ವಿಶ್ವನಾಥ್ ಬೇಡಿಕೆಯಿಂದಾಗಿ ತಪ್ಪಿದ ಸಚಿವ ಸ್ಥಾನ

ಮೈಸೂರು: ಸಮ್ಮಿಶ್ರ ಸರ್ಕಾರದ ಅವನತಿಗೆ ಕಾರಣರಾದ ಅನರ್ಹಗೊಂಡಿರುವ ಶಾಸಕ ಎಚ್.ವಿಶ್ವನಾಥ್ ಅವರ ಬೇಡಿಕೆಯಿಂದಾಗಿ ಹಳೇ ಮೈಸೂರು ಭಾಗದ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ತಪ್ಪಿದೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.

ಈ ಭಾಗದಲ್ಲಿ ಮೂರ‌್ನಾಲ್ಕು ಬಾರಿ ಬಿಜೆಪಿಯಿಂದ ಗೆದ್ದಿರುವ ಮಡಿಕೇರಿ ಶಾಸಕ ಹಾಗೂ ಬೋಪಯ್ಯ ಅವರಿಗೆ ಸಚಿವ ಸ್ಥಾನ ನೀಡಿದ್ದರೆ ಜನರ ಸಂಕಷ್ಟ ಅರಿಯಲು ಸಾಧ್ಯವಾಗುತ್ತಿತ್ತು. ಆದರೆ, ಎಚ್.ವಿಶ್ವನಾಥ್ ಈ ಭಾಗದಿಂದ ನನಗೆ ಮಾತ್ರ ಸಚಿವ ಸ್ಥಾನ ನೀಡಬೇಕು ಎಂದು ಬೇಡಿಕೆ ಇಟ್ಟಿರುವುದರಿಂದ ಆ ಸ್ಥಾನವನ್ನು ಅವರಿಗೆ ಮೀಸಲಿಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಾಕೃತಿಕ ವಿಕೋಪದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಿರುವಾಗ ಮಧ್ಯಂತರ ಚುನಾವಣೆ ಪರಿಸ್ಥಿತಿ ನಿರ್ಮಾಣವಾಗಬಾರದು. ಆದರೆ, ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ನಂತರದ ಪರಿಸ್ಥಿತಿ ನೋಡಿದರೆ ಮಧ್ಯಂತರ ಚುನಾವಣೆ ಆಗಬಹುದು ಅನಿಸುತ್ತದೆ ಎಂದು ಭವಿಷ್ಯ ನುಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ ಬಳಿಕ ಜನರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಬದಲಾಗಿ 600 ಅಧಿಕಾರಿ ಗಳನ್ನು ವರ್ಗಾವಣೆ ಮಾಡಿ ದಾಖಲೆ ಮಾಡಿದ್ದು, ಒಂದೇ ಸ್ಥಳದಲ್ಲಿ ಮೂರು ವರ್ಷ ಪೂರೈಸದ ಅಧಿಕಾರಿಗಳನ್ನೂ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.

ಸಂತ್ರಸ್ತರಿಗೆ 10 ಲಕ್ಷ ರೂ.ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಿ : ಕಳೆದ ವರ್ಷ ನೆರೆ ಹಾವಳಿಯಿಂದ ಮನೆ ಕಳೆದುಕೊಂಡು ನಿರಾಶ್ರಿತರು ಸಂಕಷ್ಟದಲ್ಲಿದ್ದಾಗ ಅಂದಿನ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಮನೆ ಕಳೆದುಕೊಂಡವರಿಗೆ ತಕ್ಷಣ 1.03 ಲಕ್ಷ ರೂ. ನೀಡಿದ್ದರು. ಅಲ್ಲದೆ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಕುಟುಂಬಕ್ಕೆ 50,000 ರೂ. ನೀಡಿದ್ದರು. ಪ್ರಾಣಹಾನಿಯಾದ ಕುಟುಂಬಕ್ಕೆ 5 ಲಕ್ಷ ರೂ., ಬಾಡಿಗೆ ಭತ್ಯೆಯಾಗಿ 10,000 ರೂ. ಜತೆಗೆ ತಲಾ 9.85 ಲಕ್ಷ ರೂ.ವೆಚ್ಚದಲ್ಲಿ ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಟ್ಟರು ಎಂದ ಅವರು, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರೈತರ 48 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡಲಾಗಿದ್ದು, ನೆರೆ ಹಾವಳಿ ಯಿಂದ ಸಂತ್ರಸ್ತರಾದವರಿಗೆ ಸೂಕ್ತ ಪರಿಹಾರ ನೀಡಲಾಗಿದೆ ಎಂದರು. 

ನೆರೆ ಹಾವಳಿಯಿಂದ ನಿರಾಶ್ರಿತರಾದವರಿಗೆ ಈಗಿನ ಸರ್ಕಾರ 5,000 ರೂ.ಗಳನ್ನು ಬಾಡಿಗೆ ಭತ್ಯೆ ಎಂದು ನೀಡುತ್ತಿದೆ. ಎನ್‌ಡಿಆರ್‌ಎಫ್‌ನ ಮಾರ್ಗಸೂಚಿಯಂತೆ ಪ್ರತಿ ಕುಟುಂಬಕ್ಕೆ 10,000 ರೂ. ಪರಿಹಾರ ಘೋಷಿಸಲಾಗಿದೆ. ಇದರಿಂದ ಸಂತ್ರಸ್ತರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ದೊರೆಯುವುದಿಲ್ಲ. ಹಾಗಾಗಿ, 10,000 ರೂ.ಗಳ ಬಾಡಿಗೆ ಭತ್ಯೆ ಜತೆಗೆ 25,000 ರೂ.ಗಳನ್ನು ಬೆಳೆ ಪರಿಹಾರವೆಂದು ನೀಡಬೇಕು. ಜತೆಗೆ ತಲಾ 10 ಲಕ್ಷ ರೂ. ವೆಚ್ಚದಲ್ಲಿ ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.

ಪಾಲಿಕೆ ಸದಸ್ಯ ಎಸ್‌ಬಿಎಂ ಮಂಜು, ಮಾಜಿ ಮೇಯರ್ ಆರ್.ಲಿಂಗಪ್ಪ, ಜೆಡಿಎಸ್ ಮುಖಂಡ ಪಡುವಾರಹಳ್ಳಿ ಸೋಮು ಇದ್ದರು.

 

Leave a Reply

Your email address will not be published. Required fields are marked *