More

    ಬಿಜೆಪಿಗೆ ನಾಯಕರು ನೂರಾರು; ಪ್ರವೀಣ ಒಬ್ಬನೇ!

    ಬಿಜೆಪಿಗೆ ನಾಯಕರು ನೂರಾರು; ಪ್ರವೀಣ ಒಬ್ಬನೇ!ಕಾಂಗ್ರೆಸ್ ಮತ್ತು ದಳಗಳಲ್ಲಿ ನಾಯಕನದ್ದೇ ಪ್ರಮುಖ ಪಾತ್ರ, ಪರಿವಾರದ್ದೇ ದೊಡ್ಡ ಜವಾಬ್ದಾರಿ. ಅಲ್ಲಿ ಒಬ್ಬ ವ್ಯಕ್ತಿಯ ಮೇಲೆ ಪಕ್ಷ ನಿರ್ವಣಗೊಂಡಿದೆ. ಆದರೆ ಬಿಜೆಪಿ, ಕಾರ್ಯಕರ್ತರೇ ಹೆಗಲು ಕೊಟ್ಟ ಪಕ್ಷ. ಇವರು ಮುನಿಸಿಕೊಂಡರೆ ನಾಯಕರುಗಳೆಲ್ಲ ಅಕ್ಷರಶಃ ಬೀದಿಗೇ!

    ಕರ್ನಾಟಕದ ಬಿಜೆಪಿಯ ವಿರುದ್ಧ ಹಿಂದೆಂದೂ ಕಂಡುಬರದಷ್ಟು ಪ್ರಹಾರ ಕಾಣುತ್ತಿದೆ ಮತ್ತು ಈ ಬಾರಿ ಇದು ಕಾಂಗ್ರೆಸ್ಸಿನ ಅಥವಾ ದಳದ ನಾಯಕರ ಪ್ರಹಾರವಲ್ಲ, ಬದಲಿಗೆ ಬಿಜೆಪಿಯ ಕಾರ್ಯಕರ್ತರೇ ಸಿಡಿದಿರುವ ರೀತಿ! ಹಿಂದುತ್ವಕ್ಕಾಗಿ ತಮ್ಮನ್ನು ಸವೆದುಕೊಂಡಿರುವವರು ಪ್ರತಿಕ್ರಿಯಿಸುತ್ತಿರುವ ಪರಿ ಮತ್ತು ಸುದೀರ್ಘ ಕಾಲ ರಾಷ್ಟ್ರ ಕಾಯಕಕ್ಕಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಜನ ತಮ್ಮೊಳಗಿನ ಕುದಿಯನ್ನು ಹೊರಹಾಕುತ್ತಿರುವ ರೀತಿ. ಈ ಆಕ್ರೋಶ ಪ್ರವೀಣ್ ನೆಟ್ಟಾರು ಎಂಬ ಬಿಜೆಪಿ ಕಾರ್ಯಕರ್ತನ ಸಾವಿಗೆ ಎಂದು ನೀವೇನಾದರು ಭಾವಿಸಿದರೆ ಅದು ಖಂಡಿತವಾಗಿಯೂ ನಮಗೆ ನಾವೇ ಮಾಡಿಕೊಂಡ ಮೋಸ. ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ಆಡಳಿತದ ಮೇಲಿನ ಒಟ್ಟಾರೆ ಅಸಮಾಧಾನವನ್ನು ಜನ ಈ ನೆಪದಲ್ಲಿ ಹೊರಹಾಕುತ್ತಿದ್ದಾರೆ ಅಷ್ಟೆ. ಇಲ್ಲವಾದರೆ ಬಿಜೆಪಿ ನಾಯಕರ ಮನೆಗಳಿಗೆ ಭದ್ರತೆ ಕೊಡುವ, ಬಿಜೆಪಿಯ ರಾಜ್ಯಾಧ್ಯಕ್ಷರು ತಮ್ಮದೇ ಕಾರ್ಯಕರ್ತರ ನಡುವೆ ಪೊಲೀಸರ ರಕ್ಷಣೆಯಲ್ಲಿ ಹೋಗಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ. ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಲು ತಮ್ಮ ಜೀವನವನ್ನೇ ಸಮರ್ಪಿಸಿದ ದೀನದಿಯಾಳ್ ಉಪಾಧ್ಯಾಯರು, ಶ್ಯಾಮ್್ರಸಾದ್ ಮುಖರ್ಜಿಯವರೆಲ್ಲ ತಾವಿರುವ ಸ್ಥಾನದಿಂದಲೇ ಇಂದು ಬಿಕ್ಕಳಿಸಿ ಅಳುತ್ತಿರಬಹುದು. ಆದರೆ, ಒಂದಂತೂ ಸತ್ಯ. ಬಿಜೆಪಿಯಲ್ಲಿ ಶಕ್ತಿಯಿರುವುದು ನಾಯಕನಿಗಲ್ಲ, ಅದು ಕಾರ್ಯಕರ್ತರಿಗೆ ಎಂಬುದನ್ನು ಮತ್ತೊಮ್ಮೆ ಸಮಾಜ ನೋಡುವಂತಾಗಿದೆ. ದರ್ಪದಿಂದ ದಾವಣಗೆರೆ ಸಂಸದ ಸಿದ್ಧೇಶ್ 12 ಕೋಟಿ ಕಾರ್ಯಕರ್ತರಿದ್ದಾರೆ, ಕೆಲವರು ಹೋದರೆ ಬರವಿಲ್ಲ ಎಂದಿದ್ದಾರಲ್ಲ, ಈ ಬಾರಿಯ ಚುನಾವಣೆಗೆ 12 ಕೋಟಿಯಲ್ಲಿ ಎಷ್ಟು ಮಂದಿ ಕಾರ್ಯಕರ್ತರು ಅವರೊಂದಿಗೆ ನಿಲ್ಲುತ್ತಾರೋ ನೋಡಬೇಕಿದೆ. ಕಾಂಗ್ರೆಸ್ ಮತ್ತು ದಳಗಳಲ್ಲಿ ನಾಯಕನದ್ದೇ ಪ್ರಮುಖ ಪಾತ್ರ, ಪರಿವಾರದ್ದೇ ದೊಡ್ಡ ಜವಾಬ್ದಾರಿ. ಅಲ್ಲಿ ಒಬ್ಬ ವ್ಯಕ್ತಿಯ ಮೇಲೆ ಪಕ್ಷ ನಿರ್ವಣಗೊಂಡಿದೆ. ಆದರೆ ಬಿಜೆಪಿ, ಕಾರ್ಯಕರ್ತರೇ ಹೆಗಲು ಕೊಟ್ಟ ಪಕ್ಷ. ಇವರು ಮುನಿಸಿಕೊಂಡರೆ ನಾಯಕರುಗಳೆಲ್ಲ ಅಕ್ಷರಶಃ ಬೀದಿಗೇ! ನೆನಪಿರಲಿ.

    2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಎಡವಟ್ಟುಗಳ ಸರಮಾಲೆಯೇ ನಡೆದಿದೆ. ಕಾರ್ಯಕರ್ತ ಮೈದಾನದ ಫುಟ್​ಬಾಲಿಗಿಂತಲೂ ಕಡೆಯಾಗಿಬಿಟ್ಟ. ಮೊದಲ ದಿನದಿಂದಲೂ ಅಲ್ಲಿ ಎರಡು ಬಣ. ಯಾವ ಬಣದಲ್ಲಿರಬೇಕು ಎಂಬ ಗೊಂದಲ ಕಾರ್ಯಕರ್ತನಿಗಿದ್ದೇ ಇತ್ತು. ತಮ್ಮಲ್ಲಿ ಗೊಂದಲಗಳಿಲ್ಲ ಎಂದು ನಾಯಕರು ಹೇಳಿಕೊಂಡರೂ ರಾಷ್ಟ್ರಮಟ್ಟದಿಂದ ಹಿಡಿದು ಬೂತ್​ವುಟ್ಟದವರೆಗೆ ಎರಡೂ ಬಣಗಳ ವಿಕೃತ ರಾಜಕಾರಣ ಎಂಥವನ ಗಮನಕ್ಕೂ ಬರುವಂತಿತ್ತು. ಬಕೆಟ್ ಹಿಡಿಯುವ ಪರಂಪರೆ ಬಹಳ ಹಿಂದೆಯೇ ಒಳ ನುಸುಳಿತ್ತಾದರೂ ಈಗ ಅದು ತಾರಕಕ್ಕೇರಿತ್ತು. ಒಬ್ಬರ ಕೈ ಮೇಲಾದೊಡನೆ ಕಾರ್ಯಕರ್ತರ ಕತ್ತು ಅತ್ತ ತಿರುಗುತ್ತಿತ್ತು. ಅವರಿಗೆ ಸ್ವಲ್ಪ ಹಿನ್ನಡೆಯಾದರೆ ಇತ್ತ. ನಿರಂತರವಾಗಿ ನೋಯಿಸಿಕೊಂಡ ಕತ್ತು ಈಗ ಸ್ವಾಭಿಮಾನದಿಂದ ಒಂದೆಡೆ ನೋಡುತ್ತಿದೆ ಎನ್ನುವುದೇ ಬಿಜೆಪಿಗೆ ನುಂಗಲಾರದ ತುತ್ತು.

    ಅಧಿಕಾರ ಪಡೆಯಬೇಕೆಂಬ ಧಾವಂತದಲ್ಲಿ ಕಾಂಗ್ರೆಸ್ಸಿನಿಂದ ಸೆಳೆದು ತಂದ ಶಾಸಕರಲ್ಲಿ ಎಷ್ಟು ಮಂದಿ ನಮ್ಮ ಸಿದ್ಧಾಂತಗಳಿಗೆ ಹೊಂದಿಕೊಂಡವರು? ಎಂಬ ಪ್ರಶ್ನೆ ಕೇಳಿದರೆ ಪ್ರತಿಶತ ಸೊನ್ನೆಗಿಂತಲೂ ಕಡಿಮೆ ಎಂದೇ ಹೇಳಬೇಕೇನೋ! ಸಿದ್ಧಾಂತದ ಕಥೆ ಬಿಡಿ, ಹೀಗೆ ಬಂದವರಲ್ಲಿ ಪ್ರಾಮಾಣಿಕರೆಷ್ಟು ಮಂದಿ ಎಂದು ಕೇಳಿದರೆ ಉತ್ತರಿಸುವುದು ಬಲುಕಷ್ಟ. ಅಂದರೆ ಭ್ರಷ್ಟ, ಅಪ್ರಾಮಾಣಿಕ, ಸಿದ್ಧಾಂತ ವಿರೋಧಿ, ಕಾರ್ಯಕರ್ತರ ಮೇಲೆ ಕೈಮಾಡಿದ, ಮೋದಿಯನ್ನು ಅಪಶಬ್ದಗಳಲ್ಲಿ ನಿಂದಿಸಿದ ವ್ಯಕ್ತಿಯನ್ನೇ ಕರೆದುಕೊಂಡು ಅಧಿಕಾರ ನಡೆಸಿದ್ದಲ್ಲದೆ, ಅವರನ್ನು ಆಯಕಟ್ಟಿನ ಜಾಗದಲ್ಲಿ ಕೂರಿಸಿದರಲ್ಲ, ಕಾರ್ಯಕರ್ತನೊಳಗಿನ ಲಾವಾ ಕುದಿಯಲು ಆರಂಭವಾಗಿದ್ದೇ ಆಗ. ಇನ್ನು ಇವರನ್ನೆಲ್ಲ ಒಯ್ದು ರೆಸಾರ್ಟ್​ಗಳಲ್ಲಿ ಕೂಡಿಟ್ಟು ನಡೆಸಿದ ಅಸಹ್ಯ ರಾಜಕಾರಣದ ಪರಿಣಾಮವನ್ನು ನಿಜವಾಗಿಯೂ ಎದುರಿಸಬೇಕಾಗಿದ್ದು ಯಾರು? ಕಾರ್ಯಕರ್ತನೇ! ದಿನ ಬೆಳಗಾದರೆ ವಿರೋಧಿಗಳು ಮಾಡುವ ಟ್ರಾಲ್​ಗಳಿಗೆ ತಳಮಟ್ಟದಲ್ಲಿ ಅವನೇ ಉತ್ತರ ಕೊಡಬೇಕಿತ್ತಲ್ಲ. ಸರ್ಕಾರ ಭ್ರಷ್ಟ ರಹಿತವಾಗಿ ಮುಂದಾದರೂ ತಲೆಯೆತ್ತುವಂತೆ ನಡೆದಿದ್ದರೆ ಕಾರ್ಯಕರ್ತ ಹೆಮ್ಮೆಯಿಂದ ಬೀಗಿರುತ್ತಿದ್ದ. ಹಾಗಾಗಲಿಲ್ಲ. ಅವನೀಗ ಈ ಅವಮಾನವನ್ನು ಸಹಿಸಿಕೊಳ್ಳಬೇಕಾಯ್ತಲ್ಲದೇ ತಾನು ಕಾಂಗ್ರೆಸ್ಸಿಗರಂತೆ ಭ್ರಷ್ಟರನ್ನು ಬಗೆಬಗೆಯಾಗಿ ಬೆಂಬಲಿಸಿಕೊಳ್ಳಬೇಕಾಯ್ತು. ಈಗ ಇದೇ ಲಾವಾ ಸಿಡಿದು ಆಚೆ ಬರುತ್ತಿದೆ ಅಷ್ಟೇ.

    ಪ್ರತಿಪಕ್ಷಗಳು 40% ಕಮಿಷನ್ ಸರ್ಕಾರ ಎನ್ನುತ್ತಿದ್ದಾಗ ಒಬ್ಬ ಮಂತ್ರಿಯಾದರೂ ಅದನ್ನು ಕಂಠಮಟ್ಟ ವಿರೋಧಿಸುವ ಧಾಷ್ಟರ್್ಯ ತೋರಲಿಲ್ಲ. ಇತರರನ್ನು ಬಿಡಿ, ಬಿಜೆಪಿಯ ಪ್ರಾಮಾಣಿಕತೆಯ ಪೋಸ್ಟರ್​ಬಾಯ್ ಆಗಿದ್ದ ಸಚಿವರೊಬ್ಬರನ್ನು ವಿಧಾನಸಭೆಯಲ್ಲಿ ಭ್ರಷ್ಟರೆಂದು ಕರೆಯಲಾಯ್ತು. ಅವರ ಭ್ರಷ್ಟತೆಯ ಸಾಕ್ಷಿ ಕೊಡುತ್ತೇನೆ ಎಂದೂ ಹೇಳಲಾಯ್ತು. ಫೇಸ್​ಬುಕ್​ಗಳಲ್ಲಿ ಪುಟಗಟ್ಟಲೆ ಬರೆದುಕೊಳ್ಳುವ ಅವರು ಈ ಕುರಿತಂತೆ ತುಟಿ ಬಿಚ್ಚಲಿಲ್ಲ, ಏನದರ ಅರ್ಥ? ಕೋವಿಡ್ ನಿರ್ವಹಿಸುವಾಗ ಈ ದೇಶದ ಪ್ರಧಾನಿ ಸಂಕಟಪಡುತ್ತಿದ್ದುದು, ದಿನಬೆಳಗಾದರೆ ಹೊಸದೊಂದು ಸವಾಲಿಗೆ ತಮ್ಮನ್ನೇ ಒಡ್ಡಿಕೊಳ್ಳುತ್ತಿದ್ದುದು ಇದೆಲ್ಲ ಜನ ಗಮನಿಸಲಿಲ್ಲವೆಂದಲ್ಲ. ಆದರೆ, ಇಲ್ಲಿ ಆ ಸಂದರ್ಭದಲ್ಲಿ ಹಾಸಿಗೆಗಳನ್ನು ಮಾರಾಟ ಮಾಡಿಕೊಳ್ಳುವ, ವಸ್ತುಗಳ ಖರೀದಿಯಲ್ಲಿ ಹಣ ಲೂಟಿಗೈಯುವ ಸಂಗತಿಗಳು ಕಣ್ಣಿಗೆ ರಾಚುತ್ತಲೇ ಇದ್ದವು. ಕಾರ್ಯಕರ್ತ ಸುಮ್ಮನಿದ್ದಾನೆ ಎಂದರೆ ಒಪ್ಪಿಕೊಂಡಿದ್ದಾನೆ ಎಂದಲ್ಲ, ಅದು ಪ್ರತಿಭಟಿಸುವ ಸಂದರ್ಭವಲ್ಲ ಎಂದರ್ಥ. ತಮ್ಮ ನಾಯಕರ ಭ್ರಷ್ಟಾಚಾರದ ವ್ಯಾಪ್ತಿ ಎಂಥದ್ದೆಂದರೆ ಸದನದಲ್ಲಿ ಸಿದ್ದರಾಮಯ್ಯ ತನ್ನ ಎಂದಿನ ಅಹಂಕಾರದ ಶೈಲಿಯನ್ನು ಬಳಸಿ ಮಂತ್ರಿಗಳನ್ನು, ಸರ್ಕಾರವನ್ನು, ಹಿಂದೂಗಳನ್ನು ಟೀಕಿಸುತ್ತಿದ್ದರೆ ಅಧ್ಯಯನ ಮಾಡಿ ಉತ್ತರ ಕೊಡುವ ತಾಕತ್ತು ಒಬ್ಬನಿಗೂ ಇಲ್ಲ. ಏಕೆಂದರೆ ಆತ ಇವರ ಜಾತಕವನ್ನು ಬಿಚ್ಚಿಡುತ್ತಾನೆಂಬ ಭಯ. ಕಾರ್ಯಕರ್ತ ಇದನ್ನೆಲ್ಲ ಗಮನಿಸುವುದಿಲ್ಲ ಎಂದುಕೊಂಡಿದ್ದೀರೇನು?

    ಭ್ರಷ್ಟಾಚಾರದ ಕಥೆ ಬಿಡಿ. ಕಳೆದ ಮೂರು ವರ್ಷಗಳಲ್ಲಿ ಯಾವ ಸಮಸ್ಯೆಗೆ ಶಾಶ್ವತ ಪರಿಹಾರ ಕೊಟ್ಟಿದ್ದಾರೆಂದು ನಾಯಕರನ್ನು ಕೇಳಿನೋಡಿ. ಶಿಕ್ಷಕರ ಸಮಸ್ಯೆಗಳು ಹಾಗೆಯೇ ಉಳಿದಿವೆ, ಕಾರ್ವಿುಕರ ಸಮಸ್ಯೆಗಳಿಗೆ ಸೊಲ್ಲೆತ್ತಲಿಲ್ಲ, ರೈತರ ಸಮಸ್ಯೆಗಳಿಗೆ ಮಾತನಾಡಲಿಲ್ಲ. ಅಭಿವೃದ್ಧಿಯ ವಿಚಾರ ಬಂದಾಗಲಂತೂ ಯಾವ ಕ್ಷೇತ್ರದಲ್ಲೂ ಕೂಡ ಛಾಪು ಮೂಡಿಸುವ ಕೆಲಸ ನಡೆಯಲಿಲ್ಲ. ಕೋವಿಡ್ ಎನ್ನುವ ನೆಪವನ್ನಿಟ್ಟುಕೊಂಡು ಅದರ ಸೆರಗಿನ ಹಿಂದೆ ಮುಚ್ಚಿಟ್ಟುಕೊಂಡ ಇವರುಗಳ ಕುರಿತಂತೆ ಆಕ್ರೋಶ ಹೊರಹಾಕಲು ಪ್ರವೀಣನ ಸಾವು ನೆಪವಾಯ್ತಷ್ಟೇ.

    ಆಯಕಟ್ಟಿನ ಜಾಗಗಳಲ್ಲಿ ಹೊರಗಿನಿಂದ ಬಂದವರನ್ನೆಲ್ಲ ಕರೆದುಕೊಂಡು ಬಂದು ಕೂರಿಸಿದರಲ್ಲ, ಕೆಳಹಂತದಲ್ಲಿ ದುಡಿಯುತ್ತಿರುವ ಕಾರ್ಯಕರ್ತನಿಗೆ ಕೊಟ್ಟಿದ್ದಾದರೂ ಏನು? ತಾವು, ತಮ್ಮ ಮಕ್ಕಳು ಶಾಶ್ವತವಾಗಿ ಅಧಿಕಾರವನ್ನುಣ್ಣುವ ವ್ಯವಸ್ಥೆ ತಾನೇ? ಎಲ್ಲಿಯೂ ಯಾವ ಬದಲಾವಣೆಯೂ ಆಗಿಲ್ಲ ಎಲ್ಲ ಕಡೆ ಕುಟುಂಬ ರಾಜಕಾರಣದ್ದೇ ಆಟ. ಪ್ರತೀ ಹಂತದಲ್ಲೂ ಕಾರ್ಯಕರ್ತರ ಈ ಅವಗಣನೆ ಇದೆಯಲ್ಲ ಅದು ಪ್ರಶ್ನಿಸದೇ ಹೋಗುವಂಥದ್ದಾಗಿರಲಿಲ್ಲ. ಇಷ್ಟಾದಾಗ್ಯೂ ಸಂಘದ ಹಿನ್ನೆಲೆಯಿಂದ ಬಂದ ಬಿಜೆಪಿಯ ಕಾರ್ಯಕರ್ತ ರಾಷ್ಟ್ರಹಿತಕ್ಕಾಗಿ ಎಲ್ಲವನ್ನೂ ಸಹಿಸಿಕೊಂಡ. ಆದರೆ, ಅಧಿಕಾರವನ್ನು ಅನುಭವಿಸುತ್ತಿದ್ದ ಒಬ್ಬ ಅಯೋಗ್ಯನಾದರೂ ರಾಷ್ಟ್ರಹಿತದ ಮಾತನ್ನಾಡಿದನಾ? ಸಿಎಎ ಪ್ರತಿಭಟನೆಗಳು ರಾಜ್ಯಾದ್ಯಂತ ಜೋರಾಗಿ ನಡೆಯುವಾಗ ಅಧಿಕಾರದಲ್ಲಿರುವವರು ಇದರ ಕುರಿತಂತೆ ಜನರಿಗೆ ತಿಳಿಸಬಲ್ಲ ಕಾರ್ಯಕ್ರಮವನ್ನು ಮಾಡಿದರಾ? ರೈತರ ಒಳಿತಿನ ದೃಷ್ಟಿಯಿಂದ ತಂದ ಶ್ರೇಷ್ಠ ಕಾನೂನಿಗೆ ಬೆಂಬಲವಾಗಿ ನಿಂತು ಹಳ್ಳಿಯಲ್ಲಿ ಸಭೆ ನಡೆಸಿ ವಾತಾವರಣ ರೂಪಿಸಲು ಪ್ರಯತ್ನಿಸಿದ ಒಬ್ಬ ನಾಯಕನನ್ನು ತೋರಿಸಿ! ಮೋದಿಯನ್ನು ಪ್ರೀತಿಸುವ ಮಂದಿ ತಾವೇ ತಾವಾಗಿ ಬೀದಿಗಿಳಿದರು. ರಾಷ್ಟ್ರಹಿತದ ಆತನ ಸಂಕಲ್ಪ ವ್ಯರ್ಥವಾಗದಂತೆ ತಮ್ಮೆಲ್ಲ ಶಕ್ತಿಯನ್ನು ಸಮರ್ಪಿಸಿದರು. ತೀರಾ ಇತ್ತೀಚೆಗೆ ಅಗ್ನಿಪಥ್ ಯೋಜನೆಯ ವಿರುದ್ಧ ಆಕ್ರೋಶ ಭುಗಿಲೇಳುತ್ತಿರುವಾಗಲೂ ಇವರುಗಳು ಮುಂದೆ ಬರಲಿಲ್ಲ. ಆದರೆ, ಪ್ರತಿರಾತ್ರಿಯ ಔತಣಕೂಟಗಳು ಮಾತ್ರ ನಿಲ್ಲುತ್ತಿರಲಿಲ್ಲ. ರಾಜ್ಯದ ಪ್ರಮುಖ ಜವಾಬ್ದಾರಿಯಲ್ಲಿರುವವರೊಬ್ಬರು ಸಂಜೆಯಾದೊಡನೆ ಅನ್​ನೋನ್ ಲೊಕೇಶನ್ (ತಿಳಿಯದ ಜಾಗ)ಕ್ಕೆ ಹೋಗಿ ಕೂತುಬಿಡುತ್ತಾರೆ. ಅನೇಕ ತಾಸುಗಳ ಕಾಲ ಮದಿರೆಯಿಂದ ಉನ್ಮತ್ತರಾಗಿ ಮರಳಿ ಮನೆಗೆ ಬರುತ್ತಾರೆ ಎಂಬುದು ಎಲ್ಲ ಪತ್ರಕರ್ತರಿಗೂ ತಿಳಿದಿರುವ ವಿಚಾರ. ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರಮುಖ ಸಮಸ್ಯೆಗಳ ಚರ್ಚೆಗೆ ಮಾತ್ರ ಬಿಡುವು ಸಿಗುತ್ತಿಲ್ಲ, ಹೀಗಾಗಿ, ಶಾಸಕರೇ ತಂದು ಎದುರಿಗಿಟ್ಟ ನೂರಾರು ಕಡತಗಳಿಗೆ ಸಹಿ ಹಾಕದೇ ಅವರು ಕುಳಿತಿದ್ದಾರೆ ಎಂಬುದನ್ನು ರಾಜ್ಯ ಗಮನಿಸದೇ ಇರುತ್ತದೆ ಎಂದುಕೊಂಡಿರೇನು?

    ಇನ್ನು ಇವರೆಲ್ಲ ಅಧಿಕಾರಕ್ಕೆ ಬಂದದ್ದೇ 23 ಹಿಂದೂ ಕಾರ್ಯಕರ್ತರ ಶವದ ಮೇಲೆ. ಸಿದ್ದರಾಮಯ್ಯನ ತುಷ್ಟೀಕರಣ, ಹಿಂದೂ ವಿರೋಧಿ ಭಾವನೆಗಳಿಂದ ಬೇಸತ್ತಿದ್ದ ಜನ ನಾವೆಲ್ಲ ಹಿಂದೂ- ನಾವೆಲ್ಲ ಒಂದು ಎಂಬುದನ್ನು ಜಪಿಸುತ್ತಲೇ ಭಾಜಪವನ್ನು ಅಧಿಕಾರಕ್ಕೆ ತಂದರು. ಆದರೆ, ಅಜಾನ್​ನ ಗಲಾಟೆಯ ವೇಳೆಗೆ ಕಠಿಣ ನಿರ್ಣಯವನ್ನು ತೆಗೆದುಕೊಳ್ಳುವ ತಾಕತ್ತನ್ನೇ ತೋರಲಿಲ್ಲ. ಮತ್ತದೇ ಹಿಂದೂ ಕಾರ್ಯಕರ್ತರು ಬೀದಿಗಿಳಿದು ಹನುಮಾನ್ ಚಾಲೀಸಾ ಪಠಿಸುತ್ತೇವೆ ಎಂದನಂತರ ತಾನು ನಿರ್ಣಯ ತೆಗೆದುಕೊಳ್ಳುವ ಅನಿವಾರ್ಯತೆಗೆ ಒಳಗಾಯ್ತು. ಮುಸಲ್ಮಾನರು ಹಲಾಲ್ ಮಾಡುತ್ತಿದ್ದಾಗ ಅದನ್ನು ಪ್ರತಿಭಟಿಸಿ ಹರ್ಷನ ಕೊಲೆಯ ಪ್ರತೀಕಾರಕ್ಕೆ ಜಾತ್ರೆಗಳಲ್ಲಿ ಮುಸಲ್ಮಾನರಿಗೆ ಅಂಗಡಿಗಳನ್ನು ಕೊಡುವುದಿಲ್ಲವೆಂಬ ಸಾತ್ವಿಕ ಪ್ರತಿಭಟನೆಯನ್ನು ಅವಹೇಳನ ಮಾಡಿ ನಿಷೇಧಿಸಲು ಹೊರಟಿದ್ದು ಇದೇ ಸರ್ಕಾರ ತಾನೇ! ಮೈಸೂರಿನ ಬಳಿ ಅಧಿಕಾರಿಯೊಬ್ಬ ನೂರಾರು ವರ್ಷದ ಹಳೆಯ ದೇವಾಲಯವನ್ನೇ ಒಡೆದು ಬಿಸಾಡಿದಾಗ ಸತ್ತಂತಿತ್ತಲ್ಲ ಸರ್ಕಾರ! ಅಂದು ಹಿಂದೂ ಕಾರ್ಯಕರ್ತರು ರೊಚ್ಚಿಗೆದ್ದು ನಡೆಸಿದ್ದ ಪ್ರತಿಭಟನೆ ಮುಸಲ್ಮಾನರ ವಿರುದ್ಧವಲ್ಲ, ತಮ್ಮದ್ದೇ ಸರ್ಕಾರ, ತಮ್ಮದ್ದೇ ನಾಯಕರ ವಿರುದ್ಧ! ಆ ಪ್ರತಿಭಟನೆಯ ರಾಜ್ಯವ್ಯಾಪಿ ರೂಪವನ್ನು ನೀವೀಗ ನೋಡುತ್ತಿದ್ದೀರಿ ಅಷ್ಟೇ.

    ಈ ಒಟ್ಟಾರೆ ಪ್ರತಿಭಟನೆಯ ಮೊದಲ ಕಿಡಿ ಬೆಳಕಿಗೆ ಬಂದಿದ್ದು ಹರ್ಷನ ಸಾವಿನ ವೇಳೆಗೆ. ನಾಯಕರುಗಳೆಲ್ಲ ಸಾವಿನ ಮನೆಗೆ ಧಾವಿಸಿ ಹಣಕೊಟ್ಟು ಆಡಿದ ಮಾತುಗಳನ್ನು ಈಗೊಮ್ಮೆ ನೆನಪಿಸಿಕೊಳ್ಳಬೇಕು ಅಷ್ಟೇ. ಬೆಂಗಳೂರು ದಕ್ಷಿಣದ ಸಂಸದ ಕೊಲೆಗಡುಕರಿಗೆ ನೇಣು ಹಾಕಿಸುವವರೆಗೂ ವಿರಮಿಸುವುದಿಲ್ಲ ಎಂದಿದ್ದ. ಅಫ್ಜಲ್ ಗುರುವನ್ನು, ಕಸಬ್​ನನ್ನು ನೇಣಿಗೇರಿಸುವ ವೇಳೆಗೆ ಈ ದೇಶಕ್ಕೆ ಸಾಕುಸಾಕಾಗಿ ಹೋಗಿತ್ತು. ಅಂಥದ್ದರಲ್ಲಿ ಈ ಕೊಲೆಗಾರರಿಗೆ ನೇಣು ಕೊಡಿಸುತ್ತೇನೆ ಎಂದು ಹೇಳುವಾಗ ಆತ ವಕೀಲ ಹೌದೋ ಅಲ್ಲವೋ ಎಂಬ ಅನುಮಾನ ಮೂಡಿಬಿಟ್ಟಿತ್ತು! ನೇಣು ಪಕ್ಕಕ್ಕಿರಲಿ, ಉಗ್ರವಾದ ಶಿಕ್ಷೆಯನ್ನೂ ಕೊಡದ ಸರ್ಕಾರ ಜೈಲಿನಲ್ಲಿ ಅವರಿಗೆ ಅತ್ಯಾಧುನಿಕ ಮೊಬೈಲ್​ಗಳನ್ನು ಕೊಟ್ಟು ವಿಡಿಯೊ ಕಾಲ್​ಗಳನ್ನು ಮಾಡುವ ವ್ಯವಸ್ಥೆ ಮಾಡಿಕೊಟ್ಟುಬಿಟ್ಟಿತು. ಮೊದಲೇ ಇದ್ದ ಆಕ್ರೋಶದ ಉರಿಗೆ ಸಾಕಷ್ಟು ತುಪ್ಪವನ್ನು ಇದು ಸುರಿಯಿತು. ಇವೆಲ್ಲವನ್ನೂ ಒಳಗೊಳಗೇ ನುಂಗಿಕೊಂಡ ಕಾರ್ಯಕರ್ತನಿಗೆ ತನ್ನದ್ದೇ ಕಾರ್ಯಕರ್ತ ಮಿತ್ರನೊಬ್ಬನ ಹತ್ಯೆಯನ್ನು ಸಹಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಆತ ಆಕ್ರೋಶದಿಂದ ತನ್ನ ಸ್ಥಾನಕ್ಕೇ ರಾಜಿನಾಮೆ ಕೊಟ್ಟ. ಆದರೆ, ನಾಯಕರೆನಿಸಿಕೊಂಡವರು ಮಾಡಿದ್ದೇನು? ಅವನ ಭಾವನೆಗಳಿಗೆ ಗೌರವ ಕೊಟ್ಟು ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತೇನೆ ಎನ್ನುವುದನ್ನು ಬಿಟ್ಟು ಕಾರ್ಯಕರ್ತ ಕಾಲ ಕಸವೆಂಬಂತೆ ಮಾತನಾಡಿದರಲ್ಲ, ಸಹನೆ ಸಾಧ್ಯವಿದೆಯೇನು? ಗೃಹ ಸಚಿವರು ಕಠಿಣಕ್ರಮದ ಮಾತುಗಳನ್ನು ಬಿಟ್ಟರೆ ಬೇರೆ ಮಾತನಾಡಲಿಲ್ಲ. ಈ ಗಲಾಟೆ ತೀವ್ರರೂಪ ಪಡೆದಿದ್ದರೂ ನಮ್ಮ ಸಂಸದರೊಬ್ಬರು ವಿಕ್ರಾಂತ್ ರೋಣ ಸಿನಿಮಾ ನೋಡುತ್ತಾ ಕುಳಿತು ಕಾರ್ಯಕರ್ತರು ತಲೆಯೆತ್ತದಿರಲು ಮಾಡಬೇಕಾದ ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಟ್ಟರು. ಯುವಮೋರ್ಚಾ ಜನರಿಂದ ಹಣ ಸಂಗ್ರಹಣೆ ಮಾಡಿ ಎಂದು ಹೇಳಿಕೆ ಕೊಟ್ಟು ಛೀಮಾರಿಗೆ ಒಳಗಾಯ್ತು. ಲೂಟಿ ಮಾಡಿದ ಹಣದಲ್ಲಿ ಔತಣಕೂಟಗಳನ್ನು ನಡೆಸುತ್ತಾ, ಸತ್ತ ಕಾರ್ಯಕರ್ತನಿಗೆ ಜನರ ಭಿಕ್ಷೆಯೇನು? ಛೀ! ತಪ್ಪುಗಳ ಮೇಲೆ ತಪ್ಪು ಮಾಡುತ್ತಲೇ ಇದೆ ಪಕ್ಷ. ಪಕ್ಷದ ಮುಖ್ಯ ಜವಾಬ್ದಾರಿಯನ್ನು ಹೊತ್ತಿರುವವರೊಬ್ಬರು ಈ ಘಟನೆಗೆಲ್ಲ ಪಕ್ಷಬಿಟ್ಟು ಹೋದ ವ್ಯಕ್ತಿಯೊಬ್ಬನನ್ನು, ಹಾಲಿ ಶಾಸಕನೊಬ್ಬನನ್ನು ಗುರಿಯಾಗಿಸಿ ಅವರೇ ಸೂತ್ರಧಾರರು ಎಂದೆಲ್ಲ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹಾಗೇನಾದರೂ ಒಂದಿಬ್ಬರು ವ್ಯಕ್ತಿಗಳು ಇಡೀ ರಾಜ್ಯದ ಬಿಜೆಪಿ ಕಾರ್ಯಕರ್ತರಲ್ಲಿ ಇಂತಹ ಸಂಚಲನ ಉಂಟುಮಾಡಬಲ್ಲರು ಎಂದಾದರೆ ಇವರೆಲ್ಲರಿಗಿಂತಲೂ ಅವರೇ ಸಮರ್ಥ ನಾಯಕರೆಂದಾಯ್ತಲ್ಲ!

    ಇವರೆಲ್ಲರಿಗೂ ಹಣ ಮತ್ತು ಅಧಿಕಾರದ ಮದ ನೆತ್ತಿಗೇರಿದೆ ಎನ್ನುವುದರ ಸಂಕೇತ ಇದು. ಈಶ್ವರಪ್ಪ ಧಿಮಾಕಿನ ಹೇಳಿಕೆ ಕೊಟ್ಟರಲ್ಲ, ಒಬ್ಬ ಕಾರ್ಯಕರ್ತ ಹೋದರೆ ಮತ್ತೊಬ್ಬ ಬರುತ್ತಾನೆ ಅಂತ. ಆದರೆ, ನೆನಪಿರಲಿ ಅವರ ಸ್ಥಾನ ತುಂಬಲು ಶಿವಮೊಗ್ಗದಲ್ಲೇ ಹತ್ತಾರು ನಾಯಕರಿದ್ದಾರೆ. ದೇವದುರ್ಲಭ ಬಿಜೆಪಿಯ ಕಾರ್ಯಕರ್ತರ ನಿರ್ವಾತವನ್ನು ತುಂಬಲು ಬೇರೆ ಕಾರ್ಯಕರ್ತರಿಲ್ಲ. ಒಮ್ಮೆ ಉದ್ದನೆಯ ಕನ್ನಡಿಯ ಮುಂದೆ ನಿಂತುಕೊಂಡು ಈ ನಾಯಕರುಗಳೆಲ್ಲ ತಮ್ಮ ತಮ್ಮ ಮುಖಗಳನ್ನು ನೋಡಿಕೊಂಡರೆ ಒಳಿತು. ಮೋದಿಯ ಕಾರ್ಯಕ್ಕೆ ಕೈಜೋಡಿಸಲು ಸಾಧ್ಯವಾಗದಿದ್ದರೆ ಕೊನೆಯಪಕ್ಷ ಮಸಿ ಬಳಿಯಬೇಡಿ!

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts