್ಲೇ ನನಗೆ ಸಚಿವ ಸ್ಥಾನ ನೀಡುವ ಕುರಿತು ಖಾತ್ರಿಪಡಿಸಿರುವುದು ನನಗೆ ತುಂಬ ಖುಷಿಯಾಗಿದೆ. ಉಪಚುನಾವಣೆಯಲ್ಲಿ ಗೆದ್ದ 11 ಶಾಸಕರಿಗೂ ಸಚಿವ ಸ್ಥಾನ ಸಿಗುವ ಭರವಸೆ ಇದೆ. ನಾವು 17 ಜನರು ಮಾತ್ರವಲ್ಲ, ಒಟ್ಟು 117 ಶಾಸಕರು. ನಮ್ಮಲ್ಲಿ ಪ್ರತ್ಯೇಕ ಸಭೆ ಇಲ್ಲ. ಇನ್ಮುಂದೆ ಬಿಜೆಪಿ ಸಭೆ ಮಾತ್ರ ನಡೆಯುತ್ತದೆ. ಈ ವಿಚಾರದಲ್ಲಿ ಯಡಿಯೂರಪ್ಪ ನುಡಿದಂತೆ ನಡೆದುಕೊಳ್ಳುವ ಭರವಸೆ ಇದೆ ಎಂದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬೆದರಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಝಡ್ ಪ್ಲಸ್ ಸೆಕ್ಯುರಿಟಿಗೆ ಶಿಫಾರಸು ಮಾಡೋಣ ಎಂದು ವ್ಯಂಗ್ಯವಾಡಿದರು.
ಅವರು ಬಹಳ ಸರಳವಾಗಿ ಇದ್ದವರು. ಅವರಿಗೆ ಕೊಲೆ ಬೆದರಿಕೆ ಇದೆ ಎಂಬ ವಿಚಾರ ನಿಮ್ಮಿಂದಲೇ(ಮಾಧ್ಯಮ) ನನಗೆ ಗೊತ್ತಾಗಿದೆ. ಯಾರಿಂದ ಬೆದರಿಕೆ ಇದೆ ಎಂದು ನನಗೆ ಗೊತ್ತಿಲ್ಲ. ಝಡ್ ಪ್ಲಸ್ ಸೆಕ್ಯುರಿಟಿ ನೀಡಬೇಕೆಂದು ರಾಜ್ಯ ಸರ್ಕಾರದ ಮೂಲಕ ಶಿಫಾರಸು ಮಾಡಲಾಗುವುದು ಎಂದು ಲೇವಡಿ ಮಾಡಿದರು.