Thursday, 13th December 2018  

Vijayavani

Breaking News

ನಮಗೆ ಧರ್ಮ ನೀಡಲು ಬಂದವರು ನಮ್ಮ ಮಕ್ಕಳನ್ನೇ ಮಾರಿದರು!

Monday, 16.07.2018, 3:03 AM       No Comments

| ಚಕ್ರವರ್ತಿ ಸೂಲಿಬೆಲೆ

ನನ್​ಗಳು ನಡೆಸುತ್ತಿರುವ ಮಕ್ಕಳ ಮಾರಾಟ ದಂಧೆ ಸಾಕ್ಷಿ ಸಮೇತ ಹೊರಬಿದ್ದ ನಂತರವೂ ಆ ಕುರಿತಂತೆ ಮಾತನಾಡುವ, ಬರೆಯುವ ಧೈರ್ಯವನ್ನು ಯಾರೂ ತೋರುತ್ತಿಲ್ಲವೆಂಬುದೇ ಅಚ್ಚರಿಯ ಸಂಗತಿ! ವಾಸ್ತವ ಕಣ್ಣೆದುರಿಗೆ ಇದ್ದರೂ ‘ಜಾಣಕುರುಡು’ ತೋರುತ್ತಿರುವುದು ಏತಕ್ಕಾಗಿ?

ಜಾರ್ಖಂಡ್​ನ ರಾಂಚಿಯಿಂದ ಎದೆ ನಡುಗಿಸುವ ಸುದ್ದಿಯೊಂದು ಕಳೆದೊಂದು ವಾರದಿಂದ ತಿರುಗಾಡುತ್ತಿದೆ. ಸುದ್ದಿ ಏನು ಹೊಸತಲ್ಲ. ಇಷ್ಟೂ ದಿನಗಳ ಕಾಲ ಬಲಪಂಥೀಯರು ಹೇಳುತ್ತಿದ್ದ ಈ ವಿಚಾರವನ್ನು ಅವರು ಹುಟ್ಟುಹಾಕಿದ ಕಥೆ ಎಂದೇ ಬಣ್ಣಿಸಲಾಗುತ್ತಿತ್ತು. ಈಗ ಸತ್ಯ ಬೆಳಕಿಗೆ ಬಂದಿದೆ ಅಷ್ಟೇ. ಕ್ಯಾಥೋಲಿಕ್ ಕ್ರಿಶ್ಚಿಯನ್ನರು ನಡೆಸುವ ಮಿಷನರಿಸ್ ಆಫ್ ಚಾರಿಟಿಯ ನಿರ್ಮಲ ಹೃದಯ ಸಂಸ್ಥೆಯಿಂದ ಅನಾಥ ಮಕ್ಕಳ ಮಾರಾಟವನ್ನು ನನ್​ಗಳು ವ್ಯವಸ್ಥಿತವಾಗಿ ನಡೆಸುತ್ತಿದ್ದರೆಂಬುದು ಬೆಳಕಿಗೆ ಬಂದಿದೆ. ನಿರ್ಮಲ ಹೃದಯದ ಮುಖ್ಯಸ್ಥೆ ಸಿಸ್ಟರ್ ಕೊಶ್ಲೇನಿಯಾ, ಮತ್ತೊಬ್ಬ ನನ್ ಹಾಗೂ ಅಲ್ಲಿನ ಕಸ ಗುಡಿಸುವಾಕೆ ಈ ಮೂವರನ್ನು 250ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿದ ಸುದ್ದಿಯ ಜಾಡು ಹಿಡಿದು ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್​ನ ರಾಜ್ಯ ಮಕ್ಕಳ ರಕ್ಷಣಾ ಸೊಸೈಟಿಯ ಮುಖ್ಯಸ್ಥರಾದ ಆರತಿ ಕುಜೂರ್ ಈ ಪ್ರಕರಣವನ್ನು ಭೇದಿಸಿದವರು. ಕಳೆದ ಆರು ತಿಂಗಳಿನಿಂದ ನಿರಂತರವಾಗಿ ನಿರ್ಮಲ ಹೃದಯದ ಕುರಿತಂತೆ ದೂರುಗಳನ್ನು ಪಡೆಯುತ್ತಿದ್ದ ಅವರು ಸಂಸ್ಥೆಯ ಮೇಲೆ ತೀವ್ರ ನಿಗಾ ಇರಿಸಿದ್ದರು. ಆನಂತರವೇ ಭಯಾನಕವಾದ ಸತ್ಯಗಳು ಹೊರಬಂದದ್ದು. ಈ ಸಂಸ್ಥೆ ಪ್ರತಿಯೊಂದು ಮಗುವನ್ನೂ 450 ಪೌಂಡ್​ನಿಂದ 1000 ಪೌಂಡ್​ಗೆ ಮಾರಾಟ ಮಾಡುತ್ತಿತ್ತು. ಮಕ್ಕಳ ಬಗ್ಗೆ ಕಾಳಜಿ ಹೊಂದಿರುವ ನಟನೆ ಮಾಡುತ್ತಲೇ ಯಾರಿಗೂ ಅರಿವಾಗದಂತೆ ಮಕ್ಕಳ ಮಾರಾಟದ ಜಾಲವೊಂದನ್ನು ರೂಪಿಸಿದ್ದರು. 2015ರಲ್ಲಿ ಸರ್ಕಾರ ರೂಪಿಸಿದ್ದ ಮಕ್ಕಳ ದತ್ತು ನಿಯಮಾವಳಿಯನ್ನು ಈ ಸಂಸ್ಥೆ ವಿರೋಧಿಸಿ ಪ್ರತಿಭಟನೆ ನಡೆಸಿತ್ತು. ‘ಮಕ್ಕಳನ್ನು ದತ್ತು ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಸರ್ಕಾರ ಸುಲಭಗೊಳಿಸಿದೆ’ ಎಂದು ದೂರುತ್ತ ತಾವು ಇನ್ನು ಮುಂದೆ ದತ್ತು ನೀಡುವ ಸರ್ಕಾರಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದೂ ಎಚ್ಚರಿಕೆ ಕೊಟ್ಟಿತ್ತು. ಆದರೆ ಇವೆಲ್ಲವೂ ಅವರ ಬೂಟಾಟಿಕೆಯ ಮತ್ತೊಂದು ಭಾಗವೆಂದು ಈಗ ಅರಿವಾಗಿದೆ. ಮಕ್ಕಳನ್ನು ದತ್ತು ಕೊಡಲೊಪ್ಪದ ಈ ಸಂಸ್ಥೆ ಮಾರಾಟ ಮಾಡಲು ಮಾತ್ರ ಮುಂದೆ ನಿಂತಿದ್ದಿದ್ದು ದುರಂತಕಾರಿ ಸಂಗತಿ. ಕ್ರಿಶ್ಚಿಯನ್ ಮಿಷನರಿಗಳಿಗೆ ಭಾರತೀಯರು ತಮ್ಮ ಉಪಯೋಗಕ್ಕೆ ಬಳಕೆಯಾಗುವ ವಸ್ತುಗಳಷ್ಟೇ ಎಂಬುದು ಮತ್ತೊಮ್ಮೆ ಸಾಬೀತಾಯ್ತು.

ಮಿಷನರಿಸ್ ಆಫ್ ಚಾರಿಟಿ ರೋಮನ್ ಕ್ಯಾಥೋಲಿಕ್​ನ ವಿಚಾರಗಳನ್ನು ಹರಡಿಸಲೆಂದೇ 1950ರಲ್ಲಿ ಮದರ್ ತೆರೆಸಾ ಕಲ್ಕತ್ತಾದಲ್ಲಿ ಶುರುಮಾಡಿದ್ದು. 2012ರ ವೇಳೆಗೆ ನಾಲ್ಕುವರೆ ಸಾವಿರ ಸಿಸ್ಟರ್​ಗಳನ್ನು ಹೊಂದುವ ಮೂಲಕ ಅದು ಅತ್ಯಂತ ದೊಡ್ಡ ಜಾಲವಾಗಿ ಬೆಳೆದುಬಿಟ್ಟಿತು. ಇಲ್ಲಿ ನನ್​ಗಳಾಗಿ ಸೇರಿಕೊಳ್ಳುವವರು ಎಂದಿನಂತೆ ಬ್ರಹ್ಮಚರ್ಯ ಮತ್ತು ನಿಷ್ಠೆಯ ಸಂಕಲ್ಪವನ್ನು ಜೀವನದುದ್ದಕ್ಕೂ ಪಾಲಿಸಬೇಕಿತ್ತು. ಬಡವರಲ್ಲೇ ಬಡವರಾದವರಿಗೆ ಹೃದಯ ತುಂಬಿದ ಸೇವೆ ಮಾಡುತ್ತೇವೆಂಬ ಮಾನಸಿಕ ದೃಢತೆ ಇರಬೇಕಿತ್ತು. ನಿರಾಶ್ರಿತರು, ವೇಶ್ಯಾವೃತ್ತಿಗಿಳಿದವರು, ಮಾನಸಿಕ ಸ್ತಿಮಿತ ಕಳೆದುಕೊಂಡವರು, ರೋಗಪೀಡಿತ, ಅನಾಥ, ಎಚ್​ಐವಿ ಸೋಂಕಿತ ಮಕ್ಕಳು, ವೃದ್ಧರು ಇವರೆಲ್ಲರನ್ನೂ ನೋಡಿಕೊಳ್ಳುತ್ತೇವೆಂದು ಹೇಳಿಕೊಂಡಿತ್ತು ಮಿಷನರಿಸ್ ಆಫ್ ಚಾರಿಟಿ. ಕಲ್ಕತ್ತಾದಲ್ಲಿ 1950ರಲ್ಲಿ ಬಲು ಚಿಕ್ಕದಾಗಿಯೇ ಆರಂಭವಾದ ಈ ಸಂಸ್ಥೆ ವ್ಯಾಟಿಕನ್​ನ ಅನುಮತಿ ಪಡೆದು ಚರ್ಚ್​ನ ಒಂದು ಅಂಗವೆಂದು ಘೊಷಿಸಿಕೊಂಡಿತು. ಪೀಡಿತ ಮಕ್ಕಳನ್ನು ನೋಡಿಕೊಳ್ಳುತ್ತೇವೆಂಬ ನಾಟಕ ಮಾಡುತ್ತಲೇ ಜಗತ್ತಿಗೆ ಭಾರತದ ಕುರಿತಂತೆ ಕೆಟ್ಟ ಸಂದೇಶಗಳನ್ನು ರವಾನಿಸಲಾರಂಭಿಸಿತು. ಕಲ್ಕತ್ತಾ ಎಂದರೆ ಕೊಳೆಗೇರಿ, ಮಕ್ಕಳನ್ನು ಕಸದ ತೊಟ್ಟಿಗೆಸೆಯುವ ಜನರಿಂದ ಕೂಡಿರುವಂಥ ಊರು, ಇಡಿಯ ಭಾರತವೇ ಮನುಕುಲ ವಿರೋಧಿ ಎಂಬೆಲ್ಲ ಚಿತ್ರಣಗಳನ್ನು ಜಗತ್ತಿಗೆ ನೀಡುತ್ತ ಭಾರತದ ಮಾನ ಹರಾಜು ಹಾಕುತ್ತಿದ್ದ ತೆರೆಸಾ ಅಪಾರ ಪ್ರಮಾಣದ ದಾನವನ್ನು ವಿದೇಶದಿಂದ ಭಾರತಕ್ಕೆ ತರುತ್ತಿದ್ದರು. ತನ್ನ ನನ್​ಗಳ ಜಾಲದ ಮೂಲಕ ಮತ್ತೆ ಅವುಗಳನ್ನು ಬಡ ಭಾರತೀಯರ ನಡುವೆ ಹಂಚುತ್ತ ಮತಾಂತರದ ಚಟುವಟಿಕೆಯನ್ನು ಜೋರಾಗಿಯೇ ನಡೆಸುತ್ತಿದ್ದರು. 1965ರಲ್ಲಿ ತೆರೆಸಾ ಚಟುವಟಿಕೆಯ ಪ್ರಭಾವವನ್ನು ಗಮನಿಸಿದ ಚರ್ಚು ಜಗತ್ತಿನಾದ್ಯಂತ ಸಂಸ್ಥೆಗಳನ್ನು ವಿಸ್ತರಿಸುವ ಅನುಮತಿ ಕೊಟ್ಟಿತು. ಏಷ್ಯಾ ಮತ್ತು ಆಫ್ರಿಕಾಗಳನ್ನು ಗಮನದಲ್ಲಿರಿಸಿಕೊಂಡೇ ತೆರೆಸಾ ಮಿಷನರಿ ಚಟುವಟಿಕೆಗಳನ್ನು ವಿಸ್ತರಿಸಿದರು.

ಭಾರತದಲ್ಲಿ ತೆರೆಸಾಗೆ ವಿಶೇಷ ಪ್ರಚಾರ ಸಿಗುವಂತೆ ನೋಡಿಕೊಳ್ಳಲಾಯ್ತು. ಜವಾಹರ್​ಲಾಲ್ ನೆಹರು ಆ ಸಂಸ್ಥೆಗೆ ಭೇಟಿ ನೀಡಿ ತೆರೆಸಾರನ್ನು ದೇವರೆಂದು ಬಣ್ಣಿಸಿದ್ದನ್ನು ನಾವೆಲ್ಲ ಪಠ್ಯಪುಸ್ತಕದಲ್ಲೇ ಓದಿದ್ದೆವು. ಪತ್ರಿಕೆಗಳು ತೆರೆಸಾ ಬಗ್ಗೆ ಪುಟಗಟ್ಟಲೆ ಲೇಖನಗಳನ್ನೇ ಬರೆದವು. ಸೇವೆಗೆ ಪರ್ಯಾಯ ಪದವೇ ಕ್ರಿಶ್ಚಿಯನ್ನರು ಎಂಬುವಷ್ಟರ ಮಟ್ಟಿಗೆ ಬೆಳೆದು ನಿಂತಿತ್ತು ತೆರೆಸಾ ಪ್ರಭಾವ. ಆಗೊಂದು ಕಾಲಘಟ್ಟವೂ ಹಾಗೆಯೇ ಇತ್ತು. ಎರಡು ಶತಮಾನಗಳ ಕಾಲ ಭಾರತದ ಮೇಲೆ ಕ್ರೂರ ಆಡಳಿತ ನಡೆಸಿದ ಕ್ರಿಶ್ಚಿಯನ್ನರು ಇಲ್ಲಿನ ಒಟ್ಟಾರೆ ವ್ಯವಸ್ಥೆಗಳನ್ನು ಉಧ್ವಸ್ಥಗೊಳಿಸಿಬಿಟ್ಟಿದ್ದರು. ಜನರನ್ನು ಯಾವ ಪರಿಯ ದಾರಿದ್ರ್ಯಕ್ಕೆ ನೂಕಿದ್ದರೆಂದರೆ ಒಂದು ಕಾಲದಲ್ಲಿ ಸಿರಿವಂತವಾಗಿದ್ದ ಕೋಲ್ಕತ್ತ ನೋಡನೋಡುತ್ತಲೇ ಕೊಳೆಗೇರಿಯಾಗಿಬಿಟ್ಟಿತು. ಕೃತಕ ಕ್ಷಾಮಗಳನ್ನು ಬಿಡಿ, ಜನರನ್ನು ಮತಾಂತರಿಸಲೆಂದು ಪ್ಲೇಗ್, ಕಾಲರಾಗಳಂತಹ ಕೃತಕ ಹೆಮ್ಮಾರಿಗಳನ್ನೂ ಸೃಷ್ಟಿಸಲಾಯ್ತು. ಇಂಥವೇ ತೆರೆಸಾರಂಥವರಿಗೆ ಒಳನುಸುಳಲು ಸಹಕಾರಿಯಾಗಿತ್ತು. ಈಶಾನ್ಯ ರಾಜ್ಯಗಳಿಗಂತೂ ಇತರೆ ಭಾಗಗಳಿಂದ ಹಿಂದೂಗಳು ಹೋಗುವುದನ್ನು ನಿರಾಕರಿಸಲಾಯಿತಷ್ಟೇ ಅಲ್ಲದೆ ಇಡಿಯ ದೇಶದಲ್ಲಿದ್ದ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ನಾಶಗೊಳಿಸಿ ಕ್ರಿಸ್ತನನ್ನು ಒಪ್ಪುವ ಹೊಸ ತರುಣರನ್ನು ಸೃಷ್ಟಿ ಮಾಡುವ ಜವಾಬ್ದಾರಿಯನ್ನು ನನ್​ಗಳ ಕೈಗಿರಿಸಲಾಯ್ತು. ಕಾಲಕ್ರಮದಲ್ಲಿ ಶಿಕ್ಷಣ, ಆರೋಗ್ಯ, ಸ್ವಚ್ಛತೆ ಈ ಮೂರಕ್ಕೂ ಕ್ರಿಶ್ಚಿಯನ್ನರನ್ನು ಪರ್ಯಾಯವೆಂದು ರೂಪಿಸಿ ಅದನ್ನೇ ಆದರ್ಶವಾಗಿ ತೋರಿಸುತ್ತ ಹೊಸ ಪೀಳಿಗೆಯನ್ನು ಸೆಳೆಯುವ ಪ್ರಯತ್ನವನ್ನು ಮಾಡಲಾಯ್ತು. ಅವರದ್ದು ಹಳೆಯ ಹಪ್ಪಟ್ಟು ಮತಾಂತರದ ಪದ್ಧತಿ. ಬಡವರಿಗೆ ಮತ್ತು ತಿಳಿಯದವರಿಗೆ ಕಾಯಿಲೆ ಬರುವಂತೆ ಮಾಡಿ ಅಥವಾ ಸಾಂಕ್ರಾಮಿಕ ರೋಗ ಹರಡುವೆಡೆಗೆ ತಂಡ ತೆಗೆದುಕೊಂಡು ಧಾವಿಸಿ, ಅಲ್ಲಿ ಅವರನ್ನು ಗುಣಪಡಿಸುವ ನಾಟಕ ಮಾಡುತ್ತ ಕ್ರಿಸ್ತನನ್ನು ಎದುರಿಗಿಟ್ಟು ಪ್ರಾರ್ಥನೆ ಮಾಡುವಂತೆ ಕೇಳಿಕೊಳ್ಳಿ, ನಿಧಾನವಾಗಿ ಚರ್ಚ್​ಗೆ ಕರೆತನ್ನಿ, ಮನೆಯಲ್ಲಿರುವ ಹಿಂದೂ ದೇವತೆಗಳನ್ನು ಬೀದಿಗೆಸೆಯಲು ಹೇಳಿ ಅಷ್ಟೇ! ನಾನು ಬಹಳ ಹಳೆಯ ಸಂಗತಿಗಳನ್ನೇನು ಮಾತನಾಡುತ್ತಿಲ್ಲ. ದಕ್ಷಿಣ ಭಾರತಕ್ಕೆ ಸುನಾಮಿ ಅಪ್ಪಳಿಸಿದ ಹೊತ್ತು ನಿಮಗೆಲ್ಲರಿಗೂ ನೆನಪಿರಬೇಕು. ಅಂದೂ ಅಷ್ಟೇ. ಸರ್ಕಾರ ನೀಡುತ್ತಿದ್ದ ಸವಲತ್ತುಗಳನ್ನು ತಾವೇ ಕೊಡುತ್ತೇವೆಂದು ನಂಬಿಸಿದ ಮಿಷನರಿಗಳು ಊಟದ ಜೊತೆಗೆ ಬೈಬಲ್ ಅನ್ನೂ ಕೊಟ್ಟು ಬರುತ್ತಿದ್ದರು. ಹಸಿದವರಿಗೆ ಅನ್ನ ಕೊಡುವ, ಆರೋಗ್ಯ ಕಳಕೊಂಡವರಿಗೆ ಗುಣಪಡಿಸುವ ನೆಪದಲ್ಲಿ, ಶಿಲುಬೆಯನ್ನು ಕೊಡುವ ಈ ಪ್ರಯತ್ನವನ್ನು ಹಿಂದೂವಾದವನು ಎಂದಿಗೂ ಒಪ್ಪಲಾರ. ಹಾಗಂತ ಬಲು ಹಿಂದೆಯೇ ಸ್ವಾಮಿ ವಿವೇಕಾನಂದರು ಪಶ್ಚಿಮದ ಚರ್ಚುಗಳಲ್ಲಿ ಬಲು ಜೋರಾಗಿಯೇ ಸಾರಿದ್ದರು.

ಇದೇ ಬಗೆಯ ಅನೇಕ ಸತ್ಯ ಘಟನೆಗಳು ತೆರೆಸಾ ಕುರಿತಂತೆ ಹೊರಬಂದಿವೆ. ಅವರ ಸಂಸ್ಥೆಯಲ್ಲಿ ಕೆಲಸ ಮಾಡಿದ ಅರೂಪ್ ಚಟರ್ಜಿ ಆನಂತರದ ದಿನಗಳಲ್ಲಿ ಅಲ್ಲಿರುವ ಆರ್ಥಿಕ ಗೊಂದಲಗಳನ್ನು ಬಯಲಿಗೆಳೆದಿದ್ದರು. ಬ್ರಿಟಿಷ್ ಪತ್ರಕರ್ತರಾದ ಕ್ರಿಸ್ಟೋಫರ್ ಹಿಚನ್ಸ್ ಮತ್ತು ತಾರಿಕ್ ಅಲಿ ‘ಚಾನೆಲ್ 4’ ಗೆಂದೇ ನಿರ್ದೇಶಿಸಿದ ‘ಹೆಲ್ಸ್ ಏಂಜೆಲ್’ ಎನ್ನುವ ಸಾಕ್ಷ್ಯಚಿತ್ರ ಇಂದಿಗೂ ಉತ್ತರಿಸಲಾಗದ ಪ್ರಶ್ನೆಗಳನ್ನು ಮಿಷನರಿಗಳೆದುರಿಗಿಟ್ಟಿದೆ. ‘ದ ಲ್ಯಾನ್​ಸೆಟ್’ನ ಪತ್ರಕರ್ತ ರಾಬಿನ್ ಫಾಕ್ಸ್ ತೆರೆಸಾ ಸಂಸ್ಥೆಗೆ ಭೇಟಿ ಕೊಟ್ಟು ಅಲ್ಲಿನ ವ್ಯವಸ್ಥೆಗಳ ಕುರಿತಂತೆ ಬಹುವಾಗಿ ಆಕ್ಷೇಪವೆತ್ತಿದ್ದ. ತೆರೆಸಾ ಸಾಯುವ ರೋಗಿಗಳನ್ನು ಮತಾಂತರಿಸುವ ಕುರಿತಂತೆ ವ್ಯಾಪಕ ಆರೋಪ-ಟೀಕೆ ವ್ಯಕ್ತವಾಗಿತ್ತು. ಬರಿ ಮತಾಂತರದ್ದಷ್ಟೇ ಅಲ್ಲ. ಕ್ಯಾಥೋಲಿಕ್ ಚರ್ಚುಗಳೊಳಗೆ ನನ್​ಗಳ ಮೇಲೆ ಲೈಂಗಿಕವಾದ ಅತ್ಯಾಚಾರಗಳೂ ನಡೆಯುತ್ತವೆಂಬ ಸುದ್ದಿ ಆಗಿಂದಾಗೆ ಹೊರಬರುತ್ತಲೇ ಇರುತ್ತವೆ. ಕೇರಳದ ಚರ್ಚೊಂದನ್ನು ತನ್ನ 68ನೇ ವಯಸ್ಸಿನಲ್ಲಿ ಬಿಟ್ಟು ಬಂದ ಸಿಸ್ಟರ್ ಮೇರಿ ಬರೆದ ಕೃತಿ ‘ಆನ್ ಆಟೋಬಯಾಗ್ರಫಿ ಆಫ್ ಎ ನನ್’ ಉತ್ಪಾತವನ್ನೇ ಸೃಷ್ಟಿಸಿತ್ತು. ಚರ್ಚುಗಳಲ್ಲಿ ಪಾದ್ರಿಗಳಿಂದ ನನ್​ಗಳ ಮೇಲೆ ನಡೆಯುವ ಲೈಂಗಿಕ ಶೋಷಣೆಯನ್ನು ಸಿಸ್ಟರ್ ಮೇರಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದರು. ಜೇಸ್ಮೆ ರಾಫೆಲ್ ಬರೆದ ಕೃತಿ ಕೂಡ ಇಷ್ಟೇ ಸದ್ದು ಮಾಡಿತ್ತು. ಶಿಬು ಕಲಪ್ಪರಂಬೆಲ್ ಶ್ವೇತ ವಸ್ತ್ರಧಾರಿಯಾಗಿದ್ದ ರ್ಚಚಿನ ಬ್ರದರ್. ಆತ ಕೂಡ ಚರ್ಚುಗಳೊಳಗಿನ ಕತ್ತಲ ಕಥನಗಳನ್ನು ಬಿಚ್ಚಿಟ್ಟಿದ್ದ. ಸಿಸ್ಟರ್ ಮೇರಿ ಹೇಳುವ ಪ್ರಕಾರ, ‘ಚರ್ಚುಗಳೊಳಗೆ ಸಹಿಸಲಾಗದ ನೋವಿದೆ. ಅಸಹಾಯಕತೆ ಇದೆ. ಕೆಲವರು ಓಡಿ ಹೋಗುತ್ತಾರೆ. ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕೆಲವರು ದೀರ್ಘಕಾಲ ಉಳಿದುಕೊಳ್ಳುತ್ತಾರೆ. ಏಕೆಂದರೆ ನನ್ ಪದವಿಯನ್ನು ಸ್ವೀಕರಿಸುವಾಗಲೇ ಕ್ರಿಸ್ತನ ಹಾದಿಯಲ್ಲಿ ಎಂಥ ಕಠಿಣ ಸಂದರ್ಭಗಳನ್ನೂ ಎದುರಿಸಬೇಕೆಂಬ ಪಾಠವನ್ನು ಬೋಧಿಸಲಾಗಿರುತ್ತದೆ. ಪಾದ್ರಿಗಳು ಆಗಾಗ ಕಾನ್ವೆಂಟ್​ಗಳಿಗೆ ಬಂದುಬಿಡುತ್ತಾರೆ ಮತ್ತು ಅಲ್ಲಿರುವ ನನ್​ಗಳೊಂದಿಗೆ ಚಕ್ಕಂದವಾಡುತ್ತಾರೆ. ಅನೇಕ ಬಾರಿ ನನ್​ಗಳ ಕೋಣೆಯೊಳಕ್ಕೆ ಹೊಕ್ಕರೆ ಅಸಹ್ಯವೆನಿಸುವ ಸ್ಥಿತಿ ಇರುತ್ತದೆ’. ಒಟ್ಟಾರೆ ಚರ್ಚುಗಳ ಬಣ್ಣ ಬಯಲು ಮಾಡುವ ‘ಮಿಷನರಿಸ್ ಇನ್ ಇಂಡಿಯಾ’ ಎಂಬ ಕೃತಿಯನ್ನು ಅರುಣ್ ಶೌರಿ ಬರೆದಿದ್ದಾರೆ.

ಬರಿ ದೇಶದಲ್ಲಷ್ಟೇ ಅಲ್ಲ ಜಾಗತಿಕ ಮಟ್ಟದಲ್ಲೂ ಇವೇ ಆರೋಪಗಳಿವೆ. ತೀರಿಕೊಂಡ ಎರಡೇ ದಶಕಗಳಲ್ಲಿ ತೆರೆಸಾರಿಗೆ ಸಂತ ಪದವಿಯನ್ನು ಕೊಟ್ಟಿದ್ದಂತೂ ಇಂದಿಗೂ ಚರ್ಚೆಯ ವಸ್ತುವಾಗಿದೆ. ಹಿಂದೂ ಧರ್ಮದ ಆಚರಣೆಗಳನ್ನು ಆಡಿಕೊಳ್ಳುವ ಮಿಷನರಿಗಳು ಮತ್ತು ಬುದ್ಧಿಜೀವಿಗಳು ಈ ಕುರಿತಂತೆ ಎಂದಿಗೂ ಮಾತನಾಡುವುದೇ ಇಲ್ಲ. ಏಸು ಕ್ರಿಸ್ತನಿಗೆ ಸಮರ್ಪಿಸಿಕೊಂಡ ವ್ಯಕ್ತಿಯೊಬ್ಬ ಮಾಡಿರುವ ಪವಾಡಗಳ ಆಧಾರದ ಮೇಲೆ ಅವರು ತೀರಿಕೊಂಡ ನಂತರ ಸಂತ ಪದವಿ ನೀಡಲಾಗುತ್ತದೆ. ತೆರೆಸಾ ಕನಸಿನಲ್ಲಿ ಬಂದು ವ್ಯಕ್ತಿಯೊಬ್ಬರ ಬ್ರೇನ್ ಟ್ಯೂಮರ್ ಸರಿಪಡಿಸಿದರೆಂದು 21ನೇ ಶತಮಾನದಲ್ಲಿ ವ್ಯಾಟಿಕನ್ ರ್ಚಚಿನ ಮುಖ್ಯಸ್ಥರು ಘೊಷಿಸಿ ಸಂತ ಪದವಿಯನ್ನು ನೀಡಿದ್ದು ಇಂದಿಗೂ ಬೌದ್ಧಿಕ ವಲಯದ ಸುದೀರ್ಘ ಚರ್ಚೆ.

ಚರ್ಚುಗಳ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ಸ್ವತಃ ಗಾಂಧಿ ಇವರ ಮನೋಧರ್ಮದ ಕುರಿತಂತೆ ಟೀಕಿಸುತ್ತಿದ್ದರು. ಅದೊಮ್ಮೆ ಪೋಲ್ಯಾಂಡ್​ನ ಪ್ರಾಧ್ಯಾಪಕರೊಬ್ಬರು ಅವರ ಬಳಿ ‘ಕ್ಯಾಥೋಲಿಕ್ ಒಂದೇ ನಿಜವಾದ ಧರ್ಮ’ ಎಂದಿದ್ದಕ್ಕೆ ಪ್ರತಿಕ್ರಿಯಿಸುತ್ತ ‘ಮತಾಂತರವೆಂಬುದು ಸತ್ಯದ ಅಮೃತಕ್ಕೆ ಸುರಿದಿರುವ ವಿಷ ಎಂಬುದನ್ನು ಎಂದಿಗೂ ಮರೆಯದಿರಿ’ ಎಂದು ಎಚ್ಚರಿಸಿದ್ದರು. ‘ಮುಂದೊಮ್ಮೆ ಕಾನೂನನ್ನು ರೂಪಿಸುವ ಅಧಿಕಾರ ನನಗೆ ಬಂದರೆ ಎಲ್ಲ ಬಗೆಯ ಮತಾಂತರದ ಚಟುವಟಿಕೆಯನ್ನು ನಿಷೇಧಿಸುತ್ತೇನೆ’ ಎಂದಿದ್ದರು ಗಾಂಧಿ. ಗಾಂಧಿ ಹೆಸರನ್ನು ಬಳಸಿಕೊಂಡೇ ರಾಜಕಾರಣ ಮಾಡುತ್ತಿರುವವರಿಗೆ ಕಾನೂನು ಮಾಡುವ ಅಧಿಕಾರ ಬಂತಷ್ಟೇ. ಮತಾಂತರ ನಿಷೇಧಿಸುವ ಧೈರ್ಯ ಬರಲಿಲ್ಲ.

‘ಜಾರ್ಖಂಡ್​ನಲ್ಲಿ ತಾನು ಮಕ್ಕಳನ್ನು ಮಾರುತ್ತಿದ್ದುದು ನಿಜ. ಎರಡು ಮಕ್ಕಳನ್ನು ಮಾರಿ ಒಂದು ಮಗುವನ್ನು ಉಚಿತವಾಗಿ ಕೊಟ್ಟೆ’ ಎಂದು ಹೇಳುವ ನನ್ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಆದರೆ ‘ಬುದ್ಧಿಜೀವಿ’ಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಒಂದೆರಡು ವರ್ಷಗಳ ಹಿಂದೆ ‘ಔಟ್​ಲುಕ್’ ಪತ್ರಿಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಕ್ಕಳನ್ನು ಮಾರಾಟ ಮಾಡುವ ಜಾಲ ನಡೆಸುತ್ತದೆ ಎಂಬ ಸುಳ್ಳುಸುದ್ದಿಯನ್ನು ರಾಜಾರೋಷವಾಗಿಯೇ ಪ್ರಕಟಿಸಿತ್ತು. ಅದನ್ನು ಸಮಾಜದ ಪ್ರತಿಯೊಂದು ವಿಭಾಗದಿಂದಲೂ ಪ್ರಶ್ನಿಸಲಾರಂಭಿಸಿದಾಗ ಕ್ಷಮೆ ಕೇಳುವ ಗೋಜಿಗೂ ಹೋಗದೆ ಪತ್ರಿಕೆ ಸಹಜವಾಗಿ ನಡೆಯಲಾರಂಭಿಸಿತು. ಆದರೆ ಈಗ ನನ್​ಗಳು ನಡೆಸುತ್ತಿರುವ ಈ ದಂಧೆ ಸಾಕ್ಷಿ ಸಮೇತ ಹೊರಬಿದ್ದ ನಂತರವೂ ಆ ಕುರಿತಂತೆ ಮಾತನಾಡುವ, ಬರೆಯುವ ಧೈರ್ಯವನ್ನು ಯಾರೂ ತೋರುತ್ತಿಲ್ಲವೆಂಬುದೇ ಅಚ್ಚರಿಯ ಸಂಗತಿ! ಇಷ್ಟು ಮಾತ್ರ ಕಾವಿಧಾರಿಯೊಬ್ಬ ಯಾವುದಾದರೂ ಪ್ರಕರಣದಲ್ಲಿ ಸಿಕ್ಕುಹಾಕಿಕೊಂಡರೆ ಮಾಧ್ಯಮಗಳು, ಬುದ್ಧಿಜೀವಿಗಳು, ಹೋರಾಟಗಾರರು, ಟ್ಯಾಬ್ಲಾಯ್್ಡ ಪತ್ರಕರ್ತರು ಸುಮ್ಮನಿರುತ್ತಿದ್ದರಾ? 24 ತಾಸೂ ಇದೇ ವಿಚಾರವನ್ನು ಪದೇಪದೆ ಹೇಳಿ ಹಿಂದೂ ಧರ್ಮವನ್ನು ಕೆಟ್ಟದಾಗಿ ಚಿತ್ರಿಸುವ ಪ್ರಯತ್ನ ಮಾಡುತ್ತಿದ್ದರು. ಅವರ ಪಾಲಿಗೆ ಆಗ ಎಡವಿದ್ದು ಬರೀ ಒಬ್ಬ ಸಂತನಲ್ಲ ಇಡಿಯ ಹಿಂದೂಧರ್ಮ. ಆದರೆ ಮಕ್ಕಳ ಮಾರಾಟದ ವಿಚಾರ ಬಂದಾಗ ಎಡವಿರೋದು ಯಃಕಶ್ಚಿತ್ ನನ್, ಕ್ರಿಶ್ಚಿಯಾನಿಟಿ ಅಲ್ಲ!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

Leave a Reply

Your email address will not be published. Required fields are marked *

Back To Top