ಪೆಟ್ರೋಲು-ಡೀಸೆಲ್ಲು; ಬೆಲೆ ಇಳಿಯುತ್ತಿಲ್ಲ ಏಕೆ?

| ಚಕ್ರವರ್ತಿ ಸೂಲಿಬೆಲೆ

ತೈಲಬೆಲೆ ಏರಿಕೆ ಕುರಿತಂತೆ ವಿನಾಕಾರಣ ರಾಜಕಾರಣ ಮಾಡಲಾಗುತ್ತಿದೆ. ವಾಸ್ತವಗಳನ್ನು ಗಮನಿಸಿದರೆ ಪರಿಸ್ಥಿತಿ ಏನು ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಅಷ್ಟಕ್ಕೂ, ಕಳೆದ ನಾಲ್ಕು ವರ್ಷಗಳಲ್ಲಿ 20 ಬಾರಿ ಪೆಟ್ರೋಲ್ ಬೆಲೆ ಕಡಿಮೆಯಾಗಿದ್ದರೆ, 16 ಬಾರಿ ಡೀಸೆಲ್ ಬೆಲೆ ಕಡಿಮೆಯಾಗಿದೆ ಎಂಬುದನ್ನು ಗಮನಿಸಬೇಕು.

ತೈಲಬೆಲೆ ಏರುತ್ತಲೇ ಇದೆ. ಆದರೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಅಭಿವೃದ್ಧಿಯನ್ನು ಆಲೋಚಿಸುವ ಎಲ್ಲ ರಾಜಕೀಯ ಪಕ್ಷಗಳಿಗೂ ಭಿನ್ನವಾಗಿ ನರೇಂದ್ರ ಮೋದಿ ಜಪ್ಪಯ್ಯ ಎಂದರೂ ತೈಲ ಬೆಲೆ ಇಳಿಸುವುದಕ್ಕೆ ಮುಂದಾಗಲಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಆಗುವ ಬದಲಾವಣೆಗಳಿಗೆ ನಾವು ನಮ್ಮದೇ ಆದ ರೀತಿಯಲ್ಲಿ ಪರಿಹಾರ ಹುಡುಕಬೇಕೆಂಬುದು ಅವರ ಬಯಕೆಯಾಗಿರಬಹುದೇನೋ! ಉಚಿತ ಕೊಡುಗೆಗಳಲ್ಲೇ ಆನಂದ ಕಾಣುವ ಸರ್ಕಾರಕ್ಕೆ ತೆರಿಗೆ ಕಟ್ಟುವಾಗ ಅದರಿಂದ ತಪ್ಪಿಸಿಕೊಳ್ಳಲು ಇರಬರುವ ಬುದ್ಧಿಯನ್ನೆಲ್ಲ ಬಳಸುವ ನಮಗೆ ಈ ಚಿಂತನೆಗೆ ಹೊಂದಿಕೊಳ್ಳಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು.

ಭಾರತವಿಂದು ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಅಮೆರಿಕ ಸುಮಾರು 20 ಮಿಲಿಯನ್ ಬ್ಯಾರಲ್​ಗಳಷ್ಟು ತೈಲವನ್ನು ಪ್ರತಿನಿತ್ಯವೂ ಖಾಲಿ ಮಾಡಿದರೆ ಭಾರತ ನಾಲ್ಕೂವರೆ ಮಿಲಿಯನ್ ಬ್ಯಾರಲ್​ಗಳಷ್ಟು ತೈಲವನ್ನು ಪ್ರತಿದಿನವೂ ಜಾಗತಿಕ ಮಾರುಕಟ್ಟೆಯಿಂದ ಅಪೇಕ್ಷಿಸುತ್ತದೆ. ಒಂದು ಬ್ಯಾರಲ್ ಅಂದರೆ 159 ಲೀಟರ್. ಅಂದರೆ ಹೆಚ್ಚು-ಕಡಿಮೆ 72 ಕೋಟಿ ಲೀಟರ್​ಗಳಷ್ಟು ಕಚ್ಚಾತೈಲವನ್ನು ಪ್ರತಿದಿನವೂ ಭಾರತ ಬಸಿಯುತ್ತದೆ ಎಂದು. ಒಂದು ಲೀಟರ್ ಕಚ್ಚಾತೈಲಕ್ಕೆ ಒಂದು ರೂಪಾಯಿಯಷ್ಟು ಏರುಪೇರಾದರೂ ಪ್ರತಿನಿತ್ಯ ಭಾರತದ ಮೇಲಿನ ಹೊರೆ ಸುಮಾರು 72 ಕೋಟಿಯಷ್ಟು, ತಿಂಗಳಿಗೆ 2000 ಕೋಟಿ, ವರ್ಷಕ್ಕೆ ಹೆಚ್ಚು-ಕಡಿಮೆ 25,000 ಕೋಟಿ ರೂಪಾಯಿ. ಹಿಂದೆಲ್ಲ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾದಾಗಲೂ ಅದರ ಬಿಸಿ ನಮ್ಮವರಿಗೆ ತಟ್ಟದಂತೆ ಕೇಂದ್ರ ಸರ್ಕಾರವೇ ಬೆಲೆ ನಿಯಂತ್ರಣ ಮಾಡುತ್ತಿತ್ತು. ಅದರರ್ಥವೇನು ಗೊತ್ತೇ? ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಕಚ್ಚಾತೈಲವನ್ನು ಪಡೆದು ಅದನ್ನು ಭಾರತೀಯರಿಗೆ ಮಾರುವಾಗ ಸಬ್ಸಿಡಿ ಘೊಷಿಸುವುದು ಅಂತ. ಮೇಲ್ನೋಟಕ್ಕೆ ತೈಲದ ಬೆಲೆ ಕಡಿಮೆಯಂತೆ ಕಂಡರೂ ಅದರ ಹೆಚ್ಚುವರಿ ಹೊರೆಯನ್ನು ತೆರಿಗೆಯ ಹಣದಲ್ಲೇ ಪೂರೈಸಬೇಕಾಗುತ್ತಿತ್ತು. ಅಂದರೆ ತೆರಿಗೆ ಕಟ್ಟದೇ ಕಾರು-ಬೈಕುಗಳಲ್ಲಿ ತಿರುಗಾಡುವ ಕೋಟ್ಯಂತರ ಮಂದಿಯ ಆನಂದಕ್ಕಾಗಿ ನಿಯತ್ತಾಗಿ ತೆರಿಗೆ ಕಟ್ಟುವವರು ಬಲಿಯಾಗಬೇಕಿತ್ತು. ಭಾರತವು ವರ್ಷದ ಕೊನೆಯಲ್ಲಿ ವಿತ್ತೀಯ ಕೊರತೆಯನ್ನು ನೀಗಿಸಿಕೊಳ್ಳಲು ಅಭಿವೃದ್ಧಿಗಾಗಿ ಮೀಸಲಿಟ್ಟ ಹಣದಲ್ಲಿ ದೊಡ್ಡ ಮೊತ್ತವನ್ನು ತೆಗೆಯಬೇಕಾಗಿತ್ತು. ಕೆಲವೊಮ್ಮೆ ಇದು ಲಕ್ಷಾಂತರ ಕೋಟಿಗಳಷ್ಟು ಆಗಿರುತ್ತಿತ್ತೆಂಬುದು ಬೆಳೆದು ನಿಲ್ಲಬೇಕಿದ್ದ ಭಾರತಕ್ಕೆ ಆಘಾತಕಾರಿ ಸಂಗತಿಯೇ. ಹಾಗೆಂದೇ 2010ರಲ್ಲಿ ಸರ್ಕಾರ ಪೆಟ್ರೋಲ್ ಬೆಲೆಯ ಮೇಲೆ ತನ್ನ ಅಧಿಕಾರವನ್ನು ಕೈಬಿಟ್ಟುಬಿಟ್ಟಿತು.

ಹೀಗಿದೆ ಲೆಕ್ಕಾಚಾರ: ಅದರರ್ಥ ಜಾಗತಿಕ ಮಾರುಕಟ್ಟೆಗೆ ತಕ್ಕಂತೆ ಭಾರತದಲ್ಲಿ ಪೆಟ್ರೋಲ್ ಬೆಲೆ ವ್ಯತ್ಯಯವಾಗುತ್ತದೆ ಮತ್ತು ಅದನ್ನು ತೈಲ ಕಂಪನಿಗಳೇ ನಿರ್ಧರಿಸುತ್ತವೆ. 2014ರಲ್ಲಿ ಡೀಸೆಲ್ ಅನ್ನು ಇದರ ವ್ಯಾಪ್ತಿಗೆ ತರಲಾಯ್ತು. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ 2016ರಲ್ಲಿ ‘ಡೈನಮಿಕ್ ಪ್ರೈಸ್ ಚೇಂಜ್ ಮಾಡೆಲ್’ ಅನ್ನು ಜಾರಿಗೆ ತಂದು ಜಾಗತಿಕ ಮಾರುಕಟ್ಟೆಗೆ ಈ ಬೆಲೆಗಳು ಆಯಾ ಕ್ಷಣಕ್ಕೆ ಪ್ರತಿಕ್ರಿಯಿಸುವಂತೆ ವ್ಯವಸ್ಥೆ ರೂಪಿಸಲಾಯ್ತು. ಕಳೆದ 4 ವರ್ಷಗಳಲ್ಲಿ ತೈಲಬೆಲೆ ಜಾಗತಿಕ ಮಟ್ಟದಲ್ಲಿಯೇ ಅತೀವ ಕಡಿಮೆಯಾಗಿಬಿಟ್ಟಿದ್ದರಿಂದ ನರೇಂದ್ರ ಮೋದಿಯವರು ಹಬ್ಬವನ್ನೇ ಆಚರಿಸಿಬಿಟ್ಟಿದ್ದರು. ತೈಲಬೆಲೆಯನ್ನು ಜಾಗತಿಕ ಮಾರುಕಟ್ಟೆಗೆ ಪೂರಕವಾಗಿ ಪೂರ್ಣ ಕಡಿಮೆಗೈಯದೇ ಬೆಲೆ ಕಡಿಮೆಯಾಗಿರುವ ಲಾಭವನ್ನು ದೇಶದ ಅಭಿವೃದ್ಧಿಗೆ ಬಳಸುವ ಯೋಜನೆ ರೂಪಿಸಲಾಯ್ತು. ಅಬಕಾರಿ ಸುಂಕವನ್ನು ಸಾಕಷ್ಟು ಏರಿಸಲಾಯ್ತು. ರಾಜ್ಯ ಸರ್ಕಾರಗಳೇನೂ ಹಿಂದುಳಿಯಲಿಲ್ಲ. ಅವು ವ್ಯಾಟ್ ಅನ್ನು ಏರಿಸಿದವು. ಹೀಗಾಗಿ ಪ್ರತಿ ಬ್ಯಾರಲ್​ಗೆ 112 ರೂಪಾಯಿಯಷ್ಟಿದ್ದ ಕಚ್ಚಾತೈಲದ ಬೆಲೆ 30 ಡಾಲರ್​ಗೆ ಇಳಿದಾಗಲೂ ಭಾರತೀಯರಿಗೇನೂ ದರದಲ್ಲಿ ಭಾರಿ ದೊಡ್ಡ ಬದಲಾವಣೆ ಕಾಣಲಿಲ್ಲ. ಆದರೆ ಕಳೆದ ಒಂದೇ ವರ್ಷದಲ್ಲಿ ಅಬಕಾರಿ ಸುಂಕ 2013ರಲ್ಲಿ ಸಂಗ್ರಹವಾಗುತ್ತಿದ್ದಕ್ಕಿಂತ ಒಂದೂವರೆ ಪಟ್ಟು ಹೆಚ್ಚಾಗಿತ್ತು. ರಾಜ್ಯ ಸರ್ಕಾರಗಳೂ ತಮ್ಮ ಆದಾಯದಲ್ಲಿ ಅಷ್ಟೇ ಪ್ರಮಾಣದಲ್ಲಿ ಹೆಚ್ಚಳವನ್ನು ಕಂಡವು. ಅದರ ಪರಿಣಾಮವಾಗಿಯೇ ದೇಶದಾದ್ಯಂತ ಶ್ರೇಷ್ಠ ಮಟ್ಟದ ರಸ್ತೆಗಳು ನಿರ್ವಣಗೊಂಡವು. ಸ್ವಾತಂತ್ರ್ಯ ಬಂದ 70 ವರ್ಷಗಳಲ್ಲಿ ಚೀನಾ ಗಡಿಯಲ್ಲಿ ರಸ್ತೆಗಳನ್ನು ನಿರ್ವಿುಸಲಾಗದೆ ಹೆಣಗಾಡುತ್ತಿದ್ದೆವಲ್ಲ ಈ ನಾಲ್ಕು ವರ್ಷಗಳಲ್ಲಿ ಗಡಿಭಾಗದಲ್ಲಿ 3400 ಕಿ.ಮೀ. ಉದ್ದದ ರಸ್ತೆಯನ್ನು ಗುರುತಿಸಿ 61 ವಿಭಾಗಗಳನ್ನು ಆಯ್ಕೆ ಮಾಡಿ, ಅದರಲ್ಲಿ 27ನ್ನು ಮುಗಿಸಲಾಗಿದೆ. ಅಲ್ಲದೆ 21 ವಿಭಾಗಗಳಲ್ಲಿ ಕೆಲಸ ಮುಗಿಯುವ ಹಂತದಲ್ಲಿದೆ. ನಮ್ಮ ಸೈನಿಕರು ಈಗ ಚೀನಾದೊಂದಿಗೆ ಮುಖಾ-ಮುಖಿ ಆಗುವ ಹೊತ್ತಿನಲ್ಲಿ ಗುಡ್ಡ-ಬೆಟ್ಟಗಳನ್ನು ಹಾದು ಹೆಣಗಾಡಬೇಕಾದ ಪರಿಸ್ಥಿತಿ ಇಲ್ಲ. ಸೈನಿಕರಿಗೆ ಈ ಪರಿಯ ಆತ್ಮಸ್ಥೈರ್ಯ ತುಂಬಲು ಕಾರಣವಾಗಿದ್ದು ನಾವು ಗೊಣಗಾಡದೇ ಕೊಂಡುಕೊಂಡ ಒಂದು ಲೀಟರ್ ಪೆಟ್ರೋಲು.

ಜೇಟ್ಲಿ ಲಾಜಿಕ್: ಈ ಹಿಂದೆ ಒಮ್ಮೆ ಸಂಸತ್ತಿನಲ್ಲಿ ಮಾತನಾಡುತ್ತ ವಿತ್ತ ಸಚಿವ ಅರುಣ್ ಜೇಟ್ಲಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯ ಲಾಭವನ್ನು ಭಾರತ ಹೇಗೆ ತನ್ನದಾಗಿಸಿಕೊಳ್ಳುತ್ತಿದೆ ಎಂಬುದನ್ನು ಬಲು ಸೂಕ್ಷ್ಮವಾಗಿ ವಿವರಿಸಿದರು. ಮೊದಲ ಹಂತದಲ್ಲಿ ಈ ಇಳಿಕೆಯಿಂದ ದೊರೆತ ಲಾಭವನ್ನು ನೇರವಾಗಿ ಗ್ರಾಹಕರಿಗೆ ಒದಗಿಸಲಾಗುತ್ತದೆ. ಹೀಗಾಗಿಯೇ ಯುಪಿಎ ಸರ್ಕಾರ ನರೇಂದ್ರ ಮೋದಿಯವರ ಕೈಗೆ ಅಧಿಕಾರವನ್ನು ಬಿಟ್ಟುಕೊಟ್ಟಾಗ 73ರಷ್ಟಿದ್ದ ಪೆಟ್ರೋಲ್ ಬೆಲೆ ಕಾಲಕ್ರಮದಲ್ಲಿ 65 ರೂಪಾಯಿವರೆಗೂ ಬಂದು ನಿಂತಿತ್ತು. ಕೆಲವು ರಾಜ್ಯ ಸರ್ಕಾರಗಳಂತೂ ಹೀಗೆ ಬೆಲೆ ಕಡಿಮೆಯಾದೊಡನೆ ವ್ಯಾಟನ್ನು ಏರಿಸಿ ತಮ್ಮ ಆದಾಯ ಹೆಚ್ಚಿಸಿಕೊಳ್ಳುತ್ತಿದ್ದವು. ಎರಡನೇ ಹಂತದಲ್ಲಿ ಕೇಂದ್ರ ಸರ್ಕಾರ ತೆರಿಗೆ ಹೆಚ್ಚಿಸಿ ತೈಲಬೆಲೆಯ ಇಳಿಕೆಯಲ್ಲಾದ ಲಾಭವನ್ನು ನೇರವಾಗಿ ಬೊಕ್ಕಸಕ್ಕೇ ದೊರೆಯುವಂತೆ ಮಾಡುತ್ತಿತ್ತು. ಮೂರನೆಯದಾಗಿ ಈ ಹಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ರಸ್ತೆಗಳ ನಿರ್ಮಾಣ ಮಾಡುವ ಪ್ರಯತ್ನ ಮಾಡಲಾಯ್ತು. ಅದು ಸಹಜವೂ ಹೌದು. ಪೆಟ್ರೋಲ್ ತುಂಬಿಸಿಕೊಂಡು ಗಾಡಿ ಓಡಿಸುವವ ರಸ್ತೆ ನಿರ್ವಣಕ್ಕೆ ಹಣವನ್ನೂ ಕೊಡಬೇಕಾಗುತ್ತದೆ. ಇನ್ನು ನಾಲ್ಕನೇ ಹಂತದಲ್ಲಿ ಕಚ್ಚಾತೈಲ ಬೆಲೆಯಲ್ಲಾದ ಇಳಿಕೆಯ ಲಾಭವನ್ನು ತೈಲ ಕಂಪನಿಗಳಿಗೆ ಸಿಗುವಂತೆ ಮಾಡಲಾಗುತ್ತದೆ. ತೈಲಬೆಲೆ ಏರಿದಾಗಲೂ ಅದನ್ನು ನಿಯಂತ್ರಿಸುವ ಭರದಲ್ಲಿ ಈ ಕಂಪನಿಗಳು ಮಾಡಿಕೊಂಡಿರುವ ನಷ್ಟವನ್ನು ಈ ಸಮಯದಲ್ಲಿ ಹೊಂದಿಸಿಕೊಟ್ಟುಬಿಟ್ಟರೆ ಮತ್ತೊಮ್ಮೆ ಬೊಕ್ಕಸದ ಮೇಲಾಗುವ ಹೊರೆಯನ್ನು ತಪ್ಪಿಸಲು ಸಾಧ್ಯವಾಗುತ್ತದೆ.

ಮೋದಿ ಮೋಡಿ: ನರೇಂದ್ರ ಮೋದಿ ಅಧಿಕಾರಕ್ಕೆ ಬರುವಾಗ ಭಗವಂತ ವರವಾಗಿ ಅವರಿಗೆ ಕಚ್ಚಾತೈಲ ಬೆಲೆಯ ಇಳಿಕೆ ಮಾಡಿಕೊಟ್ಟಿದ್ದ. ಹಾಗಂತ ಇದು ಶಾಶ್ವತವಲ್ಲವೆಂಬುದು ಮೋದಿಯವರಿಗೂ ಗೊತ್ತಿತ್ತು. ಅಮೆರಿಕವನ್ನು ಹಣಿಯಲೆಂದೇ ಒಪೆಕ್ ರಾಷ್ಟ್ರಗಳು ತೈಲಬೆಲೆಯನ್ನು ಇಳಿಸಿದ್ದವು. ಅದರ ಲಾಭವನ್ನುಂಡು ನರೇಂದ್ರ ಮೋದಿ ಮೈಮರೆತು ಕುಳಿತುಕೊಳ್ಳಲಿಲ್ಲ. ಮಧ್ಯಪ್ರಾಚ್ಯ ದೇಶಗಳಿಗೆ ನಿರಂತರ ಪ್ರವಾಸ ಮಾಡಿ ಅವುಗಳೊಂದಿಗಿನ ಬಾಂಧವ್ಯ ವೃದ್ಧಿಸಿಕೊಂಡರು. ನಮಗೆ ಅತ್ಯಂತ ಹೆಚ್ಚು ತೈಲ ರಫ್ತು ಮಾಡುತ್ತಿದ್ದ ಇರಾನಿನೊಂದಿಗೆ ಭಿನ್ನ ಭಿನ್ನ ರೂಪದ ಒಪ್ಪಂದಗಳನ್ನು ಮಾಡಿಕೊಳ್ಳಲು ಉತ್ಸುಕತೆ ತೋರಿದರು. ಹಾಗಂತ ಅದು ಸಲೀಸಾಗಿರಲಿಲ್ಲ. ಅದಾಗಲೇ ಈ ತೈಲ ಪೂರೈಕೆ ಮಾಡುವ ರಾಷ್ಟ್ರಗಳೊಂದಿಗೆ ನಮ್ಮ ಸಾಲ ಅದೆಷ್ಟಿತ್ತೆಂದರೆ ತೈಲಬೆಲೆ ಕುರಿತಂತೆ ಚೌಕಾಶಿ ಮಾಡುವ ಸಾಮರ್ಥ್ಯವನ್ನು ನಾವು ಕಳೆದುಕೊಂಡಿದ್ದೆವು. ತೈಲ ಸಾಲವನ್ನು ಹಂತ ಹಂತವಾಗಿ ತೀರಿಸಿದ ಮೋದಿ ಈ ರಾಷ್ಟ್ರಗಳೊಂದಿಗೆ ಮಾತನಾಡುವ ತಮ್ಮ ಕ್ಷಮತೆ ಬದಲಿಸಿಕೊಂಡರು. ಇಂಧನ ಸಚಿವ ಧಮೇಂದ್ರ ಪ್ರಧಾನರಂತೂ ಸಮರ್ಪಕ ಬೆಲೆಯಲ್ಲಿ ನಮಗೆ ತೈಲ ಪೂರೈಸದೆ ಹೋದರೆ ಜಗತ್ತಿನ ಬೇರೆ ರಾಷ್ಟ್ರಗಳನ್ನು ನಾವು ಸಂರ್ಪಸಬೇಕಾಗಬಹುದು ಎಂಬ ಎಚ್ಚರಿಕೆಯನ್ನೂ ಕೊಟ್ಟರು. ಮಧ್ಯಪ್ರಾಚ್ಯ ರಾಷ್ಟ್ರಗಳು ಭಾರತಕ್ಕೆ ಮತ್ತು ಚೀನಾಕ್ಕೆ ತೈಲ ಪೂರೈಸುವಾಗ ಏಷಿಯನ್ ಪ್ರೀಮಿಯಂ ಸರ್​ಚಾರ್ಜ್ ಹಾಕುತ್ತಿದ್ದುದನ್ನು ಈ ಹೊತ್ತಲ್ಲಿ ನಾವು ನೆನಪಿಸಿಕೊಳ್ಳಲೇಬೇಕು. ನಮ್ಮ ಆಗ್ರಹದ ನಂತರ ಸೌದಿ ಅರೇಬಿಯಾ ಅದನ್ನು ತೆಗೆದುಹಾಕಲು ಒಪ್ಪಿಕೊಳ್ಳಲೇಬೇಕಾಯ್ತು.

ತೈಲಬೆಲೆ ಒಂದಲ್ಲೊಂದು ದಿನ ಏರಿಕೆಯಾಗುವುದು ಖಾತ್ರಿಯೆಂದರಿತ ಮೋದಿ ಪಶ್ಚಿಮದ ರಾಷ್ಟ್ರಗಳೊಂದಿಗೆ ತೈಲ ಸಂಬಂಧ ವೃದ್ಧಿಸಿಕೊಳ್ಳುವ ಪ್ರಯತ್ನ ಮಾಡಿದರು. ಅಮೆರಿಕದೊಂದಿಗೆ ನಮ್ಮ ಆಮದು-ರಫ್ತುಗಳ ವಹಿವಾಟಿನಲ್ಲಿ ತೀವ್ರವಾದ ಕೊರತೆಯಿದ್ದು ಅದನ್ನು ನೀಗಿಸಬೇಕೆಂದು ಟ್ರಂಪ್ ಒತ್ತಾಯಿಸುತ್ತಲೇ ಇದ್ದರು. ಇದನ್ನು ಮನಗಂಡ ಪ್ರಧಾನಮಂತ್ರಿಗಳು ಅಮೆರಿಕದಿಂದ ತೈಲವನ್ನು ಆಮದುಮಾಡಿಕೊಂಡು ಈ ವ್ಯಾಪಾರ ಕೊರತೆ ನೀಗಿಸುವ ಪ್ರಯತ್ನ ಮಾಡಿದರು. ಅದರ ಪರಿಣಾಮವಾಗಿಯೇ 1975ರ ನಂತರ ಮೊದಲ ಬಾರಿಗೆ ಅಮೆರಿಕದಿಂದ ಹೊರಟ ಹಡಗೊಂದು 1.6 ಮಿಲಿಯನ್ ಬ್ಯಾರಲ್​ನಷ್ಟು ಶೆಲ್ ಆಯಿಲ್ ಅನ್ನು ಭಾರತಕ್ಕೆ ಹೊತ್ತು ತಂದಿತು. ಇದೇ ಹೊತ್ತಲ್ಲಿ ಭಾರತದ ಕಂಪನಿಗಳು ಅಮೆರಿಕದ ಶೆಲ್ ಗ್ಯಾಸ್​ನಲ್ಲಿ 5 ಬಿಲಿಯನ್ ಡಾಲರ್​ಗಳಷ್ಟು ಹಣ ಹೂಡಿಕೆ ಮಾಡಿದವು. ಇಷ್ಟಕ್ಕೇ ಸುಮ್ಮನಾಗದ ಮೋದಿ ವೆನೆಜುವೆಲಾದೊಂದಿಗೂ ಮಾತುಕತೆ ನಡೆಸಿ ಅವರನ್ನು ಆರ್ಥಿಕ ಸಮಸ್ಯೆಯಿಂದ ಪಾರು ಮಾಡಲು ಅವರಿಂದ ತೈಲಕೊಂಡುಕೊಳ್ಳುವ ಭರವಸೆ ಕೊಟ್ಟರು. ನೇರವಾಗಿ ದುಡ್ಡುಕೊಟ್ಟು ಕೊಂಡುಕೊಳ್ಳುವುದಾದರೆ ತೈಲಬೆಲೆಯಲ್ಲಿ ಶೇಕಡ 30ರಷ್ಟು ಕಡಿತಗೊಳಿಸುವುದಾಗಿ ವೆನೆಜುವೆಲಾ ಭರವಸೆ ಕೊಟ್ಟಿತು. ಎಲ್ಲವೂ ಸುಸೂತ್ರವಾಗಿಯೇ ಇತ್ತು. ಆ ಹೊತ್ತಲ್ಲಿಯೇ ಅಮೆರಿಕ ಇರಾನಿನ ಮೇಲೆ ನಿರ್ಬಂಧ ಹೇರಿತು. ಅದರ ಕಾರಣದಿಂದಾಗಿ ಇರಾನ್ ತಾನು ಹೊರತೆಗೆಯುತ್ತಿದ್ದ ತೈಲದ ಪ್ರಮಾಣ ಕಡಿಮೆಯಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಏರುತ್ತಲೇ ಹೋಯ್ತು.

ಪ್ರತಿಪಕ್ಷಗಳ ವಾಗ್ದಾಳಿ: ಈ ವೇಳೆಗೆ ಮೋದಿ ತುರ್ತಾಗಿ ರಷ್ಯಾಕ್ಕೆ ಭೇಟಿಕೊಟ್ಟರು. ತೈಲದ ವಿಚಾರದಲ್ಲಿ ಸ್ವಾವಲಂಬಿಯಾಗಿರುವ ರಷ್ಯಾ ನಮಗೆ ನಿರಂತರವಾಗಿ ತೈಲ ಪೂರೈಕೆ ಮಾಡುವ ಪರಿಸ್ಥಿತಿ ನಿರ್ವಣವಾದರೆ ಅಮೆರಿಕದೊಂದಿಗೆ ಹಗ್ಗ-ಜಗ್ಗಾಟ ನಡೆಸುವ ಅಗತ್ಯವಿಲ್ಲವೆಂದು ಪ್ರಧಾನಮಂತ್ರಿಗಳಿಗೆ ಚೆನ್ನಾಗಿಯೇ ಗೊತ್ತಿತ್ತು. ಆದರೇನು? ಏರಿಕೆಯಾಗುತ್ತಿದ್ದ ತೈಲಬೆಲೆ ಜನಸಾಮಾನ್ಯರಿಗೆ ಎಷ್ಟು ಸಂಕಟ ತಂದಿತ್ತೋ ಗೊತ್ತಿಲ್ಲ, ಪ್ರತಿಪಕ್ಷ ಕಾಂಗ್ರೆಸ್ಸಿಗಂತೂ ತುಪ್ಪದನ್ನವುಂಡಂತಾಗಿತ್ತು. ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಕೇಂದ್ರ ಸರ್ಕಾರದ ಮೇಲೆ ದಾಳಿಗೈದು, ‘ನರೇಂದ್ರ ಮೋದಿ ಮನಸ್ಸು ಮಾಡಿದರೆ 25 ರೂಪಾಯಿಯಷ್ಟು ತೈಲಬೆಲೆ ಇಳಿಸಬಹುದು’ ಎಂದು ಗುಡುಗಿದರು. ಆದರೆ 2013ರಲ್ಲಿ ತೈಲಬೆಲೆ ನಿಯಂತ್ರಣಕ್ಕೆ ಸಿಗದೇ ಏರುತ್ತಿದ್ದಾಗ ಬೆಂಗಳೂರಿಗೆ ಬಂದಿದ್ದ ಇದೇ ಚಿದಂಬರಂ ‘ಲೀಟರ್​ಗೆ 15 ರೂಪಾಯಿ ಕೊಟ್ಟು ಮಿನಿರಲ್ ವಾಟರ್ ಕುಡಿಯುವ, 20 ರೂಪಾಯಿ ಕೊಟ್ಟು ಐಸ್ಕ್ರೀಂ ತಿನ್ನುವ ಜನರಿಗೆ ತೈಲಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸವಾದೊಡನೆ ಕೋಪ ಬಂದುಬಿಡುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಸಮಯ ಬಂದಾಗಲೆಲ್ಲ ವಿದೇಶಕ್ಕೆ ತೆರಳುವ ರಾಹುಲ್ ತೈಲಬೆಲೆ ಇಳಿಸುವ ಚಾಲೆಂಜನ್ನು ಮೋದಿಗೆ ಟ್ವಿಟರ್​ನಲ್ಲಿ ನೀಡಿದರು. ತೈಲವನ್ನೂ ಜಿಎಸ್​ಟಿ ವ್ಯಾಪ್ತಿಗೆ ತರಬೇಕೆಂದು ಕಾಂಗ್ರೆಸ್ಸು ಇಂದು ಗಲಾಟೆಯೇನೋ ಮಾಡುತ್ತಿದೆ. ಆದರೆ ಜಿಎಸ್​ಟಿ ಕುರಿತಂತೆ ಚರ್ಚೆ ನಡೆಸುವಾಗ ತೈಲಬೆಲೆಯನ್ನು ಸಂವಿಧಾನದ ವ್ಯಾಪ್ತಿಯಲ್ಲೂ ಇಡಬಾರದೆಂದು ಕಾಂಗ್ರೆಸ್ ಹಠ ಮಾಡಿತ್ತು. ಈಗ ರಾಜ್ಯ ಸರ್ಕಾರಗಳೆಲ್ಲ ಒಮ್ಮತ ತಂದುಕೊಂಡರೆ ತೈಲವನ್ನು ಜಿಎಸ್​ಟಿ ಅಡಿಯಲ್ಲಿ ತರಬಹುದೇನೋ ನಿಜ. ಆದರೆ ಇದರಿಂದ ತಮಗಾಗಬಹುದಾದ ನಷ್ಟ ಊಹಿಸಿಕೊಂಡೇ ರಾಜ್ಯ ಸರ್ಕಾರಗಳು ಪತರಗುಡುತ್ತಿವೆ.

ಸದ್ಯಕ್ಕಂತೂ ಹೆದರಬೇಕಾದ ಅಗತ್ಯವಿಲ್ಲ. ತೈಲಬೆಲೆ ಏರಿಕೆಯಿಂದ ಯಾವ ಮಧ್ಯಮ ವರ್ಗದವರಿಗೆ ಹೊರೆಯಾಗುತ್ತದೆ ಎಂದು ಕಾಂಗ್ರೆಸ್ಸು ಬಡಬಡಾಯಿಸುತ್ತಿದೆಯೋ ತೈಲಬೆಲೆಯನ್ನು ಇಳಿಸಲೆಂದು ಬೊಕ್ಕಸಕ್ಕೆ ಹೊರೆ ಮಾಡಿದರೆ ಆ ನಷ್ಟವನ್ನು ಸರಿದೂಗಿಸಲು ಇದೇ ಮಧ್ಯಮ ವರ್ಗದವರು ಹೆಚ್ಚು ತೆರಿಗೆ ಕಟ್ಟಬೇಕಾಗುತ್ತದೆ ಎಂಬುದನ್ನು ಅವರು ಮರೆತೇ ಬಿಟ್ಟಿದ್ದಾರೆ. ತೆರಿಗೆಯನ್ನು ಕಟ್ಟಿಯೂ ಅಭಿವೃದ್ಧಿಯೇ ಇಲ್ಲದ ಕಳಪೆ ರಾಷ್ಟ್ರದಲ್ಲಿ ಬದುಕಬೇಕಾದ ಪರಿಸ್ಥಿತಿ ನಿರ್ವಣವಾಗುವುದನ್ನು ಸಹಿಸುವುದಾದರು ಹೇಗೆ? ಇಷ್ಟಕ್ಕೂ ಕಳೆದ ನಾಲ್ಕು ವರ್ಷದಲ್ಲಿ 20 ಬಾರಿ ಪೆಟ್ರೋಲ್ ಬೆಲೆ ಕಡಿಮೆಯಾಗಿದ್ದರೆ, 16 ಬಾರಿ ಡೀಸೆಲ್ ಬೆಲೆ ಕಡಿಮೆಯಾಗಿದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡಾಗ ಪೆಟ್ರೋಲ್ ಬೆಲೆ ಲೀಟರ್​ಗೆ 73 ರೂಪಾಯಿಯಿತ್ತು. ಈಗ ಅದು 80 ರೂಪಾಯಿಯಾಗಿದೆ. ನಾಲ್ಕು ವರ್ಷಗಳಲ್ಲಾದ ಏರಿಕೆ ಏಳು ರೂಪಾಯಿಯಷ್ಟು ಮಾತ್ರ.

ವಿದೇಶದಲ್ಲಿ 18 ಸಾವಿರ ಕೋಟಿ ಆಸ್ತಿ ಮಾಡಿದರಲ್ಲ ಚಿದಂಬರಂ, ಇಂಥವರಿಗೆ ತೈಲಬೆಲೆ ಒಂದು ರಾಜಕೀಯ ದಾಳವೇ ಹೊರತು ಮತ್ತೇನಲ್ಲ. ರಾಷ್ಟ್ರದ ಅಭಿವೃದ್ಧಿ ಬೇಕಿರುವುದು ನಮಗೆ ಮತ್ತು ನಮಗಾಗಿಯೇ ಇರುವ ಪ್ರಧಾನ ಸೇವಕರಿಗೆ. ಸ್ವಲ್ಪ ತಾಳ್ಮೆಯಿಂದ ಕಾಯೋಣ.

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

Leave a Reply

Your email address will not be published. Required fields are marked *