Wednesday, 12th December 2018  

Vijayavani

ಟ್ರಿನಿಟಿ ಸರ್ಕಲ್​​​ ಬಳಿ ಬಿರುಕು ಬಿಟ್ಟ ಪಿಲ್ಲರ್ - 10 ಕಿಮೀ ವೇಗದಲ್ಲಿ ಮೆಟ್ರೋ ಓಡಾಟ - ಸಮಸ್ಯೆ ಬಗೆಹರಿಸೋದಾಗಿ ಹೇಳಿದ ಸಿಎಂ        ಸದನದ ಹೊರಗೆ NPS ಆದೇಶ ಹಿನ್ನೆಲೆ - ಸಿಎಂ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಸಿದ್ದತೆ -  ಸಂಕಷ್ಟ ತಂದ ಪೆನ್ಶನ್‌ ಸ್ಕೀಂ        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -  ರಾಜ್ಯಪಾಲರನ್ನು ಭೇಟಿಯಾಗಿ ಕಾಂಗ್ರೆಸ್ ಹಕ್ಕು ಮಂಡನೆ        ನಾಳೆ ಕೆಸಿಆರ್ ಪಟ್ಟಾಭಿಷೇಕ- ಪ್ರಮಾಣವಚನಕ್ಕೆ ಚಂದ್ರಶೇಖರ್ ರಾವ್ ಸಿದ್ಧತೆ - ರಾಜ್ಯಪಾಲರನ್ನು ಭೇಟಿಯಾದ ನಾಯಕ        ಶ್ರೀರಂಗಪಟ್ಟಣದಲ್ಲಿ ಶೂಟಿಂಗ್ ವೇಳೆ ಅವಾಂತರ - ಭರತ ಬಾಹುಬಲಿ ತಂಡದ ಮೇಲೆ ಹೆಜ್ಜೇನು ದಾಳಿ -ಏಳು ಮಂದಿ ಆಸ್ಪತ್ರೆಗೆ       
Breaking News

ವಿದೇಶ ಪ್ರವಾಸದ ಫಲ ಈಗಾಗಲೇ ಕಾಣುತ್ತಿದೆ…

Monday, 06.08.2018, 3:03 AM       No Comments

| ಚಕ್ರಚರ್ತಿ ಸೂಲಿಬೆಲೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳೆದ 4 ವರ್ಷಗಳಲ್ಲಿ ಮಾಡಿದ ವಿದೇಶ ಪ್ರವಾಸಗಳು, ಅವುಗಳ ಫಲಶ್ರುತಿ ಇತ್ಯಾದಿ ಸಂಗತಿ ಬಗ್ಗೆ ಕಳೆದ ಅಂಕಣದಲ್ಲಿ ಪ್ರಸ್ತಾಪಿಸಿದ್ದೆ. ಈ ವಾರ ಅದರ ಮುಂದಿನ ಭಾಗ ನೋಡೋಣ. ನನೆಗುದಿಗೆ ಬಿದ್ದಿದ್ದ, ಫ್ರಾನ್ಸ್ ಜತೆಗಿನ ರಫೆಲ್ ಯುದ್ಧವಿಮಾನ ಒಪ್ಪಂದಕ್ಕೆ ಮರುಚಾಲನೆ ನೀಡುವಲ್ಲಿ ಯಶಸ್ವಿಯಾದ ಮೋದಿ ಸರ್ಕಾರ, ಕಾಂಗ್ರೆಸ್ ಮಾಡಿಕೊಂಡ ಒಪ್ಪಂದಕ್ಕಿಂತ ಕಡಿಮೆ ಬೆಲೆಯಲ್ಲಿ ಅವುಗಳನ್ನು ಖರೀದಿ ಮಾಡುವಷ್ಟು ಚೌಕಾಶಿ ಮಾಡಿತು. ಅಷ್ಟೇ ಅಲ್ಲದೇ, ಮೋದಿಯವರು ತಮ್ಮ ವೈಯಕ್ತಿಕವಾದ ಸಂಬಂಧವನ್ನು ಮುಂದಿಟ್ಟುಕೊಂಡೇ ವಾಯುಸೇನೆಗೆ ಫೈಟರ್ ಜೆಟ್​ಗಳನ್ನು ಉಡುಗೊರೆಯಾಗಿ ಪಡೆದುಕೊಂಡರು. ಇದರ ಫಲವಾಗಿಯೇ ಇಂದು ಚೀನಾದ ವೃದ್ಧಿಯಾಗುತ್ತಿರುವ ಮಿಲಿಟರಿ ಶಕ್ತಿಗೆ ಭಾರತ ಸೆಡ್ಡು ಹೊಡೆದು ನಿಂತಿದೆ.

ಹಾಗಂತ ಚೀನಾದೊಂದಿಗೆ ನಮ್ಮ ಬಾಂಧವ್ಯವೇನು ಹಾಳಾಗಿಲ್ಲ. ಕ್ಸಿ ಜಿನ್​ಪಿಂಗ್ ಚೀನಾದ ಅಧ್ಯಕ್ಷರಾಗಿ ಮರು ಆಯ್ಕೆಯಾದಾಗ ಅವರಿಗೆ ಶುಭಾಶಯ ಕೋರಿದ ಮೊದಲಿಗರಲ್ಲಿ ಮೋದಿಯೂ ಇದ್ದರು. ಡೋಕ್ಲಾಂನಲ್ಲಿ ಚೀನಾಕ್ಕೆ ಮುಟ್ಟಿಕೊಂಡು ನೋಡುವಂತಹ ಪಾಠವನ್ನು ಕಲಿಸಿ, ದಕ್ಷಿಣ ಚೀನಾ ಸಮುದ್ರದಲ್ಲಿ ಬಲ ವೃದ್ಧಿಸಿಕೊಂಡಿರುವ ಭಾರತ ಜಾಗತಿಕ ಮಟ್ಟದಲ್ಲಿ ಚೀನೀ ಪ್ರಭಾವವನ್ನು ಕಡಿಮೆ ಮಾಡುತ್ತಿದೆ. ಇದಕ್ಕಾಗಿ ಅಮೆರಿಕ, ಆಸ್ಟ್ರೇಲಿಯಾ, ಜಪಾನ್​ಗಳೊಂದಿಗೆ ಮೋದಿ ನಡೆಸಿದ ಮಾತಿನ ಕಸರತ್ತನ್ನು ಅರ್ಥೈಸಿಕೊಳ್ಳುವುದು ಸುಲಭವಲ್ಲ. ತಾನು ಕೊಟ್ಟ ಸಾಲದ ಸುಳಿಯಲ್ಲಿಯೇ ರಾಷ್ಟ್ರಗಳು ಸಿಲುಕುವಂತೆ ಮಾಡಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿದ್ದ ಚೀನಾ ಪ್ರಬಲವಾಗಿ ಬೆಳೆಯುತ್ತಿರುವ ಭಾರತದ ಕಾರಣದಿಂದಾಗಿಯೇ ಇಂದು ತನ್ನ ರೀತಿ-ನೀತಿಯನ್ನು ಬದಲಿಸಿಕೊಳ್ಳಬೇಕಾಗಿ ಬಂದಿದೆ. ಏಷ್ಯಾದಲ್ಲಂತೂ ಚೀನಾಕ್ಕೆದುರಾಗಿ ಭಾರತದೊಂದಿಗೆ ನಿಲ್ಲಬೇಕೆಂಬ ಬಯಕೆ ಪಾಕಿಸ್ತಾನಕ್ಕೆ ಬಿಟ್ಟು ಉಳಿದೆಲ್ಲ ರಾಷ್ಟ್ರಕ್ಕೂ ಇದೆ! ಚೀನಾದ ಬದ್ಧವೈರಿ ವಿಯೆಟ್ನಾಂಗೆ ಭೇಟಿ ಕೊಟ್ಟ ಮೋದಿ ಅಲ್ಲಿ ತೈಲ ಹೊರತೆಗೆಯುವ ಗುತ್ತಿಗೆಯನ್ನು ಪಡೆದುಕೊಂಡದ್ದಲ್ಲದೇ ಚೀನಾದ ವಿಸ್ತರಣಾವಾದಕ್ಕೆ ತಾನು ಅಡ್ಡಗೋಡೆಯಾಗಿ ನಿಲ್ಲುವೆನೆಂಬ ಧೈರ್ಯವನ್ನು ವಿಯೆಟ್ನಾಂಗೆ ತುಂಬಿದರು. ಹಾಗಂತ ಇದು ಸುಮ್ಮಸುಮ್ಮನೆ ಆಗಿದ್ದಲ್ಲ, ಜಗತ್ತಿನ ಪ್ರವಾಸ ಮಾಡುತ್ತ ತಮ್ಮ ಛವಿ ವೃದ್ಧಿಸಿಕೊಂಡ ಮೋದಿ ವಿಯೆಟ್ನಾಂನಂತಹ ರಾಷ್ಟ್ರಗಳು ತಮ್ಮೆಲ್ಲ ಮಾತು ಕೇಳುವಂತೆ ಮಂತ್ರದಂಡ ಪ್ರಯೋಗಿಸಿಬಿಟ್ಟಿದ್ದರು.

ಭೂತಾನಿನ ಭೇಟಿಯ ವೇಳೆಗೆ ಅಲ್ಲಿ ಡ್ಯಾಂಗಳ ನಿರ್ವಣಕ್ಕೆ ಮತ್ತು ಜಲವಿದ್ಯುತ್ ಯೋಜನೆಗಳ ಸಾಕಾರಕ್ಕೆ ಒಪ್ಪಂದ ಮಾಡಿಕೊಂಡ ಮೋದಿ ಬರಲಿರುವ ದಿನಗಳಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಶುದ್ಧ ವಿದ್ಯುತ್ತನ್ನು ಅಲ್ಲಿಂದ ಭಾರತಕ್ಕೆ ಪಡೆದುಕೊಳ್ಳಲಿದ್ದಾರೆ. ನೇಪಾಳಕ್ಕೆ ಹೋದಾಗ 900 ಮೆಗಾವಾಟ್ ವಿದ್ಯುತ್ ಉತ್ಪಾದನೆಯ ಕರ್ನಾಲಿ ಮೇಲ್ದಂಡೆಯ ಅಣೆಕಟ್ಟು ನಿರ್ವಣದ ಒಪ್ಪಂದಕ್ಕೆ ಸಹಿ ಹಾಕಿದ್ದು, ಅಲ್ಲಿ ಉತ್ಪಾದನೆಯಾಗುವ 83 ಪ್ರತಿಶತ ವಿದ್ಯುತ್ತನ್ನು ಉಚಿತವಾಗಿ ಭಾರತಕ್ಕೆ ಪೂರೈಸಲಾಗುತ್ತದೆ. ದೇಶದ ರೈತರಿಗೆ ಇಪ್ಪತ್ನಾಲ್ಕು ತಾಸು ವಿದ್ಯುತ್ ನೀಡುವ ನರೇಂದ್ರ ಮೋದಿಯವರ ಕನಸು ಸಾಕಾರಗೊಳ್ಳುವ ದಿನಗಳು ಬಹಳ ದೂರವಿಲ್ಲ. ಲೋಕಲ್ ನಾಯಕರೆಲ್ಲ ಸಾಲ ಮನ್ನಾದ ಕಥೆ ಹೇಳಿ ಮೂಗಿಗೆ ತುಪ್ಪ ಸವರುತ್ತಿದ್ದರೆ, ಮೋದಿ ದುಡಿಯುವ ಕೈಗಳಿಗೆ ಬಲ ತುಂಬುವ ಆಶಯದ ಸಾಕಾರಕ್ಕಾಗಿ ಜಗತ್ತಿನ ಮೂಲೆಮೂಲೆಗೂ ಅಡ್ಡಾಡುತ್ತಿದ್ದಾರೆ. ಮೋದಿಯವರ ವಿದೇಶ ಪ್ರವಾಸ ರಾಹುಲರ ರಜಾ ಕಾಲದ ಮೋಜಿನ ಪ್ರವಾಸದಂತಲ್ಲ ಎಂಬುದನ್ನು ನೆನಪಿಡಿ.

ಸೌದಿ ಅರೇಬಿಯಾಕ್ಕೆ ಭೇಟಿ ಕೊಟ್ಟಾಗ ಮೋದಿಯವರು ಅಲ್ಲಿನ ನಾಯಕರ ಮೇಲೆ ಬೀರಿದ ಪ್ರಭಾವ ಎಂಥದ್ದೆಂದರೆ ಇಂಧನವನ್ನು ಭಾರತಕ್ಕೆ ರಫ್ತು ಮಾಡುವಾಗ ವಿಧಿಸುತ್ತಿದ್ದ ತೆರಿಗೆಯನ್ನು ಪೂರ್ಣ ಕೈಬಿಡುವಂತೆ ಮನವೊಲಿಸಲಾಯ್ತು. ಇರಾನ್ ನಮಗೆ ತೈಲವನ್ನು ರೂಪಾಯಿಗಳಲ್ಲಿಯೇ ಮಾರಾಟ ಮಾಡುವುದಾಗಿ ಹೇಳಿದ್ದು ನಮ್ಮ ವಿದೇಶ ಪ್ರವಾಸದ ಬಲು ದೊಡ್ಡ ಸಾಧನೆಯೇ. ಅಬುದಾಬಿಯಲ್ಲಿ ತೈಲ ಉತ್ಪಾದನೆ ಮಾಡುವ ಕಂಪನಿಗಳೊಂದಿಗೆ ಭಾರತ ಸರ್ಕಾರ ಸ್ವಾಮ್ಯದ ತೈಲ ಕಂಪನಿಗಳು 600 ಮಿಲಿಯನ್ ಡಾಲರುಗಳನ್ನು ಕೊಟ್ಟು ಷೇರು ಪಡೆಯುವಂತೆ ಮಾಡಿದ್ದೂ ಕೂಡ ಮೋದಿ ಸರ್ಕಾರದ ಸಾಧನೆಯೇ. ಹೀಗಾಗಿಯೇ ತೈಲ ಬೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಬಲುದೊಡ್ಡ ಪ್ರಮಾಣದ ಏರುಪೇರಾದಾಗಲೂ ಭಾರತ ಅದರ ಹೊರೆಯನ್ನು ಊಹಿಸಿದಷ್ಟು ಮೇಲೆಳೆದುಕೊಳ್ಳಬೇಕಾಗಲಿಲ್ಲ.

ಏಷ್ಯಾದಲ್ಲಿ ಮೋದಿಯವರ ಸಾಮರ್ಥ್ಯ ಎಷ್ಟಿದೆಯೆಂದರೆ ಚೀನಾಕ್ಕೆ ಅನುಕೂಲಕರವಾಗಿದ್ದ ಶ್ರೀಲಂಕಾದ ಅಧ್ಯಕ್ಷರನ್ನೇ ಬದಲಿಸಿ ಭಾರತಕ್ಕೆ ಬೇಕಾದ ಹೊಸ ಅಧ್ಯಕ್ಷರನ್ನು ಚುನಾಯಿತರಾಗುವಂತೆ ಮಾಡಿಕೊಂಡಿದ್ದು ನಿಜಕ್ಕೂ ಆಕ್ರಮಣಕಾರಿ. ಯಮನ್​ನಲ್ಲಿ ಯುದ್ಧ ನಡೆಯುತ್ತಿದ್ದಾಗ ಸಿಕ್ಕಿಹಾಕಿಕೊಂಡಿದ್ದ 4000 ಭಾರತೀಯರನ್ನು ಬಿಡಿಸಲು ಸರ್ಕಾರ ನಡೆಸಿದ ಪ್ರಯತ್ನ ಅಸಾಧಾರಣವಾದ್ದು. ಸೌದಿಯ ರಾಜರೊಂದಿಗೆ ಖುದ್ದಾಗಿ ಮಾತನಾಡಿದ ಮೋದಿ ಆ ದೇಶದ ಮೂಲಕ ಭಾರತದ ವಿಮಾನ ಹಾದುಹೋಗಲು ಅನುಮತಿ ಪಡೆದುಕೊಂಡು ನಮ್ಮ ವಿಮಾನ ಯಮನ್​ನಲ್ಲಿರುವಷ್ಟೂ ಹೊತ್ತು ಪ್ರತಿಕೂಲ ಪರಿಸ್ಥಿತಿ ನಿರ್ವಣವಾಗದಿರುವ ಜವಾಬ್ದಾರಿಯನ್ನು ಅವರ ಹೆಗಲಿಗೆ ಹೊರಿಸಿ ಅಷ್ಟೂ ಜನರನ್ನು ಬಿಡುಗಡೆ ಮಾಡಿಸಿದ್ದರು. ಆ ಹೊತ್ತಿನಲ್ಲಿ ಜಗತ್ತಿನ ಕೆಲವು ಪ್ರಭಾವಿ ರಾಷ್ಟ್ರಗಳು ತಮ್ಮ ಜನರನ್ನು ಯಮನ್​ನಿಂದ ಪಾರುಮಾಡಲು ಭಾರತದ ಸಹಕಾರ ಕೇಳಿದ್ದು ನರೇಂದ್ರ ಮೋದಿಯವರ ವಿದೇಶ ಯಾತ್ರೆಯ ಬಲುದೊಡ್ಡ ಲಾಭ.

ಅಮೆರಿಕ, ರಷ್ಯಾಗಳ ಮುಲಾಜಿಗೆ ಬಿದ್ದು ಅಣುಸ್ಥಾವರ ನಿರ್ವಣದಲ್ಲಿ ತೊಡಕನ್ನೆದುರಿಸುತ್ತಿದ್ದ ಭಾರತ ಮೋದಿಯವರ ಫ್ರಾನ್ಸ್ ಪ್ರವಾಸದ ಲಾಭ ಪಡೆದು ರಿಯಾಕ್ಟರ್ ತಂತ್ರಜ್ಞಾನದ ಪೂರೈಕೆಯ ಒಪ್ಪಂದ ಮಾಡಿಕೊಂಡಿತು. ಅವುಗಳಿಗೆ ಯುರೇನಿಯಂ ಇಂಧನ ಪೂರೈಸಲೋಸುಗವೇ ಮೋದಿ ಕೆನಡಾ, ಆಸ್ಟ್ರೇಲಿಯಾಗಳಿಗೆ ಮತ್ತೆ ಮತ್ತೆ ಭೇಟಿ ನೀಡಿ ಒಪ್ಪಂದ ದೃಢೀಕರಿಸಿಕೊಂಡರು. ಹಾಗಂತ ಭೇಟಿ ನೀಡಿದ್ದು ಸಿರಿವಂತ ರಾಷ್ಟ್ರಗಳಿಗೆ ಮಾತ್ರ ಎಂದುಕೊಳ್ಳಬೇಡಿ. ಮೋದಿ ಆಫ್ರಿಕಾದ ಹಿಂದುಳಿದ ರಾಷ್ಟ್ರಗಳಾಗಲೀ ಅಥವಾ ಪೆಸಿಫಿಕ್ ರಾಷ್ಟ್ರಗಳಾದರೂ ಆಗಲಿ ಸಹಾಯಹಸ್ತ ಚಾಚಿ ಭಾರತದ ಬಲ ವೃದ್ಧಿಸಿದವರೇ. ಫಿಜಿಯೇ ಮೊದಲಾದ ದ್ವೀಪಗಳಲ್ಲಿ ಮನೆ-ಮನೆಗಳಿಗೂ ಸೌರವಿದ್ಯುತ್ತನ್ನು ಒದಗಿಸುವ ಸಹಕಾರದ ಭರವಸೆ ಕೊಟ್ಟ ಮೋದಿ ಒಂದೇ ಏಟಿಗೆ ಎರಡೆರಡು ಹಕ್ಕಿಯನ್ನು ಹೊಡೆದರು. ಜಾಗತಿಕ ಮಟ್ಟದಲ್ಲಿ ಅವರ ಸಹಕಾರವನ್ನು ಗಟ್ಟಿಮಾಡಿಕೊಂಡರು ಮತ್ತು ಗ್ರೀನ್ ಎನರ್ಜಿಯ ವಿಚಾರದಲ್ಲಿ ತಾನೇ ಅಗ್ರಣಿ ಎಂಬುದನ್ನು ಆಧಾರಭೂತವಾಗಿ ಸ್ಥಾಪಿಸಿದರು. ಈ ಕುರಿತಂತೆ ಪ್ಯಾರಿಸ್​ನಲ್ಲಿ ಶೃಂಗಸಭೆ ನಡೆದಾಗ ಅಮೆರಿಕದಂತಹ ರಾಷ್ಟ್ರಗಳನ್ನು ಬದಿಗೆ ಸರಿಸಿ ಭಾರತವೇ ಈ ವಿಚಾರದಲ್ಲಿ ನಾಯಕತ್ವ ವಹಿಸಬೇಕೆಂದು ಮುಂದುವರಿದ ರಾಷ್ಟ್ರಗಳು ಮುಲಾಜಿಲ್ಲದೇ ಒಪ್ಪಿಕೊಂಡವಲ್ಲ ಅದರ ಹಿಂದೆ ಮೋದಿಯವರ ಈ ದೂರದೃಷ್ಟಿಯ ಪ್ರಯತ್ನಗಳೇ ಕೆಲಸ ಮಾಡಿರೋದು. ಅಂತಾರಾಷ್ಟ್ರೀಯ ಕೋರ್ಟಿನಲ್ಲಿ ನ್ಯಾಯಾಧೀಶರ ಆಯ್ಕೆಗೆ ಚುನಾವಣೆ ನಡೆವಾಗ ಇಂಗ್ಲೆಂಡಿನ ಎದುರು ಭಾರತದ ದಲ್ವಿಂದರ್ ಭಂಡಾರಿ ಗೆಲ್ಲಬೇಕಾದರೆ ಮೋದಿ ಭೇಟಿಕೊಟ್ಟ ಎಲ್ಲ ರಾಷ್ಟ್ರಗಳೂ ಇಂಗೆಂಡನ್ನು ಧಿಕ್ಕರಿಸಿ ನಮ್ಮ ಜತೆಗೆ ಆತುಕೊಂಡಿದ್ದವು. ಮೋದಿಯವರ ವಿದೇಶ ಪ್ರವಾಸದ ಲಾಭವನ್ನು ಮತ್ತೂ ವಿಸ್ತರಿಸಬೇಕೇನು?

ಹಾಗಂತ ಇಷ್ಟೇ ಅಲ್ಲ. ವಿದೇಶಕ್ಕೆ ಹೋದಾಗ ನರೇಂದ್ರ ಮೋದಿ ಭೇಟಿ ಮಾಡಿದ ಒಂದೊಂದು ವ್ಯಾಪಾರಿ ಸಂಸ್ಥೆಗಳೂ ಈಗ ಭಾರತದಲ್ಲಿ ಹೂಡಿಕೆ ಮಾಡಲು ಮುಂದೆ ಬಂದು ನಿಂತಿವೆ. ಭಾರತದ ಬ್ರಾ್ಯಂಡನ್ನು ಜಾಗತಿಕಗೊಳಿಸುವಲ್ಲಿ ಮೋದಿ ಶ್ರಮ ವಹಿಸಿದ್ದಾರೆ. ಟೆಸ್ಲಾ, ಉಬರ್, ಫೇಸ್​ಬುಕ್, ಟ್ವಿಟರ್ ಮುಂತಾದ ದೊಡ್ಡ ದೊಡ್ಡ ಕಂಪನಿಗಳ ಸಿಇಒಗಳನ್ನು ಖುದ್ದಾಗಿ ಭೇಟಿ ಮಾಡಿದ ಮೋದಿ ಅವರೆಲ್ಲರನ್ನೂ ಹೂಡಿಕೆಗೆ ಆಹ್ವಾನಿಸಿ ಭಾರತವನ್ನು ರಫ್ತು ಕೇಂದ್ರವಾಗಿಸುವಲ್ಲಿ ಶ್ರಮ ವಹಿಸಿದ್ದಾರೆ. ಆಪಲ್ ಕಂಪನಿ ತನ್ನ ಉತ್ಪಾದನಾ ಘಟಕವನ್ನು ಭಾರತದಲ್ಲಿ ತೆರೆಯುವುದಕ್ಕೆ ಮೋದಿಯವರ ವಿದೇಶ ಪ್ರವಾಸ ಕಾರಣವಾಯಿತೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಮೊಬೈಲ್ ಉತ್ಪಾದನೆಯಲ್ಲಿ ನಾವೀಗ ಜಾಗತಿಕ ಸ್ಥಾನವನ್ನು ಗಳಿಸಿಕೊಳ್ಳುವತ್ತ ದಾಪುಗಾಲಿಡುತ್ತಿದ್ದೇವೆ. ಒಟ್ಟಾರೆ ಜಗತ್ತಿನಲ್ಲೆಲ್ಲಾ ವಿದೇಶಿ ಹೂಡಿಕೆಯ ಕೊರತೆ ಇರುವಾಗ ಭಾರತ ಮಾತ್ರ ಕಳೆದ ವರ್ಷದ ವೇಳೆಗೆ 65 ಬಿಲಿಯನ್ ಡಾಲರುಗಳಷ್ಟು ವಿದೇಶಿ ಹೂಡಿಕೆಯನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿರುವುದು ಹೇಗೆ? ರಾಹುಲ್ ಗಾಂಧಿಯ ಅಪ್ಪುಗೆಯಿಂದ ಎಂದುಕೊಂಡಿರೇನು?

ಇಷ್ಟಾಗಿಯೂ ಮೋದಿಯವರ ವಿದೇಶ ಪ್ರವಾಸದ ಒಟ್ಟಾರೆ ಲಾಭವನ್ನು ಹೀಗೆಯೇ ಆಗಿದೆ ಎಂದು ದಾಖಲಿಸುವುದು ಕಷ್ಟವಾಗಬಹುದು. ಅದನ್ನು ಭವಿಷ್ಯವಷ್ಟೇ ನಿರ್ಧರಿಸಬೇಕು. ಆದರೆ ಅವರ ಬಿಡುವಿಲ್ಲದ ಪ್ರವಾಸದ ಲಾಭವನ್ನು ನಾವು ಈಗಾಗಲೇ ಉಣ್ಣುತ್ತಿದ್ದೇವೆ. ಭಾರತದ ಗೌರವ ಇಂದು ಜಗತ್ತಿನಲ್ಲೆಲ್ಲಾ ಹಿಂದೆಂದಿಗಿಂತಲೂ ನೂರು ಪಟ್ಟು ಹೆಚ್ಚಾಗಿದೆ. ಹೆಣ್ಣುಮಕ್ಕಳನ್ನು ಬುರ್ಖಾದಲ್ಲಿ ಕೂಡಿ ಹಾಕುವ ಸೌದಿ ಅಲ್ಲಿನ ಸ್ತ್ರೀ ಉದ್ಯಮದಾರರೊಂದಿಗೆ ಮೋದಿಯವರಿಗೆ ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿತ್ತಲ್ಲ ಅದು ನಿಜಕ್ಕೂ ಅಪರೂಪದ ಸಂಗತಿ. ಹೀಗೆ ಅಲ್ಲಿನ ಮಹಿಳಾ ಉದ್ಯಮಿಗಳನ್ನು ಭೇಟಿ ಮಾಡಿದ ಮೊದಲ ವಿದೇಶಿ ನಾಯಕ ಅವರೇ ಎಂಬುದನ್ನು ಮರೆಯುವಂತಿಲ್ಲ. ಸೌದಿಯ ಅತ್ಯಂತ ಶ್ರೇಷ್ಠ ನಾಗರಿಕ ಸಮ್ಮಾನವನ್ನು ಮೋದಿಯವರಿಗೆ ನೀಡಿರುವುದು ಭಾರತವೇ ಹೆಮ್ಮೆಪಡಬೇಕಾದ ಸಂಗತಿ. ಬ್ರಿಟಿಷ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಭಾರತದ ಮೊದಲ ಪ್ರಧಾನಿಯೂ ಮೋದಿಯೇ. ಪಕ್ಕದಲ್ಲಿರುವ ನೇಪಾಳಕ್ಕೆ ಭೇಟಿ ಕೊಡಲು ನಮಗೆ 17 ವರ್ಷ ಬೇಕಾಯ್ತು. ಆದರೆ ಮೋದಿ ಮೂರು ಬಾರಿ ನೇಪಾಳವನ್ನು ಸಂದರ್ಶಿಸಿಯಾಗಿದೆ. ಇಂದಿರಾ ಗಾಂಧಿ ನಂತರ ಸೀಶೆಲ್ಸ್ ದ್ವೀಪಗಳಿಗೆ ಭೇಟಿಕೊಟ್ಟಿದ್ದು ಮೋದಿಯೇ. ಅದು ತಿರುಗಾಟದ ಹುಚ್ಚಿಗಲ್ಲ. ಬದಲಿಗೆ ಅಲ್ಲಿ ಭಾರತದ ರೆಡಾರ್​ಗಳನ್ನು ಸ್ಥಾಪಿಸಿ ಚೀನಾದ ಯುದ್ಧ ವಿಮಾನಗಳ ಚಲನ-ವಲನಗಳ ಮೇಲೆ ನಿಗಾ ಇಡುವ ಒಪ್ಪಂದ ಮಾಡಿಕೊಳ್ಳಲಿಕ್ಕಾಗಿ. 42 ವರ್ಷಗಳ ನಂತರ ಕೆನಡಾಕ್ಕೆ ಮೋದಿ ಭೇಟಿಕೊಟ್ಟಿದ್ದು ಆ ರಾಷ್ಟ್ರವನ್ನು ನೋಡಬೇಕೆಂದಲ್ಲ ಬದಲಿಗೆ ನಮ್ಮ ದೇಶದ ನ್ಯೂಕ್ಲಿಯರ್ ರಿಯಾಕ್ಟರ್​ಗಳಿಗೆ ಅಲ್ಲಿಂದ ಯುರೇನಿಯಂ ಪೂರೈಸುವ ಒಪ್ಪಂದ ಮಾಡಿಕೊಳ್ಳಲಿಕ್ಕಾಗಿ. ಅಲ್ಲಿರುವ ಭಾರತೀಯರ ವೀಸಾ ಸಮಸ್ಯೆಯನ್ನು ಕಡಿಮೆ ಮಾಡಲಿಕ್ಕಾಗಿ. ಮೋದಿ ಇಷ್ಟೆಲ್ಲಾ ಕಿರಿಕಿರಿಯ ನಡುವೆ ಮಂಗೋಲಿಯಾಕ್ಕೆ ಭೇಟಿ ಕೊಟ್ಟಿದ್ದು ಅದು ಸುಂದರ ರಾಷ್ಟ್ರ ಎಂಬ ಕಾರಣಕ್ಕಲ್ಲ. ಬದಲಿಗೆ ಚೀನಾದೊಂದಿಗಿನ ತನ್ನ ತಾಕಲಾಟಗಳಿಗೆ ಮಂಗೋಲಿಯಾದ ಬೆಂಬಲವನ್ನು ದೃಢಪಡಿಸಿಕೊಳ್ಳಲಿಕ್ಕಾಗಿ. ಮಧ್ಯ ಏಷ್ಯಾದ ರಾಷ್ಟ್ರಗಳಿಗೆ ಪದೇಪದೆ ಭೇಟಿ ನೀಡಿದ ಮೋದಿಯವರ ಪ್ರಯಾಸದಿಂದಾಗಿಯೇ ತೈಲ ಉದ್ಯಮದ ಮೇಲೆ ನಮಗೊಂದು ಹಿಡಿತ ಬಂದಿರುವುದು. ಇಲ್ಲಿನ ತೈಲ ಕಂಪನಿಗಳು ಭಾರತದಲ್ಲಿ ತೈಲ ಶೇಖರಣೆಗೆ ಮನಸ್ಸು ಮಾಡಿದ್ದಾವಲ್ಲಾ ಅದು ಈ ಪ್ರವಾಸಗಳ ಲಾಭವೇ.

ಕಾಂಗ್ರೆಸ್ಸಿಗರು ಮತ್ತು ಕಟ್ಟೆಯ ಮೇಲೆ ಕುಳಿತು ಹರಟುವವರು ಮೋದಿಯವರ ಬಗ್ಗೆ ಮನಸಿಗೆ ಬಂದಂತೆ ಮಾತನಾಡುತ್ತಾರೆ. ತನ್ನ ಮೈಮೇಲಿನ ಪ್ರಜ್ಞೆಯನ್ನೂ ಕಳೆದುಕೊಂಡು ನಾಲ್ಕಾರು ಗಂಟೆಗಳ ನಿದ್ದೆಗಷ್ಟೇ ದೇಹವನ್ನು ಸೀಮಿತಗೊಳಿಸಿ ಬಿಟ್ಟೂ ಬಿಡದೇ ಕೆಲಸ ಮಾಡುತ್ತಿದ್ದಾರಲ್ಲ, ಆ ಪುಣ್ಯಾತ್ಮ! ಇದರ ಲಾಭವನ್ನು ಬರಲಿರುವ ದಿನಗಳಲ್ಲಿ ಇನ್ನೂ ಹೆಚ್ಚು ಅನುಭವಿಸುತ್ತೇವೆ. ಸ್ವಲ್ಪ ತಾಳ್ಮೆಯಿಂದ ಕಾಯೋಣ. ಅರವತ್ತು ವರ್ಷಗಳಲ್ಲಿ ಚೀನಾ, ಅಮೆರಿಕಕ್ಕೆ ಬಗ್ಗಿ ಸಲಾಮು ಹೊಡೆದುಕೊಂಡೇ ಬದುಕಿದ್ದ, ವಿದೇಶಾಂಗದ ನೀತಿಯನ್ನೂ ಹೊಂದಿರದಿದ್ದ ಕಾಂಗ್ರೆಸ್ಸು ಹೇಳಿದ್ದನ್ನು ನಂಬುವ ಮುನ್ನ ಒಮ್ಮೆ ದಾಖಲೆಗಳತ್ತ ಕಣ್ಣು ಹಾಯಿಸೋಣ. ಏನಂತೀರಿ? ಹಾಗೆಯೇ ರಕ್ಷಣೆಯ ಕಾರಣಗಳನ್ನು ಕೊಟ್ಟು ಸೋನಿಯಾ, ರಾಹುಲ್, ಪ್ರಿಯಾಂಕಾ ಮತ್ತು ರಾಬರ್ಟ್ ವಾದ್ರಾರ ವಿದೇಶ ಪ್ರವಾಸಗಳ ವೆಚ್ಚದ ವಿವರವನ್ನು ಕೊಡಲು ಸಾಧ್ಯವಿಲ್ಲವೆನ್ನುತ್ತಾರಲ್ಲ, ಕಾಂಗ್ರೆಸ್ಸಿಗರು ಒಮ್ಮೆ ಈ ಕುರಿತಂತೆ ಗಮನಹರಿಸಬಲ್ಲರಾ? ಸ್ವಲ್ಪ ಯೋಚಿಸಿ.

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

Leave a Reply

Your email address will not be published. Required fields are marked *

Back To Top