ಚಿಕ್ಕಮಗಳೂರು: ಸಾಂಪ್ರದಾಯಿಕ ಕರಕುಶಲ ವಸ್ತುಗಳಲ್ಲಿ ತೊಡಗಿರುವ ಜನರನ್ನು ಬೆಂಬಲಿಸುವುದು ವಿಶ್ವಕರ್ಮ ಯೋಜನೆ ಉದ್ದೇಶವಾಗಿದ್ದು, ಸ್ಥಳೀಯ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳ ಮೂಲಕ ಪ್ರಾಚೀನ ಸಂಪ್ರದಾಯಗಳನ್ನು ಜೀವಂತವಾಗಿಸುತ್ತದೆ ಎಂದು ಪಿಎಂ ವಿಶ್ವಕರ್ಮ ಯೋಜನಾ ಸಮಿತಿ ಜಿಲ್ಲಾ ಸದಸ್ಯ ಸಂತೋಷ್‌ಕೋಟ್ಯಾನ್ ಹೇಳಿದರು.
ನಗರದ ಕೆ.ಎಂ.ರಸ್ತೆ ಸಮೀಪದ ಪಿಎಂ ವಿಶ್ವಕರ್ಮ ಯೋಜನಾ ತರಬೇತಿ ಕೇಂದ್ರದಲ್ಲಿ ಶನಿವಾರ ನಡೆದ ವಿಶ್ವಕರ್ಮ ಯೋಜನೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಭಾರತದ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಮರು ರೂಪಿಸುವ ಮತ್ತು ಅದರ ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸುವ ಗುರಿ ಹೊಂದಿರುವ ಒಂದು ಪ್ರಮುಖ ಉಪಕ್ರಮವಾಗಿದೆ. ಇದು ಕರಕುಶಲ ಉದ್ಯಮವನ್ನು ಮರು ರೂಪಿಸಲು ಕೌಶಲ್ಯ ವರ್ಧನೆ ಮತ್ತು ಆಧುನಿಕ ತಂತ್ರಜ್ಞಾನವನ್ನು ನೀಡುತ್ತದೆ ಎಂದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು ನಿರ್ವಹಿಸುತ್ತಿರುವ ವಿಶ್ವಕರ್ಮ ಯೋಜನೆಯು ಕಾರ್ಮಿಕರ ಕೌಶಲ್ಯಗಳನ್ನು ಹೆಚ್ಚಿಸುವ ಮೂಲಕ ಹಾಗೂ ಅವರ ಉತ್ಪನ್ನಗಳ ಗುಣಮಟ್ಟ ಸುಧಾರಿಸಿ ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು. ದೇಶಾದ್ಯಂತ ಪಿಎಂ ವಿಶ್ವಕರ್ಮ ಫಲಾನುಭವಿಗಳಿಗೆ ಮಾರುಕಟ್ಟೆ, ಬ್ರ್ಯಾಂಡಿಗ್, ಪ್ಯಾಕೇಜಿಂಗ್ ಇತ್ಯಾದಿಗಳಿಗೆ ಬೆಂಬಲ ನೀಡಲಾಗುತ್ತಿದೆ. ಪಿಎಂ ವಿಶ್ವಕರ್ಮ ಫಲಾನುಭವಿಗಳು ವಿವಿಧ ವ್ಯಾಪಾರ ಮೇಳಗಳು, ರಾಜ್ಯಮಟ್ಟದ ಪ್ರದರ್ಶನಗಳು ಇತ್ಯಾದಿಗಳ ಮೂಲಕ ತಮ್ಮ ಕರಕುಶಲ ವಸ್ತುಗಳು, ಉತ್ಪನ್ನಗಳ ನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಅನುಕೂಲ ಮಾಡಿಕೊಡಲಾಗಿದೆ ಎಂದರು.
ಪಿಎಂ ವಿಶ್ವಕರ್ಮ ಯೋಜನೆಯ ಜಿಲ್ಲಾ ಸಂಚಾಲಕ ರಾಕೇಶ್, ತರಬೇತಿ ಕೇಂದ್ರದ ಸಂಯೋಜಕಿ ಸಂಧ್ಯಾ ಆಚಾರ್ಯ ಉಪಸ್ಥಿತರಿದ್ದರು.
