ವಿಧಾನಸಭೆಯಂತೆ ಲೋಕಸಭೆಯನ್ನು ಅತಂತ್ರ ಮಾಡಬಾರದಷ್ಟೇ!

| ಚಕ್ರವರ್ತಿ ಸೂಲಿಬೆಲೆ

ಕರ್ನಾಟಕದಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದಿರುವುದರಿಂದ ಎಷ್ಟೊಂದು ಸಂಕಷ್ಟಗಳು ಎದುರಾಗಿವೆ ನೋಡಿ. 70 ವರ್ಷಗಳ ಜಡತ್ವ ಕಳೆದುಕೊಂಡು ಭಾರತ ಈಗಷ್ಟೇ ಅಭಿವೃದ್ಧಿಯ ಬೆಳಕು ಕಾಣುತ್ತಿದೆ. ಈ ಅಭಿವೃದ್ಧಿ ಯಾತ್ರೆ ಮುಂದುವರಿಯಬೇಕಾದರೆ 2019ರಲ್ಲಿ ಅತಂತ್ರ ಲೋಕಸಭೆ ಸೃಷ್ಟಿಯಾಗಬಾರದು ಎಂಬ ಎಚ್ಚರಿಕೆ ಮತದಾರ ವಹಿಸಬೇಕಿದೆ.

ಚುನಾವಣೆಯ ಫಲಿತಾಂಶ ಅತಂತ್ರವಾದಾಗಲೆಲ್ಲ ಪರಿಸ್ಥಿತಿಗಳು ಬಿಗಡಾಯಿಸುವುದು ಖಾತ್ರಿಯೇ. ನಿಮಗೆ ನೆನಪಿರಬೇಕು. ಅಟಲ್ ಬಿಹಾರಿ ವಾಜಪೇಯಿಯವರು ಮೊದಲನೇ ಬಾರಿ ಪ್ರಧಾನಿಯಾದಾಗ ಭಾಜಪಕ್ಕೆ ಪೂರ್ಣ ಬಹುಮತವಿರಲಿಲ್ಲ. 13 ದಿನಗಳ ಕಾಲ ಸಮಾನಮನಸ್ಕರು ಜೊತೆಗೆ ಬರುವಿರಾ ಎಂದು ಕೇಳಿದ್ದಷ್ಟೇ ಬಂತು. ಕೊನೆಗೂ ಒತ್ತಡಕ್ಕೆ ಮಣಿದು ಅಟಲ್ ಬಿಹಾರಿ ವಾಜಪೇಯಿ ರಾಜೀನಾಮೆ ಕೊಡಬೇಕಾಯ್ತು. ಕಾಂಗ್ರೆಸ್ಸು ಯಾರೊಡನೆ ಬೇಕಿದ್ದರೂ ಮೈತ್ರಿ ಮಾಡಿಕೊಳ್ಳುತ್ತದೆ. ಆದರೆ ಬಿಜೆಪಿಯೊಂದಿಗಲ್ಲ. ಅದಕ್ಕೆ ಹೆದರಿಕೆ ಇರುವುದು ಬಿಜೆಪಿಯದ್ದಲ್ಲ. ಬದಲಿಗೆ ಅದನ್ನು ಹಿಂದಿನಿಂದ ನಿಯಂತ್ರಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘದ್ದು.

ತುರ್ತು ಪರಿಸ್ಥಿತಿ ಹೇರುವುದಕ್ಕೂ ಮುನ್ನ ತಾನು ಜಯಭೇರಿ ಬಾರಿಸುವುದಾಗಿ ಆಂತರಿಕ ಸಮೀಕ್ಷೆಯ ವರದಿ ಪಡೆದುಕೊಂಡಿದ್ದ ಇಂದಿರಾ ತುರ್ತು ಪರಿಸ್ಥಿತಿ ಹೇರಿದ ನಂತರ ಸಂಘದ ಸ್ವಯಂಸೇವಕರು ಈ ಕುರಿತಂತೆ ಮಾಡಿದ ವ್ಯಾಪಕ ಪ್ರಚಾರದಿಂದಾಗಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವುದು ಕಷ್ಟವೆಂದು ವರದಿ ಬಂತು. ಗಾಬರಿಗೊಂಡ ಇಂದಿರಾ ಏಕನಾಥ ರಾನಡೆಯವರ ಮೂಲಕ ಮೋರೇಶ್ವರ್ ನೀಲಕಾಂತ್ ಪಿಂಗಳೆಯವರಿಗೆ ಮತ್ತು ಅವರ ಮೂಲಕ ಜೈಲಿನಲ್ಲಿದ್ದ ಸಂಘ ಪ್ರಮುಖರಾದ ಬಾಳಾಸಾಹೇಬ್ ದೇವರಸರಿಗೆ ಕಾಂಗ್ರೆಸ್ಸಿಗೆ ಸಹಕಾರ ನೀಡುವಂತೆ ಕೇಳಿಕೊಂಡಿದ್ದರಂತೆ. ಆ ಕೋರಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಿದ ಬಾಳಾಸಾಹೇಬ್​ಜೀ ದುಃಖದ ಸಮಯದಲ್ಲಿ ಸಿಕ್ಕ ಗೆಳೆಯರನ್ನು ಕಳೆದುಕೊಳ್ಳಲಿಚ್ಛಿಸುವುದಿಲ್ಲ ಎಂದರಂತೆ. ಚುನಾವಣೆಯ ನಂತರವೇ ಸಂಘ ಮಾತನಾಡುತ್ತದೆ ಎಂಬ ಸ್ಪಷ್ಟ ಸಂದೇಶವನ್ನೂ ಇಂದಿರಾಗೆ ತಲುಪಿಸಿದ್ದರಂತೆ. ಸುರ್ಜಿತ್ ದಾಸ್ ಗುಪ್ತ ‘ಸ್ವರಾಜ್ಯ’ಕ್ಕೆ ಬರೆದ ಲೇಖನವೊಂದರಲ್ಲಿ ಇದನ್ನು ಬಲು ವಿಸ್ತಾರವಾಗಿ ವಿವರಿಸಿದ್ದಾರೆ. ಅಂದಿನಿಂದಲೂ ಸಂಘ ಕಠೋರವೇ.

ಕಾಂಗ್ರೆಸ್ಸಿಗಿರುವ ಭಯವೂ ಅದೇ. ಒಬ್ಬರ ಜೇಬಲ್ಲಿ ಮತ್ತೊಬ್ಬರು ಕೈ ಹಾಕಿಕೊಂಡು ಹಾಯಾಗಿ ಕೂತು ತಿನ್ನಲು ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರ ಅನುಕೂಲವಾಗದೆಂದರಿತ ಸೋನಿಯಾ ಭಾಜಪವನ್ನು ಧಿಕ್ಕರಿಸಿ ದೇವೇಗೌಡರಿಗೆ ಬೆಂಬಲ ನೀಡಿದರು. ಅವರ ಕಾಲನ್ನೆಳೆದು ಇಂದ್ರಕುಮಾರ್ ಗುಜ್ರಾಲ್​ರನ್ನು ಕೂರಿಸಲಾಯ್ತು. ಆ ಸರ್ಕಾರವೂ ಬಹಳ ಕಾಲ ಉಳಿಯಲಿಲ್ಲ.

ಅಧಿಕಾರ ತಾನು ಮಾಡಲಿಲ್ಲವೆಂದರೆ ಇತರರ್ಯಾರಿಗೂ ಅದನ್ನು ಪೂರ್ಣಾವಧಿ ಮಾಡಲು ಸಾಧ್ಯವಿಲ್ಲ; ಪೂರ್ಣ ಅಧಿಕಾರ ನಡೆಸುವ ಯೋಗ್ಯತೆ ತನಗೆ ಮಾತ್ರ ಎಂದು ಬಿಂಬಿಸುವ ಪ್ರಯತ್ನವನ್ನು ಕಾಂಗ್ರೆಸ್ಸು ಯಾವಾಗಲು ಮಾಡಿದೆ. ಪೂರ್ಣಾವಧಿಗೆ ಬೆಂಬಲ ಕೊಟ್ಟು ಸಮ್ಮಿಶ್ರ ಸರ್ಕಾರವನ್ನು ನಡೆಯುವಂತೆ ಮಾಡಿದ ಉದಾಹರಣೆ ನನಗೆ ತಿಳಿದಂತೆ ಯಾವುದೂ ಇಲ್ಲ. ಹೀಗಾಗಿಯೇ ಅಭಿವೃದ್ಧಿಯಾಗದೆ ಹೋದರೂ ಸರಿ ಪದೇಪದೇ ಸರ್ಕಾರ ಬೀಳುವ ಕಿರಿಕಿರಿ ಬೇಡವೆಂದೇ ಜನ ಕಾಂಗ್ರೆಸ್ಸಿಗೆ ವೋಟು ಹಾಕಲೆಂಬುದು ಅದರ ಅಭಿಮತ ಇರಬಹುದು. ಅಂಥಹದ್ದೇ ಸ್ಥಿತಿಯಲ್ಲಿ ಈಗ ಕರ್ನಾಟಕವಿದೆ. ಕರ್ನಾಟಕದಲ್ಲಿ ಈ ಚುನಾವಣೆಯಲ್ಲಿ ಸಿಕ್ಕ ಅತಂತ್ರ ನಿರ್ಣಯದಿಂದಾಗಿ ಬಿಜೆಪಿಯಂತೂ ಸೋತಿದೆ; ಕಾಂಗ್ರೆಸ್ಸೂ ಸೋತಿದೆ, ಅತ್ತ ಜೆಡಿಎಸ್ ಇನ್ನೆಂದೂ ಗೆಲ್ಲಲಾಗದಂಥ ಸ್ಥಿತಿ ತಲುಪಿದೆ. ಇವುಗಳಿಂದಾಗಿ ರಾಜ್ಯವೇ ವಿಕಟ ಪರಿಸ್ಥಿತಿಯ ಮೂಲಕ ಹಾದುಹೋಗುತ್ತಿದೆ.

ಸಾಲು-ಸಾಲು ಸೋಲು: ಬಿಜೆಪಿಯ ಸೋಲು ಕಣ್ಣಿಗೆ ರಾಚುವಂತಿದೆ. ಚುನಾವಣೆಯ ಫಲಿತಾಂಶದ ದಿನ ‘119 ಸೀಟುಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ’ ಎಂಬ ಮಾಹಿತಿ ದೊರೆತಾಗ ಎಲ್ಲ ಚಾನೆಲ್ಲುಗಳಲ್ಲೂ ಗೆಲುವಿನ ನಗೆ ಬೀರಿ ಮೊದಲು ಮಾತನಾಡಿದ್ದೇ ಶೋಭಾ ಕರಂದ್ಲಾಜೆ ಅವರು. ಫಲಿತಾಂಶ ವಿರುದ್ಧವಾಗುತ್ತಿದ್ದಂತೆ ಒಬ್ಬೊಬ್ಬರಾಗಿ ನೇಪಥ್ಯಕ್ಕೆ ಸರಿದರು. ಸರ್ಕಾರ ರಚಿಸುವ ಸಾಹಸಕ್ಕೆ ಕೈ ಹಾಕಿ ಅಟಲ್ ಬಿಹಾರಿ ವಾಜಪೇಯಿಯವರಂತೆ ಭಾವನಾತ್ಮಕವಾಗಿ ಮಾತನಾಡಿ ಯಡಿಯೂರಪ್ಪ ರಾಜೀನಾಮೆ ಕೊಟ್ಟ ನಂತರ ಒಂದಷ್ಟು ದಿನಗಳ ಕಾಲ ಸರ್ಕಾರ ನಡೆಸುವ ಕಸರತ್ತು ನಡೆದೇ ಇತ್ತು. ಹೈಕಮಾಂಡ್​ನಿಂದ ಆದೇಶ ಬಂದೊಡನೆ ತಣ್ಣಗಾದವರೆಲ್ಲ ಮುಂದೇನೂ ದಾರಿ ಕಾಣದೇ ಶಾಂತರಾದರು. ಈ ನಡುವೆಯೇ ರಾಜರಾಜೇಶ್ವರಿ ನಗರದ ಅಬ್ಬರದ ಚುನಾವಣೆಯಲ್ಲಿ ಭಾಜಪಕ್ಕೆ ಹೀನಾಯ ಸೋಲಾಯ್ತು. ನಡುರಾತ್ರಿ ಕಾಂಗ್ರೆಸ್ ಅಭ್ಯರ್ಥಿಯ ಕೋಟೆಯನ್ನು ಭೇದಿಸಿ ನಕಲಿ ಮತಪತ್ರ ತಯಾರಿಕೆಯ ರಹಸ್ಯ ಭೇದಿಸಿದ ಭಾಜಪ, ಕೇಂದ್ರ ನಾಯಕರೆಲ್ಲ ಇದಕ್ಕೆ ಪ್ರತಿಕ್ರಿಯಿಸುವಂತೆ ಮಾಡಿತ್ತು. ಜಿದ್ದಿನ ಹೋರಾಟ ನಡೆಯಬಹುದೆಂದು ಭಾವಿಸಿದರೆ ಫಲಿತಾಂಶ ಬಂದಾಗ ಅಕ್ಷರಶಃ ಅಚ್ಚರಿಯೇ. ಭಾಜಪ ಅಷ್ಟು ಅಂತ್ಯದಲ್ಲಿ ಸೋಲಬಹುದೆಂಬ ನಿರೀಕ್ಷೆ ಖಂಡಿತ ಯಾರಿಗೂ ಇರಲಿಲ್ಲ. ಆ ಕ್ಷೇತ್ರವನ್ನು ಉಳಿಸಿಕೊಳ್ಳಬೇಕೆಂಬ ಆಸಕ್ತಿಯೇ ಇತರ ನಾಯಕರಿಗೆ ಇದ್ದಂತಿರಲಿಲ್ಲ. ಬೆಂಗಳೂರಿನಲ್ಲಿ ಭಾಜಪದ ಹೀನಾಯ ಸ್ಥಿತಿಗೆ ಇದು ಕೈಗನ್ನಡಿ.

ನೆನಪಿಡಿ. ಲೋಕಸಭಾ ಚುನಾವಣೆ ನಡೆದಾಗ ಇಲ್ಲೆಲ್ಲ ಬಿಜೆಪಿ ಗೆದ್ದೇ ಗೆಲ್ಲುತ್ತದೆ. ವಿಧಾನಸಭೆಯಲ್ಲಿ ಸೀಟುಗಳನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಡುತ್ತದೆ. ಕರ್ನಾಟಕದ ಅನೇಕ ರಾಷ್ಟ್ರೀಯ ನಾಯಕರುಗಳ ಬಲು ಸುಂದರವಾದ ಆಟವಿದು. ಜಯನಗರದ ಚುನಾವಣೆಯಲ್ಲಾದರೂ ಗೆಲ್ಲಬಹುದೆಂಬ ವಿಶ್ವಾಸವಿತ್ತು ರಾಜ್ಯದ ಜನತೆಗೆ. ವಿಜಯ್ಕುಮಾರರ ಅನುಕಂಪದ ಅಲೆಯನ್ನು ಮತವಾಗಿ ಪರಿವರ್ತಿಸಲೆಂದೇ ಅವರ ಸೋದರರನ್ನೇ ಕಣಕ್ಕಿಳಿಸಿತ್ತು ಭಾಜಪ. ಒಳಜಗಳಗಳನ್ನು ಹತ್ತಿಕ್ಕಲಾಗದೆ ನೋವುಂಡಿದ್ದ ಪಕ್ಷವನ್ನು ಮುಸಲ್ಮಾನ ಸಮಾಜ ಏಕವಾಗಿ ನಿಂತು ವೋಟ್ ಮಾಡುವ ಮೂಲಕ ಮಣಿಸಿಯೇಬಿಟ್ಟಿತು. ಗೆಲುವಿನ ಅಂತರ ಬಹಳ ದೊಡ್ಡದ್ದೇನಾಗಿರಲಿಲ್ಲ. ಆದರೆ ಕ್ಷೇತ್ರ ಕಳೆದುಕೊಂಡಿದ್ದಂತು ಸತ್ಯ. ಭಾಜಪ ತನ್ನ ಭದ್ರಕೋಟೆಯಲ್ಲೇ ಹೀಗೆ ಮಣಿದದ್ದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ.

ಕಾಂಗ್ರೆಸ್ಸಿನ ಸ್ಥಿತಿ: ಹಾಂಗತ ಕಾಂಗ್ರೆಸ್ಸೇನು ಗೆದ್ದಿತೆಂದು ಭಾವಿಸಬೇಡಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗತ್ತು-ಗೈರತ್ತುಗಳೆಲ್ಲ ಈಗ ಉಳಿದಿಲ್ಲ. ಪೇಟ ತೊಡಿಸಲು ಬಂದ ಕಾರ್ಯಕರ್ತನಿಗೆ ‘ರಾಜ್ಯದ ಜನತೆಯೇ ಟೋಪಿ ಹಾಕಿದರು’ ಎಂದು ಇತ್ತೀಚೆಗೆ ಹೇಳಿದ್ದು ವೈರಲ್ ಆಗಿತ್ತಲ್ಲ; ಆಗ ಅವರ ಮುಖದಲ್ಲಿನ ಭಾವನೆ ಎಂಥವನಿಗೂ ಅರ್ಥವಾಗುವಂತಿತ್ತು. ಕಾಂಗ್ರೆಸ್ಸಿನ ಆಂತರಿಕ ಬೇಗುದಿಯ ಸೂತ್ರಧಾರ ಅವರೇ. ಅಧಿಕಾರವನ್ನು ಕುಮಾರಸ್ವಾಮಿಯವರಿಗೆ ಬಿಟ್ಟುಕೊಡುವಲ್ಲಿ ಚಾಣಾಕ್ಷತೆ ಮೆರೆದಿದ್ದ ಸಿದ್ದರಾಮಯ್ಯ ತಮ್ಮದೇ ಪಕ್ಷದ ಹಿರಿಯರ ಅವಕೃಪೆಗೆ ತುತ್ತಾಗಿದ್ದರು. ಮಂತ್ರಿ ಪದವಿಯನ್ನು ಹಂಚುವಾಗ, ಸರ್ಕಾರದ ಭವಿಷ್ಯದ ಕುರಿತಂತೆ ಚಿಂತಿಸುವಾಗ, ಅವರಿಗೆ ವಿಶೇಷ ಸ್ಥಾನವಂತೂ ಇರಲಿಲ್ಲ. ಕೊನೆಗೆ ಮಂತ್ರಿಗಿರಿಗಾಗಿ ಸಿದ್ದರಾಮಯ್ಯನವರ ಆಪ್ತರೇ ಭಿನ್ನ ಭಿನ್ನ ಸ್ವರೂಪಗಳಲ್ಲಿ ರಚ್ಚೆ ಹಿಡಿದಾಗ ಸಮಾಧಾನ ಪಡಿಸಲು ಹೈಕಮಾಂಡ್ ಅವರನ್ನೇ ವಿನಂತಿಸಿಕೊಂಡಿತ್ತು. ಚಾಣಾಕ್ಷ ನಡೆಯಿಟ್ಟ ಸಿದ್ದರಾಮಯ್ಯ ಧರ್ಮಸ್ಥಳದ ಉಜಿರೆಗೆ ಚಿಕಿತ್ಸೆಗಾಗಿ ಹೋಗುತ್ತೇನೆಂದು ಬೇಗುದಿಯ ಬೆಂಕಿ ಶಮನವಾಗದಿರುವಂತೆ ನೋಡಿಕೊಂಡರು. ಅವರೆದುರಿಗೆ ಕಾಂಗ್ರೆಸ್ಸಿನ ಹೈಕಮಾಂಡು ಸೋತು ಸುಣ್ಣವಾಗಿ ಹೋಗಿದೆ. ಅದೀಗ ಹಲ್ಲು ಕಿತ್ತ ಹಾವು. ಇಲ್ಲಿನ ಕಾಂಗ್ರೆಸ್ಸಿನಲ್ಲೂ ಯಾರು ಯಾರನ್ನೂ ನಂಬದಂಥ ಪರಿಸ್ಥಿತಿಯಿದೆ. ಪ್ರತಿಯೊಬ್ಬರೂ ಮತ್ತೊಬ್ಬರ ಅವಕಾಶವನ್ನು ತಪ್ಪಿಸಿ ತಾವೇ ಅದನ್ನು ಕಿತ್ತುಕೊಳ್ಳುವ ಧಾವಂತದಲ್ಲಿದ್ದಾರೆ. ಈ ಚುನಾವಣೆಯ ಫಲಿತಾಂಶ ಕಾಂಗ್ರೆಸ್ಸನ್ನು ಸೋಲಿಸಿರುವುದು ಹೀಗೆ.

ಜೆಡಿಎಸ್ ಕೂಡ ಗೆದ್ದಿಲ್ಲ: ಜೆಡಿಎಸ್​ನ ಕಥೆ ಭಿನ್ನವೇನಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವಾಗ ಇದ್ದ ಉತ್ಸಾಹ ಜೆಡಿಎಸ್​ನ ಕಾರ್ಯಕರ್ತರಿಗೆ ಬಿಡಿ ಶಾಸಕರಿಗೇ ಈಗ ಉಳಿದಿಲ್ಲ. ಗೆದ್ದು ಬಂದ ಮುವತ್ತೆಂಟೂ ಜನ ಮಂತ್ರಿಯಾಗಿಬಿಡಬೇಕೆಂಬ ತವಕದಲ್ಲಿದ್ದಾರೆ. ಕುಮಾರಸ್ವಾಮಿಯಂತೂ ಪ್ರಣಾಳಿಕೆಗಳಲ್ಲಿ ಕೊಟ್ಟ ಮಾತನ್ನು ಈಡೇರಿಸಲಾಗದೆ ಚಡಪಡಿಸುತ್ತಿದ್ದಾರೆ. ಅವರು ಬೇರೆಲ್ಲ ಕೆಲಸ ಮಾಡುವುದಿರಲಿ ಬಜೆಟ್ ಮಂಡಿಸುವ ಮುನ್ನವೂ ಸಿದ್ದರಾಮಯ್ಯನವರ ಅನುಮತಿ ಪಡೆಯಬೇಕಾದ ದೈನೇಸಿ ಸ್ಥಿತಿ ತಲುಪಿದ್ದಾರೆ. ಸಿದ್ದರಾಮಯ್ಯನವರ ಯೋಜನೆಗಳನ್ನು ಉಳಿಸಿಕೊಂಡೇ ತಾವೊಂದಷ್ಟು ಹೊಸ ಜನಪ್ರಿಯ ಯೋಜನೆಗಳನ್ನು ಘೊಷಿಸಬೇಕಾದ ಅನಿವಾರ್ಯತೆ ಈಗ ಅವರಿಗಿದೆ. ಮೊದಲೇ ಆರ್ಥಿಕ ಹೊರೆಯಿಂದ ಬಳಲುತ್ತಿರುವ ರಾಜ್ಯಕ್ಕೆ ಇನ್ನಷ್ಟು ಹೊರೆಹಾಕುವ ಪರಿಸ್ಥಿತಿ ಖಂಡಿತವಾಗಿಯೂ ಇಲ್ಲ. ಹಾಗೆ ಮಾಡದಿದ್ದರೆ ಒಂದು ವರ್ಷದ ನಂತರ ಲೋಕಸಭಾ ಚುನಾವಣೆಗೆ ಹೋಗುವಾಗ ಇತರೆ ಕ್ಷೇತ್ರಗಳನ್ನು ಬಿಡಿ ತನ್ನ ಪ್ರಾಬಲ್ಯವಿರುವ ಹಳೆ ಮೈಸೂರಿನಲ್ಲಿಯೂ ಕೂಡ ಜೆಡಿಎಸ್ ತಿಣುಕಾಡಬೇಕಾದ ಪರಿಸ್ಥಿತಿ ನಿರ್ವಣವಾಗುತ್ತದೆ. ದೊಡ್ಡಗೌಡರು ಸುಮ್ಮನಿರಲಾರರೆಂಬ ಭರವಸೆ ಜೆಡಿಎಸ್​ನವರಿಗೆ ಇದ್ದರೂ ಅವರ ಪಟ್ಟುಗಳನ್ನು ಚೆನ್ನಾಗಿಯೇ ಅರಿತಿರುವ ಸಿದ್ದರಾಮಯ್ಯ ಎಲ್ಲಕ್ಕೂ ಪ್ರತಿ ಪಟ್ಟುಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದರೆ ಜೆಡಿಎಸ್​ಗೆ ಸಂಕಟ ಖಾತ್ರಿ. ಹೀಗಾಗಿ ಈ ಕದನದಲ್ಲಿ ಜೆಡಿಎಸ್ ಕೂಡ ಗೆದ್ದಿಲ್ಲ.

ಕರ್ನಾಟಕಕ್ಕೆ ಸಂಕಟ: ಇವೆಲ್ಲದರ ಕಿತ್ತಾಟದಲ್ಲಿ ಕರ್ನಾಟಕವಾದರೂ ಗೆದ್ದಿತಾ ಎಂದು ಕೇಳಿದರೆ ಅದನ್ನೂ ಇಲ್ಲವೆಂದೇ ಹೇಳಬೇಕು. ಕಳೆದ 5 ವರ್ಷಗಳ ಕಾಲ ಸಿದ್ದರಾಮಯ್ಯನವರ ಆಡಳಿತ ಸ್ಥಿರವಾಗಿತ್ತು ಎನ್ನವುದನ್ನು ಬಿಟ್ಟರೆ ಅದು ಕರ್ನಾಟಕಕ್ಕೆ ಗಳಿಸಿಕೊಟ್ಟಿದ್ದು ಅತ್ಯಲ್ಪ. ಈಗಾಗಲೇ ಸಾಲದ ಹೊರೆ ಹೊತ್ತಿರುವ ರಾಜ್ಯ ರೈತರ ಸಾಲಮನ್ನಾ ಅಲ್ಲದೆ ಇನ್ನೊಂದಿಷ್ಟು ಜನಪ್ರಿಯ ಘೊಷಣೆಗಳ ಭಾರಕ್ಕೆ ನಲುಗಿ ಕುಸಿದೇ ಹೋಗುತ್ತದೆ. ಮುಂದಿನ 5 ವರ್ಷಗಳ ಕಾಲ ತಮ್ಮ ತಮ್ಮ ಅಧಿಕಾರವನ್ನು ಭದ್ರವಾಗಿ ಹಿಡಿದುಕೊಳ್ಳುವಲ್ಲೇ ಹೆಣಗಾಡುವ ಮಂತ್ರಿ, ಮುಖ್ಯಮಂತ್ರಿಗಳು ಸಮರ್ಥವಾದ ರಾಜ್ಯ ರೂಪಿಸುವಲ್ಲಿ ಆಸ್ಥೆ ತೋರಬಲ್ಲರೆಂದು ನಂಬುವುದೇ ಅಸಾಧ್ಯದ ಸಂಗತಿ.

ದೇಶಕ್ಕೆ ಮಾದರಿಯಾಗಬೇಕಾದ ಕರ್ನಾಟಕ ರಾಜ್ಯ, ಜನತೆ ಮಾಡಿದ ಸಣ್ಣ ತಪ್ಪಿನಿಂದಾಗಿ ಇಂದು ಘೊರ ಸಂಕಟದ ಎದುರಿಗೆ ಬಂದು ನಿಂತಿದೆ. ನನಗಿರುವ ಆತಂಕ ಒಂದೇ. ಸ್ವಲ್ಪ ಯಡವಟ್ಟು ಮಾಡಿಕೊಂಡು 2019 ರಲ್ಲೂ ಹೀಗೇ ಮಾಡಿಬಿಡುತ್ತೇವಾ ಅಂತ. ಭಾರತ ಅದಾಗಲೇ ಪ್ರಗತಿಯ ರಾಜಮಾರ್ಗದಲ್ಲಿ ವೇಗವಾಗಿ ಓಡುತ್ತಿದೆ. 70 ವರ್ಷಗಳ ಸುದೀರ್ಘ ನಿದ್ದೆಯನ್ನು ಕೊಡವಿಕೊಂಡು ಮೇಲೆದ್ದಿರುವ ಭಾರತ ಈಗ ಅಸಲಿ ಬೆಳಕನ್ನು ನೋಡುತ್ತಿದೆ. ಜನಪ್ರಿಯ ಘೊಷಣೆಗಳನ್ನು ಕೇಳುತ್ತ ಮೈಮರೆತಿದ್ದ ಈ ದೇಶಕ್ಕೆ ಕಠಿಣ ನಿರ್ಣಯಗಳನ್ನು ತೆಗೆದುಕೊಂಡು, ಪ್ರತಿಯೊಬ್ಬರೂ ರಾಷ್ಟ್ರನಿಷ್ಠೆಯಿಂದ ಬದುಕುವ ಅನಿವಾರ್ಯತೆ ನಿರ್ವಿುಸಿರುವ ನಾಯಕ ಬಂದಿದ್ದಾನೆ.

ಅಭಿವೃದ್ಧಿಯ ಬೆಳಕು: ಭಾರತವನ್ನು ಭಂಜಿಸುವ ಚಿಂತನೆಯನ್ನು ಹೊತ್ತು ಅನೇಕ ದಶಕಗಳಿಂದಲೂ ಬಿಳಿಯರ ಏಜೆಂಟುಗಳಾಗಿ ಕೆಲಸ ಮಾಡಿರುವ ದೇಶದ್ರೋಹಿಗಳಿಗೆ ಸರಿಯಾದ ಪಾಠ ಕಲಿಸುವ ನಾಯಕ ಆತ. ಎಲ್ಲಕ್ಕೂ ಮಿಗಿಲಾಗಿ ದೇಶದ ಅಭಿವೃದ್ಧಿಯ ಬಗ್ಗೆ ಪ್ರಶ್ನಾರ್ಥಕವಾಗಿದ್ದ ತರುಣರು ಈಗ ಹೊಸ-ಹೊಸ ಆವಿಷ್ಕಾರಗಳ ಮೂಲಕ ತಾವೇ ಉತ್ತರ ನೀಡುವ ಹಂತಕ್ಕೆ ಬಂದು ನಿಂತಿದ್ದಾರೆ. ಸ್ಟಾರ್ಟ್​ಅಪ್​ಗಳ ದಿಕ್ಕಿನಲ್ಲಿ ಇಂದು ಭಾರತ ವೇಗವಾಗಿ ಓಡುತ್ತಿದೆ. ಹೊಸ ಉದ್ದಿಮೆಗಳ ಆರಂಭಕ್ಕೆ ತರುಣರು ಆಸಕ್ತಿ ತೋರುತ್ತಿದ್ದಾರೆ, ಬ್ಯಾಂಕುಗಳು ಸಾಲ ಕೊಡುತ್ತಿವೆ. ಜಾತಿ-ಮತ-ಪಂಥ, ಸ್ಪಶ್ಯಾಸ್ಪಶ್ಯತೆ, ಲಿಂಗಭೇದ ಇವುಗಳ ಕುರಿತಂತೆ ಆರೋಪ ಮಾಡಿಯೇ ಕಾಲ ಕಳೆದಿದ್ದ ಭಾರತ ಎಲ್ಲರಿಗೂ ಸಮಾನ ಅವಕಾಶ ಕೊಡಿಸುವಲ್ಲಿ ಬಲವಾದ ಹೆಜ್ಜೆಯನ್ನಿಟ್ಟಿದೆ. ಮತಬ್ಯಾಂಕುಗಳ ರಾಜಕಾರಣದಿಂದ ಆಚೆ ಬಂದು 70 ವರ್ಷಗಳ ನಂತರ ಭಾರತ ವಿಕಾಸದ ಪಥದ ಕುರಿತಂತೆ ಮಾತನಾಡಲಾರಂಭಿಸಿದೆ. ರೈಲು ಸರಿಯಾದ ಸಮಯಕ್ಕೆ ಬಂದರೆ ಸಾಕು ಎಂದು ವಾಚು ಹಿಡಿದು ಕುಳಿತಿದ್ದ ಭಾರತೀಯ ಇಂದು ಹೈಪರ್​ಲೂಪ್ ತಂತ್ರಜ್ಞಾನದ ಕುರಿತಂತೆ ಆಲೋಚಿಸಲು ಆರಂಭಿಸಿದ್ದಾನೆ. ಖ್ಯಾತ ಉದ್ಯಮಿಗಳು ಕಾರ್ಬನ್ ಫೈಬರ್​ಗಳನ್ನು ನಿರ್ಮಾಣ ಮಾಡುವ ಹೊಸ ತಂತ್ರಜ್ಞಾನಗಳನ್ನು ತಂದು ಭಾರತವನ್ನು ಜಾಗತಿಕ ಪರಿಪ್ರೇಕ್ಷ್ಯದಲ್ಲಿ ಮುಂದುವರಿದ ರಾಷ್ಟ್ರಗಳೊಂದಿಗೆ ಸಮಸಮಕ್ಕೆ ನಿಲ್ಲಿಸುತ್ತಿದ್ದಾರೆ. ಕೆಲಸವಿಲ್ಲದೆ ಸಾಮಾಜಿಕ ಸುರಕ್ಷತೆಗಾಗಿ ಕೈಚಾಚಿ ಕುಳಿತಿದ್ದ ತರುಣ ಸ್ವಂತ ಉದ್ಯೋಗಕ್ಕೆ ಮುದ್ರಾ ಲೋನ್ ಎಷ್ಟು ಸಿಗುತ್ತದೆ ಎಂದು ಕೇಳುವ ಮಟ್ಟಕ್ಕೆ ಬಂದುಬಿಟ್ಟಿದ್ದಾನೆ. ಜನರೀಗ ದಡ್ಡರಲ್ಲ; ತಮಗೇನು ಬೇಕು ಎಂಬುದನ್ನು ನೇರವಾಗಿ ಕೇಳಬಲ್ಲ ಛಾತಿಯನ್ನು ಬೆಳೆಸಿಕೊಂಡಿದ್ದಾರಲ್ಲದೆ ಹೊಸದಿಕ್ಕಿನತ್ತ ನಡೆಯಬೇಕೆಂಬ ಮನಸ್ಥಿತಿಯನ್ನೂ ಹೊಂದಿದ್ದಾರೆ.

ಭಾರತ ಗೆಲ್ಲುತ್ತಿದೆ. ಈ ಗೆಲುವಿನ ಓಟ ನಿಂತುಬಿಟ್ಟರೆ ನಾವು ನೂರು ವರ್ಷವಾದರೂ ಹಿಂದಕ್ಕೆ ತಳ್ಳಲ್ಪಡುತ್ತೇವೆ. ಇನ್ನು ಕೆಲವರು ಮಾತ್ರ ಭಾರತ ಸೋತರೂ ಪರವಾಗಿಲ್ಲ ನಾವು ಗೆದ್ದರೆ ಸಾಕೆಂಬ ಸ್ವಾರ್ಥದ ಚಿಂತನೆಯಲ್ಲಿದ್ದಾರೆ. ಅವರುಗಳೇ ವೋಟ್​ಬ್ಯಾಂಕುಗಳಾಗಿ ಲೂಟಿಕೋರರೊಂದಿಗೆ ನಿಲ್ಲುವುದು. ನಾವು ಸ್ವಲ್ಪದರಲ್ಲೇ ಎಡವಿದೆವು. ಮನಸ್ಸು ಮಾಡಿದ್ದರೆ ಭಾರತ ಗೆದ್ದಂತೆ ಕರ್ನಾಟಕವನ್ನೂ ಗೆಲ್ಲಿಸಬಹುದಿತ್ತು. ಸಮರ್ಥವಾದ ಯಾವುದಾದರೂ ಒಂದೇ ಪಕ್ಷಕ್ಕೆ ಬಹುಮತವನ್ನು ಕೊಟ್ಟು ಸಮರ್ಥವಾದ ಸರ್ಕಾರವನ್ನು ಆರಿಸಿಬಿಟ್ಟಿದ್ದರೆ ಪ್ರಶ್ನೆ ಕೇಳುವ ನೈತಿಕ ಪ್ರಜ್ಞೆಯಾದರೂ ಉಳಿದಿರುತ್ತಿತ್ತು. ಈಗ ನೋಡಿ. ಯಾವ ಪಕ್ಷದ ಪ್ರಣಾಳಿಕೆಯ ಕುರಿತಂತೆಯೂ ನಾವು ಮಾತನಾಡುವಂತಿಲ್ಲ. ಹಿಂದಿನ ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆಳಿಯಿರೆಂದು ಹೊಸ ಸರ್ಕಾರವನ್ನು ಕೇಳುವಂತೆಯೂ ಇಲ್ಲ. ನಾವೀಗ ಅಕ್ಷರಶಃ ಬಂಧಿಗಳು. ಹೀಗೆ ಇನ್ನೆಷ್ಟು ದಿನ ಕಾಲ ಸವೆಸಬೇಕು ತಿಳಿಯದಷ್ಟೇ.

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

Leave a Reply

Your email address will not be published. Required fields are marked *