Wednesday, 14th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಮಲ್ಯ, ನೀರವ್​ರನ್ನು ಹಿಡಿದು ತರುತ್ತಾರಾ ಮೋದಿ?

Monday, 25.06.2018, 3:05 AM       No Comments

ಮಧ್ಯಪ್ರದೇಶ, ರಾಜಸ್ತಾನ ಚುನಾವಣೆಗಳನ್ನೂ ಮೋದಿ ಸವಾಲಾಗಿಯೇ ಸ್ವೀಕರಿಸಬೇಕಿದೆ. ಇಲ್ಲಿ ಮತ್ತೆ ಸರ್ಕಾರ ರಚಿಸಲು ಸೋತರೆ ಅದನ್ನು 2019ರ ಚುನಾವಣೆಯ ದಿಕ್ಸೂಚಿ ಎಂದೇ ಬುದ್ಧಿಜೀವಿಗಳು ಷರಾ ಬರೆದುಬಿಡುತ್ತಾರೆ. ಆ ಚುನಾವಣೆಗಳಿಗೂ ಮುನ್ನ ಸದ್ದು ಮಾಡಲೇಬೇಕಿದೆ. ಹಾಗಂತ ಭಾರತದ ಘನತೆ-ಗೌರವ ಬಲಿಕೊಟ್ಟು ಇಂಥ ಗೆಲುವು ಸಾಧಿಸುವ ಅಗತ್ಯ ಅವರಿಗಿಲ್ಲ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮುಂದೆ 2019ಕ್ಕೂ ಮುಂಚೆ ಇರುವ ಕೆಲವು ಸವಾಲುಗಳಲ್ಲಿ ಮಲ್ಯ, ನೀರವ್, ಲಲಿತ್ ಮೂವರನ್ನೂ ಎಳೆದುಕೊಂಡು ಬರುವುದೂ ಒಂದು. ದೇಶ ಬಿಟ್ಟು ಓಡಿಹೋಗಿರುವ ಇವರನ್ನು ಎಳೆದು ತಂದುಬಿಟ್ಟರೆ ಕಾಂಗ್ರೆಸ್ಸಿಗೆ ಮೋದಿಯ ವಿರುದ್ಧ ಆರೋಪ ಮಾಡಲು ದೊಡ್ಡದೊಂದು ಅಸ್ತ್ರವೇ ಇಲ್ಲವಾಗಿಬಿಡುತ್ತದೆ. ಇಷ್ಟಕ್ಕೂ ಈ ಮೂವರಿಗೂ ಹಣ ಕೊಟ್ಟಿದ್ದು ಕಾಂಗ್ರೆಸ್. ಅದರ ಲಾಭ ಪಡೆದಿದ್ದು ಕಾಂಗ್ರೆಸ್. ಮೋದಿ ಸರ್ಕಾರದ ಕಠಿಣ ನಿಯಮಗಳು ತಮ್ಮಿಂದ ಹಣವನ್ನು ಕಕ್ಕಿಸುತ್ತವೆಂದು ಗೊತ್ತಾದೊಡನೆ ಅವರು ದೇಶವನ್ನೇ ಬಿಟ್ಟು ಓಡಿಹೋಗಿದ್ದರು. ಮೋದಿ ಇದಕ್ಕೆ ಅವಕಾಶ ಮಾಡಿಕೊಟ್ಟರೆಂದು ಈಗ ಕಾಂಗ್ರೆಸ್ಸು ಕಣ್ಣೀರಿಡುತ್ತಿದೆ. ಅದರರ್ಥ, ಈ ಐದು ವರ್ಷವೂ ಕಾಂಗ್ರೆಸ್ಸೇ ಇದ್ದಿದ್ದರೆ ಈ ಮೂವರೂ ಇಲ್ಲಿಯೇ ಇದ್ದು ಇನ್ನಷ್ಟು ಲೂಟಿ ಮಾಡಿಕೊಂಡು ಹಾಯಾಗಿರುತ್ತಿದ್ದರು ಅಂತಲಾ? 70 ವರ್ಷಗಳ ಕಾಲ ರಾಷ್ಟ್ರೀಯ ಪಕ್ಷವಾಗಿ ಬಾಳಿ ಬದುಕಿದ ಕಾಂಗ್ರೆಸ್ಸಿನ ದೈನೇಸಿ ಸ್ಥಿತಿ ಇದು. ಹಾಗಂತ ಮೋದಿ ಸುಮ್ಮನಿಲ್ಲ. ಅವರು ಈ ಮೂವರನ್ನೂ ತಂದು ರಾಷ್ಟ್ರೀಯವಾಗಿ ಭಾಜಪದ, ಜಾಗತಿಕವಾಗಿ ಭಾರತದ ಗೌರವವನ್ನು ಹೆಚ್ಚಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.

ಅಚ್ಚರಿಯ ಭೇಟಿ: ನರೇಂದ್ರ ಮೋದಿಯವರು ಯುರೋಪಿಯನ್ ಯೂನಿಯನ್ ಪ್ರವಾಸ ಮಾಡಿದ್ದು ನಿಮಗೆ ನೆನಪಿರಬೇಕು. ಅಚಾನಕ್ಕಾದ ಇಂಗ್ಲೆಂಡಿನ ಭೇಟಿ ಎಲ್ಲರಲ್ಲೂ ಅಚ್ಚರಿ ಹುಟ್ಟಿಸಿತ್ತು. ಅಲ್ಲಿನ ಪ್ರಧಾನಿ ತೆರೆಸಾ ಮೇ ಜತೆ ಅವರು ವ್ಯಾಪಾರ ವಹಿವಾಟುಗಳ ಕುರಿತಂತೆ ಚರ್ಚೆ ಮಾಡುತ್ತಾರೆಂದು ಗೊತ್ತಿದ್ದರೂ ಈ ಹೊತ್ತಿನಲ್ಲಿ ಈ ಯಾತ್ರೆಯ ತುರ್ತು ಏನಿತ್ತೆಂಬುದು ಅಚ್ಚರಿಯೇ ಆಗಿತ್ತು. ಯುರೋಪಿಯನ್ ಯೂನಿಯನ್​ನಿಂದ ಹೊರಬರಬೇಕೆಂದು ಬ್ರಿಟನ್ ನಿರ್ಧಾರ ಮಾಡಿದಾಗಿನಿಂದಲೂ ಬಲುದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದೆ. 2020ರವರೆಗೆ ಯುರೋಪಿಯನ್ ಯೂನಿಯನ್ ಖರ್ಚುವೆಚ್ಚಗಳನ್ನು ನಿಭಾಯಿಸಬೇಕೆಂಬ ಕರಾರಿಗೆ ಸಹಿಯಾಗಿದ್ದರಿಂದ 50 ಶತಕೋಟಿ ಪೌಂಡ್​ಗಳಷ್ಟು ಹಣವನ್ನು ಬ್ರಿಟನ್ ಕೊಡಬೇಕಾಗಿದೆ. ಯೂನಿಯನ್​ನಲ್ಲಿದ್ದಾಗ ಅದರ 28 ಸದಸ್ಯ ರಾಷ್ಟ್ರಗಳಲ್ಲಿ ಎಲ್ಲಿ ಬೇಕಾದರೂ ಹೋಗಿ ಉಳಿದುಕೊಳ್ಳುವ ಕೆಲಸ ಮಾಡುವ ಅವಕಾಶ ಪಡೆದಿದ್ದ ಬ್ರಿಟನ್ನಿನ ನಾಗರಿಕರು ಈಗ ಗೊಂದಲಕ್ಕೆ ಒಳಗಾಗಿದ್ದಾರೆ. ಬ್ರಿಟನ್ನಿನ ಅನೇಕ ನಾಗರಿಕರು ಯುರೋಪಿಯನ್ ಯೂನಿಯನ್​ನ ಪಾಸ್​ಪೋರ್ಟ್ ಉಳಿಸಿಕೊಳ್ಳಲೆಂದೇ ಐರ್ಲೆಂಡಿನ ಪಾಸ್​ಪೋರ್ಟ್ ಪಡೆಯಲು ಹೆಣಗಾಡುತ್ತಿದ್ದಾರೆ. ಅವರ 44 ಪ್ರತಿಶತದಷ್ಟು ರಫ್ತು ನಡೆಯುತ್ತಿದ್ದುದೇ ಯೂನಿಯನ್​ನ ರಾಷ್ಟ್ರಗಳೊಂದಿಗೆ; ಈಗ ಏಕಾಏಕಿ ಇವೆಲ್ಲಕ್ಕೂ ಹೊಡೆತ ಬೀಳಲಿದೆ. ಜತೆಗೆ ಗಡಿ ಸಮಸ್ಯೆಗಳು ಅಗತ್ಯಕ್ಕಿಂತಲೂ ಹೆಚ್ಚು ಉಲ್ಬಣವಾಗಲಿವೆ. ಒಟ್ಟಾರೆ, ಬ್ರಿಟನ್ ಯಾವ ವೈಭವದಿಂದ ಮೆರೆದಿತ್ತೋ ಅದನ್ನು ಕಳೆದುಕೊಂಡು ಪ್ರಪಾತಕ್ಕೆ ಬೀಳಲಿದೆ. ಇವು ಸಾಲದೆಂಬಂತೆ ಕಿತ್ತುತಿನ್ನುವ ವಲಸೆಗಾರರ ಸಮಸ್ಯೆಯೂ ಪರಿಸ್ಥಿತಿಯನ್ನು ಹದಗೆಡಿಸಿದೆ. ಈ ಹೊತ್ತಿನಲ್ಲಿ ಅವರ ಸಹಾಯಕ್ಕೆ ಬರಬಲ್ಲವರು ಭಾರತ-ಚೀನಾದಂತಹ ರಾಷ್ಟ್ರಗಳು ಮಾತ್ರ. ಮೋದಿಯವರ ಪಾಲಿಗೆ ಈಗ ಇದೇ ಟ್ರಂಪ್​ಕಾರ್ಡ್ ಕೂಡ. ಇದನ್ನು ಮನಸ್ಸಿನಲ್ಲಿಟ್ಟುಕೊಂಡೇ ಅವರು ಇಂಗ್ಲೆಂಡಿಗೆ ಹೋಗಿದ್ದರು.

ಮೊದಲೆಲ್ಲ ಇತರೆ ರಾಷ್ಟ್ರಗಳೊಂದಿಗೆ ಮಾತನಾಡುವಾಗ ನಮ್ಮ ಧಾಟಿಯೇ ಬೇರೆ ಇರುತ್ತಿತ್ತು. ಈಗ ನಾವು ಮಾತನಾಡುವ ಶೈಲಿ ಬದಲಾಗಿದೆ. ಇಂಗ್ಲೆಂಡಿರಲಿ, ಅಮೆರಿಕ ಇರಲಿ, ಚೀನಾ-ರಷ್ಯಾಗಳೇ ಇರಲಿ ಭಾರತದ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡೇ ನಮ್ಮ ವಾದ ಚರ್ಚೆಗಳೆಲ್ಲವೂ. ಮೋದಿ ಇಂಗ್ಲೆಂಡಿಗೆ ಹೋಗುವ ಮುನ್ನ ತೆರೆಸಾ ಮೇ ಭಾರತದೊಂದಿಗೆ ಮುಕ್ತ ವ್ಯಾಪಾರದ ಮಾತುಗಳನ್ನಾಡಿದ್ದರು. ಹೀಗಾಗಿ ಮೋದಿಯವರೊಂದಿಗಿನ ಅವರ ಮಾತುಕತೆಗೆ ಬಹುವಾದ ಬೆಲೆ ಇತ್ತು. ಮಾತುಕತೆಗೆ ಕುಳಿತಾಗ ಮೋದಿ, ವ್ಯಾಪಾರ ವಹಿವಾಟುಗಳಿಗೂ ಮುನ್ನ ಮಲ್ಯ, ಲಲಿತ್ ವಿಚಾರ ಪ್ರಸ್ತಾಪಿಸಿದ್ದರು. 1992ರ ಭಾರತ-ಬ್ರಿಟನ್ ನಡುವಿನ ‘ಎಕ್ಸ್​ಟ್ರಡಿಷನ್ ಟ್ರೀಟಿ’ ನೆನಪಿಸಿ, ರೆಡ್ ಕಾರ್ನರ್ ನೋಟಿಸ್ ಮತ್ತು ವಾರಂಟ್​ಗಳನ್ನು ಹೊಂದಿರುವ ಭಾರತದ ಅಪರಾಧಿಗಳನ್ನು ಹಸ್ತಾಂತರಿಸಬೇಕೆಂದು ವಿನಂತಿಸಿಕೊಂಡರು. ಬ್ರಿಟಿಷರ ಸಹಜ ಧಿಮಾಕಿನಿಂದ ತೆರೆಸಾ ‘ಭಾರತದ ಜೈಲುಗಳು ಸಮರ್ಪಕವಾಗಿಲ್ಲ. ಅಂತಾರಾಷ್ಟ್ರೀಯ ಮಟ್ಟಕ್ಕೆ ನಿಲುಕುವುದಿಲ್ಲ’ ಎಂಬ ಮಾತುಗಳನ್ನಾಡಿದೊಡನೆ ಮೋದಿ ಸ್ವಲ್ಪ ಖಾರವಾಗಿಯೇ ಉತ್ತರಿಸುತ್ತ, ‘ಭಾರತದ ಇದೇ ಜೈಲುಗಳಲ್ಲಿ ನೀವು ಗಾಂಧಿ ಮತ್ತು ನೆಹರುರನ್ನು ಇಟ್ಟಿದ್ದನ್ನು ಮರೆತಿರೇನು?’ ಎಂದುಬಿಟ್ಟರು. ಬ್ರಿಟನ್ನಿನ ಪ್ರಧಾನಿಗೆ ಆಗಿರಬಹುದಾದ ಮುಖಭಂಗವನ್ನು ಊಹಿಸಿನೋಡಿ. ನಂತರದ ಮಾತುಕತೆಗಳು ಯಾವ ದಿಕ್ಕಿನಲ್ಲಿರಬಹುದೆಂದು ನಾವು ಅಂದಾಜು ಮಾಡಬಹುದು. ಬ್ರಿಟನ್ನಿನೊಂದಿಗೆ ಯಾವ ಮಹತ್ವದ ವಿಚಾರ ಪ್ರಸ್ತಾಪಕ್ಕೂ ಭಾರತ ನಿರಾಕರಿಸಿಬಿಟ್ಟತು. 128 ಕೋಟಿ ಜನರ ಪ್ರಧಾನಿಯಾಗಿ ನರೇಂದ್ರ ಮೋದಿ ಬ್ರಿಟನ್ನಿನೆದುರು ಈಗ ನಿಂತಿದ್ದರು. ಅವರು ಗಾಂಧೀಜಿಯವರಂತೆ ಹೃದಯ ಮುಂದಿಟ್ಟು ಒಪ್ಪಂದ ಮಾಡಿಕೊಳ್ಳುವ ವ್ಯಕ್ತಿತ್ವದವರಾಗಿರಲಿಲ್ಲ; ಬದಲಿಗೆ ಸುಭಾಷ್​ಚಂದ್ರ ಬೋಸರು ಹಿಟ್ಲರ್​ನೊಂದಿಗೆ ನಡೆಸಿದ ವಾರ್ತಾಲಾಪದಂತೆ ತೆರೆಸಾ ಮೇ ಜತೆಗೆ ನಡೆದುಕೊಂಡರು.

ಇಷ್ಟಕ್ಕೂ 2 ಶತಮಾನಗಳ ಕಾಲ ಆಳಿದವರೆಂಬ ಧಿಮಾಕು ಬ್ರಿಟನ್ನಿನವರಿಗೆ ಇಂದಿಗೂ ಇದೆ. ಭಾರತ ಸ್ವಾಭಿಮಾನಿಯಾಗಿ ಎದುರು ಕುಳಿತು ಮಾತನಾಡುವುದನ್ನು ಅದು ಇಂದಿಗೂ ಧಿಕ್ಕರಿಸುತ್ತದೆ. ‘ಎಕ್ಸ್​ಟ್ರಡಿಷನ್ ಟ್ರೀಟಿ’ 92ರಲ್ಲೇ ಆಗಿದ್ದರೂ ಅದಾದ 23 ವರ್ಷಗಳ ನಂತರ ಸಮೀರ್​ಭಾಯ್ ವಿನೂಭಾಯ್ ಪಟೇಲ್​ರನ್ನು 2016ರಲ್ಲಿ ಭಾರತಕ್ಕೆ ಕಳಿಸಿಕೊಡಲಾಗಿತ್ತು. ಅದಕ್ಕೂ ಮೊದಲು ಗುಲ್ಷನ್ ಕುಮಾರ್ ಹತ್ಯೆಯಲ್ಲಿ ಭಾಗಿಯಾಗಿದ್ದ ನದೀಂ, 93ರ ಗುಜರಾತ್ ಬ್ಲಾಸ್ಟ್ ಕೇಸಿನ ಅಪರಾಧಿಯಾಗಿದ್ದ ಟೈಗರ್ ಹನೀಫ್, ನೌಕಾಸೇನೆಯ ಮಾಹಿತಿಯನ್ನು ಬಹಿರಂಗಪಡಿಸಿದ ರವಿಶಂಕರ್ ಇವರೆಲ್ಲರನ್ನೂ ಮರಳಿಸುವಂತೆ ಕೇಳಿಕೊಂಡಿದ್ದ ಭಾರತದ ಯಾವ ಕೋರಿಕೆಯನ್ನೂ ಬ್ರಿಟನ್ ಮನ್ನಿಸಿರಲಿಲ್ಲ. ಸಮೀರ್​ಭಾಯ್ ಪಟೇಲ್​ರನ್ನು ಅವರು ಮರಳಿಸಿದ್ದು ಬಹುಶಃ ಆತ 2002ರ ಗುಜರಾತ್ ದಂಗೆಯಲ್ಲಿ ಭಾಗವಹಿಸಿದ್ದ ಎಂಬ ಕಾರಣಕ್ಕಿರಬಹುದು. ಬ್ರಿಟನ್ನಿನ ಮುಸ್ಲಿಂ ಓಲೈಕೆ ಭಾವನೆ ತನ್ನನ್ನೇ ನುಂಗುವಷ್ಟು ಬೆಳೆದುಬಿಟ್ಟಿದೆ ಎನ್ನುವುದು ಅದಕ್ಕೆ ಅರಿವಾಗುತ್ತಿಲ್ಲ. ಅಲ್ಲಿನ ನ್ಯಾಯಾಲಯಗಳ ಕಾರ್ಯಶೈಲಿ ಥೇಟು ಭಾರತದ್ದೇ. ದಾವೂದ್ ಇಬ್ರಾಹಿಂನ ಬಂಟನಾಗಿದ್ದ ಟೈಗರ್ ಹನೀಫ್​ನನ್ನು ಭಾರತಕ್ಕೊಪ್ಪಿಸಲು ಜಿಲ್ಲಾ ನ್ಯಾಯಾಲಯಗಳು ಒಪ್ಪಿಗೆ ಸೂಚಿಸಿದ್ದನ್ನು ಅಲ್ಲಿನ ಉಚ್ಚ ನ್ಯಾಯಾಲಯ ಎತ್ತಿಹಿಡಿದಿತ್ತು. ಹನೀಫ್ ಅಷ್ಟಕ್ಕೇ ಸುಮ್ಮನಾಗದೆ, ತನ್ನನ್ನು ಹಸ್ತಾಂತರಿಸದಿರುವಂತೆ ಅಂದು ಗೃಹ ಕಾರ್ಯದರ್ಶಿಯಾಗಿದ್ದ ತೆರೆಸಾ ಮೇ ಅವರಿಗೆ ಮನವಿಮಾಡಿಕೊಂಡ. ಇಂದು ಆಕೆ ಪ್ರಧಾನಮಂತ್ರಿಯಾಗಿದ್ದಾರೆ. ಆತನ ಕೋರಿಕೆ ಮಾತ್ರ ಕಡತಗಳಲ್ಲೇ ಕೊಳೆಯುತ್ತಿದೆ. ಈಗಿನ ಗೃಹ ಕಾರ್ಯದರ್ಶಿ ಈ ಕೋರಿಕೆಯನ್ನು ಒಪ್ಪದಿದ್ದರೂ ಆತ ಸವೋಚ್ಚ ನ್ಯಾಯಾಲಯಕ್ಕೆ ಹೋಗುತ್ತಾನೆ. ಅಲ್ಲಿಯೂ ಅದು ವರ್ಷಗಟ್ಟಲೆ ವಿಚಾರಣೆಗೆ ಬರದೆ ಹಾಗೆಯೇ ಉಳಿಯುತ್ತದೆ. ಅಷ್ಟರೊಳಗೆ ಒಂದೋ ಆತನೇ ಸತ್ತಿರುತ್ತಾನೆ ಅಥವಾ ಭಾರತ ಅವನನ್ನು ಮರೆತಿರುತ್ತದೆ. ಮಲ್ಯನಿಗೂ ಇದು ಬಲು ಚೆನ್ನಾಗಿಯೇ ಗೊತ್ತಿದೆ. ಹೀಗಾಗಿ ಆತ ಕಣ್ಣಾಮುಚ್ಚಾಲೆ ಆಡುತ್ತಲೇ ಇದ್ದಾನೆ. ಮೋದಿ ಕೂಡ ಕಡಿಮೆಯೇನಲ್ಲ. ಅಲ್ಲಿನ ಕಾನೂನುಗಳಲ್ಲಿ ಹೋರಾಟಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಿಕೊಟ್ಟು ಅದೂ ಸಾಲದೆಂಬಂತೆ ಉನ್ನತ ಮಟ್ಟದ ಒತ್ತಡವನ್ನು ತರಲೆಂದು ಪ್ರಧಾನಮಂತ್ರಿಯೊಂದಿಗೂ ಮಾತನಾಡಿದ್ದಾರೆ. ಆಕೆ ಧಿಮಾಕಿನ ಬುದ್ಧಿ ತೋರಿದೊಡನೆ ಅದಕ್ಕೆ ಸೊಪ್ಪುಹಾಕದೆ ಅಲ್ಲಿಂದ ಎದ್ದುಬಂದಿದ್ದಾರೆ.

ಸುಮ್ಮನಾಗುವ ಜಾಯಮಾನವಲ್ಲ: ಮೋದಿ ಇಷ್ಟಕ್ಕೇ ಸುಮ್ಮನಾಗುತ್ತಾರೆಂದುಕೊಂಡರೆ ಖಂಡಿತ ಸುಳ್ಳು. ಆನಂತರವೇ ಅವರು ಯುರೋಪಿಯನ್ ಯೂನಿಯನ್​ನ ಇತರೆ ರಾಷ್ಟ್ರಗಳನ್ನು ಭೇಟಿ ಮಾಡಿ ಅಲ್ಲಿಂದ ಸಾಕಷ್ಟು ಬೆಂಬಲವನ್ನು ಪಡೆದುಕೊಂಡಿದ್ದಾರೆ. ಜರ್ಮನಿಯ ಏಂಜೆಲಾ ಮರ್ಕೆಲ್​ರನ್ನು ಯುರೋಪಿಯನ್ ಯೂನಿಯನ್​ನ ಪ್ರಭಾವಿ ನಾಯಕಿ ಎಂದೆಲ್ಲ ಬಣ್ಣಿಸಿ ಬಂದಿದ್ದಾರೆ. ಇದು ಸಹಜವಾಗಿಯೇ ಬ್ರಿಟನ್ನನ್ನು ಎದುರಿಸುವ ಪರಿ. ಬ್ರೆಕ್ಸಿಟ್​ನ ಕಿರಿಕಿರಿಯಿಂದ ಅದಾಗಲೇ ನೊಂದಿರುವ ಬ್ರಿಟನ್​ಗೆ ಮೋದಿಯವರ ಈ ನಡೆಯಿಂದ ಅಚ್ಚರಿಯಷ್ಟೇ ಅಲ್ಲ ಕಿರಿಕಿರಿಯೂ ಆಗಿರಲು ಸಾಕು. ತಾವೇ ರೂಪಿಸಿಕೊಟ್ಟ ಶಿಕ್ಷಣ, ತಾವೇ ಅಡಿಪಾಯ ಹಾಕಿಕೊಟ್ಟ ನ್ಯಾಯವ್ಯವಸ್ಥೆ, ಪೊಲೀಸ್ ವ್ಯವಸ್ಥೆ, ರಾಜಕೀಯ ವ್ಯವಸ್ಥೆ ಇವೆಲ್ಲವನ್ನೂ ಹೊಂದಿರುವ ರಾಷ್ಟ್ರವೊಂದು ತನ್ನನ್ನು ಹೀಗೆ ಎದುರಿಸುವುದನ್ನು ಬ್ರಿಟನ್ ಸಹಿಸಿತಾದರೂ ಹೇಗೆ? ಅದು ಪ್ರತಿಭಟನೆ ವ್ಯಕ್ತಪಡಿಸದೇ ಬಿಡಲಿಲ್ಲ. ಭಾರತೀಯ ವಿದ್ಯಾರ್ಥಿಗಳಿಗಾಗಿ ಇರುವ ಟೈರ್-4 ವೀಸಾ ನೀತಿಯನ್ನು ಬಲು ಕಠಿಣಗೊಳಿಸಿ ಚೀನಾ-ಸರ್ಬಿಯಾದಂತಹ ರಾಷ್ಟ್ರಗಳಿಗೆ ಬೇಕಂತಲೇ ಮುಕ್ತಮಾಡಿತು. ಭಾರತದ ಎಡಪಂಥೀಯ ಪತ್ರಕರ್ತರು, ಮೋದಿ-ವಿರೋಧಿ ಪಾಳಯದಲ್ಲಿ ಬಲವಾಗಿ ಗುರುತಿಸಿಕೊಂಡ ವಿನೋದ್ ದುವಾರಂತಹ ‘ದಿ ವೈರ್’ನ ಫುಲ್​ಟೈಮ್ ಪತ್ರಕರ್ತರು ಈ ವಿಚಾರವನ್ನು ಮೋದಿಯವರ ಸೋಲೆಂದು ಬಿಂಬಿಸಲು ಪ್ರಯತ್ನಿಸಿದರು. ಆದರೆ ಅಚ್ಚರಿಯೇನು ಗೊತ್ತೇ? ಇದರಿಂದ ಭಾರತಕ್ಕೆ ನಷ್ಟವಾಗುವ ಪ್ರಮೇಯವೇ ಇರಲಿಲ್ಲ. ಬ್ರಿಟನ್ ಈ ನಿರ್ಣಯ ಕೈಗೊಳ್ಳುವುದಕ್ಕೂ ಮುನ್ನವೇ ಕಳೆದ 5 ವರ್ಷಗಳಲ್ಲಿ ಆ ದೇಶಕ್ಕೆ ಹೋಗುವ ಭಾರತೀಯರ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿತ್ತು. 2017 ಡಿಸೆಂಬರ್​ನ ಅಂಕಿ-ಅಂಶದ ಪ್ರಕಾರ ಕಳೆದ 5 ವರ್ಷಗಳಲ್ಲಿ ಅಲ್ಲಿಗೆ ಅಧ್ಯಯನಕ್ಕೆಂದು ಹೋಗುವ ವಿದ್ಯಾರ್ಥಿಗಳ ಪ್ರಮಾಣ ಪ್ರತಿಶತ 44ರಷ್ಟು ಕಡಿಮೆಯಾಗಿದೆ. 2010ರಲ್ಲಿ 60,000ದಷ್ಟು ಭಾರತೀಯರು ಅಲ್ಲಿ ಅಧ್ಯಯನಕ್ಕೆ ಹೋಗಿದ್ದರೆ ಕಳೆದ ವರ್ಷ ಆ ಸಂಖ್ಯೆ 14,000ದಷ್ಟಿತ್ತು. 2016ರಲ್ಲಿ ಇದಕ್ಕಿಂತಲೂ ಕಡಿಮೆ ಇತ್ತು. ಇದೇ ವರ್ಷ 1 ಲಕ್ಷ ವಿದ್ಯಾರ್ಥಿಗಳು ಕೆನಡಾಕ್ಕೆ ಅಧ್ಯಯನಕ್ಕೆಂದು ಹೋಗಿದ್ದರು. ಈ ವಿಚಾರವನ್ನು ಬ್ರಿಟನ್ನಿನ ಹೌಸ್ ಆಫ್ ಲಾರ್ಡ್ಸ್​ನಲ್ಲಿ ಕರಣ್ ಬಿಲಿ ಮೋರಿಯಾ ಬಿಚ್ಚಿಟ್ಟು ಭಾರತೀಯ ವಿದ್ಯಾರ್ಥಿಗಳಿಗೆ ಪೂರಕ ವಾತಾವರಣವನ್ನು ನಿರ್ವಿುಸಿಕೊಡದಿದ್ದರೆ ಭಾರತ-ಬ್ರಿಟನ್ ನಡುವಿನ ಮುಕ್ತ ವಹಿವಾಟು ಅಸಾಧ್ಯ ಎಂದು ಎಚ್ಚರಿಸಿದ್ದಾರೆ. ಬ್ರಿಟನ್ನಿನ ಬಿಜಿನೆಸ್ ಸೆಕ್ರೆಟರಿ ವಿನ್ಸ್ ಕ್ಯಾಬಲ್ ಅಂತಾರಾಷ್ಟ್ರೀಯ ವಿಚಾರ ಸಂಕಿರಣವೊಂದರಲ್ಲಿ ಮಾತನಾಡುತ್ತ ‘ಬ್ರಿಟನ್ನಿಗೆ ಇನ್ನು ಮುಂದೆ ಭಾರತೀಯ ವಿದ್ಯಾರ್ಥಿಗಳು ಬೇಕಾಗಿಲ್ಲ ಎಂಬ ಸಂದೇಶವನ್ನು ನಾವು ಕಳಿಸುತ್ತಿರುವುದು ಖಂಡಿತ ದೇಶಕ್ಕೆ ಒಳಿತುಂಟುಮಾಡದು’ ಎಂಬ ಎಚ್ಚರಿಕೆಯನ್ನು ಅಲ್ಲಿನ ಪ್ರಧಾನಿಗೆ ಕೊಟ್ಟಿದ್ದಾರೆ. ಅಲ್ಲಿನ ಭಾರತೀಯ ವಿದ್ಯಾರ್ಥಿಗಳ ಸಂಘಟನೆಯೂ ಇದು ಭಾರತೀಯರ ಮೇಲೆ ಬ್ರಿಟನ್ ಮಾಡುತ್ತಿರುವ ಪ್ರಹಾರ ಎಂದಿದೆ. ಇವ್ಯಾವುವೂ ತೆರೆಸಾ ಮೇಗೆ ಸಂತೋಷ ಕೊಡುವ ಸುದ್ದಿಗಳಲ್ಲ.

ಆಕೆ ಬಡವನ ಕೋಪವನ್ನು ದವಡೆಯ ಮೇಲೆ ತೀರಿಸಿಕೊಂಡಂತೆ ಮೋದಿಯವರೊಂದಿಗೆ ಒಪ್ಪಂದದಲ್ಲಿ ಗೆಲ್ಲಲಾಗದ ಕೋಪವನ್ನು ವಿದ್ಯಾರ್ಥಿಗಳ ಮೇಲೆ ತೀರಿಸಿಕೊಳ್ಳಲು ಹೊರಟಿದ್ದಾರೆ. ಭಾರತ ಬಗ್ಗುವ ಲಕ್ಷಣಗಳಂತೂ ಸದ್ಯಕ್ಕೆ ಕಾಣುತ್ತಿಲ್ಲ.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾವು ಜೋರಾಗುತ್ತಿದೆ. ಮಧ್ಯಪ್ರದೇಶ, ರಾಜಸ್ತಾನ ಚುನಾವಣೆಗಳನ್ನೂ ಮೋದಿ ಸವಾಲಾಗಿಯೇ ಸ್ವೀಕರಿಸಬೇಕಿದೆ. ಈ ರಾಜ್ಯಗಳಲ್ಲಿ ಮತ್ತೆ ಸರ್ಕಾರ ರಚಿಸಲು ಸೋತರೆ ಅದನ್ನು 2019ರ ಚುನಾವಣೆಯ ದಿಕ್ಸೂಚಿ ಎಂದೇ ಬುದ್ಧಿಜೀವಿಗಳು ಷರಾ ಬರೆದುಬಿಡುತ್ತಾರೆ. ಆ ಚುನಾವಣೆಗಳಿಗೂ ಮುನ್ನ ಬಹುದೊಡ್ಡ ಸದ್ದು ಮಾಡಲೇಬೇಕಿದೆ. ಅದಕ್ಕೆ ಅವರೂ ಬಿಟ್ಟೂಬಿಡದ ಪ್ರಯತ್ನದಲ್ಲಿ ತಲ್ಲೀನರಾಗಿದ್ದಾರೆ. ಹಾಗಂತ ಭಾರತದ ಘನತೆ-ಗೌರವಗಳನ್ನು ಬಲಿಕೊಟ್ಟು ತಲೆತಗ್ಗಿಸಿ ನಿಂತು ಇಂತಹುದೊಂದು ಗೆಲುವು ಸಾಧಿಸುವ ಅಗತ್ಯ ಅವರಿಗಿಲ್ಲ. ಚೀನಾ ತನ್ನ ಧನಬಲ ಮತ್ತು ಮಾನವ ಸಂಪನ್ಮೂಲದ ಮೇಲಿರುವಂತಹ ಅಧಿಕಾರ ಬಲದಿಂದಲೇ ಜಗತ್ತನ್ನು ಗೆಲ್ಲುತ್ತಿದೆ. ನಮ್ಮಲ್ಲಿನ್ನೂ ಹಾಗಿಲ್ಲ. ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗಲೂ ಸಾಕ್ಷಿ ಕೇಳುವ ಕೇಜ್ರಿವಾಲ್ ಇದ್ದಾರೆ. ಭಾರತದ ಸೈನಿಕರಿಗಿಂತ ಭಯೋತ್ಪಾದಕರು ವಾಸಿ ಎನ್ನುವ ಗುಲಾಂ ನಬಿ ಆಜಾದ್​ರಂತಹ ಕಾಂಗ್ರೆಸ್ ನಾಯಕರಿದ್ದಾರೆ. ನಮ್ಮ ಅವಿಭಾಜ್ಯ ಅಂಗವಾದ ಕಾಶ್ಮೀರವನ್ನು ಸ್ವತಂತ್ರವಾಗಿಸಬೇಕೆಂದು ಹೇಳುವ ಸೈಫುದ್ದೀನ್ ಸೋಜ್​ರಂತಹ ನಾಯಕರಿದ್ದಾರೆ. ಮುಸಲ್ಮಾನರ ವೋಟು ಪಡೆಯಲೆಂದು ‘ಹಿಂದೂ ಭಯೋತ್ಪಾದನೆ’ ಎಂಬ ಇಲ್ಲದ ಕಲ್ಪನೆಯೊಂದನ್ನು ಸೃಷ್ಟಿಮಾಡಿ ದೇಶದ ಭದ್ರತೆಗೆ ಭಂಗ ತರುವ ಪಕ್ಷ ಇದೆ. ಇವೆಲ್ಲದರ ನಡುವೆ ಭಾರತವನ್ನು ಉಳಿಸಿಕೊಳ್ಳಲು ಆತ್ಮಗೌರವವನ್ನು ಕಾಪಾಡಿಕೊಳ್ಳಲು ಬಲುವಾಗಿ ಹೆಣಗಾಡಬೇಕಿದೆ. ಇದೊಂದು ಬಗೆಯಲ್ಲಿ ಟೈಟ್ ರೋಪ್​ವಾಕ್. 2019ರಲ್ಲೂ ಮೋದಿ ಬಹುಮತದೊಂದಿಗೆ ಗೆದ್ದರೆಂದರೆ ಇನ್ನು ಮುಂದೆ ಬ್ರಿಟನ್ ನಮ್ಮೊಂದಿಗೆ ಈ ಧಾಟಿಯಲ್ಲಿ ಮಾತನಾಡಲಾರದು. ಹೀಗಾಗಿ ಜವಾಬ್ದಾರಿ ಮೋದಿಯವರ ಮೇಲಲ್ಲ, ನಮ್ಮ ಹೆಗಲ ಮೇಲೇ ಹೆಚ್ಚಿದೆ.

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

Leave a Reply

Your email address will not be published. Required fields are marked *

Back To Top