ಶಿಕಾರಿಪುರ: ಸಾಧು, ಸಂತರು, ಋಷಿಮುನಿಗಳು ದೈವಾಂಶ ಸಂಭೂತರು. ಈ ಮಣ್ಣನ್ನು ಪುಣ್ಯದ ಮಣ್ಣನ್ನಾಗಿಸಿದರು. ವಿಶ್ವಕರ್ಮರು ಕೂಡ ಒಬ್ಬ ದೈವಾಂಶ ಪುರುಷ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ತಾಲೂಕು ಆಡಳಿತ, ತಾಲೂಕು ವಿಶ್ವಕರ್ಮ ಸಮಾಜದಿಂದ ಮಂಗಳವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶ್ವಕರ್ಮರು ದೈವಶಿಲ್ಪಿ, ಅವರು ಜಗದ ಹಿತಕ್ಕಾಗಿ ದೇವ ಮಂದಿರಗಳನ್ನು ನಿರ್ಮಿಸಿದವರು ಎಂದು ಬಣ್ಣಿಸಿದರು.
ದೇವತೆಗಳು ಕಂಡ ಅಪ್ರತಿಮ ಕಲಾನಿಪುಣರಾಗಿದ್ದ ವಿಶ್ವಕರ್ಮರು ಕೆತ್ತನೆಯಲ್ಲಿ ಪವಾಡವನ್ನೇ ಮಾಡಿದವರು. ಈ ಸಮಾಜದ ಅಪೂರ್ವ ಕಲೆ ನಶಿಸಿಹೋಗದಂತೆ ಎಚ್ಚರವಹಿಸಬೇಕಿದೆ. ಮುಂದಿನ ಪೀಳಿಗೆಗೆ ಈ ವಿಶಿಷ್ಟ ಕಲೆಯನ್ನು ಧಾರೆಯೆರೆಯಬೇಕು. ಸಂಘ ಸಂಸ್ಥೆಗಳ ಮೂಲಕ ತರಬೇತಿ ನೀಡಬೇಕು. ಸಮಾಜದ ಸಂಸ್ಕೃತಿ, ಆಚಾರಗಳು ಕೂಡ ವಿಶಿಷ್ಟ, ವಿಭಿನ್ನವಾಗಿವೆ ಎಂದರು.
ವಿಶ್ವಕರ್ಮ ಸಮಾಜ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜ. ಇತರ ಸಮಾಜಗಳಂತೆ ಸಂಘಟಿತರಾಗಿ ಸದೃಢರಾಗಬೇಕು. ಇಂದಿಗೂ ಶಿಲ್ಪಕಲೆ, ಮರದ ಕೆತ್ತನೆಗಳಲ್ಲಾಗಲಿ, ದೇವಾಲಯ ಹಾಗೂ ರಥ ನಿರ್ಮಾಣದಲ್ಲಾಗಲಿ ವಿಶ್ವಕರ್ಮರು ಮುಂಚೂಣಿಯಲ್ಲಿದ್ದಾರೆ. ಕೌಶಲ, ಕಲೆ ಎನ್ನುವುದು ಸಮಾಜಕ್ಕೆ ಪರಂಪರಾಗತವಾಗಿ ಬಂದಿದೆ ಎಂದು ತಿಳಿಸಿದರು.
ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಆಚಾರ್, ವಡ್ನಾಳ್ ವಿಶ್ವಕರ್ಮ ಸಮಾಜದ ಅಧ್ಯಕ್ಷ ಮಂಜಾಚಾರ್, ಪುರಸಭೆ ಅಧ್ಯಕ್ಷೆ ಶೈಲಾ ಮಡ್ಡಿ, ಇಒ ಕಿರಣ್‌ಕುಮಾರ್ ಹರ್ತಿ, ಗ್ರೇಡ್-2 ತಹಸೀಲ್ದಾರ್ ರಂಜಿತ್, ವಾಸುದೇವ್, ಉಪನ್ಯಾಸಕಿ ಪೂಜಾ, ಡಾ. ಶ್ರೀನಿವಾಸ್, ನಾಗರಾಜಾಚಾರ್, ದಿವಾಕರ್ ಇತರರಿದ್ದರು.